ಗಜಲ್
ರೇಖಾ ಭಟ್
ಗುಡಿಸಲುಗಳ ಹೊಸ್ತಿಲಲಿ ಹಣತೆಗಳು ಬೆಳಗಿದರೆ ಅಂದು ದೀಪಾವಳಿ
ಹಬ್ಬಿದ ಗೆದ್ದಲುಬಳ್ಳಿ ಉದುರಿ ಹಸೆಚಿತ್ರ ಮೂಡಿದರೆ ಅಂದು ದೀಪಾವಳಿ
ಹಬ್ಬವೆಂದರೆ ಹೊಸ ಬಟ್ಟೆ ಹೊಸ ವೇಷ ಹೊಸ ನೋಟ ಇಷ್ಟೇ ಅಲ್ಲ
ಹರಿದ ಅಂಗಿಯ ತುದಿಯಲಿ ಪಾಯಸವು ಅಂಟಿದ್ದರೆ ಅಂದು ದೀಪಾವಳಿ
ರಂಗು ಬೆಳಕಿನಲಿ ನಡೆವ ನಶೆಯ ಕೂಟಗಳಿಗೆ ದೀಪಾವಳಿಯೇ ಆಗಬೇಕೆ
‘ಮದ್ಯ’ದಲಿ ಕರಗುವ ಪುಡಿಗಾಸು ಕೂಸಿನ ಕಾಲ್ಗೆಜ್ಜೆಗಾದರೆ ಅಂದು ದೀಪಾವಳಿ
ನೊಂದ ಜೀವಗಳಲಿ ಆಶಾಭಾವದ ಮಿಣುಕು ಮೊದಲು ಉದಿಸಬೇಕಿದೆ ಇಲ್ಲಿ
ಕಸಮುಸುರೆಯಲಿ ಕನಸರಳಿಸುವ ಕೈಗಳಿಗೆ ಬಿಡುವಾದರೆ ಅಂದು ದೀಪಾವಳಿ
ಬದುಕೇ ಹಬ್ಬವಾದವರಿಗೆ ಈ ಹಬ್ಬಗಳ ಸಾಲು ನಾಮಾಂಕಿತ ‘ರೇಖೆ’ಗಳು
ಸೋತ ಕಂಗಳ ಆಳವನು ಬೆಳಕೊಂದು ತಡವಿ ತಬ್ಬಿದರೆ ಅಂದು ದೀಪಾವಳಿ
ನಿನ್ನೊಲವ ಅರಿತ ಮೇಲೆ ಪ್ರೀತಿಯ ವ್ಯಾಖ್ಯಾನವನು ಹುಡುಕಲಿಲ್ಲ
ಜೀವಭಾವ ಬೆರೆತ ಮೇಲೆ ಅನುಸಂಧಾನದ ಅರ್ಥವನು ಹುಡುಕಲಿಲ್ಲ
ನಿನ್ನ ಮೇಲೆ ಮುನಿಸು ಹೆಚ್ಚಿದಂತೆಲ್ಲಾ ಕುದಿಯುವುದು ನನ್ನದೇ ಹೃದಯ
ನೀ ನನ್ನೊಳಗಿರುವೆ ಎಂದರಿತ ಮೇಲೆ ಸಲ್ಲದ ನೆಪಗಳನು ಹುಡುಕಲಿಲ್ಲ
ಎಂಟು ದಿಕ್ಕಿಂದ ತೂರಿಬರುತಿವೆ ರಾಗಗಳು ಯಾವುದಕ್ಕೆ ಕಿವಿ ತೆರೆಯಲಿ
ಅನುರಾಗದ ಅಲೆಗಳು ಎದೆಯ ತುಂಬಿದ ಮೇಲೆ ವಿರಹದ ಹಾಡುಗಳನು ಹುಡುಕಲಿಲ್ಲ
ಈ ಪ್ರೀತಿಯು ಮಧುರ ಮಾಯೆಯಂತೆ ಆದರೂ ಮೊದಲ ಆದ್ಯತೆ ನಿನಗೆ
ನಿನ್ನ ಸನಿಹ ನನ್ನ ಸ್ವರ್ಗ ಎಂದು ತಿಳಿದ ಮೇಲೆ ಯಾವ ಆಕರ್ಷಣೆಗಳನು ಹುಡುಕಲಿಲ್ಲ
ಬರಿದೇ ಇನ್ನೇನು ಹುಡುಕಲಿ ತೃಪ್ತಿಯಾಳದಲಿ ‘ರೇಖೆ’ಯ ಮನವು ನೆಲೆನಿಂತಾಗ
ಆತ್ಮಕ್ಕೆ ಪ್ರೇಮ ದರ್ಶನವಾದ ಮೇಲೆ ಕಾಣದ ದೇವರನು ಹುಡುಕಲಿಲ್ಲ
*****************************************