ದಾರಾವಾಹಿ ಆವರ್ತನ ಅದ್ಯಾಯ–52 ಶಂಕರನೂ, ಸುರೇಂದ್ರಯ್ಯನೂ ಆವತ್ತೇ ಗುರೂಜಿಯವರ ಮನೆಗೆ ಹೊರಟು ಬಂದುದರಿಂದ ಗುರೂಜಿಯವರು ಅವರೊಡನೆ ಗಂಭೀರವಾಗಿ ಮಾತುಕತೆಗಿಳಿದರು. ‘ನೋಡಿ ಸುರೇಂದ್ರಯ್ಯ, ನಮ್ಮ ಇವತ್ತಿನವರೆಗಿನ ಅನುಭವದಲ್ಲಿ ನಮ್ಮ ಯಾವ ಶುಭಕಾರ್ಯದಲ್ಲೂ ಇಂಥದ್ದೊಂದು ಅಪಶಕುನ ನಡೆದದ್ದಿಲ್ಲ. ನಿಮ್ಮ ಆ ಜಾಗದಲ್ಲಿ ಏನೋ ಊನವಿದೆ ಅಂತ ನಮಗಾವತ್ತೇ ಗೊತ್ತಾಗಿತ್ತು. ಅದನ್ನು ಆ ಹೊತ್ತು ನಿಮ್ಮೆಲ್ಲರ ಗಮನಕ್ಕೂ ತಂದಿದ್ದೆವು. ಅಲ್ಲದೇ ಆ ಘಟನೆ ನಡೆದ ಮರುದಿನವೇ ಅಂಜನವಿಟ್ಟೂ ನೋಡಿದೆವು. ಅದರಿಂದ ಒಂದು ವಿಷಯ ಸ್ಪಷ್ಟವಾಯಿತು. ಏನೆಂದರೆ ಅಲ್ಲೊಂದು ದೊಡ್ಡ ದೋಷದ ಛಾಯೆ […]
ದಾರಾವಾಹಿ
ಆವರ್ತನ
ಅದ್ಯಾಯ–51
ದಾರಾವಾಹಿ ಆವರ್ತನ ಅದ್ಯಾಯ–50 ಚಿಟ್ಟೆಹುಲಿಗಳ ದಾಳಿಯ ನಂತರ ಗುರೂಜಿಯವರು ಸುರೇಂದ್ರಯ್ಯನ ಮನೆಯಿಂದ ಹೊರಡುವ ಮುನ್ನ ಎಲ್ಲರನ್ನೂ ಒಂದೆಡೆ ಸೇರಿಸಿ, ಇಲ್ಲಿ ನಡೆದ ಘಟನೆಯನ್ನು ಎಲ್ಲರೂ ಗೌಪ್ಯವಾಗಿಡಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಅದಕ್ಕೆ ಎಲ್ಲರೂ,‘ಹ್ಞೂಂ! ಆಯ್ತು ಗುರೂಜೀ…!’ಎಂದು ಒಪ್ಪಿದ್ದರು. ಆದರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಗುಟ್ಟು ರಟ್ಟಾಗಿಬಿಟ್ಟಿತು. ಕಾನೂನು ನಿಯಮದಂತೆ ವೈದ್ಯರು ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದರು. ಬಳಿಕ ಆ ಸುದ್ದಿಯು ಕಾಳ್ಗಿಚ್ಚಿನಂತೆ ಎತ್ತೆತ್ತಲೋ ಹರಿದಾಡುತ್ತ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೂ ಹಾಗೂ ಮುಖ್ಯವಾಗಿ ಅರಣ್ಯ ಇಲಾಖೆಗೂ ತಲುಪಿಬಿಟ್ಟಿತು. ಆದ್ದರಿಂದ ಮರುದಿನ ಬೆಳಿಗ್ಗೆ ಮಾಧ್ಯಮಗಳೆಲ್ಲ ಸುರೇಂದ್ರಯ್ಯನ ಮನೆಗೆ ದೌಡಾಯಿಸಿದವು. ಬೆಳ್ಳಂಬೆಳಗ್ಗೆ ತಮ್ಮ ಮನೆಯ ಮುಂದೆ ಜಮಾಯಿಸಿದ ಸುದ್ದಿವಾಹಿನಿಗಳ ದಂಡನ್ನು ಕಂಡ ಸುರೇಂದ್ರಯ್ಯ ದಂಗಾಗಿಬಿಟ್ಟರು. ಆದರೂ ಗುರೂಜಿಯವರ ಆಜ್ಞೆಯಂತೆ ಘಟನೆಯ ವಿವರವನ್ನು ಯಾರಿಗೂ ನೀಡಲು ನಿರಾಕರಿಸಿದರು. ಆದರೆ ಕೆಲವು ಚಾಣಾಕ್ಷ ಪತ್ರಕರ್ತರು ಅರಣ್ಯ ಕಾಯ್ದೆಯ ಕುರಿತು ಖಡಕ್ಕಾಗಿ ಮಾತಾಡಿ ಅವರನ್ನು ಹೆದರಿಸಿದರು. ಆಗ ಸುರೇಂದ್ರಯ್ಯ ಮಂಕಾದರು. ಅದೇ ಸಮಯವನ್ನು ಬಳಸಿಕೊಂಡ ಮಾಧ್ಯಮಗಳೂ ಅವರ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರಿದವು. ಅದರಿಂದ ಅಶಾಂತರಾದ ಸುರೇಂದ್ರಯ್ಯ ವಿಧಿಯಿಲ್ಲದೆ ಅವರೊಡನೆ ಘಟನಾಸ್ಥಳದತ್ತ ನಡೆದರು. ಅಷ್ಟರಲ್ಲಿ ಕಾರ್ಗಲ್ಲು ವಲಯಾರಣ್ಯಾಧಿಕಾರಿ, ಮಲೆ ಮಾದೇವಪ್ಪನವರು ಮತ್ತು ಉಪ ವಲಯಾರಣ್ಯಾಧಿಕಾರಿ ಅಮರೇಶರೂ ತಮ್ಮ ಸಿಬ್ಬಂದಿವರ್ಗದೊಂದಿಗೆ ಒಂದಿಬ್ಬರು ಅರಿವಳಿಕೆ ತಜ್ಞರನ್ನೂ ಕರೆದುಕೊಂಡು ಹುಲಿ ಹಿಡಿಯುವ ಬೋನಿನ ಸಮೇತ ಸ್ಥಳಕ್ಕಾಗಮಿಸಿದರು. ಬಹಳ ಹಿಂದಿನಿಂದಲೂ ಆ ಪ್ರದೇಶದಲ್ಲಿ ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದುದಕ್ಕೆ ಅರಣ್ಯ ಇಲಾಖೆಯಲ್ಲೂ ದಾಖಲೆಯಿತ್ತು. ಆದರೆ ಆ ಗ್ರಾಮದಲ್ಲಿ ಜನವಸತಿಗಳು ವಿರಳವಿದ್ದುದರಿಂದಲೂ ಅಲ್ಲಿನ ಜನರಿಗೂ ಮತ್ತವರ ಸಾಕುಪ್ರಾಣಿಗಳಿಗೂ ಅಲ್ಲಿನ ವನ್ಯಪ್ರಾಣಿಗಳಿಂದ ಅಲ್ಲಿಯವರೆಗೆ ಯಾವುದೇ ಹಾನಿ, ಅಪಾಯಗಳು ಸಂಭವಿಸಿದಂಥ ದೂರು ದುಮ್ಮಾನಗಳು ಇಲಾಖೆಯಲ್ಲಿ ದಾಖಲಾಗಿರದಿದ್ದುದರಿಂದಲೂ ಅವರು ಕೂಡಾ ಆ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವತ್ತು,‘ಆ ಮೃಗಗಳು ಏಕಾಏಕಿ ಊರವರ ಮೇಲೆ ದಾಳಿ ಮಾಡಿಬಿಟ್ಟಿವೆ!’ಎಂಬ ಸುಳ್ಳು ಪುಕಾರು ಊರಿನವರಿಗೂ ಮತ್ತು ಅರಣ್ಯ ಇಲಾಖೆಗೂ ಒಟ್ಟಿಗೆ ತಲುಪಿತ್ತು. ಆದ್ದರಿಂದ ಆಗಷ್ಟೇ ದಕ್ಷಿಣ ಕರ್ನಾಟಕದಿಂದ ವರ್ಗವಾಗಿ ಬಂದಿದ್ದ ಮಲೆ ಮಾದೇವಪ್ಪನವರು ಚುರುಕಾಗಿ ಆ ಪ್ರಾಣಿಗಳನ್ನು ಹಿಡಿಯುವ ಕಾರ್ಯಚರಣೆಗಿಳಿದರು. ಆದರೆ ಅವರು ತಮ್ಮ ಸಿಬ್ಬಂದಿಗಳನ್ನೇ ಅಂಥ ಅಪಾಯಕ್ಕೆ ತಳ್ಳಲು ತಯಾರಿರಲಿಲ್ಲ. ಹಾಗಾಗಿ ಅವರು ಬಂಡೆ ಒಡೆಯಲು ಬಂದಿದ್ದ ತಮಿಳು ಯುವಕರನ್ನೇ ಮುಂದೆ ಕರೆದರು. ‘ಏನ್ರಪ್ಪಾ ನಿನ್ನೆ ಘಟನೆ ನಡೆಯುವಾಗ ನೀವೆಲ್ಲರೂ ಇಲ್ಲೇ ಇದ್ದಿರಿ ಅಂತ ನಮಗೆ ಮಾಹಿತಿ ಬಂದಿದೆ. ಆದರೆ ನೀವೆಲ್ಲ ಇಲ್ಲಿಯವರಂತೆ ಕಾಣುತ್ತಿಲ್ಲವಲ್ಲ! ಎಲ್ಲಿನವರು ನೀವೆಲ್ಲ? ಇಲ್ಲಿಗ್ಯಾಕೆ ಬಂದಿದ್ದೀರಿ? ನಿಮ್ಮನ್ನು ಕರೆಯಿಸಿದವರು ಯಾರು…?’