ಕಾವ್ಯಯಾನ

ತೆರವುಗೊಳಿಸಿದ್ದು

ಡಾ.ಗೋವಿಂದಹೆಗಡೆ

ಆ ವಿಶಾಲ ಮೂಲೆ ನಿವೇಶನವನ್ನು
ತೆರವುಗೊಳಿಸಲಾಯಿತು
ತ್ರಿಭುಜದಂತಿರುವ ಸೈಟು. ಎರಡು ಕಡೆ
ರಸ್ತೆ. ವಿಶಾಲ ಹಳೆಯ ಮನೆ
ಒತ್ತಾಗಿ ಬೆಳೆದ ಹಲವು ಗಿಡ ಬಳ್ಳಿ
ಹೂವು ಚಿಗುರು

ಮೊದಲು
ಮಲ್ಲಿಗೆ ಹಂಬು ನಂದಿಬಟ್ಟಲು
ಗುಲಾಬಿ ದಾಸವಾಳ ಕ್ರೋಟನ್‌ಗಳಿಗೆ
ಮುಕ್ತಿ ಸಿಕ್ಕಿದ್ದು. ಮರುದಿನ ಮನೆ ಬಿದ್ದು
ಗುಪ್ಪೆ ಮಣ್ಣು, ಸೊಟ್ಟ ತಂತಿಗಳ
ಅಸ್ಥಿಪಂಜರ.

ನಾಲ್ಕು ದಿನ ಕಳೆದಾಗ ಹಸಿರೇ ಮೈಯಾಗಿದ್ದ
ಮಾವು ಮಾಯ. ಹಬ್ಬದ ಈ ದಿನಗಳಲ್ಲಿ
ಪುಕ್ಕಟೆ ಸೊಪ್ಪು ಸಿಕ್ಕ ಸಂಭ್ರಮದ ನೆರೆ.
ಅವರಿವರ ತೋರಣ, ಮಂಟಪಗಳಲ್ಲಿ ಖುಷಿಸಿರಬಹುದೇ
ಮಾವಿನ ಚಿಗುರು,ಬಾಡುವ ಮುನ್ನ

ಇಂದು
ಅಂಚುಗಳಲ್ಲಿ ಕಾವಲಿಗೆ ಎಂಬಂತೆ
ನಿಂತಿದ್ದ ಹತ್ತಾರು
ತೆಂಗಿನ ಮರಗಳು ನೆಲ ಕಂಡವು
ಅಳತೆ ಮಾಡಿ ಸಮವಾದ ತುಂಡು
-ಗಳಾಗಿ ಅವನ್ನು ಕತ್ತರಿಸಲಾಗಿತ್ತು

ಹೀಗೆ ಇಂಚಿಂಚೂ ತುಂಬಿದ್ದೆಲ್ಲ
ಖಾಲಿಯಾದ ಅಲ್ಲಿ ಈಗ ಉಳಿದದ್ದು-
ಗೇಟಿನ ಒಂದೇ ರೆಕ್ಕೆ
ಒಳಗೆ ಅಷ್ಟು ದೂರದಲ್ಲಿ
ಒಂಟಿ ನಿಂತ, ಗಿಡವಿಲ್ಲದ ಬೋಳು

ತುಳಸೀಕಟ್ಟೆ

*****************************

One thought on “ಕಾವ್ಯಯಾನ

  1. ಒಂಟಿ ರೆಕ್ಕೆಯಿಂದ ಹಾರುವದೆಂತು, ಚೆಂದದ ಚಿತ್ರಣ

Leave a Reply

Back To Top