ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಸಿನೆಮಾ

ನೂತನ ನೋಡಿದ ಸಿನೆಮಾ

ವಿದ್ಯಾ ಕಸಂ ಶಕುಂತಲಾ ದೇವಿ ನೂತನ ದೋಶೆಟ್ಟಿ ವಿದ್ಯಾ ಕಸಂ ಈ ಶಬ್ದಗಳು , ಇತ್ತೀಚೆಗೆ ಬಿಡುಗಡೆಯಾದ, ಖ್ಯಾತ ಗಣಿತಜ್ಞೆ , ಸಂಖ್ಯಾ ನಿಪುಣೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾ ದೇವಿ ಅವರ ಜೀವನಾಧಾರಿತ ಹಿಂದಿ ಚಲನಚಿತ್ರದಲ್ಲಿ ಬಹಳ ವಿಶೇಷವಾಗಿ ಉಪಯೋಗಿಸಲ್ಪಡುತ್ತವೆ. ಈ ವಿದ್ಯಾ ಕಸಂ ಎಂಬ ಆಣೆ- ಪ್ರಮಾಣ ಚಿತ್ರದುದ್ದಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಹೊಸ ತಿರುವನ್ನು ಕೊಡುತ್ತ ಹೋಗುತ್ತದೆ. ಅಮೇಜಾನ್ ಪ್ರೈಂನಲ್ಲಿ ಜುಲೈ 31 ರಂದು ಬಿಡುಗಡೆಯಾದ ಈ ಚಿತ್ರವನ್ನು ನಾನು ನೋಡಿದ್ದು ವಿದ್ಯಾ ಬಾಲನ್ ಎಂಬ ಅನನ್ಯ ಅಭಿನೇತ್ರಿಗಾಗಿ. ಗಣಿತಕ್ಕೂ ನನಗೂ ಎಣ್ಣೆ – ಸೀಗೆಕಾಯಿ ಸಂಬಂಧ. ಹಾಗಾಗಿ ಶಕುಂತಲಾ ದೇವಿಯವರ ಬಗ್ಗೆ ನನಗೆ ಇದ್ದದ್ದು ಅಪಾರ ಭಯ ಮಿಶ್ರಿತ ಗೌರವ. ಅವರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಓದಿ, ಆನಂತರದಲ್ಲಿ ಟಿವಿಯಲ್ಲಿ ನೋಡಿ ಬೆರಗಾಗಿದ್ದಿದೆ. ಸಂಖ್ಯೆಗಳೊಂದಿಗೆ ಅವರ ಸರಸ, ಸಲಿಗೆ ಆಗ ವಿಶ್ವದಾದ್ಯಂತ ಮನೆಮಾತಾಗಿತ್ತು.ಅಂಥ ಶಕುಂತಲಾ ದೇವಿಯವರ ಬಗೆಗಿನ ಚಲನಚಿತ್ರವನ್ನು ಕುತೂಹಲದಿಂದಲೇ ನೋಡಲು ಕುಳಿತೆ.  ಆರಂಭದಲ್ಲೇ ನಿರ್ದೇಶಕ ಅನು ಮೆನನ್, ಶಕುಂತಲಾ ದೇವಿಯವರ ಮಗಳು ಅನುಪಮಾ ಬ್ಯಾನರ್ಜಿಯವರು ಹೇಳಿರುವಂತೆ ಚಿತ್ರಿಸಲಾಗಿದೆ ಎಂದು ಹೇಳಿ ತಾವು ಸುರಕ್ಷರಾಗುವುದರೊಂದಿಗೆ ಚಿತ್ರದ ಆಯಾಮವನ್ನು ಸಿದ್ಧಪಡಿಸುತ್ತಾರೆ. ಇಡಿಯ ಚಿತ್ರ ಮಗಳ ಕಣ್ಣೋಟದಲ್ಲೇ ಸಾಗುತ್ತದೆ. ಆರಂಭವಾಗುವುದೇ ಮಗಳು ಅನು, ಶಕುಂತಲಾ ದೇವಿ ಎಂಬ, ಅಪ್ರತಿಮ ಬುದ್ಧಿಮತ್ತೆಗಾಗಿ ವಿಶ್ವಮಾನ್ಯಳಾದ , ತನ್ನ ತಾಯಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವ ಮೂಲಕ. ನೋಡುಗರನ್ನು ಅವಾಕ್ಕಾಗಿಸಿ ಸೆರೆ ಹಿಡಿಯುವ ತಂತ್ರ ಇಲ್ಲಿ ಕೆಲಸ ಮಾಡಿದೆ. ಚಿತ್ರ ಮುಂದುವರೆದಂತೆ ‘ದೇವಿ’ಎಂಬ ಹೆಣ್ಣು, ಪತ್ನಿ, ತಾಯಿಯೇ ವಿಜ್ರಂಭಿಸುತ್ತಾಳೆ! ಬಾಲ್ಯದಲ್ಲಿ ತಂದೆಯಿಂದಲೇ ಶೋಷಣೆಗೆ ಒಳಗಾಗಿ ತನ್ನ ಬಾಲ್ಯವನ್ನೇ ಪುಟ್ಟ ದೇವಿ ಕಳೆದುಕೊಳ್ಳುತ್ತಾಳೆ. ಅವಳ ಬುದ್ಧಿಮತ್ತೆಯನ್ನು ತನ್ನ ಮನೆಯ ಹೊಟ್ಟೆ ಹೊರೆಯಲು ಬಳಸಿಕೊಳ್ಳುವ ಕಟುಕ ಹಾಗೂ ಹೀನ ಬುದ್ಧಿಯ ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಶಾಲೆ, ಆಟ-ಪಾಠಗಳಿಂದ ವಂಚಿತಳಾಗಿ ಅವುಗಳನ್ನು ಹಂಬಲಿಸುವ ದೇವಿ ಕೊನೆಗೆ ಮನೆಯಲ್ಲಿ ತನ್ನ ಅಂಗವಿಕಲ ಅಕ್ಕನೊಂದಿಗೆ ಕೆಲ ಹೊತ್ತು ನಗುತ್ತ, ತನ್ನಿಷ್ಟದ ಕೊಳಲು ನುಡಿಸುತ್ತ ಕಾಲ ಕಳೆಯುವುದಕ್ಕೂ ತಂದೆ ಅವಕಾಶ ಕೊಡದಾಗ ವ್ಯಗ್ರಳಾಗುತ್ತಾಳೆ. ತಂದೆಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಳ್ಳುವ ತಾಯಿಯನ್ನು ದ್ವೇಷಿಸಲು ಆರಂಭಿಸುತ್ತಾಳೆ. ಈ ಎಲ್ಲ ರೇಜಿಗೆ ಗಳಿಂದ ಮುಕ್ತಿ ಹೊಂದಲು  ಯೌವನದಲ್ಲಿ ಇಂಗ್ಲೆಂಡಿಗೆ ಹಾರಿ ಬಿಡುತ್ತಾಳೆ. 1950 ರ ಆಸುಪಾಸಿನಲ್ಲಿ ಆಕೆ ಹೇಗೆ ಅಲ್ಲಿಗೆ ಹೋದರು ಎಂಬುದರ ಬಗ್ಗೆ ಯಾವ ಮಾಹಿತಿಯೂ ಚಿತ್ರದಲ್ಲಿಲ್ಲ! ಒಬ್ಬಳೇ ಹೆಣ್ಣುಮಗಳು ತನ್ನ ಬದುಕನ್ನು ಅರಸಿ ಮಾಡುವ ಮುಂದಿನ ಪ್ರಯಾಣ ಹಳೆಯ ಹಿಂದಿ ರೊಮ್ಯಾಂಟಿಕ್ ಚಿತ್ರದಂತೆ ಸಾಗಿಬಿಡುತ್ತದೆ. ದೇವಿ ಪುರುಷರೊಂದಿಗೆ ತೀರ ಸಲಿಗೆಯಿಂದಿರುತ್ತಾಳೆ. ಮೊದಲ ಜೊತೆಗಾರ ತನ್ನ ಮದುವೆಯನ್ನೇ ಅವಳಿಂದ ಮುಚ್ಚಿಟ್ಟದ್ದು ತಿಳಿದಾಗ ಅವನದೇ ಬಂದೂಕಿನಿಂದ ಅವನ ಕಿವಿಹಾರಿಸಿ ಓಡಿ ಹೋಗುತ್ತಾಳೆ. ಆನಂತರ ಒಬ್ಬ ಸ್ಪೇನಿಯವನೊಂದಿಗೆ ಸರಸ. ಅವನು ಅವಳ ಪ್ರತಿಭೆಗೆ  ಅಪಾರ ಮನ್ನಣೆ ಸಿಗುವಂತೆ ಮಾಡುತ್ತಾನೆ. ದೇವಿ ಹಣವನ್ನು ಎರಡು ಕೈಗಳಲ್ಲಿ ಬಾಚಿ ದುಡಿಯುತ್ತಾಳೆ.  ಈ ಹೊತ್ತಿಗೆ ಅವಳು ಪ್ರಖ್ಯಾತರಾಗಿರುತ್ತಾಳೆ.  ಅವನು ಅವಳನ್ನು ಬಿಟ್ಟು ತನ್ನ ದೇಶಕ್ಕೆ ಹೊರಡಬೇಕಾದಾಗ ಸ್ವಲ್ಪ ದುಃಖವಾದರೂ ದೇವಿಗೆ ಸಂಬಂಧಗಳ ಬಂಧದಲ್ಲಿ ನಂಬಿಕೆ ಇದ್ದಂತೆ ಕಾಣುವುದಿಲ್ಲ. ತನಗಾಗಿ, ತನ್ನಿಷ್ಟದಂತೆ ಬದುಕುವುದು ಅವಳ ಜೀವನದ ಏಕೈಕ ಗುರಿ. ಅವಳು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅವಳ ಜೀವನ ಪ್ರವೇಶಿಸಿದವನು  ಪಾರಿತೋಷ್ ಬ್ಯಾನರ್ಜಿ. ಅವನಲ್ಲಿ ಅವಳು ಕೇಳುವುದು ಮಗುವನ್ನು. ಮದುವೆಯನ್ನಲ್ಲ. ಬಾಲ್ಯದಲ್ಲೇ ಗಳಿಕೆಗೆ ಇಳಿದ ಪುಟ್ಟ ಬಾಲಕಿ, ಮನೆಯನ್ನು ನಡೆಸುವ ಒಡತಿಯಾಗಿ, ತಂದೆಯ ಪಾಖಂಡಿತನ, ತಾಯಿಯ ಅಸಹಾಯಕತೆಯನ್ನು ತನಗೆ ಅರ್ಥವಾದಂತೆ ಅರ್ಥೈಸಿಕೊಂಡು ಹಠ, ಮೊಂಡು, ಮಹತ್ವಾಕಾಂಕ್ಷೆ, ಬಂಧನರಹಿತ ಸ್ವಾತಂತ್ರ್ಯ, ಕಟ್ಟುಪಾಡುಗಳಿರದ ಜೀವನಕ್ಕೆ ಹಾತೊರೆಯುವಂತೆ ಚಿತ್ರಿಸಲಾಗಿದೆ. ಹೀಗಿದ್ದರೆ ಶಕುಂತಲಾ ದೇವಿ ಎಂದು ಆಶ್ಚರ್ಯ ವಾಗುತ್ತದೆ. ಅವರದು ಸ್ವಾಭಿಮಾನವೋ ಅಂಹಂಕಾರವೋ ತಿಳಿಯುವುದಿಲ್ಲ.  ಒಬ್ಬ ಓವರ್ ಪೊಸೆಸಿವ್ ತಾಯಿಯಾಗಿ ಅವರನ್ನು ತೋರಿಸಲಾಗಿದೆ. ತನ್ನ ಮಗು ತನ್ನಂತೆಯೇ ಆಗಬೇಕು. ತನ್ನ ನೆರಳಿನಲ್ಲೇ ಇರಬೇಕು ಎಂಬ ಹಠದಿಂದ ಮಗು ಅನುಳನ್ನು ತಂದೆಯಿಂದ ದೂರ ಮಾಡುವುದಷ್ಟೇ ಅಲ್ಲ ಅವಳ ಬಾಲ್ಯದಿಂದಲೂ ವಂಚಿಸುತ್ತಾಳೆ. ರಾಷ್ಟ್ರಗಳಿಂದ ರಾಷ್ಟ್ರಕ್ಕೆ ಹಾರುತ್ತ ಹಣ, ಖ್ಯಾತಿ  ಗಳಿಸುವ ಗೀಳು ಹೆಣ್ಣಾಗಿ ಅವರು ಕಾಣಿಸುತ್ತಾರೆ. ಸಿಟ್ಟು, ಸ್ವೇಚ್ಛೆ,  ಸ್ವಾರ್ಥದ ಮೂರ್ತ ರೂಪವೇ ಆಗಿ ಕಾಣುತ್ತಾರೆ. ವಿದ್ಯಾ ಅವರ ನಟನೆಯಲ್ಲಿ  ಶಕುಂತಲಾ ದೇವಿ ಬಹು ಹಗುರವಾಗಿ, ಕೆಲವೊಮ್ಮೆ ಉಡಾಫೆಯಾಗಿ ಕಾಣುತ್ತಾರೆ. ವಿದ್ಯಾ ಅಗತ್ಯಕ್ಕಿಂತ  ಹೆಚ್ಚೇ ಗಹಗಹಿಸುತ್ತಾರೆ. ದೇವಿ ನಿಜವಾಗಿಯೂ ಹಾಗಿದ್ದರೆ ಅಥವಾ ಪ್ರೇಕ್ಷಕರಿಗಾಗಿ ಅವರನ್ನು ಹಾಗೆ ಮಾಡಲಾಗಿದೆಯೇ ಗೊತ್ತಿಲ್ಲ. ಆರಂಭದಲ್ಲಿ ಇರುವ ಕುತೂಹಲ, ಗತಿಯ ಬಿಗಿ ಬಂಧ ಅರ್ಧಕ್ಕಿಂತ ಮೊದಲೇ ಕಳೆದು ಹೋಗುತ್ತದೆ. ಒಟ್ಟಿನಲ್ಲಿ ಸಿನಿಮಾ ಅನುಪಮಾ ಬ್ಯಾನರ್ಜಿಯವರ ಏಕಮುಖ ದ್ರಷ್ಟಿಕೋನದಂತೆ ಇದೆ. ಕೊನೆಯಲ್ಲಿ ನಿರಾಸೆಯೂ ಆಗುತ್ತದೆ. ‘ಶಕುಂತಲಾ ದೇವಿ’ ಎಂಬ ಹೆಸರಿನ ಮಾಂತ್ರಿಕತೆ ಚಿತ್ರದಲ್ಲಿ ಒಡಮೂಡಿಲ್ಲ. ಆದರೂ ವಿದ್ಯಾ ಬಾಲನ್  ಅವರ ನಟನೆಯ  ಕೆಲ ಸನ್ನಿವೇಶಗಳು, ಅಲ್ಲಲ್ಲಿ ಹಾಯಾಗಿ ಸಾಗುವ ಕೆಲ ಪಾತ್ರಗಳು, ಅನುಪಮಾ ಪಾತ್ರದ  ಸನ್ಯಾ ಮಲ್ಹೋತ್ರಾ , ಅವಳ ಗಂಡನ ಪಾತ್ರದಲ್ಲಿ ಅಮಿತ್ ಸಾಧ್ಯ , ಪಾರಿತೋಷ್   ಬ್ಯಾನರ್ಜಿಯ  ಪಾತ್ರದಲ್ಲಿ ಜಿಷು ಸೇನ್ ಗುಪ್ತ ಹಿಡಿದು ಕೂರಿಸಿ ಪೂರ್ಣ ಚಿತ್ರ ತೋರಿಸಿ ಬಿಡುತ್ತಾರೆ.ಅಪ್ರತಿಮ ಸಂಖ್ಯಾ ಕುಶಲೆಗೆ ಬಾಲ್ಯದಲ್ಲಿ ಆದ  ಆಘಾತ ಆಕೆ ಬೆಳೆದಂತೆ ಮಾನಸಿಕ ತೊಂದರೆಯಾಗಿತ್ತೇ ಎಂಬ ಅನುಮಾನ ಬರುತ್ತದೆ. ಯಾವುದಕ್ಕೂ ಸರಿಯಾದ ಉತ್ತರ ಸಿಗದೆ, ಹಾಗೆಂದು ತೀರ  ಗೋಜಲಾಗದಂತೆ ಎಚ್ಚರವಹಿಸಿ ಮಾಡಿದಂತಿದೆ ಈ ಚಿತ್ರ.  ಭಾಗ್ ಮಿಲ್ಖಾ ಭಾಗ್, ಎಂ ಎಸ್ ಧೋನಿ ಮೊದಲಾದ ಚಿತ್ರಗಳೆದುರು ಕಳೆಗುಂದುತ್ತದೆ. ನಿರೀಕ್ಷೆ ಹುಸಿಯಾಗುತ್ತದೆ. ಆದರೆ ವಿದ್ಯಾ ಬಾಲನ್ ಇಡಿಯ ಚಿತ್ರವನ್ನು ಅಳುತ್ತಾರೆ. ವಿದ್ಯಾ ಕಸಂ…  ಅವರಿಗೆ ಪ್ರಶಸ್ತಿ ಬಂದರೂ ಆಶ್ಚರ್ಯವಿಲ್ಲ. *********************************************

