ಪುಸ್ತಕ ಪರಿಚಯ
ಅಲೆಮಾರಿಯ ದಿನದ ಮಾತುಗಳು
ಪುಸ್ತಕ : ಅಲೆಮಾರಿಯ ದಿನದ ಮಾತುಗಳು
( ಪದ್ಯ – ಗದ್ಯಗಂಧಿ ಚಿಂತನ ಬರಹಗಳು )
ಲೇಖಕ: ಗಂಗಾಧರ ಅವಟೇರ
ಪ್ರಕಾಶನ: ಪ್ರತೀ(ಕ)ಕ್ಷಾ ಪ್ರಕಾಶನ, ಕುಕನೂರ
ಜಿ|| ಕೊಪ್ಪಳ
ಪುಟಗಳು: 96
ಬೆಲೆ: 100/-
ಪ್ರಕಟಿತ ವರ್ಷ: 2019
ಲೇಖಕರ ದೂರವಾಣಿ: 9449416270
ಮಾನವ ಸಮಾಜಜೀವಿ. ಅವನು ಸಮಾಜವನ್ನು ಬಿಟ್ಟು ಬಾಳಲಾರ-ಬದುಕಲಾರ. ಅರಿಸ್ಟಾಟಲ್ ಹೇಳುವಂತೆ ‘ಸಮಾಜವನ್ನು ಬಿಟ್ಟು ಬದುಕುವ ಮಾನವ ದೇವರು ಇಲ್ಲವೇ ಪಶು ಆಗಿರುತ್ತಾನೆ’. ಮಾನವ ಭಾಗಶಃ ಸಹಕಾರಿಯಾದಂತೆ ಭಾಗಶಃ ಸಂಘರ್ಷಮಯಿ. ಸಂಘರ್ಷದ ಫಲವಾಗಿ ದಂಗೆ, ಬಂಡಾಯ, ಯುದ್ಧ ಸಂಭವಿಸಿದರೆ ಸಹಕಾರದ ಫಲವಾಗಿ ಕುಟುಂಬ, ಸಮಾಜ, ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ಕುಟುಂಬವೊಂದರಲ್ಲಿ ಜನಿಸಿ ಸಮಾಜದಲ್ಲಿ ತನ್ನ ವಿಕಾಸ ಕಂಡುಕೊಳ್ಳುವ ವ್ಯಕ್ತಿಯು ಸಾಮಾಜಿಕ ರೂಢಿ-ಸಂಪ್ರದಾಯ, ಕಟ್ಟುಪಾಡು, ನೀತಿ-ನಿಯಮಗಳಿಗೆ ಬದ್ಧನಾಗಿ ನಡೆದುಕೊಳ್ಳಬೇಕಾಗುತ್ತದೆ.
ನಮ್ಮ ಜೀವನವನ್ನು ಸುಂದರವಾಗಿಸಲು ಹಲವು ಅನುಭಾವಿಗಳು, ಶರಣರು-ಸಂತರು, ದಾರ್ಶನಿಕರು ತಮ್ಮ ಜೀವನಾನುಭವದ ಸತ್ಯಗಳನ್ನು ನುಡಿಮುತ್ತುಗಳಲ್ಲಿ, ಅನುಭವಾಮೃತಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ನುಡಿಮುತ್ತುಗಳು ನಮ್ಮ ಅಜ್ಞಾನ, ಅಂಧಕಾರದ ಬದುಕಿಗೆ ಬೆಳಕು ತೋರಲು ಹಚ್ಚಿಟ್ಟ ಸಾಲು ಹಣತೆಗಳಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಿನ ಶುಭೋದಯದಲ್ಲಿ ‘ದಿನಕ್ಕೊಂದು ಮಾತು’ ಎನ್ನುವ ಚಿಂತನಶೀಲ ಬರಹಗಳನ್ನು ಬರೆಯುವ ಮೂಲಕ ತಮ್ಮ ಜೀವನಾನುಭವದ ಸಂಗತಿಗಳನ್ನು, ಜೀವನ ಮೌಲ್ಯಗಳನ್ನು ಕೆಲವೇ ಸಾಲುಗಳಲ್ಲಿ ಹೆಣೆದು ಅರ್ಥಪೂರ್ಣವಾದ ಪದ್ಯ-ಗದ್ಯಗಂಧಿಯಾದ ಚಿಂತನ ಬರಹಗಳನ್ನು ಬರೆಯುವುದರಲ್ಲಿ ಕವಿ, ಲೇಖಕ ಗಂಗಾಧರ ಅವಟೇರ ಅವರು ಪರೀಣತರು.
ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿ ಪ್ರವೃತ್ತಿಯಿಂದ ಸಾಹಿತಿಯಾಗಿರುವ ಗಂಗಾಧರ ಅವರು ಮೂಲತಃ ನಂದವಾಡಗಿಯವರು. ಈಗಾಗಲೇ “ನನ್ನೊಳಗಿನ ಪ್ರೀತಿ” ಹಾಗೂ “ನಿಬ್ಬಣ” ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ. “ಅಲೆಮಾರಿಯ ದಿನದ ಮಾತುಗಳು” ಕೃತಿಗೆ ಪತ್ರಿಕೊದ್ಯಮಿ ಮಹೇಶ್ ಮನ್ನಯ್ಯನವರಮಠ ಅವರ ಮಾರ್ಮಿಕ ಮುನ್ನುಡಿ ಹಾಗೂ ಹಿರಿಯ ಕವಿ ಡಾ|| ಗುಂಡಣ್ಣ ಕಲಬುರಗಿಯವರ ಸ್ನೇಹಪರ ಬೆನ್ನುಡಿ ಇದೆ.
“ಅಲೆಮಾರಿಯ ದಿನದ ಮಾತುಗಳು” ಕೃತಿಯಲ್ಲಿ ಒಟ್ಟು 125ಕ್ಕೂ ಹೆಚ್ಚು ಚಿಂತನಶೀಲ ಬರಹಗಳಿವೆ. ಇವು ಗಾತ್ರದಲ್ಲಿ ಚಿಕ್ಕದಾದರೂ ಅವುಗಳ ಹರವು ವ್ಯಾಪಕವಾಗಿದೆ.
ಜೀವನದಲ್ಲಿ ಎದುರಾಗುವ ಸೋಲು-ಗೆಲುವು, ನೋವು-ನಲಿವು, ಅಡ್ಡಿ-ಆತಂಕಗಳನ್ನು ಸಮಚಿತ್ತದಿಂದ ಎದುರಿಸಿ ಜೀವನದ ಆಟವನ್ನು ಗೆಲ್ಲಲು ಲೇಖಕರ ವಿಚಾರಗಳು ಇಲ್ಲಿ ಮಾರ್ಗದರ್ಶಿಯಾಗಿವೆ.
“ಗೆಲುವು ಹೂವಿನ ಹಾಸಿಗೆಯಲ್ಲ, ಅದು ಕೆಸರುಗದ್ದೆಯ ಓಟ. ಯಾರು ಕೊಸರಿಕೊಂಡು ಹೋಗಿ ದಡ ಮುಟ್ಟುತ್ತಾರೊ ಅವರು ಗೆಲ್ಲುತ್ತಾರೆ” ಎನ್ನುವ ಮಾತು ನಮ್ಮ ಸತತ ಪರಿಶ್ರಮ ಹಾಗೂ ಪ್ರಯತ್ನಶೀಲತೆಯ ಸಂಕೇತವಾಗಿದೆ.
