“ಉಳ್ಳವರು ಶಿವಾಲಯವ ಮಾಡುವರು”

ಅನಿಸಿಕೆ

“ಉಳ್ಳವರು ಶಿವಾಲಯವ ಮಾಡುವರು”

ವೀಣಾ ದೇವರಾಜ್

Praying hands with faith in religion and belief in God on dark background. Power of hope or love and devotion. Prayer position stock images

          ನಿಜಕ್ಕೂ ಅಣ್ಣನ ಈ ವಚನವು ಬರಿಯ ಪುಸ್ತಕಗಳಿಗೆ ಮತ್ತು ಹಾಡುಗಾರರಿಗೇ ಸೀಮಿತವಾಗಿವೆ. ಕಾರ್ಯರೂಪಕ್ಕೆ ಬರುವುದೆಂದೊ. ಹಿರಿಯರು ‘ಉಳ್ಳವರು ಶಿವಾಲಯವ ಮಾಡುವರು ‘ ಎಂದರು, ಆದರೆ ಇಂದಿನ ಉಳ್ಳವರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಮಾತ್ರ ಆಲಯ ಮಾಡಿಕೊಳ್ಳುವರೇ ಹೊರತು ಸಮಾಜಕ್ಕಾಗಿ ಯಾವ ಉಪಯೋಗಕ್ಕೂ ಬಾರದು. ಇಂಥಹವರಿಂದ ಪರಿವರ್ತನೆ ಬಯಸುವುದು ಸಾಧ್ಯವೇ?

       ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ ದಂಪತಿಗಳು, ದಾಸೋಹ ಮಾಡುವ ಶಕ್ತಿ ಇರದಿದ್ದರೂ ಅಂತಹ ಮನಸ್ಸಿತ್ತು. ಲಕ್ಕಮ್ಮತನ್ನ ಬಿಡುವಿನ ಸಮಯದಲ್ಲಿ ಹೊಲಗಳಲ್ಲಿ ಕಟಾವು ಮಾಡುವಾಗ, ಭತ್ತದರಾಶಿ ಮಾಡುವಾಗ ಸುತ್ತಮುತ್ತ ಹಾರಿಬಿದ್ದ ಕಾಳುಗಳನ್ನು ಆಯ್ದು ತಂದು ದಾಸೋಹ ಮಾಡುತ್ತಿದ್ದರು. ಆಗ ಆಹಾರದ ಒಂದೊಂದು ಅಗುಳಿಗೂ ಬೆಲೆಯಿತ್ತು. ಯಾವುದನ್ನೂ ವೃಥಾ ಹಾಳುಮಾಡುತ್ತಿರಲಿಲ್ಲ. ಅವರಿವರೆನ್ನದೆ ಹಸಿದವರಿಗೆ ಉಣಬಡಿಸುವುದು ಸಹಜವಾಗಿತ್ತು.

          ನಮ್ಮ ಈಗಿನ ಪೀಳಿಗೆಯಲ್ಲಿ ಅನ್ನ ಹಾಗೂ ಹಣದ ಬೆಲೆಯೇ ತಿಳಿಯದಾಗಿದೆ. ಕೆಲವರಿಗೆ ಅದೇನು ಪ್ರತೀಷ್ಟೆಯೊ, ಊಟದ ತಟ್ಟೆಯಲ್ಲಿ ಸ್ವಲ್ಪ ಊಟವನ್ನೊ ಇಲ್ಲ ಕುಡಿಯಲು ಕೊಟ್ಟ ಪಾನೀಯವನ್ನೊ ಸ್ವಲ್ಪ ಸ್ವಲ್ಪ ಬಿಡುವ ಅಭ್ಯಾಸವಿರುತ್ತದೆ. ಅದನ್ನು ಬಳಸುವ ಹಾಗೂ ಇಲ್ಲ. ಒಲ್ಲದ ಮನಸ್ಸಿನಿಂದ ಆಚೆಗೆ ಸುರಿಯ ಬೇಕಾಗುತ್ತದೆ. ಮೊದಲಿನಂತೆ ಹಸುಗಳಿಗೆ ಮುಸುರೆ ನೀರೆಂದು ಕೊಂಡು ಹೋಗುವವರೂ ಇಲ್ಲವಾಗಿದ್ದಾರೆ.

       ಮನೆಯಲ್ಲಿನ ಕಸದ ಬುಟ್ಟಿಗೆ ಹಾಕಿ, ಜಿರಲೆಗಳ ಸಂತತಿಗೆ ಪೌಷ್ಟಿಕ ಆಹಾರ ಉಣಬಡಿಸಿ, ಮನೆಯ ಸದಸ್ಯರು ನಾಲ್ವರಾದರೆ ಅವುಗಳ ಸಂಖ್ಯೆ ನಾನೂರಾಗಿ, ಅವನ್ನು ತಿನ್ನಲು ಹಲ್ಲಿಗಳೂ ಬಂದು ‘ ಮಕ್ಕಳಿರಲವ್ವ ಮನೆ ತುಂಬ’ ಎನ್ನುವ ನಾಣ್ನುಡಿ  ಬದಲಿಗೆ ‘ಜಿರಲೆ ಹಲ್ಲಿಗಳಿರಲವ್ವ ಮನೆ ತುಂಬ’ಎನ್ನಬೇಕಾಗುತ್ತದೆ. 

