ಪ್ರಕೃತಿ
ಪಾರ್ವತಿ ಸಪ್ನಾ
ಶತಮಾನಗಳ ಲೆಕ್ಕವಿಲ್ಲದೇ
ಇದ್ದಲ್ಲೇ ಇದ್ದು ಸತತವಾಗಿ
ಮಾನವನ ಕೈಯಲ್ಲಿ
ನಾಶವಾಗುತ್ತಿರುವ ಪ್ರಕೃತಿ
ಕೇಳಲಿಲ್ಲ
ನಾನು ಯಾರೆಂದು !
ಕರಿಮೋಡ ಸುತ್ತುತ್ತಲೇ ಇದೆ
ನೀಲಿ ಬಾನು ಇದ್ದಲ್ಲೇ ಇದೆ
ಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲ
ಆದರೂ ನಮ್ಮನೆಂದು ಕೇಳಲಿಲ್ಲ.
ನಾನು ಯಾರೆಂದು !
ಕೋಟಿ ಜೀವ ರಾಶಿಗೆ
ಜಲವೇ ಬೇಕು ಭೂಮಿಗೆ
ದಾಹ ನೀಗಿ ಬದುಕ ಕೊಟ್ಟು
ಕಡಲ ಸೇರುವ ನೀರಿಗೆ
ಈಗಲೂ ಅರಿವಿಲ್ಲ ನೋಡು
ನಾನು ಯಾರೆಂದು !
ಏನೇನೂ ಅಲ್ಲದ
ತನ್ನ ಮೂಲ ತಿಳಿಯದ
ಮಾನವೀಯತೆ ಮರೆತು
ಯಾರೊಂದಿಗೂ ಬೆರೆಯದ
ಮಾನವ ಜನ್ಮವೇ
ಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ
ನಾನು ಯಾರೆಂದು !
*********************