ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರೀತಿಯೆಂದರೆ

ಪ್ರೀತಿಯೆಂದರೆ ಅರುಣಾ ನರೇಂದ್ರ ಪ್ರೀತಿ ಎಂದರೆಬೇರೇನೂ ಅಲ್ಲಅದು ನಿನ್ನ ನೋಟಕಣ್ಣರೆಪ್ಪೆಗಳ ಹುಡುಕಾಟ ಪ್ರೀತಿ ಎಂದರೆನಾನು ನಿನ್ನ ನೀನು ನನ್ನತಿಳಿದುಕೊಳ್ಳುವುದುಸೆಳೆದುಕೊಳ್ಳುವುದು ಪ್ರೀತಿ ಎಂದರೆಒಣಗಿದ ಮರಚಿಗುರುವುದುಹೂ ಅರಳುವುದು ಪ್ರೀತಿಯೆಂದರೆನನಗೆ ನೀನು ನಿನಗೆ ನಾನುಗಂಧ ತೇಯುವುದುಗಾಳಿಯಲಿ ತೂರುವುದು ಪ್ರೀತಿ ಎಂದರೆನಿನಗಾಗಿ ಬರೆದಕವಿತೆಯ ಸ್ವಗತಕಡಲಿನ ಮೊರೆತ *******************************

ಪ್ರೀತಿಯೆಂದರೆ Read Post »

ಕಾವ್ಯಯಾನ

ನನ್ನ-ಅವಳು

ನನ್ನ-ಅವಳು ಸಿದ್ಧರಾಮ ಕೂಡ್ಲಿಗಿ ನನ್ನ ಅವಳು ನನ್ನೆದೆಯೊಳಗಿನ ಪುಟ್ಟ ಹಣತೆ ನೋವು, ನಿರಾಸೆ, ದು:ಖಗಳಾದಾಗಲೆಲ್ಲ ಪಟ್ಟನೆ ಬೆಳಗಿ ಕತ್ತಲೆಯ ದೂಡುವ ಒಳಬೆಳಕು – ನನ್ನ ಅವಳು ಸಾಗರದ ಅಲೆಗಳನ್ನೆಲ್ಲ ತನ್ನ ಹೆರಳೊಳಗೆ ಸುರುಳಿಯಾಗಿಸಿಕೊಂಡು ನನ್ನೆದೆಯ ತೀರಕೆ ಒಲವಿನ ಮುತ್ತಿಕ್ಕುವ ತಣ್ಣನೆಯ ಸಿಂಚನ – ನನ್ನ ಅವಳು ಪ್ರೇಮದ ಹಸಿರ ಮೇಲೆ ಒರಗಿ ಆಗಸವ ನೋಡಿದಾಗಲೆಲ್ಲ ಕಾಣಸಿಗುವ ಬೆಳ್ಮೋಡದ ಸುಂದರ ನಗೆ – ನನ್ನ ಅವಳು ದಣಿವಾದಾಗಲೆಲ್ಲ ಮೈಮನದ ತುಂಬ ಜುಳುಜುಳುನೆ ಹರಿದು ಪ್ರೀತಿಯ ಕಚಗುಳಿಯಿರಿಸಿ ನಕ್ಕುನಲಿಸುವ ಜೀವ-ನದಿ – ನನ್ನ ಅವಳು ನನ್ನೆದೆಯ ಭಾವಗಳ ಗಿರಿಶಿಖರದ ಉತ್ತುಂಗಕ್ಕೇರಿ ನಿಂತಾಗ ಪ್ರೀತಿಯ ಅಗಾಧತೆಯ ತೋರಿ ಬೆನ್ನ ಹುರಿಗುಂಟ ಹರಿವ ತಣ್ಣನೆಯ ಪುಳಕ – ನನ್ನ ಅವಳು ಎದೆಯ ಕಿಟಕಿಯಿಂದ ಇಣುಕಿದಾಗಲೊಮ್ಮೆ ಕಣ್ಣೋಟದಗುಂಟ ಹರಿದುಬಂದು ಮೈದಳೆದು ನಿಲುವ ಪ್ರೇಮವನೇ ಹೊತ್ತ ಬೆಳದಿಂಗಳ ಬಾಲೆ *********************************** –

ನನ್ನ-ಅವಳು Read Post »

ವಾರದ ಕವಿತೆ

ಒಲವಾಗಿ ಬಿಡೋಣ ನಳಿನ ಡಿ. ಎಲ್ಲದರಂತಲ್ಲದ ಈ ರೋಸುಆತ್ಮಕೆ ಅಂಟಿಸಿದವರ್ಯಾರು?ಗುಡಿಸಿದಷ್ಟೂ ಕಾಮದ ಕಸ,ತೊಳೆದಷ್ಟೂ ಪ್ರೇಮದ ನೊರೆ,ಉಳಿ ಪಿಡಿದು ಕೆತ್ತಿಸಿದವರ್ಯಾರು?ನಿನ್ನೆದೆಯಲಿ ನನ್ನ? ಬಹು ಜೋಕೆ ಹುಡುಗಾ,ನೀ ನಡೆಯುತಿರುವುದುಕತ್ತಿಯಂಚಿನ ಮೇಲೆ..ಸೀರೆಯ ಸೆರಗ ಮೇಲೆಲ್ಲಾ,ನಿನ್ನ ಹೆಸರಿನ ಕಸೂತಿಉಟ್ಟ ಮೈ ಜುಂ ಅಂದಾಗನಿನ್ನಲ್ಲೂ ತಲ್ಲಣ ಬುದ್ದ ಇದಿರಾದಂತೆ,ತೆವಲಿನ ಜಗತಿಗೆಪ್ರೇಮ ತೆರೆದಿದೆಕಾಮದ ಕೊರಳಿಗೆ..ಎಲ್ಲೆಲ್ಲೂ ಜಯಿಸಿದಬುದ್ದನಂತೆ,ಪ್ರೇಯ ಜಯಿಸಿರಲುನೀನೂಸುಮ್ಮನೇ ಕಾರಣ ಹೇಳದೆಬಂದುಬಿಡಬಹುದುಕಾದವಳ ಅಗ್ನಿಪರೀಕ್ಷೆಗೆವರವಾಗಿ.. ಬಲ್ಲಂಥವರ ಮಾತಲ್ಲಪ್ರೇಮ?ಮೂಗನ ಹಾಡಿನಂತೆ..ಬಾ ದೂರದ ಮರಳುನಾಡಿನಪಯಣಕೆ ಓಯಸಿಸ್ ನಂತೆನಿಂತ ಜಲವಾಗಿಒಲವಾಗಿ ಬಿಡೋಣ.. **********************************************

Read Post »

