ಚೇತನಾ ಕುಂಬ್ಳೆ ಕಾವ್ಯಗುಚ್ಚ

ಚೇತನಾ ಕುಂಬ್ಳೆ ಕಾವ್ಯಗುಚ್ಚ

Wooden door with eyes. At king palace museum on Durbar square in Kathmandu, Nepal royalty free stock photography

ನಿರೀಕ್ಷೆ

Buddhist religious eyes carved on a door in the Royal Palace (Hanuman Dhoka) Kathmandu Durbar Square, Nepal. Buddhist religious eyes carved on a door in the royalty free stock photos

ನಿನ್ನ ಕೈಹಿಡಿದು ನಡೆದ ದಾರಿಯಲ್ಲಿ
ಹೆಜ್ಜೆಗುರುತುಗಳು ಇನ್ನೂ ಮಾಸಿಲ್ಲ
ನಿನ್ನ ಹೆಸರ ನೆಪದಲ್ಲಿ ಅಂಗೈಯಲ್ಲಿ ಹಚ್ಚಿದ
ಮದರಂಗಿಯ ಬಣ್ಣ ಇನ್ನೂ ಅಳಿಸಿಲ್ಲ

ಸಮಯವನ್ನು ದೂಷಿಸುತ್ತಾ
ದಿನ ರಾತ್ರಿಯೆನ್ನದೆ
ಕಾದಿದ್ದೆ ಕಾತರಿಸಿದ್ದೆ
ಬಯಸಿದ್ದೆ ನಿನ್ನ ಸೇರಲು

ಕಣ್ಗಳಿಂದುದುರಿದ ಹನಿಗಳು
ಮಣ್ಣಿನಲ್ಲಿ ನರಳುತ್ತಿದೆ
ತನು ಮನ ತಣ್ಣಗಾಗಿದೆ
ನಿನ್ನ ಬಿಸಿಯುಸಿರ ಬಿಸುಪಿಲ್ಲದೆ

ಅದೆಷ್ಟು ಚುಚ್ಚು ಮಾತುಗಳನ್ನಾಲಿಸಿದ್ದೆ
ಎಷ್ಟೊಂದು ಕೆಂಗಣ್ಣುಗಳಿಗೆ ಗುರಿಯಾಗಿದ್ದೆ
ಎದೆ ಸೀಳುವಂತ ನೋವಿದ್ದರೂ
ಬಲವಂತದಿ ತುಟಿಗಳಲ್ಲಿ
ನಗುವ ತರಿಸಿದ್ದು ನಿನಗಾಗಿಯೇ

ಜೊತೆಗಿದ್ದ ಒಂದಷ್ಟು ಕ್ಷಣಗಳು
ನೋವನ್ನು ಮರೆಸುತ್ತವೆ
ನಿನ್ನ ನೆನೆಯುವಾಗಲೆಲ್ಲ
ನೀನಿತ್ತ ನೆನಪುಗಳು ಸಂತೈಸುತ್ತವೆ

ಈಗಲೂ ಕಣ್ಣ ನೋಟಗಳು
ಬಾಗಿಲಿನತ್ತ ಸರಿಯುವುದು ನಿಲ್ಲಲಿಲ್ಲ
ನಿನ್ನಲ್ಲಿಟ್ಟ ನಂಬಿಕೆಗಳು
ಇನ್ನೂ ಸುಳ್ಳಾಗಲಿಲ್ಲ

ಕಾರಣ ನೀನು ಎದೆಯಲ್ಲಿ
ಹಚ್ಚಿದ ಪ್ರೀತಿಯ ದೀಪ
ನಿತ್ಯವೂ ಉರಿಯುತಿದೆ
ಅದರ ಬೆಳಕಿನಲ್ಲೆ
ನಾನು ಉಸಿರಾಡುತ್ತಿರುವೆ


ಕವಿತೆ ಬರೆಯುತ್ತೇನೆ

The girl shows a sign of silence. Face on black background. Close-up stock image

ನೋವು ಎದೆಯನ್ನಿರಿಯುವಾಗ
ಸಹಿಸಲಾಗದೆ ಕಣ್ಣೀರು ಹರಿಸುತ್ತೇನೆ
ಪ್ರೀತಿಸುವ ಕೈಗಳು ಒರೆಸಲಿಯೆಂದಲ್ಲ
ಮನಸ್ಸು ಒಂದಿಷ್ಟು ಹಗುರಾಗಲಿಯೆಂದು

