ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಅಕ್ಷತಾ ಕೃಷ್ಣಮೂರ್ತಿ

ಸದ್ಲಾ ಬದ್ಲಿ

ಅವಳೀಗ
ನಲವತ್ತೈದರ ಕಟ್ಟಣಿ
ಎಲ್ಲ ಸರಿ ಆಗಿದೆ
ಮದುವೆ ತಾಯ್ತನ
ಗಂಡ ಮಕ್ಕಳ ಜವಾಬ್ದಾರಿ
ಮನೆ ನೆಂಟರಿಷ್ಟರು
ಆಡಿದಂತೆ ಇರುವುದು
ಆಡಿಸಿಕೊಳ್ಳುವುದು
ಅಡಚಿಹೋಗುವುದು
ಇದ್ದದ್ದೆ ಎಲ್ಲ
ಸರಿಹೋದಂತೆ
ಇಪ್ಪತ್ತೊಂದನೆ ಶತಮಾನದ
ಹಾಡು ಕಿನ್ನರಿ
ಇಂದು ಖುಷಿಯಿಂದ
ಹೋಗಿದ್ದಾಳೆ ತವರಿಗೆ

ಈ ಬಾರಿ ಅದರೂ
ಹದಿನೈದು ದಿನ
ಬಿಂದಾಸ್ ಇದ್ದುಬಿಡಬೇಕು
ನೆರಮನೆಯ ಬೀರಣ್ಣ
ಅವನ ಗಾವ್ಟಿ ಕೆಲಸ
ಹಿಂದಿನ ಮನೆ ಸಾವಿತ್ರಕ್ಕನ
ಅಳಿಯ, ಮಗಳು
ಅವರ ಕಲ್ಲುಖ್ವಾರೆ ಬಿಜಿನೆಸ್ಸು
ಎದುರು ಮನೆ ಸೀತಣ್ಣನ
ಆಯ್ ಆರ್ ಬಿ ಕೆಲಸ
ಮಾದನಗೇರಿ ಶಾಂತಿ
ತರುವ ಒಣಶೆಟ್ಲಿ ಪರಿಮಳ
ಎಲ್ಲ ವಿಚಾರಿಸಬೇಕು.

ಎಸೋಂದು ದಿನ
ಅಲಲಾ
ವರ್ಷ
ಕಳೆದು
ಕೂಡುತ್ತ ಹೋದವು

ಮರೆತೆ ಬಿಟ್ಟೆನಲ್ಲ
ತವರೂರಿನವರ
ಇಷ್ಟು ದಿನ

ಸುಧಾರಿಸಿಕೊಳ್ಳಬೇಕು
ನೆನಪುಗಳ ಮತ್ತೆ
ಕೂಡಿಸಿಕೊಳ್ಳಬೇಕು
ತಪ್ಪ್ ಗಾಯಿ ಇಟ್ಟಾದರೂ
ಅಜ್ಜಿ ಸಾಯುವ ತನಕ
ತೋರಿಸದ ಕಟ್ಟಿಗೆಯ ಆ
ಕರಿ ಪೆಟ್ಟಿಗೆಯನ್ನೊಮ್ಮೆ
ತೆರೆಯಬೇಕು

ದೂರದಿಂದ
ತವರಿಗೆ ಬಂದಿದ್ದಾಳೆ

ಅರೆ ಬೀರಣ್ಣ..

ಕರೆಯಬೇಡ ಆ ಕೆಟ್ಟವನನ್ನ
ನಿನ್ನ ಬಗ್ಗೆ ಅಪಪ್ರಚಾರ
ಮಾಡಿದವ

ಅಕ್ಕ ಉಂಡೆ..?

ಅದ್ರ ಹತ್ರ ಎಂತಾ ಕೆಲ್ಸ
ಅಲ್ಲಿದ್ ಇಲ್ಲೆ
ಇಲ್ಲಿದ್ ಅಲ್ಲೆ ಹೇಳೋ
ಮಿಟಕಲಾಡಿ

ಓ ..ಸೀತಣ್ಣ ನಾ ಬಂದಿದ್ದೇನೆ

ಕರೆಯಬೇಡ
ಯಾವಾಗ ನೋಡಿದ್ರು
ನಮ್ ಮನಿ ಕಡೆನೆ ಲಕ್ಷ್ಯ.
ಆ ನಮೂನಿ ನೋಡುದು ಏನಿದೆ..

ಅರೆ! ಅಜ್ಜಿ ಪೆಟ್ಟಿಗೆ
ಬಾಯ್ದೆರೆದು ಮೂಲೆಗೆ
ಪೆಟ್ಟಿಗೆಯ ಬಾಗಿಲು
ಕಳಚಿಕೊಂಡಿದೆ.

ಹಳತು ಹೊಲಸು
ಬೇಡ ಬಿಡು
ಒಳಹೋಗು
ಮನೆ ಹೊರಗೆ ನಿಲ್ಲಬೇಡ
ಮಾತಾಡಿಸಬೇಡ
ನಗಲೇಬೇಡ

ಅಬ್ಬಬ್ಬ..!

ಎಲ್ಲ ಬದಲಾಗಿ ಹೋಯಿತೆ
ಕಳೆದ ಲಾಕಡೌನನಿಂದ್
ಇಲ್ಲಿಯವರೆಗೆ
ಕೂಡಿದ್ದೆಲ್ಲ ಕಳೆದು
ಸದ್ಲಾ ಬದ್ಲಿ ತವರು

ಬದಲಾದಳೆ ಅಮ್ಮ
ಅಮ್ಮ ಹೀಗೂ ಬದಲಾಗಬಹುದೆ..!?
ಈಗ ಅವಳಿಗೆ ಎಂಬತೈದು


ಅಕ್ಷತಾ ಕೃಷ್ಣಮೂರ್ತಿ

One thought on “

Leave a Reply

Back To Top