ಲಂಕೇಶ್ ಮೋಹಕ ರೂಪಕಗಳ ನಡುವೆ

ಪುಸ್ತಕ ಪರಿಚಯ

ಲಂಕೇಶ್ ಮೋಹಕ ರೂಪಕಗಳ ನಡುವೆ

ಲೇಖಕರು:-ಶೂದ್ರ ಶ್ರೀನಿವಾಸ,
ಪ್ರಕಟನೆ-ಪಲ್ಲವ ಪ್ರಕಾಶನ,೯೪೮೦೩೫೩೫೭,
ಪುಟ-೨೮೨,
ಬೆಲೆ-೨೫೦/-

..

    ನಾನು ಪಿಯುನಲ್ಲಿ ಓದುವಾಗಲೇ ಲಂಕೇಶ್ ಪತ್ರಿಕೆ ಗುಂ ಬಂ ಎಂಬ ಹೊಸ ನುಡಿಗಟ್ಟಿನೊಂದಿಗೆ ಕನ್ನಡದ ಜಾಣ ಜಾಣೆಯರಿಗಾಗಿ ಎಂಬ ಟ್ಯಾಗ್ ಲೈನ್ ದೊಂದಿಗೆ ಅದೇ ಆರಂಭವಾಗಿತ್ತು.ಪ್ರಥಮ ಸಂಚಿಕೆಯಿಂದ ಆರಂಭಿಸಿ ಕೊನೆಯ ಸಂಚಿಕೆಯವರೆಗೂ ಬಿಟ್ಟು ಬಿಡದೇ ಓದಿದ ನನಗೆ ಅತ್ಯಂತ ಬೆಳೆಯುವ ವಯಸ್ಸಿನಲ್ಲಿ ಪ್ರಭಾವ ಬೀರಿದವರು ಲಂಕೇಶ್ ಹಾಗೂ ಅವರ ಪತ್ರಿಕೆಯ ಬಳಗದ ಆಗಿನ ಎಲ್ಲ ಲೇಖಕರು,ವರದಿಗಾರರು.ಇಡೀ ಪತ್ರಿಕೆಯ ಒಂದಕ್ಷರವು ಬಿಡದೇ ಓದುತ್ತಿದ್ದೆ.ಲಂಕೇಶ, ತೇಜಸ್ವಿ,ಚಂಪಾ, ಶೂದ್ರ, ರಾಮದಾಸ,ಎಂ ಡಿ ಎನ್, ಎಚ್,ಎಲ್, ಕೇಶವಮೂರ್ತಿ,ಪುಂಡಲೀಕ್ ಶೇಠ,ಬಿ.ಚಂದ್ರೆಗೌಡ, ರವಿಂದ್ರ ರೇಷ್ಮೆ,ಲಿಂಸ್, ರಾಮಚಂದ್ರ ಶರ್ಮಾ, ಚಂದ್ರಶೇಖರ ಆಲೂರು, ಸತ್ಯಮೂರ್ತಿ ಆನಂದೂರು, ಟಿ.ಕೆ.ತ್ಯಾಗರಾಜ್, ಡಿ.ಆರ್,ನಾಗರಾಜ್, ಡಾ.ಸಿದ್ದಲಿಂಗಯ್ಯ,ಹೀಗೆ ಕೊನೆಗೆ ಬಸವರಾಜುರವರೆಗೆ ಪತ್ರಿಕೆಯ ಎಲ್ಲ ಬರಹಗಾರರ ದಟ್ಟ ಪ್ರಭಾವ ಪರಿಚಯ ಅವರ್ಯಾರನ್ನು ಕಾಣದೇ ಸಹ ನನ್ನ ಮೇಲೆ ಆಗಿತ್ತು.