ನೂತನ ನೋಡಿದ ಸಿನೆಮಾ Read Post »

Uncategorized

ಶಿಕಾರಿ

ಕವಿತೆ ಫಾಲ್ಗುಣ ಗೌಡ ಅಚವೆ ಚಂದ್ರ ಎಷ್ಟೇ ಕಣ್ಣು ತೆರೆಯಲುಪ್ರಯತ್ನಿಸಿದರೂಕಿಕ್ಕಿರಿದ ಮೋಡಗಳು ಮರ ಮರಗಳ ಕತ್ತಲನ್ನೂಹೊಸಕಿ ಹಾಕುತ್ತವೆಇಂತಹ ಅಪರಾತ್ರಿಯಂತಹಕತ್ತಲನ್ನು ನೋಡಿದರೆಶಂಕ್ರ ಕೋವಿ ಹೆಗಲಿಗೆ ಹಾಕಿಶಿಕಾರಿ ಹೋದನೆಂದೆ ತಿಳಿಯಬೇಕುಹೋಗುವುದು ದೂರವೇನಲ್ಲಒಂದು ಬರ್ಕ ಹೊಡೆದೂ ಗೊತ್ತಿಲ್ಲಕಳ್ಳರಗದ್ದೆ ಸುಕ್ರು ಮನೆ ಬೇಲಿ ಆಚೆ ಒಂದು ಹತ್ತು ಮಾರು ಅಷ್ಟೇಹಂದಿ ಮಲಗಿದೆಯೆಂದುಥರಗುಟ್ಟಿದವನು ಅದರ ತಲೆಗೆಗುಂಡು ಹೊಡೆದೇ ಬಿಟ್ಟವಅದೆಂಗೆ ಮನೆಗೆ ಬಂದನೋಮಲಗಿದನೊ ಗೊತ್ತಿಲ್ಲ ಮರುದಿನ ಮಾದೊಡ್ ಈಡಾಗಿದೆಂದು ನಮ್ಮೂರ ಪೆಕರನಂತ ಪೊರಗೋಳುಹುಡುಕಾಡಿ ಏನೂ ಕಾಣದೇತಿರುಗಿ ಬಂದರುಮುಚ್ಚಾಕಿ ಮಲಗಿದ ಶಂಕ್ರಒಂಬತ್ತಾಸಾದರೂ ಎದ್ದೇ ಇರಲಿಲ್ಲಭಯ ಒದ್ದುಕೊಂಡು ಬಂದುಎದೆ ಗಕ್ಕೆನಿಸುವಂತೆಅಗಾಗ ಅವನ ಜೀವ ಬಾಯಿಗೆಬರುತ್ತಿತ್ತು.ಆಗಾಗ ತಲೆ ಸುತ್ತಿದಂತೆ ಆದಂತಾಗಿ ಸುಮ್ಮನೆ ಅಡ್ಡಾಗುತ್ತಾನೆಅವನ ಚಿಂತೆ ಭಯ ಇನ್ನೇನಲ್ಲತಾನು ಹೊಡೆದದ್ದು ಹಂದಿಯೋ?ಕೊಣಮರಿಯೋ?ಅಥವಾ ಹಂದಿ ರೂಪದ ರಾವೋ?ಅದು ಹಂದಿಗಿರಿಯಾದರೆನನ್ನ ಸಾವಿಗೆ ವಾಯಿದೆಹಾಕುತ್ತದಂತೆ!ಯಾವ ಜಡ್ಡು ಜಾಪತ್ತುಬರದೇ ಸಾಯಿಸುತ್ತದಂತೆ!ಬೆಳೆದಿತ್ತು ಮನಸಲ್ಲಿಯೇಅನುಮಾನದ ಹುತ್ತ! ಇದನೆಲ್ಲಾ ನೋಡಿ ಮೂರಸಂಜಿಗೆಯಾರಗೂ ಕಾಣದಂಗೆಮುಕಳೇರ್ ಹಮ್ಮು ಮನೆಯಲ್ಲಿನೊಟ ಹಾಕಿಸಿದರೆ..ಮಣೆ ಕೊಟ್ಟಿನ ಮೇಲೆ ಅಕ್ಕಿ ಕಾಳು ಹಾಕಿ ಭಾರ ಬಂದಂತಾಗಿಅಂವ ‘ಅದು ರಾವೇ..!’ ಎನ್ನಬೇಕೆ?ಅವ ಕೊಟ್ಟ ಅಕ್ಕಿ ಕಾಳುಮನೆ ಸುತ್ತಲೂ ಸುಳಿಸಾಯ್ತುಅವನ ಭ್ರಾಂತಿಯೇ ಕಡಿಮೆಯಾಗಲಿಲ್ಲ ಶಂಕ್ರ ಎದ್ದು ಕುಳಿತದ್ದುಮರುದಿನ ಬೆಳಿಗ್ಗೆ ನಮ್ಮದೊಂದುಕೊಣಮರಿ ಬಂದಿಲ್ಲ ಅಂತಸಣತಮ್ ನಾಯ್ಕ ಹೇಳಿದಾಗಲೇ! *****************

