ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ
ಚೆಕ್‌ಮೇಟ್
ಜೀವನವೇ ಒಂದು ಚದುರಂಗ
ಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀ
ಕಪ್ಪು ಬಿಳುಪಿನ ಚೌಕದ ಸಾಲು ಸಾಲು
ಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿ
ಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತ
ಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ
ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲ
ದ್ವಂಸಗೈದ ಬಿಳಿಯ ಸೈನ್ಯವನ್ನು
ಬರೀ ಪದಾತಿದಳವೊಂದರಿಂದಲೇ
ಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆ
ಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆ
ಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ
ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ
ಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು
ಬದುಕಲೆಂದೇ ಇದೆ ಕ್ಯಾಸ್‌ಲಿಂಗ್
ರಾಜನೊಬ್ಬ ಬದುಕಿದರೆ ಸಾಕು
ಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ?
ಒಬ್ಬ ರಾಜನನ್ನುಳಿಸಲು
ಸೈನ್ಯದ ಪ್ರತಿಯೊಬ್ಬನೂ
ಜೀವದ ಹಂಗು ತೊರೆದು ಹೋರಾಡಬೇಕು
ಪದಾತಿದಳದ ಸೈನಿಕನೊಬ್ಬ ಒಂದೊಂದೇ
ಹೆಜ್ಜೆಯಿಟ್ಟು ಕೊನೆಯ ಹಂತ ತಲುಪಿ
ತ್ರಿವಿಕ್ರಮನಾಗಿಬಿಟ್ಟರೆ ತಕ್ಷಣವೇ
ಆತನನ್ನು ಬದಲಿಸಿ
ರಾಣಿಯೊಬ್ಬಳನ್ನು ಪಟ್ಟಕ್ಕೇರಿಸಬೇಕು
ಇನ್ನೊಬ್ಬರ ಶ್ರಮದ ದುಡಿಮೆಯಲ್ಲಿ
ರಾಜ ಮತ್ತಿಷ್ಟು ಕೊಬ್ಬಬೇಕು
ಎಷ್ಟೆಂದು ಆಡುತ್ತೀರಿ?
ದಿನವಿಡೀ ಒಂದೇ ಆಟ
ಛೇ… ಈಗಲಾದರೂ ಮುಗಿಸಿಬಿಡಿ
ಕಪ್ಪು ಸೈನ್ಯವನ್ನು ಸೋಲಿಸುವ ಮೋಸದಾಟ
ಮುಸುಗುಡುವ ಬಿಳಿಯ ರಾಜನಿಗೆ ಎದುರಾಗಿ
ಕಪ್ಪು ರಾಣಿಯನ್ನಿಟ್ಟು ಬಿಟ್ಟರೆ
ಅಲ್ಲಾಡಲಾಗದೇ ಜೀವನವೇ ಚೆಕ್‌ಮೇಟ್
ಬಿಸಿ ಚಹಾ-
ಈ ಮುಸ್ಸಂಜೆಯಲ್ಲಿ ನಾನು