ಎಂದು ಯುವಕರ ಮೇಲೆ ಒಂದೇ ಸಮನೆ ಪ್ರಶ್ನೆಗಳನ್ನೆಸೆದರು. ಆಗ ಆ ಅಮಾಯಕ ಯುವಕರಿಗೆ ದಢೂತಿ ದೇಹದ ಆ ಅಧಿಕಾರಿಯನ್ನು ಕಂಡು ಮತ್ತು ಅವರ ಪಾಟಿ ಸವಾಲನ್ನೂ ಕೇಳಿ ಭಯದಿಂದ ಕೈಕಾಲು ನಡುಗಿತು. ಅದರಿಂದ ಪಟ್ಟನೆ ಏನುತ್ತರಿಸಬೇಕೆಂದು ತಿಳಿಯದ ಅವರೆಲ್ಲ ಒಬ್ಬರ ಮುಖವನ್ನೊಬ್ಬರು ನೋಡುತ್ತ,‘ಅಯ್ಯಯ್ಯೋ ಶಣ್ಮುಗಾ… ನಮ್ಮೂರಲ್ಲೇ ತಿಂಗಳಿಗೊಂದು ಕೋವಿಲ್(ದೇವಸ್ಥಾನ)ತಲೆಯೆತ್ತುತ್ತ ಕೈತುಂಬಾ ಗೆಲಸವಿರುವಾಗ ಈ ನಮ್ಮ ಮುಖಂಡನ ಮಾತು ಕಟ್ಟಿಕೊಂಡು ಇಂಥ ಊರಿಗೆ ಬಂದು ಈ ಹಾಳು ಬಂಡಿಗಲ್ಲು ಒಡೆಯುವ ಅವಸ್ಥೆ ನಮಗ್ಯಾಗೆ ಬೇಕಿತ್ತಪ್ಪಾ…! ನಿನ್ನೆ ಹುಲಿಗಳ ಬಾಯಿಯಿಂದ ತಪ್ಪಿಸಿದ ನೀನೇ ಇವತ್ತು ಈ ಗರ್ನಾಟಕ ಪೊಳೀಸರ (ಅರಣ್ಯ ಮತ್ತು ಪೊಲೀಸು ಸಮವಸ್ತ್ರಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ) ಕೈಗೂ ಸಿಕ್ಕಿಸಿಬಿಟ್ಟೆಯಲ್ಲ ಸರವಣಾ…!’ಎಂದು ಕೊರಗುತ್ತ ನಿಂತುಬಿಟ್ಟರು. ಅಷ್ಟರಲ್ಲಿ ಅವರಲ್ಲೊಬ್ಬ ಯುವಕ ಸ್ವಲ್ಪ ಧೈರ್ಯ ಮಾಡಿದವನು, ‘ಹ್ಞೂಂ ಅಯ್ಯಾ ಇದ್ದೆವು. ನಮ್ಮ ಮೇಸ್ತ್ರಿ ನಮ್ಮನ್ನು ಇಲ್ಲಿಗೆ ಗೆಲಸಕ್ಕೆಂದು ಕರ್ಕೊಂಡು ಬಂದಿದ್ದ. ನಾವು ಮದ್ರಾಸಿನವರು…!’ ಎಂದು ತನ್ನ ಅರೆಬರೆ ಕನ್ನಡದಲ್ಲಿ ಅಳುಕುತ್ತ ಹೇಳಿದ. ‘ಓಹೋ ಹೌದಾ…?’ಎಂದ ಮಾದೇವಪ್ಪನವರು ಏನೋ ಯೋಚನೆಗೆ ಬಿದ್ದರು. ಬಳಿಕ ಅದನ್ನು ಆಮೇಲೆ ನೋಡಿಕೊಳ್ಳೋಣವೆಂದುಕೊಂಡವರು,‘ಒಳ್ಳೆಯದಾಯ್ತು ಬಿಡ್ರಪ್ಪಾ… ನಿನ್ನೆಯ ಘಟನೆಯನ್ನು ನೀವೆಲ್ಲರೂ ಕಂಡಿದ್ದೀರಿ ಅಂದ ಮೇಲೆ ಮುಗಿಯಿತು. ನಮಗೂ ಸಾಕ್ಷಿ ಬೇಕಿತ್ತು. ನಿನ್ನೆ ಗಾಯಗೊಂಡವರಿಗೆ ಮತ್ತು ಅವರಲ್ಲಿ ಯಾವನಾದ್ರೂ ಸತ್ತುಗಿತ್ತು ಹೋದನೆಂದರೆ ಅವನ ಕುಟುಂಬಕ್ಕೆ ಸರಕಾರದಿಂದ ಪರಿಹಾರವನ್ನೂ ಕೊಡಿಸಬೇಡವೇನ್ರಯ್ಯಾ…?’ಎಂದು ನಗುತ್ತ ಹೇಳಿದರು. ಬಳಿಕ, ‘ಹೌದೂ, ಒಟ್ಟು ಎಷ್ಟು ಲಿಯೋಪರ್ಡ್‍ಗಳಿದ್ದುವಪ್ಪಾ…?’ ಎಂದರು ಕುತೂಹಲದಿಂದ. ಆ ಯುವಕನಿಗೆ ಸಾಹೇಬರ ಇಂಗ್ಲಿಷ್ ಅರ್ಥವಾಗದೆ,‘ಲ್ಯಾಪಾಡ್ರು ಅಲ್ಲ್ರಯ್ಯಾ… ಉಳಿಗಲು, ಚುಟ್ಟೆ ಉಳಿಗಲು. ಎರಡು ದೊಡ್ಡವು ಇನ್ನೆರಡು ಸಣ್ಣವು. ದೊಡ್ಡವೆರಡೂ ನಮ್ಮೇಲೇ ಬಿದ್ದುವಯ್ಯಾ…!’ಎಂದ ಆತಂಕದಿಂದ. ಅವನ ವಿವರಣೆ ಕೇಳಿದ ಮಾದೇವಪ್ಪನವರಿಗೂ ನೆರದವರಿಗೂ ಗೊಳ್ಳೆಂದು ನಗು ಬಂತು. ಅದನ್ನು ಕಂಡ ಆ ಯುವಕನಿಗೇನೂ ಅರ್ಥವಾಗದೆ ತಮ್ಮ ತಂಡದವರನ್ನು ಪಿಳಿಪಿಳಿ ನೋಡಿದ. ಆಗ ಅವರೂ ಕಕ್ಕಾಬಿಕ್ಕಿಯಾದರು. ‘ಹೌದಾ, ಹುಲಿಗಳಾ! ಸರಿ, ಸರಿ. ಇವತ್ತು ಅವನ್ನು ಬಿಡೋದು ಬೇಡ. ಹಿಡಿದು ಕೊಂಡೊಯ್ದು ದೂರದ ಅಭಯಾರಣ್ಯಕ್ಕೆ ಬಿಟ್ಟುಬಿಡೋಣ. ಆದರೆ ಅದಕ್ಕೀಗ ನಿಮ್ಮ ಸಹಾಯವೂ ಬೇಕಲ್ವೇ…?’ ಮಾದೇವಪ್ಪನವರು ನಗುತ್ತ ಅಂದರು. ಅಷ್ಟು ಕೇಳಿದ್ದೇ ಆ ಯುವಕರ ತಂಡವು ಹುಮ್ಮಸ್ಸಿನಿಂದ ಮುಂದೆ ಬಂತು. ಅವರ ಮುಗ್ಧತೆ ಕಂಡ ಮಾದೇವಪ್ಪನವರಿಗೆ ಒಂದುಕ್ಷಣ ಅಯ್ಯೋ ಪಾಪವೇ! ಎಂದೆನಿಸಿತು. ಆದರೆ ಮರುಕ್ಷಣ ತಮ್ಮ ಸಿಬ್ಬಂದಿಯ ಕುರಿತೂ ಯೋಚಿಸಿದವರು ಕರುಣೆಯನ್ನು ಬದಿಗೊತ್ತಿ ಮಂದಹಾಸ ಬೀರುತ್ತ ತಮ್ಮಿಬ್ಬರು ಸಿಬ್ಬಂದಿಗಳನ್ನು ಮತ್ತು ಅರಿವಳಿಕೆ ತಜ್ಞರನ್ನೂ ಕರೆದು ಅವರೊಂದಿಗೆ ಬಂಡೆಗಳತ್ತ ಕಳುಹಿಸಿಕೊಟ್ಟರು. ತಮಿಳು ಯುವಕರ ದಂಡೊಂದು ಮುಂದೆಯೂ, ಇಲಾಖೆಯ ಮಂದಿ ಹಿಂದೆಯೂ ಪರೇಡ್ ನಡೆಸುವಂತೆ ಬಂಡೆಗಳತ್ತ ನಡೆದರು. ಅಷ್ಟರಲ್ಲಿ ಆ ಕಾರ್ಯಚರಣೆಯ ರೋಚಕ ದೃಶ್ಯಗಳನ್ನು ಸೆರೆಹಿಡಿದು ತಂತಮ್ಮ ಚಾನೆಲ್‍ಗಳಲ್ಲಿ ಬಿತ್ತರಿಸುವ ಕಾತರದಲ್ಲಿದ್ದ ಕೆಲವು ಮಾಧ್ಯಮದವರೂ ಅವರ ಹಿಂದೆ ಹೊರಟರು. ಆದರೆ ಮಾದೇವಪ್ಪನವರು ಅವರಿಗೆ ಅನುಮತಿ ಕೊಡಲಿಲ್ಲ. ಅದರಿಂದ ನಿರಾಶರಾದ ಅವರು ಮತ್ತೆ ಸುರೇಂದ್ರಯ್ಯನನ್ನು ಹಿಡಿದುಕೊಂಡರು. ‘ನಿನ್ನೆ ನಡೆದ ಭೀಕರ ಘಟನೆಗೆ ಕಾರಣವೇನು? ಯಾಕಾಗಿ ಇಲ್ಲಿ ಪೂಜಾ ವಿಧಿಗಳನ್ನು ನಡೆಸಿದಿರಿ? ಈ ಜಾಗ ಖಾಸಗಿಯೋ ಅಥವಾ ಸರಕಾರದ್ದೋ? ಇಂಥ ಅರಣ್ಯ ಪ್ರದೇಶದಲ್ಲಿ ಯಾವ ಕೆಲಸಕಾರ್ಯಗಳನ್ನು ನಡೆಸಬೇಕಿದ್ದರೂ ಅರಣ್ಯ ಇಲಾಖೆ ಮತ್ತು ಭೂಕಂದಾಯ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ. ಹೀಗಿರುವಾಗ ನೀವು ಅದನ್ನು ಪಡೆದುಕೊಂಡಿದ್ದೀರಾ…?’