ಶಿಕಾರಿ Read Post »

ಇತರೆ, ಜೀವನ

ಯಡ್ರಾಮಿಯ ಉಡುಪಿ ಹೋಟೆಲ್

ಪ್ರಬಂಧ ಮಲ್ಲಿಕಾರ್ಜುನ ಕಡಕೋಳ   ಹಾಗೆ ನೋಡಿದರೆ ನಮ್ಮ ಯಡ್ರಾಮಿಗೆ  ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿಗುರುತು ಬ್ಯಾಂಕ್ ಬಂದಿತ್ತು. ಸುಂಬಡ ಹಾದಿಬದಿಯ ಬಹುಪಾಲು ಬೆಳಕಿಲ್ಲದ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ.  ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ ಪತರಾಸುಗಳು, ಹಳೆಯ ಮೇಜು, ಮುಪ್ಪಾನು ಮುರುಕು ಬೆಂಚುಗಳು, ಮಣ್ಣುನೆಲದ ದೇಸಿಯ ಈ ಹೋಟೆಲುಗಳೆದುರಿಗೆ “ಉಡುಪಿ  ಬ್ರಾಹ್ಮಣರ ಹೋಟೆಲ್ ” ಬೋರ್ಡ್ ಹೊತ್ತು ಆರ್ಸಿಸಿ ಬಿಲ್ಡಿಂಗಿನಲ್ಲಿ ಈಸ್ಟ್ ಇಂಡಿಯಾ ಕಂಪನಿ‌ಯಂತೆ ಯಡ್ರಾಮಿಯಲ್ಲಿ ಝಂಡಾ ಊರಿತು. ಅದು ಆಗ ಮದುವೆ ಹೆಣ್ಣಿನಂತೆ ಅಲಂಕರಿಸಿತ್ತು. ಕಲರ್ಫುಲ್ ಕುರ್ಚಿ, ಟೇಬಲ್ ಗಳು, ಚೆಂದನೆಯ ಗಲ್ಲಾಕುರ್ಚಿ, ಆ ಕುರ್ಚಿ ಮೇಲ್ಭಾಗದ ಮೆರುಗಿನ ಬಣ್ಣದ ಗೋಡೆಗೆ ಅಷ್ಟಮಠದ ಭಗವತ್ಪಾದರ ಫೋಟೋ. ಅದನ್ನು ನೋಡಿದರೆ ಸಾಕು ಇವರು ಮಂಗಳೂರು, ಉಡುಪಿ ಬ್ರಾಹ್ಮಣರೆಂದು ಹೇಳಬಹುದಿತ್ತು. ಉಡುಪಿ ಕಡೆಯಿಂದ ಬರುವಾಗಲೇ  ರುಚಿಕರವಾದ ಖಾದ್ಯ ತಯಾರಕ ಒಂದಿಬ್ಬರು ಅಡುಗೆ ಭಟ್ಟರು, ಸಪ್ಲಯರೊಂದಿಗೆ  ಹೊಸರುಚಿ ಬಡಿಸುವ ಸೌಟುಗಳನ್ನೂ ತಂದಿದ್ದರು. ಇನ್ನು ಕ್ಲೀನಿಂಗ್ ಗೆ ಲೋಕಲ್ ಕೆಲಸಗಾರರನ್ನು ನೇಮಿಸಿಕೊಂಡರು. ಬಿಳಿ ಆಫ್ ಶರ್ಟ್, ಅಚ್ಚ ಬಿಳಿ ಲುಂಗಿಯ ಭಟ್ಟರು ಗಲ್ಲಾ ಪೆಟ್ಟಿಗೆ ಮೇಲೆ ಕುಂತು ಸಂಜೀಮುಂದ ಬರುವ “ಉದಯವಾಣಿ”ಯಲ್ಲಿಯ ಕರಾವಳಿ ಸುದ್ದಿಗಳನ್ನು ಓದುವಲ್ಲಿ ತೋರುವಷ್ಟೇ ಆಸಕ್ತಿಯನ್ನು ಹೋಟೆಲಿನ ಶುಚಿ ಮತ್ತು ರುಚಿಯಲ್ಲೂ ತೋರಿಸುತ್ತಿದ್ದರು. ಹಾಡಿನ ಶೈಲಿಯ ಮಧುರ ಮೆಲುದನಿಯ ಭಟ್ಟರ ಮಾತುಗಳಿಗೆ ನಮ್ಮ ಮೊಗಲಾಯಿ ಸೀಮೆಯ ಹಳ್ಳೀಮಂದಿ ಮುರಕೊಂಡು  ಬಿದ್ದಿದ್ರು. ಯಡ್ರಾಮಿ ಅಷ್ಟೇಅಲ್ಲ ಸುತ್ತಮುತ್ತಲ ಹತ್ತಾರು ಹಳ್ಳಿಯ ನಾಲಗೆಗಳಿಗೆಲ್ಲ ಭಟ್ಟರ ಹೊಟೆಲಿನ ಅಕ್ಕಿ ಖಾದ್ಯಗಳ ಹೊಸರುಚಿಯದೇ ಬಿಸಿ – ಬಿಸಿ, ಮಾತು – ಮಾತು. ದೋಸೆ, ಇಡ್ಲಿ, ವಡೆ, ಭಟ್ಟರ ಕೇಸರಿಬಾತಿನ ಪರಿಮಳ ನಮ್ಮ ಸಿರಾಕ್ಕೆ ಇಲ್ಲದಿರುವುದು ಸಾಬೀತು ಮಾಡಿದಂಗಿತ್ತು. ಇಡ್ಲಿ ವಡಾ ತಿನ್ನಲು ಎರಡೆರಡು ಸ್ಟೀಲ್ ಚಮಚಗಳು. ಸ್ಟೀಲ್ ಗಿಲಾಸಿನಲ್ಲಿ ಕುಡಿಯುವ ನೀರು. ನೀರು ತುಂಬಿದ ಸ್ಟೀಲ್ ಜಗ್. ಅದುವರೆಗೆ ಪ್ಲಾಸ್ಟಿಕ್ ಮತ್ತು ಗಿಲಾಟಿ ಗಿಲಾಸುಗಳಲ್ಲಿ ನೀರು ಕುಡಿದ ಗಿರಾಕಿಗಳಿಗೆ ಇದೆಲ್ಲ ಹೊಸ ಮೇಜವಾನಿ, ಸಹಜವಾಗಿ ಖುಷಿಕೊಟ್ಟದ್ದು ಸುಳ್ಳಲ್ಲ. ನಮ್ಮ ದೇಸಿಯ ಹೋಟೆಲುಗಳಲ್ಲಿ ಚಾರಾಣೆಗೆ ಸಿಗುವ ಸಾದಾ ಚಹ ಇಲ್ಲಿ ಬಾರಾಣೆ. ಹೊಟ್ಟೆ ತುಂಬಾ ನಾಸ್ಟಾ ಮಾಡಿದ ಗಿರಾಕಿಗಳು ದೀಡು ರುಪಾಯಿಯ ಕೇಟಿ ಕುಡಿಯಲು ಹಿಂದೇಟು ಹಾಕುತ್ತಿರಲಿಲ್ಲ. ಆಗ ಬರೀ ಬಾರಾಣೆಗೆ ಕಟ್ಟಿಗೆ ಒಲೆ ಊದಿ ಗಟ್ಟಿಯಾದ ಕೇಟೀ ಮಾಡುತ್ತಿದ್ದ ಚಾ ದುಕಾನಿನ ಎಕ್ಸಕ್ಲೂಸಿವ್  ಕೇಟೀ ಸ್ಪೆಷ್ಲಿಸ್ಟಗಳಾದ ಮುಗಳಿ ದುಂಡಪ್ಪ, ರಾವೂರ ಬಸಣ್ಣ, ಬಸಗೊಂಡೆಪ್ಪ, ಬ್ಯಾಳಿ ಶಾಂತಪ್ಪನವರ ಕಿಟ್ಲಿ ಕೇಟೀಯ  ಖಾಸಬಾತ್ ಖಾಯಂ ಗಿರಾಕಿಗಳಿಗೂ ಉಡುಪಿ ಹೊಟೇಲಿನ ಕಾಸ್ಟಲೀ ಖಡಕ್ ಟೀ ಕುಡಿಯುವ ಖಾಯಷ್. ನಮ್ಮ ಗಾಂವಟೀ ಹೊಟೇಲುಗಳು ಮಾಡಿದ ಪೂರಿ ಭಾಜಿ ಪುಟಾಣಿ ಚಟ್ನಿಗೆ ಸಕ್ಕರೆ, ಸೂಸ್ಲಾದ ಮೇಲೂ, ಉಪ್ಪಿಟ್ಟಿನ ಮೇಲೂ ಸಕ್ಕರೆ ಉದುರಿಸಿಕೊಂಡು  ಹೀಗೆ ಎಲ್ಲದಕ್ಕೂ ಸಕ್ಕರೆ ಉದುರಿಸಿಕೊಳ್ಳುವ ಗೋಧಿ ಖಾದ್ಯದ ನಾಲಗೆಗಳಿಗೆ ಉಡುಪಿ ಖಾದ್ಯಗಳು ಬರೀ ರುಚಿಯನ್ನಷ್ಟೇ ಬರಿಸಲಿಲ್ಲ. ಉಡುಪಿ ಹೋಟೆಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವಾಯಿತು. ಅಂತೆಯೇ ಕಡುಬಡವರು ಕೂಡ ಉಡುಪಿ ಹೋಟೆಲಿಗೆ ಹೋಗಿ ಉಡುಪಿ ಕೃಷ್ಣನ ದರ್ಶನ ಪಡಕೊಂಡು ಬಂದಷ್ಟೇ ಸಂತೃಪ್ತರಾಗುತ್ತಿದ್ದರು. ಜವೆಗೋಧಿಯ ಉದುರು ಉಪ್ಪಿಟ್ಟು ಕೊಡುತ್ತಿದ್ದ ಶಿವಣ್ಣನ  ಜವಾರಿ ರುಚಿಯ ಮುಂದೆ ಹೈಬ್ರಿಡ್ ರವೆಯ ” ಉಪ್ಮಾ “ಆರ್ಡರ್ ಮಾಡುವಲ್ಲಿ ನಮ್ಮ ನಾಲಗೆ ರುಚಿಗಳು ಕಲಕಾಗಿದ್ದವು ಎಂದರೆ ಉಡುಪಿ ಹೊಟೆಲ್ ಪ್ರಭಾವ ಯಾವ ಪ್ರಮಾಣದ್ದೆಂದು ಅರ್ಥೈಸಬಹುದು.  ಈಗ್ಗೆ ಎರಡು ವರ್ಷದ ಹಿಂದೆ ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಅಲ್ಲೀಗ ಫಿಜ್ಜಾ, ಬರ್ಗರ್, ದಾಬಾ ಕಲ್ಚರ್. ವೈನ್ ಸೆಂಟರ್, ರೆಸ್ಟುರಾಗಳು ಪ್ರವೇಶ ಪಡೆದಿವೆ. ಇದರ ನಡುವೆ ಉಡುಪಿ ಹೋಟೆಲ್ ಕಣ್ಮರೆಯಾಗಿದೆ. ಭಟ್ಟರ ವಯಕ್ತಿಕ ಕಾರಣಗಳಿಂದಾಗಿ ಕೆಲವು ವರ್ಷಗಳ ಹಿಂದೆಯೇ ನಾಪತ್ತೆಯಾಯಿತು. ಈಗೀಗ ಹೊಸ ಬಸ್ ಸ್ಟ್ಯಾಂಡ್ ಹತ್ತಿರದ ಹೋಟೆಲುಗಳ ಗೋಧಿ ಖಾದ್ಯಗಳಿಗೆ  ಬದಲು ಅಕ್ಕಿ ಖಾದ್ಯದ ವಿವಿಧ ತಿಂಡಿ ಪದಾರ್ಥಗಳು ಯಾಕೋ ಅನ್ನಭಾಗ್ಯದ ನೆನಪು ತರಿಸುತ್ತಿವೆ ? ಆದರೆ ಪಥ್ಯ ಮಾಡುವ ಉತ್ತಮರೆಲ್ಲ ಎತ್ತ ಹೋದರೋ ಎಂಬ ನಮ್ಮ ಕಡಕೋಳ ಮುತ್ಯಾ ಮಡಿವಾಳಪ್ಪನ ಹಾಡಿನಂತೆ  ನೆಲದ ನೆನಪಿನ ರುದ್ರಯ್ಯ ಮುತ್ಯಾ, ಹಲಕರಟಿ ಶಿವಣ್ಣನಂಥವರು ಎತ್ತ ಹೋದರೋ ಗೊತ್ತಿಲ್ಲ. ನಮ್ಮ ನಾಲಗೆಗಳು ಮಾತ್ರ ಹೊಸರುಚಿಯ ಬಲೆಯಲ್ಲಿ ಬಿದ್ದು ಜವಾರಿ ರುಚಿ ಮತ್ತು ಅಭಿರುಚಿಯನ್ನೇ ಕಳಕೊಂಡಿವೆ. ***************

