ಮಿಸ್ಟರ್ ಅನ್ ಫ್ರೆಂಡ್

ತೆಲುಗಿನಿಂದ ಅನುವಾದವಾದ ಕಥೆ

ತೆಲುಗು ಮೂಲಃ ಶ್ರೀ ರಾಮದುರ್ಗಂ ಮಧುಸೂದನ ರಾವು                  

ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು

Pastel drawing of sitting relaxed young man abstract contemporary. Art vector illustration

ಈಗೇನು ಮಾಡೋದು…..?

ಗೇಟಿನಿಂದಲೇ ಹೊರಗೋಡಿಸಿದ್ದರೆ ಚೆನ್ನಾಗಿರೋದಾ…..

ಈಗಂತೂ ಆ ಛಾನ್ಸ್ ಇಲ್ಲ. ಬಂದು ಕೂತಿದ್ದಾನೆ.

ಬರೀ ಪರರ ಜೀವನಗಳಲ್ಲಿ ಇಣುಕಿ ನೋಡುವುದು ಬಿಟ್ಟರೆ ಇಷ್ಟು ವರ್ಷಗಳ ತನ್ನ ಜೀವನದಲ್ಲಿ ಮಾಡಿದ್ದು ಬೇರೇ ಏನಾದರೂ ಇದೆಯಾ ? ಎಲ್ಲಿ ಸಿಕ್ಕರೆ ಅಲ್ಲಿ…. ಯಾವಗ ಸಿಕ್ಕರೆ ಅವಾಗ…. ಹೇಗೆ ಸಿಕ್ಕರೆ ಹಾಗೆ ತೂರಿಬಿಡೋದೇ!

**********

ಉಂಡಾಡಿ….. ಗಾಳಿ ಜೀವ….

ಶಿವಕುಮಾರನ ನೆನಪು ಬಂದಾಕ್ಷಣ ಮನಸ್ಸಿನಲ್ಲಿ ಹೊಳೆಯುವ ತಕ್ಷಣದ ಮಾತು ಆ ಎರಡೇ ! ನನಗಿನ್ನೂ ಚೆನ್ನಾಗಿ ನೆನಪಿದೆ. ಅವನನ್ನ ಜೀಜೆ ( ಗಾಳಿ ಜೀವ) ಎಂದು ಕರೆಯುತ್ತಿದ್ದೆವು. ನನ್ನ ಜೀವನದಲ್ಲಿ ಕನಸಿನಲ್ಲೂ ಸ್ವಾಗತಿಸದ ಮನುಷ್ಯ ಯಾರಾದರೂ ಇದ್ದಾರಾ ಎಂದರೆ ಅದು ಅವನೊಬ್ಬನೇ ! ಹಾಗಂತ ಇಬ್ಬರೂ ಗಟ್ಟಿಯಾಗಿ ಜಗಳ ಮಾಡಿಲ್ಲ. ಮಾತಾಡಿದ್ದು ಸಹ ತುಂಬಾ ಕಮ್ಮಿ !

                                                          **********

ಶಾಲಾ ಜೀವನದ ಸಹಪಾಠಿ. ಯಾವಾಗಲೂ ಯಾವ ಗಿಡದ ಕೆಳಗೋ ಅಥವಾ ಆಟದ ಮೈದಾನದಲ್ಲೋ ಕಾಣಿಸಿಕೊಳ್ಳುತ್ತಿದ್ದ…. ತುಂಡಾದ ಗಾಳಿ ಪಟದ ಹಾಗೆ ! ನೋಡಿದಾಗಲೆಲ್ಲ ನಗುತ್ತಿದ್ದ….. ತನ್ನೆತ್ತರದ ನಿರ್ಲಕ್ಷ್ಯದಂತೆ ! ಧರಿಸುವ ದಿರಿಸಿನ ಮೇಲೆ ಗಮನ ಇರುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇಲ್ಲದೆ ತಿರುಗುತ್ತಿದ್ದ ಒಬ್ಬನೇ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಎಂದರೆ ಇವನೇ ! ಅಷ್ಟೇ ಅಲ್ಲ. ನನ್ನ ಸ್ವಾಭಿಮಾನಕ್ಕೆ ಮೊದಲಸಲ ಧಕ್ಕೆ ತಂದವನೂ ಇವನೇ. ಸದಾ ಕ್ಲಾಸಿನಲ್ಲಿ ನಾನೇ ಮೊದಲಿಗನಾಗುವಂತೆ ನೋಡಿಕೊಳ್ಳುತ್ತಿದ್ದೆ. ಟೆನ್ತ್ ಕ್ಲಾಸಿನ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶಿವ ಲೆಕ್ಕದಲ್ಲಿ ಮೊದಲಿಗನಾಗಿದ್ದ. ಆ ದಿನಗಳಲ್ಲಿ ಅದೊಂದು ಸೆನ್ಸೇಷನ್ ! ಹಿಂದಿನ ಬೆಂಚಿನಲ್ಲಿ ಇದ್ದಾನಾ ಇಲ್ಲವಾ ಎನ್ನುವಷ್ಟು ಸೈಲೆಂಟಾಗಿ ಇರುವ ಹುಡುಗ ಇದ್ದಕ್ಕಿದ್ದಂತೆ ಎಲ್ಲರ ಕಣ್ಣಿಗೆ ಬಿದ್ದ. ’ ಎಷ್ಟು ಸೈಲೆಂಟಾಗಿರ್ತೀಯಲ್ಲ… ಅಷ್ಟು ಮಾರ್ಕ್ ಹೇಗೆ ತೆಗೆದೆ ಮಾರಾಯಾ ’ ಅಂತ ಕೇಳಿದರೆ… ’ ಓದಿದ್ದೇ ಬಂದರೆ ಯಾರಾದರೂ ತೆಗೀತಾರೆ. ಇದರಲ್ಲೇನಿದೆ ’ ಅಂತ ಕಾಜುವಲ್ಲಾಗಿ ಉತ್ತರ ಕೊಟ್ಟಿದ್ದ. ಆದರೆ ಸೋಜಿಗದ ಸಂಗತಿ ಎಂದರೆ ಮತ್ತೆ ಯಾವಾಗಲೂ ಅವನು ಅಷ್ಟು ಮಾರ್ಕು ತೆಗಿಯಲಿಲ್ಲ. ಬರೀ ಬೇಕಾಗುವಷ್ಟು ಮಾರ್ಕುಗಳಿಂದಲೇ ಟೆನ್ತ್ ಪಾಸಾದ. ಆಗಲೇ ಅವನ ತಂದೆ ತೀರಿಹೋದರು. ಮನೆ ನಡೆಯೋದೇ ಕಷ್ಟವಾಯಿತು. ಸರಿಯಾಗಿ ಆರು ತಿಂಗಳ ನಂತರ….. ಬೀದಿ ಕೊನೆಯ ಶಿವಾಲಯದಲ್ಲಿ ಪೂಜಾರಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೆ ಮಾತ್ರ ನನಗೆ ನೆನಪು. ಮತ್ತೆ ನಾನು ಆ ಊರು ಬಿಟ್ಟಿದ್ದೆ… ಅಲ್ಲಿಯ ನೆನಪುಗಳನ್ನು ಸಹ.