ನಿನ್ನ ನೆನಪಿನಲ್ಲಿ ಕನವರಿಸುತ್ತಿದ್ದರೆ
ನೀನು ಈ ಲೋಕಕ್ಕೆ ಸಲ್ಲದ
ಅತೀತ ಲೋಕದ ಸಹಚರರೊಂದಿಗೆ
ಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರ
ಮನದ ಕಿಟಕಿಯೊಳಗೆ ತೂರಿ ಬರುತ್ತಿದೆ
ನನ್ನ ಏಕಾಂತಕ್ಕೆ ಸಾಥ್ ಕೊಡುವ
ಆತ್ಮಸಾಂಗತ್ಯದ ಗೆಳೆಯನೆಂದರೆ
ಅದು ಹೊಗೆಯೇಳುವ
ಬಿಸಿಚಹಾದ ಬಟ್ಟಲು ಮಾತ್ರ
ಎನ್ನುವ ಸತ್ಯ ಗೊತ್ತಿರುವುದರಿಂದ
ನೀನು ನಿಶ್ಚಿಂತನಾಗಿದ್ದೀಯ
ಬಾಡಿದ ಮನಸ್ಸನ್ನು ಝಾಡಿಸಿಕೊಂಡು
ಬಲವಂತವಾಗಿ ವಾಸ್ತವಕ್ಕೆ ಎಳೆ ತರಲು
ಚಹಾ ಮಾಡಿಕೊಳ್ಳುವ ನೆಪ ಹೂಡುತ್ತೇನೆ
ಸಕ್ಕರೆ ಡಬ್ಬದೊಳಗೆ ಸಿಕ್ಕಿಕೊಂಡ ಇರುವೆ
ಹೊರಜಗತ್ತಿನ ಸಂಪರ್ಕ ಕಾಣದೇ
ಸುತ್ತಿದಲ್ಲೇ ಸುತ್ತುತ್ತ ಸುಖವಾಗಿದೆ
ನನ್ನೆದುರಿಗಿದ್ದ ಎರಡು ಕಪ್ ಚಹಾದಲ್ಲಿ
ನನ್ನ ಪಾಲಿನ ಚಹಾವನ್ನು ಕಪ್‌ನ
ತಳದಲ್ಲಿ ಒಂದಿಷ್ಟೂ ಅಂಟದಂತೆ
ಹನಿಹನಿಯಾಗಿ ಹೀರಿದ್ದೇನೆ
ನಿನ್ನ ಕುಸುರಿ ಕೆತ್ತಿದ ಪಿಂಗಾಣಿ ಕಪ್‌ನ
ಒಳಗೆ ಬಿಸಿಚಹಾ ಕೆನೆಗಟ್ಟುತ್ತಿದೆ
ಇರಲಿ ಬಿಡು,
ನಿನ್ನ ಬಟ್ಟಲಿನಲ್ಲಿ ಇಣುಕುವ
ಕೆಂಪು ದ್ರವದಷ್ಟು ಉನ್ಮಾದವನ್ನು
ಈ ಚಹಾ ನನಗೆ ಏರಿಸದೇ ಹೋದರೂ
ನನ್ನ ನೆನಪಿನ ನೋವಿಗೆ ಮುಲಾಮು ಹಚ್ಚಲು
ನಿನಗೆಂದು ಕಾದಿಟ್ಟ ಬಿಸಿಚಹಾ ಕೈ ಚಾಚುತ್ತದೆ
——
ಅಸಂಗತನ್ನು ಅರಸುತ್ತ..
ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆ
ಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧ
ಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲ
ಜುಲುಮೆಯಿಂದ ದೂರ ಸರಿಸಿ
ದೂರದ ಶಿವಾಲಯಕೆ ಹೊರm
ನನ್ನೊಳಗೆ ನಿಗಿನಿಗಿಸುವ ಕೆಂಡ
ಶಿವಾಲಯದ ಆಸುಪಾಸಲ್ಲೆಲ್ಲೂ
ನಿನ್ನ ಸುಳಿವಿಲ್ಲ
ಡಮರುಗದ ದನಿಯೂ ಮೊರೆಯುತ್ತಿಲ್ಲ
ಗರ್ಭಗುಡಿಯ ಒಳಗೆ ಅನ್ಯಮನಸ್ಕಳಾಗಿ
ಕುಂಕುಮವಿಟ್ಟೆ, ಹೂ ಮುಡಿಸಿ
ನಿಟ್ಟುಸಿರಿಟ್ಟು ಕೋಪಿಸಿದೆ ಒಳಗೊಳಗೇ
ಬಂದಿದ್ದು ನಿನಗಾಗಿ ಅಲ್ಲವೋ ಸ್ಮಶಾನವಾಸಿ,
ಎಲ್ಲಾತ? ಜಗವನ್ನೇ ಕುಣಿಸುವ ಮದ್ದಳೆಯವ?
