ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-40 ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ. ‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ ಮನೆಗೆ ಬಂದಿದ್ದ ನಾಗರಹಾವು ಅದಕ್ಕೂ ಮುಂಚೆ ರಾಧಾಳ ಮನೆಯಂಗಳಕ್ಕೂ ಬಂದು ಹೋಗಿದ್ದನ್ನು ಆತಂಕದಿಂದ ವಿವರಿಸಿದರು. ಸುಮಿತ್ರಮ್ಮನ ಮಾತುಗಳನ್ನು ಕೇಳಿದ ಗುರೂಜಿಯ ಕವಡೆಗಳು ರಾಧಾಳ ಹಣೆ ಬರಹದೊಂದಿಗೂ ಆಟವಾಡಲು ಮುಂದಾಗಿ ನೀಡಿದ ಸುಳಿವಿನ ಮೇರೆಗೆ ಗುರೂಜಿಯವರು ಅವಳನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದವರು, ‘ನೋಡಮ್ಮಾ, ಸುಮಿತ್ರಮ್ಮ ನಿಮ್ಮ ವಠಾರಕ್ಕೆ ಸಂಬಂಧಿಸಿದ ನಾಗನ ಕುರಿತು ನಿನಗೆ ಎಲ್ಲ ವಿಷಯವನ್ನೂ ತಿಳಿಸಿರಬಹುದು. ಆದರೆ ನಾವೂ ಒಮ್ಮೆ ಹೇಳುತ್ತೇವೆ. ನಿನ್ನ ಮನೆಯ ಹತ್ತಿರ ಇರುವ ದೊಡ್ಡ ಹಾಡಿಯು ನಾಗ ಪರಿವಾರ ದೈವಗಳಿಗೆ ಸೇರಿದ ಸ್ಥಾನ. ಅದರ ಸುತ್ತಮುತ್ತ ಮಾಂಸಾಹಾರಿಗಳು ವಾಸಿಸುವುದು ನಿಷಿದ್ಧ. ಆದರೂ ನೀವು ಕುಳಿತಾಗಿದೆ. ತಿಳಿದೋ ತಿಳಿಯದೆಯೋ ಆ ವಠಾರದಲ್ಲಿ ಸಂಚರಿಸುವ ನಾಗನಿಗೂ ಅವನ ಪರಿವಾರಕ್ಕೂ ನಿಮ್ಮಿಂದ ಅಶುದ್ಧವಾಗಿಯೂ ಆಗಿದೆ. ಅದರಿಂದ ಅವನು ಕೋಪಗೊಂಡಿದ್ದಾನೆ. ಅದರ ಸೂಚನೆಯಾಗಿ ನಿನ್ನ ಗಂಡನ ಕನಸಿನಲ್ಲೂ ಮತ್ತು ಅವನ ಮೈಮೇಲೂ ನಾಗಧೂತನೇ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ತೋರಿ ಬರುತ್ತಿದೆ!’ ಎಂದು ಆತಂಕದಿಂದ ಹೇಳಿದರು. ಅಷ್ಟು ಕೇಳಿದ ರಾಧಾ ಕಂಗಾಲಾದಳು. ಅವಳಿಗೆ ಅಳು ಉಕ್ಕಿ ಬಂತು. ‘ನಿಮ್ಮ ದಮ್ಮಯ್ಯ ಗುರೂಜೀ… ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ…!’ ಎಂದು ಬೇಡಿಕೊಂಡಳು. ಆಗ ಅವಳ ಅಳುವಿಗೆ ತಾವೂ ಕನಿಕರಪಟ್ಟಂತೆ ಗುರೂಜಿಯವರ ಮುಖಭಾವವು ಬದಲಾಯಿತು. ‘ನೋಡಮ್ಮಾ ನಿನ್ನ ಕಷ್ಟ ನಮಗೂ ಅರ್ಥವಾಗುತ್ತದೆ. ಸದ್ಯಕ್ಕೆ ನಾಗನ ಕೋಪದಿಂದ ಪಾರಾಗಬೇಕಾದರೆ ನಿಮ್ಮ ಶಕ್ತ್ಯಾನುಸಾರ ಮನೆಯಲ್ಲಿ ನಾಗಶಾಂತಿಯೊಂದನ್ನು ಮಾಡಿಸಬೇಕು. ಬಳಿಕ ಸಂಸಾರ ಸಮೇತ ಷಣ್ಮುಖಕ್ಷೇತ್ರಕ್ಕೆ ಹೋಗಿ ಸೇವೆ ಕೊಟ್ಟು ಬನ್ನಿ. ಅದಾಗುವ ಹೊತ್ತಿಗೆ ಆ ಬನವೂ ಜೀರ್ಣೋದ್ಧಾರವಾಗುತ್ತದೆ. ಆ ಕಾರ್ಯದಲ್ಲೂ ತನು ಮನ ಧನಾದಿಗಳಿಂದ ಸಹಕರಿಸಿ. ಆಮೇಲೆ ನಿನ್ನ ಗಂಡ ಹುಷಾರಾಗುತ್ತಾನೆ ಮತ್ತು ನಿಮ್ಮೆಲ್ಲ ತೊಂದರೆಗಳೂ ಪರಿಹಾರವಾಗುತ್ತವೆ. ಹೋಗಿ ಬನ್ನಿ!’ ಎಂದು ಅಭಯವಿತ್ತರು. ಆದರೆ ರಾಧಾ ಗುರೂಜಿಯ ಪರಿಹಾರ ವಿಧಿಗಳನ್ನು ಕೇಳಿ ದಂಗಾದಳು. ಅವುಗಳನ್ನು ನೆರವೇರಿಸಲು ಹಣಕ್ಕೇನು ಮಾಡುವುದು? ಎಂಬ ಚಿಂತೆ ಅವಳನ್ನು ಆಕ್ಷಣವೇ ಕಾಡತೊಡಗಿತು. ಏನೂ ತೋಚದೆ ಕುಳಿತಳು. ಅವಳ ಮೌನ ಕಂಡು ಗುರೂಜಿಗೆ ಕಿರಿಕಿರಿಯಾಯಿತು. ಅವರು ಅಸಡ್ಡೆಯಿಂದ ಸುಮಿತ್ರಮ್ಮನನ್ನು ದಿಟ್ಟಿಸಿದರು. ಆಗ ಸುಮಿತ್ರಮ್ಮನೂ ಸಂಕೋಚದಿಂದ, ‘ಏನು ಮಾಡುತ್ತಿ ಮಾರಾಯ್ತೀ…?’ ಎಂದು ಮೃದುವಾಗಿ ಪ್ರಶ್ನಿಸಿದರು. ರಾಧಾಳಿಗೆ ಮಾತಾಡುವುದು ಅನಿವಾರ್ಯವಾಯಿತು. ಏನಾದರಾಗಲಿ. ಈಗ ಬಂದಿರುವ ಗಂಡಾಂತರವೊಂದು ನಿವಾರಣೆಯಾದರೆ ಸಾಕು ಎಂದುಕೊಂಡವಳು, ‘ಆಯ್ತು ಗುರೂಜಿ ತಾವು ಹೇಳಿದಂತೆಯೇ ಮಾಡುತ್ತೇವೆ’ ಎಂದಳು. ಆಗ ಗುರೂಜಿ ಶಾಂತರಾದವರು, ಕುಂಕುಮದ ಪೊಟ್ಟಣವೊಂದನ್ನೂ, ಒಂದಿಷ್ಟು ಉರಿದ ಕಡಲೇಬೇಳೆ ಕಾಳುಗಳನ್ನೂ ಅವರಿಬ್ಬರ ಕೈಗಳಿಗೆ ಎಸೆದರು. ಅವರು ಅದನ್ನು ಕಣ್ಣಿಗೊತ್ತಿಕೊಂಡು ಗುರೂಜಿಯ ಕಾಣಿಕೆಯಿಟ್ಟು ಹಿಂದಿರುಗಿದರು. ರಾಧಾಳ ಪರಿಸ್ಥಿತಿಯನ್ನು ನೆನೆದ ಸುಮಿತ್ರಮ್ಮನಿಗೆ, ಗುರೂಜಿಯವರು ಅವಳಿಗೆ ಸೂಚಿಸಿದ ಪರಿಹಾರವನ್ನು ಕೇಳಿ ಯಾಕೋ ಒಂಥರಾ ಸಂಕಟವಾಗತೊಡಗಿತು. ಇಂಥ ಬಡ ಅಮಾಯಕರ ವಿಷಯದಲ್ಲಿ ತಾವೆಲ್ಲೋ ತಪ್ಪು ಮಾಡುತ್ತಿದ್ದೇವೇನೋ ಎಂಬ ಭಯ, ಪಾಪಪ್ರಜ್ಞೆಯೂ ಅವರನ್ನು ಕಾಡತೊಡಗಿತು. ಆದ್ದರಿಂದ ತಮ್ಮ ತಳಮಳವನ್ನು ನಿವಾರಿಸಿಕೊಳ್ಳುವುದಕ್ಕಾಗಿ ದಾರಿಯುದ್ದಕ್ಕೂ ರಾಧಾಳಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ನಡೆದರು. ರಾಧಾ ಮನೆಗೆ ಬಂದವಳು ಗಂಡನಿಗೆ ವಿಷಯ ವಿವರಿಸಿದಳು. ಅಷ್ಟು ಕೇಳಿದ ಗೋಪಾಲ ಮತ್ತೂ ವಿಚಲಿತನಾದ. ಅಲ್ಲದೇ ಅವನು ತನ್ನ ಕನಸಿನಲ್ಲಿ ಕಾಣಿಸಿಕೊಂಡ ಸರ್ಪಕ್ಕೂ ಮತ್ತದರ ಭಯಂಕರ ವರ್ತನೆಗೂ ಹಾಗೂ ಜ್ವರದಿಂದ ತನಗಾದ ವಿಚಿತ್ರಾನುಭವಕ್ಕೂ ತಾಳೆ ಹಾಕಿದ. ಮರುಕ್ಷಣ, ಹೌದು ಗುರೂಜಿಯ ಮಾತುಗಳು ಅಕ್ಷರಶಃ ಸತ್ಯ ಎಂದು ಅವನಿಗನ್ನಿಸಿತು! ‘ಗುರೂಜಿಯವರು ಹೇಳಿದ ಪೂಜೆಗಳನ್ನು ಊರಲ್ಲಿ ಮಾಡಿಸುವುದೆಂದರೆ ನಿಮಗೆ ತುಂಬಾ ಖರ್ಚಾಗುತ್ತದೆ. ಹಾಗಾಗಿ ಅವರು ನಿಮ್ಮನ್ನು ಹ್ಯಾಗೂ ಷಣ್ಮುಖಕ್ಷೇತ್ರಕ್ಕೆ ಹೋಗಿ ಬರಲು ಹೇಳಿದ್ದಾರೆ. ನಾಗಶಾಂತಿಯನ್ನೂ ಅಲ್ಲಿಯೇ ಮಾಡಿಸಿಕೊಂಡು ಬಂದುಬಿಡಿ. ಎಲ್ಲಿಯಾದರೇನು? ನಾಗನಿಗೆ ಸಂದಾಯವಾದರೆ ಸೈಯಲ್ಲವಾ!’ ಎಂದು ರಾಧಾಳ ಅಪ್ಪ ಅಳಿಯನಿಗೆ ಹಗುರವಾಗುವಂಥ ಸಲಹೆಯನ್ನು ನೀಡಿ ಒಂದಿಷ್ಟು ಹಣವನ್ನೂ ಕೊಟ್ಟರು. ಗೋಪಾಲ ದಂಪತಿಗೂ ಅವರ ಮಾತು ಸರಿಯೆನಿಸಿತು. ಕೂಡಲೇ ಮಕ್ಕಳನ್ನು ಕಟ್ಟಿಕೊಂಡು ಷಣ್ಮುಖಕ್ಷೇತ್ರಕ್ಕೆ ಹೋದರು. ಅಲ್ಲಿ ಮೂರು ದಿನಗಳ ಕಾಲ ಕ್ಷೇತ್ರದ ಛತ್ರದಲ್ಲಿದ್ದು ತಮಗೆ ಸೂಚಿಸಲಾದ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿದವರು, ಇನ್ನು ಮುಂದಾದರೂ ನಮ್ಮನ್ನು ಹಿಡಿದಿರುವ ನಾಗದೋಷವು ನಿವಾರಣೆಯಾಗಬಹುದು ಎಂಬ ದೃಢವಿಶ್ವಾಸದಿಂದ ಊರಿಗೆ ಹಿಂದಿರುಗಿದರು. ಆದರೆ ಗೋಪಾಲನ ದುರಾದೃಷ್ಟ ಅಷ್ಟುಬೇಗನೇ ಅವನ ಬೆನ್ನು ಬಿಡುವಂತೆ ತೋರಲಿಲ್ಲ. ಷಣ್ಮುಖಕ್ಷೇತ್ರಕ್ಕೆ ಹೋಗಿ ಬಂದ ಮೂರನೆಯ ದಿನ ಅದೇ ಜ್ವರ ಅವನನ್ನು ಮರಳಿ ಹಿಡಿದುಕೊಂಡಿತು. ರಾಧಾ ಮತ್ತೆ ದಿಕ್ಕು ತೋಚದಾದಳು. ಆದರೆ ಆಗ ಅವಳಿಗೆ ಡಾ. ನರಹರಿ ಕೊಟ್ಟಿದ್ದ ಮಾತ್ರೆಗಳಲ್ಲಿ ಇನ್ನೂ ಕೆಲವು ಉಳಿದಿರುವುದು ತಟ್ಟನೆ ನೆನಪಾಯಿತು. ಕೂಡಲೇ ಅದನ್ನು ಹುಡುಕಿ ತಂದು ಬಿಸಿ ನೀರಿನೊಂದಿಗೆ ಗಂಡನಿಗೆ ನುಂಗಿಸಿದಳು. ಆದರೆ ಅವನು ಸ್ವಲ್ಪಹೊತ್ತಿನಲ್ಲಿ ಮರಳಿ ವಿಚಿತ್ರವಾಗಿ ಬದಲಾದವನು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಗಾಯಗೊಂಡ ಕೋಪಿಷ್ಟ ಹಾವಿನಂತೆ ಉಸಿರು ದಬ್ಬುತ್ತ ಇಡೀ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತ ಹೊರಳಿ, ಹೊರಳಿ ತೆವಳತೊಡಗಿದ. ಕೈಕಾಲುಗಳು ಸೆಟೆದುಕೊಂಡಂತೆ ವರ್ತಿಸತೊಡಗಿದ. ಅವನ ಅಂತ ಭೀಕರ ಸ್ಥಿತಿಯನ್ನು ಕಂಡ ರಾಧಾ ಕಂಗಾಲಾದಳು. ಮರಳಿ ಅವಳನ್ನು ನಾಗದೋಷದ ಭಯವು ಕಾಡತೊಡಗಿತು. ಹಾಗಾಗಿ ಗಂಡನೆದುರು ಕೂರಲಾಗದೆ ದಡಕ್ಕನೆದ್ದು ಸುಮಿತ್ರಮ್ಮನ ಮನೆಗೆ ಧಾವಿಸಿದಳು. ‘ಸುಮಿತ್ರಮ್ಮಾ, ಸುಮಿತ್ರಮ್ಮಾ…ಇವರು ಹೇಗೇಗೋ ಆಡುತ್ತಿದ್ದಾರೆ ಮಾರಾಯ್ರೇ…ಸ್ವಲ್ಪ ಬನ್ನಿಯೇ…!’ ಎಂದು ಅಂಗಲಾಚಿದಳು. ಸುಮಿತ್ರಮ್ಮನೂ ಗಾಬರಿಬಿದ್ದು ಅವಳನ್ನು ಹಿಂಬಾಲಿಸಿದರು. ಆದರೆ ಅಷ್ಟರವರೆಗೆ ಕೋಣೆಯಿಡೀ ತೆವಳುತ್ತಿದ್ದ ಗೋಪಾಲ ಈಗ ನಿತ್ರಾಣಗೊಂಡು ಕವುಚಿ ಬಿದ್ದ ಹೆಣದಂತೆ ಮಲಗಿದ್ದ. ಅವನ ಬಾಯಿಯಿಂದ ಎಂಜಲು ನೊರೆನೊರೆಯಾಗಿ ಹರಿಯುತ್ತಿತ್ತು. ಅವನ ಘೋರ ಸ್ಥಿತಿಯನ್ನು ಕಂಡ ಸುಮಿತ್ರಮ್ಮನಿಗೆ ಗುರೂಜಿಯ ಮಾತು ಮತ್ತು ಸಲಹೆಗಳು ತಟ್ಟನೆ ಕಣ್ಣೆದುರು ಸುಳಿದವು. ಹೌದು ಗುರೂಜಿಯವರು ಹೇಳಿದ್ದೆಲ್ಲವೂ ಸತ್ಯ. ಇವನಿಗೆ ಖಂಡಿತಾ ನಾಗನ ಶಾಪ ತಟ್ಟಿದೆ! ಎಂದು ಯೋಚಿಸಿದ ಅವರನ್ನೂ ಆ ಭಯವು ಆವರಿಸಿಕೊಂಡಿತು. ‘ಅಯ್ಯಯ್ಯೋ ದೇವರೇ…! ಇದೇನಪ್ಪಾ ದುರಾವಸ್ಥೆ? ನೀವು ಆದಷ್ಟು ಬೇಗ ಈ ಮನೆಯನ್ನು ಮಾರಿ ದೂರವೆಲ್ಲಾದರೂ ಹೊರಟು ಹೋಗಿ ಮಾರಾಯ್ತೀ… ಇನ್ನು ನಿಮಗೆ ಈ ಸ್ಥಳ ಖಂಡಿತಾ ಆಗಿಬರುವುದಿಲ್ಲ!’ ಎಂದು ಆತಂಕದಿಂದ ಹೇಳಿದವರು ಕೆಲವು ಕ್ಷಣ ಏನೂತೋಚದೆ ನಿಂತುಬಿಟ್ಟರು. ಸುಮಿತ್ರಮ್ಮನಿಂದಲೂ ಆ ಮಾತುಗಳನ್ನು ಕೇಳಿದ ರಾಧಾಳಿಗೆ ನಿಂತ ನೆಲವೇ ಕುಸಿದಂತಾಯಿತು. ಆದರೆ ಆ ಪರಿಸ್ಥಿತಿಯಲ್ಲೂ ಅವಳಿಗೆ ಮತ್ತೆ ಡಾ. ನರಹರಿ ನೆನಪಾದ. ಸುಮಿತ್ರಮ್ಮನನ್ನು ಕರೆದುಕೊಂಡು ಅವನ ಮನೆಗೆ ಓಡಿದಳು. ಇಂದು ರಾಧಾಳ ಅದೃಷ್ಟಕ್ಕೆ ನರಹರಿಗೆ ರಜೆಯ ದಿನವಾಗಿತ್ತು. ಅವನು ತಾರಸಿಯ ಮೇಲೆ ಕುಳಿತುಕೊಂಡು ಯಾವುದೋ ಪುಸ್ತಕ ಓದುತ್ತಿದ್ದ. ಅಷ್ಟರಲ್ಲಿ ಮನೆಯ ಕರೆಗಂಟೆ ಬಾರಿಸಿದ್ದರಿಂದ ಕೆಳಗಿಳಿದು ಬಂದವನು ಸುಮಿತ್ರಮ್ಮನನ್ನೂ ರಾಧಾಳನ್ನೂ ಕಂಡು ಆತ್ಮೀಯ ನಗು ಬೀರಿದ. ರಾಧಾಳ ಕಣ್ಣೀರು ಗಮನಿಸಿ, ‘ಏನಾಯ್ತಮ್ಮಾ…?’ ಎಂದ. ರಾಧಾ ತನ್ನ ಗಂಡನ ಪರಿಸ್ಥಿತಿಯನ್ನು ಅಳುತ್ತ ಬಡಬಡಿಸಿದಳು. ನರಹರಿಯು ಕೂಡಲೇ ತನ್ನ ಶುಶ್ರೂಷೆಯ ಚೀಲವನ್ನು ಹಿಡಿದುಕೊಂಡು ಅವರೊಂದಿಗೆ ನಡೆದ. ಗೋಪಾಲನ ಮನೆಯ ತೊಡಮೆಯ ಹತ್ತಿರ ಬಂದ ನರಹರಿಯು ಅಪ್ರಜ್ಞಾಪೂರ್ವಕವಾಗಿ ಕೆಲವು ಕ್ಷಣ ಸುಮ್ಮನೆ ನಿಂತುಬಿಟ್ಟ. ಅಲ್ಲೊಂದು ವಿಶೇಷ ಚೈತನ್ಯವು ತನ್ನೊಳಗೆ ಪ್ರವಾಹಿಸಿದಂತಾಗಿ ಅಚ್ಚರಿಗೊಂಡ. ರಾಧಾಳ ವಠಾರದಲ್ಲಿ ನಿಸರ್ಗದತ್ತವಾದ ಸಹಜ ಜೀವಂತಿಕೆ ತುಂಬಿ ತುಳುಕುತ್ತಿರುವುದನ್ನು ಅವನ ಒಳಮನಸ್ಸು ಗ್ರಹಿಸಿತು. ಮರುಕ್ಷಣ ಉಲ್ಲಸಿತನಾದ. ರಾಧಾಳ ಅಂಗಳದಲ್ಲಿ ಹಸುವಿನೊಂದಿಗಿದ್ದ ಕಂದು ಬಣ್ಣದ ಪುಟ್ಟ ಕರುವೊಂದು ಅಮ್ಮನ ಕೆಚ್ಚಲನ್ನು ಗುದ್ದಿಗುದ್ದಿ ಹಾಲು ಕುಡಿಯುತ್ತಿತ್ತು. ಆದರೆ ಆ ತಾಯಿ ಹಸುವು ಯಾಂತ್ರಿಕವಾಗಿ ಮೇಯುತ್ತಿತ್ತು. ಅತ್ತ ಕಡೆ ಏಳೆಂಟು ಊರ ಕೋಳಿಗಳ ಹಿಂಡೊಂದು ಸ್ವಚ್ಛಂದವಾಗಿ ಮೇಯುತ್ತಿದೆ ಎಂದೆನಿಸಿದರೂ ತಮ್ಮ ಮನೆಯಜಮಾನರ ನೋವು ದುಃಖಗಳು ಅವುಗಳನ್ನೂ ಭಾದಿಸುತ್ತಿವೆ ಎಂಬುದು ಅವುಗಳ ನೀರಸ ಚಲನೆಯಿಂದಲೇ ತಿಳಿಯುತ್ತಿತ್ತು. ನರಹರಿಯು ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತ ಅಂಗಳಕ್ಕಡಿಯಿಟ್ಟ. ಅಲ್ಲಿನ ಹಸುಗಳ ಸೆಗಣಿ ಮತ್ತು ಗಂಜಲದ ಸುವಾಸನೆಗಳು ತನ್ನ ಮೆದುಳನ್ನು ಚುರುಕುಗೊಳಿಸಿದಂತೆ ಭಾಸವಾಯಿತು ಅವನಿಗೆ. ಅದರ ಬೆನ್ನಿಗೆ ನೇರಳೆ, ಪೇರಳೆ, ಸಂಪಿಗೆ ಮತ್ತು ಹಲಸಿನ ಮರಗಳಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಕಲರವವೂ ಹೃದಯಸ್ಪರ್ಶಿಯೆನಿಸಿತು. ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿವನು, ನಮ್ಮ ಮನುಷ್ಯಕುಲವು ನಿಜವಾಗಿಯೂ ಬದುಕಿ ಬಾಳಬೇಕಾದ ಜೀವನಕ್ರಮವೆಂದರೆ ಹೀಗೆಯೇ ಅಲ್ಲವೇ! ಎಂದುಕೊಂಡು ಮುಂದುವರೆದ. ನರಹರಿಯನ್ನು ಕಂಡ ಮೋತಿಯು ಜೋರಾಗಿ ಬೊಗಳಿತು. ಆದರೆ ಅವನ ಆತ್ಮೀಯ ನಗುವನ್ನು ಕಂಡದ್ದು ಅವನತ್ತ ಓಡಿ ಬಂದು ಬಾಲವಲ್ಲಾಡಿಸುತ್ತ ಗೌರವ ಸೂಚಿಸಿತು. ಆದರೆ ನರಹರಿಯ ಹಿಂದೆ ಸ್ವಲ್ಪದೂರದಲ್ಲಿ ನಿಂತುಕೊಂಡು ತನ್ನತ್ತ ಭಯದಿಂದ ದಿಟ್ಟಿಸುತ್ತಿದ್ದ ಸುಮಿತ್ರಮ್ಮನನ್ನು ಕಂಡದ್ದು ಮರಳಿ ಕೆರಳಿತು. ಅಷ್ಟೊತ್ತಿಗೆ ರಾಧಾ ಅದನ್ನು ಗದರಿಸಿ ದೂರಕ್ಕಟ್ಟಿದಳು. ಆದ್ದರಿಂದ ಆಗಿನ ಸನ್ನಿವೇಶವನ್ನು ಅರ್ಥಮಾಡಿಕೊಂಡ ಆ ಪ್ರಾಣಿಯೂ ಬೊಗಳುವುದನ್ನು ನಿಲ್ಲಿಸಿ ದೂರ ಹೋಗಿ ಕುಳಿತು ಮನೆಯತ್ತ ಆತಂಕದಿಂದ ನೋಡತೊಡಗಿತು. ನರಹರಿ ಗೋಪಾಲನ ಮನೆಯೊಳಗೆ ಹೋದ. ಅಲ್ಲಿ ಪಡಸಾಲೆಯಲ್ಲಿ ಸೆಗಣಿ ಸಾರಿಸಿದ ಮಣ್ಣಿನ ನೆಲದ ಮೇಲೆ ಕೇದಗೆಯ ಒಲಿಗಳಿಂದ ನೆಯ್ದ ಚಾಪೆಯೊಂದು ಹಾಸಿದ್ದು ಅದೀಗ ಪುಡಿಪುಡಿಯಾಗಿತ್ತು! ಸ್ವಲ್ಪ ಹೊತ್ತಿನ ಮುಂಚೆ ಅದರಲ್ಲಿ ಮಲಗಿದ್ದ ಗೋಪಾಲ ಈಗ ತಣ್ಣನೆ ಉಸಿರು ದಬ್ಬುತ್ತ ಕೋಣೆಯ ಮೂಲೆಯೊಂದರಲ್ಲಿ ನಿಸ್ತೇಜನಾಗಿ ಬಿದ್ದಿದ್ದ. ನರಹರಿ ಅವನನ್ನು ದೀರ್ಘವಾಗಿ ಪರೀಕ್ಷಿಸಿದ. ಅವನ ಮುಖ ಕೆಲವು ಕ್ಷಣ ವೇದನೆಯಿಂದ ಕಳೆಗುಂದಿತು. ‘ಆವತ್ತು ಕೆಲವು ಪರೀಕ್ಷೆಗಳನ್ನು ಮಾಡಿಸಲು ಹೇಳಿದ್ದೆನಲ್ಲಮ್ಮಾ, ಅದನ್ನು ಮಾಡಿಸಿದ್ದೀರೇನು…?’ ಎಂದ ಮೃದುವಾಗಿ. ‘ಹೌದು ಡಾಕ್ಟ್ರೇ ಹೇಳಿದ್ರೀ. ಆದರೆ ನೀವು ಕೊಟ್ಟ ಔಷಧಿಯಿಂದಲೇ ಜ್ವರಬಿಟ್ಟಿತು. ಹಾಗಾಗಿ ಮರೆತುಬಿಟ್ಟೆವು…!’ ಎಂದು ರಾಧಾ ಹಿಂಜರಿಯುತ್ತ ಅಂದಳು. ‘ಛೇ ಛೇ! ಎಂಥ ಕೆಲಸವಾಯಿತಮ್ಮಾ…? ಆ ಪರೀಕ್ಷೆಗಳನ್ನು ಆವತ್ತೇ ಮಾಡಿಸಿಕೊಳ್ಳಬೇಕಿತ್ತಲ್ಲವಾ…!’ ಎಂದ ನರಹರಿ ಆತಂಕದಿಂದ. ‘ಹೌದಾ ಡಾಕ್ಟ್ರೇ..?’ ಎಂದು ನೋವಿನಿಂದ ಕೇಳಿದ ರಾಧಾ, ‘ಈಗೇನು ಮಾಡುವುದು…?’ ಎಂಬಂತೆ ಅವನನ್ನೇ ದಿಟ್ಟಿಸಿದಳು. ‘ನೋಡಿಯಮ್ಮ. ಇದೊಂದು ಬಗೆಯ ಮೆದುಳು ಜ್ವರದ ಸೂಚನೆ! ಈಗಲೇ ತಡವಾಗಿಬಿಟ್ಟಿದೆ. ಸದ್ಯಕ್ಕೊಂದು ಔಷಧಿ ಕೊಡುತ್ತೇನೆ. ಅದರ ಪರಿಣಾಮ ಇಳಿಯುವುದರೊಳಗೆ ಇವನನ್ನು ಆಸ್ಪತ್ರೆಗೆ ದಾಖಲಿಸಬೇಕು!’ ಎಂದು ನರಹರಿ ಗಂಭೀರವಾಗಿ ಹೇಳಿದ. ಅದರಿಂದ ರಾಧಾ ಇನ್ನಷ್ಟು ಹೆದರಿದಳು. ಅತ್ತ ಮರಗಟ್ಟಿ ನಿಂತುಕೊಂಡು ನಾಗದೋಷದ ಹೆದರಿಕೆಯನ್ನೇ ಉಸಿರಾಡುತ್ತ ಗೋಪಾಲನನ್ನು ದಿಟ್ಟಿಸುತ್ತಿದ್ದ ಸುಮಿತ್ರಮ್ಮನಿಗೆ ನರಹರಿ, ‘ಇದು ಮೆದುಳು ಜ್ವರದ ಸೂಚನೆ!’ ಎಂದಾಗ ಒಮ್ಮೆಲೇ ದಿಗಿಲಾಯಿತು. ‘ಅಯ್ಯಯ್ಯೋ ದೇವರೇ…! ಈ ಮನುಷ್ಯ ಏನು ಹೇಳುತ್ತಿದ್ದಾನೆ…!? ಎಂದು ಆತಂಕ, ವಿಸ್ಮಯದಿಂದ ಚಡಪಡಿಸುತ್ತ ಅಂದುಕೊಂಡರು. ಅದರ ಬೆನ್ನಿಗೆ ಅವರನ್ನು ಬಲವಾದ ಅನುಮಾನವೊಂದೂ ಕಾಡಿತು. ಈ ನರಹರಿ ಎಷ್ಟು ಒಳ್ಳೆಯ ಡಾಕ್ಟ್ರಾಗಿದ್ದರೂ ಇವನದಿನ್ನೂ ಹುಡುಗು ಪ್ರಾಯ. ಹಾಗಾಗಿ ಇಂಥ ವಿಚಾರಗಳ ಬಗ್ಗೆ ಇವನಿಗೇನು ಗೊತ್ತಿದ್ದೀತು ಮಣ್ಣು! ಎಂದು ಯೋಚಿಸಿದವರು, ‘ಅಲ್ಲ ಡಾಕ್ಟ್ರೇ, ಅವನು ಹೆಡೆ ತುಳಿದ ನಾಗರಹಾವಿನಂತೆ ಆಡುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಅಷ್ಟಲ್ಲದೆ ಪ್ರಶ್ನೆಯಿಟ್ಟಲ್ಲೂ ಅದು ನಾಗದೋಷದ್ದೇ ಸೂಚನೆ ಅಂತನೂ ತಿಳಿದು ಬಂದಿದೆ. ಹೀಗಿರುವಾಗ ನೀವು ನೋಡಿದರೆ ಮೆದುಳು

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-38 ಮಸಣದಗುಡ್ಡೆಯ ಎರಡನೆಯ ಬನ ಜೀರ್ಣೋದ್ಧಾರದ ನಂತರ ಗುರೂಜಿಯವರ ನಕ್ಷತ್ರವೇ ಬದಲಾಗಿಬಿಟ್ಟಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಅವರ ಸಂಪಾದನೆ ದುಪ್ಪಟ್ಟಾಗಿ ಕಷ್ಟಕಾರ್ಪಣ್ಯಗಳೆಲ್ಲ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ತೂರಿ ಹೋಗಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು. ಅವರೀಗ ತಮ್ಮ ಜ್ಯೋತಿಷ್ಯ ವಿಭಾಗವನ್ನೂ, ಧಾರ್ಮಿಕ ಕೈಂಕರ್ಯಗಳ ವ್ಯವಹಾರವನ್ನೂ ಅಪ್ಪನ ಹಳೆಯ ಕೋಣೆಯಿಂದ ಹೊಸದಾಗಿ ನಿರ್ಮಿಸಿದ ವಿಶಾಲ ಪಡಸಾಲೆಯ ಹವಾನಿಯಂತ್ರಿತ ಕೊಠಡಿಗೆ ವರ್ಗಾಯಿಸಿದ್ದರು. ಆ ಕಛೇರಿಗೂ ಮತ್ತು ವಠಾರದ ಕೆಲವು ಕಡೆಗಳಿಗೂ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಆ ಉಪಕರಣಗಳು ಅವರ ವ್ಯವಹಾರಕ್ಕೆ ಸರ್ಪಗಾವಲಾಗಿದ್ದವು. ಇಷ್ಟಾಗುತ್ತಲೇ ಅವರು ತಮ್ಮ ಮಕ್ಕಳ ಭವಿಷ್ಯವನ್ನೂ ರೂಪಿಸಲು ನಿರ್ಧರಿಸಿದರು. ಅಪ್ಪ ಅಮ್ಮನನ್ನೂ ಮತ್ತು ತಮ್ಮ ಕನ್ನಡ ಮಾಧ್ಯಮದ ಸಹಪಾಠಿಗಳನ್ನೂ ಹಾಗೂ ವಠಾರದ ಆತ್ಮೀಯರನ್ನೂ ಅಗಲಿ ದೂರದ ಪರಕೀಯ ಶಾಲೆಗೆ ಹೋಗಲು ಸುತಾರಾಂ ಇಷ್ಟವಿಲ್ಲದೆ ಸದಾ ಅಳುತ್ತ ಕೂರುತ್ತಿದ್ದ ಮಗಳು ದೀಕ್ಷಾ ಮತ್ತು ಮಗ ದ್ವಿತೇಶ್‍ನನ್ನು ಗದರಿಸಿ, ಓಲೈಸಿ ಮಡಿಕೇರಿಯ ಪ್ರತಿಷ್ಠಿತ ರೆಸಿಡೆನ್‍ಶಿಯಲ್ ಆಂಗ್ಲ ಮಾಧ್ಯಮ ಸ್ಕೂಲಿಗೆ ದೊಡ್ಡ ಮೊತ್ತದ ಡೊನೇಷನ್ ಕೊಟ್ಟು ಸೇರಿಸಿ ನೆಮ್ಮದಿಪಟ್ಟರು. ಗುರೂಜಿಯವರಲ್ಲಿದ್ದ ಅಪಾರ ಧಾರ್ಮಿಕ ಸ್ವಜ್ಞಾನದಿಂದಲೂ ವಿಶೇಷ ಬುದ್ಧಿಶಕ್ತಿಯಿಂದಲೂ ಅವರತ್ತ ಆಕರ್ಷಿತರಾಗಿ ಬರುತ್ತಿದ್ದ ಬಡವರ, ದುರ್ಬಲರ ಮತ್ತು ಶ್ರೀಮಂತವರ್ಗದವರ ನಾನಾ ವಿಧದ ಸಮಸ್ಯೆ, ತೊಂದರೆಗಳನ್ನು ಅವರು ಬಹಳ ಕರುಣೆ ಮತ್ತು ಕೌಶಲ್ಯದಿಂದ ಹೋಗಲಾಡಿಸುವ ಕ್ರಮವು ಬಹಳ ಬೇಗನೇ ಅವರನ್ನು, ‘ಜನಾನುರಾಗಿ ಜ್ಯೋತಿಷ್ಯರು!’ ಎಂಬ ಹೆಗ್ಗಳಿಕೆಗೂ ಪಾತ್ರರನ್ನಾಗಿಸಿತ್ತು. ಹಾಗಾಗಿ ಅವರ ಬೇಡಿಕೆಯನ್ನೂ ಹೆಚ್ಚಿತ್ತು. ಗುರೂಜಿಯವರ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸುತ್ತ ಬಂದಿದ್ದ ರಾಜ್ಯದ ಪ್ರಸಿದ್ಧ, ‘ಅವಿಭಾಜ್ಯ’ ಎಂಬ ಖಾಸಗಿ ದೂರದರ್ಶನ ಮಾಧ್ಯಮವು ಪ್ರತೀ ಶುಕ್ರವಾರ ಅವರನ್ನು ತಮ್ಮ ವಾಹಿನಿಗೆ ಕರೆಯಿಸಿಕೊಂಡು, ‘ಮಹರ್ಷಿ ವಚನ!’ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರಪಡಿಸುತ್ತ ಅವರಿಗೆ ಮತ್ತಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಗುರೂಜಿಯವರ ಈ ಎಲ್ಲಾ ಸೃಜನಶೀಲ ಕಾರ್ಯಚಟುವಟಿಕೆಗಳಿಂದಾಗಿ ಅಪಾರ ಸಿರಿವಂತಿಕೆಯೂ ಅವರನ್ನು ಅರಸಿ ಬಂದಿದೆ. ಆದ್ದರಿಂದ ಅವರೀಗ ದಿನದ ಇಪ್ಪತ್ತನಾಲ್ಕು ಗಂಟೆಯೂ ಬ್ಯುಸಿಯಾಗಿರುವುದು ಅನಿವಾರ್ಯವಾಗಿದೆ. ತಮ್ಮ ಕೆಲಸದ ಒತ್ತಡವನ್ನು ತುಸು ಕಡಿಮೆ ಮಾಡಿಕೊಳ್ಳಲು ಅವರು ರಾಘವ ಮತ್ತು ಅಣ್ಣಪ್ಪ ಎಂಬಿಬ್ಬರು ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಹಿರಿಯರ ನೆನಪಿಗಾಗಿ ಮೊನ್ನೆ ಮೊನ್ನೆಯವರೆಗೆ ಕ್ಷೀಣವಾಗಿ ಉಸಿರಾಡಿಕೊಂಡಿದ್ದ ಹಳೆಯ ಮನೆಯನ್ನು ಒಡೆದುರುಳಿಸಿ, ದೇವಕಿಯ ಆಸೆಗೂ ಮತ್ತು ತಮ್ಮ ಘನತೆಗೂ ಸರಿಹೊಂದುವಂಥದ್ದೊಂದು ಮೂರು ಸಾವಿರ ಚದರಡಿಯ ಭವ್ಯ ಬಂಗಲೆಯನ್ನು ತೋಟದ ನಟ್ಟನಡುವೆ ಕಟ್ಟಿಸಿಕೊಂಡು ಪುಟ್ಟ ಸಂಸಾರದೊಂದಿಗೆ ಹೆಮ್ಮೆಯಿಂದ ಬದುಕುತ್ತ, ಬಿಡುವಿಲ್ಲದೆ ದುಡಿಯುತ್ತ ಇನ್ನಷ್ಟು ಯಶಸ್ಸು ಗಳಿಸುವತ್ತಲೇ ಮುಖ ಮಾಡಿದ್ದಾರೆ. ಅಂದು ಮುಂಜಾನೆ ಒಂಬತ್ತು ಗಂಟೆಯ ಹೊತ್ತು. ಸುಮಿತ್ರಮ್ಮ ರಾಧಾಳನ್ನು ಕರೆದುಕೊಂಡು ಗುರೂಜಿಯ ಮನೆಗೆ ಬಂದರು. ಆಗ ಗುರೂಜಿಯವರ ಕಛೇರಿಯಲ್ಲಿ ಹದಿನೈದಿಪ್ಪತ್ತು ಜನರ ಸಣ್ಣ ದಿಬ್ಬಣವೇ ನೆರೆದಂತಿತ್ತು. ಸ್ವಲ್ಪ ಮಂದಬುದ್ಧಿಯ ಅವರ ಸಹಾಯಕ ಅಣ್ಣಪ್ಪ ಬಂದವರನ್ನೆಲ್ಲ ಅಭಿಮಾನದಿಂದ ಕುಳ್ಳಿರಿಸಿ ವಿಚಾರಿಸುತ್ತ ಬಾಯಾರಿಕೆ, ಟೀ, ಕಾಫಿ ಕೊಡುವ ಸೇವೆಯಲ್ಲಿ ತೊಡಗಿ ನಗುನಗುತ್ತ ಓಡಾಡುತ್ತಿದ್ದ. ಚತುರ ಬುದ್ಧಿಯ ರಾಘವ ಯಾರ ಕಣ್ಣಿಗೂ ಬೀಳದೆ ಗುರೂಜಿಯವರು ವಹಿಸಿದ್ದ ಗುಪ್ತಕಾರ್ಯವನ್ನು ನಿಭಾಯಿಸುತ್ತಿದ್ದ. ಸುಮಿತ್ರಮ್ಮನೂ, ರಾಧಾಳೂ ಜನರ ಕೊನೆಯ ಸಾಲಿನಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಹೇಮಚಂದ್ರ ಎಂಬ್ಬ ದುಬೈ ರಿಟರ್ರ್‍ನ್ ವ್ಯಕ್ತಿಯೊಬ್ಬ ಆಗಮಿಸಿದ. ಹೇಮಚಂದ್ರ ಇಪ್ಪತ್ತು ವರ್ಷಗಳ ಕಾಲ ದುಬೈಯ ಹೊಟೇಲೊಂದರಲ್ಲಿ ಹಗಲು ರಾತ್ರಿ ದುಡಿದು ಸಂಪಾದಿಸಿ ಎರಡು ವರ್ಷದ ಹಿಂದಷ್ಟೇ ಆ ದೇಶವನ್ನು ಬಿಟ್ಟು ಊರಿಗೆ ಬಂದಿದ್ದವನು, ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ್ದ ಹಲವು ಲಕ್ಷ ರೂಪಾಯಿಗಳನ್ನು ಬಳಸಿ ಊರಿನಲ್ಲಿ ಹೊಟೇಲು ಉದ್ಯಮ ಆರಂಭಿಸಿ ಗೌರವದಿಂದ ಬಾಳಬೇಕೆಂದು ಮನಸ್ಸು ಮಾಡಿದ್ದ. ಹಾಗಾಗಿ ಅದಕ್ಕವನು ಸೂಕ್ತ ಜಾಗವೊಂದನ್ನೂ ಹುಡುಕುತ್ತಿದ್ದ. ಊರಿನಲ್ಲಿ ಅದಾಗಲೇ ಪ್ರಸಿದ್ಧವಾಗಿದ್ದ, ‘ಹೋಟೆಲ್ ಕೊಡೆಕ್ಕೆನಾ’ (ಉಪ್ಪು, ಹುಳಿ, ಖಾರದಂಥ ಮಸಾಲೆ ಪದಾರ್ಥಗಳು ಸಮಾ ಪ್ರಮಾಣದಲ್ಲಿ ಬೆರೆತ ಸ್ವಾದಿಷ್ಟ ಖಾದ್ಯಕ್ಕೆ ತುಳುವಿನಲ್ಲಿ: ‘ಕೊಡಕ್ಕೆನಾ!’ ಎಂದು ಉದ್ಗರಿಸುವ ವಾಡಿಕೆ ಇದೆ) ಎಂಬ ಮಾಂಸಹಾರಿ ಹೊಟೇಲಿನ ಪಕ್ಕದ ಕಟ್ಟಡವೊಂದು ದಲ್ಲಾಳಿ ಲಕ್ಷ್ಮಣನ ಮೂಲಕ ಖಾಲಿ ಇರುವುದು ಅವನಿಗೆ ತಿಳಿಯಿತು. ಹೊಟೇಲು ಕೊಡೆಕ್ಕೆನಾದಲ್ಲಿ ವಿವಿಧ ಬಗೆಯ ಕರಿದ ಮೀನು ಮತ್ತು ರುಚಿಕಟ್ಟಾದ ಮಾಂಸದ ಅಡುಗೆ ನಾಡಿನಾದ್ಯಂತ ಪ್ರಸಿದ್ಧವಾಗಿತ್ತು. ವರ್ಷದ ಮುನ್ನೂರರ್ವತ್ತೈದು ದಿನವೂ ತೆರೆದಿರುತ್ತಿದ್ದ ಆ ಹೊಟೇಲಿನಲ್ಲಿ ಜನಜಂಗುಳಿ ಹೇಗೆ ತುಂಬಿರುತ್ತದೆಯೆಂದರೆ, ಊಟ ಮಾಡುತ್ತಿದ್ದವರ ಹಿಂದೆ ಮುಂದೆ ತೂರಿ ನಿಂತುಕೊಂಡು ಕಾಯುತ್ತ ಸೀಟು ಖಾಲಿಯಾಗುತ್ತಲೇ ಮುಲಾಜಿಲ್ಲದೆ ನುಗ್ಗಿ ಕುಳಿತು ಉಂಡು ಹೋಗುವಂಥ ಜನರಿದ್ದರು. ಒಮ್ಮೆ ಆ ಹೊಟೇಲಿನ ಗಿರಾಕಿಗಳ ಧಾವಂತವನ್ನೂ ಅಲ್ಲಿನ ಊಟದ ರುಚಿಯನ್ನೂ ಸ್ವತಃ ಅನುಭವಿಸಿದ ಹೇಮಚಂದ್ರ ಅದರ ಪಕ್ಕದಲ್ಲಿಯೇ ತನ್ನ ವ್ಯಾಪಾರವನ್ನೂ ಆರಂಭಿಸಲು ಮನಸ್ಸು ಮಾಡಿದ. ದುಬೈ ನಮೂನೆಯ ಅಡುಗೆಯಿಂದ ಗಿರಾಕಿಗಳನ್ನು ಆಕರ್ಷಿಸಿ ಹಣ, ಹೆಸರು ಎರಡನ್ನೂ ಒಟ್ಟಿಗೆ ಗಳಿಸಲು ಇಚ್ಛಿಸಿದ. ಹಾಗಾಗಿ ದಲ್ಲಾಳಿ ಲಕ್ಷ್ಮಣ ತೋರಿಸಿದ ಕಟ್ಟಡದ ಅರ್ಧ ಭಾಗವನ್ನು ಬಾಡಿಗೆಗೆ ಪಡೆದುಕೊಂಡ. ಅಂತರ್‍ರಾಷ್ಟ್ರೀಯ ವಿನ್ಯಾಸದಿಂದ ಅದನ್ನು ಸುಸಜ್ಜಿತಗೊಳಿಸಲು ದುಬೈ ಸಂಪಾದನೆಯ ಬಹುಪಾಲು ವಿನಿಯೋಗಿಸಿದ. ಅದಕ್ಕೆ ‘ಹೊಟೇಲ್ ಸತ್ಕಾರ್’ ಎಂದು ನಾಮಕರಣ ಮಾಡಿ ಒಂದು ಶುಭದಿನದಂದು ವ್ಯಾಪಾರವನ್ನು ಆರಂಭಿಸಿದ. ಊಟ, ತಿಂಡಿ ತಿನಿಸುಗಳ ಬೆಲೆಯೇನೂ ದುಬಾರಿಯಿರಲಿಲ್ಲ. ಆದ್ದರಿಂದ ಕೊಡೆಕ್ಕೆನಾದ ಒಂದಷ್ಟು ಗಿರಾಕಿಗಳು ಮತ್ತು ಹೊಸಬರೂ ಹೇಮಚಂದ್ರನ ಹೊಟೇಲಿಗೆ ಬರುತ್ತ ವಿವಿಧ ಖಾದ್ಯಗಳ ರುಚಿಯನ್ನು ಸವಿಯತೊಡಗಿದರು. ಹಾಗಾಗಿ ಒಂದಷ್ಟು ಕಾಲ ವ್ಯಾಪಾರ ಭರದಿಂದ ಸಾಗಿತು. ಹೇಮಚಂದ್ರನ ಹೊಟೇಲ್‍ನ ಆಧುನಿಕ ವಿನ್ಯಾಸವನ್ನೂ ಅದರ ಆರಂಭದ ವೈಭವವನ್ನೂ ಕಂಡ ಕೊಡೆಕ್ಕೆನಾದ ಹೊಟೇಲ್ ಮಾಲಕ ರವಿರಾಜ ಮತ್ತು ಅವನ ಚಿಕ್ಕಪ್ಪ ದುಗ್ಗಪ್ಪಣ್ಣ ಇಬ್ಬರೂ ಕೊಡೆಕ್ಕೆನವಾಗಿ ನಕ್ಕರು. ಆದರೆ ಹೇಮಚಂದ್ರ ತನ್ನ ಅಡುಗೆಗೆ ಬಳಸುತ್ತಿದ್ದ ಕೃತಕ ರಾಸಾಯನಿಕವೂ ಮತ್ತು ಹೊಟೇಲ್ ಕೊಡೆಕ್ಕೆನಾದ ಅಡುಗೆಯ ತಾಜಾ ರುಚಿಗಳು ಇವನ ಆಹಾರದಲ್ಲಿ ಸಿಗದಿದ್ದುದನ್ನೂ ಬಹಳ ಬೇಗನೇ ಮನಗಂಡ ಗಿರಾಕಿಗಳ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸುತ್ತ ಹೋಯಿತು. ಆದ್ದರಿಂದ ಹೇಮಚಂದ್ರ ಹೊಟೇಲು ಆರಂಭಿಸಿದ ಐದಾರು ತಿಂಗಳೊಳಗೆ ಅವನು ಅಷ್ಟು ದೊಡ್ಡ ಹೊಟೇಲಿನ ಗಲ್ಲಾದಲ್ಲಿ ಕುಳಿತು ನೊಣ ಹೊಡೆಯುವ ಪರಿಸ್ಥಿತಿಗೆ ಬಂದು ತಲುಪಿದ. ಕೊನೆಗೆ ಅವನ ಅವಸ್ಥೆ ಕೆಲಸಗಾರರಿಗೆ ಸಂಬಳ ನೀಡಲೂ ಸಾಧ್ಯವಿಲ್ಲದಂತಾಗಿ ಒಬ್ಬೊಬ್ಬರೇ ಕೆಲಸಬಿಟ್ಟು ಹೋಗತೊಡಗಿದರು. ನಂತರ ಕಟ್ಟಡದ ಮಾಲಿಕನಿಂದಲೂ ಬಾಡಿಗೆಯ ವಿಷಯದಲ್ಲಿ ತಕರಾರೆದ್ದು ಹೇಮಚಂದ್ರ ಹೈರಾಣಾಗಿಬಿಟ್ಟ. ಆದರೆ ಅಷ್ಟರಲ್ಲಿ ಕಾಲವೂ ಮಿಂಚಿತ್ತು. ಹೊರದೇಶದಲ್ಲಿ ದುಡಿದ ಹಣವೆಲ್ಲ ನೀರಲ್ಲಿಟ್ಟ ಹೋಮವಾಗಿತ್ತು. ಅದರೊಂದಿಗೆ ಅವನು ಮತ್ತಷ್ಟು ಸಾಲದ ಸುಳಿಗೂ ಸಿಲುಕಿದ್ದ. ಕೊನೆಗೊಂದು ದಿನ ಜೀವನದಲ್ಲಿ ಜಿಗುಪ್ಸೆ ಬಂದು, ರಾತ್ರೋರಾತ್ರಿ ಹೋಟೇಲಿಗೆ ಬೀಗ ಜಡಿದು ಹೊರಟವನು ಕೆಲವು ಕಾಲ ಬುದ್ಧಿಭ್ರಮಣೆಗೊಂಡವನಂತೆ ಎಲ್ಲೆಲ್ಲೋ ತಿರುಗಾಡತೊಡಗಿದ. ಆದರೆ ಇದೇ ಸಮಯದಲ್ಲಿ ಅವನ ದೂರದ ಸಂಬಂಧಿ ಪ್ರಕಾಶನೆಂಬವನೊಬ್ಬ ಅವನ ಸಹಾಯಕ್ಕೆ ಓಡೋಡಿ ಬಂದ. ‘ಅಲ್ಲ ಮಾರಾಯಾ, ನೀನು ಹೋಗಿ ಹೋಗಿ ಆ ಕೊಡೆಕ್ಕೆನಾದವನ ಪಕ್ಕದಲ್ಲಿ ವ್ಯಾಪಾರ ಶುರುಮಾಡಿದ್ದಿಯಲ್ಲ. ಸ್ವಲ್ಪವಾದರೂ ಮಂಡೆ ಬೇಡವಾ ನಿಂಗೆ…? ಅವನು ಅಲ್ಲಿ ಎಷ್ಟು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದಾನೆ ಅಂತ ಗೊತ್ತುಂಟಾ? ಅವನ ಅಪ್ಪನ ಕಾಲದಿಂದಲೂ ಆ ಹೊಟೇಲು ಅಲ್ಲುಂಟು. ಹಾಗಾಗಿ ಅವನ ಹತ್ತಿರ ಯಾರು ಹೊಟೇಲಿಟ್ಟರೂ ಉದ್ಧಾರವಾಗುವುದಿಲ್ಲ. ಯಾಕೆಂದರೆ ತಮ್ಮ ಸುತ್ತಮುತ್ತ ಯಾರನ್ನೂ ಮೇಲೆ ಬರಲು ಅವರು ಬಿಡುವುದಿಲ್ಲ. ಬಂದವರೆಲ್ಲರೂ ನಿನ್ನಂತೆಯೇ ಕೈ ಸುಟ್ಟುಕೊಂಡು ಓಡಿ ಹೋದವರೇ! ಇದನ್ನೆಲ್ಲ ವಿಚಾರಿಸಿಕೊಂಡೇ ಮುಂದುವರೆಯಬೇಕಿತ್ತು ನೀನು. ನಿನ್ನ ವ್ಯಾಪಾರದ ವಿಜೃಂಭಣೆಯನ್ನು ನೋಡಿದ ಅವರು ಹೊಟ್ಟೆ ಉರಿದುಕೊಂಡು ನಿನಗೆ ಸರಿಯಾಗಿ ಮಾಟ ಮಾಡಿಸಿದ್ದಾರೆ ಬಡ್ಡೀಮಕ್ಕಳು! ಆ ರವಿರಾಜನ ಚಿಕ್ಕಪ್ಪ, ದುಗ್ಗಪ್ಪ ಇದ್ದಾನಲ್ವಾ ಅವನು ಯಾವಾಗಲೂ ಬಲ್ಮೆಯವರ ಮನೆಯಲ್ಲೇ ಬಿದ್ದುಕೊಂಡಿರುತ್ತಾನೆ. ನಿನ್ನಂತೆಯೇ ಅಲ್ಲಿ ವ್ಯಾಪಾರ ಆರಂಭಿಸಿದ ತುಂಬಾ ಜನ ಅವರ ಮಾಟಮಂತ್ರಗಳಿಗೇ ಲಗಾಡಿ ಹೋಗಿದ್ದಾರೆ. ಈಗ ನಿನ್ನ ಕಥೆಯೂ ಹಾಗೆಯೇ ಆಯಿತು ನೋಡು!’ ಎಂದು ತನ್ನ ಬಂಧುವಿನ ನಷ್ಟಕ್ಕೆ ಅನುಕಂಪ ತೋರಿಸುವ ನೆಪದಿಂದ ಅವನ ಸೋಲಿನ ಗಾಯವನ್ನು ಮತ್ತಷ್ಟು ಕೆದಕಿ ಉಪ್ಪು, ಖಾರ ಸವರಿ ಬಳಿಕ ಮುಲಾಮು ಹಚ್ಚುವ ಕೆಲಸಕ್ಕೂ ಮುಂದಾದ. ‘ಈಗ ಸೋತು ಸುಣ್ಣವಾದ ಮೇಲೆ ಮಂಡೆ ಹಾಳು ಮಾಡಿಕೊಂಡು ಬದುಕುವುದರಲ್ಲಿ ಅರ್ಥವೇನಿದೆ ಹೇಳು. ಎಲ್ಲದಕ್ಕೂ ಪರಿಹಾರವೊಂದು ಇದ್ದೇ ಇರುತ್ತದೆ. ನಾವದನ್ನು ತಾಳ್ಮೆಯಿಂದ ಹುಡುಕಬೇಕಷ್ಟೆ!’ ಎಂದು ಆಪ್ತವಾಗಿ ಅಂದವನು ತನ್ನ ಆತ್ಮೀಯರೂ ಮತ್ತು ಮೇಲಾಗಿ ತನ್ನ ಕೆಲಸಕ್ಕೆ ಕೈತುಂಬಾ ಕಮಿಶನ್ ಕೊಡುವವರೂ ಆದ ಏಕನಾಥ ಗುರೂಜಿಯವರ ಮನೆಯ ದಾರಿಯನ್ನು ಅವನಿಗೆ ತೋರಿಸಿಕೊಟ್ಟ. ತನ್ನ ದೂರದ ಬಂಧುವಿಂದ ಭರವಸೆಯ ಬೆಳಕನ್ನು ಕಂಡ ಹೇಮಚಂದ್ರನಿಗೆ ಮತ್ತೆ ಜೀವನದಲ್ಲಿ ಆಶಾಭಾವನೆ ಮೂಡಿತು. ಆ ದಿನವೇ ಗುರೂಜಿಯವರ ಮನೆಯತ್ತ ಧಾವಿಸಿದ. ಗುರೂಜಿಯ ಗುಪ್ತ ಸಹಾಯಕ ರಾಘವನು ಹೇಮಚಂದ್ರ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ. ಆದರೆ ಅವನು ಈ ಮೊದಲೆಂದೂ ಗುರೂಜಿಯ ಹತ್ತಿರ ಬಂದುದನ್ನು ರಾಘವ ನೋಡಿರಲಿಲ್ಲ. ಆದ್ದರಿಂದ ಅವನು ಕೂಡಲೇ ತನ್ನ ಪತ್ತೆದಾರಿ ಕೆಲಸಕ್ಕಿಳಿದ. ಹೇಮಚಂದ್ರ ಗುರೂಜಿಯ ಮನೆಯಂಗಳಕ್ಕಡಿಯಿಟ್ಟವನು ಅಲ್ಲಿನ ಜನಸಂದಣಿಯನ್ನು ಕಂಡು ಬೇಸರಗೊಂಡು ಅಲ್ಲೇ ಸಮೀಪವಿದ್ದ ಮಾವಿನ ಮರದ ಬುಡದ ಕಲ್ಲು ಬೆಂಚಿನ ಮೇಲೆ ಕುಳಿತ. ಅವನನ್ನು ಗಮನಿಸಿದ ಅಣ್ಣಪ್ಪ ಕಾಫಿ ತಂದು ಕೊಟ್ಟು ಮುಗ್ಧವಾಗಿ ಹಲ್ಲು ಗಿಂಜಿ ಹೊರಟು ಹೋದ. ಹೇಮಚಂದ್ರ ಕಾಫಿ ತೆಗೆದುಕೊಂಡು ಕುಡಿಯುತ್ತ, ಚಡಪಡಿಸುತ್ತ ಸಮಯ ಕಳೆಯತೊಡಗಿದ. ಮಾವಿನ ಮರದ ಸುತ್ತಮುತ್ತ ತಂಪಾದ ಗಾಳಿ ಬೀಸುತ್ತಿತ್ತು. ಕೆಲಹೊತ್ತಿನಲ್ಲಿ ಅವನ ಮನಸ್ಸೂ ತಿಳಿಯಾಗುತ್ತ ಬಂತು. ಹಾಗಾಗಿ ತಾನು ಗುರೂಜಿಯವರಿಗೆ ವಿವರಿಸಬೇಕಾದ ವಿಚಾರವನ್ನು ಯೋಚಿಸುತ್ತ ಕಾಫಿ ಹೀರತೊಡಗಿದ. ಅಷ್ಟರಲ್ಲಿ ರಾಘವನ ಆಗಮನವಾಯಿತು. ಅವನು ತಾನೂ ಗುರೂಜಿಯವರನ್ನು ಕಾಣಲು ಬಂದ ಗಿರಾಕಿಯಂತೆ ಹೇಮಚಂದ್ರನತ್ತ ಬಂದವನು ಪರಿಚಯದ ನಗೆ ಬೀರುತ್ತ, ‘ಉಸ್ಸಪ್ಪಾ…!’ ಎಂದು ಉಸಿರು ದಬ್ಬಿ ಅವನ ಪಕ್ಕದಲ್ಲಿ ಕುಳಿತುಕೊಂಡ. ಆದರೆ ಹೇಮಚಂದ್ರ ತನ್ನ ತಾಪತ್ರಯಗಳ ಮಡುವಿನಲ್ಲೇ ಮುಳಗೇಳುತ್ತಿದ್ದವನು ಅವನ ನಗುವಿಗೆ ಪ್ರತಿ ನಗದೆ ಅಲಕ್ಷ್ಯ ಮಾಡಿದ. ಅದರಿಂದ ರಾಘವ ತುಸು ಪೆಚ್ಚಾದ. ಆದರೆ ಅವನು ತನ್ನ ಕಾಯಕದಲ್ಲಿ ಪಳಗಿದವನು. ಆದ್ದರಿಂದ, ‘ಛೇ! ಛೇ! ಇದೆಂಥದು ಮಾರಾಯ್ರೇ ಇಲ್ಲಿನ ಅವಸ್ಥೆ…! ಈ ಗುರೂಜಿಯವರಲ್ಲಿಗೆ ನೀವು ಯಾವತ್ತೇ ಬನ್ನಿ, ಬೆಳಿಗ್ಗೆಯಿಂದ ನಡುರಾತ್ರಿಯವರೆಗೆ ಜನರ ಗುಂಪೊಂದು ತಪ್ಪುವುದೇ ಇಲ್ಲ ನೋಡಿ!’ ಎಂದು ಹೇಮಚಂದ್ರನನ್ನು ನೋಡುತ್ತ ಬೇಸರದಿಂದ ಅಂದ. ಆಗ ಹೇಮಚಂದ್ರ ವಾಸ್ತವಕ್ಕೆ ಬಂದು, ‘ಹೌದಾ…?’ ಎಂದು ಅಚ್ಚರಿಯಿಂದ ಅಂದವನು ಬಳಿಕ, ‘ನಾನು ಇದೇ ಮೊದಲ ಸಲ ಬರುತ್ತಿರುವುದು ಮಾರಾಯ್ರೇ. ಈ ಗುರೂಜಿ ಅಷ್ಟೊಂದು ಫೇಮಸ್ಸಾ…?’ ಎಂದ ಕುತೂಹಲದಿಂದ. ‘ಓಹೋ, ಹೌದಾ…? ಹಾಗಾದರೆ ನೀವು ಸರಿಯಾದ ಜಾಗಕ್ಕೇ ಬಂದಿದ್ದೀರಿ ಅಂತಾಯ್ತು. ಅಯ್ಯೋ, ಈ ಗುರೂಜಿಯವರ ಶಕ್ತಿಯನ್ನು ನಿಮಗೆ ನಾನೇನು ಹೇಳುವುದು ಮಾರಾಯ್ರೇ. ಊರಿಗೂರೇ ಇವರ ಚಮತ್ಕಾರವನ್ನು ಕೊಂಡಾಡುತ್ತಿದೆ!’ ಎಂದು ರಾಘವನು, ಗುರೂಜಿಯವರು ದೇವರೇ ಎಂಬಂತೆ ಹೊಗಳಿದ. ‘ಓಹೋ… ಹೌದಾ ಮಾರಾಯ್ರೇ…ಹಾಗಾದರೆ ನೀವೂ ಇವರ ಹಳೆ ಗಿರಾಕಿಯೇ ಎಂದಾಯ್ತು…!’ ‘ಛೇ, ಛೇ! ಗಿರಾಕಿ ಬಿರಾಕಿ ಎಂಥದ್ದೂ ಇಲ್ಲ. ಹಿಂದೊಂದು ಕಾಲದಲ್ಲಿ ಹಾಳಾಗಿ ಹೋಗಿದ್ದ ನನ್ನ ಬದುಕನ್ನು ಮತ್ತೆ ಬೆಳಗಿಸಿದಂಥ ಮಹಾನುಭಾವ ಇವರು!’ ‘ಹೌದಾ, ಅದು ಹೇಗೆ…?’ ‘ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡುವುದು ಹೇಳಿ? ಒಂದುವೇಳೆ ನನ್ನ ಆಗಿನ ಅವಸ್ಥೆಯನ್ನು ನೀವು ಕಣ್ಣಾರೆ ನೋಡಿರುತ್ತಿದ್ದರೆ ಈಗಲೇ ಎದ್ದು ಹೋಗಿ

Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-37 ಗೋಪಾಲನಿಗೆ ಬಿದ್ದ ಕನಸಿನಲ್ಲಿ ಅವನ ಮನೆಯೆದುರಿನ ನಾಗಬನದಿಂದ ಘಟಸರ್ಪವೊಂದು ಅವನ ಮನೆಯತ್ತಲೇ ಧಾವಿಸುವುದನ್ನು ಕಂಡವನು ಹೆದರಿ ಕಂಗಾಲಾಗಿ ಮಡದಿ, ಮಕ್ಕಳನ್ನು ಎಬ್ಬಿಸಲು ಮುಂದಾಗುತ್ತಾನೆ. ಆದರೆ ಅವರಲ್ಲಿ ಯಾರಿಗೂ ಎಚ್ಚರವಾಗುವುದಿಲ್ಲ. ತಾನಾದರೂ ಎದ್ದು ಓಡಿಹೋಗಬೇಕು ಎಂದುಕೊಳ್ಳುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ. ಅಷ್ಟರಲ್ಲಿ ರಾಧಾಳಿಗೆ ಎಚ್ಚರವಾಗುತ್ತದೆ. ಅವಳೂ ಆ ಮಹಾಸರ್ಪವನ್ನು ಕಂಡು ಕಿಟಾರ್ರನೇ ಕಿರುಚುತ್ತಾಳೆ. ‘ಅಯ್ಯೋ ದೇವರೇ… ಇದೇನಿದು ಭಯಂಕರ ಹಾವು! ಏಳಿ ಮಾರಾಯ್ರೇ… ಎದ್ದೇಳಿ ಮಕ್ಕಳನ್ನು ಎತ್ತಿಕೊಳ್ಳಿ. ಇಲ್ಲಿಂದ ಓಡಿ ಹೋಗುವ. ಆ ಹಾವು ಎಲ್ಲರನ್ನೂ ಕಚ್ಚಿ ಸಾಯಿಸಿಯೇ ಬಿಡುತ್ತದೆ. ನಿಮ್ಮ ದಮ್ಮಯ್ಯ ಎದ್ದೇಳಿ ಮಾರಾಯ್ರೇ…!!’ ಎಂದು ಕಿರುಚುತ್ತಾಳೆ. ಆದರೆ ಗೋಪಾಲನಿಗೆ ಹೇಗ್ಹೇಗೆ ಪ್ರಯತ್ನಿಸಿದರೂ ಕುಳಿತಲ್ಲಿಂದ ಚೂರೂ ಅಲ್ಲಾಡಲಾಗುವುದಿಲ್ಲ. ‘ಇಲ್ಲ ರಾಧಾ, ನನ್ನ ಕೈಕಾಲುಗಳು ಬಿದ್ದು ಹೋಗಿವೆ. ನೀನಾದರೂ ಮಕ್ಕಳನ್ನೆತ್ತಿಕೊಂಡು ದೂರ ಹೋಗಿ ಬದುಕಿಕೋ. ಹ್ಞೂಂ ಹೊರಡು!’ ಎಂದು ಕೂಗುತ್ತಾನೆ. ‘ಅಯ್ಯೋ ಇಲ್ಲ ಮಾರಾಯ್ರೇ… ನಿಮ್ಮನ್ನು ಬಿಟ್ಟು ನಾವು ಎಲ್ಲಿಗೂ ಹೋಗುವುದಿಲ್ಲ. ಸಾಯುವುದಿದ್ದರೆ ಒಟ್ಟಿಗೆ ಸಾಯುವ!’ ಎಂದು  ಅಳುತ್ತಾಳೆ.    ಅಷ್ಟರಲ್ಲಿ ಆ ಕಾಳಸರ್ಪವು ಗೋಪಾಲನ ಮನೆಯತ್ತ ಬಂದೇ ಬಿಟ್ಟಿತು ಮತ್ತದು ನೋಡು ನೋಡುತ್ತಿದ್ದಂತೆಯೇ ಬೆಳೆಯತೊಡಗಿತು. ಬೆಳೆಯುತ್ತ ಬೆಳೆಯುತ್ತ ಅವನ ಮನೆಯನ್ನೂ ಮೀರಿ ಆಕಾಶದೆತ್ತರಕ್ಕೆ ಬೆಳೆದು ಸೆಟೆದು ನಿಂತುಕೊಂಡಿತು! ಅದರ ವಿರಾಟರೂಪವನ್ನೂ, ಎದೆ ನಡುಗುವಂಥ ಫೂತ್ಕಾರವನ್ನೂ ಕೇಳಿದ ರಾಧಾ ಪ್ರಜ್ಞೆ ತಪ್ಪಿಬಿದ್ದಳು. ಗೋಪಾಲ ಮೂಕನಂತಾದ. ಅತ್ತ ಹಟ್ಟಿಯಲ್ಲಿದ್ದ ದನಕರು, ನಾಯಿ, ಕೋಳಿಗಳ ಕೂಗು, ಆಕ್ರಂದನ ಮುಗಿಲು ಮುಟ್ಟಿತು. ಆ ಮುಗ್ಧಜೀವಿಗಳ ಆರ್ತನಾದವನ್ನೂ ಗೋಪಾಲನ ಅಸಹಾಯಕತೆಯನ್ನೂ ಕಂಡ ಸರ್ಪವು ತನ್ನ ಒಂದೊಂದು ಹೆಡೆಯನ್ನು ಒಂದೊಂದು ರೀತಿಯಲ್ಲಿ ಕೊಂಕಿಸಿ, ಕುಣಿಸಿ ಅಟ್ಟಹಾಸ ಮಾಡತೊಡಗಿತು. ಅಷ್ಟರಲ್ಲಿ ಗೋಪಾಲನಿಗೆ ಅಲ್ಲಿ ಇನ್ನೊಂದು ಆಘಾತವೂ ಬಡಿಯಿತು. ಆ ಮಹಾಸರ್ಪವನ್ನು ವಠಾರದ ಮಂದಿಯೆಲ್ಲ ವಿಸ್ಮಯದಿಂದ ನೋಡುತ್ತ ನಿಂತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಚೂರೂ ಭಯವಿರಲಿಲ್ಲ. ಎಲ್ಲರೂ ಗೋಪಾಲನ ಕುಟುಂಬದ ಒದ್ದಾಟವನ್ನು ನೋಡಿ ಗೇಲಿ ಮಾಡುತ್ತ ನಗುತ್ತಿದ್ದಾರೆ! ಅವನಿಗೆ ಅವರಲ್ಲಿ ಯಾರ ಗುರುತೂ ಸರಿಯಾಗಿ ಹತ್ತುವುದಿಲ್ಲ. ಆದರೆ ಸುಮಿತ್ರಮ್ಮ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಾರೆ. ಅವನಲ್ಲಿ ಸ್ವಲ್ಪ ಧೈರ್ಯ ಮೂಡುತ್ತದೆ. ‘ಸುಮಿತ್ರಮ್ಮಾ, ಸುಮಿತ್ರಮ್ಮಾ… ನಿಮ್ಮ ದಮ್ಮಯ್ಯ. ನಮ್ಮನ್ನು ಕಾಪಾಡಿಯಮ್ಮಾ…!’ ಎಂದು ಗೋಗರೆಯುತ್ತಾನೆ. ಆದರೆ ಸುಮಿತ್ರಮ್ಮನೂ ಅವನನ್ನು ಕಂಡು ಗಹಗಹಿಸಿ ನಗುತ್ತಾರೆ! ಅವನಿಗೆ ಇನ್ನಷ್ಟು ಆಘಾತವಾಗುತ್ತದೆ. ಭಯದಿಂದ ಹಾವಿನತ್ತ ನೋಡುತ್ತಾನೆ. ಅದು ಅವನ ಮಣ್ಣಿನ ಗೋಡೆಯ, ತಾಳೆಮರದ ಪಕ್ಕಾಸಿನ ಮೇಲೆ ಮೂರನೇ ದರ್ಜೆಯ ಹೆಂಚು ಹೊದೆಸಿದ್ದ ಸಣ್ಣ ಮನೆಯನ್ನು ತನ್ನ ಬಲಿಷ್ಠ ಹೆಡೆಗಳಿಂದ ಬೀಸಿ ಅಪ್ಪಳಿಸಿ ಪುಡಿ ಮಾಡಲು ಮುಂದಾಯಿತು ಎಂಬಷ್ಟರಲ್ಲಿ, ‘ಅಯ್ಯಯ್ಯಮ್ಮಾ…!?’ ಎಂದು ಗೋಪಾಲ ವಿಕಾರವಾಗಿ ಕಿರುಚುತ್ತ ನಿಜವಾದ ನಿದ್ರೆಯಿಂದ ಎಚ್ಚೆತ್ತು ಎದ್ದು ಕುಳಿತುಕೊಳ್ಳುತ್ತಾನೆ. ಗಂಡನ ಬೊಬ್ಬೆಗೆ ರಾಧಾಳೂ ಬೆಚ್ಚಿಬಿದ್ದು ಎದ್ದಳು. ಗೋಪಾಲ ಚಳಿಜ್ವರದಿಂದ ನಡುಗುತ್ತಿದ್ದ. ಅವಳಿಗೆ ಗಾಬರಿಯಾಯಿತು. ಗಂಡನನ್ನು ತಬ್ಬಿಕೊಂಡು ಸಂತೈಸುತ್ತ, ‘ಏನಾಯ್ತು ಮಾರಾಯ್ರೇ… ಜ್ವರ ಈಗಲೂ ಸುಡುತ್ತಿದೆಯಲ್ಲಾ…? ಯಾಕೆ ಕಿರುಚಿಕೊಂಡ್ರೀ…, ಕೆಟ್ಟ ಕನಸು ಬಿತ್ತಾ…?’ ಎಂದು ಅಕ್ಕರೆಯಿಂದ ಅವನ ಹಣೆ ಮತ್ತು ಎದೆಯನ್ನು ಒರಸುತ್ತಾ ಕೇಳಿದಳು. ಆದರೆ ಗೋಪಾಲ ಇಹದ ಪ್ರಜ್ಞೆಯೇ ಇಲ್ಲದವನಂತೆ ಹೆಂಡತಿಯನ್ನು ನೋವಿನಿಂದ ದಿಟ್ಟಿಸಿದ. ಅವನ ಕಣ್ಣಗುಡ್ಡೆಗಳು ಕೆಂಪಾಗಿ ಹೊರಚಾಚಿದ್ದವು. ಗಂಟಲ ನರಗಳು ಉಬ್ಬಿ ಕಾಣುತ್ತಿದ್ದವು. ಒಮ್ಮೆ ವಿಚಿತ್ರವಾಗಿ ತನ್ನ ಮೈಕೊಡವಿಕೊಂಡವನು, ‘ಆದಷ್ಟು ಬೇಗ ನಾವಿಲ್ಲಿಂದ ದೂರ ಹೊರಟು ಹೋಗಬೇಕು ಮಾರಾಯ್ತೀ… ಈ ಜಾಗ ನಮಗಿನ್ನು ಖಂಡಿತಾ ಆಗಿ ಬರುವುದಿಲ್ಲ!’ ಎಂದು ನಡುಗುತ್ತ ಅಂದವನು ದೊಪ್ಪನೆ ಅಂಗಾತ ಬಿದ್ದ. ಇಡೀ ದೇಹವನ್ನು ಬಿರುಸಾಗಿ ಹಿಂಡುತ್ತ ಅತ್ತಿತ್ತ ಹೊರಳಾಡತೊಡಗಿದ. ನಂತರ ವಿಚಿತ್ರವಾಗಿ ನುಲಿಯುತ್ತ ಕೋಣೆಯಿಡೀ ತೆವಳತೊಡಗಿದ!    ಗಂಡನ ಸ್ಥಿತಿಯನ್ನು ಕಂಡ ರಾಧಾಳಿಗೆ ದಿಕ್ಕೇ ತೋಚದಾಯಿತು. ಅವನ ಆ ತೆವಳುವಿಕೆಯು ಹೆಡೆ ತುಳಿದ ಸರ್ಪವೊಂದು ನೋವು, ಕೋಪದಿಂದ ಬುಸುಗುಟ್ಟುತ್ತಿರುವಂತೆಯೇ ಅವಳಿಗೆ ಭಾಸವಾಯಿತು. ಹಾಗಾಗಿ ಅವಳಲ್ಲೂ ನಾಗದೋಷದ ಭೀತಿಯು ಹುಟ್ಟಿಕೊಂಡು ದಂಗು ಬಡಿಸಿತು. ತುಸುಹೊತ್ತು ಗಂಡನ ಹತ್ತಿರ ಸುಳಿಯಲೂ ಅಂಜಿಬಿಟ್ಟಳು. ಅಷ್ಟರಲ್ಲಿ ಗೋಪಾಲ ತನ್ನ ಇಡೀ ದೇಹವನ್ನು ವಿಪರೀತ ಮುರಿಯಲೂ ಕೊಸರಾಡಲೂ ಶುರುವಿಟ್ಟುಕೊಂಡ. ಅಪ್ಪನ ವಿಚಿತ್ರ ನರಳಾಟ ಮತ್ತವನಿಂದ ಉಸಿರುಗಟ್ಟಿ ಹೊರಡುತ್ತಿದ್ದ ಬುಸ್! ಬುಸ್! ಬುಸ್! ಎಂಬ ಫೂತ್ಕಾರವು ಮಕ್ಕಳನ್ನೂ ಎಬ್ಬಿಸಿತು. ಅವು ಅಪ್ಪನನ್ನು ಕಂಡವು ‘ಹೋ…!!’ ಎಂದು ಅಳಲಾರಂಭಿಸಿದವು. ಆಗ ರಾಧಾ ಸ್ವಲ್ಪ ಧೈರ್ಯ ತಂದುಕೊಂಡಳು. ಗಂಡನ ಮೊಬೈಲ್ ಫೋನಿನಿಂದ ತಕ್ಷಣ ಅಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವರೂ ಹೆದರಿದರು ಆದರೂ ಕೂಡಲೇ ಹೊರಟು ಬರುವುದಾಗಿ ಮಗಳಿಗೆ ಧೈರ್ಯ ಹೇಳಿದರು. ಸ್ವಲ್ಪಹೊತ್ತಲ್ಲಿ ಗೋಪಾಲ ಯಥಾಸ್ಥಿತಿಗೇನೋ ಬಂದ. ಜ್ವರವಿನ್ನೂ ಸುಡುತ್ತಿತ್ತು. ಬೆಳಕು ಹರಿಯುವವರೆಗೆ ರಾಧಾ ತನಗೆ ತಿಳಿದ ಮಟ್ಟಿಗೆ ಗಂಡನ ಶುಶ್ರೂಷೆ ಮಾಡಿದಳು. ಅವಳ ಅಪ್ಪ, ಅಮ್ಮ ಟ್ಯಾಕ್ಸಿ ಮಾಡಿಕೊಂಡು ನಸುಕಿನಲ್ಲೇ ಬಂದರು. ಗೋಪಾಲನನ್ನು ಕಾರಿನಲ್ಲಿ ಕೂರಿಸಿಕೊಂಡು ರಾಧಾಳ ಸೂಚನೆಯಂತೆ ಡಾಕ್ಟರ್ ನರಹರಿಯ ಮನೆಗೆ ಕರೆದೊಯ್ದರು.                                                                                         *** ಡಾಕ್ಟರ್ ನರಹರಿ ಪ್ರತಿನಿತ್ಯ ಅರುಣೋದಯದಲ್ಲಿ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸವಿದ್ದವನು. ಇಂದು ಕೂಡಾ ಮನೆಯ ತಾರಸಿಯ ಮೇಲೆ ದೇಹ ದಂಡನೆಯಲ್ಲಿ ತೊಡಗಿದ್ದವನಿಗೆ ಎರಡು ಮೂರು ಬಾರಿ ಕಾಲಿಂಗ್ ಬೆಲ್ ಬಾರಿಸಿದ್ದು ಕೇಳಿಸಿತು. ಪೇಶೆಂಟ್ ಬಂದಿರಬೇಕೆಂದುಕೊಂಡು ವ್ಯಾಯಾಮ ನಿಲ್ಲಿಸಿ ಕೆಳಗೆ ಬಂದ. ರಾಧಾ ಮತ್ತು ಅವಳ ಹೆತ್ತವರು ಗೋಪಾಲನನ್ನು ಹೊರ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು ಕಾಯುತ್ತಿದ್ದರು. ನರಹರಿ ನಗುತ್ತ ಅವರನ್ನು ಶುಶ್ರೂಷೆಯ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಗೋಪಾಲನನ್ನು ಪರೀಕ್ಷಿಸಿದ. ಅವನಿಗೆ ಗೋಪಾಲನ ಜ್ವರದ ಕುರಿತು ಅನುಮಾನ ಬಂತು. ‘ಏನಮ್ಮಾ, ಇವನಿಗೆ ಈ ಜ್ವರ ಎಷ್ಟು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ?’ ಎಂದು ರಾಧಾಳನ್ನು ಕೇಳಿದ. ‘ನಿನ್ನೆಯಿಂದ ಶುರುವಾಗಿದ್ದು ಡಾಕ್ಟ್ರೇ. ಏನಾಗಿದೆ ಅವರಿಗೇ…?’ ಎಂದವಳು ಆತಂಕದಿಂದ. ‘ಗಾಬರಿ ಪಡುವಂಥದ್ದೇನಿಲ್ಲ. ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಬರೆದು ಕೊಡುತ್ತೇನೆ. ಆದಷ್ಟು ಬೇಗ ಮಾಡಿಸಿಕೊಂಡು ಬನ್ನಿ!’ ಎಂದ ನರಹರಿ ಪರೀಕ್ಷೆಯ ಚೀಟಿಯನ್ನೂ ಎರಡು ದಿನದ ಔಷಧಿಯನ್ನೂ ಕೊಟ್ಟು ಕಳುಹಿಸಿದ. ಗೋಪಾಲನ ಅತ್ತೆ, ಮಾವ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟವರು ಅಳಿಯನಿಗೆ ಸಾಂತ್ವನ ಹೇಳಿ ಮಗಳ ಕೈಯಲ್ಲಿ ಒಂದು ಸಾವಿರ ರೂಪಾಯಿಯನ್ನಿಟ್ಟು ಧೈರ್ಯ ತುಂಬಿ ಹೊರಟು ಹೋದರು.    ಅಂದು ಸಂಜೆ ಗೋಪಾಲನಿಗೆ ಜ್ವರ ಬಿಟ್ಟಿತು. ಗಂಜಿ ಕುಡಿಸಲು ಬಂದ ರಾಧಾಳನ್ನು ಸಮೀಪ ಕುಳ್ಳಿರಿಸಿಕೊಂಡ. ಹಿಂದಿನ ದಿನ ರಾತ್ರಿ ತನಗೆ ಬಿದ್ದ ಭೀಕರ ಕನಸನ್ನು ಎಳೆಎಳೆಯಾಗಿ ಅವಳಿಗೆ ವಿವರಿಸಿದ. ಅವನು ಹಾಗೆ ಮಾಡಬಾರದಿತ್ತೇನೋ. ಆದರೆ ಅವನೊಳಗೆ ತಣ್ಣನೆ ಹೊಕ್ಕು ರಾಕ್ಷಸಾಕಾರವಾಗಿ ಬೆಳೆದು ಅವನ ವಿವೇಚನೆಯನ್ನೇ ಕಸಿದುಕೊಂಡಿದ್ದ ನಾಗದೋಷದ ಭಯವು ಅವನಿಂದ ಆ ಕೆಲಸವನ್ನು ಮಾಡಿಸಿಬಿಟ್ಟಿತ್ತು. ಗಂಡನ ಕನಸನ್ನು ಕೇಳಿದ ರಾಧಾಳ ಮನಸ್ಸು ಕೆಟ್ಟಿತು. ಮರುಕ್ಷಣ ಅವಳ ಯೋಚನೆಯೂ ಎಲ್ಲರಂತೆ ಓಡತೊಡಗಿತು. ಸುಮಿತ್ರಮ್ಮ ಮತ್ತು ವಠಾರದವರು ಅನ್ನುವಂತೆ ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೂ ಗಂಡನ ಕನಸಿಗೂ ಹಾಗು ಅವನನ್ನು ಕಾಡಿದ ವಿಚಿತ್ರ ಜ್ವರಕ್ಕೂ ನಾಗದೋಷವೇ ಕಾರಣ ಎಂದು ಅವಳೂ ಬಲವಾಗಿ ನಂಬಿಬಿಟ್ಟಳು. ಅಲ್ಲಿಂದ ಆ ಕೊರಗು ಅವಳನ್ನೂ ಭಾದಿಸತೊಡಗಿತು. ಹೀಗಾಗಿ ಡಾ. ನರಹರಿ ಸೂಚಿಸಿದ ಪರೀಕ್ಷೆಗಳನ್ನು ಮಾಡಿಸುವುದನ್ನು ಇಬ್ಬರೂ ಮರೆತುಬಿಟ್ಟರು.    ಮರುದಿನ ಸಂಜೆಯ ಹೊತ್ತಿಗೆ ರಾಧಾಳ ತಳಮಳ ತೀವ್ರವಾಯಿತು. ಅದನ್ನು ಸಹಿಸಲಾಗದೆ ಸುಮಿತ್ರಮ್ಮನ ಮನೆಗೆ ಓಡಿದಳು. ಅವರು ತುಳಸಿಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು ಬತ್ತಿ ಹೆಣೆಯುತ್ತಿದ್ದರು. ಗೇಟು ತೆಗೆದು ಒಳಗೆ ಬಂದ ರಾಧಾಳ ಮುಖದಲ್ಲಿದ್ದ ಗಾಬರಿಯನ್ನು ಕಂಡವರಿಗೆ ಅಚ್ಚರಿಯಾಯಿತು. ‘ಓಹೋ, ರಾಧಾ ಬಾ ಮಾರಾಯ್ತೀ ಕುಳಿತುಕೋ. ಏನು ವಿಷಯ…?’ ಎನ್ನುತ್ತ ಕೈಸನ್ನೆ ಮಾಡಿ ತಮ್ಮಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಸುಮಿತ್ರಮ್ಮನನ್ನು ಕಂಡ ರಾಧಾಳಿಗೆ ಅಳು ಉಕ್ಕಿ ಬಂತು. ಅದನ್ನು ಕಂಡ ಸುಮಿತ್ರಮ್ಮ ಗಲಿಬಿಲಿಯಾದರು. ‘ಅಯ್ಯೋ ದೇವರೇ…ಏನಾಯ್ತು ಮಾರಾಯ್ತೀ ಯಾಕೆ ಅಳುತ್ತೀ…?’ ಎಂದರು ಆತಂಕದಿಂದ. ರಾಧಾ ಕಣ್ಣೀರೊರೆಸಿಕೊಳ್ಳುತ್ತ ತನ್ನ ಗಂಡನಿಗೆ ಬಿದ್ದ ಭೀಕರ ಕನಸನ್ನೂ ಆ ಹೊತ್ತು ಅವನು ವರ್ತಿಸಿದ ರೀತಿಯನ್ನೂ ಆರ್ತಳಾಗಿ ಅವರಿಗೆ ವಿವರಿಸಿದಳು. ಅಷ್ಟು ಕೇಳಿದ ಸುಮಿತ್ರಮ್ಮನೂ ಗಾಬರಿಯಾದರು. ಬಳಿಕ ಇನ್ನೇನೋ ಯೋಚಿಸಿದರು. ‘ಅಯ್ಯಯ್ಯೋ, ದೇವರೇ! ಆ ಬನವು ನಾಗನ ಮೂಲಸ್ಥಾನ ಮಾರಾಯ್ತೀ… ವಠಾರವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ ಅಂತ ನಾನಾವತ್ತೇ ಬಡಕೊಂಡೆ. ಆದರೆ ನಿಮಗಿಬ್ಬರಿಗೂ ನನ್ನ ಮಾತೇ ಅರ್ಥವಾಗಲಿಲ್ಲ ಅಲ್ಲವಾ! ಇನ್ನೆಂಥ ಅನಾಹುತಗಳು ಕಾದಿವೆಯೋ ಮುಖ್ಯಪ್ರಾಣಾ…!’ ಎಂದು ಭಯದಿಂದ ಗೊಣಗಿದರು.    ಬಳಿಕ, ‘ಸರಿ, ಸರಿ. ಆಗಿದ್ದು ಆಯಿತು. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಬದುಕಲು ಕಲಿಯಿರಿ ಮಾರಾಯ್ತೀ. ನಾಳೆ ಬೆಳಿಗ್ಗೆ ನೀನು ನನ್ನೊಂದಿಗೆ ಗುರೂಜಿಯವರಲ್ಲಿಗೆ ಬಂದುಬಿಡು. ಇದಕ್ಕೆಲ್ಲ ಅವರೇ ಸೂಕ್ತ ಪರಿಹಾರ ಸೂಚಿಸುತ್ತಾರೆ!’ ಎಂದು ಅವಳನ್ನು ಸಂತೈಸಿದರು. ಗುರೂಜಿಯ ಹೆಸರೆತ್ತಿದ ಮೇಲೆ ರಾಧಾ ತುಸು ಸಮಾಧಾನವಾದಳು. ‘ಆಯ್ತು ಸುಮಿತ್ರಮ್ಮ ಬರುತ್ತೇನೆ. ಈ ದುರಾವಸ್ಥೆಯಿಂದ ನನ್ನ ಸಂಸಾರವನ್ನು ನೀವೇ ಕಾಪಾಡಬೇಕಮ್ಮಾ!’ ಎಂದು ಬೇಡಿಕೊಂಡು ಮತ್ತೆ ಅತ್ತಳು. ಅವಳ ದುಃಖ ಕಂಡ ಸುಮಿತ್ರಮ್ಮನ ಕರುಳು ಮಿಡಿಯಿತು. ‘ಆಯ್ತು ರಾಧಾ, ಚಿಂತಿಸಬೇಡ. ಎಲ್ಲಾ ಸಮ ಆಗುತ್ತದೆ. ಈಗ ನೆಮ್ಮದಿಯಿಂದ ಮನೆಗೆ ಹೋಗು!’ ಎಂದರು ಅಕ್ಕರೆಯಿಂದ. ಅವರ ಮಾತಿನಿಂದ ರಾಧಾಳ ನೋವು ಅರ್ಧಕ್ಕರ್ಧ ತಣ್ಣಗಾಯಿತು. ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿದಳು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Read Post »

ಇತರೆ, ದಾರಾವಾಹಿ

ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ.

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-35 ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? ಅಂತನೂ ಬಹಳ ಚಿಂತಿಸಿದೆವು. ಕೊನೆಗೆ ಒಂದು ಉಪಾಯ ಹೊಳೆಯಿತು. ಆದರೆ ಅದಕ್ಕೆ ನಿಮ್ಮದೂ ಸಂಪೂರ್ಣ ಸಹಕಾರ ಬೇಕಾಗುತ್ತದೆ. ಮಾಡಬಲ್ಲಿರಾ…?’ ಎಂದು ನಗುತ್ತ ಅಂದವರು, ‘ಹ್ಞಾಂ, ಅದನ್ನು ನೀವು ಪುಕ್ಕಟೆಯಾಗಿ ಮಾಡಬೇಕಾಗಿಲ್ಲ ರೋಹಿತರೇ. ಪ್ರತಿಫಲವಾಗಿ ನಾವೇನು ಕೊಡಬೇಕೆಂದಿದ್ದೇವೋ ಅದು ಕೂಡಲೇ ನಿಮಗೆ ದಕ್ಕುತ್ತದೆ!’ ಎಂದರು ನಯವಾಗಿ. ಆದರೆ ರೋಹಿತ್ ಒಮ್ಮೆಲೇ ಗೊಂದಲಕ್ಕೆ ಬಿದ್ದು, ‘ನನ್ನಿಂದೆಂಥ ಸಹಕಾರ ಸರ್ ನಿಮಗೆ…?’ ಎಂದು ನಕ್ಕವನು, ‘ಪರ್ವಾಗಿಲ್ಲ, ವಿಷಯ ಏನೆಂದು ಬಿಡಿಸಿ ಹೇಳಿ. ಸಾಧ್ಯವಾದರೆ ಮಾಡುತ್ತೇನೆ!’ ಎಂದ. ‘ಅಯ್ಯೋ, ಅದು ಅಂಥ ದೊಡ್ಡ ಕೆಲಸವೇನಲ್ಲ ರೋಹಿತರೇ. ನಾಡಿದ್ದು ಮಸಣದಗುಡ್ಡೆಯಲ್ಲಿ ಒಂದು ದೊಡ್ಡ ನಾಗಬನವು ನಮ್ಮ ಉಸ್ತುವಾರಿಯಲ್ಲಿಯೇ ಜೀರ್ಣೋದ್ಧಾರಗೊಳ್ಳಲಿದೆ. ಅಂದಿನ ನಮ್ಮ ವಿಶೇಷ ಪೂಜೆಯು ಸಂಪನ್ನಗೊಂಡು ಪೂರ್ಣಾಹುತಿಯಾಗುವ ಸಮಯಕ್ಕೆ ಸರಿಯಾಗಿ ನೀವೊಂದು ಏಳೆಂಟು ಅಥವಾ ಅದಕ್ಕಿಂತಲೂ ಹೆಚ್ಚಿದ್ದರೂ ಪರವಾಗಿಲ್ಲ, ದೊಡ್ಡ ದೊಡ್ಡ ನಾಗರಹಾವುಗಳನ್ನು ತಂದು ಭಕ್ತಾದಿಗಳ ನಡುವೆ ಅವರಿಗೆ ತಿಳಿಯದಂತೆ ಬಿಟ್ಟುಬಿಡಬೇಕು. ಆ ಹಾವುಗಳೆಲ್ಲ ಒಮ್ಮೆಲೇ ಜನರ ನಡುವೆ ನುಗ್ಗಿ ಎಲ್ಲರಿಗೂ ಕಾಣಿಸಿಕೊಳ್ಳಬೇಕು. ಆಗಲೇ ನಮ್ಮ ಜನರಲ್ಲಿ ನಾಗನ ಮೇಲೆ ಭಯಭಕ್ತಿ ಹೆಚ್ಚಾಗಲು ಸಾಧ್ಯ! ಜೊತೆಗೆ ಆ ವಿಷಯ ಕೂಡಲೇ ಪ್ರಚಾರವಾಗಿ ಊರಿನ ಒಂದಷ್ಟು ನಾಸ್ತಿಕರ ಬಾಯಿ ಮುಚ್ಚಿಸುವ ಕೆಲಸವೂ ಆಗುತ್ತದೆ. ಅಲ್ಲದೆ ನಾವು ನೀವು ಕೂಡಿಯೇ ಸಮಾಜದ ಧಾರ್ಮಿಕ ಸ್ವಾಸ್ಥ್ಯವನ್ನು ಕಾಪಾಡಿದಂತಾನೂ ಆಗುತ್ತದೆ. ಆದ್ದರಿಂದ ಈ ವಿಶೇಷ ಕಾರ್ಯವನ್ನು ನೀವು ಕೂಡಾ ಇದೇ ಉದ್ದೇಶದಿಂದ ಮಾಡಬೇಕು ಏನಂತೀರೀ…?’ ಎಂದು ಗುರೂಜಿಯವರು ಬಹಳ ಗಂಭೀರವಾಗಿ ಹೇಳಿದರು.    ಗುರೂಜಿಯವರ ಪ್ರಳಯಾಂತಕ ಯೋಜನೆಯನ್ನು ಕೇಳಿದ ರೋಹಿತ್ ಗೆ ಆಘಾತಯಿತು! ಥೂ! ಈ ಮನುಷ್ಯ ಇಂಥ ವಂಚಕನೇ…? ಹಾಗಾದರೆ ಇಷ್ಟರವರೆಗೆ ಹಿಂದೂಧರ್ಮ, ದೈವ ದೇವರು, ಶಾಸ್ತ್ರ ಸಂಪ್ರದಾಯ ಅಂತೆಲ್ಲ ಸಂಭಾವಿತನಂತೆ ಮಾತಾಡಿದೆಲ್ಲ ಬರೇ ಬೊಗಳೆಯೇ…? ಇವನಂಥವರು ಇರುವವರೆಗೆ ಯಾವ ಧರ್ಮವೂ ಉದ್ಧಾರವಾಗಲು ಸಾಧ್ಯವಿಲ್ಲ. ನಾನಿವನ ಸ್ನೇಹ ಮಾಡಿದ್ದೇ ದೊಡ್ಡ ತಪ್ಪಾಯಿತು. ಈಗಿಂದೀಗಲೇ ಇವನನ್ನು ಇಲ್ಲಿಂದ ಓಡಿಸಿಬಿಡಬೇಕು ಎಂದು ಜಿಗುಪ್ಸೆಯಿಂದ ಅಂದುಕೊಂಡವನು, ‘ಓಹೋ ಇದಾ ಸರ್ ನಿಮ್ಮ ಸಮಾಜ ಸುಧಾರಣೆಯ ಹೊಸ ಉಪಾಯ? ಇದು ಬಹಳ ಮೇಲ್ಮಟ್ಟದ್ದೇ ಬಿಡಿ. ಆಯ್ತು, ಆಯ್ತು. ಈ ಸಹಾಯವನ್ನು ಖಂಡಿತಾ ಮಾಡಬಲ್ಲೆ. ಏಳೆಂಟೇನು ಬೇಕಿದ್ದರೆ ಹತ್ತು, ಹದಿನೈದು ಹಾವುಗಳನ್ನಾದರೂ ತಂದು ನೀವು ಹೇಳಿದಲ್ಲಿ ಕಣ್ಣುಮುಚ್ಚಿ ಬಿಡಬಲ್ಲೆ. ನಾಗಾರಾಧನೆಗೆ ಪ್ರಸಿದ್ಧವಾಗಿರುವ ನಮ್ಮ ಈ ಈಶ್ವರಪುರದಲ್ಲಿ, ನಾಗರಹಾವುಗಳನ್ನು ಕಂಡಕಂಡಲ್ಲಿ ಕೈಮುಗಿದು ಕಾಪಾಡುವ ಮುಗ್ಧ ಭಕ್ತರಿರುವಾಗ ಆ ಹಾವುಗಳಿಗೇನು ಕೊರತೆ ಬಿಡಿ. ಹೌದು ನೀವು ಹೇಳಿದಂತೆ ಈ ನಮ್ಮ ಕೆಲಸದಿಂದ ನಾಗಭಕ್ತರ ಸಂಖ್ಯೆಯೇನೋ ದಿಢೀರ್ ಹೆಚ್ಚಳವಾಗುತ್ತದೆ. ಅದರೊಂದಿಗೆ ನಿಮ್ಮ ಹೆಸರು ಮತ್ತು ಕೀರ್ತಿಪತಾಕೆಯೂ ಎತ್ತರೆತ್ತರಕ್ಕೆ ಹಾರಾಡತೊಡಗುತ್ತದೆ. ಅದೂ ಸಂತೋಷದ ಸಂಗತಿಯೇ! ಆದರೆ ಅದರ ನಡುವೆ ಒಂದೆರಡು ಸಣ್ಣಪುಟ್ಟ ಅನಾಹುತಗಳೂ ನಡೆಯುತ್ತವೆಯಲ್ಲ, ಅದಕ್ಕೆ ಯಾರನ್ನು ಹೊಣೆ ಮಾಡುತ್ತೀರಿ…?’ ಎಂದು ರೋಹಿತ್ ನಗುತ್ತಲೇ ಪ್ರಶ್ನಿಸಿದ. ಅವನ ವ್ಯಂಗ್ಯ ತುಂಬಿದ ಮಾತಿನಿಂದ ಗುರೂಜಿ ತುಸು ಅವಕ್ಕಾದರು. ‘ಅನಾಹುತವೇ… ಅದೆಂಥದು ರೋಹಿತರೇ…?’ ಎಂದರು ಕಳವಳದಿಂದ. ‘ಹಾಗೆ ಕೇಳಿ ಮತ್ತೇ…! ನಿಮ್ಮ ಪೂಜಾಕಾರ್ಯ ಮುಗಿದು ಮಂಗಳಾರತಿಯ ಹೊತ್ತಿಗೆ ನಾನು ಬಿಡುವ ಸರ್ಪಗಳು ಭಯದಿಂದ ಕಂಗೆಟ್ಟು ಓಡುವ ಧಾವಂತದಲ್ಲಿ ಜನರ ನಡುವೆಯೇ ನುಗ್ಗುತ್ತವಲ್ಲವೇ? ಆವಾಗ ಅವುಗಳು ಅವರ ಕಾಲ್ತುಳಿತಕ್ಕೂ ಸಿಲುಕಿ ತೀವ್ರ ಗಾಯಗೊಳ್ಳುತ್ತವೆ. ಆ ನೋವಿನಲ್ಲಿ ಅವು ಸಿಕ್ಕಸಿಕ್ಕವರನ್ನು ಕಚ್ಚುತ್ತಲೂ ತೊಡಗುತ್ತವೆಯಲ್ಲ! ಆದರೆ ಅದರಿಂದ ಹೆಚ್ಚೇನಿಲ್ಲ, ಕೆಲವು ವಯಸ್ಸಾದ ಹಿರಿಯ ನಾಗಭಕ್ತರು ಕೂಡಲೇ ನಾಗದೇವನ ಪಾದ ಸೇರಿ ಪುನೀತರಾಗುವುದು ಖಚಿತ! ಹ್ಞಾಂ, ಅದೇನೂ ದೊಡ್ಡ ವಿಚಾರವಲ್ಲ ಬಿಡಿ. ಅದಕ್ಕಿಂತ ಹೆಚ್ಚಿನ ಭಕ್ತರು ಇಹಲೋಕ ತ್ಯಜಿಸಿದಂತೆ ಮಾಡಲು ನಾವು ಮೊದಲೇ ನಾಲ್ಕೈದು ಆಂಬುಲೆನ್ಸ್ಗಳನ್ನು ತರಿಸಿಕೊಂಡು ದೂರದ ಮರೆಯಲ್ಲೆಲ್ಲಾದರೂ ನಿಲ್ಲಿಸಿಕೊಂಡರಾಯ್ತು!’ ಎಂದು ವಿಷಾದದಿಂದ ನಗುತ್ತ ಅಂದ ರೋಹಿತ್ ನ ಮಾತಿಗೆ ಗುರೂಜಿ ಝಿಲ್ಲನೆ ಬೆವರಿಬಿಟ್ಟರು. ಬಳಿಕ, ‘ಓಹೋ ಹೌದಲ್ಲವಾ…!’ ಎಂದು ಉದ್ಗರಿಸಿದರು. ‘ಅಷ್ಟೇ ಅಲ್ಲ ಸರ್, ಆ ನಂತರ ಇನ್ನೊಂದು ಮಾರಿಹಬ್ಬವೂ ನಡೆಯುತ್ತದೆ ನೋಡಿ. ಅದರ ಬಗ್ಗೆಯೂ ಸ್ವಲ್ಪ ವಿವರಿಸುತ್ತೇನೆ ಕೇಳಿ. ನಾಡಿನ ಪ್ರಸಿದ್ಧ ಧಾರ್ಮಿಕ ಪ್ರಮುಖರಾದ ಶ್ರೀ ಏಕನಾಥ ಗುರೂಜಿಯವರ ವಿಶೇಷವಾದ ಯಾಗ, ಯಜ್ಞಾದಿಗಳಿಂದ ನಾಗದೇವನು ಸಂಪೂರ್ಣ ಸಂತುಷ್ಟನಾಗಿದ್ದಾನೆ. ಆದರೂ ಅವನಿಗೆ ತಾನೇ ಭೂಮಿಗಿಳಿದು ಬಂದು ಗುರೂಜಿಯವರನ್ನೂ ತನ್ನ ಭಕ್ತಾದಿಗಳನ್ನೂ ಆಶೀರ್ವದಿಸಲು ಸಮಯದ ಕೊರತೆಯಿಂದಾಗಿ ಅವನು ತನ್ನ ಗಣಗಳನ್ನು ಕಳುಹಿಸಿಕೊಟ್ಟಿದ್ದಾನೆ. ಆ ಗಣಗಳೆಲ್ಲ ಗುರೂಜಿಯವರ ಪೂಜಾಕಾರ್ಯದ ಅಂತ್ಯದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ತಮ್ಮ ಒಡೆಯನ ಭಕ್ತಾದಿಗಳನ್ನು ಕಂಡಕಂಡಲ್ಲಿ ಹಿಡಿದ್ಹಿಡಿದು ನೀಡಿದ ವಿಷ ಪ್ರಸಾದದ ಮಹಿಮೆಗೆ ಭಕ್ತಾದಿಗಳಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಮತ್ತು ಅವರ ಮನೆಮಂದಿಯೆಲ್ಲ, ‘ಓ ನಾಗದೇವನೇ… ನಿನ್ನನ್ನು ಪೂಜಿಸಲು ಬಂದ ನಮ್ಮಂಥ ಬಡಪಾಯಿಗಳಿಗೆ ನೀನು ನೀಡುವ ಪ್ರತಿಫಲ ಇದೇನಾ…? ದಯವಿಟ್ಟು ನಮ್ಮವರನ್ನು ಕಾಪಾಡು ದೇವಾ…!’ ಎಂದು ಬೊಬ್ಬಿಡುವ ಸುದ್ದಿಯು ನೀವು ಹೇಳಿದ ಹಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರವಾಗುತ್ತದೆ. ಆಗ ಆ ಅಪರೂಪದ ವಿಚಾರವು ಪೊಲೀಸ್ ಇಲಾಖೆಗೂ ತಲುಪದಿರುತ್ತದೆಯೇ? ‘ನಾಗನ ಪೂಜೆಯ ಸಮಯದಲ್ಲಿಯೇ ಅಷ್ಟೊಂದು ಹಾವುಗಳು ಒಟ್ಟಿಗೆ ಕಾಣಿಸಿಕೊಳ್ಳುವುದೆಂದರೇನು? ಅದೂ ಕಿಕ್ಕಿರಿದ ಜನರ ಸಂದಣಿಯ ನಡುವೆಯೇ ಹಾವುಗಳು ನುಗ್ಗಿವೆ ಎಂದರೆ ಯಾರಾದರೂ ನಂಬುವ ವಿಚಾರವೇ..!?’ ಎಂದು ಪೊಲೀಸ್ ಅಧಿಕಾರಿಗಳೂ ಯೋಚಿಸುತ್ತಾರಲ್ಲವೇ. ಆಗ ಅವರಲ್ಲೂ ಆ ಕುರಿತು ಸಣ್ಣದೊಂದು ಅನುಮಾನ ಹುಟ್ಟದಿರುತ್ತದೆಯೇ? ಆಮೇಲೆ ಅವರು ಸುಮ್ಮನಿರುತ್ತಾರೆಯೇ? ಏನಿದರ ಒಳಮರ್ಮ? ಎಂದುಕೊಂಡು ಸತ್ಯಶೋಧನೆಗೆ ಹೊರಟೇ ಬಿಡುತ್ತಾರೆ. ಆಗ ಅವರಿಗೆ ಮೊದಲು ನೆನಪಾಗುವುದು ಯಾರು ಸರ್…? ನೀವು ಈಗಾಗಲೇ ಹೇಳಿದಂತೆ ಹಾವುಗಳ ವಿಷಯದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಾನೇ ಅಲ್ಲವೇ! ಅಷ್ಟಲ್ಲದೇ ಈ ಪ್ರಕರಣವು ವನ್ಯಜೀವಿ ಕಾಯ್ದೆಯಡಿಯಲ್ಲೂ ಬರುವುದರಿಂದ ಪೊಲೀಸ್ ಇಲಾಖೆಯವರು ಅರಣ್ಯಾಧಿಕಾರಿಗಳನ್ನೂ ಜೊತೆಗೂಡಿಸಿಕೊಂಡೇ ನನ್ನ ಮನೆಗೆ ನುಗ್ಗುತ್ತಾರೆ. ಆಮೇಲೇನಾಗುತ್ತದೆಯೆಂದರೆ, ಆವತ್ತು ನೀವು ಬಂದು ನನ್ನನ್ನು ಎಷ್ಟೊಂದು ಗೌರವಾದರದಿಂದ ಸನ್ಮಾನಿಸಿ ಹಣದ ಸಹಾಯವನ್ನೂ ನೀಡಿದ್ದಿರೋ ಅದೇ ಮಾದರಿಯಲ್ಲಿ ಅಲ್ಲದಿದ್ದರೂ ಎರಡೂ ಇಲಾಖೆಯವರು ಕೂಡಿ ನನ್ನ ನೆರೆಕರೆಯವರೆಲ್ಲ ಸಮ್ಮುಖದಲ್ಲಿ ತಮ್ಮದೇ ಆದ ರೀತಿಯಿಂದ ನನ್ನನ್ನು ಸತ್ಕರಿಸುತ್ತಾರೆ. ಆಗ ನನ್ನ ಈ ಘನಕಾರ್ಯದ ರೂವಾರಿಯಾದಂಥ ತಮ್ಮ ನಾಮಧೇಯವನ್ನು ನಾನವರಿಗೆ ತಿಳಿಸದೇ ಇರಲು ಸಾಧ್ಯವೇ? ಆದರೆ ಅವರು ಅಷ್ಟುಬೇಗ ನಿಮ್ಮಂಥ ದೊಡ್ಡ ಮನುಷ್ಯರ ಹೆಸರು ಹಾಳು ಮಾಡಲಿಚ್ಛುಸುತ್ತಾರೆಯೇ ಖಂಡಿತಾ ಇಲ್ಲ! ಹಾಗಾಗಿ ಅದಕ್ಕೆಲ್ಲ ಅವರು ಸಾಕ್ಷಿ, ಪುರಾವೆಗಳನ್ನೂ ಕೇಳುತ್ತಾರೆ. ಆವಾಗ ನಾನೇನು ಕೊಡಬಲ್ಲೆ ಎಂದು ನೀವೂ ಯೋಚಿಸುತ್ತಿರಬಹುದಲ್ಲವೇ? ನಾನದರ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇನೆ ಸರ್. ಏನೆಂದು ಕೇಳುತ್ತೀರಾ…? ಇಷ್ಟರವರೆಗೆ ತಾವು ನನ್ನೊಂದಿಗೆ ಮಾತಾಡುತ್ತಿದ್ದ ವಿಚಾರವನ್ನೆಲ್ಲ ಈ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ. ಹೀಗಿರುವಾಗ ಇದನ್ನು ಅವರಿಗೆ ಒದಗಿಸದೆ ಬೇರೆ ವಿಧಿ ಉಂಟಾ ಹೇಳಿ? ಆಗ ನಮ್ಮಿಬ್ಬರ ಮೇಲೂ ಜಂಟಿ ಕೇಸುಗಳು ದಾಖಲಾಗುತ್ತವೆ. ಅವು ಕೋರ್ಟು ಮೆಟ್ಟಲೇರಿ ನಮ್ಮ ಆರೋಪವೂ ಸಾಬೀತಾಗುತ್ತದೆ ಎಂದಿಟ್ಟುಕೊಳ್ಳಿ. ಆಮೇಲೆ ನಾವಿಬ್ಬರೂ ಬಳ್ಳಾರಿ ಜೈಲಿನಲ್ಲಿ ಒಟ್ಟಿಗೆ ಕುಳಿತುಕೊಂಡು ಒಂದು ಹತ್ತು, ಹದಿನಾಲ್ಕು ವರ್ಷಗಳ ಕಾಲ ಜೀವನದ ಸಕಲ ತಾಪತ್ರಯಗಳನ್ನೂ ಮರೆತು ರಾಶಿ ರಾಶಿ ತೆಂಗಿನ ಸಿಪ್ಪೆಗಳನ್ನು ಬಡಿಬಡಿದು ಹದಗೊಳಿಸಿಕೊಡುವಂಥ ಗುಡಿಕೈಗಾರಿಕೆಯಲ್ಲಿ ತೊಡಗಿಕೊಂಡು ನೆಮ್ಮದಿಯಿಂದ ಬದುಕಬಹುದು ಏನಂತೀರಿ…!?’ ಎಂದು ತಿರಸ್ಕಾರದಿಂದ ನಗುತ್ತ ಹೇಳಿದ.    ರೋಹಿತ್ ನ ಅಷ್ಟೂ ಮಾತುಗಳನ್ನು ಚಡಪಡಿಸುತ್ತ ಕೇಳಿಸಿಕೊಂಡ ಗುರೂಜಿಯವರಿಗೆ ಕೊನೆಯಲ್ಲಿ ಕೊಂಬರ್ ಚೇಳು ಕುಟುಕಿದಷ್ಟು ವೇದನೆಯಾಯಿತು. ಜೊತೆಗೆ ಅವಮಾನದಿಂದಲೂ ಕುದಿಯುತ್ತ, ‘ಓಹೋ ರೋಹಿತರೇ, ನಮ್ಮ ಆ ಒಂದು ಸಣ್ಣ ಕಾರ್ಯದಿಂದ ಇಷ್ಟೆಲ್ಲ ತೊಂದರೆಗಳಾಗುತ್ತವಾ…? ಇದು ನಮಗೆ ಹೊಳೆದೇ ಇರಲಿಲ್ಲ ನೋಡಿ! ಹಾಗಾದರೆ ಖಂಡಿತಾ ಆ ಕೆಲಸವೇ ಬೇಡ ಬಿಡಿ’ ಎಂದು ಆತಂಕದಿಂದ ಅಂದವರು, ‘ಓ ನಾಗದೇವನೇ…! ನಮ್ಮ ತಪ್ಪನ್ನು ಕ್ಷಮಿಸಿಬಿಡಪ್ಪಾ…!’ ಎಂದು ಬಹಳ ನೊಂದವರಂತೆ ಪ್ರಾರ್ಥಿಸಿಕೊಂಡವರು ಬಳಿಕ, ‘ಏನೋ ನಮ್ಮ ಹಿರಿಯರ ನಂಬಿಕೆ ಆಚರಣೆಗಳಿಗೂ ಮತ್ತು ಈಗಿನ ಜನರಿಗೂ ಒಂದಿಷ್ಟು ಒಳ್ಳೆಯದಾಗಲಿ ಅಂತಲೇ ನಾವು ಹಾಗೆಲ್ಲ ಯೋಚಿಸಿದೆವೆಯೇ ಹೊರತು ಬೇರೆ ಯಾವ ದುರುದ್ದೇಶವೂ ನಮ್ಮಲ್ಲಿಲ್ಲ ರೋಹಿತರೇ. ಆದರೂ ನಿಮಗೆ ನಮ್ಮಿಂದ ನೋವಾಗಿದೆ. ಅದಕ್ಕಾಗಿ ದಯವಿಟ್ಟು ಕ್ಷಮಿಸಬೇಕು. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡುವ!’ ಎಂದು ಚಿಂತೆಯಿಂದ ಹೇಳಿದವರು, ‘ನಮಸ್ಕಾರ ನಾವಿನ್ನು ಹೊರಡುತ್ತೇವೆ. ಆದರೂ ನಮ್ಮ ಸ್ನೇಹ ಇನ್ನು ಮುಂದೆಯೂ ಹೀಗೆಯೇ ಇರಬೇಕೆಂದು ನಮ್ಮಾಸೆ. ಮುಂದೆ ನಮ್ಮಿಂದ ಯಾವ ಸಹಾಯ ಬೇಕಿದ್ದರೂ ಸಂಕೋಚಪಡದೆ ತಿಳಿಸುತ್ತಿರಿ. ನಾವು ಸದಾ ನಿಮ್ಮೊಂದಿಗಿದ್ದೇವೆ!’ ಎಂದು ಹೇಳಿ ಒತ್ತಾಯಪೂರ್ವಕ ನಕ್ಕು ಹೊರಡಲನುವಾದರು. ಅಷ್ಟರಲ್ಲಿ ರೋಹಿತನಿಗೇನೋ ನೆನಪಾಯಿತು. ‘ಹ್ಞಾಂ, ಸ್ವಲ್ಪ ಇರಿ ಸರ್. ಈಗ ಬಂದೆ…’ ಎಂದವನು ಒಳಗೆ ಹೋಗಿ ಮೂರು ಸಾವಿರ ರೂಪಾಯಿಗಳನ್ನು ತಂದು ಅವರ ಕೈಗಿತ್ತು, ‘ಇದು ನಿಮ್ಮ ಹಣ. ಇದರ ಅವಶ್ಯಕತೆ ನನಗೆ ಬೀಳಲಿಲ್ಲ!’ ಎಂದು ಅವರಿಗೆ ಕೊಟ್ಟು, ‘ನಮಸ್ಕಾರ ಹೋಗಿಬನ್ನಿ…!’ ಎಂದು ಕೈಮುಗಿದ. ಅದನ್ನು ತೆಗೆದುಕೊಂಡ ಗುರೂಜಿಯವರು ಅವನನ್ನೊಮ್ಮೆ ಬೇಸರದಿಂದ ದಿಟ್ಟಿಸಿ ಸರಸರನೇ ಹೊರಟು ಹೋದರು. ಆಗ ರೋಹಿತನೂ ವಿಷಾದದಿಂದ ಒಳಗೆ ನಡೆದ.                                                                               * ರೋಹಿತ್ನ ಸಹಾಯದಿಂದ ಮಸಣದಗುಡ್ಡೆಯ ಜೀರ್ಣೋದ್ಧಾರವನ್ನು ಊರ ಸಮಸ್ತರು ವಿಸ್ಮಯಪಡುವ ರೀತಿಯಿಂದ ಮಾಡಬೇಕೆಂದುಕೊಂಡಿದ್ದ ಗುರೂಜಿಯವರ ಉಪಾಯ ವ್ಯರ್ಥವಾಯಿತು. ಆದರೂ ಅವರು ಧೃತಿಗೆಡಲಿಲ್ಲ. ಅದಕ್ಕೆ ಬದಲಾಗಿ ಅವರ ಯೋಚನೆ ಹೀಗೆ ಹರಿಯಿತು: ಯಾವುದೇ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಮೇಲೇರಲು ಹೊರಟನೆಂದರೆ ಅವನ ವಿರುದ್ಧ ಅನೇಕ ಶತ್ರುಗಳು ಸೃಷ್ಟಿಯಾಗಿ ಅವನ ಕಾಲೆಳೆಯಲು ಪ್ರಯತ್ನಿಸುವುದು ಸಾಮಾನ್ಯ ಸಂಗತಿ. ಆದ್ದರಿಂದ ರೋಹಿತನೂ ಒಂದು ವೇಳೆ ತಮ್ಮ ಬಗ್ಗೆ ಅಪಪ್ರಚಾರ ಮಾಡಲು ಹೊರಟನೆಂದರೆ ಅವನನ್ನೂ ತಮ್ಮ ಶತ್ರುಗಳ ಪಟ್ಟಿಯಲ್ಲಿ ಸೇರಿಸಿ ತಾವೂ ಅವನ ತೇಜೋವಧೆಯನ್ನು ಮಾಡತೊಡಗಿದರಾಯ್ತು! ಎಂದು ನಿರ್ಧರಿಸಿ ಧೈರ್ಯ ತಂದುಕೊಂಡರು. ಇದಾದ ಮುಂದಿನ ತಿಂಗಳಲ್ಲಿ ಮಸಣದಗುಡ್ಡೆಯ ನಾಗಬನದ ನೂರಾರು ವರ್ಷಗಳಷ್ಟು ಪುರಾತನವಾದ ಹೆಮ್ಮರಗಳನ್ನು ನಿಷ್ಕರುಣೆಯಿಂದ ಕಡಿದುರುಳಿಸಿ ಆ ಜಾಗವನ್ನು ಸಮತಟ್ಟುಗೊಳಿಸಿ ಭವ್ಯವಾದ ನಾಗಭವನವನ್ನು ನಿರ್ಮಿಸಿ ಅದ್ಧೂರಿಯಿಂದ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿ ಮುಗಿಸಿದವರು ಆ ನಾಗಕ್ಷೇತ್ರಕ್ಕೂ ತಾವೇ ಅರ್ಚಕರು ಮತ್ತು ಮೇಲ್ವಿಚಾರಕರೂ ಆಗಿ ಅಧಿಕಾರವಹಿಸಿಕೊಂಡರು. ಪ್ರವೀಣ ಆ ಕ್ಷೇತ್ರದ ಕಜಾಂಚಿಯಾಗಿ ಮತ್ತು ಶಂಕರ ಕಾರ್ಯದರ್ಶಿಯಾಗಿ ಧಾರ್ಮಿಕ ಹುದ್ದೆಗಳನ್ನಲಂಕರಿಸಿದರು. ಆ ನಾಗಭವನವು ಪೇಟೆಗೆ ಸಮೀಪವಿದ್ದುದರಿಂದಲೂ ಮತ್ತದರ ಆಸುಪಾಸು ಸಾವಿರಾರು ನಿರಾಶ್ರಿತರೂ ಮಧ್ಯಮವರ್ಗದವರೂ ಹಾಗೂ ಬಹಳಷ್ಟು ಶ್ರೀಮಂತರೂ ವಾಸಿಸುತ್ತಿದ್ದುದರಿಂದಲೂ ಗುರೂಜಿಯವರು ಆ ನಾಗಮಂದಿರದಲ್ಲಿ ಪ್ರತಿನಿತ್ಯವೂ ಪೂಜಾ ಕೈಂಕರ್ಯಗಳನ್ನು ನಡೆಸತೊಡಗಿದರು. ಆದ್ದರಿಂದ ಈಗ ಅವರ ಕೈಯಲ್ಲಿ ಎರಡು ಬೃಹತ್ ನಾಗಬನಗಳ ಅಧಿಕಾರ ಮತ್ತು ಜವಾಬ್ದಾರಿ ಇತ್ತು. ಅದರಿಂದ ಅವರ ವರಮಾನವೂ ವೃದ್ಧಿಸತೊಡಗಿತು.  ಆ ಬಗ್ಗೆಯೇ ಸಂತೋಷ, ನೆಮ್ಮದಿಯಿಂದ ತೇಲಾಡಿದ ಗುರೂಜಿಯವರು ಮಸಣದಗುಡ್ಡೆಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪ್ರವೀಣನನ್ನೂ

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-34                                ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ ಜೀವವರ್ಗಗಳಿಂದ ಪ್ರಕೃತಿಗೂ ಮತ್ತು ಮುಖ್ಯವಾಗಿ ಮಾನವ ಪರಿಸರಕ್ಕೂ ದೊರಕುತ್ತಿರುವಂಥ ವಿವಿಧ ರೂಪದ ಉಪಕಾರಗಳು ಹಾಗೂ ನಿಸರ್ಗದಲ್ಲಿ ಆ ಜೀವರಾಶಿಗಳ ಪಾತ್ರ ಮತ್ತು ಮಹತ್ವಗಳು ಯಾವ ಬಗೆಯವು ಎಂಬಂಥ ಹತ್ತು ಹಲವು ವಿಚಾರಗಳ ಕುರಿತು ಅನೇಕ ವರ್ಷಗಳಿಂದ ಅಧ್ಯಯನ ಮಾಡುತ್ತ ಬಂದವನು. ಜೊತೆಗೆ ಒಂದಷ್ಟು ಜನರ ಪ್ರಕೃತಿ ವಿರೋಧಿ ಚಟುವಟಿಕೆ ಮತ್ತು ಜೀವನಕ್ರಮಗಳಿಂದ ಆಗಾಗ ಘಾಸಿಗೊಳ್ಳುವ ವಿವಿಧ ಜಾತಿಯ ಹಾವುಗಳನ್ನು ತಂದು ಶುಶ್ರೂಷೆ ನೀಡುವ ಸೇವೆಯಲ್ಲೂ ಸಾರ್ಥಕತೆಯನ್ನು ಕಾಣುತ್ತಿರುವವನು. ಅಷ್ಟಲ್ಲದೇ ಹಾವುಗಳು ಮತ್ತವುಗಳ ಮೇಲಿನ ಜನರ ನಂಬಿಕೆಗಳು ಹಾಗೂ ವಿಶೇಷತೆಗಳ ಕುರಿತು ಪತ್ರಿಕೆಗಳಿಗೂ ನಿರಂತರ ಬರೆಯುತ್ತ ಜನಜಾಗ್ರತಿ ಮೂಡಿಸುತ್ತ ಬರುತ್ತಿರುವವನು.ಹೀಗಾಗಿ ಅವನಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಮತ್ತು ಜನರ ಪ್ರೀತಿ, ಬೆಂಬಲಗಳೂ ಸಹಜವಾಗಿಯೇ ಒಲಿದು ಬಂದಿದ್ದವು.ಗುರೂಜಿಯವರಿಗೆ ರೋಹಿತ್‍ನ ಈ ಎಲ್ಲ ಕಾರ್ಯ ಚಟುವಟಿಕೆಗಳ ಕುರಿತು ಚೆನ್ನಾಗಿ ತಿಳಿದಿತ್ತು.ಹಾಗಾಗಿ ಅವರಿಂದು ಅವನನ್ನು ಪರಿಚಯಿಸಿಕೊಳ್ಳಲಿಚ್ಛಿಸಿ ಶಂಕರನಿಂದ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು.ಅತ್ತಲಿಂದ ರೋಹಿತನೂ ಕರೆ ಸ್ವೀಕರಿಸಿದ. ಅವನಿಗೂ ಗುರೂಜಿಯವರ ಕುರಿತು ತಿಳಿದಿತ್ತು.ಹಾಗಾಗಿ ಅವರೊಡನೆ ಮಾತಾಡುವ ಆಸಕ್ತಿ ಉಂಟಾಗದಿದ್ದರೂ ಶಿಷ್ಟಾಚಾರಕ್ಕೆ, ‘ನಮಸ್ಕಾರ ಸರ್ ಹೇಳಿ…?’ ಎಂದ. ‘ಏನಿಲ್ಲ ರೋಹಿತರೇ, ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇವೆ ಮತ್ತು ಓದಿದ್ದೇವೆ.ಪ್ರಕೃತಿಗೂ ನಾಗಸಂತತಿಗೂ ನೀವು ಮಾಡುತ್ತಿರುವ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು.ಆ ಸುಬ್ರಹ್ಮಣ್ಯ ಮತ್ತು ಆದಿಶೇಷರ ಆಶೀರ್ವಾದಗಳು ಸದಾ ನಿಮ್ಮ ಮೇಲಿರುತ್ತವೆ.ಹಾಗಾಗಿಯೇ ನೀವಿಂದು ನಮ್ಮ ರಾಜ್ಯದ್ಯಂತ ಪ್ರಸಿದ್ಧಿ ಪಡೆದಿದ್ದೀರಿ…!’ ಎಂದು ಹೊಗಳಿದರು. ರೋಹಿತ್‍ಗೆ ಮುಜುಗರವಾಯಿತು.‘ಹಾಗೇನಿಲ್ಲ ಸರ್.ನಾನೂ ಎಲ್ಲರಂತೆಯೇ ಬದುಕುತ್ತಿರುವವನು.ಆದರೆ ಜೀವನವೆಂದ ಮೇಲೆ ಅದಕ್ಕೊಂದು ಚಟುವಟಿಕೆ ಮತ್ತು ಅರ್ಥವಿರಬೇಕೆಂದು ಅನ್ನಿಸಿದ್ದರಿಂದ ಈ ಹವ್ಯಾಸಕ್ಕೆ ಅಂಟಿಕೊಂಡೆ.ನೀವು ಹೇಳಿದಂತೆ ನನ್ನ ಕಾಯಕಕ್ಕೆ ದೇವರ ಆಶೀರ್ವಾದವೂ ದೊರಕಿರುವುದು ನನ್ನ ಪುಣ್ಯ. ಹ್ಞಾಂ! ಹಾಗಂತ ನನ್ನದೇನೂ ನಿಸ್ವಾರ್ಥ ಸೇವೆಯಲ್ಲ ಸರ್.ನನ್ನ ಕುಟುಂಬ ನಿರ್ವಹಣೆಗೆ ಅದೆಷ್ಟು ಬೇಕೋ ಅಷ್ಟನ್ನು ನನ್ನ ಹವ್ಯಾಸವೇ ಒದಗಿಸುತ್ತಿದೆ.ನಿಮ್ಮ ಹಾರೈಕೆಗೆ ಥ್ಯಾಂಕ್ಸ್!’ ಎಂದ. ‘ಅರೆರೇ, ಹಾಗಲ್ಲ ರೋಹಿತರೇ…! ನಿಮ್ಮ ಹವ್ಯಾಸವನ್ನು ನೀವು ಅಷ್ಟೊಂದು ಹಗುರವಾಗಿ ಭಾವಿಸಬೇಡಿ ಮತ್ತು ನಿಮ್ಮ ಕಾರ್ಯಕ್ಷೇತ್ರ ನಿಮ್ಮದೇ ಆಯ್ಕೆ ಎಂದು ಕೂಡಾ ತಿಳಿಯಬೇಡಿ. ಅದೆಲ್ಲ ನೀವು ನಿಮ್ಮ ಪೂರ್ವಜನ್ಮದಲ್ಲಿ ಮಾಡಿದ ಸತ್ಕಾರ್ಯದ ಫಲವೇ ಸರಿ! ಆದ್ದರಿಂದಲೇ ನಿಮ್ಮ ಸೇವೆಯನ್ನು ಎಲ್ಲರೂ ಹೊಗಳುವಂತಾಗಿರುವುದು! ಅಲ್ಲದೇ ಇನ್ನೊಂದು ಮಾತನ್ನೂ ಹೇಳುತ್ತೇವೆ ಕೇಳಿ. ಹಾವು ಹಿಡಿಯುವವರು ಬೇಕಾದಷ್ಟು ಜನ ಸಿಗುತ್ತಾರೆ ರೋಹಿತರೇ! ಆದರೆ ನಿಮ್ಮಂತೆ ಆ ಜೀವಿಗಳ ಮೇಲೆ ನಿಜವಾದ ಪೀತಿ ಮತ್ತು ಕಾಳಜಿಯಿಟ್ಟುಕೊಂಡು ಅವುಗಳೊಂದಿಗೇ ಬದುಕುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಭಾರಿ ಧೈರ್ಯವೂ ಸಾಹಸವೂ ಬೇಕಾಗುತ್ತದೆ. ಅದೆಲ್ಲ ನಿಮ್ಮಲ್ಲಿದೆ.ಹಾವುಗಳ ಕುರಿತು ನೀವು ಜನರಲ್ಲಿರುವ ಅಜ್ಞಾನವನ್ನು ನಿವಾರಿಸುವಂಥ ಉಪನ್ಯಾಸಗಳನ್ನೂ ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ.ಹಾಗಾಗಿಯೇ ಇವತ್ತು ನಿಮ್ಮೊಂದಿಗೆ ಮಾತಾಡಲು ನಮಗೆ ಮನಸ್ಸಾದುದು.ನಾವು ನಿಮ್ಮನ್ನು ಹೊಗಳಿದೆವು ಅಂತ ದಯವಿಟ್ಟು ಭಾವಿಸಬೇಡಿ!’ ಎಂದು ಗುರೂಜಿಯವರು ಅವನ ಮನಸ್ಸಿಗೆ ನಾಟುವಂತೆಯೂ ಮತ್ತು ತಮ್ಮ ಬಗ್ಗೆ ಅವನಲ್ಲಿ ಸದಾಭಿಪ್ರಾಯ ಮೂಡುವಂತೆಯೂ ಮಾತಾಡಿದರು. ಆದರೆ ಅವನ ಹವ್ಯಾಸ ಹಾಗೂ ಆ ಕುರಿತು ಅವನ ಜ್ಞಾನವನ್ನು ತಿಳಿದಿದ್ದ ಊರಿನ ಬಹುತೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನು ಇದೇ ರೀತಿ ಪ್ರಶಂಸಿಸುತ್ತ ಬರುತ್ತಿದ್ದುದರಿಂದ ಇಂದು ಗುರೂಜಿಯವರ ಮಾತಿನಿಂದ ಅವನಿಗೆ ಖುಷಿಯೊಂದಿಗೆ ಅತೀವ ಸಂಕೋಚವೂ ಮೂಡಿತು. ‘ಎಲ್ಲಾ ತಮ್ಮಂಥವರ ಆಶೀರ್ವಾದ ಸರ್…!’ ಎಂದಷ್ಟೇ ಹೇಳಿ ಸುಮ್ಮನಾದ. ‘ನಮ್ಮ ಆಶೀರ್ವಾದ ಮತ್ತು ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುತ್ತವೆ ರೋಹಿತರೇ.ಯಾಕೆಂದರೆ ನಾವು ಕೂಡಾ ನಿಮ್ಮ ಹಾಗೆಯೇ ಬೇರೊಂದು ರೀತಿಯಲ್ಲಿ ನಾಗನ ಸೇವೆ ಮಾಡುತ್ತ ಬರುತ್ತಿರುವವರು.ಆ ಸೇವೆಯಲ್ಲಿ ಸಿಗುವ ಒಂದು ಸಣ್ಣ ಮೊತ್ತವನ್ನು ನಿಮ್ಮಂಥವರ ಸತ್ಕಾರ್ಯಕ್ಕೂ ವಿನಿಯೋಗಿಸಬೇಕೆಂಬುದು ನಮ್ಮ ಬಹಳ ದಿನದ ಆಸೆಯಾಗಿತ್ತು.ಹಾಗಾಗಿ ನಿಮ್ಮನ್ನೊಮ್ಮೆ ಭೇಟಿಯಾಗಬೇಕು.ಅದಕ್ಕೆ ಯಾವಾಗ ಬರಬಹುದು ನಾವು…?’ ಎಂದರು ಆತ್ಮೀಯವಾಗಿ.ಆದರೆ ಅಷ್ಟು ಕೇಳಿದ ರೋಹಿತ್‍ನಿಗೆ ಪೇಚಾಟಕ್ಕಿಟ್ಟುಕೊಂಡಿತು. ಆದರೂ ಸಂಭಾಳಿಸಿಕೊಂಡವನು, ‘ಅಯ್ಯೋ ಸರ್ ತಾವು ಯಾವತ್ತು ಬೇಕಿದ್ದರೂ ಬರಬಹುದು.ಆದರೆ ನನಗೀಗ ಹಣದ ಅವಶ್ಯಕತೆಯಿಲ್ಲ. ಆ ವಿಷಯದಲ್ಲಿ ದಯವಿಟ್ಟು ಕ್ಷಮಿಸಬೇಕು!’ ಎಂದು ನಯವಾಗಿ ನಿರಾಕರಿಸಿದ. ಅದರಿಂದ ಗುರೂಜಿ ತುಸು ನಿರಾಶರಾದರು.ಆದರೂ ಪ್ರಯತ್ನ ಬಿಡದೆ, ‘ಸರಿ ರೋಹಿತರೇ, ನೀವು ಬಹಳ ಸ್ವಾಭಿಮಾನಿ ಅಂಥ ತಿಳಿಯುತ್ತದೆ.ಹಾಗಾಗಿಯೂ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಲು ಬಯಸುತ್ತೇವೆ.ನಾಳೆ ಬಂದರೆ ಹೇಗೆ…?’ ಎಂದು ಅಮಾಯಕರಂತೆ ಪ್ರಶ್ನಿಸಿದರು. ‘ಖಂಡಿತವಾಗಿಯೂ ಬನ್ನಿ ಸರ್..!’ ಎಂದ ರೋಹಿತ್. ಗುರೂಜಿಯವರು ಮರುದಿನ ಮುಂಜಾನೆ ರೋಹಿತ್‍ಗೆ ಕರೆ ಮಾಡಿ ತಾವು ಹೊರಟಿರುವುದನ್ನು ತಿಳಿಸಿದರು.ಯಾವುದಕ್ಕೂ ಘನತೆಗಿರಲಿ ಎಂದುಕೊಂಡು ಒಬ್ಬ ಸಹಾಯಕನನ್ನೂ ಕರೆದುಕೊಂಡು ದೊಡ್ಡ ಟ್ಯಾಕ್ಸಿಯೊಂದರಲ್ಲಿ ರೋಹಿತ್‍ನ ಮನೆಗೆ ಹೋದರು. ಗುರೂಜಿಯವರ ವೇಷ ಭೂಷಣವನ್ನೂ, ಮತ್ತವರ ಎದೆಯ ಮೇಲೆ ತೂಗಾಡುತ್ತಿದ್ದ ವಿವಿಧ ದೇವತಾ ಮೂರ್ತಿಗಳಿದ್ದ ಅನೇಕ ಮಾಲೆಗಳನ್ನೂ ಕಂಡ ರೋಹಿತ್ ಕಸಿವಿಸಿಯಾಗಿಬಿಟ್ಟ. ಆದರೂ ತನ್ನ ಪುಟ್ಟ ಮನೆಗೆ ಅವರನ್ನು ಆದರದಿಂದ ಸ್ವಾಗತಿಸಿದ. ಅಂಗಳದಲ್ಲಿಯೇ ಕುರ್ಚಿಗಳನ್ನು ಹಾಕಿ ಅವರನ್ನು ಕುಳ್ಳಿರಿಸಿ ಕುಶಲೋಪರಿ ವಿಚಾರಿಸಿದ. ಗುರೂಜಿಯವರು ಸರಳ ಸಜ್ಜನಿಕೆಯ ಮೂರ್ತಿಯಂತೆ ಅವನೆದುರು ಕುಳಿತು ಮಾತಿಗಿಳಿದರು. ಅವನ ಸಾಧನೆ ಮತ್ತು ಪರಿಶ್ರಮವನ್ನು ಮರಳಿ ಪದೇಪದೇ ಹೊಗಳುತ್ತ ಒಲಿಸಿಕೊಳ್ಳಲು ಪ್ರಯತ್ನಿಸಿದರು.ಅದರಿಂದ ಅವನಿಗೂ ತಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಿದಂತೆ ಅವರಿಗನ್ನಿಸಿತು.