ಡಾ.ಅಜಿತ್ ಹರೀಶಿ ಕಾವ್ಯಗುಚ್ಛ
ನಿರೀಕ್ಷೆ
ಗೀಜಗನ ಗೂಡಿನಂತಿದ್ದ ಮನ
ಮನೆಯೇ ಮುರಿದ ದಿನ
ಬುಗಿಲೆದ್ದ ಹಗೆಗೆ ಸತ್ತು
ಒಡಹುಟ್ಟಿದವರ ನೆನೆದು ಅತ್ತು
ತಿಳಿಯಾದ ಮನವು ಋಜು
ಒಡೆದದ್ದು ನಾಜೂಕು ಗಾಜು
ಚೂರುಗಳ ಜೋಡಿಸಲೇ
ಹೃದಯಗಳು ಬೆಸೆಯಲೇ
ಬೇಕು ಸಂಬಂಧ ನಾಳೆಗೊಂದು.
ನಕ್ಕು ಹಗುರಾಗುತ್ತಿದ್ದ ಬಾಳು
ಒಣ ಜಂಭದ ರೀತಿಗೆ ಹಾಳು
ಮಾತು ಮಸಣವಾಗಿದೆ
ತುಮುಲ ಸರಿಪಡಿಸಲಾಗದೆ
ಭಾವನೆಗಳು ಹೊಂದದೆ
ಮುನಿಸು ಸರಿಸಿ
ಸೋತರೇನಂತೆ ನಗಿಸಿ
ಮರಳಿ ಬಂದರೆ ಮನ್ನಿಸಿ
ಬಾರದಿದ್ದರೆ ಕ್ಷಮಿಸಿ
ಕಾಯ್ದರೆ ನಗು ನಾಳೆಗೊಂದು.
ಮೀನಿನ ಹೆಜ್ಜೆ
ಕಡಲ ದಾರಿಗುಂಟ ಸಾಗಿದೆ
ನೆಲ ನುಂಗುವವರೆಗೂ ನಡೆದೆ
ಕಾಲ, ನಿನ್ನ ಹೆಜ್ಜೆ ಗುರುತೊಂದೆ
ಅಳಿಸಿ ಸಾಗಿತ್ತು, ಕಾಣಗೊಡದೆ.
ಕಾಮ ಮೋಹಾದಿಗಳ ಕಡಿಯಲು
ಬಹುದೂರದ ದಾರಿಯು ಗೋಜಲು
ಪ್ರೀತಿತ್ಯಾಗಕ್ಕೂ ಮುಳ್ಳಿನ ಹಾಸು
ಸಿಗದ ಹಾಗೆ ಕರಗಿದೆ ಮನಸು.
ಹತ್ತಾರು ವರ್ಷಗಳ ಸವೆದು
ಒಂದೇ ಸೂರಿನಡಿ ಬಾಳಿದ್ದು
ಅರೆಕ್ಷಣದಲಿ ದೂರಾದದ್ದು
ಆಳವಿಲ್ಲದ ನಂಬುಗೆಯೊಂದು.
ಅರಿತೆನೆಂದು ಅವನ ಬೆರೆತೆ
ಅರಿಯಗೊಡದವನ ನಡತೆ
ಇಷ್ಟು-ಎಷ್ಟು ಅರಿತರೇನಂತೆ
ಮರೆಯಗೊಡದವನ ಚಿಂತೆ.
ದಯವಿಟ್ಟು ಗಮನಿಸಿ…
ಸಂಗಾತಿಯಲ್ಲದೇ ಇನ್ಯಾರೋ
ಸುರತವೆಂದೂ ಸುರಕ್ಷಿತವಲ್ಲ
ಬೇಕೆಂದಾಗ ಬಂಜೆತನ
ಬೇಡವಾದಾಗ, ಆಸೆ
ಬಿಟ್ಟಾಗ ಕಟ್ಟುವ ಗರ್ಭ
ಬೆನ್ನಿಗಂಟುವ ರೋಗ
ದಯವಿಟ್ಟು ಗಮನಿಸಿ…
ಅಪಘಾತಗಳೆಲ್ಲ ಆಕಸ್ಮಿಕಗಳಲ್ಲ
ಅಲಕ್ಷ್ಯ, ಆತುರ, ಔತ್ಸುಕ್ಯ
ಕೂಡ ಕಾರಣವಿರಬಹುದಲ್ಲ
ಎದುರಾಗುವವನ ಅಚಾತುರ್ಯ
ಕೂಡ ಕಲ್ಪಿಸಿಕೊಳ್ಳಬೇಕಲ್ಲ
ದಯವಿಟ್ಟು ಗಮನಿಸಿ…
ಯುಗ ಬದಲಾಗಿದೆ
ಸ್ವರ್ಗ ನರಕಗಳೆಲ್ಲವೂ
ಇಲ್ಲೇ ಸೃಷ್ಟಿಯಾಗಿದೆ
ಬದುಕಿನ ಕಂದಾಯ ಕಟ್ಟುವ
ಕೌಂಟರ್ ಇಲ್ಲಿಯೇ ಇದೆ
ದಯವಿಟ್ಟು ಗಮನಿಸಿ…
ದಿವ್ಯದೃಷ್ಟಿ ಸೂರಿಗೆ ಮಾರಿಗೆ
ಎಲ್ಲೆಲ್ಲೂ ಟವರ್ ಲೊಕೇಷನ್ಗೆ
ಸುಲಭದ ಬೇಟೆ ಅಪರಾಧಕ್ಕೆ
ಅಪರಾಧಿಯಾಗದ ಸೂತ್ರ
ಸೀದಾ ಸಾದಾ ಸುಸೂತ್ರ
ನೆಮ್ಮದಿಗೊಂದೇ ಮಂತ್ರ
ದಯವಿಟ್ಟು ಗಮನಿಸಿ…
ಕವಿತೆಗಳು ಚೆಂದಿವೆ ಡಾಕ್ಟರ್… ದಯವಿಟ್ಟು ಗಮನಿಸಿ ಹೆಚ್ಚು ಹಿಡಿಸಿತು.
ಡಾ ಅಜಿತ್ ಹರೀಶಿಯವರೆ ,ತುಂಬಾ ಚೆನ್ನಾಗಿದೆ.ಗೀಜಗನ ಗೂಡು.
ಒಳ್ಳೆಯ ಸಂದೇಶ ನೀಡುವ ಕವಿತೆಗಳು.
Super ಕವಿತೆಗಳು ಡಾಕ್ಟ್ರೇ..
ಇಷ್ಟ ಆದವು ಕವಿತೆಗಳು
ಉತ್ತಮ ಕವಿತೆಗಳು
ಕವಿತೆಗಳನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು
ಚಂದದ ಕವಿತೆಗಳು
ಎಂದಿನಂತೆ ಸುಂದರ ಕವನಗಳು. ಅಭಿನಂದನೆಗಳು
ಕವಿತೆಗಳು ಇಷ್ಟವಾಯ್ತು ಸರ್
ಚೆಂದದ ಕವನಗಳು
ಚೆನ್ನಾಗಿವೆ ಕವಿತೆಗಳು
ಅರ್ಥವತ್ತಾದ ಸಾಲುಗಳು… ಓದುತ್ತಾ ಹೋದಂತೆ ಜ್ನ್ಯಾನದ ತುಣುಕುಗಳನ್ನ ಒಂದೆಡೆಗೆ ಸೇರಿಸಿ ವ್ಯವಸ್ಥಿತವಾಗಿ ಇಟ್ಟ ರೀತಿ.. ಅದರ ಅನುಭವ ಅದ್ಭುತ… ನವೀಕೃತ ಶೈಲಿಯಲ್ಲಿ ಎಲ್ಲರ ಮನ ಮುಟ್ಟುವುದು ಸಾಧ್ಯವೆಂದು ರುಜುವಾತಾಗಿದೆ… I will call it as esthetic buty in wrighting.
Super & Meaningful lines. Dear Dr.Hareesh. keep going
ಸುಂದರ ಕವಿತೆಗಳು.