******

ಇದೆಲ್ಲ ನಲವತ್ತು ವರ್ಷಗಳ ಕೆಳಗಿನ ಮಾತು !

ಇವತ್ತು ಮತ್ತೆ ನೆನಪಿಗೆ ತಂದುಕೊಳ್ಳಬೇಕಾಗಿದೆ. ಎಲ್ಲಿಯ ಕರ್ನೂಲು ಎಲ್ಲಿಯ ಕೆನಡಾ. ತಾನು ಇಲ್ಲಿಗೆ ಹೇಗೆ ಬಂದದ್ದು ?… ತಾನು ಇಲ್ಲಿರುವುದು ಮೂರನೆಯ ಕಣ್ಣಿಗೆ ಗೊತ್ತಿರಲಿಲ್ಲ…. ಅಂಥಾದ್ರಲ್ಲಿ ಇವನಿಗೆ ಹೇಗೆ ಗೊತ್ತಾಯಿತು ? ರಿಷಿಗೆ ಸಿಟ್ಟು ಉಕ್ಕುಕ್ಕಿ ಬರುತ್ತಿತ್ತು …. ತನ್ನ ಮೇಲೆ…. ತನ್ನ ಬದುಕಿನ ಮೇಲೆ…. ಶಿವನ ಮೇಲೆ….. ಮಾತಾಡಿಸಲೇ ಬೇಕಾಗಿ ಬಂದ ಈ ಸಂದರ್ಭದ ಮೇಲೆ.

….. ಈಗೇನು ಮಾಡೋದು?

ಮತ್ತೆ ಪ್ರಶ್ನೆ ಮೊದಲಿಗೇ ಬಂತು. ತಲೆ ಕೊಡವಿ ಎದ್ದ ಅನಿವಾರ್ಯವೆನ್ನುವಂತೆ.

*******

ಐದೇ ನಿಮಿಷದ ಆತಿಥ್ಯ. ಅದೂ ಎಷ್ಟು ಬೇಕೋ ಅಷ್ಟು.

“ ಹಾಯ್ ! ಹೇಗಿದ್ದಿಯಾ ?…. ಸಾರೀ ಹೇಗಿದ್ದೀರಿ? “ ರಿಷಿಯನ್ನು ನೋಡಿದ ಶಿವ ವಿಶ್ ಮಾಡಿದ.

“ ಫರ್ವಾ ಇಲ್ಲ. ನೀನು ಹೇಗಿದ್ದೀಯಾ ?” ತುಟಿಯ ಮೇಲೆ ಬಲವಂತದ ನಗೆಯನ್ನು ಬಳೆದುಕೊಂಡ ರಿಷಿ.

“ ಓ ಸೂಪರ್ ! ಎರಡು ವಾರದ ಹಿಂದೆ ಕೆನಡಾಗೆ ಬಂದೆ. ನನ್ನ ಅಣ್ಣನ ಮಗ ಇಲ್ಲಿ ಡಾಕ್ಟರ್. ಅವನೇ ತುಂಬಾ ಒತ್ತಾಯ ಮಾಡಿ ಎಳ್ಕೊಂಡು ಬಂದ… ಕೆನಡಾ ತೋರಿಸ್ತೇನೆ ಅಂತ.”

ಶಿವ ತಮಾಷೆಯಾಗಿ ನಗುತ್ತಾ ಮಾತಾಡ್ತಿದ್ದರೆ ರಿಷಿ ನಿರ್ವಿಕಾರವಾಗಿ ನೋಡುತ್ತಿದ್ದ. ಅದೇ ನಗು.. ನಲವತ್ತು ವರ್ಷ ಕಳೆದರೂ ಮಾಸಿಲ್ಲ. ಅವನಲ್ಲಿ ನಗು ಹೇಗೆ ಹುಟ್ಟುತ್ತೋ ರಿಷಿಗೆ ಅರ್ಥವಾಗದ ವಿಷಯ. ತಾನು ದಿನಾಲೂ ಐದಾರು ಮೀಟಿಂಗ್ ಅಟೆಂಡ್ ಮಾಡ್ತಾನೆ. ಕಂಪೆನಿಗಳಿಗೆ ಸಂಬಂಧ ಪಟ್ಟ ಸೀರಿಯಸ್ ನಿರ್ಣಯಗಳನ್ನು… ನಿರ್ದಾಕ್ಷಿಣ್ಯ ನಿರ್ಣಯಗಳನ್ನು.. ಹೀಗೆ ಚಿಟಿಕೆ ಹೊಡೆಯೋದರಲ್ಲಿ ತೊಗೊಳ್ಳಬಲ್ಲ. ಆದರೆ ಈ ತರದ ನಗೆಗಾಗಿ ಎಂದೂ ಪ್ರಯತ್ನಿಸಿಲ್ಲ. ತನ್ನ ಪರ್ಸನಲ್ ಟ್ರೈನರ್ ನ ದೂರು ಇದೇ ! “ ಸರ್! ನೀವೆಲ್ಲ ಓಕೇ. ಆದರೆ ನಿಮ್ಮಲ್ಲಿ ಸ್ಮೈಲ್ ಈಸ್ ಮಿಸ್ಸಿಂಗ್ ! “ ಅಂತ. ಶಿವನ್ನ ನೋಡಿದಾಗ ಮತ್ತೆ ಆ ಮಾತುಗಳು ನೆನಪಿಗೆ ಬಂದವು.