ಯಡ್ರಾಮಿಯ ಉಡುಪಿ ಹೋಟೆಲ್ Read Post »

ಅನುವಾದ

ನಿನ್ನನಾ ಹೋಲಿಸಲೆ ಮಧುವಸಂತ ಬೇಸಿಗೆಗೆ?

ಅನುವಾದಿತ ಕವಿತೆ ಮೂಲ: ವಿಲಿಯಂ ಷೇಕ್ಸ್ ಪಿಯರ್ ಕನ್ನಡಕ್ಕೆ:ವಿ.ಗಣೇಶ್ ನಿನ್ನನಾ ಹೋಲಿಸಲೆ ಮಧು ವಸಂತ ಬೇಸಿಗೆಗೆ? ಅದಕಿಂತ ಮಿಗಿಲಾದ ಸ್ಥಿತಪ್ರಜ್ಞ ಸುಂದರನು ನೀನು ಬೇಸಿಗೆಯ ಬಿರುಗಾಳಿಗೆ ಮೊಗ್ಗು ಮುದುಡಬಹುದು ಮಳೆಗಾಲದ ಆರ್ಭಟಕೆ ವಸಂತ ನಾಶಿಸಬಹುದು ಕೆಲವೊಮ್ಮೆ ಸೂರ್ಯನೂ ಉರಿಗಣ್ಣ ಬಿಡಬಹುದು ಬಂಗಾರದ ಕಾಂತಿಯು ಮಸುಕು ಮಸುಕಾಗಬಹುದು  ಆ ಪ್ರಕೃತಿಯ ಕೋಪಕ್ಕೆ ಕಾಲಚಕ್ರದ ಏರಿಳಿತಗಳಿಗೆ ಚೆಲುವರಲಿ ಚೆಲುವನೂ ಸಹ ಕಳೆಗುಂದಬಹುದು. ಆದರೆ ಚೆಲುವರಲಿ ಚೆಲುವಾದ ಈ ನಿನ್ನ ಚೆಲುವು ಎಂದೆಂದೂ ಮಾಸದೆ ಚಿರವಾಗಿ ಉಳಿಯುವುದು  ನಾಶವಾಗದೆ ಅದು ಚಿಗುರೊಡೆದು ಬೆಳೆಯುವುದು ಬೆಳೆಯುತ್ತ ಬೆಳೆಯುತ್ತ ಹೆಮ್ಮರವಾಗಿ ಹರಡುವುದು  ನಯನಗಳ ನೋಟ ಕಿವಿಗಳ ಶ್ರವಣ ಉಳಿದಿರುವವರೆಗೆ ಉಳಿವ ಈ ಕಾವ್ಯವು ನೀಡುವುದು ನಿನಗೆ ಅಮರತ್ವವನು

ನಿನ್ನನಾ ಹೋಲಿಸಲೆ ಮಧುವಸಂತ ಬೇಸಿಗೆಗೆ? Read Post »

ಕಾವ್ಯಯಾನ

ಪ್ರೀತಿಯ ಸಾಲುಗಳು

ಕವಿತೆ ಬಾಲಕೃಷ್ಣ ದೇವನಮನೆ ಮುಗುಳು ನಗೆಯಲ್ಲಿಹದಗೊಳಿಸಿದಎದೆಯ ಹೊಲದಲ್ಲಿಒಂದೊಂದೇವಾರೆ ನೋಟದಲಿನಾಟಿ ಮಾಡಿದ ಪೈರುತೊನೆದಾಡಿದ ಮಧುರ ಕ್ಷಣ..! ಪ್ರೀತಿಯನ್ನುಮುಲಾಜಿಲ್ಲದ ಹಾಗೆಅವಳು ಒದ್ದು-ಹೋದ ಎದೆಯ ದಾರಿಯಲ್ಲಿಮೂಡಿದ ನೋವಿನ ಹೆಜ್ಜೆಗಳುಯಾವ ಮುಲಾಮಿಗೂಅಳಿಸಲಾಗದೇ ಸೋತರೂಮತ್ತೆ ಮತ್ತೆ ನೆನಪ ಲೇಪಿಸಿಕೊಂಡುಸುಖಿಸುವ ವ್ಯಸನಿ ನಾನು. ಮನಸ್ಸುಗಳು ಉರಿಯುವಈ ರಾತ್ರಿಯಲ್ಲಿಬೀಸುವ ಗಾಳಿಯೂಬೆಂಕಿ ನಾಲಿಗೆ ಸವರುವಾಗಇಷ್ಟಿಷ್ಟೇ… ಇಷ್ಟಿಷ್ಟೇ…ಜಾರಿದ ಗಳಿಗೆಸುಟ್ಟ ನಿದಿರೆಯನ್ನೆಲ್ಲಾಹಗಲಿಗೆ ಗುಡ್ಡೆ ಹಾಕಿದಎಚ್ಚರದ ಬೂದಿಯಲ್ಲಿರೆಪ್ಪೆ ಮುಚ್ಚದ ಇರುಳುಉದುರಿಸಿದ ಕಂಬನಿಒದ್ದೆ ಮಾಡಿದಎದೆಯ ರಂಗಸ್ಥಳದಲ್ಲಿನಿನ್ನ ನೆನಪುಗಳ ಹೆಜ್ಜೆ ಹೂತುಚುಚ್ಚಿ ಚುಚ್ಚಿ ಕೊಲ್ಲುವ ಸಂತಾಪ…!! ನೀನುಹುಕ್ಕುಂ ಕೊಟ್ಟ ಮೇಲೇನಾನುನಿನ್ನೊಲವ ಗದ್ದೆಯಲಿ ಹೆಜ್ಜೆ ಊರಿದ್ದುಮತ್ಯಾಕೆ ಸುಳ್ಳು ಪ್ರಕರಣನನ್ನ ಮೇಲೆನಾನೇ ಅತಿಕ್ರಮಣ ಮಾಡಿದೆನೆಂದು? ******************************

ಪ್ರೀತಿಯ ಸಾಲುಗಳು Read Post »

ಕಾವ್ಯಯಾನ

ನನಗೂ ನಿನ್ನಂತಾಗ ಬೇಕಿತ್ತು!

ಕವಿತೆ ಅನಿತಾ ಪಿ. ತಾಕೊಡೆ ನನಗೂ ನಿನ್ನಂತಾಗಬೇಕಿತ್ತುಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪು ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು ಮೌನಗಳ ಮಥನದಲಿವಿರಹದ ಅಲೆಗಳೆದ್ದು ನಲುಗಿ ಸುಸ್ತಾದಾಗನನಗೂ ನಿನ್ನಂತಾಗುವ ಹಂಬಲ ದಿನ ಕಳೆದಂತೆ ನೋಯಿಸುವ ಭಾವಗಳನ್ನೆಲ್ಲನಿರಾಕಾರಕ್ಕಿಳಿಸಿದೆನನಗೂ ನಿನ್ನಂತಾಗಬೇಕಿತ್ತುನನ್ನತನವನ್ನಾದರೂ ಉಳಿಸಿಕೊಳ್ಳುವಷ್ಟು ಈಗ ಕಳವಳವಿಲ್ಲಕಳುವಾಗುವ ಭಯವೂ ಇಲ್ಲಬಂದಂತೆ ಬದುಕನೊಪ್ಪಿಕೊಳ್ಳುವದಿಟ್ಟನಡೆ ನಿನ್ನಂತೆ… ನಾನಂದುಕೊಂಡಂತೆ *******************************

ನನಗೂ ನಿನ್ನಂತಾಗ ಬೇಕಿತ್ತು! Read Post »

ಕಾವ್ಯಯಾನ

ಕಲಿಗಾಲದ ಫಲ

ಕವಿತೆ ಅರುಣ್ ಕೊಪ್ಪ ಅಂದು ಖುಷಿಯನ್ನೆಲ್ಲ ಉಸುರಿಹಿಡಿದು ಮುಟ್ಟಿದ್ದಕ್ಕೂತಂತ್ರಜ್ಞಾನದ ಗುಲಾಬು ಜಾಮೂನಿನ ಚಪಲದಲ್ಲಿದ್ದೆವು.ಸ್ವಾರ್ಥದ ಕುದುರೆಯನ್ನೇ ಏರಿ ಸವಾರಿಕಾಂಚಾಣದ ಕರವಸ್ತ್ರವನ್ನೇ ಬಳಸುತ್ತಿದ್ದೆವು. ಪಾದ ಊರದ ನೆಲ ಮೌನದಲ್ಲಿಕಾಲು ದಾರಿಗಳನ್ನು ನುಂಗಿ ಹಾಕಿತ್ತುಬೀದಿ ದೀಪದಲ್ಲೂ ಕಣ್ಣು ಕಾಣದಮೋಜು ಮಸ್ತಿಯಲಿ ರಾತ್ರಿಯನ್ನುಹಗಲಿನಂತೆ ಅನುಭವಿಸುತ್ತಿದ್ದೆವು.ಸಮಯವನ್ನು ಹರಾಜು ಮಾಡಿಅಹಂ ಅಂಗಡಿಯಲ್ಲಿ ಮಾರಾಟಮಾಡುತ್ತಿದೆವು. ಹುಟ್ಟಿದ ಕಿಮ್ಮತ್ತಿಗೆ ಬೀದಿ ವಾಪಾರಿಗಳಮಂತ ಉರಿಸುತ್ತಿದ್ದೆವು.ನಾವೇ ಅನುಭೋಗಿಗಳುಎಂಬ ಸರ್ವ ಜಂಬದಲಿವೃದ್ಧರನ್ನು ಹೇಸಿಗೆಯಾಗಿ ನೋಡುತ್ತಿದ್ದೆವು. ವ್ಯಾಪಾರ ಜಗತ್ತಿನಲ್ಲಿಸಂಬಂಧಕ್ಕೂ ಮಾಪು ಹಿಡಿದುತಾವೇ ಸರಿ ಎಂದೆನುತಕಾಣುವ ಸೊಗದೊಳಗೆಭೂತಗನ್ನಡಿಯ ಹಿಡಿದುಮೊಸರಲ್ಲಿ ಕಲ್ಲು ಹುಡುಕುತ್ತಿದ್ದೆವು ಆದರೆ ಇಂದು ಎಲ್ಲಕಲಿಗಾಲದ ಫಲ ***********************