‘ನಮಗೆ ದ್ವೇಷ ಮಾಡಲು ಆಯುಷ್ಯ ಬಹಳಷ್ಟು ಇಲ್ಲ. ಇರುವಷ್ಟು ಕಾಲ ಎಲ್ಲರನ್ನು ಪ್ರೀತಿಸೋಣ’ ಎನ್ನುವ ಮಾತು ಓದುಗರಿಗೆ ಜೀವನದ ಸತ್ಯ ದರ್ಶನ ಮಾಡಿಸುತ್ತದೆ. ‘ಮಾತು ಮೌನವಾದಾಗ ಅಂತರಂಗದಲ್ಲಿ ಅರಿವಿನ ಗುರು ಕಾಣಿಸಿಕೊಳ್ಳುತ್ತಾನೆ’ ಎನ್ನುವ ಮಾತು ಅರಿವೇ ಗುರುವಾಗಿ, ನುಡಿ ಜ್ಯೋತಿರ್ಲಿಂಗವಾಗಿ ಗೋಚರಿಸುತ್ತದೆ.
‘ಪುಸ್ತಕದ ಓದು ಮಸ್ತಕದಲ್ಲಿರಬೇಕು. ಜೀವನದ ಅನುಭವ ಅನುಭಾವವಾಗಬೇಕು. ಓದು ಅನುಭವ ಒಂದಾದಾಗ ವ್ಯಕ್ತಿತ್ವಕ್ಕೊಂದು ಘನತೆ ಬರುತ್ತದೆ’ ಎನ್ನುವ ವಿಚಾರ ಮನೋಜ್ಞವಾಗಿದೆ.
‘ದಾರಿ ಇಲ್ಲವೆಂದು ನಡೆಯುವುದನ್ನು ನಿಲ್ಲಿಸಬಾರದು. ನಾವು ನಡೆದದ್ದೇ ದಾರಿ ಆಗಬೇಕು ಆ ದಾರಿ ನಾಲ್ಕು ಜನರಿಗೆ ಸ್ಪೂರ್ತಿಯಾಗಬೇಕು’ ಎಂಬ ಲೇಖಕರ ಆಶಯ ಶ್ಲಾಘನೀಯ.
‘ಯಾರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡುವರು ಅಂತವರನ್ನು ನಿರ್ಲಕ್ಷಿಸಬೇಕು ಆದರೆ ದ್ವೇಷ ಮಾಡಬಾರದು’ ಎಂಬ ವಿಚಾರ ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣಕ್ಕೆ ಕೈಗನ್ನಡಿಯಾಗಿದೆ.
ಹೀಗೆ “ಅಲೆಮಾರಿಯ ದಿನದ ಮಾತುಗಳು” ಕೃತಿಯು ಮುಳುಗಿದಷ್ಟು ಮುತ್ತನ್ನು ಕೊಡುವ ಶಬ್ಧಶರಧಿಯಾಗಿದೆ. ಓದುಗರ ಅಜ್ಞಾನದ ಹಾದಿಗೆ ಬೆಳಕು ತೋರುವ ದೀವಟಿಗೆಯಾಗಿದೆ.
ವಿದ್ಯಾರ್ಥಿ ಸಮುದಾಯದೊಂದಿಗೆ ನಿರಂತರ ಒಡನಾಟದಲ್ಲಿರುವ ಲೇಖಕ ಗಂಗಾಧರ ಅವಟೇರ ಅವರು ಮಕ್ಕಳಲ್ಲಿ ನೈತಿಕ, ಸಾಮಾಜಿಕ ಪ್ರಜ್ಞೆ ಬೆಳೆಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಈ ಕೃತಿಯನ್ನು ತಮ್ಮ ಮನೆಯ ಪುಸ್ತಕ ಭಂಡಾರದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಓದಲು, ತಮ್ಮ ಮನೋವಿಕಾಸ ವಿಸ್ತರಿಸಿಕೊಳ್ಳಲು ಇದೊಂದು ಯೋಗ್ಯ ಕೃತಿಯಾಗಿದೆ.
******************************************
ಬಾಪು ಖಾಡೆ