ನೀನೆಂದರೆ ಆಕಾಶದಾಚೆಯ ಖುಷಿ

ನೀನೆಂದರೆ ಆಕಾಶದಾಚೆಯ ಖುಷಿ

ಪ್ರೇಮಾ ಟ.ಎಂ.ಆರ್.

ನೀ ಮಡಿಲಲ್ಲಿ ಮಲಗಿದ್ದೆ
ನಿನ್ನ ಮೆತ್ತಗೆ ಸವರಿದೆ ನಾನು
ಆಕಾಶ ಮುಟ್ಟಿದ ಖುಶಿಯೇ
ಉಹುಂ ಅದು ಕಡಿಮೆಯೇ ಹೋಲಿಕೆಗೆ
ಮುಗಿಲ ಚುಕ್ಕಿನೀನು ಬೊಗಸೆಯೊಳಗಿದ್ದೆ
ನಿನ್ನ ಕಣ್ಣೊಳಗೆ ಬರೀ ನಾನಿದ್ದೆ
ನಿನ್ನ ಕೆಂಪು ಬೆರಳುಗಳ ಪುಟ್ಟ ಬಿಗಿ
ಮುಷ್ಠಿಯೊಳಗೆ ನಾನು ಹುದುಗಿ ಕೂರಬೇಕೆಂದುಕೊಂಡೆ

ನಿನಗೆ ಎದೆಯೂಡುತ್ತಿದ್ದೆ ನಾನು
ಜಗದಾವ ನೋವುಗಳೂ ನಿನ್ನ
ಮುಟ್ಟಕೂಡದೆಂಬ ಕಕ್ಕುಲಾತಿಯಲ್ಲಿ
ನಿನಗೆ ಹಾಲನ್ನದ ತುತ್ತು ಇಕ್ಕುತ್ತಿದ್ದೆ
ಚಂದ್ರ ಚಂದ ನಗೆ ನಗುತ್ತಿದ್ದ
ನಿನಗೆ ಜುಟ್ಟು ಕಟ್ಟುತ್ತಿದ್ದೆ ನಾನು
ಇನ್ನೊಂದು ಹಡೆವ ಬಯಕೆ
ನನ್ನ ಕಾಡದಿರಲೆಂದು
ನಿನಗೆಂದೇ ಇರುವ ವಾತ್ಸಲ್ಯ
ಹಂಚಿ ಹೋಗದಿರಲೆಂದು

ಅಂದು ನೀ ಕಿತ್ತಾಡಿದ ಪಾತ್ರೆ ಸ್ಟೆಂಡ್ ಚಪ್ಪಲಿಗೂಡು ಅಪ್ಪನ ಬರೆವ ಮೇಜು
ಲಾಂಡ್ರಿ ಬಕೀಟು ಒಡೆದ ಕಿಟಕಿಯ ಗಾಜು
ಎತ್ತೊಗೆಯುತ್ತಿದ್ದ ಪುಟ್ಟ ಸೈಕಲ್ಲು
ಎದೆಯಲ್ಲೆಲ್ಲೋ ಹೇಗಿದ್ದವೋ ಹಾಗೇ ಇದೆ ಒಪ್ಪವಾಗದೇ..
ನಿನ್ನ ಕಣ್ಣೀರು ಸಿಂಬಳ ಒರೆಸಿದ ನನ್ನ ಹಳೆಸೀರೆಗಳ ಇಂದಿಗೂ
ಮಡಿಕೆಮಾಡಿ ದಿಂಬಿನಮೇಲೆ ಹಾಸಿಕೊಳ್ಳುತ್ತೇನೆ ಬಿಸಾಡಲಾಗದೇ…

ಅಜ್ಜನ ಅಷ್ಟುದ್ದದ ಚಪ್ಪಲಯಲ್ಲಿ ನಿನ್ನ
ಇಟ್ಟೆಇಟ್ಟಿರುವ ಪಾದ ತೂರಿಕೊಂಡು
ನಡೆಯುವದೆಂದರೆ ನಿನಗೆಷ್ಟು ಮೋಹವೋ

