ದೊರೆಯ ಕಿರೀಟದ ನೀಲ ಮಣಿಯಲ್ಲಿ….

ಕವಿತೆ

ದೊರೆಯ ಕಿರೀಟದ ನೀಲ

ಮಣಿಯಲ್ಲಿ….

person holding fireworks

ಶ್ರೀದೇವಿ ಕೆರೆಮನೆ

ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದ
ದೊರೆಯಲ್ಲೊಂದು ಉದಾಸೀನ
ಅನತಿ ದೂರದಲ್ಲಿ, ಕೈ ಕಟ್ಟಿ
ವಿಧೇಯಳಾಗಿ ನಿಂತಿದ್ದ
ಕಪ್ಪು ಬಣ್ಣದ ನಿರಾಭರಣ ಯುವತಿಯ
ಕಡೆಗೊಂದು ದಿವ್ಯ ನಿರ್ಲಕ್ಷ

ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆ
ಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯ
ಸುಂದರವಾಗಿರದ್ದು ಯಾವುದೂ ಕಣ್ಣೆದುರು
ಕಾಣಲೇ ಬಾರದು ಎಂಬ ಹಟ
ಎದುರಿಗಿದ್ದ ಯುವತಿಯೋ
ಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ

ದೊರೆಯ ಅಣತಿಯಂತೆ ತಲೆ ತಗ್ಗಿಸಿ
ಮುಖ ತಿರುವಿ ಹೊರ ಹೊರಟಾಕೆಯ
ಕಣ್ಣಲ್ಲೊಂದು ಅಬ್ಬರಿಸುವ ಕಡಲು
ಉಕ್ಕಿದ ನಗೆಯಲ್ಲೊಂದು ಕಡಲಲೆಗಳ
ನೆನಪಿಸುವ ಭೋರ್ಗರೆತ

ಅದೋ…
ದೊರೆ ಓಡೋಡಿ ಬಂದಿದ್ದಾನೆ
ಈಗ ತಾನೆ ಹೊರಗೆ ಹೋದ
ಕಪ್ಪು ಕಣ್ಣಿನ ಕಪ್ಪು ಹುಡುಗಿಗಾಗಿ
ಆಕೆ ಅಲ್ಲೆಲ್ಲೂ ಕಾಣುತ್ತಿಲ್ಲ…
ಗಾಳಿಯಲ್ಲಿ ಉಪ್ಪು ನೀರಿನ ಘಮಲು
ಕಿವಿಯಲ್ಲಿ ಅಲೆಗಳ ಮೊರೆತ
ಮುಗ್ಗರಿಸಿದ ದೊರೆಯ ಎದೆಯಲ್ಲೂ
ಎಂದೂ ಇರದ ಕಡಲ ಸೆಳೆತ
ಕಪ್ಪು ಹುಡುಗಿಯ ಕನವರಿಕೆ

ಈಗ,
ದೊರೆಯ ಕಿರೀಟದ ನಡುವಲ್ಲಿ
ಜ್ವಲಿಸುವ ನೀಲ ಮಣಿಯಲ್ಲಿ
ಕಪ್ಪು ಕಡಲಿನ ಆರ್ಭಟ….

****************************

15 thoughts on “ದೊರೆಯ ಕಿರೀಟದ ನೀಲ ಮಣಿಯಲ್ಲಿ….

    1. ರತ್ನ ಖಚಿತ ಸಿಂಹಾಸನದಲ್ಲಿದ್ದ ಉದಾಸೀನ…ಕಪ್ಪು ಹುಡುಗಿ ಹೊರಟುಹೋದ ನಂತರ ಸೆಳೆತವಾಗಿ ಅವಳು ಎಬ್ಬಿಸಿದ ಕಡಲ ಅಲೆಗಳಲ್ಲಿ ತತ್ತರಿಸಿಹೋದ….ಈಗ ಅವನ ಕಿರೀಟದ ಮಧ್ಯೆ ಅವಳ ಕಣ್ಣ ಕಡಲ ಹಿಮ ಮಣಿ….ಸೊಗಸಾದ ಕವಿತೆ…ಇಷ್ಟ ಆಯಿತು ಮೇಡಮ್…

    1. ಅಹಂಕಾರದ ದಿವ್ಯ ನಿರ್ಲಕ್ಷ್ಯ, ಕಸಿದುಕೊಂಡಿತು ಭಾಗ್ಯವೊಂದನು-…

      ಕಲ್ಪನಾ ಸಾಮ್ರಾಜ್ಞಿಯ ಕವನ

Leave a Reply

Back To Top