ಪ್ರಶ್ನಿಸಿದೆ ಶಿವನನ್ನೇ ಕೊಂಕಿಸಿ ಕತ್ತು
ದಿಟ್ಟಿಸಿದರೆ ಗಂಧ ಪೂಸುವಾಗ ಶಿವನನ್ನೇ
ಅರೆರೆ…, ಮನ ಕದ್ದು ,ಬವಣೆಗೊಳಪಡಿಸಿ
ಲಿಂಗದೊಳಗೆ ಅಡಗಿ ಕುಳಿತಿದ್ದಾನಲ್ಲ
ದಿನವಿಡೀ ನಿನ್ನನ್ನೇ ಕಂಡಂತಾಗುವ ಭ್ರಮೆಗೆ
ರೋಸಿ ಕಣ್ಣುಜ್ಜಿಕೊಂಡ ಪಿರಿಗಣ್ಣು ತೆರೆದರೂ
ಅಲ್ಲಿ ಕಂಡಿದ್ದು ಲಿಂಗವಲ್ಲ
ಬರಿದೇ ನಿನ್ನ ರೂಪ
ಮಂತ್ರಘೋಷ, ಜಾಗಟೆಯ ದನಿ
ಕೇಳಿಸಿದರೂ ಕಿವಿಗಿಳಿಯಲಿಲ್ಲ
ಧೂಪದಾರತಿ, ಮಂಗಳಾರತಿ ಕಣ್ತುಂಬಲಿಲ್ಲ
ಲಿಂಗದೊಳಗೆ ಕಣ್ಣು ಮುಚ್ಚಾಲೆಯಾಡುವವನೇ
ಕಣ್ಣು ತಪ್ಪಿಸುವ ನಾಟಕವೇಕೇ?
ಮನದೊಳಗೇ ಅನುಸಂಧಾನ ನಡೆಸುತ್ತ
ಲಿಂಗದೆದುರು ಶಿಲೆಯಾದ ನನ್ನ ಕಂಡು
ಹಣ್ಣು ಹಾಲು ತಂದಿಲ್ಲವೇ?
ನೈವೇದ್ಯದ ಅರ್ಪಣೆಗೇನಿದೆ?
ಮೀಸೆ ಮರೆಯಲ್ಲೇ ನಗುತ್ತ ಕೇಳಿದವರಿಗೆ
ನನ್ನನ್ನೇ ಆತನಿಗೆ ಸಮರ್ಪಿಸುತ್ತೇನೆ
ಎಂದುಸುರಿಯೇ ಬಿಟ್ಟ ತರಳೆ ನಾನು
ಲೋಕ ಬೆಚ್ಚಿಬಿದ್ದು, ಗಡಗಡನೆ ನಡುಗಿತು,
ಬೂದಿ ಬಳಿದು, ಊರೂರು ತಿರುಗುವ ಶಿವನಿಗೆ
ತನ್ನನ್ನೇ ನೀಡುವ ಶಪಥಗೈಯ್ಯುವುದೇ?
ಹಾಹಾಕಾರ ಎಲ್ಲೆಲ್ಲೂ
ಲೋಕಪಾಲನಿಗೇ ಈ ಆಹ್ವಾನವೇ?
ಜಗನ್ಮಾತೆಗೆ ಸವತಿಯಾಗುವ ಕನಸೇ?
ಗಹಗಹಿಸಿದೆ ಮನದಲ್ಲೇ
ತುಟಿಯಂಚು ಮೀರದಂತೆ ನಗು ಅಡಗಿಸಿ
ಹಿಮ ಆವರಿಸಿದ ಬೆಟ್ಟಗಳೊಡೆಯನಾತ
ಎಲ್ಲರಿಗೂ ಭಕ್ತವತ್ಸಲ
ಬಯಸಿದ ಹೆಣ್ಣಿಗೆ ಮಾತ್ರ ಅಸಂಗತ
ನನಗಲ್ಲ, ಶಿವೆಗೂ ಸಿಗದ ವಿರಾಗಿ
ಕುಹಕದ ಎಲ್ಲ ಮಾತುಗಳಿಗೆ ಬೆನ್ನು ಹಾಕಿ
ಇಹ ಪರವೆರಡರಲ್ಲೂ ಒಂದೇ ಗುರಿ ಹೊತ್ತು
ಹೊರಟಿದ್ದೇನೀಗ ಮದ್ದಳೆಯ ದನಿಯರಸಿ
(ಆಸೆಯೆಂಬ ಶೂಲದ ಮೇಲೆ ಸಂಕಲನದಿಂದ)
***********************