ಮಾಲತಿ ಶಶಿಧರ್ ಕಾವ್ಯಗುಚ್ಛ
ಥೇಟ್
ನೀನು ಥೇಟ್
ನನ್ನ ಕವಿತೆಯಂತೆ
ಗೆಳೆಯ.
ಒಮ್ಮೊಮ್ಮೆ
ನಾನೆ ಬರೆದಿದ್ದರೂ
ನನಗೇ ಅರ್ಥವಾಗದ
ಹಾಗೆ..
ನೀನು ಥೇಟ್
ನನ್ನ ನಗುವಿನಂತೆ
ಗೆಳೆಯ
ಕಿವಿಗಳೊರೆಗೂ
ತುಟಿಯಗಲಿಸಿದರು
ನಕ್ಕಂತೆ ಕಾಣದ
ಹಾಗೆ..
ನೀನು ಥೇಟ್
ನನ್ನ ಮುಂಗುರುಳಂತೆ
ಗೆಳೆಯ
ಕಂಗಳಿಗೆ ಬಿದ್ದಾಗಲೆಲ್ಲಾ
ಕಣ್ಣೀರು ಬರಿಸುವ
ಹಾಗೆ..
ನೀನು ಥೇಟ್
ನನ್ನ ಮೂಗು ನತ್ತಿನಂತೆ
ಗೆಳೆಯ
ಮುಂದೆಯೇ
ಎಷ್ಟೇ ಅತ್ತರು
ಕೈಚಾಚಿ ಕಣ್ಣೀರು
ಮಾತ್ರ ಒರೆಸದ
ಹಾಗೆ..
ಅಳಲು
ಮುಗಿಲ ಹಿಂದೆ ಅವಿತು ಕುಳಿತಿರುವ ಬೆಳಕೇ
ಸೀಳಿಕೊಂಡು ಬಂದು ನನ್ನನ್ನಾವರಿಸಿಬಿಡು..
ಮೋಡದಲ್ಲಿ ಮರೆಯಾಗಿರುವ ಹನಿಯೇ
ಹೊಡೆದು ಜೇನ ಮಳೆ ಸುರಿಸಿಬಿಡು..
ಆಗಸವನೇ ಬಿಗಿದಪ್ಪಿಕೊಂಡಿರುವ ಚುಕ್ಕಿಯೇ
ಕೈಬಿಟ್ಟು ಅಕ್ಷತೆಯಾಗಿ ಮೇಲೆ ಉದುರಿಬಿಡು…
ಅಡವಿಯಲಿ ಅಡಗಿರುವ ಕಾಡ್ಗಿಚ್ಛೇ
ಬಂದು ಚಿಂತೆಗಳ ಸುಟ್ಟುಬಿಡು…
ನೀರಿನಲ್ಲಿ ಲೀನವಾಗಿರುವ ಸುನಾಮಿಯೇ
ಬಂದು ನನ್ನಳಲ ನುಂಗಿಬಿಡು..
ಭುವಿಯ ಗರ್ಭದಲ್ಲಿರುವ ಜ್ವಾಲಾಮುಖಿಯೇ
ಉಕ್ಕಿ ನೋವನ್ನೆಲ್ಲಾ ಕರಗಿಸಿಬಿಡು
ಗಾಳಿಯಲಿ ನುಸುಳಿರುವ ತುಫಾನೇ
ರಭಸದಲೇ ಕಣ್ಣೀರ ತೂರಿಬಿಡು….
***************
ನೋಡು
ನಾ ಬರೆವ ಕವಿತೆಗಳ
ಪಂಕ್ತಿಯ ಹೆಣಿಕೆಯ
ನೋಡದೆ ಪದಗಳಲ್ಲಿ
ಪರವಶವಾಗಿರುವ
ತುಡಿತ ನೋಡು…
ನಾ ಬಿಡಿಸುವ ಚಿತ್ರದ
ಬಣ್ಣಗಳ ನೋಡದೆ
ತಿರುವಿನಲ್ಲಿ ಮಗ್ನವಾಗಿರುವ
ಸ್ಪಂದನವ ನೋಡು…
ನಾ ಹಾಡುವ ಹಾಡಿನ
ಹಂದರವ ನೋಡದೆ
ಭಾವಾರ್ಥದಲಿ ಬೆರೆತಿರುವ
ಬಂಧವ ನೋಡು..
ನಾ ಮಾಡುವ ನೃತ್ಯದ
ನಾಜೂಕತೆ ನೋಡದೆ
ನಾಟ್ಯದಲ್ಲಿ ಮೂಡುವ
ಅಭಿವ್ಯಕ್ತಿ ನೋಡು…
ನಾನಾಡುವ ಆಟಗಳ
ವೀಕ್ಷಕನಾಗಿ ಕೂತು ನೋಡದೆ
ನನ್ನೊಳಗಿನ ಚೈತನ್ಯವಾಗಿ
ಜೊತೆಗಿದ್ದು ನೋಡು…
*********************************
Super
ಇದು ಹೊಸ ಓದು..
ಚನ್ನಾಗಿದೆ ಮೇಡಂ
ಚಿತ್ರಕ್ಕೆ ತಕ್ಕಂತೆ ತುಂಬಾ ಸೊಗಸಾಗಿ ವರ್ಣನೆ ಮಾಡಿ ಬರೆದಿದ್ದೀರಿ ಮೇಡಂ ನಿಮಗೆ ನನ್ನ ವಿಶೇಷವಾದ ಅಭಿನಂದನೆಗಳು…
✍️