ಹಿರಿಯ ಕವಿಗಳಹಳೆಯ ಕವಿತೆಗಳು

ಇತರೆ

ಹಿರಿಯ ಕವಿಗಳಹಳೆಯ ಕವಿತೆಗಳು

ಡಾ.ಎಂ.ಗೋಪಾಲಕೃಷ್ಣ ಅಡಿಗ

A Poet And The Past

ಪ್ರಾರ್ಥನೆ

ಪ್ರಭೂ,
ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ
ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ;
ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮು
ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ;
ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿ
ಜುಮ್ಮನರಸುವ ಷಂಡ ಜಿಗಣೆಯಲ್ಲ;
ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿ
ಒರೆಗೆ ತುರುಕಿರುವ ಹೆಂಬೇಡಿಯಲ್ಲ.

ಈ ಸಣ್ಣ ದೊಂದಿಯನ್ನೆತ್ತಿ ಹೊತ್ತಿನ ಮುಖಕ್ಕೆ
ಬೆಳಕು ಹರಿದದ್ದು ತನ್ನಿಂದಲೇ ಎಂದು ತನ್ನೊಳಗೆ
ಮುಖ ಕಿರಿವ, ನೆಣ ಬಿರಿವ, ಬಗ್ಗಲಾರದ ಬೊಜ್ಜ,
ಕೋಲುನಡಿಗೆಕವಾತು ಕಲಿತ ಕೊಬ್ಬಿದ ಹುಂಜ:
ವಾಸಿಮಾಡಯ್ಯ ಈ ಜಲೋದರದ ಭಾರದ ಜಡ್ಡ.
ಕುಮರುತೇಗಿನ ಕಪಿಲೆಹೊಡೆದು ಹಗಲೂ ಇರುಳು
ತೇಗಿಗೊಂದು ಅಮೋಘ ಸ್ಫೂರ್ತಿಗೀತವ ಕರೆವ
ರೋಗದ ಫಸಲನಾದಷ್ಟು ಸವರೋ ತಂದೆ!
ತಿಂದದ್ದು ಸರಿಯಾಗಿ ರಕ್ತವಾಗುವ ಹಾಗೆ
ಅನುಗ್ರಹಿಸು; ಅರಗದಂಥ ಕಚ್ಚಾ ಗಾಳಿಗೀಳುಗಳ
ಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆ
ಏರ್ಪಡಿಸು ಸಹಜ ಹೊರದಾರಿಗಳ; ರಹದಾರಿಗಳ
ಕೊಡು ಎಲ್ಲರಿಗು ತಮ್ಮ ತಮ್ಮ ಖಾಸಗಿ ಮನೆಗೆ.
ಎಲ್ಲಕ್ಕಿಂತ ಹೆಚ್ಚಾಗಿ
ಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು, ನುರಿಸಿ
ಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯ
ಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸದಿದ್ದರು ಕೂಡ
ಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆ
ತಿಂದು ಕೊರಳೆಲ್ಲ ಕಸ್ತೂರಿಯಾಗುವುದೆಂಬ
ಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತು ಬೆಲೂನು
ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ

ತೆಕ್ಕೆಗೊಗ್ಗದ ಹಗಲುಗನಸಿನ ದಢೂತಿ ತೊಡೆ
ಸಿಕ್ಕದೇ ಸಿಕ್ಕಿದಂತಾಗಿ ತೂಬನು ತೆಗೆವ
ಸ್ವಪ್ನೇಂದ್ರಿಯದ ಸ್ವಯಂಚಾಲಕಕೆ ತಡೆಹಾಕು;
ಅಲ್ಲದೇ, ಗಾಳಿಯಲ್ಲಿ ಬತ್ತಲೆ ಸುಳಿವ
ಅಪ್ಸರೆಯರ ಅನಂಗಸಂಘಟ್ಟನೆಗೆ ವೃಥಾ
ಮಲುಷ್ಟಿಮೈಥುನದಹಂಕಾರ ಕೆರಳಿಸಬೇಡ.
ಕಳುಹಿಸಯ್ಯಾ ಬಳಿಗೆ ಕೃಪೆತಳೆದು ಆಗಾಗ್ಗೆ
ವಾಸ್ತವದ ಹೆಣ್ಣುಗಳ, ನಿಜದ ತೊಡೆಗಳ, ಆತ್ಮ
ಹೊಕ್ಕು ತಿಕ್ಕಲು ತಕ್ಕ ಸುಕ್ಕಿರದ ಹೊಸ ತೊಗಲುಗಳ.
ಹೊರಗೆ ಬೀಸಲದೊಳಕ್ಕೆ ಹಿಮ್ಮೆಟ್ಟಿದಾಗೆಲ್ಲ ಬರಿ
ಪ್ರೇತಾತ್ಮಗಳ ಗೆರಿಲ್ಲಾಪಡೆಯ ಕಳಿಸದಿರುಇ.
ಬೆಳೆಸಿಕೊಂಡೇ ತಮಗೆ ತಕ್ಕ ಮಾಂಸವ, ತೊಗಲ
ಬರಲಿ ಅತಿಥಿಗಳೆಲ್ಲ ಮನೆಗೆ, ಬಂದವರಲ್ಲಿ
ತೊಗಲನೊಲ್ಲದ ಅತಿಥಿತುರಿಕೆ ಕಳೆಯೋ ತಂದೆ.
ಹಡಗ ತಾಗಿಸು ಪ್ರತೀ ಬಂದರಿಗು, ಯಾವೊಂದು
ತಿಮಿಂಗಿಲ ತೊಡೆಯು ಕೂಡ ನುಂಗಿ ಕೊಳಸದ ಹಾಗೆ
ನಡಸು ಬಂದರಿನಿಂದ ಬಂದರಿಗೆ. ಆಮದು ರಫ್ತು
ಸಾಗುತ್ತಲಿರಲಿ ಕೊನೆವರೆಗೆ. ಆದರು
ಫರಂಗಿರೋಗ ತಗಲದ ಹಾಗೆ
ಉಳಿಸು ಪೂರ್ವಾರ್ಜಿತದ ರತಿವಿವೇಕದ ಶಿಖೆಯ.

ಗಾಳಿಗಲ್ಲಾಡುವುದು ದೊಂದಿ, ವಿದ್ಯುದ್ದೀಪವಾದರೂ
ಬೀಸುದೊಣ್ಣೆಗೆ ಬಂದಿ. ನಿನ್ನ ಗಾಳಿಯ ಬೆಟ್ಟ
ಘನಿಸಿ ಆಗುವ ಧಾತು ದುಡುಕಿ ಬಗೆವುದು ನೆಲದ
ತೊಡೆಯ; ಚೆಲ್ಲುವುದೆಲ್ಲ ಕಡೆಯು. ದ್ರಾವಣಸುಖಕ್ಕೆ
ವಿವಶ ಮುಳ್ಳೂ ಹುಲ್ಲು. ಕ್ಷಣದ ಸಾರ್ಥಕ ರತಿಗೆ
ಮಾಸಗಳ, ವರ್ಷ ವರ್ಷ ಶತಮಾನಗಳ
ವಿರತಿ, ಸಮರತಿ, ವಿಕೃತ ರತಿ. ತುಂಬಿ ನವಮಾಸ
ಬರುವ ಜೀವಪವಾಡ ಕೆಲಸ ಕಲಿಸೋ ತಂದೆ.

ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು;
ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನೂ ಹಾಗೆ
ಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನು;
ಕಲಿಸು ಸವಾರಿಕುದುರೆಯಾಗದ ಹಾಗೆ
ಕಾಡುಕುದುರೆಯ ಕೆನೆತಕೊಬ್ಬನ್ನು, ಹಾಗೆಯೇ
ಜಗಭಾರಗಾಳಿತೊಡೆ ತಾಳಿ ಹೊರುವಭ್ಯಾಸ
ಕುದುರಿಸು; ನಿನ್ನಂತೆ ಊರ್ಧ್ವರೇತಸ್ಕನಾಗೊಬ್ಬಂಟಿ
ಮೇಲುಮಾಳಿಗೆಯ ಕಿರುಕೋಣೆ ಮೈಮರೆವನ್ನು;
ತಕ್ಕ ತೊಡೆನಡುವೆ ಧಾತುಸ್ಖಲನದೆಚ್ಚರವ.

ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತಾಪುತ್ರ –
ಗಾಳಿ ಕಡೆಯಲು ಸೆಟಿದ ಬೆಳ್ಳಿ ಮಂತು,
ನಿನ್ನ ತೊಡೆಹೊರೆ ಕೆಳಗೆ ಮೆತ್ತೆ – ಸಡಿಲು.

**********************

One thought on “ಹಿರಿಯ ಕವಿಗಳಹಳೆಯ ಕವಿತೆಗಳು

Leave a Reply

Back To Top