ಕಥಾಗುಚ್ಛ

ಸಿನಿಮಾ ಅಲ್ಲ… ಜೀವನ

ಸಿನಿಮಾ ಅಲ್ಲ… ಜೀವನ ಮಧುರಾ ಕರ್ಣಮ್             ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ ಸ್ನಾನ ಮಾಡಿ ನನ್ನ ರಾಜರಥವನ್ನು ಎತ್ತಿಕೊಂಡು ಹೊರಬಿದ್ದು ಯಶವಂತಪುರದ ಸ್ಟೇಷನ್ ಬಳಿ ಬಂದರೆ ಬೇಕಾದಷ್ಟು ಬಾಡಿಗೆಗಳು. ತಿಂಡಿಗೆ ಕಾಯ್ದರೆ ಮನೆಯಲ್ಲೇ ಹತ್ತಾಗುತ್ತದೆ. ಅಲ್ದೇ ಪಾಪ.. ಅಮ್ಮ ಬೇಗ ಬೆಳಿಗ್ಗೆ ಎದ್ದು ಮಾಡಬೇಕು. ಮನೆಯ ಯೋಚನೆ ಕೊಡವಿ ನನ್ನ ರಾಜರಥವನ್ನು ಪ್ರೀತಿ..ಅಭಿಮಾನದಿಂದ ನೋಡಿದೆ. ಹೌದು..ನನ್ನ ರಾಜರಥ..ಕುದುರೆ ..ವಾಹನ ಎಲ್ಲ ಈ ಆಟೋ ಆಗಿತ್ತು. ನನ್ನ ಜೀವನಾಧಾರ ಎಂದರೂ ತಪ್ಪಿಲ್ಲ. ಹಿಂದೆ ಶಂಕರನಾಗ್‌ರ ‘ಆಟೋರಾಜ’ಚಿತ್ರದ ಪೋಸ್ಟರ್ ಸಣ್ಣದಾಗಿ ರಾರಾಜಿಸುತ್ತಿತ್ತು. ಆಟೊ ಚಾಲಕರೆಲ್ಲ ಇಷ್ಟ ಪಡುವ ಹೆಮ್ಮೆಯ ಚಿತ್ರವದು. ಪಾಪ..ಸದಾ ಟ್ರಾಫಿಕ್‌ನಲ್ಲೇ ಇರುವುದರಿಂದ ಮೇಲೆಲ್ಲ ದೂಳು ಹರಡಿತ್ತು. ತುಸು ದೂರ ಕ್ರಾಸ್ ರೋಡಿನಲ್ಲಿ ತಂದು ನಿಲ್ಲಿಸಿ ಹಳೆಯ ಬಟ್ಟೆಯಿಂದ ಒರೆಸಲಾರಂಭಿಸಿದೆ. ಆಗಲೇ ಅವಳು “ಅಮ್ಮಾ..”ಎಂದು ಕೂಗಿಕೊಂಡು ಅತ್ತಲಿಂದ ಓಡಿ ಬಂದದ್ದು. ನಾನೂ ಗಾಬರಿಯಿಂದ “ಏನು..ಏನಾಯ್ತು?”ಎಂದು ಕೇಳಿದೆ. ಉತ್ತರಿಸಲಾರದೆ ಕೈ ತೋರಿದಳು. ಪುಟ್ಟ ಹಾವೊಂದು ಅವಳಿಗಿಂತ ಹೆಚ್ಚು ಹೆದರಿಕೊಂಡು ಸರಸರನೆ ಸರಿದು ಹೋಗುತ್ತಿತ್ತು. ‘ಒಹ್! ಇದಕ್ಕಾ.. ಇವಳು ಇಷ್ಟು ಹೆದರಿ ಕೂಗಿಕೊಂಡದ್ದು..’ಎಂದುಕೊಂಡೆ.  ದಾರಿಯಲ್ಲಿ ಜನರಾರೂ ಇರಲಿಲ್ಲ. ಸೀದಾ ಬಂದವಳು ನನ್ನ ಆಟೋ ಏರಿ ಕುಳಿತಳು. ಒಂದು ನಿಮಿಷ ಸುಮ್ಮನಿದ್ದು ನಾನು “ಅದು ಹೋಯಿತಮ್ಮ”ಎಂದೆ. ಅತ್ತಲಿಂದ ಉತ್ತರವಿಲ್ಲ. ಸೂಕ್ಷ್ಮವಾಗಿ ಅವಳನ್ನು ಗಮನಿಸಿದೆ. ಸೌಂರ‍್ಯದ ಖನಿ ಎಂದು ಹೇಳಲಾಗದಿದ್ದರೂ ಅಂದವಾಗಿದ್ದಳು. ಹಾಲು ಬಣ್ಣ, ನೀಳ ಮೂಗು, ಅರಳು ಕಂಗಳಲ್ಲಿ ಮಡುಗಟ್ಟಿದ್ದ ನೀರು, ಅಗಲ ಬಾಯಿಯಲ್ಲಿ ಅದರುತ್ತಿದ್ದ ಕೆಂಪು ತುಟಿಗಳು, ಹಣೆಯ ಮೇಲೆ ಸಾಲುಗಟ್ಟಿದ್ದ ಬೆವರ ಹನಿಗಳು.. ಅವಳಿನ್ನೂ ಕಂಪಿಸುತ್ತಿದ್ದಳು.             ತುಸು ಮೃದುವಾಗಿ “ಮೇಡಮ್.. ಹೆದರಬೇಡಿ. ಅದು ಹೊರಟು ಹೋಯಿತು. ಇಳಿಯಿರಿ”ಎಂದೆ. ಅವಳು ನಡಗುತ್ತಲೇ “ಉಹ್ಞೂಂ.. ಹೆಬ್ಬಾಳಕ್ಕೆ ನಡೀರಿ” ಎಂದಳು. “ನಾನಲ್ಲಿಗೆ ಬರಲ್ಲ ಮೇಡಮ್. ಏರಿಯಾ ಸರಿಯಾಗಿ ಗೊತ್ತಿಲ್ಲ”ಎಂದೆ. ಚಿಕ್ಕ ಮಗು ರಚ್ಚೆ ಹಿಡಿದು ಕೇಳುವಂತೆ  “ನಾನೀಗ ಇಳಿಯಲ್ಲ. ಕೆಳಗೆ ಕಾಲಿಡಲೂ ಹೆದರಿಕೆ ನಂಗೆ. ನಡೀರಿ.. ಪ್ಲೀಸ್..”ಎಂದು ಅಂಗಲಾಚಿದಳು. ಛೆ! ಇಂದು ಬೆಳಿಗ್ಗೆ ಯಾರ ಮುಖ ನೋಡಿದ್ದೆನೋ ಎನಿಸಿದರೂ ಅವಳ ಸ್ಥಿತಿ ಕಂಡು ಅಯ್ಯೋ.. ಎನಿಸದಿರಲಿಲ್ಲ. ಸುಮ್ಮನೆ ಒಳಗೆ ಕುಳಿತು ಮೀಟರ್ ಹಾಕಿ ಗಾಡಿ ಶುರು ಮಾಡಿದೆ. ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿತ್ತು. ಸ್ವತಂತ್ರವಾಗಿ ಹಾರಾಡಲು ಬಿಟ್ಟ ಕೂದಲು, ಕೈಗೆ ದುಬಾರಿ ವಾಚು, ಬೆಲೆ ಬಾಳುವ ಕ್ಲಚ್ ರೂಪದ ಪರ್ಸು.. ಸ್ಥಿತಿವಂತರ ಮನೆಯ ಹುಡುಗಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಳಾಸ ಹೇಳಲು ತಡವರಿಸುತ್ತಿದ್ದವಳನ್ನು “ಸಣ್ಣ ಪುಟ್ಟದ್ದಕ್ಕೆಲ್ಲಾ ಇಷ್ಟು ಹೆದರಬಾರದು ಮೇಡಮ್. ಮುಂದೆ ಜೀವನದಲ್ಲಿ ಎಂಥೆಂಥದ್ದಕ್ಕೆಲ್ಲಾ ತಲೆ ಕೊಡಬೇಕಾಗುತ್ತೆ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧರ‍್ಯ ತಂದುಕೊಳ್ಳಿ” ಎಂದು ಸಾಂತ್ವನಿಸಿದಾಗ ಕೊಂಚ ತಹಬಂದಿಗೆ ಬಂದಿದ್ದಳು. ‘ಭರ್‌ರ್..’ಎಂದು ಓಡಿದ ನನ್ನ ರಥ ‘ವೀರಪ್ಪನ ಪಾಳ್ಯ’ಎಂದು ಬರೆದ ಕಮಾನಿನ ಮೂಲಕ ಹಾದು ತಿರುವುಗಳಲ್ಲಿ ತಿರುಗಿ ಅವಳು ತೋರಿಸಿದ ಭವ್ಯ ಬಂಗಲೆಯ ಮುಂದೆ ನಿಂತುಕೊಂಡಿತು. ಇಳಿದವಳು ಮೀಟರ್‌ನತ್ತ ನೋಡುವ ಗೊಡವೆಗೂ ಹೋಗದೇ ಐನೂರರ ನೋಟೊಂದನ್ನು ಕೊಟ್ಟು “ಥ್ಯಾಂಕ್ಸ.. ತುಂಬಾ ಥ್ಯಾಂಕ್ಸ”ಎಂದು ಹೊರಟು ಬಿಟ್ಟಳು. ರ‍್ರೀ.ಮೇಡಮ್, ಚಿಲ್ಲರೆನಾರೂ ತೊಗೊಳ್ಳಿ”ಎಂದು ಕೂಗಿದೆ. ತೆಗೆದುಕೊಂಡವಳು ಮನೆಯತ್ತ ನಾಲ್ಕು ಹೆಜ್ಜೆ ಹಾಕಿ ತಿರುಗಿ ನನ್ನತ್ತ ನೋಡಿ ಹೂನಗು ಬೀರಿದಳು. ಮೋಡ ಕರಗಿ ಮಳೆಯಲ್ಲಿ ಮಿಂದ ಹೂ ಶುಭ್ರವಾಗಿ ನಗುವಂತೆ.. ಹಾವು ನೋಡಿ ಹೆದರಿ ಕಂಪಿಸಿ ಕಣ್ತುಂಬಿದ ಕುರುಹೂ ಇರದಂತೆ.. ನನಗೆ ಅಚ್ಚರಿಯೊಂದಿಗೆ ಯಾವುದೋ ಪುಳಕದಲ್ಲಿ ಮಿಂದ ಭಾವ. ಒಂದೊಂದೇ ಹೆಜ್ಜೆಯನ್ನಿಡುತ್ತ ಮನೆಯೊಳಗೆ ನಡೆಯುವಾಗ ಮತ್ತೊಮ್ಮೆ ತಿರುಗಿ ಕೈ ಮಾಡಿದಳು. ನಾನೂ ಮುಗುಳ್ನಕ್ಕು ಕೈ ಮಾಡಿದೆ. ಮನಸ್ಸಿಗೆ ಎಂದೂ ಇಲ್ಲದ ವಿಚಿತ್ರ ಸಿಹಿ ಅನುಭವ. ಅದೆಂಥ ಆಕರ್ಷಣೆಯೋ.. ಗೊತ್ತಿಲ್ಲ.             ಅದು ಅಲ್ಲಿಗೆ ಮುಗಿದ ಅಧ್ಯಾಯವಾಗಿದ್ದರೆ ಬೆಳೆದು ಕಥೆಯಾಗುತ್ತಿರಲಿಲ್ಲ. ನಾನು ನಿಮಗೆ ಹೇಳಬೇಕಾಗೂ ಇರಲಿಲ್ಲ. ಮರುದಿನ ನಾನು ಮಹಾಲಕ್ಷ್ಮಿಲೇಔಟಿನ ಪಂಚಮುಖಿ ಆಂಜನೇಯನಿಗೆ ನಮಿಸಿ ಮೂಲೆಯಲ್ಲಿದ್ದ ಅಂಗಡಿಯಲ್ಲಿ ಚಿತ್ರಾನ್ನ ತಿಂದು.. ಕಾಫಿ ಕುಡಿದು ನನ್ನ ರಥದ ಬಳಿ ಬಂದೆ. ತುಸುದೂರದಲ್ಲಿ ಕಾಯುತ್ತ ನಿಂತವಳು ಹೂನಗು ಬೀರುತ್ತ ಹತ್ತಿರ ಬಂದಳು. ನಿನ್ನೆ ಕಂಡ ಜಾಗ.. ಅದೇ ಹುಡುಗಿ..ಎಂದು ಖಚಿತಪಡಿಸಿಕೊಂಡೆ. “ಈವತ್ತೇನು.. ತಿಂಡಿ ಲೇಟಾ?”ಎಂದು ತುಂಬಾ ಪರಿಚಯವಿರುವಂತೆ ಕುಶಲೋಪರಿ ಆರಂಭಿಸಿದಳು. “ಹ್ಞೂಂ, ಏಳಲು ತಡವಾಯ್ತು”ಎಂದೆ. ತಟಕ್ಕನೆ ಆಟೋ ಏರಿ ಕುಳಿತು “ನಡೀರಿ ಹೆಬ್ಬಾಳಕ್ಕೆ..”ಎಂದಳು. ನಾನು ನುಸುಗೋಪದಿಂದ “ಆಗಲ್ಲ ಮೇಡಮ್.. ನಾನಲ್ಲಿಗೆ ಬರೋದೇ ಇಲ್ಲ. ನಿನ್ನೆ ನೀವು ತುಂಬಾ ಹೆದರಿಕೊಂಡಿದ್ರೀಂತ ಬಂದದ್ದಷ್ಟೇ.. ಬೇರೆ ಆಟೋ ನೋಡ್ಕೊಳಿ”ಎಂದೆ ಮಾಮೂಲಿ ಧಾಟಿಯಲ್ಲಿ. ಅವಳೂ ಭಂಡತನ ತೋರುತ್ತ “ನಾನಂತೂ ಇಳಿಯಲ್ಲ. ನನ್ನ ಬಿಟ್ಟು ಮುಂದೆ ಹೋಗಿ”ಎಂದಳು. ಕೋಪವೇರಿ “ಏನಂದುಕೊಂಡಿದ್ದೀರಿ ನನ್ನನ್ನ..?” ಎಂದು ಕೇಳಿದೆ. “ಒಬ್ಬ ಒಳ್ಳೆಯ ಸ್ನೇಹಿತ..ಹಿತೈಷಿ..” ಎಂದು ಮುದ್ದಾಗಿ ಉಲಿದಳು. ಹಾಳು ಮನಸ್ಸು ಮತ್ತೆ ಮೃದುವಾಯಿತು. ಮತ್ತೆ ಈ ಹುಡುಗಿ ಕಣ್ತುಂಬಿಕೊಂಡು ಹನಿ ಪಟಪಟನೆ ಉದುರಿಸಿದರೆ ಕಷ್ಟವೆನಿಸಿ ಸೀದಾ ಓಡಿಸಿದೆ. ಮಾಮೂಲು ದಾರಿಯಲ್ಲಿ ಓಡಿದೊಡನೆ ಹಸನ್ಮ್ಮಖಿಯಾದವಳು ದಾರಿಯಲ್ಲಿ ಪ್ರವರ ಆರಂಭಿಸಿದಳು.             