ಕವಿತೆ
ಕಾಂಕ್ರೀಟ್ ಬೋಧಿ
ಪೂಜಾ ನಾರಾಯಣ ನಾಯಕ
ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿ
ಅದರ ಪರಿಣಾಮವೇ ಬೆಳೆದೆನಾಯಿಲ್ಲಿ
ಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿ
ಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿ
ಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿ
ಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ
ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜ
ಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜ
ನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾ
ಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾ
ನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣ
ಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ
ನೀನಾಗಿಹೆ ಇಂದು ಕ್ರೋಧದಾ ಬಂಧನ
ಕೇಳಿಸುತ್ತಿಲ್ಲವೇನೋ ನಿನಗೆ, ನನ್ನ ಮನದ ಆಕ್ರಂದನ
ಹಿಡಿದು ನಿಂತಿರುವೆ ನೀನಿಂದು, ಖಡ್ಗ ಮಹಾರಾಜನ
ಕೆಳಗಿಳಿಸೋ ಮಾರಾಯಾ, ಕೊಡುವೆ ನಾನಿಂಧನ
ನನ್ನ ನೆರಳಿನಲಿ ಕುಳಿತಿದ್ದು, ಮರೆತೋಯ್ತೋ ಏನೋ?
ನೀ ಮರೆತೆಯೆಂದು, ನಾ ಮರೆವೆನೇನೋ?
ನೀ ಕೂರದೇ ಇರಬಹುದು, ನೆರಳಿನಾ ಕೆಳಗೆ
ಯಾಕೆಂದರೆ ನೀನಿರುವೆ ಕಾಂಕ್ರೀಟ್ನ ಒಳಗೆ
ನೀ ಬಯಸಲಾರೆ, ಎಸಿಯಲಿ ಉಳಿದು
ಬಯಸುವನು ರೈತ, ಬಿಸಿಲಿನಲಿ ಬಸವಳಿದು
ಕೇಳಿಸಿಕೋ, ಕೇಳಿಸಿಕೋ ಮನದಾಳದ ಕೂಗ
ವಾಸಿಮಾಡುವೆನು ನಿನ್ನ ಧೀರ್ಘಕಾಲದ ರೋಗ
ಬುದ್ಧನಿಗೆ ನೀಡಿದೆ ಜ್ಞಾನವನಾನಂದು
ನೀನಾಗಬೇಡವೋ ಕೊಲೆಗಡುಕನಿಂದು
ಸುಡು ಬಿಸಿಲ ಸಹಿಸಿ,
ಪರ ಹಿತವ ಬಯಸಿ
ನಾ ಬಾಳುವ ಪರಿ
ಅದುವೇ ನಿನಗೆ ಆದರ್ಶದ ಗರಿ.
******************************************************