ಗಜಲ್
ಶಂಕರಾನಂದ ಹೆಬ್ಬಾಳ
ಮಳೆಯ ಹನಿಗಳು ಇಳಿಯುತ ಇಳೆಗೆ ಎದೆಗಳ ತಂಪಾಗಿಸಲಿ ಸಖಿ|
ಮನದಲಿ ಪ್ರೀತಿಯು ಚಿಮ್ಮುತ ತಾನಿಂದು ಭಾವಗಳ ಇಂಪಾಗಿಸಲಿ ಸಖಿ||
ಜೀವಗಳ ಬಾಂಧವ್ಯ ಬೆಸೆಯುವ ನಲ್ಮೆಯ ಸುಮಧುರ ಸ್ನೇಹವದು|
ಭಾನುಭೂಮಿಗಳು ಜೊತೆಯಲಿ ಬೆರೆಯುತ ತನುಗಳ ಒಂದಾಗಿಸಲಿ ಸಖಿ||
ಒಲವಿನಲಿ ಕೂಡುವ ಸವಿ ಸ್ವಪ್ನಗಳು ಕಂಗಳಲಿ ನಲಿಯುತಿವೆ|
ಚೆಲುವಿನ ಸಿರಿಯು ಧರಣಿಯ ಮೆಲ್ಗಡೆ ಹಸಿರಿನು ಸೊಂಪಾಗಿಸಲಿ ಸಖಿ||
ಇಬ್ಬನಿಯಲಿ ಕಿರಣಗಳು ರವಿಯ ಕಾಂತಿ ತೋಷದಲ್ಲಿ ಚಲ್ಲುತಿವೆ|
ಕಾರ್ಮೋಡ ಆಗಸದಲಿ ಶರಧಿಯ ಸೇರುತ ವರುಣನ ಸ್ವಾಗತಿಸಲಿ ಸಖಿ||
ನೀಲಾಕಾಶವು ಚಣದಲ್ಲಿ ರವಿಯನ್ನು ಹೊಳೆಸಿ ಅಭಿನವನ ಮೆರೆಸುತಿದೆ|
ಧರೆಯಲ್ಲಿ ಕಲ್ಮಷಗಳ ದೂರವಿರಿಸಿ ಬರುತಿರುವ ಭಾಸ್ಕರನ ಬೆಳಗಿಸಲಿ ಸಖಿ||
ನೂರು ರಾಗದಲಿ ಸಾವಿರ ಹಾಡುಗಳ ಹಾಡುವೆನು ನನ್ನೊಡತಿ||
ಸಾಗುವ ಹಾದಿಯಲಿ ಕಲ್ಲುಮುಳ್ಳುಗಳ ದಾಟುವೆನು ನನ್ನೊಡತಿ||
ಒಲಿದ ಜೀವಗಳಲಿ ಒಲುಮೆಯ ಸಂಗೀತ ಕೇಳುತಿದೆ|
ಮೇಘಗಳ ಮಾಲೆಯಲಿ ಪ್ರೇಮತೇರನು ಎಳೆವೆನು ನನ್ನೊಡತಿ||
ಕೌಮುದಿಯ ಬೆಳಕಿನಲಿ ತಮವನ್ನು ಓಡಿಸುತ ಬಂದಿರುವೆ|
ತೂರ್ಯವನು ಊದುತಲಿ ಮನವನ್ನು ಗೆಲ್ಲುವೆನು ನನ್ನೊಡತಿ||
ರೇಷ್ಮೆಯ ತನುವಿಂದು ತೋಳನ್ನು ಬಳಸುತ್ತ ಬರುತಲಿದೆ|
ಶುದ್ದಾಂತದ ಮನೆಯಲಿ ಹಿಡಿದು ತಬ್ಬುವೆನು ನನ್ನೊಡತಿ||
ಅಭಿನವನ ನಲ್ನುಡಿಯ ಶುಕ್ತಿಯಲಿ ಮುತ್ತಾಗಿ ಹೊಳೆದಿರುವೆ |
ಶೈಲೂಷಿಯ ನೃತ್ಯಕ್ಕೆ ಕಂಗಳಲಿ ಸೋಲುವೆನು ನನ್ನೊಡತಿ||
*************************************
ಚಂದ ಸರ್