       ಅಷ್ಟೇ ಆದರೆ ಹೇಗೋ ಆದೀತೇನೋ! ಮಾರನೆಯ ಬೆಳಗಿನಲ್ಲಿ ಜೋರು ದ್ವನಿಯಲ್ಲಿ ‘ಕಸ’ ಎಂದು ಬೈದಾಡಿಕೊಂಡು, ಕೂಗಾಡಿಕೊಂಡು  ಮನೆಯ ಕಸ ತೆಗೆದುಕೊಂಡು ಹೋಗಲು ಬರುವ ನಮ್ಮ ಮಹಾ ನಗರ ಪಾಲಿಕೆಯ ಬಜಾರಿ ಸುಬ್ಬಮ್ಮನಿಗೆ (ಕ್ಷಮೆ ಇರಲಿ), ಹೆದರಿಕೊಂಡು ಮೆತ್ತಗೆ ಹೋಗಿ ಬೀದಿ ಬದಿಯಲ್ಲಿ ಕಸದ ಚೀಲವನ್ನು ಇಟ್ಟು  ಬಂದೆವೊ ಬಚಾವು. ಸುಬ್ಬಮ್ಮನ ಕಣ್ಣಿಗೆ ಬಿದ್ದು, ಅದು ನಮ್ಮದೇ ಕಸ ಎಂದು ಗೊತ್ತಾಯಿತೊ ಮರ್ಯಾದೆ ಬೀದಿಗೆ ಬಂತು ಎಂದ ಹಾಗೇ. ನಮ್ಮ ಸುಬ್ಬಮ್ಮ ಬೀದಿಯ ಎಲ್ಲಾ ಹೆಂಗಳೆಯರಿಗೂ ಗಟವಾಣಿ ಅತ್ತೆ ಇದ್ದಂತೆಯೇ! ಅವಳಂದಂತೆ ಅನ್ನಿಸಿಕೊಂಡು ,ಎದುರು ಮಾತೂ ಆಡದೆ, ಅಕ್ಕಪಕ್ಕದವರೇನಾದರೂನೋಡುತ್ತಿದ್ದಾರೊ, ಯಾರಾದರೂ ಕೇಳಿಸಿಕೊಂಡರೊ ಎಂದು ಕತ್ತು ಆಚೀಚೆ ತಿರುಗಿಸಿ ನೋಡಿ ಸರಸರನೆ ಮನೆಯೊಳಗೆ ಸೇರಿಕೊಳ್ಳಬೇಕು.

           ಅನ್ನಂ ಪರಃ ಬ್ರಹ್ಮಂ ; ಎನ್ನುವ ಮಾತನ್ನು ಅರ್ಥೈಸಿಕೊಂಡು, ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ತಟ್ಟೆಯಲ್ಲಿ ಊಟ ಬಿಡಬಾರದು, ಬೇಕಾದ್ದನ್ನು,ಬೇಕಾದಷ್ಟು ಮಾತ್ರವೇ ತಟ್ಟೆಯಲ್ಲಿ ನೀಡಿಸಿಕೊಳ್ಳಬೇಕು ಎಂದು ತಿಳಿಹೇಳಬೇಕು. ಚಿಕ್ಕಂದಿನಲ್ಲೇ ರೂಢಿಸಿಕೊಂಡಲ್ಲಿ ಸ್ವಲ್ಪವಾದರೂ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎಂಬಂತೆ ಒಬ್ಬೊಬ್ಬರಿಂದಲೂ ಒಂದೊಂದು ತುತ್ತು ಆಹಾರ ಉಳಿದರೆ ಹೆಚ್ಚಲ್ಲದಿದ್ದರೂ ದಿನಕ್ಕೆ ಒಂದು ಮನೆಯಲ್ಲಿ ಒಂದು ಹಿಡಿ ಧಾನ್ಯ ಉಳಿಯುತ್ತದೆ.

           ಹಾಗೇ ಉಳ್ಳವರು ಮಾತ್ರವಲ್ಲದೇ ಎಲ್ಲರೂ ತಮ್ಮಕೈಲಾದಷ್ಟು ಹಣ ದಾನಮಾಡಿ ಧರ್ಮಛತ್ರಗಳನ್ನು ಕಟ್ಟಬಹುದು, ಹಸಿದವರಿಗೆ ಎರಡು ತುತ್ತು ಅನ್ನ ನೀಡಬಹುದು. ಈ ಶತಮಾನದ ಮಹಾ ಮಾರಿ ಬಂದು ಎಷ್ಟೊ ಜನರಿಗೆ ಪಾಠ ಕಲಿಸಿದೆ. ‘ನಡೆದಾಡುವ ದೇವರಂ’ತವರೂ ನೂರಾರು ಜನರು ಹುಟ್ಟಿ ಬರಲಿ. 

         *********************************

2 thoughts on ““ಉಳ್ಳವರು ಶಿವಾಲಯವ ಮಾಡುವರು”

Leave a Reply

Back To Top