ಗಜಲ್
ವೀಣಾ .ಎನ್. ರಾವ್.
ಎದೆಯ ನದಿಯಲಿ ಹರಿಯಲಿ ಒಲವ ಭಾವಗಂಗೆ ಅನುದಿನ ಗೆಳೆಯಾ
ಸುಧೆಯ ಸುಳಿಯಲಿ ಜಿನುಗಲಿ ನಾದದ ಜೀವಬಂಧ ಹೊಸದಿನ ಗೆಳೆಯಾ.
ನಿಯಂತ್ರಣ ತಪ್ಪದ ಬದುಕಲಿ ಹುಡುಕಬೇಕಿದೆ ನಿನ್ನಯ ಸಾಂಗತ್ಯ ಸವಿಯಲು
ಆಮಂತ್ರಣ ನೀಡದೆ ಬರೆದೆ ನನ್ನೆದೆಯಲಿ ಕಾವ್ಯಕುಸುರಿ ಸುರಿದದಿನ ಗೆಳೆಯಾ.
ನಿಲ್ಲದ ಅಭಿಲಾಷೆ ನೋಟದಲಿ ಬಂಧಿಸಿ ಮಧುರ ನುಡಿ ಮರೆಸಿದೆ
ಸಲ್ಲದ ನೆಪದಲಿ ಹಗಲು ಕನಸಿಗೆ ಸ್ಪೂರ್ತಿಯು ಮರೆಯದದಿನ ಗೆಳೆಯಾ.
ಕಿರುನಗೆಯನು ಕೆಣಕುತ ಸೆಳೆದ ಮನಕೆ ಪುಳಕದ ಸವಿರಸ ಉಣಿಸಿ
ಹೊಸಬಗೆಯನು ತೋರುತ ಬಳಿಬಂದು ನೋವ ಮರೆತು ಸರಿದದಿನ ಗೆಳೆಯಾ.
ಬೆಳಗಿದನು ರವಿಯು ಜಗದೊಡಲಿಗೆ ಹರುಷದ ಕಿರಣಗಳ ಚಿಲುಮೆ ಧಾರೆಯಲಿ
ಸುರಿಸಿದನು ಮಧುರ ಪ್ರೇಮವ ವೀಣಾಳ ಬಾಳಿನಲ್ಲಿ ಸುದಿನ
ಹಳೆಯ ದಿನಗಳ ಸವಿಯ ಸವಿಯುತ ಮನವು ನಲಿಯುತಿದೆ ಗೆಳತಿ
ಮಳೆಯ ಸೂಚನೆಗೆ ಮೋಡವು ಕವಿಯುತ ಗಗನ ನಲುಗುತಿದೆ ಗೆಳತಿ.
ಮಸುಕು ಕನ್ನಡಿಯಲಿ ಕಂಡ ಅಸ್ಪಷ್ಟ ನನ್ನದೇ ಪ್ರತಿಬಿಂಬವಿದೆ ಅಲ್ಲಿ
ನಸುಕು ಇಬ್ಬನಿಯಲಿ ಕಾಣದ ಪರದೆ ಸಿಗದೆ ಮರೆಯಾಗುತಿದೆ ಗೆಳತಿ.
ಉರಿವ ಸೂರ್ಯನಿಗೂ ಬರುವುದು ಒಮ್ಮೊಮ್ಮೆ ಗ್ರಹಣವೆಂಬ ಕರಿಯ ಛಾಯೆ
ಜರಿವ ಜನರಲ್ಲಿ ಕುಟಿಲ ಅಂತರಂಗ ಅರಿತು ನೋವಾಗುತಿದೆ ಗೆಳತಿ.
ದುಡಿವ ಕೈಗಳ ಹಿಂದಿರುವ ಬೆವರ ಶ್ರಮವು ಯಾರಿಗೂ ತೋರದು
ಮಿಡಿವ ಹೃದಯವು ಕಾಯುತ ನಿಂತರೂ ಉಸಿರು ಬೆದರುತಿದೆ ಗೆಳತಿ.
ಮನಕೆ ಸಾಂತ್ವನ ಹೇಳಲು ವೀಣಾಳು ಜೊತೆಯಿರಲು ಭಯವೇಕೆ ನಿನಗೆ
ಒನಕೆ ಕುಟ್ಟುತ ಹಾಡಿದ ಹೊಸರಾಗ ಎಲ್ಲರ ಒಂದಾಗಿಸುತಿದೆ ಗೆಳತಿ.
***********************