ಕವಿತೆ
ಸಂಗಾತಿ ಬುದ್ದ
ನಳಿನ ಡಿ

ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,
ಒಪ್ಪಿರುವ ಎನಿಸಿದಾಗ,
ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ..

ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,
ಬುದ್ಧ ಬಂದಿದ್ದ ಬಾಲಕನಾಗಿ,
ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,
ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,
ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,
ತಂಪು ಹಳ್ಳದ ಏರಿಯ ಮೇಲೆ
ಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..
ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆ
ಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,
ಜನನಿಬಿಡ ಹಾದಿಗುಂಟ ಕೈ ಬೀಸುತಲೇ ಇರಲು, ಕಾಡುಗುಡ್ಡದ ನಡುವೆ, ಅಲೆಮಾರಿ ಹಕ್ಕಿಯಾಗಲು
ರೆಕ್ಕೆಯಾದವ ಬುದ್ಧ,
ಈಶಾನ್ಯ ಗಾಳಿಗೆ ಒಡ್ಡಿದ ದೀಪವೆಂದುಕೊಂಡಾಗ, ಎರಡು ಹಸ್ತಗಳ ನಡುವೆ ದೀವಿಗೆ ಹಿಡಿವವನು,
ನಾ ಹುಡುಕಿದಾಗ ಸಿಕ್ಕಿದ ಬುದ್ಧನ ಪ್ರಮಾಣದಂತೆ ಅನುರಣನ ಅವನ ಇರುವಿಕೆ…
**********************
Beautiful