“ ಡಾಕ್ಟರಾ….”

“ ಹೌದು. ಗೌರೀಪತಿ ವೇದುಲ….. ಆನ್ಕಾಲಜಿಸ್ಟ್. ಅವನ ಹೆಂಡತಿ ಹಾರಿಕಾ, ರೇಡಿಯಾಲಜಿಸ್ಟ್. “

ರಿಷಿ ತಲೆ ಅಲ್ಲಾಡಿಸಿದ. ಏನೂ ಮಾತಾಡಲಿಲ್ಲ. ಕಣ್ಣ ಹಿಂದೆ ಒಂದು ನೆರಳು ಹಾದು ಮರೆಯಾಯ್ತು.

“ ನೀನು ಇಲ್ಲಿದ್ದೀಯಾ ಅಂತ ಗೊತ್ತಾಯ್ತು. ಕರ್ನೂಲಿನ ದೋಸ್ತನನ್ನು ಕೆನಡಾದಲ್ಲಿ ಭೇಟಿ ಮಾಡೋದು…. ಭಾರೀ ಗಮ್ಮತ್ತಾಗಿದೆ ಅಲ್ಲಾ …”

ರಿಷಿ ಮುಜುಗರದಿಂದ ಮಿಸುಕಾಡಿದ.

“ ಶಿವ…. ಸಾರೀ. ನನಗೆ ಪ್ರಿ ಫಿಕ್ಸ್ಡ್ ಷೆಡ್ಯೂಲ್ ಇದೆ… ಮತ್ತೆ ಸಿಗೋಣ… “

“ ಓ ಹೌದಾ… ಇಟ್ಸ್ ಒಕೆ.. ಖಂಡಿತಾ ಸಿಗೋಣ. “

“ ಹೇಗೆ ಹೋಗ್ತಿಯಾ ….ಇರು. ನನ್ನ ಡ್ರೈವರ್ ಡ್ರಾಪ್ ಮಾಡ್ತಾನೆ “ ಫೋನ್ ಮಾಡಲು ಹೋದ ರಿಷಿಯನ್ನು ಶಿವ ತಡೆದ.

“ ಬೇಡ… ಬೇಡ. ಡಾಕ್ಟರ್ ನ ಕಾರಿದೆ. ಅವರಿಬ್ಬರೂ ಬರೋದ್ರಲ್ಲಿ ರಾತ್ರಿಯಾಗತ್ತೆ. ನಾನು ಸ್ವಲ್ಪ ಹಾಗೆ ಒಂದು ಸುತ್ತು ಹಾಕಿ ಮನೆ ಸೇರ್ತೀನಿ…..”

ಬಾಗಿಲ ವರೆಗೆ ಹೋದ ಶಿವ ಹಿಂದಿರುಗಿದ.

“ ರಿಷಿ! ಎಲ್ಲಾ ಸರಿಯಾಗಿದೆಯಾ.. “

ಒಂದು ಕ್ಷಣ ಕಾಲ ನಿಶ್ಶಬ್ದ…

“ ಯಾ… ಯಾಕೆ ಹಾಗೆ ಕೇಳ್ತಿದ್ದಿ ?” ತಡವರಿಸುತ್ತಾ ಕೇಳಿದ ರಿಷಿ.

“ಏನಿಲ್ಲ. ಜಸ್ಟ್ ಕೇಳಬೇಕೆನಿಸಿತು. ಇಂಡಿಯಾಗೆ ವಾಪಸ್ ಹೊಗೋದರಲ್ಲಿ ಮತ್ತೆ ಸಿಗ್ತೀನಿ.”

ಶಿವ ಹೋದಮೇಲೆ ಸೋಫಾದ ಮೇಲೆ ಕುಸಿದ ನಿತ್ರಾಣವಾಗಿ.

************

ರಿಷಿ ತನ್ನ ಜೀವನದಲ್ಲಿ ಯಾವುದುಕ್ಕಾಗಿಯೂ ನಿಲ್ಲಲಿಲ್ಲ.

ಧಾವಂತದಲ್ಲೇ ಐದು ದಶಕ ದಾಟಿದ್ದ. ಕೆಲಸಕ್ಕೆ ಸೇರಿದ್ದರಿಂದ ಹಿಡಿದು…. ನೂರಾರು ಜನಕ್ಕೆ ಕೆಲಸ ಕೊಡುವ ಹುದ್ದೆಗೆ ತುಂಬಾ ಸುಲಭವಾಗಿ ಸೇರಿದ್ದ. ಈ ಪಯಣದಲ್ಲಿ ಕಷ್ಟಗಳು ಇರಲಿಲ್ಲವೆಂತಲ್ಲ, ಬೇಕಾದಷ್ಟು.. ಅದರೆ ಅವುಗಳನ್ನು ಲೆಕ್ಕ ಮಾಡದಷ್ಟು ನಿರ್ಲಕ್ಷ್ಯ ಅಭ್ಯಾಸ ಮಾಡಿಕೊಂಡಿದ್ದ.  ಗುರಿ ಮುಟ್ಟ ಬೇಕಾದರೆ…. ಮುಟ್ಟುವ ವರೆಗೆ ಪ್ರಯತ್ನಿಸುವುದೇ … ಎನ್ನುವ ಸೂತ್ರವನ್ನು ನಂಬಿದ್ದ… ಮತ್ತೆ ಆಚರಿಸಿದ್ದ. ನಲವತ್ತರ ವಯಸ್ಸಿಗೆ ಉದ್ದಿಮೆದಾರ. ರಿಷಿ ಸೊಲ್ಯೂಷನ್ಸ್ ಅಂತ ಶುರುವಾಗಿ ಈಗ ರಿಷಿ ಗ್ರೂಪ್ ಆಫ್ ಇಂಡಸ್ಟ್ರೀಸ್ ವರೆಗೆ ಬೆಳೆಸಿದ್ದ. ಮಗಳಿಗೆ ಮದುವೆ ಮಾಡಿ ಅಳಿಯನಿಗೆ ಕಂಪೆನಿಯಲ್ಲಿ ಹೊಣೆಗಾರನನ್ನಾಗಿ ಮಾಡಿದ. ಮಗ ಎಂಡಿ ಯಾಗಿದ್ದು ಗ್ರೂಪಿನ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ.