ಇರುಳ ನಿಶ್ಯಬ್ದತೆಯಲ್ಲಿ
ಕನಸುಗಳನ್ನು ಹೆಣೆಯುತ್ತೇನೆ
ಎಲ್ಲವೂ ನನಸಾಗಲಿಯೆಂದಲ್ಲ
ವಾಸ್ತವವನ್ನು ಕ್ಷಣಹೊತ್ತು ಮರೆಯಲೆಂದು

ಮುಸ್ಸಂಜೆ ಮರಳಲ್ಲಿ
ಕುಳಿತುಕೊಳ್ಳುತ್ತೇನೆ
ಅಲೆಗಳ ನರ್ತನವನ್ನು ನೋಡಲು ಮಾತ್ರವಲ್ಲ
ಪ್ರಕೃತಿಯಲ್ಲಿ ಮಿಂಚಿಮರೆಯುವ
ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲೆಂದು

ಮರೆಯಲಾಗದ ಕ್ಷಣಗಳನ್ನು
ನೆನಪಿನ ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೇನೆ
ಧೂಳು ಹಿಡಿದು ಮಾಸಲೆಂದಲ್ಲ
ನೆನಪಾದಾಗ ನೆನೆಯಲೆಂದು

ಆಗಾಗ ಮೌನಕ್ಕೆ ಶರಣಾಗುತ್ತೇನೆ
ಮಾತು ಬೇಸರವಾಗಿಯಲ್ಲ
ಮೌನದೊಳಗವಿತಿರುವ
ಮಾತುಗಳನಾಲಿಸಲೆಂದು

ನಾನು ಕವಿತೆ ಬರೆಯುತ್ತೇನೆ
ಓದುಗರು ಓದಲೆಂದಲ್ಲ
ಭಾವನೆಗಳಿಗೆ ಉಸಿರುಗಟ್ಟುವ ಮೊದಲು
ಅಕ್ಷರ ರೂಪಕ್ಕಿಳಿಸಿ ಜೀವ ತುಂಬಲೆಂದು


ಕರೆಯದೆ ಬರುವ ಅತಿಥಿ

Unwanted Flora Flowers Blooming. On Side Street royalty free stock photos

ಕರೆಯದೆ ಬರುವ ಅತಿಥಿ ನೀನು
ಕರೆದರೂ ಕಿವಿ ಕೇಳಿಸದವನು
ಯಾರೂ ಇಷ್ಟ ಪಡದ ಅತಿಥಿ ನೀನು

ಎಲ್ಲಿ, ಯಾವಾಗ, ಹೇಗೆ, ಯಾಕೆ
ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ
ನೀನು ಬರುವೆಯೆಂದು ಗೊತ್ತಿಲ್ಲ ನನಗೆ
ಮನ್ಸೂಚನೆ ನೀಡದೆ ಬರುವೆ ನೀನು
ಎಲ್ಲಿಂದ ಬರುವೆಯೋ
ಎಲ್ಲಿಗೆ ಕರೆದೊಯ್ಯುವೆಯೋ
ಒಂದೂ ತಿಳಿದಿಲ್ಲ

ಒಡೆದು ನುಚ್ಚುನೂರು ಮಾಡುವೆ
ಸಣ್ಣಪುಟ್ಟ ಸಂತೋಷಗಳನ್ನು
ಮನದ ತುಂಬ ವೇದನೆ ನೀಡಿ
ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ

ಹಿರಿಯರೆಂದೋ, ಕಿರಿಯರೆಂದೋ
ಶ್ರೀಮಂತರೆಂದೋ, ಬಡವರೆಂದೋ
ನೋಡದೆ ಓಡಿ ಬರುವೆ
ಎಲ್ಲರ ಬಳಿಗೆ ಕಾಲಕಾಲಕೆ
ಕಾರಣ,
ನಿನ್ನ ಕಣ್ಣಿಗೆ ಸಮಾನರಲ್ಲವೇ ಎಲ್ಲರೂ

ಕಣ್ಣೀರು ಕಂಡರೂ,
ಕರಗದ ಹೃದಯ ನಿನ್ನದು
ನೋವನ್ನು ಅರಿತರೂ,
ಮಿಡಿಯದ ಮನಸ್ಸು ನಿನ್ನದು
ಓ ಅತಿಥಿಯೇ….
ಯಾಕಿಷ್ಟು ಕ್ರೂರಿಯಾದೆ ನೀನು?

***********************************************************

Leave a Reply

Back To Top