ಅವಳ ಹೆಸರು ಮಾನ್ಯ. ಇಂಜಿನಿಯರಿಂಗ್‌ನ ನಾಲ್ಕು ವರ್ಷಗಳು ಮುಗಿದರೂ ಕೆಲವು ವಿಷಯಗಳು ಉಳಿದುಕೊಂಡಿವೆಯಂತೆ. ಅದಕ್ಕೇ ಟ್ಯೂಟರ್ ಹತ್ತಿರ ಹೇಳಿಸಿಕೊಳ್ಳಲು ಮಹಾಲಕ್ಷ್ಮಿಲೇಔಟಿಗೆ ಬರುತ್ತಾಳೆ. ಬೆಳಿಗ್ಗೆ ಏಳು ಗಂಟೆಗೆಲ್ಲ ಅಪ್ಪನ ಡ್ರೆöÊವರ್ ಬಿಟ್ಟು ಹೋಗುತ್ತಾನೆ. ಅಪ್ಪ ಒಂಬತ್ತಕ್ಕೆಲ್ಲ ಆಫೀಸಿಗೆ ಹೊರಟುಬಿಡುತ್ತಾರೆ. ಹೀಗಾಗಿ ಮನೆ ಸೇರಲು ನನ್ನ ಬೆನ್ನು ಬಿದ್ದಿದ್ದಾಳೆ. ಅಪ್ಪ ಆದಾಯ ತೆರಿಗೆ ಅಧಿಕಾರಿ. ಭವ್ಯ ಬಂಗಲೆ ನೋಡಿಯೇ ‘ಭಾರೀ ಕುಳ’ಎನ್ನಬಹುದು. ಅಮ್ಮ ಮಹಿಳಾ ಸಮಾಜ, ಕ್ಲಬ್‌ಗಳ ಮೆಂಬರ್. ಅಣ್ಣ ಅಮೆರಿಕೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ಯಾದಿ..ಇತ್ಯಾದಿಗಳನ್ನು ಹೇಳಿಕೊಳ್ಳುತ್ತ ತಟಕ್ಕನೇ ಅವಳು “ಇನ್ನು ಮುಂದೆ ನಿತ್ಯ ನಾನು ಟ್ಯೂಷನ್‌ಗೆ ಬರುವಷ್ಟು ದಿನ ನೀವೇ ನನ್ನನ್ನು ಮನೆಗೆ ಬಿಟ್ಟುಬಿಡಿ”ಎಂದಳು. “ಆಗಲ್ಲ ಮೇಡಮ್.. ಈ ರೂಟು ತುಂಬಾ ಬಿಝಿ ಇರುತ್ತೆ. ಟ್ರಾಫಿಕ್‌ನಲ್ಲಿ ತುಂಬಾ ಟೈಮ್ ಹಾಳಾಗುತ್ತೆ. ನೀವು ಓಲಾ..ಊಬರ್ .. ಬುಕ್ ಮಾಡಿದ್ರೆ ಬರ್ತಾರೆ”ಎಂದೆ. “ಅದೆಲ್ಲಾ ನನಗೆ ಗೊತ್ತು. ಅವರು ಬೇಡ. ನೀವೇ ಒಪ್ಕೊಳ್ಳಿ. ದುಡ್ಡು ಎಷ್ಟಾದ್ರೂ ಕೇಳಿ. ನಮ್ಮ ಏರಿಯಾದ ಶಾಪಿಂಗ ಕಾಂಪ್ಲೆಕ್ಸನಿಂದ ನಿಮಗೆ ಬೇಕಾದಷ್ಟು ಬಾಡಿಗೆಗಳೂ ಸಿಗುತ್ವೆ”ಎಂದು ಪಟ್ಟು ಹಿಡಿದಳು. ನಾನು ದ್ವಂದ್ವದಲ್ಲಿ ಮುಳುಗಿದರೂ ಯೋಚಿಸಿದೆ. ಒಳ್ಳೆ ಅವಕಾಶ. ಇಲ್ಲಿ ಕಾಯೋ ಬದಲು ಅಲ್ಲೇ ಹೊಡೀಬಹುದು. ಒಂದು ಲಾಂಗ್ ರೂಟ್ ಬಾಡಿಗೆಯಂತೂ ಫಿಕ್ಸು ಎನಿಸಿ ಒಪ್ಪಿಕೊಂಡೆ. ಹುಡುಗಿ ಫುಲ್ ಖುಷಿಯಾಗಿ“ಹರ‍್ರೇ..”ಎಂದಳು. ನನಗೋ.. ಒಮ್ಮೆ ಅಚ್ಚರಿ.. ಮತ್ತೊಮ್ಮೆ ನಗು..ಅದೇಕೆ ಈ ಹುಡುಗಿ ನನ್ನನ್ನು ಹಚ್ಚಿಕೊಳ್ಳುತ್ತಿದ್ದಾಳೆ ಎನ್ನುವ ಆತಂಕ.             ದಿನಗಳು ಓಡುತ್ತಿದ್ದವು. ಬಿಡುವೇ ಇರದಂತೆ.. ಆಟೋ ಕೂಡ ಹಾಗೇ ಹೆಬ್ಬಾಳಕ್ಕೆ ಓಡುತ್ತಿತ್ತು. ಅವಳು ತನ್ನ ತಾಯಿ, ತಂದೆ, ಗೆಳತಿಯರ ಬಗ್ಗೆ ನಿತ್ಯವೂ ಹೇಳುತ್ತಿದ್ದಳು. ಒಬ್ಬ ಆಪ್ತ ಸ್ನೇಹಿತೆಗೆ.. ಹಿತಚಿಂತಕರಿಗೆ ಹೇಳುವಂತೆ.. “ಅಪ್ಪ ತುಂಬಾ ಸ್ಟಿçಕ್ಟ. ಮೊದಲು ಮಾಮೂಲಿಯಾಗಿದ್ದರು. ನನ್ನನ್ನು, ಅಣ್ಣನನ್ನು ಚೆನ್ನಾಗಿ ಮಾತನಾಡಿಸುತ್ತ ಪಿಕ್ಚರ್, ಪಾರ್ಕುಗಳಿಗೆಲ್ಲ ಕರೆದೊಯ್ಯುತ್ತಿದ್ದರು. ನಮ್ಮದೊಂದು ಮಧ್ಯಮ ವರ್ಗದ ಕುಟುಂಬವಾಗಿರುವವರೆಗೂ ಎಲ್ಲ ಚೆನ್ನಾಗೇ ಇತ್ತು. ಅಮ್ಮ ನಮ್ಮ ಬೇಕುಬೇಡಗಳನ್ನು ಪೂರೈಸುತ್ತ ಮನೆಗೆ ಆಧಾರವಾಗಿದ್ದಳು. ವಾರವಾರವೂ ಹೊಸ ತಿಂಡಿ, ಅಡಿಗೆ ಮಾಡೋಳು. ನಾವು ಅವಳಿಗೆ ಸಹಾಯ ಮಾಡುತ್ತಿದ್ದೆವು. ನಾನೂ ಸ್ನೇಹಿತೆಯರೊಂದಿಗೆ ಆಟ, ಓದು.. ಪಿಕ್ಚರ್ ಎಂದೆಲ್ಲ ಹಾಯಾಗಿದ್ದೆ. ಅಪ್ಪನಿಗೆ ಪ್ರಮೋಷನ್ ಆಗಿ ಇನ್‌ಕಮ್‌ಟ್ಯಾಕ್ಸ ಆಫೀಸರ್ ಆದ ಮೇಲೆ ಮನೆಯ ಚಿತ್ರವೇ ಬದಲಾಯಿತು. ಬಂಗಲೆ ದೊಡ್ಡದಾದಷ್ಟೂ ನಾವೆಲ್ಲ ದೂರವಾದೆವು. ನಮ್ಮೊಂದಿಗೆ ಮಾತನಾಡಲು ಅಪ್ಪನಿಗೆ ಸಮಯವೇ ಇರುವುದಿಲ್ಲ. ವಿಪರೀತ ಮೂಡಿಯಾಗಿ ಸದಾ ವ್ಯವಹಾರಗಳಲ್ಲೇ ಮುಳುಗಿ ಎಲ್ಲ ಮರೆತುಬಿಡುತ್ತಾರೆ. ನನ್ನ ಅಕೌಂಟಿಗೆ ದುಡ್ಡು ಹಾಕುವುದನ್ನು ಬಿಟ್ಟು.. .. ಎಲ್ಲವನ್ನೂ. ಅಮ್ಮ ಸದಾ ಕ್ಲಬ್‌ನ ಮೀಟಿಂಗಿನಲ್ಲೋ.. ಮಹಿಳಾ ಸಮಾಜದ ಸೋಷಿಯಲ್ ವರ್ಕಿನ ಹೆಸರಿನ ಫಂಕ್ಷನ್‌ಗಳಲ್ಲೋ ಲೀಡರ್ ಆಗಿ ಮಿಂಚುತ್ತಾರೆ. ಅದಕ್ಕೆ ಬ್ಯೂಟಿ ಪಾರ್ಲರ್‌ಗೆ ಹೆಚ್ಚು ಟೈಮು, ದುಡ್ಡು ಹಾಕ್ತಾರೆ. ನನಗೋಸ್ಕರ ಯಾರ ಬಳಿಯೂ ಸಮಯವಿಲ್ಲ.”ಎಂದಾಗ ನನಗಾಗಿ ಊಟ, ತಿಂಡಿ ಸಿದ್ಧ ಮಾಡಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ “ನಾಗಾ.. ಒಂತುತ್ತು ತಿಂದು ಹೋಗೋ.. ಹಸಿದುಕೊಂಡು ಕೆಲಸ ಮಾಡ್ಬಾರ್ದು ಮಗಾ”ಎಂದು ಅಲವತ್ತುಕೊಳ್ಳುವ ನನ್ನಮ್ಮನ ನೆನಪಾಗಿತ್ತು. ಈ ರೀತಿಯ ಬಡ ಸಿರಿವಂತಿಕೆಗಿಂತ ನನ್ನಂಥವರ ಹೊಟ್ಟೆ ತುಂಬಿದ..ಪ್ರೀತಿ ತುಂಬಿದ ಶ್ರೀಮಂತ ಬಡತನವೇ ಲೇಸು ಎನಿಸಿತು.  “ಅಣ್ಣ ಅಮೆರಿಕದಿಂದ ಆಗಾಗ ಫೋನ್ ಮಾಡ್ತಿರ್ತಾನೆ. ಅವನಿಗೆ ಇಲ್ಲಿ ಬರಲು ಇಷ್ಟವೇ ಇಲ್ಲ. ಇಲ್ಲಿನ ರೀತಿ, ನೀತಿಗಳೊಂದಿಗೆ ಅಪ್ಪನ ಲಂಚಗುಳಿತನ, ಭ್ರಷ್ಟಾಚಾರ, ಅಮ್ಮನ ಬೂಟಾಟಿಕೆ, ಆಡಂಬರ.. ಯಾವುದೂ ಇಷ್ಟವಾಗಲ್ಲ” ಇತ್ಯಾದಿ ವಿವರಗಳು ನಾನು ಕೇಳದೆಯೇ ನನಗೆ ದೊರಕಿದ್ದವು. ನಾನು ಬರೀ ‘ಹ್ಞೂಂ..’ಗುಡುವ ಯಂತ್ರವಾಗಿದ್ದೆ. ಆದರೆ ಮನದ ಮೂಲೆಯಲ್ಲಿ ತಟ್ಟನೆ ‘ಹಾಗಾದರೆ ಕಾಳು ಹಾಕಿದವರಿಗೆ ದೊಡ್ಡ ಸಾಮ್ರಾಜ್ಯವೇ ದೊರಕುವುದುಂಟು’ಎನಿಸಿದ್ದು ಸುಳ್ಳಲ್ಲ. “ಮನೇಲಿ ಅಡಿಗೆಯವಳು, ಕೆಲಸದವಳು, ಮಾಲಿ.. ಬಿಟ್ಟರೆ ಯಾರಿರುವುದಿಲ್ಲ. ದೊಡ್ಡ ಸುಂದರ ಮನೆಯನ್ನು ಅವರೇ ಎಂಜಾಯ್ ಮಾಡ್ತಾರೆ. ಎಲ್ಲರೂ ರಾತ್ರಿಯೇ ಬರುವುದು. ಅದಕ್ಕೇ ಸಿ.ಸಿ.ಟಿವಿ. ಬೇರೆ ಹಾಕಿಸಿದ್ದಾರೆ”ಎಂದು ನಕ್ಕಳು. ವಿಷಾದಭರಿತ ನಗೆ. ‘ತುಂಬಾ ಮುಗ್ಧೆ’ಎನಿಸಿತು. ಶ್ರೀಮಂತಿಕೆಯ ಮೆಟ್ಟಿಲೇರುವ ಹುಚ್ಚಿನಲ್ಲಿ ಅಮಾಯಕ ಮನವನ್ನು ಮರೆತಿದ್ದಾರೆ ಎಂಬ ಬೇಜಾರೂ ಸೇರಿಕೊಂಡಿತು. ಯಾರ ಅಕ್ಕರೆಯೂ ಸಿಗದ ಶ್ರೀಮಂತ ಸಕ್ಕರೆಯ ಗೊಂಬೆ ಪ್ರೀತಿಗೆ.. ವಿಶ್ವಾಸಕ್ಕೆ ಹಂಬಲಿಸುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ಯಾವ ವಿಷಯ ಹೇಳಬೇಕು.. ಹೇಳಬಾರದೆಂಬ ಅರಿವಿಲ್ಲದೇ ಮನೆಯ ಚಿತ್ರವನ್ನೆಲ್ಲ ಬಿಡಿಸಿಡುತ್ತಿದ್ದಾಳೆ. ಮಧ್ಯಾಹ್ನ ಹೋಗಿ ಕೊಳ್ಳೆ ಹೊಡೆಯಬಹುದು ಎನಿಸಿ ನಗು ಬಂತು. ಮಳೆಗಾಲ ಆರಂಭವಾಗಿತ್ತು. ತುಂತುರಾಗಿ ನೀರ ಧಾರೆ ಸುರಿಯತೊಡಗಿತ್ತು. ಆಟೋ ಹೆಬ್ಬಾಳಕ್ಕೆ ನಿತ್ಯವೂ ಓಡುತ್ತಿತ್ತು. “ಮಳೆಗಾಲ.. ಕಾರಲ್ಲೇ ಓಡಿಯಾಡಬಹುದಲ್ಲ..”ಎಂದೆ. ಅದಕ್ಕೆ ಅವಳು “ಹ್ಞಾಂ, ಅಪ್ಪ ಕೂಡ ಅದನ್ನೇ ಹೇಳಿದರು. ಡ್ರೈವರ್‌ನ ಕಳಿಸ್ತೀನಿ ಅಂದ್ರು. ನಾನೇ ಕ್ಯಾಬ್ ಬುಕ್ ಮಾಡ್ಕೋತೀನಿ ಅಂದೆ. ನಾನು ಆಟೋದಲ್ಲಿ ಓಡಿಯಾಡುವುದು ಅವರ ಅಂತಸ್ತಿಗೆ ಕಡಿಮೆ ಅಂತಾರೆ. ಈಗ ನಿತ್ಯ ನಾನು ಮನೆಗೆ ಹಿಂತಿರುಗುವಾಗ ಮನೇಲಿ ಯಾರೂ ಇರಲ್ಲ. ನೋಡಲ್ಲ..” ಎಂದಳು. “ಫ್ರೆಂಡ್ಸ ಜೊತೆ ಕ್ಯಾಬ್‌ನಲ್ಲೂ ಹೋಗಬಹುದು”ಎಂದೆ. “ಫ್ರೆಂಡ್ಸಾ.. ಶಬ್ದಾನೇ ಮರೆತು ಎಷ್ಟೋ ದಿನ ಆದಂಗಾಗಿದೆ. ಮೊದಲು ನಾವು ಚಿಕ್ಕ ಮನೇಲಿದ್ದಾಗ ತುಂಬಾ ಜನ ಫ್ರೆಂಡ್ಸ ಇದ್ದರು. ನಾವೆಲ್ಲ ಸಿನಿಮಾ, ಮಾಲ್, ಶಾಪಿಂಗ್ ಅಂತ ಓಡಾಡ್ತಿದ್ವಿ. ಎಲ್ಲರೂ ಕೊಳ್ಳೋದು ಜಾಸ್ತಿ ಇರಲಿಲ್ಲವಾದರೂ ವಿಂಡೋ ಶಾಪಿಂಗ್ ಮಾಡಿದ್ದೇ ಹೆಚ್ಚು. ಸಿನಿಮಾ ಅಂತೂ ಒಂದೂ ಬಿಡದೇ ನೋಡ್ತಿದ್ದೆವು. ಕನ್ನಡ, ಹಿಂದಿ, ತೆಲಗು, ತಮಿಳು, ಇಂಗ್ಲಿಷ್.. ನೋಡಿ ಮಜಾ ಮಾಡ್ತಿದ್ದೆವು. ಕನ್ನಡ ಸಿನಿಮಾದ ಡೈಲಾಗ್‌ಗಳನ್ನ ಉರು ಹೊಡೆದು ಹೇಳಿದ್ದೇ ಹೇಳಿದ್ದು. ದೊಡ್ಡ ಮನೆಗೆ ಬಂದ ಮೇಲೆ ಅವರು ಅಮ್ಮ, ಅಪ್ಪನಿಗೆ ಇಷ್ಟವಾಗಲಿಲ್ಲ. ಬಿಡಿಸಿಬಿಟ್ರು. ಅಮ್ಮ ತೋರಿಸಿದ ಹೈಕ್ಲಾಸ್ ಒಣ ಡಂಭಾಚಾರದ ಫ್ರೆಂಡ್ಸ