ಆದರೆ ಜೀವನದಲ್ಲಿ ಮೊದಲನೆಯ ಸಲ ಬಹು ಆಶ್ಚರ್ಯವಾಗಿ ಸ್ವಲ್ಪ ನಿಲ್ಲಬೇಕಾಗಿ ಬಂತು. ಆರಾಮದ ಸಲುವಾಗಿ ಕೆನಡಾಗೆ ಬಂದಿದ್ದ. ರಿಷಿಗೆ ಕೆನಡಾ ಫೇವರೆಟ್ ಪ್ಲೇಸ್. ತನ್ನ ಹೆಂಡತಿ ಮಹಿತಾ ತೀರಿಕೊಂಡ ಮೇಲೆ ಪೇರಿಕೊಂಡ ಒಬ್ಬಂಟಿತನವನ್ನು ಹೋಗಲಾಡಿಸಲು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದ. ರಿಷಿಗೆ ಮೊದಲಿನಿಂದಲು ಯಾವ ವಿಷಯವನ್ನಾದರೂ ಗೋಪ್ಯವಾಗಿ ಇಡುವುದು ಅಭ್ಯಾಸ. ಅದೂ ಕಂಪೆನಿಯ ವಿಷಯವೆಂದರೆ ಇನ್ನೂ ಸರಿ.. ತೀರ ಕಠಿಣವಾಗಿರುತ್ತಿದ್ದ. ತಾನು ಕೆನಡಾಗೆ ಬಂದಿರುವ ವಿಷಯ ಯಾರಿಗೂ ಗೊತ್ತಾಗಂತೆ ನೋಡಿಕೊಂಡಿದ್ದ. ಎಲ್ಲ ಪಕ್ಕಾ ಪ್ಲಾನ್ ಮಾಡಿಯೇ ತನ್ನ ಟೂರ್ ಕನ್ಪರ್ಮ್ ಮಾಡಿಕೊಂಡಿದ್ದ. ಬಂದು ಒಂದು ತಿಂಗಳಾಗಿದ್ದರು ತಾನು ಇಲ್ಲಿ ಇರುವುದು ಯಾರಿಗೂ ಗೊತ್ತಾಗದ ಹಾಗೆ ತನ್ನ ಪರ್ಸನಲ್ ಸ್ಟಾಫ್ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ, ಶಿವ ಅದು ಹೇಗೆ ಕಂಡು ಹಿಡಿದ? ಸ್ವಲ್ಪ ಹೊತ್ತಿಗೆ ಏನೋ ಹೊಳೆಯಿತು. ಅವನಿಗೆ ವಿಷಯ ಹೇಗೆ ತಿಳಿಯಿತೋ ಅರ್ಥವಾಯಿತು.

**********

“ ಹಾಯ್ ಸರ್……ಹೇಗಿದ್ದೀರಿ? “ ಎನ್ನುತ್ತ ಗೌರೀಪತಿ ನಗುತ್ತ ಒಳಬಂದ.

“ ಯಾ ಫರ್ವಾ ಇಲ್ಲ….” ಧ್ವನಿ ಬಾವಿಯೊಳಗಿಂದ ಬಂದಂತೆ ನೀರಸವಾಗಿತ್ತು.

“ ಒನ್ ಮಿನಿಟ್…. “ ಎನ್ನುತ್ತ ಪಲ್ಸ್, ಬಿಪಿ ಚೆಕ್ ಮಾಡಿದ.

“ ಹಾ.. ಒಕೆ. ಹೇಳಿ. ತುಂಬಾ ನಿತ್ರಾಣ ಎನಿಸುತ್ತಿದೆಯೇ …”

’ ಹೌದು. ತುಂಬಾನೇ….ಒಮ್ಮೊಮ್ಮೆ ಏಳಲಿಕ್ಕೆ ಸಹ ಬರದ ಹಾಗೆ….”

“ ವೆಲ್… “ ಯಾರಿಗೋ ಕಾಲ್ ಮಾಡಿದ.

“ ಸರ್. ಇವತ್ತಿನಿಂದ ನಿಮಗೆ ಪರ್ಸನಲ್ ಡೈಟಿಷಿಯನ್ ಬರ್ತಾರೆ. ಷಿ ಈಜ್ ಬೃಂದಾ ಫ್ರಂ ಅವರ್ ಹಾಸ್ಪಿಟಲ್. ನಿಮ್ಮ ಆಹಾರದ ವಿಷಯ ಎಲ್ಲಾ ಪೂರ್ತಿಯಾಗಿ ತಾನೇ ನೋಡಿಕೊಳ್ತಾಳೆ. ಮೆಡಿಸಿನ್ ಕಂಟಿನ್ಯೂ ಮಾಡಿ. ಹೋಪ್ ಎವ್ರೀ ಥಿಂಗ್ ಗುಡ್..” . ಎದ್ದ.

“ ಅಂದಹಾಗೆ ಚಿಕ್ಕಪ್ಪ ನಿಮ್ಮನ್ನ ಕೇಳಿದೆನೆಂದು ಹೇಳಲು ಹೇಳಿದ್ದಾರೆ. ಅವರು ನಿಮಗೆ ಕಾಲ್ ಮಾಡ್ತಾರಲ್ಲಾ..”