  ಪತ್ರಿಕೆ ಇಡೀ ಕರ್ನಾಟಕಕ್ಕೆ ಹೊಸ ದೃಷ್ಟಿಕೋನ ಕೊಟ್ಟಿದ್ದು ಸುಳ್ಳಲ್ಲ.ಅಂತಹ ಲಂಕೇಶರ ಕುರಿತು ಈ ಕೃತಿ ರಚಿಸಿದ, ನಾನು ತುಂಬಾ ಗಾಢವಾಗಿ ಗಮನಿಸಿದಂತಹ ಸೂಕ್ಷ್ಮ ಸಂವೇದನೆಯ ಲೇಖಕರು ಈ ಶೂದ್ರ ಶ್ರೀನಿವಾಸ್ ಸರ್.ಅವರು ತಮ್ಮ ಒಡನಾಟದ ಮೂಲಕ ಪತ್ರಿಕೆಯ ಮುಖದ ಮೂಲಕ ಮಾತ್ರ ದಟ್ಟ ಪರಿಚಯವಿದ್ದ ಲಂಕೇಶರನ್ನು ಅವರ ಎಲ್ಲ ಕೋನಗಳಿಂದಲೂ ನಿರಂತರ ಒಡನಾಟದ ಕಾರಣವಾಗಿ, ಸೂಕ್ಷ್ಮವಾಗಿ ಅವಲೋಕನ ಮಾಡಿ ಈ ಕೃತಿಯಲ್ಲಿ ಅತ್ಯಂತ ವಸ್ತುನಿಷ್ಠವಾಗಿ, ಇದ್ದುದಿದ್ದಂತೆ ಎಲ್ಲ ಪ್ರೀತಿ ಅಭಿಮಾನ,ರಾಗ ದ್ವೇಷಗಳನು ಮೀರಿ ಒಬ್ಬ ಸಂತನ ಮನಸ್ಥಿತಿಯಿಂದ ಸುಂದರ ರೂಪಕವಾಗಿಸಿದ್ದಾರೆ. ಈ ಕೃತಿಯಲ್ಲಿ ಅತ್ಯಂತ ಕಲಾತ್ಮಕವಾಗಿ, ಓದಿದವರಿಗೆ ಬಹುಕಾಲ ಕಾಡುವಂತೆ ಕಟ್ಟಿಕೊಟ್ಟಿದ್ದಾರೆ. ಅವರ ಅನೇಕ ಮಾತುಗಳನ್ನು ಉಲ್ಲೇಖಿಸಿ ಓದುಗರು ಅವನ್ನೆಲ್ಲ ಅರ್ಥಮಾಡಿಕೊಳ್ಳುವಂತೆ ಲಂಕೇಶರನ್ನು ಬಹುದೊಡ್ಡ ಕ್ಯಾನ್ವಾಸ್ ನಲ್ಲಿ ಕಲಾಕೃತಿಯಾಗಿಸಿ ನಮ್ಮ ಮುಂದೆ ನಿಲ್ಲಿಸಿ ಈ ಕೃತಿ ಸಾರ್ಥಕತೆ ಪಡೆದಿದೆ.ಲಂಕೇಶರ ಒಳಗಿನ ಮೂರು ವ್ಯಕ್ತಿತ್ವಗಳನ್ನು ಬಹಳ ಚೆಂದ ನಿರೂಪಿಸಿದ್ದಾರೆ. ಮತ್ತೆ ಮತ್ತೆ ಓದಬಹುದೆನಿಸುವ ಕೃತಿ ಇದು.