ಸಿನಿಮಾ ಅಲ್ಲ… ಜೀವನ Read Post »

ಕಾವ್ಯಯಾನ

ಒಲವಧಾರೆ ಜಯಶ್ರೀ.ಭ.ಭಂಡಾರಿ. ಬದುಕು‌ ಅದ್ಹೇಗ್ಹೆಗೊ ಸಾಗಿತ್ತು ತನ್ನ ಪಾಡಿಗೆಮಧ್ಯರಾತ್ರಿ ಫೋನ ರಿಂಗಣಿಸಿ ಹಾಡಿತುಭಯದಲಿ ಕಣ್ಣುಜ್ಜುತ್ತಾ ಹಲೋ ಎಂದೆಕಂಗ್ಲೀಷಿನಲ್ಲಿ‌ ಏನೋ ಉಲಿಯಿತುಒರಟು ದನಿ.. ಮತ್ತೆ ಮತ್ತೆ ಫೋನ ರಿಂಗುಣಿಸಿ ಹೇಗೋನಂಟಿನ ಗಂಟು ಶುರುವಾಯಿತುಹೀಗೆ‌ ಬಂದ ನೀನು ಹಾಗೆ ಹೋಗುವೆಅಂದುಕೊಂಡಿದ್ದೆ ಆದರೆ ಆದದ್ದೆ ಬೇರೆ. ಮನದ ಕಾಮನ ಬಿಲ್ಲು ಕಮಾನು ಕಟ್ಟೀತುಅಂದುಕೊಂಡಿರಲಿಲ್ಲ ಆಗಂತುಕನೆ..ನೀನು ಗೆಳೆಯನೇ ನೂರು ಬಾರಿ ಯೋಚಿಸಿದೆನಿನ್ನ ನಿನ್ನೆಗಳ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ. ನನ್ನ ನಾಳೆಗಳು ಏನಾಗುತ್ತವೆಯೋ ತಿಳಿದಿಲ್ಲ.ನಾವಿಬ್ಬರೂ ಒಂದಾಗಿ ಪಯಣಿಸಲು ಸಾದ್ಯವೆಒಂದೇ ದೋಣಿಯಲಿ ಸಾಗುವದು ಸಾಧುವೆ.ಹಂಬಲದ ಹರಿಗೋಲು ಹಾರೈಸಲಿ ಒಲವೇ.. ಮೊದಮೊದಲು ಆಸಕ್ತಿಯಿಲ್ಲದ ಭಾವನೆಗಳುಈಗ ನಿನ್ನ ನೆನಪುಗಳಿಗೆ ಮುಪ್ಪು ಎನ್ನುವುದೇ ಇಲ್ಲಸದಾ ನಿನ್ನ ನೆನಪಲಿ ಬೆಂದ ಹೃದಯದ ಜ್ವರಕೂನಿನ್ನ ನೆನಪೆ ಮದ್ದು ಕಣೋ ಮಹಾರಾಯಾ ಮಲಗಿದ್ದ ಭಾವನೆಗಳನ್ನು ಬಡಿದೆಬ್ಬಿಸುವ ಹಠಏತಕೋ ಹೇ ಗೆಳೆಯ ಅರಿಯೆ ನಾ ಹೇಳು ನೀಈ ಬದುಕನ್ನು ಎಲ್ಲಿಗೆ ಕೊಂಡೊಯ್ಯುತ್ತಿಯಾವ ದಡ ಸೇರಿಸುತ್ತಿ ನದಿಯಾಗಿ ಹರಿದು ಬರಲೇ. ನೀನಾಡಿದ ಮಾತುಗಳನ್ನೇ ಹೆಕ್ಕಿ ಹೆಕ್ಕಿಕವನವಾಗಿರಿಸಿರುವೆ ನೋಡು ಬಾ ಗೆಳೆಯಾಮಿಂದ ಕಣ್ಣಂಚು ಅದರುವ ಅಧರಗಳುಕಾಯುತ್ತಿವೆ ನಿನ್ನಾಗಮನಕ್ಕಾಗಿ …ಪ್ರೀತಿಯಿಲ್ಲದೆ ಜಗವಿಲ್ಲ ಮತ್ತೆ ಮತ್ತೆ ಸಾಬಿತಾಗಲಿ.* ************************************

Read Post »

ಕಾವ್ಯಯಾನ

ಪ್ರೇಮಮೂರುತಿ ಆಶಾ ಆರ್ ಸುರಿಗೇನಹಳ್ಳಿ ಬಿಕ್ಕುತ್ತಿದ್ದವು..ಮೌನವೊದ್ದು,ಸೊರಗುತ್ತಿದ್ದ ಕನಸುಗಳು..ಹಗಲು-ರಾತ್ರಿಗಳ ಪರಿವಿಲ್ಲದೆ,ಏರುತ್ತಿದ್ದ ನಶೆಗೂ..ನಿಶೆಯ ಗಾಢ ಮೌನವೇಒಲವ ಆಲಿಂಗನ. ಮಡುಗಟ್ಟಿದ ನೋವುಗಳುಅಧರಗಳ ಕಂಪಿಸಿತೋಯಿಸುವಾಗ..ವಿರಹಕ್ಕಾಗಿ ಚಡಪಡಿಕೆಯೊ?ಸನಿಹಕ್ಕಾಗಿ ಬೇಡಿಕೆಯೊ?ಅಶ್ರುವಿಗೂ ಗೊಂದಲ ಮೂಡಿಉರುಳುರುಳಿ ಸತ್ತವು.. ನೋವುಗಳೊ? ನೆನಪುಗಳೊ?ಖಾಲಿಯಾದ ದುಃಖ,ಉಳಿಸಿದ್ದೇನೆಂಬುದೇ ಗುಟ್ಟುಬಯಸಿದ್ದು ಮಾಯಾಜಿಂಕೆಯಂತೆಸರಿಯುತ್ತಲೇ ಇತ್ತು.. ಒಲವಾಂಕುರ ಜಿನುಗುತಾಪುಟಿ ಪುಟಿದು ನೆಗೆವಾಗಅವಳ ಒದ್ದಾಟವೆಲ್ಲಾನಿರರ್ಥಕವಾಗಿ..ಒಲುಮೆಯ ಘಮಲುಬಿಡದೆ ಪಸರಿಸುತಿತ್ತು.. ಆ ನೋವು-ನಲಿವ ಮಂಥನದಲೂನೋವಿನದೆ ಮೇಲುಗೈ ಆದಾಗವಿಷಕಂಠನಂತವಳುದಿನವೂ ನೊವನುಣ್ಣುತಾಭರವಸೆಯ ದೀವಿಗೆ ಬೆಳಗುತಾಒಲವ ದೀಪವಚ್ಚುವಪ್ರೇಮಮೂರುತಿಯಾದಳು..ದೀಪದ ಬೆಳಕಲಿಬದುಕಿನ ಸತ್ಯವ ಕಂಡಳು..! ********************************

Read Post »

ಕಾವ್ಯಯಾನ

ಹರಿಯೇ ಪ್ರೇಮಗಂಗೆ…. ವಿನುತಾ ಹಂಚಿನಮನಿ ಅಂದು ನೀನೂರಿದ ಪ್ರೀತಿಯ ಬೀಜಚೆಂದದಿ ಬೇರೂರಿ ಮನದಲಿ ಬೆಳೆದಿತ್ತುಕೊಂದು ಹಾಕಿದರೂ ನೀ ಕೈಯಾರೆ ಕಿತ್ತುಮತ್ತೆ ಮತ್ತೆ ಚಿಗುರಿ ಕೊನರಿ ಕೊನೆಗೆಸತ್ತುಹೋಗುವ ಬದಲು ಜೀವ ಹಿಡಿದುಸುಪ್ತವಾಗಿದೆ ನೆಲದಾಳದಲಿ ಉಳಿದು ಅಂದು ನೀನುರಿಸಿದ ಒಲವ ದೀವಿಗೆಗೆಲುವಾಗಿ ಉರಿದು ಬೆಳಕ ಚೆಲ್ಲಿತ್ತುಬಿರುಗಾಳಿಯ ಹೊಡೆತ ಸಹಿಸಿತ್ತುನಿನ್ನ ಪ್ರೀತಿಯ ತೈಲವಿಲ್ಲದೆ ಇಂದುಉರಿಯುವ ಛಲ ಬಿಡದೆ ಮುರುಟಿಬರಿ ಬತ್ತಿ ಸುಟ್ಟು ಹೋಗುತಿದೆ ಕರಟಿ ಅಂದು ನೀ ಹರಿಸಿದ ಪ್ರೇಮಗಂಗೆರಭಸದಿಂದ ಮೈದುಂಬಿ ಹರಿದಿತ್ತುನಿನ್ನ ಸೇರುವ ಆಸೆಯಲಿ ಸಾಗಿತ್ತುಭರವಸೆ ಕಾಣದಿರಲು ತಡವರಿಸಿದೆಅಡೆತಡೆಗಳಿಗೆ ಬೇಸತ್ತು ದಿಕ್ಕುಗಾಣದೆಇಂದು ಕ್ಷೀಣಿಸಿ ಗುಪ್ತಗಾಮಿನಿಯಾಗಿದೆ ಅಂದು ನೀನಿತ್ತ ವಚನದಲಿ ಜೇನಿತ್ತುಮಧುರ ಸುಧೆ ಮನಸು ಆವರಿಸಿತ್ತುಕನಸಿನ ಲೋಕದಲಿ ಮತ್ತ ತೇಲಾಡಿಸಿತ್ತುಪ್ರೇಮಾಮೃತದ ಕಲಶ ಬರಿದಾಗಿಸಿದೆಇಂದು ದೂರವಾಗುವ ಶಿಕ್ಷೆಯ ವಿಧಿಸಿದೆನನ್ನಾವ ಅಪರಾಧಕೆ ಪ್ರೀತಿ ವಿಷವಾಗಿದೆ ಹೃದಯಪೀಠದಲಿ ಸ್ಥಾಪಿತ ನಿನ್ನ ಮೂರ್ತಿದೇವರಂತೆ ಪೂಜೆಗೊಳ್ಳುತಿರುವದ ಮರೆತಿಬಂದೊಮ್ಮೆ ನೋಡುವೆಯಾ ನನ್ನಯ ಸ್ಥಿತಿನನ್ನಾತ್ಮ ಕಾಯ್ದಿದೆ ಹಗಲಿರುಳು ನಿನಗಾಗಿಕಲ್ಲಾಗದಿರು ನಲ್ಲ ನೀ ನನ್ನ ಭಾವನೆಗಳಿಗೆನೆನೆ ಅಂತರಂಗದ ಭಾವ ಸಾಕ್ಷಿಯಾದ ಗಳಿಗೆ *************************

Read Post »

ಕಾವ್ಯಯಾನ

ವ್ಯಾಲೆಂಟನ್ಸ ಡೇ ಹನಿಗಳು ನಾಗರಾಜ್ ಹರಪನಹಳ್ಳಿ ೧-ಅವಳ ಎದೆ ಬಗೆದುನೋಡಿಅಲ್ಲಿ ಸಿಗುವುದು ಇನಿಇನಿ ಎಂದರೆ ಬೇರಾರೂ ಅಲ್ಲಅದು ಇಬ್ಬನಿಯ ಹನಿ -೨- ಏಕಾಂತದಲಿಸುಮ್ಮನಿದ್ದರೂಪಿಸುಗುಟ್ಟಿದಂತಾಗುವುದುಪ್ರೇಮ -೩- ನೀನು dp ಕಾಣದಂತೆಮಾಡಬಹುದುಮೆಸ್ಸೆಜ್ ಸಹ ಮಾಡದಿರಬಹುದುಅಂತಿಮವಾಗಿ ನಿನ್ನ ಬಿಂಬದನೆನಹು ನಾನೇ -೪-ನಿನ್ನ ಹೃದಯವನ್ನುಕೇಳುಅದರ ಮಾತ ಆಲಿಸುಅಲ್ಲಿನ ಪಿಸುಮಾತು ಇನಿ -೫-ಏನಾದರೂ ಏನಂತೆಗೋಡೆ ಕಟ್ಟಿಆಣೆ ಮಾಡಿಸಿಕೊಂಡುತಡೆದಿರಬಹುದು ನಿನ್ನನಿನ್ನ ಮೊದಲ ಮತ್ತುಕೊನೆಯ ಆಯ್ಕೆನಾನೇ ….ಹಾಗೆಂದು ನೀ ಹೇಳಿದಮಾತುನನ್ನ ಸುತ್ತ ಗಿರಕಿ ಹೊಡೆಯುತ್ತಿದೆ -೬-ಪ್ರೇಮಿಸುವುದ ಕಲಿಸಿನೀ ಹಠಾತ್ಹೊರಟು ಹೋಗಬಹುದು ಎಂದುನಾ ಕನಸಲ್ಲೂ ಯೋಚಿಸಿರಲಿಲ್ಲಹಾಗೆ ಹೋರಟು ಹೋದಮೇಲೆಇಷ್ಟು ಪ್ರಬಲವೆಂದೂ….. -೭- ನಾ ಎಷ್ಟು ದಟ್ಟವಾಗಿರುವೆನಿನ್ನಲ್ಲಿ ?ಮಾತಿಲ್ಲದ ನಂತರಎಂದು ; ನೀನಿದ್ದಲ್ಲಿಂದಒಳಗೇ ಪಿಸುಗುಡುತ್ತಿರಬಹುದು ಕೇಳು ; ನನ್ನೂರಿನಿಂದ ನನ್ನುಸಿರುನಿನ್ನ ತಾಗುತ್ತಿದೆ‌ ;ಎದೆ ಬಡಿತ ನಿನಗೆಕೇಳುತ್ತಿದೆ… -೮-ಕಟ್ಟಳೆಯ ಕಾರಣಕ್ಕೆದೂರವಿಡಬಹುದುಮರದ ತುದಿ,‌ಟೊಂಗೆಕತ್ತರಿಸಬಹುದುಮನದ ಭೂಮಿಗಿಳಿದ‌ ಬೇರುಕಿತ್ತೆಸೆಯುವುದು ಸುಲಭವಲ್ಲ -೯-ಅದೆಷ್ಟು ದಿನ ಮಾತು, ನೋಟ‌ತಡೆಯಬಹುದು ?ಬೆಳಕು ಗಾಳಿಯಬಿಟ್ಟು ಮನುಷ್ಯ ಬದುಕಬಹುದು? -೧೦- ಇನಿಯ ಜಾಡುನಿನ್ನ ಕಡೆಗೆನಿನ್ನೂರ ಕಡೆಗೆಒಂದಿಲ್ಲೊಂದು ದಿನಪ್ರೀತಿ ಆಚೆ ದಡವತಲುಪುತ್ತದೆಕಾಯುತ್ತಿರು, ಅಷ್ಟೇ **************************************

Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-03 ಮುತ್ತಯ್ಯ ಕೊಡುವ ಅರ್ಧ ಸಂಬಳ ಗೋಪಾಲನ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅವನು ತನ್ನ ಗುಡಿಸಲನ್ನು ಬಾಡಿಗೆದಾರರಿಗೆ ಪುಕ್ಕಟೆ ನೀಡಿದ್ದೇನೆಂದು ಕಣ್ಣುಕಟ್ಟಿಗೆ ಹೇಳುತ್ತಿದ್ದ. ಆದರೆ ಅದರ ಬಾಡಿಗೆಯನ್ನು ಗೋಪಾಲ ದಂಪತಿಯ ದುಡಿಮೆಯಿಂದಲೇ ಸೂಕ್ಷ್ಮವಾಗಿ ವಸೂಲಿ ಮಾಡುತ್ತಿದ್ದ. ಈ ಸಂಗತಿಯನ್ನು ಅ‍ರಿತಿದ್ದ ಗೋಪಾಲನೂ ಅವನ ತೋಟದ ಕೆಲಸಕ್ಕೆ ನಿತ್ಯ ಹೋಗುವುದನ್ನು ನಿಲ್ಲಿಸಿಬಿಟ್ಟ. ವಾರದಲ್ಲಿ ಎರಡು, ಮೂರು ದಿನ ಮಾತ್ರ ದುಡಿಯುತ್ತ ಉಳಿದ ದಿನಗಳಲ್ಲಿ ಹೊರಗಡೆ ಹೆಚ್ಚಿಗೆ ಸಂಬಳಕ್ಕೆ ಹೋಗುತ್ತಿದ್ದ. ಆದರೆ ಅದು ಮುತ್ತಯ್ಯನಿಗೆ ಹಿಡಿಸುತ್ತಿರಲಿಲ್ಲ. ಅವನು ಆಗಾಗಗೋಪಾಲನ ಗುಡಿಸಲಿನೆದುರು ಬಂದು,‘ಏನಲೇ ಗೋಪಾಲ, ನೀನು ವಾರ ಪೂರ್ತಿ ಕೆಲಸಕ್ಕೆ ಯಾಕೆ ಬರುವುದಿಲ್ಲ ಮಾರಾಯಾ, ಹೊರಗೆ ದುಡಿಯುವುದಕ್ಕಾ ನಿನಗೆ ಮನೆ ಕೊಟ್ಟಿರುವುದು…?’ ಎಂದು ಗದರಿಸುತ್ತಿದ್ದ. ಆಗೆಲ್ಲ ಗೋಪಾಲನೂ,‘ಅಯ್ಯೋ ಹಾಗೆಲ್ಲ ಭಾವಿಸಬೇಡಿ ಧಣಿ, ನಿಮ್ಮಲ್ಲಿಯೇ ದುಡಿಯಲಿಕ್ಕೆ ಬಂದವರಲ್ಲವ ನಾವು. ಆದರೂ ಕೆಲವೊಮ್ಮೆ ನಿಮ್ಮ ತೋಟದಲ್ಲೂ ಕೆಲಸ ಕಮ್ಮಿ ಇರುತ್ತದಲ್ಲ ಆವಾಗ ಸಂಜೀವ ಶೆಟ್ಟರೋ ಡ್ಯಾನಿ ಪರ್ಬುಗಳೋ ತಮ್ಮ ಹೊಲ, ತೋಟಗಳ ಅಗತ್ಯದ ಕೆಲಸಕ್ಕೆ ಕರೆಯುತ್ತಾರೆ. ಹೋಗಿ ಮಾಡಿಕೊಟ್ಟು ಬರುತ್ತೇನಷ್ಟೆ. ಅವರೂ ನನ್ನ ಕಷ್ಟದ ಕಾಲದಲ್ಲಿ ಸಹಾಯ ಮಾಡುತ್ತಾರೆ. ಇಲ್ಲಿ ನಾನಿಲ್ಲದಿದ್ದರೂ ರಾಧಾ ಬರುತ್ತಾಳಲ್ಲ ಧಣಿ…!’ ಎಂದು ಅವನನ್ನು ಪುಸಲಾಯಿಸುತ್ತಿದ್ದ. ರಾಧಾಳ ಹೆಸರೆತ್ತುತ್ತಲೇ ಮುತ್ತಯ್ಯ ಮೃದುವಾಗುತ್ತಿದ್ದ. ಅವಳ ಸೌಂದರ್ಯಕ್ಕೆ ಅವನು ಯಾವತ್ತೋ ಮನ ಸೋತಿದ್ದ. ಎರಡು ಮಕ್ಕಳ ತಾಯಿಯಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಅವಳ ಮೋಹಕ ಚೆಲುವಿನ್ನೂ ಮಾಸಿರಲಿಲ್ಲ. ಹಾಲು ಬೆಳದಿಂಗಳಿನಂಥ ಅವಳ ರೂಪವು ಅವನನ್ನು ಹುಚ್ಚೆಬ್ಬಿಸುತ್ತಿತ್ತು.    ಹಾಗಾಗಿಗೋಪಾಲ ಬೆಳಿಗ್ಗೆ ಮನೆಯಿಂದ ಹೊರಡುವ ತನಕ ಅವನ ಸುಳಿವಿರುತ್ತಿರಲಿಲ್ಲ. ಅವನು ಸೈಕಲ್ ಹತ್ತಿ ‘ಹೋಗಿ ಬರುತ್ತೇನೆ ಮಾರಾಯ್ತೀ!’ ಎಂದು ಹೆಂಡತಿ ಮಕ್ಕಳಿಗೆ ಬೆಲ್ ಹೊಡೆದ ಸೂಚನೆ ದೊರೆತ ಕೂಡಲೇ ಮುತ್ತಯ್ಯನ ಸವಾರಿಯು ಗೋಪಾಲನ ಗುಡಿಸಲ ಮುಂದೆ ಪ್ರಕಟವಾಗುತ್ತಿತ್ತು. ಇವತ್ತೂ ಅದೇ ಚಪಲದಿಂದ ಬಂದಿದ್ದ. ಆದರೆ ಅಲ್ಲಿನ ದೃಶ್ಯವೊಂದು ಅವನ  ಮನಸ್ಸನ್ನು ಕೆಡಿಸಿಬಿಟ್ಟಿತು.  ‘ರಾಧಾ, ಹೇ, ರಾಧಾ ಎಲ್ಲಿದ್ದಿ ಮಾರಾಯ್ತೀ…! ಸ್ವಲ್ಪ ಹೊರಗೆ ಬಾ! ಇಲ್ಲಿ ನೋಡಿಲ್ಲಿ ನಿನ್ನ ಮಕ್ಕಳ ಅವಸ್ಥೆ! ಥೂ! ಹೊರಗೆಲ್ಲಾ ಹೇಸಿಗೆ ಮಾಡಿಟ್ಟಿದ್ದಾರೆ. ಏನಿದು ತೋಟದೊಳಗೆಲ್ಲಾ, ಭಾಷೆ ಬೇಡವಾ ನಿಮಗೆ! ಅವುಗಳನ್ನು ಕಕ್ಕಸಿನಲ್ಲಿ ಕೂರಿಸಲೇನು ದಾಡಿ ನಿಂಗೆ!’ ಎಂದು ಜೋರಾಗಿ ಸಿಡುಕಿದ. ರಾಧಾ ಅನ್ನಕ್ಕೆ ನೀರಿಡುತ್ತಿದ್ದವಳು ಮುತ್ತಯ್ಯನ ಒರಟು ಧ್ವನಿ ಕೇಳಿ ಆತಂಕದಿಂದ ಹೊರಗೆ ಬಂದಳು. ಮಕ್ಕಳಿಬ್ಬರೂ ತೋಟದ ಮೂಲೆಯಲ್ಲಿ ಕುಳಿತು ಪಂಚಾತಿಕೆ ಹೊಡೆಯುತ್ತ ಸಂಡಾಸು ಮಾಡುತ್ತಿದ್ದರು. ಆದರೆ ಮುತ್ತಯ್ಯನ ಕೆಕ್ಕರು ದೃಷ್ಟಿಗೆ ಹೆದರಿ ರಪ್ಪನೆದ್ದು ಅಪರಾಧಿಗಳಂತೆ ನಿಂತಿದ್ದರು. ರಾಧಾಳಿಗೆ ನಾಚಿಕೆಯಾಯಿತು. ಅವರತ್ತ ಹೋಗಿ ಕಿವಿ ಹಿಂಡಿ ಎಳೆದೊಯ್ದು ಒಳಗೆ ಬಿಟ್ಟು, ಆತುರಾತುರವಾಗಿ ಹೊರಗೆ ಬಂದು, ‘ತಪ್ಪಾಯ್ತು ಧಣಿ… ಮಕ್ಕಳು ಯಾವತ್ತೂ ಹೀಗೆ ಮಾಡಿದವರಲ್ಲ. ಇವತ್ತೇನಾಯಿತೋ?’ ಎಂದು ಸಂಕೋಚದಿಂದ ಹಿಡಿಯಾಗಿ ಕ್ಷಮೆಯಾಚಿಸಿದಳು. ಮುತ್ತಯ್ಯ ಅಷ್ಟಕ್ಕೇ ಮೆತ್ತಗಾದ. ‘ಹ್ಞೂಂ ಪರ್ವಾಗಿಲ್ಲ, ಬಿಡು. ಇನ್ನು ಮುಂದೆ ಅವು ಹಾಗೆ ಮಾಡದಂತೆ ನೋಡಿಕೋ. ಅವನೆಲ್ಲಿ ಹೋದ ಗೋಪಾಲ…? ತೋಟದ ಮಡಲು, ಕಾಯಿ ತಪ್ಪರಿಗೆಗಳನ್ನೆಲ್ಲಾ ಹೆಕ್ಕಿ ಮನೆಯತ್ತ ತಂದು ಹಾಕು ಅಂತ ಮೊನ್ನೆಯಿಂದ ಬೊಬ್ಬೆ ಹೊಡೆಯುತ್ತಿದ್ದೇನೆ. ಅವನಿಗದು ನಾಟುವುದೇ ಇಲ್ಲವಲ್ಲಾ! ಒಂದೋ ನೀನು ಹೆಕ್ಕಿ ಹಾಕು. ಇಲ್ಲಾ ಅವನು ಬಂದ ಕೂಡಲೇ ರಾಶಿ ಹಾಕಿಸು. ತೋಟ ನೋಡಲೇ ಬೇಸರವಾಗುತ್ತದೆ!’ ಎಂದು ಹೇಳುವಾಗ ಅವನ ದೃಷ್ಟಿ ಅವಳ ಎದೆಯ ಮೇಲೆ ನೆಟ್ಟಿತ್ತು. ಅಷ್ಟರಲ್ಲಿ ಮಕ್ಕಳಿಬ್ಬರೂ ಆಡಲು ತೋಟದತ್ತ ಓಡಿದರು.    ಅದನ್ನು ಕಂಡ ಮುತ್ತಯ್ಯ ಮೀಸೆಯಡಿಯಲ್ಲೇ ನಕ್ಕ. ರಾಧಾಳನ್ನು ಅನುಭವಿಸುವ ಬಯಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಅವನ ಮುಖಭಾವವನ್ನು ಗಮನಿಸಿದ ರಾಧಾಳಿಗೆ ಭಯ, ಮುಜುಗರ ಒಟ್ಟೊಟ್ಟಿಗಾಯಿತು. ತಲೆತಗ್ಗಿಸಿ ಎದೆಯ ಭಾಗವನ್ನು ಸೆರಗಿನಿಂದ ಮತ್ತಷ್ಟು ಮುಚ್ಚಿಕೊಳ್ಳುತ್ತ, ‘ಆಯ್ತು ಧಣಿ. ಅವರು ಬಂದ ಕೂಡಲೇ ಹೇಳುತ್ತೇನೆ. ನನಗೆ ಮನೆ ಕೆಲಸವೇ ತುಂಬಾ ಇದೆ’  ಎಂದು ಹೇಳಿ ರುಮ್ಮನೆ ಒಳಗೆ ಹೋದಳು. ಬಳುಕುತ್ತ ಕಣ್ಮರೆಯಾದ ಅವಳ ಮೈಮಾಟವನ್ನು ಕಂಡ ಮುತ್ತಯ್ಯ ಉನ್ಮತ್ತನಾಗಿ, ‘ಆಯ್ತು… ಪರ್ವಾಗಿಲ್ಲ. ನೀನೇನೂ ಮಾಡಬೇಡ. ನಿನ್ನ ಕಷ್ಟ ನನಗಿಲ್ಲಿ ‘ಎದ್ದು’ ಕಾಣುತ್ತಿದೆ!’ ಎಂದು ಆಸೆಯಿಂದ ಹೇಳಿದವನು ಸ್ವಲ್ಪಹೊತ್ತು ಅಲ್ಲೇ ಅಂಗಳದಲ್ಲಿ ಸುತ್ತಾಡುತ್ತ ಯೋಚಿಸಿದ. ಥೂ! ಈದೇವರು ಬಡ ಹೆಂಗಸರಿಗೇ ಯಾಕೆ ನಮ್ಮಂಥ ಗಂಡಸರನ್ನು ಹುಚ್ಚೆಬ್ಬಿಸುವ ರೂಪ, ಲಾವಣ್ಯವನ್ನು ಕೊಡುತ್ತಾನೋ? ಇವರ ವನಪು ವೈಯ್ಯಾರಗಳೆಲ್ಲ ನಮ್ಮ ತಲೆ ಹಾಳು ಮಾಡಿ ಬಿಡುತ್ತವೆ ಕರ್ಮದ್ದು. ನನ್ನವಳೂ ಒಬ್ಬಳಿದ್ದಾಳೆ. ಆದರೆ ಪ್ರಯೋಜನವೇನುಬಂತು? ದರಿದ್ರವಳಿಗೆ ಯಾವಾಗಲೂ ಒಂದಲ್ಲಾ ಒಂದು ಕಾಯಿಲೆ! ಮೈಬಗ್ಗಿಸಿ ದುಡಿಯದೆ ಕೂತುಂಡು ಆನೆಮರಿಯಂತಾಗಿದ್ದಾಳೆ ಲೌಡಿ. ಅಂಥವಳ ಜೊತೆ ಏಗುವುದೋ ಬಿಡುವುದೋ ದೇವರಿಗೇ ಗೊತ್ತು!    