“ ಯಾ.. ಜಿಡ್ಡು ಕೃಷ್ನಮೂರ್ತಿಯವರ ಪ್ರವಚನ ಕಳಿಸ್ತಾನೆ..”

“ ಎಕ್ಸಲೆಂಟ್ ರಿಷಿಯವರೇ ! ಚಿಕ್ಕಪ್ಪ ನಂಥವರು ಒಬ್ಬರಿದ್ದರೆ ಸಾಕು ಎಷ್ಟು ಕಷ್ಟ ಬಂದರೂ ತಡೆದು ಕೊಳ್ಳಬಹುದು. ತುಂಬ ಕೂಲ್ ಪರ್ಸನಾಲಿಟಿ…. “

ಗೌರೀಪತಿಹೊರಟಿರಲು…
“ ಡಾಕ್ಟರ್… ನಾನು ಇದರಿಂದ ಹೊರಬೀಳುತ್ತೀನಾ…. “

ರಿಷಿ ಅನೂಹ್ಯವಾಗಿ ಪ್ರಶ್ನಿಸಿದ. ಗೌರೀಪತಿಯ ಮುಖದಲ್ಲಿಯ ಬಣ್ಣಗಳು ಬದಲಾದವು. ಮತ್ತೆ ತಕ್ಷಣ ಸರಿಪಡಿಸಿಕೊಂಡ.

“ ವೈನಾಟ್…ನಿಮ್ಮಲ್ಲಿ ಇಂಪ್ರೂವ್ ಮೆಂಟ್ ಕಾಣ್ತಿದೆ… ಡೋಂಟ್ ವರ್ರಿ ಸರ್. ನಾವಿದ್ದೀವಲ್ಲ “

ರಿಷಿಯ ಮುಖದಲ್ಲಿ ಒಂದು ನಿರ್ಲಿಪ್ತ ನಗೆ.

“…. ಅದಕ್ಕೆ ನನಗೆ ಡಾಕ್ಟರ್ ಗಳೆಂದರೆ ಇಷ್ಟ. ಪ್ರಾಣಾನೇ ಹೊಗ್ತಾ ಇದ್ರೂ ಸರಿ… ನಿಮಗೇನೂ ಆಗಲ್ಲ ಅಂತ ಧೈರ್ಯಕೊಡ್ತಿರ್ತಾರೆ. “

“ ರಿಷಿಜೀ. ಈ ಸಮಯದಲ್ಲಿ ನೀವು ತುಂಬಾ ಯೋಚನೆ ಮಾಡಬೇಡಿ. ಜಸ್ಟ್ ಲಿವ್ ದಿಸ್ ಮೊಮೆಂಟ್. ದಟ್ಸಾಲ್. ಇಷ್ಟೆಲ್ಲ ಜೀವನಾನ್ನ ನೋಡಿದೀರಿ. ನಿಮಗೆ ಗೊತ್ತಿರದ ಫಿಲಾಸಫಿ ಏನಿರತ್ತೆ ಹೇಳಿ? ಆದ್ರೂ ನಿಮಗೇ ಗೊತ್ತಿದ್ದ ಹಾಗೆ…. ಎವೆರಿಬಡಿ ಷುಡ್ ಎಗ್ಜಿಟ್…. ಟುಡೇ ಆರ್ ಟುಮಾರೋ….. ರೈಟ್. ಹಾಗಾದ್ರೆ ನಾನು ಬರ್ಲಾ. ಟೇಕ್ ಕೇರ್. “

ಗೌರೀಪತಿ ಹೊರಟು ಹೋದ. ಒಂದಷ್ಟು ವಿಶ್ವಾಸ ಮತ್ತೊಂದಷ್ಟು ನಂಬಿಕೆಯನ್ನು ಬಿತ್ತುತ್ತಾ..

***************

ಪರಿಸ್ಥಿತಿಗಳು ಬದಲಾಗುವುದಕ್ಕೆ ವರ್ಷಗಳು ಬೇಕಾಗಿಲ್ಲ. ಕೆಲ ದಿನ, ಗಂಟೆಗಳು, ನಿಮಿಷಗಳು ಸಾಕು.

ರಿಷಿಗೆ ಇತ್ತೀಚೆಗೆ ಇದು ಅನುಭವಕ್ಕೆ ಬರುತ್ತಿತ್ತು. ಸಮಯ ತುಂಬಾ ಭಾರವಾಗಿ ಸಾಗುತ್ತಿತ್ತು.

