ಕವಿತೆ
ಶ್…. ! ನಿಶ್ಯಬ್ದವಾಗಿರಿ ನೀವು
ತೇಜಾವತಿಹೆಚ್.ಡಿ.
ಅದೇ ದಾರಿಯಲ್ಲಿ
ನಿತ್ಯ ಪ್ರಯಾಣಿಸುತ್ತಿದ್ದೆ
ನನ್ನದೇ ಲಹರಿಯಲ್ಲಿ
ಐಹಿಕದ ಜಂಜಾಟದಲ್ಲಿ
ಮನಸ್ಸಿನ ಹೊಯ್ದಾಟದಲ್ಲಿ
ನಿಗೂಢ ಬದುಕ ಬಯಲಿನಲ್ಲಿ
ಎಲ್ಲವೂ ಬೆತ್ತಲೆ
ನಮ್ಮದೇನಿದೆ ಇಲ್ಲಿ,?
ಆಗೋ.. ಅಲ್ಲಿ ಗೋಚರಿಸುತ್ತಿದೆ
ಪ್ರಶಾಂತ ನೀರವ ತಾಣ…
ಇಲ್ಲೇ ಹಿತವೆನಿಸುತ್ತದೆ ನನಗೆ
ಶ್……! ನಿಶ್ಯಬ್ದವಾಗಿರಿ ನೀವು
ಎಚ್ಚರಗೊಂಡಾರು ಮತ್ತೆ
ಇದ್ದಾಗ
ಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರು
ಬೆಚ್ಚಗೆ ಮಲಗಿಹರಿಲ್ಲಿ
ಮಣ್ಣಿನ ಪದರಗಲಾಗಿ!
ಅಹಮ್ಮಿನ ಕೋಟೆಯೊಳಗೆ
ಅಹಂಕಾರದಿಂದ ಮೆರೆದವರೆಲ್ಲಾ
ಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. !
ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿ
ಕಚ್ಚಾಡಿದವರೆಲ್ಲಾ
ಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. !
ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವ
ಶಾಶ್ವತ ಕನಸು ಕಂಡು
ನನಸಾಗದೇ ಉಳಿದು
ಕನವರಿಸಿ ನರಳಿ
ವಸ್ತಿ ಮಾಡಿಹರಿಲ್ಲಿ.. !
ಸೂರ್ಯನ ರಶ್ಮಿ ತಾಕದ ಕಾಯಗಳು
ಹಸಿವು ಚಳಿ ಮಳೆ ಗಾಳಿಯ ಹಂಗಿಲ್ಲದೆ
ಪಂಚಭೂತಗಳನ್ನು ಸೇರಿಹರಿಲ್ಲಿ.. !
ಹೆಸರಿಗಾಗಿ ಹಾರಾಡಿ
ಹೆಸರಿಲ್ಲದೇ ಅಳಿದು
ಕೊನೆಗೆ…
ಆರಡಿ ಮೂರಡಿಯಲಿ
ಫಲಕವ ಹಾಕಿಸಿಕೊಂಡಿಹರಿಲ್ಲಿ..!
ಧರ್ಮ -ಅಧರ್ಮಗಳಾಚೆ
ಮನುಷ್ಯನೇ ರೂಪಿಸಿಕೊಂಡ
ನೀತಿ – ನಿಯಮಗಳಾಚೆ
ಎಲ್ಲರೂ ಒಂದಾಗಿ ಬೆರೆತಿಹರಿಲ್ಲಿ
ನಿಸರ್ಗದ ನಿಜ ಸೂತ್ರದ ಸ್ಮಶಾನದ ಗೋರಿಗಳಲ್ಲಿ….. !
ಶ್….! ಶಬ್ದ ಮಾಡದಿರಿ ನೀವು..
ಎಚ್ಚರಗೊಂಡಾರು ಮತ್ತೆ….!
*******************************
ಕೊನೆಗೆ ಸೇರುವ ಮುಕ್ತಿ ಧಾಮದಲ್ಲಿ ಎಲ್ಲರೂ ಸಮಾನರೇಚ!
ಸುಂದರ ಕವನ !
ಚೆನ್ನಾಗಿದೆ.
ನಿಶ್ಶಬ್ಧವಾಗಿರುತ್ತೇವೆ, ನಮ್ಮದೇನಿದೆ ಇಲ್ಲಿ…..
Dayanand