ಕಾವ್ಯಯಾನ

ನೂತನ ಅವರ ಹೊಸ ಕವಿತೆ

ನೂತನ ದೋಶೆಟ್ಟಿ

ನ್ಯಾಯಕ್ಕಾಗಿ ಕೂಗು

ಸಾಲುಗಟ್ಟಿದ ವಾಹನಗಳ ಸಂದಿನಲ್ಲಿ
ಚಟಚಟನೆ ಜಿಗಿಯುವ ಪುಟ್ಟ ಕಾಲುಗಳು
ದೇಹವಿಡೀ ಲೋಹದ ಗೋಲದೊಳಗೆ ತೂರಿ
ಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ

ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆ
ಸೆರೆ ಹಿಡಿಯುವ ದಾಹ
ಮಿರಮಿರನೆ ಹೊಳೆವ ಕದಪುಗಳು
ಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು

ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳು
ಸಂಜೆಗತ್ತಲಲ್ಲಿ ಕರಗುವುದ ತಿಳಿದೂ
ಸುಡುಬಿಸಿಲಲಿ ಮೈ ಮಣಿಸುವ ಕಸುವು
ಸೊಂಟಕ್ಕೆ ಬಿಗಿದ ದಾವಣಿಯು
ಸಡಿಲವಾಗುವುದಕ್ಕೆ ಪೂರ್ವ
ಹಾದಿಬದಿಯ ದೊಂಬರಾಟದಲ್ಲಿ ತಯಾರಿ

ಬಡಿಯುವವನ ತಮಟೆ ತಾಳಕ್ಕೆ
ಬಾಗಿ ಬಳುಕುವ ನೋಡು
ಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠ
ಉಣ್ಣುವ ಅನ್ನದಲಿ ಸುಖ ನೀಡಿದ ಘಾಟು

ಕೆಂಪು ದೀಪ ಹತ್ತುತ್ತಲೇ ನಿಲ್ಲುವ ವಾಹನಗಳ
ಗಾಜನ್ನು ಬಗೆವ ಕಣ್ಣುಗಳು
ಕ್ಷಣಕ್ಷಣದ ಬದುಕ ಹುಡುಕುವವು

ಇಂತೆಷ್ಟೋ ಭಾಗ್ಯಲಕ್ಷ್ಮಿಯರು
ರಸ್ತೆಯಂಚಲಿ ದಿನಗಳ ಸವೆಸಿ
ಟಾರ್ಪಾಲು ಗೂಡುಗಳಲೋ
ಫುಟ್ ಪಾತುಗಳಲೋ ರಾತ್ರಿಗಳ ಮಾರಿ

ಕಂತೆ ಕಂತೆ ನೋಟುಗಳ ನುಂಗುವ
ಕಡತಗಳ ಶಪಿಸುವರು
ಕಣ್ಣ ಮಿಂಚನ್ನು ಎದೆಯಲ್ಲಿ ಉಳಿಸಿ ಹೋಗುವರು
ನಿಟ್ಟುಸಿರು ದಾಟಿ ಸಾಗುವರು
ಗಣತಿಯಲ್ಲೂ ಹೆಸರಿಲ್ಲದಾಗುವರು

***************************

One thought on “ಕಾವ್ಯಯಾನ

Leave a Reply

Back To Top