ರೂಮ್ ಬಿಟ್ಟು ಹೊರಗೆ ಹೋಗಿ ಅದೆಷ್ಟು ದಿನವಾಗಿತ್ತೋ ? ಸದಾ ಲ್ಯಾಪ್ ಟಾಪಿನಲ್ಲಿ ಬ್ಯುಸಿಯಾಗಿರುತ್ತಿರುವ ರಿಷಿಯ ಕೈಯಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕ ಕಾಣುತ್ತಿದೆ. ಯಾರೂ ತನ್ನನ್ನು ಡಿಸ್ಟರ್ಬ್ ಮಾಡದಂತೆ ಏಕಾಂತ ಸೃಷ್ಟಿಸಿಕೊಂಡ ರಿಷಿ ಸದ್ಯ ಒಬ್ಬಂಟಿ ತನದಿಂದ ಒದ್ದಾಡುತ್ತಿದ್ದ. ಇಷ್ಟೂ ದಿನ ತನ್ನನ್ನು ಹಿಡಿದು ನಿಲ್ಲಿಸಿದ ಆತ್ಮ ನಿರ್ಭರತೆ ಮೆಲ್ಲಗೆ ಕರಗುತ್ತಿತ್ತು. ಯಾಕೋ ಪಯಣ ಮುಗಿಯುತ್ತದೆ ಎನ್ನುವ ಫೀಲಿಂಗ್. ಸಣ್ಣ ಸಣ್ಣ ವಿಷಯಗಳಿಗೇ ತುಂಬಾ ಎಮೋಷನಲ್ ಆಗ್ತಿದ್ದ.. ಕಣ್ಣು ತೇವವಾಗದ ದಿನಗಳೇ ಇಲ್ಲಾಂತ ಆಗಿತ್ತು. ಆ ಗಟ್ಟಿತನ… ಮೊಂಡುತನ…. ಪಾದರಸವನ್ನು ಮೀರಿಸುವ ಚುರುಕು ಮೇಧಾಶಕ್ತಿ ಎಲ್ಲಾ ಏನಾಗಿವೆ ? ಏನೋ! ಶಿವ ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದ. ಶುರುವಿನಲ್ಲಿ ಅವಾಯಿಡ್ ಮಾಡಿದ್ರೂ… ಈಗ ರಿಷಿನೇ ಕಾಲ್ ಮಾಡ್ತಾನೆ. ಬಾಲ್ಯದ ಸುದ್ದಿಗಳಿಂದ ಹಿಡಿದು… ಯಾವ್ಯಾವೋ ವಿಷಯಗಳ ಬಗ್ಗೆ ಚರ್ಚೆ. ಅದೊಂದು ಟೈಮ್ ಪಾಸ್. ದಿನಾ ಸಾಯಂಕಾಲ ನಾಲ್ಕು ಗಂಟೆಗೆ ಶಿವನಿಂದ ಫೋನ್ ಬರುತ್ತದೆ. ಕೆಲ ಸಲ ಅವನ ಕಾಲ್ ಗಾಗಿ ಕಾದ ದಿನಗಳಿವೆ. ಆಲೋಚನೆ ಮಾಡಿದರೆ ರಿಷಿಗೆ ವಿಚಿತ್ರವೆನಿಸುತ್ತದೆ. ಯಾರನ್ನು ಬೇಡ ಅಂತ ಕಡೆಗಾಣಿಸಿದನೋ.. ಅವನ ಹತ್ತಿರ ಮಾತಾಡಿದರೆ ಚೆನ್ನಾಗನಿಸುತ್ತೆ… ಎನ್ನುವ ಸ್ಟೇಜಿಗೆ ಸೇರಿಕೊಂಡಿದ್ದು ವಿಚಿತ್ರವೇ ಮತ್ತೆ !  ಬದುಕು ಎಲ್ಲವನ್ನೂ ಕಲಿಸುತ್ತದೆ.. ಕೊನೆಯವರೆಗೆ ಕಲಿಸುತ್ತಲೇ ಇರುತ್ತದೆ.

**************

ರಿಷಿ ಸಂಪೂರ್ಣವಾಗಿ ರೋಗದ ತೆಕ್ಕೆಯಲ್ಲಿ ಸೇರಿ ಹೋಗಿದ್ದ.

ಜೀವನವನ್ನು ಮುಂದುವರೆಸಿಕೊಂಡು ಹೋಗುವುದು ಎಷ್ಟು ಭಯಾನಕವಾಗಿರುತ್ತದೋ ಅದನ್ನು ಅನುಭವಿಸುವವರಿಗೇ ಗೊತ್ತು. ಔಷಧಿ ಹಾಕಿಕೊಳ್ಳುವುದು,.. ಮಲಗೋದು… ಆಗಾಗ ಫೋನ್ ನಲ್ಲಿ ಆತ್ಮೀಯರ ಜೊತೆ ಮಾತುಕತೆ ! ಎರಡು ದಿನಗಳ ಹಿಂದೆ ಯಾಕೋ ಎದೆಯಲ್ಲಿ ಛಳುಕು ಕಾಣಿಸಿಕೊಂಡಿದ್ದರಿಂದ ರಿಷಿಯನ್ನು ಆಸ್ಪತ್ರೆಗೆ ವರ್ಗಾಯಿಸಿದರು.

*************

ಐಸಿಯು ನಲ್ಲಿ ಕೆಚ್ಚೆದೆಯಿಂದ ಹೋರಾಡುತ್ತಿದ್ದ ಯೋಧನಂತೆ ರಿಷಿ.

“ ರಿಷೀ ಹೇಗಿದ್ದೀಯಾ ? “ ಬಲವಂತವಾಗಿ ಕಣ್ಣು ತೆರೆದ. ಎದುರಲ್ಲಿ ಶಿವ.

ಕಣ್ಣುಗಳಲ್ಲಿ ಗಂಗಾ ಗೋದಾವರಿಗಳು.

ಮಾತಾಡಲು ಪ್ರಯತ್ನಿಸಿದರೂ ಗಂಟಲು ಏಳಲಿಲ್ಲ. ಬಲವಂತವಾಗಿ ಎದ್ದು ಕೂತ. ಮುಖದಲ್ಲಿ ಕಾಂತಿ ಕಮ್ಮಿಯಾಗಿತ್ತು. ಕೂದಲು ಉದುರುತ್ತಿದ್ದವು. ದೇಹ ಕೊರಡಿನಂತಾಗಿತ್ತು. ರಿಷಿಯನ್ನು ನೋಡಿದ ಶಿವನ ಕಣ್ಣಂಚಿನಲ್ಲಿ ತೇವ….. ದುಃಖವನ್ನು ತಡೆಹಿಡಿದ ದವಡೆಯ ಸ್ನಾಯು ಬಿಗಿಯಿತು. ಮೌನವಾಗಿ ರಿಷಿಯ ಕೈಗಳನ್ನು ಸವರುತ್ತಿದ್ದ.

ಆ ಸ್ಪರ್ಶದಲ್ಲಿ ಯಾವೋ ಅವ್ಯಕ್ತ ಅನುಭೂತಿಗಳು ಕೈ ಬದಲಾಗುತ್ತಿದ್ದವು.

“ ಶಿವಾ…. ನಂಗೆ….”

“ ಬೇಡ… ಗೌರಿ ಹೇಳಿದ್ದಾನೆ. “

“ ನೀನು ಮೊದಲನೆಯ ಸಲ ಬಂದಾಗಲೇ….”

“ ಅದು ಗೊತ್ತಾಗಿಯೇ ನೋಡಲು ಬಂದಿದ್ದು”

“ ಶಿವಾ ಸಾರೀ….”

“ ಈಗ ಏನೂ ಮಾತಾಡಬೇಡ. ನಾನು ಇಲ್ಲೇ ಇರ್ತೇನೆ….”

