ಗಜಲ್
ಮುರಳಿ ಹತ್ವಾರ್
ಹೊಳೆವ ನೀರ ಮೇಲೆ ಅರಳಿದ ತಾವರೆಯಲ್ಲಿ ನಿನ್ನದೇ ನೆನಪು
ಸುಳಿವ ತಂಗಾಳಿಗೆ ನಾಚಿ ಸರಿವ ಅಲೆಯಲ್ಲಿ ನಿನ್ನದೇ ನೆನಪು
ಶಿಶಿರದಾ ಎಳೆಬಿಸಿಲು ಉಸಿರಿತ್ತು ತೆರೆವ ಚಿಗುರಿನೆಲೆಯಲ್ಲಿ
ಆ ನೆಲೆಯ ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ ನಿನ್ನದೇ ನೆನಪು!
ಬಸಿರೊಡೆದ ಮುಗಿಲು ಸುರಿಸುವ ತಿಳಿನೀರ ಹನಿಹನಿಗಳ ಸ್ಪರ್ಶದಲಿ
ಹಸಿರೊಡೆದ ಮನದಿ ಮೂಡುವ ಕಾಮನಬಿಲ್ಲಿನಲ್ಲಿ ನಿನ್ನದೇ ನೆನಪು!
ನೆಗೆನೆಗೆದು ಧುಮುಕುತ್ತ ಸರಿಸರಿವ ನದಿಗಳ ಬಳುಕಿನಲ್ಲಿ
ಅಬ್ಬರದ ಅಲೆಗಳಲಿ ದಡವನಪ್ಪುವ ಶರಧಿಯಲ್ಲಿ ನಿನ್ನದೇ ನೆನಪು!
ಚಳಿಯೊಡೆವ ಇರುಳುಗಳು ಮಬ್ಬಿಟ್ಟ ನಸುಕಿನ ಮಂಜಿನಲಿ
ರಾಧೆಯ ನೆನೆನೆನೆದು ಮೆರೆವ ಮುರಳಿಯ ಗಾನದಲ್ಲಿ ನಿನ್ನದೇ ನೆನಪು!
ಮತ್ತೆ ಬೇಕೆನಿಸಿದೆ…!
ತಂಪು ಕನ್ನಡಕಗಳ ಹೊಳಪಿಸಿದ ಆ ಕಿರಣಗಳು ಮತ್ತೆ ಬೇಕೆನಿಸಿದೆ
ಕನಸಿನ ಹೊದಿಕೆಗಳಲಿ ಅರಳಿದ ಆ ಕನಸುಗಳು ಮತ್ತೆ ಬೇಕೆನಿಸಿದೆ
ಅಮ್ಮನ ಕೈತುತ್ತು ಅಪ್ಪನ ಕೈ ಬೆರಳು ಬರೆಸಿ ಬೆಳೆಸಿದ ಆ ಹೆಜ್ಜೆಯ ಗುರುತು
ನಡೆದ ದಾರಿಯ ಅಡಿಅಡಿಗೆ ನೆರಳಿತ್ತ ತಂಪಿನ ಮರಗಳು ಮತ್ತೆ ಬೇಕೆನಿಸಿದೆ
ಚಿಗುರೊಡೆದ ಮೀಸೆಯ ಹರೆಯ ಚುಂಬಿಸಲು ನಾಚಿದ ಸವಿ ಹೃದಯ
ಯೌವನದ ದಿನಗಳ ಶೃಂಗರಿಸಿದ ಆ ಗೆಳೆತನಗಳು ಮತ್ತೆ ಬೇಕೆನಿಸಿದೆ
ಉರಿ ಬಿಸಿಲ ಕ್ಷಣಗಳ ಪ್ರಯಾಣ ಕೆಲವೊಮ್ಮೆ ನಮ್ಮೀ ಜೀವನ ಯಾನ
ಮೈಮರೆಸಿ ತಣಿಸುವ ಅಮೃತ ಗಾನದ ಆ ಮುರಳಿಯ ಕೊರಳು ಮತ್ತೆ ಬೇಕೆನಿಸಿದೆ!
******************