ಎಂದು ಸುರೇಂದ್ರಯ್ಯ ಕಕ್ಕಾಬಿಕ್ಕಿಯಾಗುವಂಥ ಪ್ರಶ್ನೆಗಳನ್ನೆಸೆದರು. ಆದರೂ ಸುರೇಂದ್ರಯ್ಯನ ಅಷ್ಟು ಬೇಗ ಸೋಲೊಪ್ಪಿಕೊಳ್ಳುವ ಕುಳವಲ್ಲ. ಆದ್ದರಿಂದ ಅವರು ಸಂಭಾಳಿಸಿಕೊಂಡು,‘ನೀವು ಒಬ್ಬೊಬ್ಬರಾಗಿ ಒಂದೊಂದು ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸಬಹುದು. ಅದುಬಿಟ್ಟು ಎಲ್ಲರೂ ಒಟ್ಟಾಗಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಕಡ್ಡಿ ಗೀರುವಂತೆ ವರ್ತಿಸಿದರೆ ನಾವು ಯಾರಿಗೇನು ಹೇಳಲೀ…!’ಎಂದು ತಾವೂ ಸಿಡುಕಿದರು. ಆಗ ಮಾಧ್ಯಮದವರೂ ತಮ್ಮ ಗಡಿಬಿಡಿಯನ್ನು ಹತ್ತಿಕ್ಕಿಕೊಂಡರು.‘ನೋಡೀ… ಮೊದಲನೆಯದಾಗಿ ನಾವು ಹೇಳುವುದೇನೆಂದರೆ ಈ ಜಮೀನು ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ನಮಗೇ ಸೇರಿದ್ದು. ಇದರ ಪಟ್ಟೆಯೂ ಈಗ ನಮ್ಮ ಹೆಸರಿನಲ್ಲೇ ಇದೆ. ಜಮೀನು ನಮ್ಮದೆಂದ ಮೇಲೆ ಬಂಡೆಯೂ ನಮ್ಮದೇ ಅಲ್ಲವಾ? ಅಷ್ಟಲ್ಲದೇ ನಮ್ಮ ಹಿರಿಯರ ಕಾಲದಿಂದಲೂ ಈ ಬಂಡೆಗಳೊಳಗೆ ನಮ್ಮ ದೈವ ಭೂತಗಳು ನೆಲೆಸಿದ್ದವು ಮತ್ತು ಈಗಲೂ ಇವೆ. ಆದ್ದರಿಂದ ಅವುಗಳಿಗೆ ಹಮ್ಮಿಕೊಂಡಿದ್ದ ಪೂಜೆಯೊಂದನ್ನು ಮಾಡಲು ಏಕನಾಥ ಗುರೂಜಿಯವರನ್ನು ಕರೆಯಿಸಿದ್ದೆವು. ಅವರದನ್ನು ನಡೆಸುತ್ತಿದ್ದ ಹೊತ್ತಿಗೇ ಆ ಹಾಳು ಪ್ರಾಣಿಗಳು ನಮ್ಮೆಲ್ಲರ ಮೇಲೆ ದಾಳಿ ಮಾಡಿದವು. ಆದರೂ ದೇವರ ದಯೆಯಿಂದ ಗುರೂಜಿಯವರಿಗೇನೂ ತೊಂದರೆಯಾಗಿಲ್ಲ. ಅದು ನಮ್ಮ ಪುಣ್ಯ!’ ಎಂದು ವಿಷಾದ ತೋರ್ಪಡಿಸುತ್ತ ವಿವರಿಸಿದರು. ‘ಹಾಗಾದರೆ ಈ ಕಲ್ಲು ಒಡೆಯುವ ಜನರೆಲ್ಲ ಯಾಕೆ ಬಂದರು?’ ಪತ್ರಕರ್ತನೊಬ್ಬ ತಟ್ಟನೇ ಪ್ರಶ್ನಿಸಿದ. ಆಗ ಸುರೇಂದ್ರಯ್ಯನೂ ಅವಕ್ಕಾದವರು, ‘ಅದು, ಅದೂ… ಅವರು ಬಂಡೆ ಒಡೆಯಲು ಬಂದವರು!’ ಎಂದು ಧೈರ್ಯದಿಂದ ಹೇಳಿಯೇಬಿಟ್ಟರು. ‘ಹೌದಾ…! ಯಾವ ಬಂಡೆ? ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಸಿಕ್ಕಿದೆಯಾ…?’ ಎಂದು ಮತ್ತದೇ ಪ್ರಶ್ನೆಗಳು ಕೇಳಿ ಬಂದವು. ‘ಹೌದು! ಅದರ ಬಗ್ಗೆ ನಾವು ಇಲ್ಲಿನ ಪಂಚಾಯತ್ ಆಫೀಸಿಗೆ ಹದಿನೈದು ದಿನಗಳ ಮುಂಚೆಯೇ ಅರ್ಜಿ ಕೊಟ್ಟಿದ್ದೆವು. ಅವರು ಬಂದು ನೋಡಿಯೂ ಹೋಗಿದ್ದಾರೆ. ಆದರೆ ಅವರ ಲಿಖಿತ ಅನುಮತಿ ಸಿಕ್ಕಿದ ನಂತರವೇ ಕೆಲಸ ಆರಂಭವಾಗುವುದು!’ಎಂದು ಖಡಕ್ಕಾಗಿ ಉತ್ತರಿಸಿದ ಸುರೇಂದ್ರಯ್ಯ,‘ಹ್ಞಾಂ! ಇನ್ನೊಂದು ಮಾತು. ಅದನ್ನೂ ನಿಮಗೀಗಲೇ ಹೇಳಿಬಿಡುತ್ತೇವೆ. ನಮ್ಮ ಈಶ್ವರಪುರದ ಬುಕ್ಕಿಗುಡ್ಡೆ ಎಲ್ಲರಿಗೂ ಗೊತ್ತಿರಬಹುದಲ್ಲವಾ? ಅಲ್ಲೊಂದು ಕಡೆ ಕಾರಣಿಕದ ನಾಗ ಪರಿವಾರ ದೈವಗಳಿಗೆ ನಿರ್ಮಿಸಬೇಕೆಂದಿರುವ ದೇವಸ್ಥಾನಕ್ಕೆ ನಾವು ಈ ಬಂಡೆಯನ್ನು ದಾನವಾಗಿ ಕೊಟ್ಟಿದ್ದೇವೆ!’ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಸಡ್ಡು ಹೊಡೆವಂತೆ ಉತ್ತರಿಸಿದರು. ಸುರೇಂದ್ರಯ್ಯನ ಬಾಯಿಯಿಂದ,‘ಕಾರಣಿಕ’ ಮತ್ತು ‘ನಾಗ’ ಎಂಬ ಎರಡು ಪದಗಳು ಹೊರಗೆ ಬಿದ್ದ ಕೂಡಲೇ ಪತ್ರಕರ್ತರಲ್ಲಿ ಅನೇಕರು ತಣ್ಣಗಾದರು. ಅಷ್ಟೊತ್ತಿಗೆ ಚಿಟ್ಟೆಹುಲಿ ಹಿಡಿಯಲು ಹೋಗಿದ್ದ ತಂಡವೂ ಹಿಂದಿರುಗಿ ಬಂದಿತು. ಬಂದವರು, ಅರಣ್ಯಾಧಿಕಾರಿಗಳೊಡನೆ ಗೌಪ್ಯವಾಗಿ ಮಾತಾಡಿದರು. ಪತ್ರಕರ್ತರೂ ದೃಶ್ಯ ಮಾಧ್ಯಮದವರೂ ಸುರೇಂದ್ರಯ್ಯನನ್ನು ಬಿಟ್ಟು ಅವರನ್ನು ಮುತ್ತಿಕೊಂಡರು. ಅಷ್ಟರಲ್ಲಿ ಅಮರೇಶನಿಂದ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡ ಮಹಾದೇವಪ್ಪನವರು ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡತೊಡಗಿದರು,‘ನಮ್ಮ ತಂಡವು ಇಡೀ ಬಂಡೆಗಳ ಎಡೆಎಡೆಗಳನ್ನೂ ಶೋಧಿಸಿ ನೋಡಿತು. ಅಲ್ಲೆಲ್ಲೂ ಯಾವ ಪ್ರಾಣಿಗಳೂ ಸಿಗಲಿಲ್ಲ. ಬಹುಶಃ ಅವುಗಳು ನಮ್ಮನ್ನು ಕಂಡು ಓಡಿ ಹೋಗಿರಬಹುದು. ಆದರೆ ಅವು ಬಹಳಷ್ಟು ಕಾಲದಿಂದ ಇಲ್ಲಿಯೇ ವಾಸವಿದ್ದುವು ಎಂಬುದು ನಮ್ಮ ತಜ್ಞರಿಗೆ ತಿಳಿದು ಬಂದಿದೆ. ಆದರೂ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಯಾಕೆಂದರೆ ಆ ಪ್ರಾಣಿಗಳು ಹ್ಯೂಮನ್ ಹಂಟರ್‍ಗಳಲ್ಲ. ಅಂದರೆ ನರಭಕ್ಷಕಗಳಲ್ಲ! ಅವುಗಳ ನೆಲೆಯ ಹತ್ತಿರ ಬೆಂಕಿ ಕಾಣಿಸಿಕೊಂಡಿದ್ದರಿಂದ ಅವು ಹೆದರಿ ದಾಳಿ ನಡೆಸಿರುವ ಸಾಧ್ಯತೆಯಿದೆ. ಆ ಬಗ್ಗೆಯೂ ಸೂಕ್ತ ತನಿಖೆ ನಡೆಸಲಾಗುವುದು!’