ನಾನು ನೀನು ಅಪ್ಪ
ಪುಟ್ಟ ಬಾಡಿಗೆ ಸೂರಿನೊಳಗೆ
ಗೋಡೆ ನೆಲ ಕಿಟಕಿಗಳನ್ನೂ
ಮುಟ್ಟಿ ತಡವಿ ಹಚ್ಚಿಕೊಳ್ಳುತ್ತ
ಹರಟೆಕೊಚ್ಚುತ್ತ…
ನೀನು ತಿಂದುಳಿಸಿದ ಅನ್ನ ದೋಸೆ ಅಮೃತವೆಂಬಂತೆ ಬಾಚಿಕೊಳ್ಳುತ್ತ
ನಿನ್ನ ಬಾಯಿಂದ ಜಾರಿಬಿದ್ದ
ಚೋಕಲೇಟ್ ಚೂರುಗಳನ್ನು ಗಬಕ್ಕನೆತ್ತಿ
ಬಾಯಿಗೆಸೆದುಕೊಳ್ಳುತ್ತ
ದೂರದರ್ಶನದ ಜಂಗಲ್ ಬುಕ್ ನೋಡಿ
ಕುಣಿದು ಕುಪ್ಪಳಿಸುತ್ತ ವಾಶಿಂಗ್ ಪೌಡರ್
ನಿರ್ಮಾ ಹಾಡು ತೊದಲುತ್ತ
ಹೀಗಿದ್ದೆವು ನಾವು
ಶಹರದ ಕೃತ್ರಿಮತೆಯೇ ಸೋಂಕದೇ

ಇಂದಿಲ್ಲಿ ಬಂಗಲೆಯಿದೆ…
ಬದುಕ ಬೆಳಕು ನೀನಲ್ಲಿ
ಇಲ್ಲಿ ದೇಹವಿದೆ ಜೀವ ಭಾವ ನಿನ್ನಲ್ಲಿ
ಇಂದು ನೀನೇ ಕೊಡಿಸಿದ
ನನ್ನ ಮೊಬೈಲ್ ಗೆ ನಿನ್ನ ವಿಡಿಯೋ ಕಾಲ್
ನಗುತ್ತಿರುವೆ..ನಗಿಸುತ್ತಿರುವೆ
ಕಣ್ಣೆದುರು ನಡೆದಾಡುತ್ತಿರುವೆ…
ನಿನ್ನ ಮುಟ್ಟಲೆಂದು ಕೈ ಚಾಚುತ್ತೇನೆ
ಕಣ್ಣು ಹನಿಯುತ್ತದೆ
ನಿನಗೆ ಕಾಣಗೊಡದೇ

ಮತ್ತೆ ಕೇಳುತ್ತೇನೆ ನನ್ನ ನಿನ್ನ ಅದೇ ಗಾಂವ್ಟಿಯಲ್ಲಿ ಯಾವಾಗ ಬತ್ತೆ ಮಗಾ?
ನಿನ್ನದು ಅದೇ ಉತ್ತರ ಬರುತ್ತೇನೆ
ಕರೋನಾ ಒಂಚೂರು ಹದಕ್ಕೆ ಬರಲಿ
ನಾ ಅಂಟಿಸಿಕೊಂಡು ತಂದು
ನಿನಗೆ ಬಂದು..ಅದೆಲ್ಲ ಜಂಜಾಟ ಬೇಡಮ್ಮಾ
ನಿನಗೂ ವಯಸ್ಸಾಯ್ತು…

ಕರೋನಾದ ಕುಲಕೋಟಿಗೆ ಶತಕೋಟಿ
ಶಾಪ ಹಾಕುತ್ತಾ ದಿನ ದೂಡುತ್ತಿದ್ದೇನೆ…
ನೀ ಬರುವ ದಾರಿಗೆ ದಿಟ್ಟಿಯ ನೆಟ್ಟು

******************************

5 thoughts on “ನೀನೆಂದರೆ ಆಕಾಶದಾಚೆಯ ಖುಷಿ

  1. ತಾಯಿಯ ಪ್ರೀತಿ, ಮಮತೆಯ ಕರುಳಬಳ್ಳಿಯ ಕಾಡುವ ಸವಿನೆನಪಿನ ಹಸಿ ನೆನಪುಗಳ ಪಿಸು ಧ್ವನಿ ನೀನೆಂದರೆ ಆಕಾಶದಾಚೆ ಯ ಖುಷಿ ,
    ಜೀವನದ ನೈಜತೆಯನ್ನು ಯಥಾವತ್ತಾಗಿ ಕವನದ ರೂಪದಲ್ಲಿ ಹೊರಹಾಕಿದ ತಮ್ಮ ಅದ್ಭುತ ಪ್ರತಿಭೆಗೆ ಧನ್ಯವಾದಗಳು.
    _ರಾಮ ವಿ.

  2. ತಾಯಿಯ ಭಾವನೆಗಳು ಅನನ್ಯವಾಗಿ ಮೂಡಿ ಬಂದಿದೆ…

Leave a Reply

Back To Top