ಗಜಲ್
ಸುಜಾತಾ ರವೀಶ್
ನೆಲವ ನೋಡುತ ನಡೆಯಲು ಒಲವು ಪದವಾಗಿ ಇಳಿಯಿತಲ್ಲ ಗೆಳೆಯಾ
ಛಲವ ಬಿಡುತ ಸಾಗಿರಲು ನಲಿವು ಹದನಾಗಿ ಉಳಿಯಿತಲ್ಲ ಗೆಳೆಯಾ
ಬಲವ ತೋರಲು ಬದುಕಿದು ಗೆಲುವು ಕಾಣುವುದು ತೋರಿಕೆಯಲಿ ಮಾತ್ರ
ನಿಲುವ ಬದಲು ಮಾಡಿರಲು ಜಗವು ಸೊಗವೆಂದು ತಿಳಿಯಿತಲ್ಲ ಗೆಳೆಯಾ
ಹಮ್ಮಿನ ಪರದೆ ಸುತ್ತೆತ್ತಲೂ ಧಿಮ್ಮನೆ ಕವಿಯುತ ಮಂಜಾಯಿತೇಕೆ ದೃಷ್ಟಿ
ಬಿಮ್ಮನು ತೊರೆದು ವರ್ತಿಸಲು ಘಮ್ಮನೆ ಪರಿಮಳ ಸುಳಿಯಿತಲ್ಲ ಗೆಳೆಯಾ
ಎಳವೆ ಕಲಿಸಿದ ರಾಗಗಳ ಆಲಾಪ ಮರೆತರೆ ಪ್ರಬುದ್ದರಾದಂತೆಯೇ
ಸುಳಿವೆ ಕಾಣಿಸದೆ ನೋವುಗಳ ಪ್ರಲಾಪ ಜೀವನದಿ ಅಳಿಯಿತಲ್ಲ ಗೆಳೆಯಾ
ಅಧ್ಯಾತ್ಮ ಅರಸಿದ ಸುಜಿಮನ ಸಂತೋಷ ಹೊಂದುತ ಶಾಂತವಾಗಿಹುದು
ತಾಧ್ಯಾತ್ಮ ತಿಳಿಯಲಿ ತೇಲುತಲಿ ಸಂತೃಪ್ತಿ ಬಾಂಧವ್ಯ ಬೆಳೆಯಿತಲ್ಲ ಗೆಳೆಯಾ
*****************************
ಜಗದ ಕನ್ನಡಿಯಲ್ಲಿ ಎದೆಯ ಪ್ರತಿಬಿಂಬವ ಕಾಣದಾದೆಯಾ
ಮನದ ಮಂಟಪದಲ್ಲಿ ಪ್ರೀತಿಯ ಪ್ರತಿರೂಪ ನೋಡದಾದೆಯಾ
ಮಗುವ ಹೃದಯದಲಿ ಇರದು ದ್ವೇಷಾಸೂಯೆ ಕಲ್ಮಶಗಳು
ನಗುವ ಪರಿಮಳದೆ ಇಳೆಯ ಸುಗಂಧಮಯ ಮಾಡದಾದೆಯಾ
ಮನಸು ಮನಸುಗಳ ನಡುವೆ ಅಹಂನ ಬೇಲಿ ಕಟ್ಟಿದವರ್ಯಾರು?
ಕನಸು ನನಸುಗಳ ಚೆಲ್ಲಾಟಕ್ಕೆ ಪೂರ್ಣವಿರಾಮ ಕೊಡದಾದೆಯಾ
ಕಲ್ಪನೆ ವಾಸ್ತವಗಳ ಪರಿಧಿಯಂಚಿಗೆ ಲಕ್ಷ್ಮಣರೇಖೆ ಎಳೆದವರಾರು?
ಭಾವನೆ ಸ್ಪಂದನೆಗಳ ಸವಿಪ್ರಸಾದದ ರಸದೌತಣ ನೀಡದಾದೆಯಾ
ರಾಜಿಯ ಪ್ರಸಕ್ತಿ ಬರದ ಹಾಗಿಂತು ನಿಷ್ಠುರನಾಗಿ ನಡೆಯಬೇಡ
ಸುಜಿಯ ಜೀವನ ನಿನಗಾಗಿಯೇ ಎಂದರಿತಿದ್ದರೂ ಬೇಡದಾದೆಯಾ
******************************