ಗಜಲ್
ಸಿದ್ದರಾಮ ಹೊನ್ಕಲ್
ತೆರೆಯಬಾರದೇನೇ ನಿನ್ನ ಹೃದಯಕ್ಕೆ ಹಾಕಿದ ಬೀಗವನು
ತೋರಬಾರದೇ ದೇಹ ಮನದೊಳಗಿನ ಚೆಲುವ ಸಿರಿಯನು
ಒಲವು ತುಂಬಿಟ್ಟಿರುವಿ ಯಾರೂ ಕದಿಯದಂತೆ ಕಾಪಿಟ್ಟು
ಮುದದಿ ಸಿಹಿ ಮುತ್ತಿಕ್ಕಿ ನೀ ತಬ್ಬದೇ ಹಬ್ಬಲು ಅರಿಯನು
ಜಗದಿ ಕಳ್ಳ ಸುಳ್ಳ ಖದೀಮರೇ ಜಾಸ್ತಿ ದೋಚ ಬಲ್ಲವರು
ಎಚ್ಚರದಿ ದೂರವಿಡು ನಾಯಿ ನರಿ ಕಾಡು ಕೋಣಗಳನು
ಹುಷಾರ್ ಕಣೇ ಬಹುದೂರ ಬಂದಿರುವಿ ಬೇಲಿ ಮರೆಯಲಿ
ಎಲ್ಲೆಂದರಲ್ಲಿ ಕುಂತು ಹಾಕಲು ಮರೆಯದಿರು ಚಿಲುಕವನು
ಹೊನ್ನಸಿರಿ’ಮೆಚ್ಚಿಹನು ನಿಸ್ವಾರ್ಥ ಸ್ವಾಭಿಮಾನ ಸಂಪತ್ತನು
ಜೋಪಾನದಿ ಕಾಪಾಡಿಕೋ ಮುಳ್ಳ ಮೇಲಿನ ಸೀರೆಯನು
ಕಲ್ಲು ಬಂಡೆಯಂತವ ಕರಗಿ ಹಿಮದಂತಾದೆ ನಾನೇಕೆ ಹೀಗೆ
ರಾಗಾನುರಾಗದಿ ಮುಳುಗುತ್ತಾ ಹೂವಂತಾದೆ ನಾನೇಕೆ ಹೀಗೆ
ಕನಸಲಿ ಎದ್ದು ಬೆಂಬತ್ತಿ ಹೋಗುವಂತದು ಏನಿರಬಹುದು
ಕನಸು ನನಸು ವ್ಯತ್ಯಾಸ ಅರಿಯದಂತಾದೆ ನಾನೇಕೆ ಹೀಗೆ
ಬಾಂದಳದಿ ಚಕೋರಂಗೆ ಸದಾ ಚಂದ್ರಮನ ಚಿಂತೆಯಂತೆ
ಮಾತು ಮೌನದಿ ತಣಿದು ಮೂಕನಂತಾದೆ ನಾನೇಕೆ ಹೀಗೆ
ನಟ್ಟ ನಡು ರಾತ್ರಿಯಲಿ ಧಿಗ್ಗನೆದ್ದು ಬಾಯಾರಿದ ಬವಣೆಯು
ಸಿದ್ದಾರ್ಥನು ಧೇನಿಸಿ ಎದ್ದುಹೋದಂತಾದೆ ನಾನೇಕೆ ಹೀಗೆ
ಬಾರದ ದುಂಬಿಗಾಗಿ ಮಧು ಎತ್ತಿಟ್ಟು ಕಾದ ಗುಲಾಬಿಯಂತೆ
ಆ ಕಾರ್ಮೋಡ ಮುಸುಕಿದ ಶಶಿಯಂತಾದೆ ನಾನೇಕೆ ಹೀಗೆ
ಬರುವಾಗ ಅಳುತಾ ಬಂದೆ ಹೋಗುವಾಗಲು ನಗು ಬೇಡವೇ
ಹೊನ್ನಸಿರಿ’ಸ್ವಾರ್ಥ ಮನಸಿಗೆ ಕಮರಿದಂತಾದೆ ನಾನೇಕೆ ಹೀಗೆ
**********************************