ಎಂದವರ ದೃಷ್ಟಿ ಒಂದುಕ್ಷಣ ಸುರೇಂದ್ರಯ್ಯನತ್ತ ಹೊರಳಿ ಮತ್ತೆ ಟಿವಿ ಕ್ಯಾಮರಾಗಳತ್ತ ನೆಟ್ಟಿತು. ಅದನ್ನು ಗ್ರಹಿಸಿದ ಸುರೇಂದ್ರಯ್ಯ ಒಳಗೊಳಗೇ ಚಡಪಡಿಸಿದರು. ‘ಇಂದಲ್ಲ ನಾಳೆ ಆ ಪ್ರಾಣಿಗಳು ಮರಳಿ ಬರಬಹುದು. ಆಗ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅಭಯಾರಣ್ಯಕ್ಕೆ ವರ್ಗಾಯಿಸುವ ವ್ಯವಸ್ಥೆಯನ್ನು ಇಲಾಖೆ ಮಾಡುತ್ತದೆ. ಅದಕ್ಕೆ ಇಲ್ಲಿನ ಸಾರ್ವಜನಿಕರ ಸಹಾಯವೂ ಬೇಕಾಗುತ್ತದೆ. ಇನ್ನು ಮುಂದೆ ಕೆಲವು ಕಾಲ ಈ ಬೋನು ಇಲ್ಲೇ ಇರುತ್ತದೆ. ಆ ಪ್ರಾಣಿಗಳಿಂದ ದಾಳಿಗೊಳಗಾದವರಿಗೆ ಸದ್ಯದಲ್ಲೇ ಪರಿಹಾರ ಮಂಜೂರು ಮಾಡಲಾಗುವುದು!’ಎಂದು ಆಶ್ವಾಸನೆಯಿತ್ತರು. ನಡೆದ ಭಯಾನಕ ಘಟನೆಯೊಂದರ ಸಾರಾಂಶವನ್ನು ರಾಜ್ಯ ಮತ್ತು ದೇಶದಾದ್ಯಂತ ಎಪ್ಪತ್ತೆರಡು ಗಂಟೆಗಳ ಕಾಲ ಎಡೆಬಿಡದೆ ರೋಚಕವಾಗಿ ಬಿತ್ತರಿಸುತ್ತ ತಂತಮ್ಮ ವಾಹಿನಿಗಳ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದರೊಂದಿಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಸಲುವಾಗಿಯೂ ತಮ್ಮ ವೀಕ್ಷಕರಲ್ಲಿ ಅರಿವು ಮೂಡಿಸಬೇಕೆಂಬ ಧಾವಂತದಲ್ಲಿದ್ದ ಕೆಲವು ಮಾಧ್ಯಮಗಳ ಉತ್ಸಾಹಕ್ಕೆ ಸಮಸ್ಯೆಯೊಂದು ಬಿಸಿಯೇರುವ ಮುನ್ನವೇ ಟುಸ್ಸೆಂದದ್ದು ನಿರಾಶೆ ಮೂಡಿಸಿತು. ಆದ್ದರಿಂದ ಅವರೆಲ್ಲ ತಮಗೆ ಸಿಕ್ಕಷ್ಟು ಸುದ್ದಿಯನ್ನೇ ಸೆರೆ ಹಿಡಿದುಕೊಂಡವರು ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ರೂಪಾರ್ಥಗಳನ್ನು ನೀಡುತ್ತ ತಂತಮ್ಮ ವೀಕ್ಷಕರನ್ನು ಮನರಂಜಿಸುವ ಯೋಚನೆಯಿಂದ ಹಿಂದಿರುಗಿದರು. ಮಾಧ್ಯಮದವರು ಹೊರಡುತ್ತಲೇ ಸುರೇಂದ್ರಯ್ಯ, ಅರಣ್ಯಾಧಿಕಾರಿ ಮತ್ತು ಸಿಬ್ಬಂದಿವರ್ಗವನ್ನು ಅಭಿಮಾನದಿಂದ ಮನೆಗೆ ಕರೆದೊಯ್ದರು. ನೆರೆಮನೆಯ ಕೆಲಸದವನನ್ನು ಕರೆದು ಸೀಯಾಳ ಕೊಯ್ಯಲು ಸೂಚಿಸಿದವರು, ‘ಬನ್ನಿ ಬನ್ನೀ ಸಾರ್ ಒಳಗೆ ಬನ್ನಿ ಕುಳಿತುಕೊಳ್ಳಿ…!’ ಎಂದು ಆದರದಿಂದ ಕರೆದು ಕುಳ್ಳಿರಿಸಿಕೊಂಡರು. ಬಳಿಕ ತಮ್ಮ ಮನೆ ಕೆಲಸದವಳನ್ನು ಕರೆದು ಏನೋ ಪಿಸುಗುಟ್ಟಿದರು. ಅವಳು ತಲೆಯಾಡಿಸಿ ಹೋದವಳು ಹರಿವಾಣದ ತುಂಬಾ ಕದಳಿ ಬಾಳೆಹಣ್ಣುಗಳನ್ನು ತಂದು ಟಿಪಾಯಿ ಮೇಲಿಟ್ಟು ಹೋದಳು. ಅಷ್ಟರಲ್ಲಿ ಸೀಯಾಳವೂ ಬಂತು. ಸುಮಾರು ಎರಡು ಗಂಟೆಯಿಂದ ಸುಡುಬಂಡೆಗಳ ಹತ್ತಿರದ ಮತ್ತಿ ಮರದ ನೆರಳಲ್ಲಿ ನಿಂತುಕೊಂಡು ಬಿಸಿಲಿನ ಝಳಕ್ಕೆ ಬಾಯಾರಿಬಿಟ್ಟಿದ್ದ ಮಾದೇವಪ್ಪನವರಿಗೂ ಸಿಬ್ಬಂದಿಗಳಿಗೂ ಸಿಹಿಯಾದ ಸೀಯಾಳವು ಅಮೃತದಂತೆನ್ನಿಸಿ ಸುರೇಂದ್ರಯ್ಯನ ಒತ್ತಾಯಕ್ಕೆಂಬಂತೆ ಒಬ್ಬೊಬ್ಬರು ಎರಡೆರಡು ಸೀಯಾಳಗಳನ್ನು ಹೊಟ್ಟೆಗಿಳಿಸಿ ಬಾಳೆಹಣ್ಣುಗಳನ್ನೂ ತಿಂದು ನೆಮ್ಮದಿಯ ಉಸಿರುಬಿಟ್ಟರು. ಇಲಾಖೆಯವರು ತಮ್ಮ ಆತಿಥ್ಯ ಸ್ವೀಕರಿಸಿದ ಮೇಲೆ ಸುಂದರಯ್ಯ ಮೆಲ್ಲನೇ,‘ಸಾರ್ ಆ ಬಂಡೆ ಮತ್ತು ಆಸುಪಾಸಿನ ಕಾಡುಗಳನ್ನು ಸದ್ಯದಲ್ಲೇ ತೆಗೆಯಬೇಕೆಂದಿದ್ದೇವೆ. ಅದಕ್ಕೆ ನಿಮ್ಮ ಇಲಾಖೆಯ ಒಪ್ಪಿಗೆ ಮತ್ತು ಸಹಕಾರ ಎರಡೂ ಬೇಕಾಗುತ್ತದೆ. ಅದನ್ನು ನೀವು ಕೊಟ್ಟರೆ ಬಹಳ ಉಪಕಾರವಾಗುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ತಮ್ಮನ್ನೂ ಮತ್ತು ಇಲಾಖೆಯನ್ನೂ ಸಂದರ್ಭೋಚಿತವಾಗಿ ಸತ್ಕರಿಸುವುದನ್ನು ಮರೆಯುವುದಿಲ್ಲ!’ ಎಂದು ವಿನಂತಿಸಿದರು. ಸುರೇಂದ್ರಯ್ಯನ ಸಜ್ಜನಿಕೆಗೆ ಮನಸೋತ ಮಹಾದೇವಪ್ಪನವರು,‘ಆಯ್ತು ಆ ಬಗ್ಗೆ ನೀವೇನೂ ಚಿಂತಿಸಬೇಡಿ ಸುಂದರಯ್ಯನವರೇ. ಆದರೆ ಇನ್ನು ಮುಂದೆ ಅಲ್ಲಿ ನೀವು ಯಾವ ಕೆಲಸ ನಡೆಸುವುದಿದ್ದರೂ ಇಲಾಖೆಗೆ ತಿಳಿಸಿ ಅನುಮತಿ ಪಡೆದೇ ಮುಂದುವರೆಯಬೇಕು. ಆಗ ಒಬ್ಬಿಬ್ಬರು ಸಿಬ್ಬಂದಿಗಳು ನಿಮ್ಮ ಜೊತೆಗಿದ್ದು ಸಹಕರಿಸುತ್ತಾರೆ. ಇಲ್ಲದಿದ್ದಲ್ಲಿ ನಿಮಗಾಗದವರು ಯಾರಾದರೂ ಬಂದು ನಿಮ್ಮ ಮೇಲೆ ದೂರು ಕೊಟ್ಟರೆ ನಾವು ಅನಿವಾರ್ಯವಾಗಿ ನಿಮ್ಮ ಮೇಲೆ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ!’ ಎಂದೂ ಎಚ್ಚರಿಸಿದರು. ಅಷ್ಟು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಭಯಪಟ್ಟರು. ಅದನ್ನು ಗಮನಿಸಿದ ಮಹಾದೇವಪ್ಪನವರು,‘ಸರಿ ಸುರೇಂದ್ರಯ್ಯ, ನಾವಿನ್ನು ಹೊರಡುತ್ತೇವೆ. ಹಾಗೆಯೇ ನಿನ್ನೆ ನಡೆದ ಘಟನೆಯ ವಿಚಾರಣೆಗೆ ಸಂಬಂಧಿಸಿ ನೀವು ಕಛೇರಿಗೆ ಬಂದು ಹೇಳಿಕೆ ಬರೆದು ಕೊಡಬೇಕಾಗುತ್ತದೆ. ಮುಂದಿನದ್ದನ್ನು ಅಲ್ಲೇ ಕುಳಿತು ಮಾತಾಡೋಣ!’ಎಂದು ನಗುತ್ತ ಆಜ್ಞಾಪಿಸಿದರು. ಅವರ ನಗುವನ್ನು ಕಂಡ ಸುರೇಂದ್ರಯ್ಯ ಒಮ್ಮೆಲೇ ಗೆಲುವಾಗಿ,‘ಆಯ್ತು, ಆಯ್ತು ಸಾರ್ ಈಗಲೇ ಹೊರಟೆ…!’ ಎಂದು ಉಟ್ಟಬಟ್ಟೆಯಲ್ಲೇ ಅವರೊಂದಿಗೆ ಹೊರಟುಬಿಟ್ಟರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ […]
ಧಾರಾವಾಹಿ ಆವರ್ತನ ಅದ್ಯಾಯ-49 ಗುರೂಜಿಯವರ ತಂಡದ ಹಲವರ ಮೇಲೆ ಚಿಟ್ಟೆಹುಲಿಗಳು ಭೀಕರ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಮಾರಣಾಂತಿಕವಾಗಿ ಗಾಯಗೊಂಡರು. ಹೆಣ್ಣು ಚಿಟ್ಟೆಹುಲಿಯ ಕೈಗೆ ಮೊದಲು ಸಿಲುಕಿದವನು ತಂಗವೇಲು. ಅದು ಅವನ ಮುಖವನ್ನೂ, ಕೆಳತುಟಿಯನ್ನೂ ಹರಿದು ಬಲಗೈಯ ಮಾಂಸಖಂಡವನ್ನು ಸೀಳಿ ಹಾಕಿತ್ತು. ಅದನ್ನು ಕಂಡರೆ ಅವನು ಮುಂದೆಂದೂ ಬಂಡೆ ಒಡೆಯುವ ಕೆಲಸಕ್ಕೆ ನಾಲಾಯಕ್ಕು ಎಂಬಂತೆ ತೋರುತ್ತಿತ್ತು. ಗಂಡು ಚಿರತೆಯ ಬಲವಾದ ಪಂಜದ ಹೊಡೆತವೊಂದು ಶಿಲ್ಪಿಗಳ ಮುಖಂಡ ಶರವಣನ ಹಿಂತಲೆಗೆ ಅಪ್ಪಳಿಸಿತ್ತು. ಅದರಿಂದ ಅವನ ಬುರುಡೆಯ ಮೇಲ್ಪದರವು ಆಮೆಯ […]
ಧಾರಾವಾಹಿ ಆವರ್ತನ ಅದ್ಯಾಯ-48 ಇತ್ತ ಚೂರೂ ಶ್ರಮವಿಲ್ಲದೆ ಪ್ರಥಮ ಪ್ರಯತ್ನದಲ್ಲಿಯೇ ದೊಡ್ಡ ಏಕಶಿಲೆಯೊಂದು ದೊರೆತ ಸಂತೋಷದ ಸುದ್ದಿಯನ್ನು ಶಂಕರ ಕೂಡಲೇ ಹೋಗಿ ಗುರೂಜಿಯವರಿಗೆ ತಿಳಿಸಿದ. ಒಂದು ಲಕ್ಷ ಬೆಲೆಯ ತನ್ನ‘ಆಪಲ್’ ಮೊಬೈಲ್‍ನಲ್ಲಿ ಕ್ಲಿಕ್ಕಿಸಿ ತಂದಿದ್ದ ಬಂಡೆಯ ಕೆಲವು ಫೋಟೋಗಳನ್ನೂ ಬೆರಳಿನಿಂದ ಗೀಚಿ ಗೀಚಿ ತೋರಿಸುತ್ತ ತಾನು ಹಿಡಿದ ಕೆಲಸದಲ್ಲಿ ತನ್ನ ಬದ್ಧತೆ ಮತ್ತು ಕೌಶಲ್ಯವೆಂಥದ್ದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸತೊಡಗಿದ. ಬಂಡೆಯ ಚಿತ್ರಗಳನ್ನೂ ಶಂಕರನ ಕೆಲಸದ ಉತ್ಸಾಹವನ್ನೂ ಕಂಡ ಗುರೂಜಿಯವರಿಗೆ ಅವನ ಮೇಲಿನ ಅಭಿಮಾನವು ದುಪ್ಪಟ್ಟಾಗಿದ್ದರೊಂದಿಗೆ ತಮ್ಮ ಬಹುದೊಡ್ಡ ಕನಸೊಂದು ಸದ್ಯದಲ್ಲೇ ನನಸಾಗಲಿದ್ದುದನ್ನೂ ನೆನೆದವರ ಆನಂದವು ಇಮ್ಮಡಿಯಾಯಿತು. ಆದ್ದರಿಂದ ಅವರು,‘ಶಂಕರಾ, ಈ ಕೆಲಸದಲ್ಲಿ ನಾವು ಗೆದ್ದುಬಿಟ್ಟೆವು ಮಾರಾಯಾ! ಇದೊಂದು ಮಹತ್ಕಾರ್ಯ ನಮ್ಮಿಂದ ನಡೆದುಬಿಟ್ಟಿತೆಂದರೆ ಮುಂದೆ ನಮ್ಮನ್ನ್ಯಾರೂ ಹಿಡಿಯುವಂತಿಲ್ಲ ನೋಡು. ಆಮೇಲೆ ಜೀವನಪರ್ಯಾಂತ ನಿಶ್ಚಿಂತೆಯಿಂದ ಬಾಳಬಹುದು. ದೇವಸ್ಥಾನ ಕಟ್ಟುವ ಮತ್ತು ಬನದ ಜೀರ್ಣೋದ್ಧಾರಕ್ಕೆ ತಗುಲುವ ಖರ್ಚುವೆಚ್ಚವನ್ನೆಲ್ಲ ನಮ್ಮ ದುಬೈ ಮತ್ತು ಮುಂಬೈಯ ಭಕ್ತಾದಿಗಳೇ ಪೂರೈಸುವ ಭರವಸೆಯನ್ನು ಕೊಟ್ಟಿದ್ದಾರೆ. ಹಾಗಾಗಿ ಆ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸುವುದಷ್ಟೇ ನಮಗುಳಿದಿರುವ ಜವಾಬ್ದಾರಿ!’ಎಂದು ಹೆಮ್ಮೆಯಿಂದ ಹೇಳಿದರು. ಆದರೆ ಅತ್ತ ಶಂಕರನಲ್ಲೂ ಅಂಥದ್ದೇ ಲೆಕ್ಕಾಚಾರವೊಂದು ನಡೆಯುತ್ತಿತ್ತು. ಗುರೂಜಿಯವರ ಈ ಪ್ರಾಜೆಕ್ಟಿನಿಂದ ಒಂದೈದು ಕೋಟಿಯಾನ್ನಾದರೂ ತನ್ನ ಶ್ರಮಕ್ಕೆ ತಾನು ಹೊಡೆಯಲೇಬೇಕು! ಎಂದು ಅವನು ಯೋಚಿಸುತ್ತಿದ್ದ. ಆದುದರಿಂದ ಗುರೂಜಿಯ ಮಾತಿಗೆ, ‘ಹೌದು ಹೌದು ಗುರೂಜಿ, ನಿಮ್ಮ ಆಶೀರ್ವಾದ ಇರುವವರೆಗೆ ನಿಮ್ಮೊಂದಿಗೆ ನಾನೂ ಗೆದ್ದಂತೆಯೇ ಸರಿ!’ ಎಂದು ನಮ್ರನಾಗಿ ಹೇಳಿದ. ‘ಆ ವಿಷಯದಲ್ಲಿ ನಿನಗೆ ಯಾವತ್ತಿಗೂ ಸಂಶಯ ಬೇಡ ಶಂಕರ. ನಮ್ಮ ಕಷ್ಟಕಾಲದಲ್ಲಿ ನೀನೂ ನಮ್ಮ ಕೈಹಿಡಿದು ನಡೆಸಿದವನು ಎನ್ನುವುದನ್ನು ನಾವಿನ್ನೂ ಮರೆತಿಲ್ಲ!’ ಎಂದು ಅವನನ್ನು ಪ್ರೀತಿಯಿಂದ ದಿಟ್ಟಿಸಿದರು. ‘ಅಯ್ಯೋ, ಅದೆಲ್ಲ ದೇವರಿಚ್ಛೆಯಿರಬೇಕು ಗುರೂಜಿ. ಆವತ್ತು ನನ್ನ ಶೀಂಬ್ರಗುಡ್ಡೆಯ ಜಾಗದ ಆ ಒಂದು ಸನ್ನಿವೇಶದಲ್ಲಿ ನೀವಲ್ಲದಿದ್ದರೆ ನನ್ನ ಅವಸ್ಥೆ ದೇವರೇ ಗತಿ ಎಂಬಂತಾಗುತ್ತಿತ್ತು! ಹಾಗಾಗಿ ಇನ್ನು ಮುಂದೆಯೂ ನಾನು ನೀವು ಹೀಗೆಯೇ ಇರಬೇಕೆಂದು ನನ್ನಾಸೆ!’ಎಂದು ಶಂಕರ ಕೈಮುಗಿದು ಹೇಳಿದ. ಆಗ ಗುರೂಜಿಯವರು ಕಿರುನಗುತ್ತ ತಮ್ಮ ಬಲ ಹಸ್ತವನ್ನೆತ್ತಿ,‘ತಥಾಸ್ತು’ಎಂಬಂತೆ ಅವನನ್ನು ಹರಸಿದರು. ಬಳಿಕ ಶಂಕರ ಅವರಿಂದ ಬೀಳ್ಗೊಂಡು ಹಿಂದಿರುಗಿದ. *** ಬಂಡೆ ಕಡಿಯಲು ಮತ್ತದರ ಕೆತ್ತನೆಯ ಕೆಲಸಕ್ಕೆ ಶಿಲ್ಪಿಗಳನ್ನು ತಮಿಳುನಾಡಿನಿಂದಲೇ ಕರೆದು ತರಲು ಶಂಕರ ನಿರ್ಧರಿಸಿದ. ಗುರೂಜಿಯವರು ತಿಳಿಸಿದ ಶುಭಗಳಿಗೆಯಲ್ಲಿ ತಂಗವೇಲುವಿನೊಂದಿಗೆ ತನ್ನ ಕಾರಿನಲ್ಲೇ ಮದ್ರಾಸಿಗೆ ಪ್ರಯಾಣ ಬೆಳೆಸಿದ. ಅಲ್ಲಿ ತಂಗವೇಲುವಿನ ಸಂಬಂಧಿಕ ಶಿಲ್ಪಿಗಳ ತಂಡವೊಂದನ್ನು ಭೇಟಿಯಾದ. ಕೆಲವು ಹೊತ್ತಿನ ಮಾತುಕಥೆಯ ನಂತರ ಅವರಿಂದ ವ್ಯವಹಾರವನ್ನು ಕುದುರಿಸಿದ ಮತ್ತು ಸ್ವಲ್ಪ ಹಣವನ್ನು ಮುಂಗಡ ಕೊಟ್ಟು ಮುಂದಿನ ವಾರದೊಳಗೆ ತನ್ನೂರಿಗೆ ಬರುವಂತೆ ಸೂಚಿಸಿ ಹಿಂದಿರುಗಿದ. ಊರಿಗೆ ಬಂದವನು ಆ ಕೆಲಸಗಾರರಿಗೆ ತಮ್ಮ ವಠಾರದಲ್ಲೇ ವಸತಿ ಸೌಲಭ್ಯವನ್ನು ಕಲ್ಪಿಸಲು ಸುರೇಂದ್ರಯ್ಯನಿಗೆ ಸೂಚಿಸಿದ. ಶಂಕರನ ಆಣತಿಯಂತೆ ಕೂಡಲೇ ಹಿರಿಯ ಶಿಲ್ಪಿಗಳ ಮತ್ತು ಯುವ ಕೆಲಸಗಾರರ ಮೂವತ್ತು ಮಂದಿಯಿಂದ ಕೂಡಿದ ದೊಡ್ಡ ತಂಡವೊಂದು ತಮಿಳುನಾಡಿನಿಂದ ಈಶ್ವರಪುರಕ್ಕೆ ಬಂದಿಳಿಯಿತು. ತಂಗವೇಲು ಅವರನ್ನು ಕರೆದುಕೊಂಡು ಹೋಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ. ಇತ್ತ ಗುರೂಜಿಯವರು ತಮ್ಮ ಪಂಚಾಂಗದ ಪ್ರಕಾರ ಆ ಬಂಡೆಗಳನ್ನು ಒಡೆಯಲು ಶುಭದಿನವೊಂದನ್ನು ಗೊತ್ತುಪಡಿಸಿದರು. ಅದೊಂದು ಹುಣ್ಣಿಮೆಯ ದಿನ ಬೆಳಿಗ್ಗೆ ಗುರೂಜಿಯವರು ತಮ್ಮ ಕೆಲವು ಸಹಾಯಕರನ್ನೂ ಮತ್ತು ಬಂಡೆ ತೆರವಿನ ನಾಂದಿಯ ಪೂಜಾ ಸಾಮಾಗ್ರಿಗಳನ್ನೂ ಹಾಗೂ ಬುಕ್ಕಿಗುಡ್ಡೆಯ ಜೀರ್ಣೋದ್ಧಾರ ಸಮಿತಿಯ ಕೆಲವು ಪ್ರಮುಖರನ್ನೂ, ಶಂಕರನನ್ನೂ ಕರೆದುಕೊಂಡು ತಮ್ಮ ಐಷಾರಾಮಿ ಕಾರುಗಳಲ್ಲಿ ಹೊರಟು ಸುರೇಂದ್ರಯ್ಯನ ಮನೆಗೆ ಆಗಮಿಸಿದರು. ಅಲ್ಲಿಂದ ಅವರನ್ನು ಕೂಡಿಕೊಂಡು ದೊಡ್ಡ ಗುಂಪಾಗಿ ಬಂಡೆಗಳತ್ತ ಕಾಲು ನಡಿಗೆಯಲ್ಲಿ ಹೊರಟರು. ಅವರು ಹೋಗುತ್ತಿದ್ದ ಸುಮಾರು ಅಗಲದ ಕಾಲುದಾರಿಯ ಇಕ್ಕೆಲಗಳಲ್ಲೂ ಕಿಲೋಮೀಟರ್ ದೂರದವರೆಗೆ ದಟ್ಟ ಕಾಡು ಬಾನೆತ್ತರಕ್ಕೆ ಬೆಳೆದು ನಿಂತಿತ್ತು. ಗುರೂಜಿಯವರು ಗಂಭೀರವಾಗಿ ನಡೆಯುತ್ತಿದ್ದರು. ಸ್ವಲ್ಪದೂರ ಬಂದ ನಂತರ ಆಯಾಸ ಪರಿಹರಿಸಿಕೊಳ್ಳಲು ಒಂದುಕಡೆ ಕೆಲವುಕ್ಷಣ ನಿಂತುಕೊಂಡರು. ಅಷ್ಟರಲ್ಲಿ ಅವರ ಎಡ ಮಗ್ಗುಲಿನ ದಟ್ಟ ಪೊದೆಯೊಂದು ಇದ್ದಕ್ಕಿದ್ದಂತೆ ಧರಧರನೇ ಕಂಪಿಸತೊಡಗಿತು. ಅದನ್ನು ಕಂಡ ಎಲ್ಲರಿಗೂ ಅಳುಕೆದ್ದಿತು. ಮುಂದಿನ ಕ್ಷಣ ಆ ಪೊದರು ಇನ್ನೂ ಜೋರಾಗಿ ಕುಣಿಯತೊಡಗಿತು. ಯಾವುದೋ ಕ್ರೂರ ಪ್ರಾಣಿಗಳು ತೀಕ್ಷ್ಣವಾಗಿ ಹೋರಾಡುವಂತೆ ಅದು ನಜ್ಜುಗುಜ್ಜಾಗತೊಡಗಿತು. ಆದರೆ ಆ ಪೊದೆಯೊಳಗೆ ಯಾವುದೇ ಪ್ರಾಣಿಗಳು ಇರುವ ಸುಳಿವು, ಸೂಚನೆ ಯಾರೀಗೂ ಕಾಣಿಸಲಿಲ್ಲ! ಆದ್ದರಿಂದ ಎಲ್ಲರೂ ತಟ್ಟನೆ ಭಯದಿಂದ ಓಡಲನುವಾದರು. ಅಷ್ಟರಲ್ಲಿ ಸುರೇಂದ್ರಯ್ಯ ಎಚ್ಚೆತ್ತವರು,‘ಹೇ, ಹೇ…ಯಾರೂ ಹೆದರಬೇಡಿ ನಿಲ್ಲಿ ನಿಲ್ಲೀ…!’ ಎಂದು ಏರುಧ್ವನಿಯಲ್ಲಿ ಅರಚಿದವರು,‘ಆ ಪೊದೆಯೊಳಗೆ ಬಹುಶಃ ಕಾಟಿ (ಕಾಡುಕೋಣ)ಗಳೋ, ಕಾಡುಹಂದಿಗಳೋ ಇರಬೇಕು. ಅವು ನಮ್ಮನ್ನು ಕಂಡು ಹೆದರಿ ಓಡಿ ಹೋಗುವ ರಭಸಕ್ಕೆ ಪೊದೆ ಪುಡಿಯಾಗಿರಬೇಕಷ್ಟೆ. ಅವುಗಳಿಂದ ನಮಗೇನೂ ತೊಂದರೆಯಿಲ್ಲ!’ ಎಂದು ಧೈರ್ಯ ಹೇಳಿದರು. ಆಗ ಎಲ್ಲರೂ ನೆಮ್ಮದಿಯ ಉಸಿರುಬಿಟ್ಟರು. ಆದರೆ ಗುರೂಜಿಯವರ ಪರಿಸ್ಥಿತಿ ಹದಗೆಟ್ಟಿತ್ತು. ಇತ್ತೀಚೆಗೆ ಕೆಲವು ಕಾಲದಿಂದ ಅವರನ್ನು ಆಗಾಗ ಸುಖಾಸುಮ್ಮನೆ ಕಾಡುತ್ತಿದ್ದಂಥ ‘ಫೋಬಿಯಾ’ ಎಂಬ ಅಸಹಜ ಭಯವೊಂದು ಈಗ ಇದ್ದಕ್ಕಿದ್ದಂತೆ ಅವರನ್ನು ಆವರಿಸಿಕೊಂಡಿತು! ಹಾಗಾಗಿ ಅವರು ಸುರೇಂದ್ರಯ್ಯನ ಮಾತನ್ನು ಲೆಕ್ಕಿಸದೆ ಒಂದೇ ಉಸಿರಿಗೆ ದಾಪುಗಾಲಿಕ್ಕುತ್ತ ಮುಂದೆ ಓಡತೊಡಗಿದರು. ಇತ್ತ ತಮ್ಮ ಗುರೂಜಿಯವರು ಮುಂದೆ ಧಾವಿಸುತ್ತಿದ್ದುದನ್ನು ಕಂಡ ಅವರ ಸಹಾಯಕರೂ, ಶಂಕರನೂ ಮತ್ತಿತರರೆಲ್ಲ ಅವರಿಗಿಂತ ದುಪ್ಪಟ್ಟು ವೇಗದಲ್ಲಿ ಮುಂದುವರೆಯತೊಡಗಿದರು. ಸುಮಾರು ದೂರ ನಡೆದು ಬಂದ ಗುರೂಜಿಯವರ ಬೊಜ್ಜು ಮೈಯಲ್ಲಿ ಬೆವರು ಧಾರೆಯಾಗಿ ಹರಿದು ಮೈಯೆಲ್ಲ ತೊಯ್ದುಬಿಟ್ಟಿತು. ಆದರೂ ನಿಲ್ಲಲ್ಲು ಧೈರ್ಯವಿಲ್ಲದೆ ಮತ್ತಷ್ಟು ದೂರ ಸಾಗಿದರು. ಕಾಡು ಕಳೆದು ಶುಭ್ರಾಕಾಶ ಕಾಣತೊಡಗಿದ ಮೇಲೆ ಸ್ವಲ್ಪ ಸ್ಥಿಮಿತಕ್ಕೆ ಬಂದರು. ಅಲ್ಲೊಂದು ಕಡೆ ದಾರಿಯ ಪಕ್ಕದಲ್ಲಿದ್ದ ಇಳಿಜಾರಾದ ಪಾದೆಯ ಮೇಲೆ ಕಣ್ಣುಮುಚ್ಚಿ ಕುಳಿತು ನಾಲ್ಕೈದು ಬಾರಿ ದೀರ್ಘ ಶ್ವಾಸೋಚ್ಛ್ವಾಸ ಮಾಡುತ್ತ ಸುಧಾರಿಸಿಕೊಳ್ಳಲು ಹೆಣಗಿದರು. ಬಳಿಕ ಸಹಜಸ್ಥಿತಿಗೆ ಬಂದರು. ಆಗ ಅವರಿಗೆ ತಮ್ಮ ಭಯವನ್ನು ನೆನೆದು ಅವಮಾನವೆನಿಸಿತು. ಆದ್ದರಿಂದ ಅದನ್ನು ಮರೆಮಾಚುವುದಕ್ಕಾಗಿ ತಮ್ಮ ಹಿಂಬಾಲಕರನ್ನುದ್ದೇಶಿಸಿ ಮಾತಾಡತೊಡಗಿದರು. ‘ಇಲ್ಲಿ ನೋಡಿ, ಎಲ್ಲರೂ ತಾಳ್ಮೆಯಿಂದ ನಮ್ಮ ಮಾತನ್ನು ಕೇಳಿಸಿಕೊಳ್ಳಿ!’ ಎಂದು ಆತಂಕದಿಂದ ಹೇಳಿದರು. ಆಗ ಎಲ್ಲರೂ ಅವರತ್ತ ಗಮನ ಹರಿಸಿದರು. ‘ನಾವೀಗ ನಡೆದು ಬರುತ್ತಿದ್ದಾಗ ಆ ಪೊದೆಯೊಳಗೆ ಇದ್ದದ್ದು ಕಾಡು ಮೃಗಗಳಲ್ಲ!’ ಎಂದು ಮಾತು ನಿಲ್ಲಿಸಿದರು. ಅಷ್ಟರಲ್ಲಿ ಸ್ವಲ್ಪ ಹತೋಟಿಗೆ ಬಂದಿದ್ದ ಜನರು ಕೂಡಾ ಅವರ ಮಾತು ಕೇಳಿ ಮತ್ತೆ ಭಯಗೊಂಡು,‘ಮುಂದೇನು…!?’ಎಂಬಂತೆ ಅವರನ್ನು ದಿಟ್ಟಿಸಿದರು.‘ಅಲ್ಲಿದ್ದುದು ದುಷ್ಟಶಕ್ತಿಗಳು ಅಂತ ನಮ್ಮ ಗಮನಕ್ಕೆ ಬಂದಿದೆ! ಆದ್ದರಿಂದಲೇ ಅವುಗಳಿಂದ ಯಾರೀಗೂ ತೊಂದರೆಯಾಗಬಾರದು ಅಂತ ನಾವು ಸ್ವಲ್ಪ ಜೋರಾಗಿ ನಡೆದು ಬಂದೆವಷ್ಟೆ!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಎಲ್ಲರೂ ಬಿಳಿಚಿಕೊಂಡರು. ‘ಆದರೂ ಯಾರು ಕೂಡಾ ಹೆದರುವ ಅಗತ್ಯವಿಲ್ಲ! ಅವುಗಳನ್ನು ಈ ಪ್ರದೇಶದಿಂದಲೇ ದೂರ ಓಡಿಸುವಂಥ ವಿಶೇಷ ಪೂಜೆಯೊಂದನ್ನು ನಾವು ಪ್ರಥಮವಾಗಿ ನೆರವೇರಿಸುತ್ತೇವೆ. ಆ ನಂತರ ನೀವೆಲ್ಲರೂ ಈ ಪರಿಸರದಲ್ಲಿ ನಿರ್ಭಯವಾಗಿ ಓಡಾಡಬಹುದು!’ ಎಂದರು ಗತ್ತಿನಿಂದ. ಆಗ ಎಲ್ಲರೂ ಗೆಲುವಾದರು. ನಂತರ ಗುರೂಜಿಯವರು ಅಲ್ಲಿಂದೆದ್ದು ನಡೆದವರು ತುಸುಹೊತ್ತಲ್ಲಿ ಬಂಡೆ ಸಮೂಹದ ಹತ್ತಿರ ಬಂದರು. ಶಂಕರನ ಸೂಚನೆಯಂತೆ ಸುರೇಂದ್ರಯ್ಯ ಹಿಂದಿನ ದಿನವೇ ಅಲ್ಲಿ ವಿಶಾಲವಾದ ಮಡಲಿನ ಚಪ್ಪರವನ್ನು ಹಾಕಿಸಿದ್ದರು. ಗುರೂಜಿಯವರ ಸಹಾಯಕರು ಅಲ್ಲೊಂದು ಕಡೆ ಬಂಡೆಯ ಮೇಲೆ ಹೋಮ ಕುಂಡವನ್ನು ಸ್ಥಾಪಿಸಿದರು. ಪೂಜಾ ಸಾಮಾಗ್ರಿಗಳನ್ನು ಜೋಡಿಸಿ ಹೋಮಕ್ಕೆ ಅಣಿಗೊಳಿಸಿದರು. ಗುರೂಜಿಯವರು ಅಲ್ಲಿ ಹತ್ತಿರವಿದ್ದ ಕೊಳವೊಂದಕ್ಕೆ ಹೋಗಿ ಸ್ನಾನ ಮುಗಿಸಿ ಮಡಿಯುಟ್ಟು ಬಂದು ಹೋಮಕ್ಕೆ ಕುಳಿತರು. ವಿಶೇಷ ಮಂತ್ರದ ಮೂಲಕ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿ ತಮ್ಮ ಗೊಗ್ಗರು ಕಂಠದಿಂದ ಮಂತ್ರೋಚ್ಛಾರಣೆಗೆ ತೊಡಗಿದರು. ವಿವಿಧ ಸಮಿಧೆಗಳು ಮತ್ತು ನಾಟಿ ದನದ ತುಪ್ಪವೂ ಅಗ್ನಿದೇವನಿಗೆ ಯಥೇಚ್ಛವಾಗಿ ಆಹುತಿಯಾಗತೊಡಗಿದವು. ಅಗ್ನಿದೇವನು ಹೋಮಾರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡವನು ಗುರೂಜಿಯವರು ಎಡೆಬಿಡದೆ ಅರ್ಪಿಸುತ್ತಿದ್ದ ಪ್ರಿಯವಸ್ತುಗಳನ್ನೆಲ್ಲ ಆಪೋಷನಗೈಯ್ಯುತ್ತ ಎತ್ತರೆತ್ತರಕ್ಕೆ ಮೈದಳೆದು ಕೋಮಲವಾಗಿ ನರ್ತಿಸತೊಡಗಿದ. ಕ್ರಮೇಣ ತನ್ನ ಶುಭ್ರ ವಿರಾಟರೂಪವನ್ನೂ ಪ್ರದರ್ಶಿಸತೊಡಗಿದ. ಅಗ್ನಿಯ ವೈಭೋಗವನ್ನು ಕಂಡ ಗುರೂಜಿಯವರ ಹುಮ್ಮಸ್ಸು ಹೆಚ್ಚಿತು. ಹಾಗಾಗಿ ಅವರಿಂದ ಇನ್ನಷ್ಟು ಉನ್ಮತ್ತ ಮಂತ್ರೋಚ್ಛಾರಗಳು ಧಾರೆಧಾರೆಯಾಗಿ ಹರಿಯತೊಡಗಿದವು. ಆದರೆ ಅಷ್ಟರಲ್ಲಿ ಅಗ್ನಿಯು ತಟ್ಟನೆ ತನ್ನ ಜ್ವಾಲೆಯನ್ನು ಅಡಗಿಸಿಬಿಟ್ಟ! ಮರುಕ್ಷಣ ಹೋಮಕುಂಡದಲ್ಲಿ ದಟ್ಟ ಹೊಗೆ ಏಳಲಾರಂಭಿಸಿತು. ಅದು ಆಕಾಶದೆತ್ತರಕ್ಕೆ ಹರಡಿ ಸುತ್ತಲಿನ ಪರಿಸರವನ್ನು ಆವರಿಸಿಬಿಟ್ಟಿತು. ಅ ದರಿಂದ ಗುರೂಜಿಯವರು ತುಸು ವಿಚಲಿತರಾದರಾದರೂ, ಮಂತ್ರೋಚ್ಚಾರಣೆಯ ಧ್ಯಾನದಲ್ಲಿ ತಾವು