ಕಲಿಗಾಲದ ಫಲ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ

ಅಂಕಣ ‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ‍್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ ಅವ್ವನ ಮಾತುಗಳು. ರಾಜುನಿಗೂ ಹೆತ್ತವರ ಮಾತುಗಳನ್ನು ಕೇಳಿ ಕೇಳಿ ರೋಸಿ ಹೋಗುತ್ತದೆ. ನಾನು ಆಟದಲ್ಲಿ ಮುಂದಿರೋದು ಇವರಿಗೆ ಕಾಣುವುದೇ ಇಲ್ಲ ಎಂದು ಗೊಣಗಿಕೊಳ್ಳುತ್ತಾನೆ. ಮನಃಸ್ಥಿತಿ ಸರಿ ಇರದಿದ್ದಾಗ ಹೌದಲ್ಲ ನನಗೆ ಚೆನ್ನಾಗಿ ಹಾಡೋಕೆ ಬರಲ್ಲ. ಭಾಷಣ ಮಾಡೋಕೆ ಬರಲ್ಲ. ಅಂಕ ಜಾಸ್ತಿ ಗಳಿಸಲು ಆಗಿಲ್ಲ. ನಾನು ಕೆಲಸಕ್ಕೆ ಬಾರದವನು ಎಂದೆನಿಸುತ್ತದೆ. ಇದು ಕೇವಲ ರಾಜುವಿನ ಆತಂಕದ ಸ್ಥಿತಿಯಲ್ಲ. ನಮ್ಮಲ್ಲಿ ಬಹುತೇಕ ಜನ ಪಾಲಕರ ಮತ್ತು ಮಕ್ಕಳ ಸಮಸ್ಯೆ. ಇತರರೊಂದಿಗಿನ ಹೋಲಿಕೆ ಬಹುತೇಕ ಸಲ ನೋವನ್ನೇ ತರುವುದು. ಹೋಲಿಕೆಯಿಂದ ಹೊರ ಬರುವುದು ಹೇಗೆ ಎಂಬುದು ಹಲವಾರು ಯುವಕ/ತಿಯರ ಸಮಸ್ಯೆ. ಹೋಲಿಕೆಯ ಕುಣಿಕೆಯಿಂದ ಬಚಾವಾಗಲು ಕೆಲವು ಸುಳಿವುಗಳು ಒಬ್ಬರಂತೆ ಒಬ್ಬರಿಲ್ಲ ನಮಗೆಲ್ಲ ಗೊತ್ತಿರುವ ಹಾಗೆ ಶಕ್ತಿಯಲ್ಲಿ ಅಶ್ವ ಶಕ್ತಿ ಪ್ರಸಿದ್ಧವಾದುದು.ಅದಕ್ಕೆ ಮರ ಹತ್ತುವ ಸ್ಪರ್ಧೆಯಲ್ಲಿ ಅದು ನಪಾಸಾಗುತ್ತದೆ. ಮೀನು  ಸಲೀಸಾಗಿ ಈಜುವುದು ಅದಕ್ಕೆ ಭೂಮಿಯ ಮೇಲೆ ಓಡುವ ಸ್ಪರ್ಧೆ  ಇಟ್ಟರೆ ಸತ್ತೇ ಹೋಗುತ್ತದೆ. ಪಶು ಪ್ರಾಣಿಗಳ ಹಾಗೆಯೇ ನಮ್ಮಲ್ಲಿಯೂ ಪ್ರತಿಯೊಬ್ಬರೂ ಒಂದೊಂದರಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರುತ್ತೇವೆ. ಈಗಾಗಲೇ ಗೆಲುವು ಸಾಧಿಸಿದವರನ್ನು ಕಂಡು ಅವರಂತಾಗಲು ಹೋದರೆ ಅವರಿಗೆ ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುತ್ತೇವೆ. ನಿಮ್ಮಲ್ಲಿರುವ ಶಕ್ತಿಯನ್ನು ಕಡೆಗಣಿಸುವುದು ದೊಡ್ಡ ತಪ್ಪು.ಜೀವನದ ಕೊನೆಯಲ್ಲಿ ಶಕ್ತಿಯ ಅರಿವಾದರೆ ನಿಷ್ಪ್ರಯೋಜಕ. ಹಾಗೇ ಯಾರನ್ನೂ ಕಡೆಗಣಿಸಬೇಡ.  ಕಬೀರರು ಹೇಳಿದಂತೆ,’ ಕಾಲ ಕೆಳಗಿರುವ ಕಡ್ಡಿಯನ್ನು ಕಡೆಗಣಿಸಬೇಡ. ಅದೇ ಹಾರಿ ಬಂದು ನಿನ್ನ ಕಣ್ಣಲ್ಲಿ ನೆಟ್ಟು ನೋವನ್ನುಂಟು ಮಾಡಬಹದು.’ ಮತ್ತೊಬ್ಬರ ನಕಲು ಮಾಡುವುದು ತರವಲ್ಲ. ಪ್ರತಿಯೊಬ್ಬರಿಗೂ ಪಂಚೇಂದ್ರಿಯಗಳಿವೆ. ಆದರೆ ಅವು ನೋಡಲು ಬೇರೆ ಬೇರೆಯೇ ಆಗಿವೆ. ಅಂದರೆ ಒಬ್ಬರಂತೆ ಒಬ್ಬರಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲಿ ಹುದುಗಿರುವ ಪ್ರತಿಭೆಗಳು ಭಿನ್ನ ಭಿನ್ನ. ಎಂಬ ವಿಷಯವನ್ನು ಮನದಟ್ಟು ಮಾಡಿಕೊಂಡರೆ ಹೋಲಿಕೆಯಾಚೆ ಬರುವುದು ಸುಲಭ ಕೊರತೆಯ ಭಯ ಬೇಡ ಬೇರೆಯವರಲ್ಲಿರುವ ಪ್ರತಿಭೆ ನನ್ನಲ್ಲಿಲ್ಲ. ನನ್ನಲ್ಲಿ ಕೊರತೆಗಳ ಆಗರವೇ ಇದೆ. ಈ ಕೊರತೆಗಳ ಕಾರಣದಿಂದ ನನಗೇನೂ ಸಾಧಿಸಲಾಗುವುದಿಲ್ಲ ಎನ್ನುವ ಭ್ರಮೆಯಿಂದ ಹೊರ ಬನ್ನಿ. ಇತರರ ಜಾಣ್ಮೆ, ಸೌಂದರ್ಯ, ಸಿರಿವಂತಿಕೆಗೆ ಹೋಲಿಸಿಕೊಂಡು ಕೊರಗುವುದನ್ನು ನಿಲ್ಲಿಸಿ. ಇತರರಲ್ಲಿರುವುದು ಶ್ರೇಷ್ಟ. ನನ್ನಲ್ಲಿರುವುದು ಕನಿಷ್ಟ. ಎಂಬ ನಿರ‍್ಧಾರಕ್ಕೆ ಬರಬೇಡಿ. ನಮ್ಮ ನಮ್ಮ ಮನೋವೃತ್ತಿಯಂತೆ ನಮ್ಮ ಇಚ್ಛೆಗಳಿರುತ್ತವೆ.ಎನ್ನುತ್ತಾರೆ ಬಲ್ಲವರು.ಸುತ್ತ ಮುತ್ತ ಇರುವವರ ಅಭಿಪ್ರಾಯವನ್ನು ಮನ್ನಿಸಿ ಅದರಂತೆ ನಡೆಯದೇ ಹೋದರೆ ನನ್ನಲ್ಲಿರುವ ಕೊರತೆಯ ಕಂದಕ ಮುಚ್ಚಲಾಗುವುದಿಲ್ಲ. ಬೇರೆಯವರ ಮಾತಿನಂತೆ ನಡೆದುಕೊಂಡರೆ ಅದು ನಿಸ್ವಾರ‍್ಥ.ಕೊರತೆಯ ನೀಗಿಸಿಕೊಳ್ಳುವುದರಲ್ಲಿ ತೊಡಗಿಕೊಂಡರೆ ಅದು ಸ್ವಾರ್ಥ ಎಂಬ ತಪ್ಪು ಕಲ್ಪನೆಯಲ್ಲಿ ಕಾಲ ಕಳೆಯಬೇಡಿ. ‘ತನ್ನ ಹಿತವನ್ನು ನೋಡಿಕೊಳ್ಳುವುದು ಸ್ವಾರ‍್ಥವಲ್ಲ. ಇತರರ ಹಿತಕ್ಕೆ ದಕ್ಕೆ ತರುವುದೇ ಸ್ರ‍ಾರ್ಥ.’ ಎಂಬುದನ್ನು ಅರಿತು ಮುನ್ನಡೆಯಿರಿ. ಆಸಕ್ತಿ ಗುರುತಿಸಿಕೊಳ್ಳಿ ವಾತ್ಸಾಯನ ಮುನಿಯ ನುಡಿಯಂತೆ ‘ಒಂದೇ ಒಂದು ದೋಷವು ಎಲ್ಲ ಗುಣಗಳನ್ನು ಕೆಡಿಸಿಬಿಡುತ್ತದೆ.’ ಹೋಲಿಕೆಯಲ್ಲಿ ಬಿದ್ದು ಬಿಟ್ಟರೆ ನಮ್ಮೆಲ್ಲ ಸಾರ್ಥಕ್ಯ ಶಕ್ತಿ ವಿನಾಶವಾದಂತೆಯೇ ಸರಿ. ನಿಮಗೆ ಯಾವ ರಂಗದಲ್ಲಿ ಆಸಕ್ತಿ  ಇದೆ ಎಂಬುದನ್ನು ಗುರುತಿಸಿ. ಬಡತನದ ಕಾರಣದಿಂದ ಶಾಲಾ ಶಿಕ್ಷಣ ಪಡೆಯದ ಬಾಲಕನೊಬ್ಬ ಹೊಟ್ಟೆ ಪಾಡಿಗಾಗಿ ಬುಕ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ. ಬೈಂಡಿಂಗಿಗೆ ಬಂದ ಪುಸ್ತಕಗಳನ್ನು ಓದುವ ಗೀಳು ಬೆಳೆಸಿಕೊಂಡ. ಬರ ಬರುತ್ತ ವಿಜ್ಞಾನದಲ್ಲಿ ತನಗಿರುವ ಆಸಕ್ತಿಯನ್ನು ಗುರುತಿಸಿಕೊಂಡು ಸರ್ ಹಂಪ್ರೆ ಡೇವಿಯ ಸಹಾಯಕನಾಗಿ ಕಾರ‍್ಯ ನಿರ‍್ವಹಿಸಿ ಕೊನೆಗೆ  ಜಗತ್ತಿನ  ಸುಪ್ರಸಿದ್ಧ ವಿಜ್ಞಾನಿಯಾದ ಆತನೇ ಮೈಕೆಲ್ ಫ್ಯಾರಡೆ. ಆಸಕ್ತಿಯನ್ನು ಗುರುತಿಸಿಕೊಳ್ಳಬೇಕೆಂದರೆ ನಿಮ್ಮನ್ನು ನೀವು ಅರ್ಥೈಸಿಕೊಳ್ಳಿ. ಅಂದರೆ  ನಿಮ್ಮಲ್ಲಿರುವ ಬಲ ಮತ್ತು ಬಲಹೀನತೆಗಳನ್ನು ತಿಳಿದುಕೊಳ್ಳಿ. ಈ ಕೆಲಸ ನನಗೆ ತುಂಬಾ ಖುಷಿ ನೀಡುತ್ತದೆ. ಇದನ್ನು ನಾನು ಇತರರಿಗಿಂತ ಬಹಳಷ್ಟು ಚೆನ್ನಾಗಿ ಮಾಡಬಲ್ಲೆ. ವಿವಿಧ ವಿಷಯಗಳಲ್ಲಿ ಆಸಕ್ತಿ ಇದೆ ಎಂದೆನಿಸಿದಾಗ ಇದನ್ನು ಮಾಡದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಈ ಕೆಲಸ ನನಗೆ ಪಂಚ ಪ್ರಾಣ. ಇದನ್ನು ಮಾಡದೇ ನಾನಿರಲಾರೆ.ಅಂತ ಹೇಳುತ್ತಿರೋ ಅದೇ ನಿಜವಾಗಲೂ ನಿಮ್ಮ ಆಸಕ್ತಿ ಎಂದು ಪರಿಗಣಿಸಿ ನಿಮ್ಮ ಗುರಿಯನ್ನು ನಿರ‍್ಣಯಿಸಿ. ನೀವು ನೀವಾಗಿರಿ ಬೇರೆಯವರು ನಿಮ್ಮನ್ನು ಇಷ್ಟಪಡಬೇಕೆಂದು ನಿಮಗೆ ಇಷ್ಟವಿಲ್ಲದ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದದ ಬದಲಾವಣೆಗಳಿಗೆ ಮುಂದಾಗವೇಡಿ. ಭೌತಿಕವಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಕುಟುಂಬದ ಆಚರಣೆಗಳು, ಪದ್ದತಿಗಳು, ಸತ್ಸಂಪ್ರದಾಯಗಳು, ಹಬ್ಬ ಹರಿದಿನಗಳು, ವ್ರತಾಚರಣೆಗಳು ಮೌಢ್ಯತೆಯಿಂದ ಮುಕ್ತವಾಗಿರುವಾಗ ಅವುಗಳನ್ನು ಬದಲಾಯಿಸುವುದರಿಂದ ಅರ‍್ಥವಿಲ್ಲ. ಸಣಕಲು ದೇಹದವನು ದಪ್ಪದಾಗಿ ಕಾಣಲು ಸ್ವೆಟರ್ ಧರಿಸಿದರೆ ನೀವು ಅದನ್ನು ಫ್ಯಾಷನ್ ಎಂದು ತಿಳಿದು ತಡೆದುಕೊಳ್ಳಲಾರದ ಬೇಸಿಗೆಯ ಧಗೆಯಲ್ಲಿ ಒದ್ದಾಡಬೇಕಾಗುತ್ತದೆ.  ಅಂಧರಾಗಿ ಅನುಕರಿಸಲು ಹೋದರೆ ನಗೆಪಾಟಲಿಗೆ ಈಡಾಗುತ್ತೀರಿ. ನಿಮ್ಮ ದೇಹಕ್ಕೆ ಕಾಲಮಾನಕ್ಕೆ ಏನು ಸೂಕ್ತವೋ ಅದನ್ನೇ ಧರಿಸಿ. ನಟ ಪುನೀತ್ ರಾಜ್ ಕುಮಾರ ಎಂದರೆ ಅಚ್ಚು ಮೆಚ್ಚು ಆತನ ಬಿಗ್ ಫ್ಯಾನ್ ನಾನು ಎನ್ನುತ್ತ ಆತನ ನಡೆ ನುಡಿಯನ್ನು ಅನುಸರಿಸಿದರೆ ನಿಮ್ಮನ್ನು ಜ್ಯೂನಿಯರ್ ಪುನಿತ್ ಎಂದು ಕರೆಯುತ್ತಾರೆ ಹೊರತು ನಿಮ್ಮನ್ನು ನಿಮ್ಮ ಹೆಸರಿನಲ್ಲಿ ಗುರುತಿಸುವುದಿಲ್ಲ. ಹೀಗಾಗಿ ಎಲ್ಲೆಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ನಿಮ್ಮದಾಗಿಸಿಕೊಳ್ಳಿ ಆದರೆ ಸಂಪೂರ‍್ಣವಾಗಿ ನಿಮ್ಮತನವನ್ನು ಬಿಟ್ಟುಕೊಡಬೇಡಿ. ಹಾಗೆ ಮಾಡಲು ಹೋದರೆ ನವಿಲು ಕುಣಿಯುತ್ತೆ ಅಂತ ಕೆಂಬೂತ ಕುಣಿಯಲು ಹೋದಂತೆ ಆಗುತ್ತದೆ. ‘ನಮಗೆ ಜೀವನವನ್ನು ಕೊಟ್ಟ ದೇವರು ಅದರ ಜೊತೆಯಲ್ಲಿಯೇ ಸ್ವಾತಂತ್ರ್ಯವನ್ನೂ ದಯಪಾಲಿಸಿದ್ದಾನೆ.’ ಎಂಬುದು ಜೆರ‍್ಸನ್ ಮಾತು. ಸ್ವತಂತ್ರವಾಗಿ ನೆಮ್ಮದಿಯಿಂದಿರಿ. ಸ್ವಸ್ವಾರ್ಥದಿಂದ ಪಡೆಯುವ ಗೌರವವೇ ನಿಜವಾದ ಗೌರವ. ಅವಮಾನಗಳಿಗೆ ಹೆದರದಿರಿ ಬಹು ಅಂಗವೈಕಲ್ಯವನ್ನು ಹೊರೆ ಎಂದುಕೊಳ್ಳದೇ ಸಾಧನೆಯ ಪರ‍್ವತವನ್ನೇರಿದ ಹೆಲೆನ್ ಕೆಲ್ಲರ್, ಕುರುಡನಾದರೂ ಡಾಕ್ಟರ್ ಆದ ಡೇವಿಡ್ ಹರ‍್ಟ್ಮನ್,ಬಡತನವನ್ನು ಬೆನ್ನಿಗಂಟಿಸಿಕೊಂಡು ಹುಟ್ಟಿದ ಅಬ್ರಹಾಂ ಲಿಂಕನ್ ಅಧ್ಯಕ್ಷನಾಗಲು ಪಟ್ಟ ಅವಮಾನಗಳು ಅಷ್ಟಿಷ್ಟಲ್ಲ. ಹೆಜ್ಜೆ ಹೆಜ್ಜೆಗೂ ಅವಮಾನದ ರುಚಿಯನ್ನು ಕಂಡವರೆ ಅವರೆಲ್ಲ. ಆದರೂ ತನ್ನಂತೆ ಇರುವವರ ಜೊತೆ ತಮ್ಮನ್ನು ಹೋಲಿಸಿಕೊಂಡು ಅಮೂಲ್ಯ ಜೀವನ ವ್ಯರ್ಥವಾಗಿಸಿಕೊಳ್ಳಲಿಲ್ಲ. ಬದಲಾಗಿ ಅವಮಾನಗಳಿಗೆ ಕೆಚ್ಚೆದೆಯಿಂದ ಸೆಡ್ಡು ಹೊಡೆದು ಗೆದ್ದರು. ಖ್ಯಾತ ಫೋರ‍್ಢ್   ಮೋಟಾರು ಕಂಪನಿಯ ಮುಖ್ಯಸ್ಥ ಹೆನ್ರಿ ಫೋರ‍್ಢ್ ಕಾರು ಕಂಡು ಹಿಡಿಯುವ ಕಠಿಣ ಪರಿಶ್ರಮದಲ್ಲಿದ್ದ ಕಾಲದಲ್ಲಿ ಒಬ್ಬ ಹಳ್ಳಿಗ ಆತನನ್ನು ಉದ್ದೇಶಿಸಿ,’ಕುದುರೆಗಳೇ ಇಲ್ಲದ ಚಕ್ರದ ರಥವನ್ನು ಎಳೆಯಬೇಕು ಅಂದುಕೊಂಡಿದ್ದಿಯಾ? ಶ್ರೀಮಂತ ಆಗೋ ಹುಚ್ಚು ಕನಸು ಕಾಣ್ತಿದಿಯಾ?’ ಎಂದು ವ್ಯಂಗ್ಯವಾಗಿ ಕೇಳಿದನಂತೆ. ಅದಕ್ಕೆ ಫೋರ‍್ಡ್ ‘ನಾನಷ್ಟೇ ಅಲ್ಲ ಸಾವಿರಾರು ಜನರನ್ನು ಶ್ರೀಮಂತರನ್ನಾಗಿ ಮಾಡಬೇಕು ಅಂತ ಕನಸು ಕಾಣ್ತಿದಿನಿ.’ ಅಂತ ಗಟ್ಟಿಯಾದ ಧ್ವನಿಯಲ್ಲಿ ಉತ್ತರಿಸಿದನಲ್ಲದೇ ತಾನು ಅಂದಂತೆ ಸಾಧಿಸಿದ. ಹೋಲಿಕೆಯ ಗೋರಿಯಲ್ಲಿ ಹೂತುಕೊಳ್ಳದೇ ನೈಜತೆಯನ್ನು ಅರ‍್ಥೈಸಿಕೊಂಡು ನಡೆದರೆ  ಚೆಂದದ ಜೀವನವೊಂದು ನಾವು ನಡೆಯುವ ದಾರಿಯಲ್ಲಿ ಮುಗಳ್ನಗುತ್ತದೆ. ************* ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ Read Post »