ಆದರೆ ಮನೆ ಕೆಲಸದ ನಾಗವೇಣಿ ಕೆಳ ಜಾತಿಯವಳಾದರೂ ಎಷ್ಟೊಂದು ಪಸಂದಾಗಿದ್ದಾಳೆ. ನಾನೂ ಉಪ್ಪು ಹುಳಿ ಖಾರ ತಿನ್ನುವವನಲ್ಲವಾ! ಅದಕ್ಕೇ ಆವತ್ತೊಮ್ಮೆ ಆಗುವುದಾಗಲಿ ಎಂದುಕೊಂಡು ಅವಳನ್ನು ಬಾಚಿ ತಬ್ಬಿ ಕೊಂಡದ್ದು. ಅವಳು ರಂಪ ಮಾಡಿಬಿಡುತ್ತಾಳೇನೋ ಎಂದು ಭಾವಿಸಿದ್ದೆ. ಆದರೆ ನಡೆದದ್ದು ಬೇರೆಯೇ. ಮೊದಲಿಗೆ ಬೆಚ್ಚಿಬಿದ್ದು ದಿಟ್ಟಿಸಿದವಳು ತಕ್ಷಣ ಮೆದುವಾಗಿ ನಗುತ್ತ ತೋಳ ತೆಕ್ಕೆಗೆ ಬಿದ್ದುಬಿಟ್ಟಳು. ಆವತ್ತಿನಿಂದ ಒಂದಿಷ್ಟು ಸುಖ ಅವಳಿಂದ ಸಿಗದಿರುತ್ತಿದ್ದರೆ ಈ ಕಾಡುಹಂದಿಯನ್ನು ಕಟ್ಟಿಕೊಂಡು ನಾನೇನು ಮಾಡಬೇಕಿತ್ತೋ. ಆದರೆ ಆ ನಾಗಿಯ ಗಂಡ ಕುಡ್ಚೇಲ ಮಣಿಯಾಣಿಯ ದುಡ್ಡಿನ ಪೀಡನೆ ನೆನೆದರೆ ಮಾತ್ರ ಅವಳನ್ನೂ ಮುಟ್ಟುವುದು ಬೇಡ ಅಂತನ್ನಿಸುತ್ತದೆ! ಎಂದು ತಲೆಕೊಡವಿಕೊಂಡ. ಬಳಿಕ ಮತ್ತೆ, ಈ ರಾಧಾ ಸಖತ್ ಆಗಿದ್ದಾಳೆ. ನಾಗಿಯಷ್ಟು ಚಾಲಾಕಿನವಳೂ ಅಲ್ಲ. ಗೋಪಾಲನೂ ದುರಾಸೆಯ ಮನುಷ್ಯನಲ್ಲ. ಅವಕಾಶ ಸಿಕ್ಕಿದರೆ ಇವಳನ್ನೇ ಒಲಿಸಿಕೊಂಡು ಪರ್ಮನೆಂಟಾಗಿ ಇಟ್ಟುಕೊಳ್ಳಬೇಕು! ಎಂಬ ಯೋಚನೆಯಲ್ಲಿ ತೇಲಾಡುತ್ತ ಮೆತ್ತಗೆ ರಾಧಾಳ ಮನೆಯೊಳಗೆ ಅಡಿಯಿಟ್ಟ.    ಅಷ್ಟರವರೆಗೆ ಅಡುಗೆ ಕೋಣೆಯಲ್ಲಿದ್ದ ರಾಧಾ, ಮುತ್ತಯ್ಯ ಹೊರಟು ಹೋದನೆಂದು ಭಾವಿಸಿ ಹೊರಗೆ ಬಂದವಳು ಅವನನ್ನು ಕಂಡು ನಡುಗಿಬಿಟ್ಟಳು. ಮುತ್ತಯ್ಯ ಪಡಸಾಲೆಯಲ್ಲಿ ನಿಂತಿದ್ದ. ‘ಏ…,ಏನೂ…ಏನು ಬೇ…ಕಿ…ತ್ತು…ಧಣೀ…!’ ಎಂದೆನ್ನುತ್ತ ಮೂಲೆಗೆ ಸರಿದು ನಿಂತಳು. ‘ಅರೆರೇ, ನೀನೆಂಥದು ಮಾರಾಯ್ತೀ ಇಷ್ಟೊಂದು ಹೆದರುವುದು? ನಾನೇನು ಹುಲಿನಾ, ಸಿಂಹನಾ…? ಎರಡು ಮಕ್ಕಳ ತಾಯಿ ನೀನು, ನಾನ್ಯಾಕೆ ಬಂದೆನೆಂದು ತಿಳಿಯದಷ್ಟು ಪೆದ್ದಿಯಾ…? ನಿನ್ನ ಆತಂಕ  ನನಗೂ ಅರ್ಥವಾಗುತ್ತದೆ. ಹೆದರಬೇಡ. ಸ್ವಲ್ಪ ಹೊತ್ತು ಸುಮ್ಮನಿದ್ದುಬಿಡು. ಆಮೇಲೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು!’ ಎಂದು ನಾಲಗೆಯಿಂದ ಕೆಳದುಟಿ ಸವರುತ್ತ ಮುಂದುವರೆದ. ರಾಧಾ ಮತ್ತಷ್ಟು ಬೆದರಿದಳು. ದುಃಖ ಉಮ್ಮಳಿಸಿ ಬಂತು. ಮುತ್ತಯ್ಯ ಅವಳನ್ನು ಬಾಚಿ ತಬ್ಬಿಕೊಳ್ಳಲು ಮುಂದಾದ. ಅದನ್ನು ತಿಳಿದವಳಿಗೆ ಕೆಟ್ಟ ರೋಷವೆದ್ದಿತು. ‘ಛೀ! ಮುಟ್ಬೇಡಿ ನನ್ನ! ಇಂಥ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವಾ ನಿಮಗೆ…? ನೀವೆಣಿದಂಥ ಹೆಂಗಸಲ್ಲ ನಾನು. ಮರ್ಯಾದೆಯಿಂದ ಹೊರಟು ಹೋಗಿ. ಇಲ್ಲವಾದರೆ ಜೋರಾಗಿ ಬೊಬ್ಬೆ ಹೊಡೆಯುತೇನಷ್ಟೆ!’ ಎಂದು ಒರಟಾಗಿ ಗದರಿಸಿದಳು. ನಾಗವೇಣಿಯಂತೆ ಇವಳೂ ತಾನು ಮುಟ್ಟಿದ ಕೂಡಲೇ ತೆಕ್ಕೆಗೆಬಿದ್ದು ಮಂದಹಾಸ ಬೀರುತ್ತಾಳೆಂದುಕೊಂಡಿದ್ದ ಮುತ್ತಯ್ಯನ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿಬಿಟ್ಟಿತು. ಅವನು ಅವಕ್ಕಾದವನು, ‘ಆಯ್ತು, ಆಯ್ತು ಮಾರಾಯ್ತೀ. ಕಿರುಚಬೇಡ. ನಿನಗಿಷ್ಟವಿದ್ದರೆ ಮಾತ್ರ. ಯಾರನ್ನೂ ನಾನು ಬಲವಂತ ಮಾಡುವವನಲ್ಲ. ಇರಲಿ. ಕುಡಿಯಲಿಕ್ಕೆ ಸ್ವಲ್ಪ ನೀರಾದರೂ ಕೊಡುತ್ತೀಯಾ ಇಲ್ವಾ…?’ ಎಂದ ಹುಸಿನಗುತ್ತ. ‘ನೀರೂ ಇಲ್ಲ, ಮಣ್ಣೂ ಇಲ್ಲ! ಮನೆಗೆ ಹೋಗಿ ಕುಡಿದು ಕೊಳ್ಳಿ. ಹ್ಞೂಂ ಹೊರಡಿ!’ ಎಂದು ರಾಧಾ ಇನ್ನಷ್ಟು ಕೋಪದಿಂದ ಗುಡುಗಿದವಳು ತಿರುಗಿ ಅಡುಗೆ ಕೋಣೆಗೆ ನುಸುಳಿ ದಢಾರ್ರನೇ ಕದವಿಕ್ಕಿಕೊಂಡಳು.      ಮುತ್ತಯ್ಯನಿಗೆ ಕಪಾಳಕ್ಕೆ ಹೊಡೆದಷ್ಟು ಅವಮಾನ, ಭಯಒಟ್ಟೊಟ್ಟಿಗಾಯಿತು. ರಪ್ಪನೆ ಹೊರಗೆ ಧಾವಿಸಿದ. ಅವನಿಗೆ ತಾನು ಕೆಲವೇ ಕ್ಷಣಗಳ ಹಿಂದಷ್ಟೇ ಕಂಡು ಮೋಹಿಸಿದ್ದ ರಾಧಾಳ ರೂಪವು ಈಗ ಮಹಾಕಾಳಿಯಂತಾಗಿ ಕಣ್ಣೆದುರು  ಸುಳಿಯಿತು. ‘ಅಬ್ಬಾ! ಇವಳೇ…ಇಷ್ಟೊಂದು ಜೋರಿದ್ದಾಳಾ…!’ ಎಂದುಕೊಂಡವನು, ಯಾರಾದರೂ ಕೇಳಿಸಿಕೊಂಡರಾ…? ಎಂದು ಒಮ್ಮೆಸುತ್ತಮುತ್ತ ಕಳ್ಳ ದೃಷ್ಟಿ ಬೀರಿದ. ಪುಣ್ಯಕ್ಕೆ ಯಾರೂ ಕಾಣಿಸಲಿಲ್ಲ. ಮತ್ತೆ ಅಲ್ಲಿ ನಿಲ್ಲಲಾಗದೆ ರಪರಪನೇ ತೋಟದತ್ತ ಹೆಜ್ಜೆ ಹಾಕಿದ. ಆದರೆ ಅವನ ಹಸಿವಿನ್ನೂ ತಣಿದಿರಲಿಲ್ಲ. ಆ ನಿರಾಶೆಯು ಅವಳ ಮೇಲಿನ ಕೋಪವಾಗಿ ಮಾರ್ಪಟ್ಟಿತು. ‘ಅಲ್ಲಾ, ಎಷ್ಟೊಂದು ಸೊಕ್ಕು ಈ ಹಡೆರಂಡೆಗೆ! ಮನೆ ಕೊಟ್ಟ ಧಣಿ ಅಂತಾನ್ನೂ ಲೆಕ್ಕಿಸದೆ ನಾಯಿಯನ್ನು ಗದರಿಸುವಂತೆ ಗದರಿಸಿಬಿಟ್ಟಳಲ್ಲ! ಇವಳು ಉರುವಲು ಬೇಕೆಂದು ಬಂದಾಗಲೆಲ್ಲ ಪಾಪ ಬಡಹೆಂಗಸು ಎಂದುಕೊಂಡು ಒಣ ಮಡಲು, ತಪ್ಪರಿಗೆ, ತೆಂಗಿನ ಹೆಡೆ, ಕಾಯಿ, ಬಾಳೆಹಣ್ಣುಗಳನ್ನೆಲ್ಲ ಬಾಚಿ ಬಾಚಿ ಕೊಡುತ್ತಿದ್ದೆನಲ್ಲ. ಅವಕ್ಕೆಲ್ಲ ಬೆಲೆಯೇ ಇಲ್ಲವಾ ಹಾಗಾದರೆ? ಇಲ್ಲ, ಇನ್ನು ಇವಳನ್ನು ಸುಮ್ಮನೆ ಬಿಡಲಿಕ್ಕಿಲ್ಲ. ಇಂದಲ್ಲ ನಾಳೆ ಅನುಭವಿಸಿಯೇ ತೀರಬೇಕು. ಇನ್ನೂ ಸ್ವಲ್ಪ ಕಾಲ ಮನವೊಲಿಸುವ ನಾಟಕವಾಡುವ. ಒಲಿದರೆ ಗೆದ್ದಳು. ಇಲ್ಲವಾದರೆ ಸೆರಗು ಹರಿದಾದರೂ ಚಿಂತೆಯಿಲ್ಲ, ಒಮ್ಮೆ ರುಚಿ ನೋಡಲೇಬೇಕು! ಎಂದು ನಿರ್ಧರಿಸಿ ಸ್ವಲ್ಪ ಸ್ಥಿಮಿತಕ್ಕೆ ಬಂದ. ಮರುಕ್ಷಣ ಅವನಿಗೆ ಮತ್ತೊಂದು ಯೋಚನೆ ಹುಟ್ಟಿತು. ಇವಳು ಕೋಪದ ಬರದಲ್ಲಿ ಗಂಡ ಬಂದ ತಕ್ಷಣ ತನ್ನ ಮೇಲೆ ಚಾಡಿ ಹೇಳದೆ ಬಿಡಲಾರಳು. ಅವನಿಗೆ ತಿಳಿದರೆ ಕಷ್ಟ. ಹಾಗಾಗಲು ಬಿಡಬಾರದು ಎಂದುಕೊಂಡು ರಪ್ಪನೆ ಹಿಂದಿರುಗಿ ನಡೆದ. ಅವಳ ಅಂಗಳದಲ್ಲಿ ನಿಂತುಕೊಂಡು, ‘ರಾಧಾ…!’ ಎಂದು ಮೃದುವಾಗಿ ಕರೆದ. ರಾಧಾಳಿಗೆ ಮತ್ತೆ ಅಳುಕೆದ್ದಿತು. ಆದರೂ ತೋರಿಸಿಕೊಳ್ಳದೆ ಒಳಗಿನಿಂದಲೇ,  ‘ಏನು…?’ ಎಂದು ಒರಟಾಗಿ ಪ್ರಶ್ನಿಸಿದಳು. ‘ಸ್ವಲ್ಪ ಹೊರಗೆ ಬಾ ಮಾರಾಯ್ತೀ…’ ಎಂದು ಅಂಗಲಾಚಿದ. ಆದರೆ ಅವಳು, ‘ಈ ನೀಚ ಇನ್ನೊಮ್ಮೆ ತನ್ನನ್ನು ಮುಟ್ಟಲು ಪ್ರಯತ್ನಿಸಬೇಕು, ಸಿಗಿದೇ ಹಾಕುತ್ತೇನೆ!’ ಎಂದುಕೊಂಡು ಕತ್ತಿಯನ್ನು ಸೆರಗಿನ ಮರೆಯಲ್ಲಿಟ್ಟುಕೊಂಡೇ ಹೊಸ್ತಿಲಿಗೆ ಬಂದು, ‘ಏನೂ…!’ ಎಂಬಂತೆ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದಳು. ಆದರೆ ಅವನ ಮುಖ ಕಂಡು ಹೇಸಿಗೆಯೆನಿಸಿತು. ದೃಷ್ಟಿ ತಪ್ಪಿಸಿ ಎತ್ತಲೋ ನೋಡುತ್ತ ನಿಂತಳು. ಮುತ್ತಯ್ಯ ಮತ್ತೊಮ್ಮೆ ಬೆದರಿದ. ಆದರೂ ತನ್ನ ಅದುರುವ ದೇಹವನ್ನು ಹತೋಟಿಗೆ ತಂದುಕೊಳ್ಳುತ್ತ, ‘ಬೇಜಾರು ಮಾಡಿಕೊಳ್ಳಬೇಡ ಮಾರಾಯ್ತಿ. ಏನೋ ಕೆಟ್ಟ ಗಳಿಗೆ. ನಿನ್ನ ಚಂದಕ್ಕೆ ಮನಸ್ಸು ಮರುಳಾಯಿತು. ಹೆಣ್ಣಿನಾಸೆ ಯಾವ ಗಂಡಸನ್ನು ಬಿಟ್ಟಿದೆ ಹೇಳು? ನನ್ನ ಹೆಂಡತಿಯೊಬ್ಬಳು ಸರಿಯಿರುತ್ತಿದ್ದರೆ ಇಂಥದ್ದಕ್ಕೆಲ್ಲ ಕೈಹಾಕಲಿಕ್ಕಿತ್ತಾ ನಾನು? ಅದನ್ನೆಲ್ಲ ನಿನ್ನ ಹತ್ತಿರ ಹೇಳಿ ಪ್ರಯೋಜನವಿಲ್ಲ ಬಿಡು. ನನ್ನಿಂದ ತಪ್ಪಾಯ್ತು. ನಡೆದದ್ದನ್ನು ಮರೆತುಬಿಡು. ಗಂಡನಿಗೆ ತಿಳಿಸಿ ನಿಷ್ಠೂರ ಕಟ್ಟಿಕೊಳ್ಳುವುದು ಬೇಡ. ಹ್ಞಾಂ, ಇನ್ನೊಂದು ಮಾತು. ಕಾಯಿ, ಗೀಯಿ, ಕಟ್ಟಿಗೆ ಬೇಕಾದರೆ ಹಿಂದಿನಂತೆಯೇ ಸಂಕೋಚಪಡದೆ ತೆಗೆದುಕೊಂಡು ಹೋಗು ಮಾರಾಯ್ತಿ. ಒಟ್ಟಾರೆ ನೀವು ಒಕ್ಕಲಿನವರು ಚೆನ್ನಾಗಿರಬೇಕುಅಷ್ಟೇ. ನಾನೇನು ಹೋಗುವಾಗ ಕೊಂಡು ಹೋಗುತ್ತೇನಾ!’ ಎಂದು ವೈರಾಗಿಯಂತೆ ನುಡಿದು ಹಿಂಬದಿಯನ್ನು ಪರಪರ ಕೆರೆದುಕೊಳ್ಳುತ್ತ ಹೊರಟು ಹೋದ. ರಾಧಾಳಿಗೆ ಅವನ ಮಾತು, ವರ್ತನೆಗಳು ಅಸಹ್ಯವೆನಿಸಿದುವು. ಏನೂ ಉತ್ತರಿಸಿದೆ ತುಟಿ ಕಚ್ಚಿ ನಿಂತಳು. ಮುತ್ತಯ್ಯನ ಕೀಳು ಚಪಲ, ನೀಚತನವನ್ನು ಹಿಂದಿನಿಂದಲೂ ಅನುಭವಿಸುತ್ತ ಬಂದವಳಿಗೆ ಇಂದಿನ ಘಟನೆಯಿಂದ ಸಹನೆ ತಪ್ಪಿಬಿಟ್ಟಿತು. ಇಂಥವರಹಂಗಿನ ಗುಡಿಸಲೂ ಸಾಕು! ಈ ಲಂಪಟರ ಹಸಿದ ದೃಷ್ಟಿಗೆ ಬಲಿಯಾಗಿದ್ದೂ ಸಾಕು. ಒಂದಿಷ್ಟಿರುವ ಬಂಗಾರ ಮಾರಿ ಹೋದರೂ ಚಿಂತೆಯಿಲ್ಲ. ಆದಷ್ಟು ಬೇಗ ಒಂದು ತುಂಡು ಸ್ವಂತ ಭೂಮಿಯನ್ನು ಮಾಡಿಕೊಳ್ಳಲೇಬೇಕು. ಆಮೇಲೆ ಬೀಡಿ ಕಟ್ಟಿ, ಗಂಜಿ ಉಂಡಾದರೂ ಬದುಕಬಹುದು. ಯಾವುದಕ್ಕೂ ಇವರೊಮ್ಮೆ ಮನೆಗೆ ಬಂದುಕೊಳ್ಳಲಿ. ಕೊರಳಪಟ್ಟಿ ಹಿಡಿದು ಎರಡರಲ್ಲೊಂದು ಇತ್ಯಾರ್ಥ ಮಾಡಿಯೇ ತೀರುತ್ತೇನೆ! ಎಂದು ಕುದಿಯುತ್ತ ಗಂಡನ ದಾರಿ ಕಾಯತೊಡಗಿದಳು. (ಮುಂದುವರೆಯುವುದು) ************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಊರೊಳಗೆ ಪಂಥ ರಣದೊಳಗೆ ಓಟವೆ ವಚನಕಾರರಲ್ಲಿ ಎಂಟು ಜನ ಮಾರಿತಂದೆ ಹೆಸರಿನವರು ಇದ್ದಾರೆ. ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ. ಈತ ಹಿರಿಯ ವಚನಕಾರ. ಫ. ಗು. ಹಳಕಟ್ಟಿಯವರು “ಈತನು ಬಸವೇಶ್ವರರ ಕಾಲದಲ್ಲಿ ಶಿವಾನುಭವ ಮಂಟಪದಲ್ಲಿದ್ದನೆಂದು ವೀರಶೈವರಲ್ಲಿ ಐತಿಹ್ಯವಿರುವುದಿಲ್ಲ. ಆದ್ದರಿಂದ ಬಸವೇಶ್ವರನ ಕಾಲಕ್ಕಿಂತಲೂ ಈಚಿನವನಿರಬೇಕು. ಆದರೆ ೧೫ ನೇ ಶತಮಾನದ ಅಂತ್ಯಭಾಗದಲ್ಲಿದ್ದ ಪ್ರಸಿದ್ಧಿ ಹೊಂದಿದ ಗುಬ್ಬಿಯ ಮಲುಹಣನು ಈ ಅರಿವಿನ ಮಾರಿತಂದೆಯ ಉಕ್ತಿಗಳನ್ನು ತನ್ನ ‘ಗಣಭಾಷ್ಯ ರತ್ನಮಾಲೆ’ ಯಲ್ಲಿ ಉದಾಹರಿಸಿದ್ದಾನೆ. ಅಲ್ಲದೇ ಅನೇಕ ವಚನ ಸಂಗ್ರಹಗಳಲ್ಲಿ ಈತನ ವಚನಗಳು ಆಗಿಹೋದ ಪುರಾತನ ಕಾಲದ ಮಹತ್ವದ ವಚನಕಾರರಲ್ಲಿ ಗಣಿಸಲು ಏನೂ ಅಡ್ಡಿಯಿಲ್ಲ.‌ ಪುರಾತನರ ವಚನಗಳಲ್ಲಿ ಈತನವೂ ಸೇರಿರುವುದರಿಂದ ಈತನ ಕಾಲವನ್ನು ಸು ೧೧೬೦ ಎಂದೇ ಹೇಳಬಹುದಾಗಿದೆ” ಎಂದಿದ್ದಾರೆ.೧ ಹನ್ನೊಂದು ಜನರ ಚರಿತ್ರೆಯ ವಿವರಗಳು ತಿಳಿದು ಬರುವುದಿಲ್ಲ, ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ.೨  ಎಂದು ಒಂದು ಕಡೆ ಹೇಳಿದರೆ. ಮತ್ತೊಂದು ಕಡೆ ‘ವಿರೂಪಾಕ್ಷ ಪಂಡಿತನು (೧೫೮೫) ಚೆನ್ನಬಸವ ಪುರಾಣದಲ್ಲಿ ಈತನೇ ‘ಮಾದರ ಕೇತಯ್ಯ ….. ‘ ಎಂಬ ಪದ್ಯದಲ್ಲಿ ಅರಿವಿನ ಮಾರಿತಂದೆಯ ಹೆಸರನ್ನು ಹೇಳಿದ್ದಾನೆ.೩ ಎಂದು ಸಾಹಿತ್ಯ ಚರಿತ್ರಾಕಾರರು ಹೇಳಿದ್ದಾರೆ. ಜ್ಞಾನ, ತಿಳುವಳಿಕೆ, ಅನುಭವಗಳ ಸಮಪ್ರಮಾಣದ ಮಿಶ್ರಣವಾದ ಅರಿವಿಗೆ ಬಹುದೊಡ್ಡ ಪ್ರಾಶಸ್ಯ್ಯವನ್ನು ಮಾರಿತಂದೆಯು ತನ್ನ ವಚನಗಳಲ್ಲಿ ಕೊಟ್ಟಿರುವುದರಿಂದ ಈತನನ್ನ “ಅರಿವಿನ ಮಾರಿತಂದೆ” ಎಂದು ಕರೆಯಲಾಗಿದೆ.೪  ಬಸವಣ್ಣನವರು ತಮ್ಮ ವಚನಗಳಲ್ಲಿ ಹೆಸರಿಸಿರುವ ಮಾರಿತಂದೆ ಈತನಲ್ಲ ಎಂಬುದನ್ನು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.೫  ಸದಾಶಿವಮೂರ್ತಿ, ಸದಾಶಿವಮೂರ್ತಿಲಿಂಗ,  ಸದಾಶಿವಲಿಂಗಮೂರ್ತಿ, ಸದಾಶಿವಲಿಂಗ ಎಂದು ಈತನ ವಚನಗಳ ಅಂಕಿತಗಳು ಇವೆ. ಅರಿವಿನ ಮಾರಿತಂದೆಯ‌ ಒಟ್ಟೂ ವಚನಗಳ ಸಂಖ್ಯೆ ೩೦೨, ಅದರಲ್ಲಿ ೨೫೧ ಸಾಮಾನ್ಯ ವಚನಗಳಾಗಿದ್ದು, ಉಳಿದವು ಬೆಡಗಿನ ವಚನಗಳಾಗಿವೆ. ಅರಿವಿನ ಮಾರಿತಂದೆಯ ವಚನವೊಂದು ಹೀಗಿದೆ ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು ಊರೊಳಗೆ ಪಂಥ ರಣದೊಳಗೆ ಓಟವೆ ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೇ ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವವನ ಭಕ್ತಿ ಅಲಗಿನ ಘೃತವ ಶ್ವಾನ ನೆಕ್ಕಿ ನಾಲಿಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳ ಅರಿತು ನಿರತನಾಗಿರಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ.೬ ಈ ವಚನವು ಮೇಲು ನೋಟಕ್ಕೆ ಬಹಳ ಸರಳವಾಗಿ ಕಾಣುತ್ತಿದೆಯಾದರೂ ತನ್ನ ಆಂತರ್ಯದಲ್ಲಿ ವೀರಭಾವವೊಂದರ‌ ಸಮರ ಪ್ರಜ್ಞೆ ನಿರಂತರವಾದ ಹರಿವನ್ನು ಹೊಂದಿದೆ. ಅಪಾಯಕಾರಿಗಳ ಲಕ್ಷಣ ಮತ್ತು ಅವರು ಆ ಮನಸ್ಥಿತಿಯಿಂದ ಹೊರಬರುವ ಮಾರ್ಗವನ್ನು ಈ ವಚನವು ತಿಳಿಸುತ್ತಿದೆ. ಎಲ್ಲ ಕಾಲದಲ್ಲಿಯೂ ಮಾತಿನ ಮಲ್ಲರ ಬಹುದೊಡ್ಡ ಗುಂಪೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆ ಮಾತಿನ ಮಲ್ಲರ ಗುಂಪು ಕೆಲವೊಮ್ಮೆ ತಮ್ಮೊಡನೆ ಸಂಪರ್ಕಕ್ಕೆ ಬರುವವರಿಗೆ ಹಾದಿಯ ನಿರ್ದೇಶವನವನ್ನೂ ಯಾವುದೇ ಭಿಡೆ ಇಲ್ಲದೆ ಮಾಡಲು ಶುರು ಮಾಡಿಬಿಡುತ್ತದೆ. ಕ್ರಿಯೆಯಲ್ಲಿ ನಿರತಕಾರವರಿಗೆ ಅದರ ಅಗತ್ಯವೇ ಇರುವುದಿಲ್ಲ. ಅಥವಾ ಮಾತಿನ ಮಲ್ಲರು ಕ್ರಿಯೆಯಲ್ಲಿ ತೊಡಗಿದರೆ ಮಾತು ತನ್ನಿಂದ ತಾನೇ ನಿಂತುಬಿಡುತ್ತದೆ. ಮಾತಿನಲ್ಲಿ ಎಲ್ಲರೂ, ಎಲ್ಲವೂ ಒಂದೇ ಎನ್ನುವ (ವಾಕ್+ಅದ್ವೈತ), ಆದರೆ ಅನುಭವಜನ್ಯ ಅರಿವಿನಿಂದ ಒಂದೇ ಎಂಬುದನ್ನು ಅರಿತು, ನಡೆದು ತೋರದಂತಹವರ (ಸ್ವಯ+ಅದ್ವೈತ) ಸ್ಥಿತಿಯನ್ನು ಹೇಳಲು ಅರಿವಿನ ಮಾರಿತಂದೆ ಎರಡು ಸಾದೃಶ್ಯಗಳನ್ನು ಬಳಸಿದ್ದಾನೆ. ಒಂದು, ಊರೊಳಗೆ ತಾನು ಕಟ್ಟಿಕೊಂಡ ಗುಂಪಿನೊಳಗೆ ವೀರಾಧಿವೀರ, ಆದರೆ ನಿಜವಾದ ರಣರಂಗದಲ್ಲಿ ಬೆನ್ನು ತಿರುಗಿಸಿ ಓಡಿ ಹೋಗುವ ರಣಹೇಡಿಯ ಚಿತ್ರವನ್ನು ಮತ್ತು ಖಡ್ಗದ ತುದಿಗೆ ಸವರಿದ ಘೃತ (ತುಪ್ಪ) ವನ್ನು ನೆಕ್ಕಿ ನಾಲಿಗೆ ಸೀಳಿದ ನಾಯಿಯು ಮತ್ತೆ ಖಡ್ಗವನ್ನು ಕಂಡು ಓಡುವ ಚಿತ್ರ. ಈ ಎರಡರ ಮೂಲಕ ಮಾತಿನ ಮಲ್ಲರು ಮತ್ತವರು ರಣಹೇಡಿಗಳು. ಬದುಕಿನಲ್ಲಿ ಏಕತ್ವವನ್ನು ಸಾಧಿಸಿ ತೋರಿಸಲಾರದ ಹೇಡಿಗಳು ಎಂದೂ, ನಾಲಿಗೆ ಸಿಳಿದ ನಾಯಿಯ ಸ್ಥಿತಿಯು ಅವರು ಸ್ವಯಾದ್ವೈತವನ್ನು ಸಾಧಿಸಲಾರದ, ಆಚರಿಸಲಾರದವರು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಏಕಭಾವವೆನ್ನುವುದು ಘೃತದ ಹಾಗೆ. ಅದನ್ನು ಸಾಧಿಸಿದವರು ಹೆದರಿ ಓಡಬೇಕಿಲ್ಲ ಎಂಬ ದನಿಯೂ ಇದರಲ್ಲಿ ಅಡಗಿದೆ. ಮಾತಿನಲ್ಲಿ ಮಾತ್ರ ವಚನ ರಚನೆಗಳನ್ನು ಮಾಡುತ್ತಾ, ಬದುಕಿನಲ್ಲಿ ಅದರ ತತ್ವಗಳನ್ನು ಆಚರಿಸದವರೆಲ್ಲರೂ, ಸ್ವಾನುಭವದಿಂದ ನುಡಿದಂತೆ ನಡೆಯದವರು ಹೇಡಿಗಳು, ನಾಲಿಗೆ ಹರಿದ ನಾಯಿಗಳು ಎಂದು ಹೇಳುತ್ತಿದ್ದಾನೆ. ವಚನದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. “ಅರಿತು ನಿರತ” ಎಂಬ ಪದಗಳು ಒಂದಕ್ಕೊಂದು ಸಾಧಿಸುವ ಸಂಬಂಧ ವ್ಯಕ್ತಿ ಮತ್ತು ಸಮಾಜಕ್ಕೆ ಮಹತ್ವವಾದದ್ದು ಎನ್ನುತ್ತಿದ್ದಾನೆ. ಅರಿತು ಸಾಧಿಸಲಾರದ ಅಥವಾ ಅರಿಯದೆ ಮಾತನಾಡುವ ಎಲ್ಲರೂ ರಣಹೇಡಿ, ನಾಲಿಗೆ ಸೀಳಿದ ನಾಯಿಗಳೆನ್ನುವ ಭಾವ ವಚನದಲ್ಲಿದೆ. ಇದೊಂದು ರೀತಿಯಲ್ಲಿ ನುಡಿದು ಸೂತಕಿಗಳಾಗುವ ಸ್ಥಿತಿ. ಅರಿವಿನ ಮಾರಿತಂದೆಯು ಮಾತು ಮತ್ತು ಕ್ರಿಯೆಗಳು ಒಂದಿಲ್ಲದ ರಣಹೇಡಿಗಳಿಗೆ ವಚನದ ಮೊದಲ ಸಾಲಿನಲ್ಲಿಯೇ ಪಂಥಾಹ್ವಾನವನ್ನು ಕೊಡುತ್ತಾನೆ ಮತ್ತದು ಎದುರಿನವರ ನಡೆ ನುಡಿಯನ್ನು ನಿರ್ದೇಶನ ಮಾಡುವ ಸಮರ ಪ್ರಜ್ಞೆಯ ರೀತಿಯಲ್ಲಿ ಬಂದಿದೆ. ಇದು ವೀರನ ಲಕ್ಷಣ. ತಾನು ಅನುಸರಿಸಿಲ್ಲದೆ, ಅನುಭವಕ್ಕೆ ಅರಿವಿಗೆ ಬಾರದ, ಕೇವಲ ಮಾತಿಗಾಗಿ “ಸಮಯವನ್ನು ನೋಯಿಸಿ” ಎದುರಿನವರಿಗೆ ಮಾಡಲು ಆಡಲು ಹೇಳುವ ಜಾಯಮಾನದವರಲ್ಲ ವಚನಕಾರರು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವೀರರಸವನ್ನು ಕುರಿತು ವಿವೇಚನೆ ಮಾಡುವಾಗ ದಾನವೀರ, ಧರ್ಮವೀರ, ದಯಾವೀರ ಎಂದು ಮೂರು ಭಾಗಗಳಲ್ಲಿ ಈ ವೀರರಸವು ಕಾವ್ಯಗಳಲ್ಲಿ ಹರಿದು ಬಂದಿದೆ ಎಂದು ಮೀಮಾಂಸಕರು ಹೇಳಿದ್ದಾರೆ. ಅರಿವಿನ ಮಾರಿತಂದೆಯ ಒಳಗೆ ಧರ್ಮವೀರದ ನದಿಯೊಂದು ನಿರಂತರವಾಗಿ ಹರಿಯುತ್ತಿರುವ ಸ್ಥಿತಿಯಲ್ಲಿ ನಿಂತಿದ್ದಾನೆ. ನಡೆ ನುಡಿಗಳು ಒಂದಾದ ಏಕತ್ರ ಸ್ಥಿತಿಯದು. ವ್ಯೋಮಮೂರ್ತಿ, ತಲೆವೆಳಗಾದ ಸ್ವಯಜ್ಞಾನಿಯಾದ ಅಲ್ಲಮನೂ “ನುಡಿದು ಸೂತಕಿ” ಗಳಾಗದಿರಲೆಂಬ ಕಾರಣದಿಂದಲೇ ಕೊಟ್ಟ ಎಚ್ಚರಿಕೆ೭  ಬಸವಣ್ಣನವರು “ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಗಮದೇವನೆಂತೊಲಿವನಯ್ಯಾ”೮  ಎಂದು ಹೇಳುವ ಮಾತುಗಳೂ ಇದೇ ಎಚ್ಚರಿಕೆಯಲ್ಲಿ ಬಂದಿದೆ. ಪ್ರತೀ ಕ್ಷಣವೂ ಬದುಕನ್ನು ಅರಿತು ನಿರತನಾಗಿ ನಡೆವ ಕ್ರಮವನ್ನು ವಚನಕಾರರು ತಿಳಿಸುತ್ತಲೇ ಇಂದಿಗೂ ಜೀವಂತರಾಗಿದ್ದಾರೆ ಅಡಿಟಿಪ್ಪಣಿಗಳು ೧. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ (೧೯೭೭) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ (೨೦೧೬) ೩. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ ೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ ೫. ಪೀಠಿಕೆಗಳು ಲೇಖನಗಳು. ಡಿ. ಎಲ್. ನರಸಿಂಹಾಚಾರ್. ಡಿ. ವಿ. ಕೆ ಮೂರ್ತಿ. ಮೈಸೂರು ಪು ೪೫೬ ಮತ್ತು ೪೫೭ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೬೦೬, ಪು ೧೦೦೩ ೭. ಮಾತೆಂಬುದು ಜ್ಯೋತಿರ್ಲಿಂಗ !      ಸ್ವರವೆಂಬುದು ಪರತತ್ವ !      ತಾಳೋಷ್ಠ ಸಂಪುಟವೆಂಬುದೇ ನಾದಬಿಂದಕಳಾತೀತ !      ಗೊಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ, ಮರುಳೆ ಅಲ್ಲಮನ ವಚನ ಚಂದ್ರಿಕೆ. ಡಾ. ಎಲ್. ಬಸವರಾಜು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವ. ಸಂ. ೯೫೧. ಪು ೨೧೪ (೨೦೧೪) ೮. ನುಡಿದರೆ ಮುತ್ತಿನ ಹಾರದಂತಿರಬೇಕು      ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು      ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು      ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು      ನುಡಿಯೊಳಗಾಗಿ ನಡೆಯದಿದ್ದಡೆ      ಕೂಡಲಸಂಗಮದೇವನೆಂತೊಲಿವನಯ್ಯಾ ? ( ಟಿಪ್ಪಣಿ : ವಚನದಲ್ಲಿ ಮಾತು ಹೇಗಿರಬೇಕೆಂಬುದಕ್ಕೆ ಮೂರು ಉಪಮೆಗಳನ್ನು ಕೊಡುತ್ತಾರೆ. ಹಾರ, ದೀಪ್ತಿಗಳು ಸರಿ. ಆದರೆ “ಸಲಾಕೆ” ಯ ಮೊನಚು, ಅದರ ಕಾರ್ಯ ಸ್ಪಷ್ಟವಾಗಿ ಅರ್ಥವಾಗಿದ್ದವರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗೆಗೆ ಹೆಚ್ಚು ಪ್ರೀತಿ, ಗೌರವ ಉಂಟಾಗುತ್ತದೆ. ಮಾತೆಂಬುದು ಸಲಾಖೆಯಂತೆ ಮೊನಚು ಹೌದು,‌ ರಕ್ಷಣೆಗೂ ಹೌದು ಎಂಬುದನ್ನು ಮರೆಯುವ ಹಾಗಿಲ್ಲ. ) ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೮೦೨. ಪು ೬೭೨ **************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

You cannot copy content of this page

Scroll to Top