ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ

Women in Art

ಒಂದು ಹೆಣ್ಣಿನ ಸ್ವಗತ.

ನನಗಾರ ಭಯ..!
ನಾನು ಜನ್ಮ ಕೊಡುವ ಹೆಣ್ಣು ಮಗುವನ್ನು
ಈ ಲೋಕದಿ ತರಲು ನನಗಾರ ಭಯ..
ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..
ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವ
ಧೈರ್ಯ ನನಗಿಲ್ಲದಿರುವದು..
ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!
ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..
ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..
ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವ
ನನಗೂ ಹೆಣ್ಣು ಮಗು ಬೇಕಾಗಿಲ್ಲ..

ಏಕೆ.. ನಾನನುಭವಿಸಿದ ತವಕ ತಲ್ಲಣಗಳು
ಅವಳು ಅನುಭವಿಸುವದು ಬೇಡವೆಂದೇ…
ಕೆಟ್ಟ ಕಾಮುಕರಿಗೆ ಬಲಿಯಾದೀತೆಂದು
ದಿಗಿಲುಗೊಂಡೇ…
ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದು
ಭಯಗೊಂಡೆ…
ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರ
ದುರುಳುತನಕ್ಕಂಜಿಯೇ…

ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..
ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.
ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..!
ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ..

ಹೆದರದಿರು ಮನವೇ..
ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದು
ತಿಳಿದಿರು..
ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟ
ದಾರಿ ಇದೆ..
ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ..
ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ..
ಹೆಣ್ಣು ಹೆಣ್ಣೆಂದು ಜರೆಯಬೇಡ..
ಹೆಣ್ಣು ಹೇರಲು ಅಂಜಬೇಡ..
ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ.


ಭರವಸೆಯ ಕಿರಣ.

ದೀಪಗಳೆ..ದೀಪಗಳೆ
ಮಿನುಗುವ ಮಿಣುಕು ನಕ್ಷತ್ರಗಳೆ
ಮನದ ಕತ್ತಲೆ ಓಡಿಸಿ ಬೆಳಕು
ಪಸರಿಸುವ ಚಂದಿರಗಳೆ..

ಬಾನಿಗೂ ಭೂವಿಗೂ ಬೆಸೆದ
ಮಿಂಚಿನ ದಿವ್ಯ ಪ್ರಭೆಗಳೆ
ನಾಲ್ಕು ದಿಕ್ಕಿಗ ಹರಡಿದ
ಅರಿವಿನ ವಿಶ್ವ ಜ್ಯೋತಿಗಳೆ..

ಚಿಂತೆಯ ಕಾರ್ಮೊಡ ಕರಗಿಸುವ
ಹರುಷದ ಹೊನಲುಗಳೆ
ನಿರಾಶೆಯ ಮುಂದೆ ಆಸೆ ತೋರುವ
ವಿಶ್ವಾಸದ ದನಿಗಳೆ..

ಕನಸಿನ ಗೊನೆಗೆ ನೀರೆರೆದು
ಪೋಷಿಸುವ ಮಿಂಚಿನ ಸಿಂಚನಗಳೆ
ಬದುಕ ಭಾರವನ್ನು ಹಗುರಗೊಳಿಸುವ
ಉಲ್ಲಾಸದ ಕೋಲ್ಮಿಂಚುಗಳೆ..

ಕತ್ತಲು ಕಳೆದು ಬೆಳಗು ಮೂಡಿಸುವ
ಸುಖದ ಕಲ್ಪನೆಗಳೆ
ಮುಸುಕು ಸರಿಸಿ ದಾರಿ ತೋರಿಸಿ
ಗುರಿಮುಟ್ಟಿಸುವ ಹೊಂಗಿರಣಗಳೆ..

ನಿಸ್ತರಂಗದ ಬಾಳಲಿ ಚಲನೆ
ಮೂಡಿಸುವ ಆಶಾ ದೀವಿಗೆಗಳೆ
ಬಾಳ್ ದಾರಿಯಲೆಲ್ಲಾ ಸದಾ
ಜೊತೆಗಿರುವ ಭರವಸೆಯ ಕಿರಣಗಳೆ..


ಅಕ್ಕ.


ಅಕ್ಕ…
ಚನ್ನನ ಮೇಲೆ ಅದೆಂತಹ ಮೋಹ ನಿನಗೆ
ಆ ಚೆನ್ನ ಸಿಕ್ಕನೇನೆ ನಿನಗೆ.
ಕೇಶವನ್ನೆ ಅಂಗಕ್ಕೆ ಮರೆಮಾಡಿಕೊಂಡು
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನಿಗಾಗಿ
ಕಾಡು ಮೇಡು ಅಲೆದು ದಣಿದ ನಿನಗೆ
ಆ ಚೆನ್ನ ಸಿಕ್ಕನೇನೆ ಕೊನೆಗೆ

ದೇಹದ ಮೋಹವನ್ನು ತೋರೆದು
ಭಯವೆಂಬ ಭವವ ನಿರ್ಬಯದಿ ಹರಿದು
ಆಡಿಕೊಳ್ಳುವವರ ಮುಂದೆ ಧೈರ್ಯದಿ ಮೆರೆದೆ ನೀ
ನಿನೋಲಿದ ಚನ್ನ ಸಿಕ್ಕನೇನೆ ನಿನಗೆ.

ಬೆಟ್ಟು ಮಾಡುವರನ್ನು ದಿಟ್ಟ ನಿಲುವುಗಳಿಂದ
ಬಿಚ್ಚು ಮನಸ್ಸಿನಿಂದ ಬೆರಗುಗೋಳಿಸಿ
ಇಚ್ಚೆ ಪಟ್ಟವನನ್ನು ಅರಸುತ್ತಾ
ಅರಸೊತ್ತಿಗೆ ಬಿಟ್ಟು ಬಂದ ನಿನಗೆ
ಆ ಚನ್ನ ಸಿಕ್ಕನೇನೆ ಅಕ್ಕ..

ಶ್ರೀಶೈಲದ ಕಾಡುಮೇಡು ಅಲೆದು
ಕದಳಿಯ ಭವ ಘೋರಾರಣ್ಯ ಹೊಕ್ಕು
ಭವಗೆಟ್ಟು ಹೋದನಿನಗೆ ಬಿಗಿದಪ್ಪಲು ಭವಹರನಾದ
ಆ ಚನ್ನ ಸಿಕ್ಕನೇನೆ ಅಕ್ಕ..

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಸೀಮೆಇಲ್ಲದ ನಿಸ್ಸೀಮನಿಗಾಗಿ
ಉಡತಡಿಯಿಂದ ಕಲ್ಯಾಣದ ವರೆಗೆ
ಕದಳಿಯ ಸೀಮೆಯವರೆಗೆ ತ್ರೀಕೂಟವೆಂಬ
ಮಹಾಗಿರಿಯ ಬಟ್ಟಬಯಲೋಳಗೆ

ಹುಚ್ಚಾಟದ ಮೇರೆಮೀರಿ ಹುಡುಕಾಡಿ
ಶರಣಸತಿ ಲಿಂಗಪತಿ ಎಂಬ ಭಾವದಲ್ಲಿ
ಕದಳಿಯಲ್ಲಿ ನಿನ್ನ ಚನ್ನನಲ್ಲೆ ಒಂದಾದೆಯಲ್ಲ..

ಕೋನೆಗೂ ನಿನ್ನ ಚನ್ನನನ್ನು ಹುಡುಕೆಬಿಟ್ಟಯಲ್ಲ…

*******************

Leave a Reply

Back To Top