ಅಂಕಣ ಸಂಗಾತಿ, ಮುಖಾಮುಖಿ

ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ

ಅಂಕಣ ಬರಹ ಕವಿಯಿತ್ರಿ ನೂತನ ಎಂ.ದೋಶೆಟ್ಟಿ ಉತ್ತರ ಕನ್ನಡದ ಸಿದ್ದಾಪುರದವರು. ಮೃತ್ಯುಂಜಯ ದೋಶೆಟ್ಟಿ , ಪ್ರೇಮಾ ದೋಶೆಟ್ಟಿ ಅವರ ಮಗಳು.‌ಅವರ ಪತಿ ಶಾಮ ಸುಂದರ ಕದಂ ಕಾರವಾರ ಬಳಿಯ ಸದಾಶಿವಗಡದವರು. ಆಕಾಶವಾಣಿಯಲ್ಲಿ ಎಂಜಿನಿಯರ್. ಕವಯಿತ್ರಿ ಕತೆಗಾರ್ತಿ ನೂತನ ದೋಶೆಟ್ಟಿ ಸಮೂಹ ಸಂವಹನ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಹುದ್ದೆ ನಿಭಾಯಿಸುತ್ತಿದ್ದಾರೆ. ಕಾರವಾರ ಆಕಾಶವಾಣಿ, ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಮಾಡಿ, ಇದೀಗ ಹಾಸನ ಜಿಲ್ಲಾ ಆಕಾಶವಾಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ೨೦೦೯ರಲ್ಲಿ ಕಾಲವೆಂಬ ಮಹಾಮನೆ ಕಾವ್ಯ ಸಂಕಲನ ಪ್ರಕಟಿಸಿದರು. ಭಾಗೀರತಿ ಉಳಿಸಿದ ಪ್ರಶ್ನೆಗಳು ,ಮಾನವೀಯತೆ ಬಿಕ್ಕಳಿಸಿದೆ(೨೦೧೬) ಅವರ ಕವಿತಾ ಸಂಕಲನಗಳು. ಯಾವ “ವೆಬ್ ಸೈಟ್ ನಲ್ಲೂ ಉತ್ತರವಿಲ್ಲ ” ಕಥಾ ಸಂಕಲನ. ಅಂತಃಸ್ಪುರಣ, ಮರೆಯಾಯಿತೆ ಪ್ರಜಾಸತ್ತೆ ಅವರ ಲೇಖನಗಳ ಸಂಗ್ರಹ. ಆಕಾಶವಾಣಿ ಅಂತರಾಳ‌ ಅವರು ಆಕಾಶವಾಣಿ ಕುರಿತು ಬರೆದ ಪುಸ್ತಕ. ‌ಬಾ ಬಾಪು , ಆನ್ ಗಾಂಧಿಯನ್ ಪಾಥ್ ಆಕಾಶವಾಣಿಗಾಗಿ ರೂಪಿಸಿದ ರೂಪಕಗಳು. ವಚನಸಾಹಿತ್ಯ, ಬಸವಣ್ಣ, ಗಾಂಧಿಜೀ ವಿಚಾರಧಾರೆಯಿಂದ ಪ್ರಭಾವಿತರಾದ ಲೇಖಕಿ. ಜೀವಪರ ಕಾಳಜಿಯ ಕವಯಿತ್ರಿ. ‌ ಈ ಸಲ  ಸಾಹಿತ್ಯ ಸಂಗಾತಿ ಕನ್ನಡ  ವೆಬ್ ಜೊತೆ ಮಾತಿನಲ್ಲಿ ಮುಖಾಮುಖಿಯಾಗಿದ್ದಾರೆ… ……. ಲೇಖಕಿ ನೂತನ ದೋಶೆಟ್ಟಿ ಅವರೊಡನೆ ಮುಖಾಮುಖಿಯಾಗಿದ್ದಾರೆ ಕವಿ ನಾಗರಾಜ ಹರಪನಹಳ್ಳಿ  ಪ್ರಶ್ನೆ : ಕತೆ, ಕವಿತೆ ಗಳನ್ನು ಬರೆಯುವುದರ ಕುರಿತು ಹೇಳಿ, ಇದೆಲ್ಲಾ ಹೇಗೆ ಆರಂಭವಾಯಿತು? ಉತ್ತರ : ನಾನು ಮೊದಲು ಬರವಣಿಗೆ ಶುರು ಮಾಡಿದ್ದು ನಾನು ಓದಿದ ಪುಸ್ತಕದ ಕುರಿತು ನನಗೆ ಅನ್ನಿಸಿದ ನಾಲ್ಕು ಸಾಲುಗಳನ್ನು ನೋಟ್ ಪುಸ್ತಕದಲ್ಲಿ ಬರೆಯುವುದರ ಮೂಲಕ. ಅದೊಂಥರ ವಿಮರ್ಶೆ ಅಂತ ಆಗ ಅಂದ್ಕೊಂಡಿದ್ದೆ. ಕಾಲೇಜಿನ ಆರಂಭದ ದಿನಗಳಲ್ಲಿ. ಆ ಪುಸ್ತಕ ಈಗಲೂ ನನ್ನ ಹತ್ತಿರ ಇದೆ. ಆನಂತರ ಸಣ್ಣ ಕವಿತೆ ಬರೀತಿದ್ದೆ.  ಅದೇ ಪುಸ್ತಕದಲ್ಲಿ. ನಾನು ಬಹುತೇಕ ಮೌನಿ. ಬಹಳ ಕಡಿಮೆ ಮಾತು. ಹಾಗಂತ ಮನದೊಳಗಿನ ದೊಂಬರಾಟ ಇರ್ತಿತ್ತಲ್ಲ. ಅದಕ್ಕೆ ಒಂದು ಅಭಿವ್ಯಕ್ತಿ ಬೇಕಾಗುತ್ತಿತ್ತು. ಅದು ಕವಿತೆಯ ಸಾಲುಗಳಲ್ಲಿ ಹೊರಬರಲು ಹವಣಿಸಿತ್ತು. ಕತೆಯೂ ಹಾಗೇ. ಸುತ್ತಲಿನ ಪರಿಸರದಲ್ಲಿ ಗಮನಿಸಿದ, ತಟ್ಟಿದ ವಿಷಯದ ಎಳೆ ಮನಸ್ಸಿನಲ್ಲಿ ಕೊರೆಯಲು ಶುರುವಾಗುತ್ತಿತ್ತು. ಕತೆಯಾಗಲಿ,  ಕವಿತೆಯಾಗಲಿ ಅದು ಒಂದು ರೂಪಕ್ಕೆ ಬರುವ ತನಕದ ತಹತಹವನ್ನ ಅನುಭವಿಸಿಯೇ ತೀರಬೇಕು. ಅದು ಅಕ್ಷರದ ರೂಪದಲ್ಲಿ ಇಳಿದಾದ ಮೇಲಿನ ನಿರುಮ್ಮಳತೆ ಕೂಡ ಅತ್ಯಂತ ಸುಖದ ಅನುಭವಗಳಲ್ಲಿ ಒಂದು. ಬರವಣಿಗೆ ನನ್ನ ನಿಲುವು, ಸಮಾಜದ ಆಶಯ, ನನ್ನ ಆಶಯದ ಕಾಣ್ಕೆ. ಇದರ ಹೊರತಾಗಿಯೂ ಇದಕ್ಕೇ ಬರೀತೇನೆ ಅಂತ ಹೇಳೋದಕ್ಕೆ ಆಗೋದಿಲ್ಲ. ನನಗೆ ಬರವಣಿಗೆ ತೀರಾ ಖಾಸಗಿ, ತೀರ ಸ್ವಂತದ್ದು.. ಹೀಗಂದಾಗ ಕೆಲವರು ಕೇಳ್ತಾರೆ. ಅದು ಬೇರೆಯವರು ಓದೋದಕ್ಕೆ ಅಂತ. ಅದಕ್ಕೆ ಆ ಶಕ್ತಿ ಇದ್ದರೆ ತುಂಬ ಸಂತೋಷ. ತಾನಾಗೇ ಅದನ್ನು ಆದರೆ ಕತೆ, ಕವಿತೆ ಗಳಿಸಿಕೊಳ್ಳಬೇಕು. ಕವಿತೆ ಹುಟ್ಟುವ ಕ್ಷಣ… ತಡೆಹಿಡಿದ ದುಃಖ ತಮ್ಮವರು ಕಂಡಾಗ ಕಟ್ಟೆಯೊಡೆದು ಹೊರ ಬರುತ್ತದಲ್ಲಾ ಅಂಥ ಒತ್ತಡ ಒಳಗೆ ಇರುತ್ತದೆ ಅಂತ ಕಾಣುತ್ತೆ. ಅದಕ್ಕೆ ಚುರುಕು ಮುಟ್ಟಿಸಿದ ತಕ್ಷಣ ತಾನಾಗಿ ಬರುತ್ತದೆ. ದುಃಖ, ನೋವು,ಸಂಕಟ, ವಿಷಾದ, ಕಳೆದುಕೊಳ್ಳುವುದು, ಒಂಟಿತನ , ಸಂಬಂಧ ಮೊದಲಾದವು ತೀವೃವಾಗಿ ಬರೆಸುವಂತೆ ಸಂತೋಷ , ಸುಖ ಬರೆಸಲಾರದು. ಬರೆದಾದ ಮೇಲೆ ಅದೊಂದು ಬಂಧಮುಕ್ತತೆ… ಕತೆ ಹಾಗಲ್ಲ. ಕೆಲವು ಕತೆಗಳು ಒಂದೇ ಓಟದಲ್ಲಿ ಸಾಗಿಬಿಡುತ್ತವೆ. ಕೆಲವಕ್ಕೆ ಹೈರಾಣಾಗಿ ಹೋಗಿಬಿಡುತ್ತೇವೆ. ಬಂದಿರುವುದು ನನ್ನ ಒಂದು ಕಥಾ ಸಂಕಲನ. ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ ಅಂತ. ಅದೇ ಶೀರ್ಷಿಕೆಯ ಕತೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಬಸ್ಸಿನಲ್ಲಿ ಹೋಗುತ್ತಿರುವಾಗ. ಅಲ್ಲೇ ಗುರುತು ಹಾಕ್ಕೊಂಡಿದ್ದೆ. ಇನ್ನು ಕಾರವಾರದಲ್ಲಿ ಇದ್ದಾಗ ಕಡಲು ಬಹಳ ಕಾಡಿಸಿತ್ತು. ಬೀಚಿನಲ್ಲಿ ಶೇಂಗಾ ಮಾರಲು ಬರುವ ಹುಡುಗನನ್ನು ಕಂಡಾಗ ಮನೆಗೆ ಬಂದು ಬರೆದಿದ್ದಿದೆ. ಒಂದೊಂದು ಕತೆಗೂ ಅದರದ್ದೇ ಆದ ಇತಿಹಾಸ ಇರುತ್ತೆ. ಕಾವ್ಯ,ಕತೆಯ ವಸ್ತು, ವಿಷಯ…. ಮನುಷ್ಯ ಸಂಬಂಧಗಳು ಬಹುತೇಕ ವಸ್ತು ಕತೆಗಳಲ್ಲಿ. ಸಾಮಾಜಿಕ ಚಿತ್ರಣ, ಶೋಷಣೆಗಳೂ ಇವೆ. ಪ್ರಸ್ತುತ ರಾಜಕೀಯ…. ನಾನು ರಾಜಕೀಯವನ್ನು ಹತ್ತಿರದಿಂದ ಗಮನಿಸುತ್ತೇನೆ. ಅದರ ನಡೆಗಳು ನಮ್ಮ ಸಾಮಾಜಿಕ ಹಾಗೂ ವೈಯುಕ್ತಿಕ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತವೆ. ಆದರೆ ಬಹುತೇಕರು ತಮಗೆ ಸಂಬಂಧವಿಲ್ಲ ಎಂಬಂತೆ ಇರುತ್ತಾರೆ. ಹಾಗಾಗಬಾರದು. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬಹಳ ಕಡಿಮೆ ಅನ್ನಿಸುತ್ತದೆ. ಬಾಲ್ಯ, ಹರೆಯ….ಕುರಿತು ಒಂದಿಷ್ಟು ಬಾಲ್ಯ  ಧಾರಾಳವಾಗಿ ಇಣುಕಿದೆ ಕವಿತೆಗಳಲ್ಲಿ . ಏಕೆಂದರೆ ನಮ್ಮದು ಸಮೃದ್ಧ ಬಾಲ್ಯ. ಮಲೆನಾಡಿನ ಬೆಚ್ಚನೆಯ,  ನಚ್ಚಗಿನ ಬಾಲ್ಯ. ನನ್ನ  ಊರು ಸಿದ್ದಾಪುರ. ಊರಿಗೆ ಊರೇ ನಮ್ಮ ಆಟದ ಅಂಗಳವಾಗಿತ್ತು. ಎದುರು-ಬದುರು, ಅಕ್ಕ-ಪಕ್ಕ ಎಲ್ಲರೂ ನಮ್ಮವರೇ ಎಂದು ಬೆಳೆದವರು. ಈಗಲೂ ಅದನ್ನು ಎಲ್ಲರಲ್ಲೂ ಕಾಣಲು ಹೋಗಿ   ಮೋಸ ಹೋಗುತ್ತೇನೆ. ಸಾಂಸ್ಕೃತಿಕ  ವಾತಾವರಣ ಏನನಿಸುತ್ತದೆ? ಬಸವ ತತ್ತಗಳಲ್ಲಿ ಬೆಳೆದ ನಮಗೆ   ಯಾವುದೇ ಜಾತಿ- ಮತಗಳ ಬೇಧ ಕಾಣಿಸದೇ ನಮ್ಮ ಹಿರಿಯರು ಬೆಳೆಸಿದ್ದು ನಮ್ಮ ಭಾಗ್ಯ. ಆದರೆ ಇವುಗಳು ಇಂದು  ಮುನ್ನೆಲೆಗೆ ಬಂದು ನಿಂತಿವೆ. ಇವುಗಳ ಮಾಯೆಯ ಮುಸುಕಿಂದ ಒಂದು ಅಂತರ ಕಾಪಾಡಿಕೊಳ್ಳುವುದು ಕಷ್ಟವೇನಲ್ಲ. ಧರ್ಮ, ದೇವರ ಕುರಿತು ಹೇಳಿ… ನಾವು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಮಕ್ಕಳೆಲ್ಲ ಎರಡು ಹೊತ್ತು … ದೇವರೆದುರು ನಿಂತು ಬಸವಣ್ಣನವರ    ಕಳಬೇಡ, ಕೊಲಬೇಡ …ವಚನ  ಹೇಳಿಕೊಳ್ಳುತ್ತಿದ್ದೆವು. ಉಳಿದ ಇನ್ನೂ ಏನೇನೋ ಹೇಳಿಕೊಳ್ಳುತ್ತಿದ್ದೆವು. ಆದರೆ ಆ ವಚನ ನನ್ನ ಮನದಲ್ಲಿ ಮಾಡಿರುವ ಪ್ರಭಾವ ಅಪಾರ. ನಾನು ಇಂದಿಗೂ ಅದನ್ನು ಅಕ್ಷರ ಷಹ ಪಾಲಿಸುತ್ತೇನೆ. ಇದರಿಂದ ಎಷ್ಟು ಸಂಕಟಗಳನ್ನು ಅನುಭವಿಸಬೇಕಾಗುತ್ತದೆ. ಆದರೂ ಅದೇ ನನ್ನ ಧರ್ಮ. ಆಗೆಲ್ಲ ನಾನು ಸಮಾಧಾನ ಮಾಡಿಕೊಳ್ಳುವುದು ಬಸವಣ್ಣನನ್ನೇ ಬಿಡದವರು ನಮ್ಮನ್ನು ಬಿಟ್ಟಾರೇ ? ಅಂತ. ಅವರೆಂದಂತೆ ಕಾಯಕವೇ ನನ್ನ ಧರ್ಮ. ಈ ಧರ್ಮದಲ್ಲಿ ಎಷ್ಟು ಕಷ್ಟವಿದೆಯೇ ಅಷ್ಟೇ ಸುಖವಿದೆ. ನನಗೆ ಆಗ ಕಷ್ಟದಿಂದ ಸಿಗುವ ಸುಖವೇ ಇಷ್ಟ. ಅದು ಬಹಳ ಚೇತೋಹಾರಿ. ಇನ್ನು ದೇವರು …ನನಗೆ ಒಬ್ಬ ಮಿತ್ರನಂತೆ. ಯಾರ ಬಳಿಯೂ ಹೇಳಲಾಗದ ವಿಷಯ, ಚರ್ಚೆಗೆ ಆ ನಿರಾಕಾರ ಬೇಕು. ದೇವರು ಎಂಬುದು ಒಂದು ಅನುಭೂತಿ. ನಿಮ್ಮನ್ನೆ ನೀವು ಆಂತರ್ಯದಲ್ಲಿ ಕಾಣುವ ಬಗೆ. ಸಾಹಿತ್ಯ ವಲಯದ ರಾಜಕೀಯದ ಬಗ್ಗೆ ನಾನು  ಸಿದ್ದಾಪುರದವಳು. ಅಲ್ಲಿಂದ ದೂರ ಇದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ನಾನು ಅಪರಿಚಿತಳು. ನನ್ನ ಮೂರು ಕವನ ಸಂಕಲನಗಳಿವೆ. ಒಂದು ಕವಿತೆ ಬೆಂಗಳೂರು ವಿಶ್ವವಿದ್ಯಾಲಯದ  ಪದವಿಗೆ ಪಠ್ಯವಾಗಿ ತುತ್ತು 2013ರಲ್ಲಿ. ಸುಧಾದಲ್ಲಿ ಬಂದಿದ್ದ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ  ಪದವಿಗೆ ಪಠ್ಯ ಮಾಡಿದ್ದರು 2010ರಲ್ಲಿ. ನಾನು ಅವುಗಳನ್ನು ನೋಡಲೂ ಇಲ್ಲ. ಯಾರೋ ಹೇಳಿದರು ಇದೆ ಎಂದು. ಸಂತೋಷವಾಯಿತು. ಸಾವಿರಾರು, ಮಕ್ಕಳು ಓದಿದರಲ್ಲ ಎಂದು.  ನನ್ನಷ್ಟಕ್ಕೆ ನಾನು ಬರೆದುಕೊಂಡು ಇರುತ್ತೇನೆ. ಯಾವ ಹಪಹಪಿಯೂ ಇಲ್ಲ. ಇದು ನನ್ನ  ನಿಲುವು.ಉಳಿದವರ ನಿಲುವಿನಲ್ಲಿ ನನಗೆ ಆಸ್ಥೆ ಇಲ್ಲ. ದೇಶದ ಚಲನೆ ಬಗ್ಗೆ ಏನನಿಸುತ್ತದೆ? ಅಂದರೆ ರಾಜಕೀಯವಾಗಿ ಮಾತ್ರ ಅಲ್ಲ. ಸಾಮಾಜಿಕ, ಆರ್ಥಿಕ,  ಶೈಕ್ಷಣಿಕ ..ಹೀಗೆ. ಸಾಕಷ್ಟು ಅಭಿವೃದ್ಧಿ ಆಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಸ್ಥಿತ್ಯಂತರಗಳು ಸಹಜ. ಆದರೆ ನಮ್ಮಲ್ಲಿ ಅದಕ್ಕೆ ಹಾಹಾಕಾರ ಎಬ್ಬಿಸುವ ಚಾಳಿ ಇದೆ. ಬದಲಾಗಿ ಅದನ್ನು ಕೌಂಟರ್ ಮಾಡುವ ಜಾಣ್ಮೆ ಬೇಕು. ಈಗ ನೀವು ಗಮನಿಸಿದರೆ ಯಾವುದೇ ಮುಖ್ಯ ಚಳುವಳಿಗಳಿಲ್ಲ. ಇದೂ ಒಂದು ಫೇಸ್. ತನಗೆ ಬೇಕಾದ್ದನ್ನು ಪಡೆಯುವುದು ಸಮಾಜಕ್ಕೆ ಗೊತ್ತಿದೆ. ಆ ಮಟ್ಟಿಗೆ ನನ್ನದು ಆಶಾವಾದ.ಆದರೆ ಸಾಹಿತ್ಯ ಕ್ಷೇತ್ರ ಒಡೆಯದೇ ಒಂದಾಗಿ, ಗುಂಪುಗಾರಿಕೆ ಇರದೇ ಮಾದರಿಯಾಗಿರಬೇಕು ಎಂಬ ಆಸೆಯಿದೆ. ಸಾಹಿತ್ಯವನ್ನು ಅದರ ಮೌಲಿಕತೆಯೊಂದಿಗೆ ಮಾತ್ರ ನೋಡುವ ವಾತಾವರಣ  ಒಡಮೂಡಲಿ. ನಿಮ್ಮ  ಕನಸು… ಓದಬೇಕಾದ್ದು ಬಹಳ ಇದೆ. ನನಗೆ ಮಿತಿಗಳಿವೆ. ಹಾಗಾಗಿ ನನ್ನ ಕನಸುಗಳು ಬಹಳ ಎತ್ತರ ಹಾರಲಾರವು. ಇಷ್ಟದ ಲೇಖಕರು ಕನ್ನಡದಲ್ಲಿ ತೇಜಸ್ವಿ, ಬೇಂದ್ರೆ ಇಂಗ್ಲೀಷ್ ಹೆಚ್ಚು ಓದಿಲ್ಲ. ವರ್ಡ್ಸ್ವರ್ತ್ ನೆಚ್ಚಿನ ಕವಿ. ಈಚೆಗೆ ಓದಿದ ಕೃತಿ… ಲಕ್ಷ್ಮೀ ಪತಿ ಕೋಲಾರ ಅವರ ಹರಪ್ಪ ಡಿಎನ್ ಎ ನುಡಿದ ಸತ್ಯ, ರವಿ ಹಂಜ್ ಅವರು  ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೀಮ್.  ಇಷ್ಟದ ಕೆಲಸ:  ಗಾರ್ಡನಿಂಗ್ ಇಷ್ಟದ ಸ್ಥಳ:  ಕೈಲಾಸ ಮಾನಸ ಸರೋವರ  ಮರೆಯಲಾರದ ಘಟನೆ :  ಬಹಳಷ್ಟಿವೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ …ಊಟಿಗೆ ಹೋಗಿದ್ದಾಗ ಬೆಟ್ಟದ ಮೇಲೆ ಜಿ ಎಸ್ ಶಿವರುದ್ರಪ್ಪ ನವರು ಸಿಕ್ಕಿದ್ದು. ನನ್ನ ಅತೀವ ಸಂಕೋಚ,   ಮುಜುಗರದಿಂದ ನಾನು ಬರೆದದ್ದನ್ನು ಯಾರಿಗು ಹೇಳುತ್ತಿರಲಿಲ್ಲ. ತೋರಿಸುತ್ತಲೂ ಇರಲಿಲ್ಲ. ಈಗಲೂ ಅದೇನು ಹೆಚ್ಚು ಬದಲಾಗಿಲ್ಲ. ************************************** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ Read Post »

You cannot copy content of this page

Scroll to Top