ರಿಷಿಗೆ ಒಮ್ಮೆಲೇ ದುಃಖ ಒದ್ದುಕೊಂಡು ಬಂತು….. ತೆರೆತೆರೆಯಾಗಿ !

ಅಳೋದು ಎಲ್ಲ ಸಮಯದಲ್ಲೂ ದೌರ್ಬಲ್ಯವಲ್ಲ. ಕೆಲವೊಮ್ಮೆ ಅನಿವಾರ್ಯತೆ. ಅದೂ ಮೃತ್ಯುಶಯ್ಯೆಯ ಮೇಲೆ ಮಲಗಿ ಸಾವಿನೊಂದಿಗೆ ಹೋರಾಡುತ್ತಿರುವಾಗ. ತನ್ನ ಸಾವು ಕ್ಯಾನ್ಸರ್ ರೂಪದಲ್ಲಿ ಮಾತಾಡಿಸಿದೆ ಎಂದು ಗೊತ್ತಾದರೂ ತನ್ನ ಅರ್ಥಬಲದಿಂದ ಹಣ ಚೆಲ್ಲಿ ಕೆಲ ದಿನಗಳ ಮಟ್ಟಿಗೆ ಅದನ್ನು ಮುಂದೂಡಿದ್ದ. ಕಂಪೆನಿಗೆ ನಷ್ಟ ಬರಬಾರದೆಂದು ಗುಟ್ಟಾಗಿಟ್ಟಿದ್ದ. ಆದರೆ ಎಷ್ಟು ದಿನ? ಶಿಥಿಲಾವಸ್ಥೆಗೆ ಹತ್ತಿರವಾಗುತ್ತಿದ್ದ ದೇಹದ ಕುಸಿಯುತ್ತಿರುವ ಸದ್ದು ತನಗೆ ಕೇಳಿಸುತ್ತಿತ್ತು. ಭ್ರಮೆ ಹುಟ್ಟಿಸುವುವುವೇ ಆದರೂ ಉಪಶಮನದ ನಾಲ್ಕು ಮಾತುಗಳು ಕೇಳಲು ಮನಸ್ಸು ಹಾತೊರೆಯುತ್ತಿದೆ. ನಾಟಕೀಯವಾಗಿಯಾದರು ಕಣ್ಣಲ್ಲಿ ಒಸರುತ್ತಿರುವ ನೀರನ್ನು ಒರೆಸುವ ಕೈಗಳಿಗಾಗಿ ಮನಸ್ಸು ಹಂಬಲಿಸುತ್ತದೆ. ಆದರೆ…. ಈಗ ಅವೆಲ್ಲ ದೂರವಾಗಿವೆ. ಕೆಲವು ತನ್ನ ಪ್ರಮೇಯದಿಂದ… ಮತ್ತೆ ಕೆಲವು ಅಪ್ರಯತ್ನವಾಗಿ. ಬದುಕು ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಎಷ್ಟೋ ಮಂದಿಯ ಚೆಹರೆಗಳು ಸರಿದು ಹೋಗುತ್ತಿವೆ. ಮಗ,ಸೊಸೆ, ಮಗಳು ತನ್ನನ್ನು ಹಚ್ಚಿಕೊಳ್ಳುವುದು ಕಮ್ಮಿ ಮಾಡಿದ್ದಾರೇನೋ ಅಂತ ಕೆಲ ದಿನ ಕುಗ್ಗಿಹೋಗಿದ್ದ !  ಆ ಭಾವನೆ ರೋಗಕ್ಕಿಂತ ಜಾಸ್ತಿ ಸುಡುತ್ತಿತ್ತು. ಮಗಳು ಮುಂಚೆ ದಿನಾಲೂ ಬರುತ್ತಿದ್ದಳು.

ಕ್ರಮೇಣ…. ವಾರ… ನಂತರ ಬರೀ ಫೋನಲ್ಲಿ. ಎಲ್ಲರಿಗೂ ಅವರವರ ಬದುಕಿದೆ. ಆ ಹೋರಾಟದಲ್ಲಿ ಮುಳುಗಿದರೆ ಕಾಳಜಿ ಮಾಡೋದು ಯಾರು ? ರಿಷಿ ಇದನ್ನು ಅರ್ಥ ಮಾಡಿಕೊಳ್ಳದಿರುವುದೇ ದೊಡ್ಡ ವಿಷಾದ.

ಜೀವನ ಪ್ರವಾಹದಲ್ಲಿ ವೇಗವಾಗಿ ಕೊಚ್ಚಿಕೊಂಡು ಹೋಗುತ್ತಿದ್ದ ತನಗೆ ಈಗ ಶಿವನೇ ದೊಡ್ಡ ರಿಲೀಫ್….. ದಿನಾಲೂ ಅದೆಷ್ಟೋ ಸುದ್ದಿಗಳು… ಮನಸ್ಸಿಗೆ ಹೊಸ ಹೊಸ ಬಣ್ಣ ಬಳಿಯುತ್ತಿದ್ದಾನೆ. ರಿಷಿ ಮೊದಲಸಲ ಹಣವನ್ನಲ್ಲದೆ ಮನುಷ್ಯರನ್ನು ಪ್ರೀತಿಸುವುದು ಕಲಿಯುತ್ತಿದ್ದಾನೆ. ಈಗ ಶಿವ ಕಿರುಕುಳ ಅನಿಸ್ತಾ ಇಲ್ಲ. ಒಂದು ಗುರಿ ಇಲ್ಲದ ನಿರರ್ಥಕ ಜೀವಿ ಅಂತ ಅನಿಸ್ತಾ ಇಲ್ಲ. ಬದಲಾದದ್ದು ಯಾರು ತಾನಾ…. ಆತನಾ ? ಏನು ಈ ಜೀವನ ?