ತುಪ್ಪವನ್ನು ತುಸು ಹೆಚ್ಚು ಸುರಿದುದೇ ಬೆಂಕಿ ನಂದಲು ಕಾರಣವೆಂದು ಭಾವಿಸಿದರು. ಹಾಗಾಗಿ ಮರಳಿ ಮಂತ್ರೋಚ್ಛರಿಸುತ್ತ ಸಮಿಧೆಯನ್ನು ಎಸೆಯತೊಡಗಿದರು. ಆಗ ಅಗ್ನಿಯು ಮತ್ತೆ ಉರಿಯತೊಡಗಿದ. ಆದರೆ ಸ್ವಲ್ಪಹೊತ್ತಿನಲ್ಲಿ ಮರಳಿ ಕಣ್ಣುಮುಚ್ಚಾಲೆಯಾಡಿದ. ಮತ್ತೆ ಹೊಗೆ ತುಂಬಿಕೊಂಡಿತು. ಈಗಲೂ ಗುರೂಜಿಯವರು ತಮ್ಮ ಹಿಂದಿನ ಪ್ರಕ್ರಿಯೆಯನ್ನೇ ಪುನಾರಾವರ್ತಿಸಿದರು. ಆದರೂ ಮಬ್ಬು ಕಳೆಯಲಿಲ್ಲ. ಸ್ವಲ್ಪಹೊತ್ತಿನಲ್ಲಿ ಅಲ್ಲಿ ಎಲ್ಲರಿಗೂ ಉಸಿರುಗಟ್ಟುವಂಥ ವಾತಾವರಣವೊಂದು ಸೃಷ್ಟಿಯಾಯಿತು. ಆದರೆ ಅತ್ತ ಅಗ್ನಿದೇವನ ಆ ಬಗೆಯ ವರ್ತನೆಯ ಉದ್ದೇಶವನ್ನು ತಟ್ಟನೆ ಅರ್ಥೈಸಿಕೊಂಡ ನಿಸರ್ಗದತ್ತವಾದ ಮೃಗೀಯಶಕ್ತಿಯೊಂದು ರಪ್ಪನೆ ಎಚ್ಚೆತ್ತುಕೊಂಡಿತು. ಮರುಕ್ಷಣ ಆ ದೈತ್ಯ ಬಂಡೆಗಳೆಡೆಯಿಂದ ಮೈನಡುಗಿಸುವಂಥ ಭೀಕರ ಘರ್ಜನೆಯೊಂದು ಮೊಳಗಿತು. ಆ ಆರ್ಭಟಕ್ಕೆ ಎಲ್ಲರೂ ಹೌಹಾರಿಬಿಟ್ಟರು. ಅಷ್ಟೊತ್ತಿಗೆ ಹೊಗೆಯೂ ಮಾಯವಾಗಿ ಹೋಮಕುಂಡದಲ್ಲಿ ಮತ್ತೆ ಶುಭ್ರಾಗ್ನಿ ಪ್ರತ್ಯಕ್ಷವಾದ. ಆದರೆ ಈಗ ಅವನು ತನ್ನ ವಕ್ರವಕ್ರವಾದ ಭಂಗಿಯಲ್ಲಿ ವ್ಯಂಗ್ಯವಾಗಿ ಕುಣಿಯತೊಡಗಿದ. ಆದರೂ ಸುತ್ತಲಿನ ಪರಿಸರವು ನಿಚ್ಚಳವಾಗಿ ಕಾಣತೊಡಗಿತು. ಅದರ ಬೆನ್ನಿಗೆ ಬಂಡೆಗಳ ಕಮರಿನಿಂದ ಮರಳಿ ಜೋಡಿ ಆರ್ಭಟಗಳು ಮೊಳಗಿದವು. ಮತ್ತೆ ಎಲ್ಲರೂ ಭೀತಿಯಿಂದ ಓಡಲನುವಾದರು. ಆದರೆ ಕಾಲ ಮಿಂಚಿತ್ತು. ಸುಮಾರು ಒಂದು ಮೀಟರ್ ಎತ್ತರದ, ಆರು ಅಡಿಗಿಂತಲೂ ನೀಳ ಮತ್ತು ಬಲಿಷ್ಠವಾದ ಎರಡು ಚಿಟ್ಟೆಹುಲಿಗಳು ಬಂಡೆಯೆಡೆಯಿಂದ ತಮ್ಮ ಮರಿಗಳೊಂದಿಗೆ ಧಾವಿಸಿ ಹೊರಗೆ ಬಂದವು ಹಾಗೂ ತಮ್ಮ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮಾನವಜೀವಿಗಳನ್ನು ಕಂಡು ತೀವ್ರ ಕೋಪಗೊಂಡು ಕ್ಷೀಣಸ್ವರದಲ್ಲಿ ಅರಚಿ ತಮ್ಮ ಮರಿಗಳಿಗೇನೋ ಸಂಜ್ಞೆ ಮಾಡಿದವು. ಅದನ್ನು ಅರಿತ ಅವು ತಟ್ಟನೆ ಕಣ್ಮರೆಯಾದವು. ಮುಂದಿನಕ್ಷಣ ಆ ಮೃಗಗಳು ಮಿಂಚಿನ ವೇಗದಲ್ಲಿ ಹೋಮ ಕುಂಡದತ್ತ ನುಗ್ಗಿದವು ಸಿಕ್ಕಸಿಕ್ಕವರನ್ನು ಕಚ್ಚಿ ಸಿಗಿದು ಸೀಳುತ್ತ ಮುಂದುವರೆದುವು. ಅವುಗಳ ಮಾರಣಾಂತಿಕ ದಾಳಿಗೆ ಸಿಲುಕಿದವರ ಬೊಬ್ಬೆ, ಆರ್ತನಾದಗಳು ಮುಗಿಲು ಮುಟ್ಟಿದವು. ಸುಮಾರು ಹೊತ್ತು ಅದೇ ಬಗೆಯಿಂದ ದಾಂಧಲೆಯೆಬ್ಬಿಸಿದ ಆ ಪ್ರಾಣಿಗಳು ಬಳಿಕ ಹಠತ್ತಾಗಿ ಕಣ್ಮರೆಯಾಗಿಬಿಟ್ಟವು! (ಮುಂದುವರೆಯುವುದು) ಗುರುರಾಜ್ ಸನಿಲ್
ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ […]
ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ […]
ಧಾರಾವಾಹಿ ಆವರ್ತನ ಅದ್ಯಾಯ-44 ಏಕನಾಥರು ಒಂದು ಕಾಲದಲ್ಲಿ ತಮ್ಮನ್ನು ಕಾಡುತ್ತಿದ್ದಂಥ ದಟ್ಟದಾರಿದ್ರ್ಯವನ್ನು ಮೀರಿ ಬೆಳೆದಿದ್ದರು. ಹಾಗಾಗಿ ಅಂದು, ‘ಹೊಟ್ಟೆಪಾಡಿಗೊಂದು ಉದ್ಯೋಗ!’ ಎಂದಿದ್ದ ಅವರ ಆ ಬೀಜಮಂತ್ರದ ಅರ್ಥವು ಈಗ ಸಂಪೂರ್ಣ ಬದಲಾಗಿ, ‘ಆಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಪ್ರತಿಷ್ಠೆಯೇ ತಮ್ಮ ಜೀವನದ ಪರಮೋಚ್ಛ ಗುರಿ!’ ಎಂದಾಗಿತ್ತು. ಆದ್ದರಿಂದ ತಮ್ಮ ಹಠಯೋಗದಂಥ ಜೀವನಶೈಲಿಯಿಂದ ತಾವು ಅಂದುಕೊಂಡಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಆವತ್ತು ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ಕಾಲದಲ್ಲಿ ಏನೇನು ಬಯಸಿದ್ದರೋ ಅವೆಲ್ಲವೂ ಇಂದು ಅವರ ಪಾದಗಳ ಬಳಿ […]
ಧಾರಾವಾಹಿ ಆವರ್ತನ ಅದ್ಯಾಯ-42 ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ […]
ಧಾರಾವಾಹಿ ಆವರ್ತನ ಅದ್ಯಾಯ-41 ಸುಮಿತ್ರಮ್ಮ ಕೋಪದಿಂದ ಕೇಳಿದ ಪ್ರಶ್ನೆಗೆ ನರಹರಿ ತಾನು ಉತ್ತರಿಸಬೇಕೋ, ಬೇಡವೋ ಎಂಬ ಉಭಯಸಂಕಟಕ್ಕೆ ಸಿಲುಕಿದ. ಆದರೆ ಮರುಕ್ಷಣ,‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕ ಜನರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ. ‘ಸುಮಿತ್ರಮ್ಮ ನಿಮ್ಮ ಮತ್ತು ಊರಿನವರ ನಂಬಿಕೆಗಳು ಹಾಗೂ ಆ ಗುರೂಜಿಯವರ ಮಾತುಗಳು ಎಷ್ಟು ಸತ್ಯವೋ […]