೧೯೯೧ ರಲ್ಲಿ ಪ್ರಕಟವಾದ ಮೊಟ್ಟಮೊದಲ ನಮ್ಮ ಅಕ್ಕಾಳಿಗೊಂದು ಪ್ರಶ್ನೆ ಹಾಗೂ ಇತರ ಕವನಗಳು ಸಂಕಲನಕ್ಕೆ ಆ ಕಾಲದಲ್ಲಿ ಬೆನ್ನುಡಿ ಬರೆದು ಕೊಟ್ಟಿದ್ದರು ಈ ಶೂದ್ರ ಸರ್,ಹಲವು ವರ್ಷ ಶೂದ್ರ ಸಹ ನನಗೆ ಬರುತ್ತಿತ್ತು. ಲಂಕೇಶರ ದಟ್ಟ ಪ್ರೀತಿ, ವ್ಯಂಗ್ಯ,ವಿಡಂಬನೆ ಎಲ್ಲವೂ ಶೂದ್ರರ,ಹಾಗೂ ಇತರರ ಮೇಲಾಗುತ್ತಿದ್ದದ್ದು ಗಮನಿಸುತ್ತಾ ಬೆಳೆದಿದ್ದೇವೆ.ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಇವರ ದಟ್ಟ ಪರಿಚಯ, ಪ್ರಭಾವಕ್ಕೆ ಒಳಗಾದದ್ದು ಉಂಟು.ಲಂಕೇಶ ಬಳಗ ಅಂದ್ರೆ ಓದಲು ಖುಷಿ ಆಗುತ್ತಿದ್ದ ಕಾಲವದು.

   ಈ ಕೃತಿ ಎಪ್ಪತ್ತರ ದಶಕದಿಂದ ಆರಂಭಿಸಿ ಒಟ್ಟು ನಾಲ್ಕು ದಶಕಗಳವರೆಗಿನ ಇಡೀ ಸಾಹಿತ್ಯಕ ವಾತಾವರಣ,ರೈತ ಚಳುವಳಿ, ಗೋಕಾಕ ಚಳುವಳಿ,ಬೂಸಾ ಚಳುವಳಿ, ರಾಜಕೀಯ ಸ್ಥಿತ್ಯಂತರಗಳು,ಒಕ್ಕೂಟ,ಹೀಗೆ ಎಲ್ಲವನ್ನು ಒಬ್ಬ ಸಾಕ್ಷಿಪ್ರಜ್ಞೆ ಯಾಗಿ ಅವಲೋಕಿಸಿ ಅತ್ಯಂತ ಮಾನವೀಯ ನೆಲೆಯಲ್ಲಿ ಒಳಗೊಂಡು, ಖುಷಿ ಪಟ್ಟು, ನೊಂದು ಬೆಂದು ಈ ಕೃತಿ ರಚಿಸುವ ಮೂಲಕ ಹಗುರವಾಗಿದ್ದಾರೆನಿಸುತ್ತದೆ.ಅಷ್ಟೇ ಮುಖ್ಯವಾಗಿ ಈ ಎಲ್ಲ ಸಂದರ್ಭಗಳಲ್ಲೂ ಅವರ ಪಾಲ್ಗೊಳ್ಳುವಿಕೆ ತುಂಬಾ ಮಹತ್ವದ್ದೆನ್ನುವದು ಸಹ ಅಷ್ಟೇ ಮುಖ್ಯವಾಗಿದೆ.ಶೂದ್ರ ಸರ್ ನಿಮಗೆ ನೂರು ನಮನ.ಪ್ರಕಟಿಸಿ ಓದಲು ಹಚ್ಚಿದ ನಾಡಿನ ಹೆಮ್ಮೆಯ ಪ್ರಕಾಶನದ ಶ್ರೀ ವೆಂಕಟೇಶ್ ಅವರಿಗೂ ಅಭಿನಂದನೆಗಳು.ಲಂಕೇಶರು ನಮ್ಮ ಪ್ರಜ್ಞೆಯ ಒಂದು ಭಾಗವಾಗಿ ಸದಾ ನಮ್ಮೊಳಗೆ ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತಹ,ಲಂಕೇಶರ ಬಗ್ಗೆ ಪ್ರೀತಿಯುಳ್ಳ ಎಲ್ಲರೂ ಒಮ್ಮೆಯಾದರು ಓದಲೇಬೇಕಾದ ಕೃತಿ ಇದು.

*******************************

One thought on “ಲಂಕೇಶ್ ಮೋಹಕ ರೂಪಕಗಳ ನಡುವೆ

Leave a Reply

Back To Top