ಏನು ಈ ಮರಣ? ಇದನ್ನು ಅರ್ಥೈಸಿ ಹೇಳುವುದಕ್ಕೇ ಯಾವುದೋ ಅತೀತ ಶಕ್ತಿ ಶಿವನ ರೂಪ ತಾಳಿ ಬಂದ ಹಾಗಿದೆ. ರಾಮಾಯಣ… ಭಾರತ… ಭಾಗವತ.. ಭಾರತದ ಆಧ್ಯಾತ್ಮಿಕತೆ.. ಹೀಗೆ ಎಷ್ಟೋ ವಿಷಯಗಳು… ಶಿವನಿಂದ ಹೊಳೆಯಂತೆ ಹರಿಯುತ್ತವೆ. ಆದರೆ ಆಗಾಗ ಒಬ್ಬಂಟಿತನ ಕದ ತಟ್ಟುತ್ತಲೇ ಇದೆ. ರಾತ್ರಿ ಆದರೆ ಸಾಕು. ಮನಸ್ಸು ವ್ಯಾಕುಲಗೊಳ್ಳುತ್ತೆ. ಕಣ್ರೆಪ್ಪೆ ಮುಚ್ಚಲು ಭಯ. ಮತ್ತೆ ತೆರೆಯಲು ಆಗುವುದಿಲ್ಲವೇನೋ ಅಂತ..

*********

“ರಾತ್ರಿ ಕತ್ತಲಾಗಿದೆ… ನನ್ನ ಮನ ಹೆದರಿಕೆಯಿಂದ ಭಾರವಾಗಿದೆ. ಆದರೂ ದೀಪ ಹಿಡಿದು ಬಾಗಿಲು ತೆರೆದು ಸ್ವಾಗತ ಬಯಸುವಂತೆ ನನ್ನ ಶಿರವನ್ನು ಬಾಗುವೆ… ನನ್ನ ಬಾಗಿಲ ಬಳಿ ನಿಂತವನು ನಿನ್ನ ವಾರ್ತಾಹರನು… “

ಆ ನೀರವ ನಿಶ್ಶಬ್ದ ರಾತ್ರಿಯಲ್ಲಿ ಶಿವನ ಕೊರಳಿನಿಂದ ಠಾಗೋರರ ಗೀತಾಂಜಲಿ…. ಕರುಣಾಮಯವಾಗಿ.

ರಿಷಿಯ ಕಣ್ಣುಗಳು ಮೆಲ್ಲಕ್ಕೆ ಮುಚ್ಚುತ್ತಿವೆ. ನಿದ್ರಾದೇವಿ ಕರುಣಿಸುತ್ತಿದ್ದಾಳೆ.

ಅವನ ಮನಸ್ಸಿನಲ್ಲಿ ಒಂದೇ ಪ್ರಶ್ನೆ… ಮತ್ತೆ…ಮತ್ತೆ.

ಶಿವಾ… ಯಾರು ನೀನು ?

ಮಿತ್ರನಾ.. ಶತ್ರುನಾ… ನನ್ನ ಈಶ್ವರನಾ.

ಎದೆ ಆರ್ತವಾಗಿ ಕರಗಿ ಮೊಣಕಾಲೂರುತ್ತಿದೆ ಮೂಕವಾಗಿ !


3 thoughts on “ಮಿಸ್ಟರ್ ಅನ್ ಫ್ರೆಂಡ್

  1. ‘ ಬದುಕು ಕೊನೆಯವರೆಗೂ ಕಲಿಸುತ್ತಲೇ ಇರುತ್ತದೆ’
    ‘ ನಾಟಕೀಯವಾದರೂ ಕಣ್ಣಿನಿಂದ ಸುರಿಯುವ ಕಂಪನಿಗಳನ್ನು ಒರೆಸುವವರಿದ್ದರೆ ಎಷ್ಟು ಹಾಯಿ’ ಎಂಬ ಇಂತಹ ಮಾನವ ಸಹಜ ಭಾವನೆಗಳನ್ನು ಉದ್ದೀಪನೆಗೊಳಿಸುವ ಅಂಶಗಳಿಂದ ಕೂಡಿದ ರಮೇಶ್ ಬಾಬು ಅವರ ಕತೆ ಮನವನ್ನು ತಟ್ಟಿತು.
    ಜೀವದಲ್ಲಿ ಬದಲಾವಣೆಗಳು ಬರಲು ಬಹಳ ಸಮಯ ಹಿಡಿಯುವದಿಲ್ಲ, ‌‌‌ಮತ್ತು ಕೆಲವರು ಬಗ್ಗೆ ನಾವು ತೋರುವ ಧೋರಣೆ ಸಹಿತ ಬುಡಮೇಲು ಆಗುವುದು. ಬಾಳಿನ ಗತಿ ಬಲ್ಲವರಾರು! ಕತೆ ಕೆಲವು ಮಾನವೀಯ ಮೌಲ್ಯಗಗಳ ಕುರಿತು ಅವಲೋಕನ ಮಾಡಲು ಪ್ರೇರೇಪಿಸುತ್ತದೆ.
    ರಮೇಶ್ ಬಾಬು ಅವರು ಕತೆಯನ್ನು ಬಹಳ ಸಮರ್ಥವಾಗಿ ಅನುವಾದಿಸಿ, ಕನ್ನಡೀಕರಣ ಮಾಡುವಾಗ ತಮ್ಮ ಛಾಪನ್ನು ಮೂಡಿಸಿದ್ದಾರೆ. ಹಾರ್ದಿಕ ಅಭಿನಂದನೆಗಳು

    1. ನಿಮ್ಮ ವಿವರವಾದ ವಿಮರ್ಶೆಗೆ ಧನ್ಯವಾದ ಪ್ರಹ್ಲಾದ್ ಜೋಶಿಯವರೇ.

  2. ಕತೆಗೆ ಸ್ಪಂದನೆ ನೀಡುತ್ತಾ ಬರೆದ ನಿರೂಪಣೆಯಲ್ಲಿ ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ. ದಯವಿಟ್ಟು, ಕಂಪನಿ’ ಎಂದು ಬರೆದುದನ್ನು ‘ ಕಂಬನಿ’ ಎಂದು ಓದಿಕೊಳ್ಳಿ.

Leave a Reply

Back To Top