ಹಾಗಾಗಿ ಸುಮಾರು ಹೊತ್ತಿನ ಮಾತುಕತೆಯ ನಂತರ ತಾವು ಬಂದ ವಿಷಯದತ್ತ ಗಮನ ಹರಿಸಿದವರು ತಮ್ಮ ಸಹಾಯಕನಿಗೇನೋ ಸಜ್ಞೆ ಮಾಡಿದರು. ಅವನು ಕೂಡಲೇ ಕಾರಿನತ್ತ ಓಡಿಹೋಗಿ ಒಂದು ದೊಡ್ಡ ಚೀಲವನ್ನು ಹೊತ್ತು ತಂದ. ಅದರೊಳಗಿದ್ದ ಹಿತ್ತಾಳೆಯ ಹರಿವಾಣವನ್ನು ತೆಗೆದಿರಿಸಿದ. ಸೇಬು ಚಿಕ್ಕು ಮೋಸಂಬಿ ಮತ್ತು ಬಾಳೆಹಣ್ಣುಗಳನ್ನು ಆ ಹರಿವಾಣದಲ್ಲಿ ಓಪ್ಪವಾಗಿ ಜೋಡಿಸಿದ. ಗಂಧದ (ಅಕೇಶಿಯಾ ಮರದ ಕೀಸುಳಿಯಿಂದ ತಯಾರಿಸಿ, ತುಸು ಗಂಧದ ಪರಿಮಳವನ್ನು ಅದಕ್ಕೆ ಸಿಂಪಡಿಸಿ ಶ್ರೀಗಂಧದ ಹಾರವೆಂದು ಮಾರಾಟ ಮಾಡುವ ಮಾಲೆ!) ಹಾರವನ್ನೂ ರೇಶ್ಮೆಯ ಶಾಲನ್ನೂ ತೆಗೆದು ಗುರೂಜಿಯವರ ಕೈಗಿತ್ತ. ಆಗ ರೋಹಿತ್‍ಗೆ, ಗುರೂಜಿಯವರು ಸಾಧಕರ ಮನೆ ಬಾಗಿಲಿಗೇ ಬಂದು ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂಬುದು ಮನವರಿಕೆಯಾಯಿತು. ಅವನು ಸಂಕೋಚದಿಂದ ಹಿಡಿಯಾದ. ಆದರೂ ತನ್ನ ಒಳಮನಸ್ಸು ಆನಂದದಿಂದ ಅರಳಿದ್ದನ್ನೂ ಗಮನಿಸಿದ. ಜೊತೆಗೆ ಈ ಗುರೂಜಿಯವರ ಸನ್ಮಾನವನ್ನು ಸ್ವೀಕರಿಸಬೇಕೋ, ಬಿಡಬೇಕೋ ಎಂಬ ಗೊಂದಲಕ್ಕೂ ಬಿದ್ದ. ಆದರೆ ಅವನ ಯಾವ ಯೋಚನೆಗಳಿಗೂ ಆಸ್ಪದವಿಲ್ಲದಂತೆ ಗುರೂಜಿಯವರು ತಟ್ಟನೆ ಎದ್ದು ನಿಂತರು. ನಗುತ್ತ ಅವನ ಕೊರಳಿಗೆ ಗಂಧದ ಮಾಲೆ ತೊಡಿಸಿ ಫಲಪುಷ್ಪಾದಿಗಳು ತುಂಬಿದ ಹರಿವಾಣವನ್ನು ಅವನ ಮಡಿಲಲ್ಲಿಟ್ಟು ಪ್ರಶಸ್ತಿ ಫಲಕದ ಬದಲಾಗಿ ಕಾವಿ ಬಟ್ಟೆಯ ಸಣ್ಣದೊಂದು ಗಂಟನ್ನು ಅವನ ಕೈಯಲ್ಲಿಟ್ಟು ಪುರಸ್ಕರಿಸಿದರು. ಗುರೂಜಿಯವರ ಅಭಿಮಾನಕ್ಕೆ ರೋಹಿತ್ ತುಸುಹೊತ್ತು ಮೂಕನಾದ. ಅವರ ಪಾದಗಳೆದುರು ಡೊಗ್ಗಾಲು ಬಿದ್ದು ನಮಸ್ಕರಿಸಿದ. ಗುರೂಜಿಯವರು ಅವನ ಹಿಂತಲೆಗೆ ಹಸ್ತಗಳನ್ನಿಟ್ಟು, ‘ನೂರು ಕಾಲ ಸಮಾಜಸೇವೆ ಮಾಡುತ್ತ ಪ್ರಸಿದ್ಧಿವಂತನಾಗಿ ಬಾಳು!’ ಎಂದು ಹರಸಿದರು. ತಮ್ಮ ಮನೆಗೆ ಧಾರ್ಮಿಕ ಗುರುಗಳೊಬ್ಬರು ಬಂದು ಕುಳಿತುಕೊಂಡು ತಮ್ಮೊಡನೆ ಪ್ರೀತಿಯಿಂದ ಮಾತನಾಡಿದ್ದು ರೋಹಿತ್‍ನ ತಾಯಿಗೆ ಮಠದ ಶ್ರೀ ಸ್ವಾಮಿಗಳೇ ಆಗಮಿಸಿದಷ್ಟು ಆನಂದವಾಗಿದ್ದರೆ ಅವನ ಹೆಂಡತಿಗೂ ಗುರೂಜಿಯವರು, ‘ಪ್ರತಿಯೊಬ್ಬ ಸಾಧಕನ ಯಶಸ್ಸಿನ ಹಿಂದೆ ಅವನ ಹೆಂಡತಿಯ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ!’ ಎಂಬ ಮಾತನ್ನು ಒತ್ತಿ ಹೇಳಿದ್ದು ಮತ್ತು ತಮ್ಮಿಬ್ಬರನ್ನೂ ಅವರು ಯದ್ವಾತದ್ವ ಹೊಗಳಿ ಅಟ್ಟಕೇರಿಸಿ ಆಶೀರ್ವದಿಸಿದ್ದೆಲ್ಲವೂ ಅವಳಿಗೆ ಹೇಳತೀರದಷ್ಟು ಖುಷಿಕೊಟ್ಟಿತ್ತು. ಹಾಗಾಗಿ ಅವರಿಬ್ಬರೂ ಮಕ್ಕಳೊಂದಿಗೆ ಗುರೂಜಿಯವರ ಪಾದಕ್ಕೆ ಸಾಷ್ಟಾಂಗ ಬಿದ್ದು ಎದ್ದವರು ಇವತ್ತಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಂಡು ರೋಮಾಂಚಿತರಾದರು.ಅವರನ್ನು ಮನದುಂಬಿ ಹರಸಿದ ಗುರೂಜಿಯವರು ತಮ್ಮ ಕೆಲಸವಾಗುತ್ತಲೇ ರೋಹಿತ್‍ನಿಂದ ಬೀಳ್ಗೊಂಡು ಹಿಂದಿರುಗಿದರು.ಅವರು ಹೋದ ಬಳಿಕ ರೋಹಿತ್ ಅವರು ನೀಡಿದ್ದ ಕಾವಿಯ ಗಂಟನ್ನು ಬಿಚ್ಚಿದ. ಅದರಲ್ಲಿ ಒಂದು ಕುಂಕುಮದ ಕಟ್ಟಿನೊಂದಿಗೆ ಹತ್ತು ರೂಪಾಯಿ ನೋಟಿನ ಮೂರು ಕಟ್ಟುಗಳಿದ್ದವು.ಅದನ್ನು ಕಂಡವನಿಗೆ ಹಿಂಸೆಯಾಯಿತು.ಆದರೆ ಅವನಿಗೆ ಹಣದ ಅವಶ್ಯಕತೆ ಇರಲಿಲ್ಲವೆಂದಲ್ಲ. ಹಾವುಗಳ ಶುಶ್ರೂಷೆಗೆ ಬೇಕಾಗುವ ವಿವಿಧ ಔಷಧಿ ಮತ್ತು ಅವನ್ನಿಟ್ಟುಕೊಳ್ಳುವ ಪಂಜರಗಳಿಗೆ ಸದಾ ದುಡ್ಡಿನ ಅಗತ್ಯ ಬೀಳುತ್ತಿತ್ತು. ಆದರೆ ಅದನ್ನು ಅವನು ಎಲ್ಲರಿಂದಲೂ ಸ್ವೀಕರಿಸುತ್ತಿರಲಿಲ್ಲ. ಮೂಕ ಜೀವರಾಶಿಗಳ ಮೇಲೆ ನಿಜವಾದ ಪ್ರೀತಿಯಿದ್ದು ಪ್ರಚಾರದ ಗೀಳಿಲ್ಲದಂಥ ಜನರು ಅವರಾಗಿ ಬಂದು ನೀಡಿದರೆ ಸ್ವೀಕರಿಸುತ್ತಿದ್ದ. ಆದರೂ ಇಂದು ಯಾಕೋ ಅವನಿಗೆ ಈ ಹಣವನ್ನು ಗುರೂಜಿಯವರಿಗೇ ಹಿಂದಿರುಗಿಸಬೇಕು ಎಂದೆನ್ನಿಸಿಬಿಟ್ಟಿತು. ಕೂಡಲೇ ಕರೆ ಮಾಡಿದ. ‘ಹಲೋ ಸರ್, ನಮಸ್ಕಾರ…!’ ಎಂದ. ‘ಓಂ ನಾಗಾಯ ನಮಃ ಹೇಳಿ ರೋಹಿತರೇ…?’ ಎಂದರು ಗುರೂಜಿ. ‘ಸರ್ ತಪ್ಪು ತಿಳಿದುಕೊಳ್ಬೇಡಿ.ತಾವು ನನ್ನ ಮನೆ ಬಾಗಿಲಿಗೇ ಬಂದು ನನ್ನನ್ನು ಗೌರವಿಸಿರುವುದರ ಕುರಿತು ಅಪಾರ ಅಭಿಮಾನವಿದೆ. ಆದರೆ ಅದರೊಂದಿಗೆ ತಾವು ಹಣವನ್ನೂ  ನೀಡಿರುವುದು ನನಗ್ಯಾಕೋ ಸರಿಬರುತ್ತಿಲ್ಲ. ದಯವಿಟ್ಟು ತಾವು ಅದನ್ನು ಹಿಂದೆ ಪಡೆಯಬೇಕು. ಈ ವಿಷಯದ ಕುರಿತು ನಾನು ನಿನ್ನೆಯೇ ತಮಗೆ ತಿಳಿಸಿದ್ದೆ!’ ಎಂದ ನಯವಾಗಿ.  ಅರೆರೇ, ಇವನೆಂಥ ಹುಚ್ಚನಪ್ಪಾ…? ಕಾಲಬುಡಕ್ಕ ಬಂದಂಥ ಲಕ್ಷ್ಮಿಯನ್ನು ದೂರತಳ್ಳುವ ಇವನಿಗೆ ಇನ್ನೂ ಬದುಕುವ ದಾರಿಯೇ ತಿಳಿದಿಲ್ಲ ಮೂರ್ಖನಿಗೆ!’ ಎಂದು ಮನಸ್ಸಿನಲ್ಲೇ ಬೈದುಕೊಂಡ ಗುರೂಜಿಯವರು, ‘ಅಯ್ಯಯ್ಯೋ ರೋಹಿತರೇ… ನಮ್ಮನ್ನು ತಪ್ಪು ತಿಳಿಯಬೇಡಿ! ನೀವು ತುಂಬಾ ಸ್ವಾಭಿಮಾನಿ ಅಂತ ಗೊತ್ತು.ಹಾಗಾಗಿ ಆ ಹಣವನ್ನು ನಾವು ನಿಮ್ಮ ಸ್ವಂತ ಖರ್ಚಿಗೆಂದು ಕೊಟ್ಟದ್ದಲ್ಲ. ನೀವು ಚಿಕಿತ್ಸೆ ಮಾಡುವ ನಾಗನ ಸಂತತಿಗೆ ನಮ್ಮಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಒಂದು ಸಣ್ಣ ಕಾಣಿಕೆಯಷ್ಟೆ.ನಮ್ಮ ಮೇಲೆ ಬೇಸರವಾಗಿದ್ದರೆ ಕ್ಷಮಿಸಿಬೇಕು!’ ಎಂದು ಕೃತಕ ನಮ್ರತೆಯಿಂದ ಮಾತಾಡಿದರು. ಆಗ ರೋಹಿತ್‍ನಿಗೆ ಏನು ಹೇಳಲೂ ತೋಚಲಿಲ್ಲ. ಆದ್ದರಿಂದ, ‘ಹಾಗಾದರೆ ಸರಿ ಸರ್.ನಿಮ್ಮಿಚ್ಛೆಯಂತೆಯೇ ಆಗಲಿ!’ ಎಂದು ಹೇಳಿ ಸುಮ್ಮನಾದ. ಜೊತೆಗೆ ಗುರೂಜಿಯವರ ಬಣ್ಣದ ಮಾತುಗಳಿಂದ ಅವನಿಗೆ ಅವರ ಮೇಲೆ ಅಭಿಮಾನವೂ ಹೆಚ್ಚಿತು.ಅಂದಿನಿಂದ ಸಮಯ ಸಿಕ್ಕಾಗಲೆಲ್ಲ ಗುರೂಜಿಯವರು ಅವನಿಗೆ ಕರೆ ಮಾಡಿ ಸ್ನೇಹದಿಂದ ಮಾತಾಡುತ್ತಿದ್ದವರು ಒಂದೆರಡು ಬಾರಿ, ‘ನಿಮ್ಮೂರಿನಾಚೆಯೇ ಬರುವುದಿತ್ತು.ಹಾಗೆ ನಿಮ್ಮನ್ನೂ ಮಾತಾಡಿಸಿಕೊಂಡು ಹೋಗುವ ಅಂತ ಮನಸ್ಸಾಯಿತು!’ ಎಂದು ಸುಳ್ಳು ಹೇಳಿ ಭೇಟಿ ಕೊಟ್ಟು ಅವನಿಗೆ ತಮ್ಮ ಮೇಲೆ ಇನ್ನಷ್ಟು ಪ್ರೀತ್ಯಾದರ ಮೂಡುವಂತೆ ವರ್ತಿಸತೊಡಗಿದರು.ಅದರಿಂದ ಅವನೂ ಅವರ ಮೇಲಿನ ಹಿಂದಿನ ಧೋರಣೆಯನ್ನು ತೊರೆದು ಆತ್ಮೀಯವಾಗಿ ಇರತೊಡಗಿದ. ಇತ್ತ ಮಸಣದಗುಡ್ಡೆಯ ನಾಗಭವನ ಜೀರ್ಣೋದ್ಧಾರದ ಸಮಯವೂ ಸಮೀಪಿಸುತ್ತಿತ್ತು.ಹಾಗಾಗಿ ಗುರೂಜಿಯವರು ಚುರುಕಾದರು.ಇನ್ನು ಸಮಯ ಕಳೆಯಬಾರದು.ರೋಹಿತನಿಗೆ ತಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬಂದ ಹಾಗಿದೆ. ಕೂಡಲೇ ತಮ್ಮ ಕೆಲಸವನ್ನು ಸಾಧಿಸಬೇಕು! ಎಂದು ಯೋಚಿಸಿದವರು ಆವತ್ತೊಂದು ಮುಂಜಾನೆ ರೋಹಿತ್‍ನ ಮನೆಗೆ ದಿಢೀರ್ ಭೇಟಿಕೊಟ್ಟರು.ರೋಹಿತನೂ ಅವರನ್ನು ಆದರದಿಂದ ಮಾತಾಡಿಸಿದ. ಗುರೂಜಿಯವರು ಇವತ್ತು ಅವನೊಂದಿಗೆ ಹಿಂದೂ ಧರ್ಮ ಮತ್ತು ನಾಗಾರಾಧನೆ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ನಂಬಿಕೆ, ಆಚರಣೆಗಳ ಕುರಿತು ತುಂಬಾ ಹೊತ್ತು ಚರ್ಚಿಸಿದರು. ಅವನೂ ಅವರ ವಿಚಾರಧಾರೆಯನ್ನು ಕೇಳುತ್ತಿದ್ದ ಹಾಗೂ ತನಗೆ ಸರಿ ಅನ್ನಿಸಿದ್ದರ ಕುರಿತು ಅಭಿಮಾನದಿಂದ ತಲೆದೂಗುತ್ತಿದ. ತಪ್ಪು

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-33 ಆಸ್ಪತ್ರೆಯಲ್ಲಿ ಒಂದು ವಾರ ತೀವ್ರ ನಿಗಾಘಟಕದಲ್ಲಿ ನರಳಿದ ಶ್ರೀನಿವಾಸ ಕೊನೆಗೂ ಬದುಕುಳಿದ. ಆದರೆ ಈ ಘಟನೆಯಿಂದ ಪ್ರವೀಣನ ನಾಗದೋಷದ ಭೀತಿಯು ದುಪ್ಪಟ್ಟಾಗಿ ಪ್ರಜ್ವಲಿಸತೊಡಗಿತು. ತನ್ನ ಅನಾಚಾರದಿಂದಲೇ ಇವೆಲ್ಲ ಅನಾಹುತಗಳು ನಡೆಯುತ್ತಿರುವುದು! ಎಂದು ಭಾವಿಸಿದವನು ಇನ್ನು ತಡಮಾಡಬಾರದು. ತನ್ನ ಜೀವನ ಸರ್ವನಾಶ ಆಗುವುದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು ಎಂದು ನಿರ್ಧರಿಸಿದ. ಅದೇ ಸಂದರ್ಭದಲ್ಲಿ ಶಂಕರನ ಶೀಂಬ್ರಗುಡ್ಡೆಯ ನಾಗಬನ ಜೀರ್ಣೋದ್ಧಾರದ ಸಂಗತಿಯೂ ಅವನಿಗೆ ತಿಳಿಯಿತು. ಕೂಡಲೇ ಹಳೆಯ ಗೆಳೆಯನನ್ನು ಹೊಸ ಆತ್ಮೀಯತೆಯಿಂದ ಅರಸಿ ಹೋಗಿ ಭೇಟಿಯಾದ. ಶಂಕರನೂ ಪ್ರವೀಣನನ್ನು ಆಪ್ತತೆಯಿಂದ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದ. ಆದರೆ ಅವನ ಮೂತ್ರ ಪ್ರಸಂಗ, ಚರ್ಮರೋಗ ಮತ್ತು ಹಾವಿನ ಕಡಿತದ ವಿಷಯವನ್ನು ಕೇಳಿದವನು ‘ಇದು ಖಂಡಿತಾ ನಾಗದೋಷದ ಪ್ರತಿಫಲವೇ ಮಾರಾಯಾ…! ಇಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ!’ ಎಂದು ಆತಂಕ ವ್ಯಕ್ತಪಡಿಸಿದ. ‘ಅಲ್ವಾ ಅಲ್ವಾ ಶಂಕರಣ್ಣಾ…? ನನಗೆ ಆವತ್ತು ಸುರೇಶ ಹೇಳಿದಾಗಲೇ ಅದು ಗೊತ್ತಾಗಿತ್ತು. ಆದರೆ ನನ್ನ ಮನೆಯವಳೂ, ಆ ಚರ್ಮರೋಗದ ಡಾಕ್ಟ್ರೂ ಹೇಳುವುದು ನಾನು ಸರಿಯಾಗಿ ಸ್ನಾನನೇ ಮಾಡುವುದಿಲ್ಲವಂತೆ. ಅದರಿಂದ ಹುಳಕಜ್ಜಿ ಬಂದಿದೆಯಂತೆ! ಹಾಗಾದರೆ ನನ್ನ ಮೈದುನನಿಗೆ ಹಾವು ಯಾಕೆ ಕಚ್ಚಿತು? ಅದೂ ನನ್ನ ಅಂಗಡಿಯ ಒಳಗೆಯೇ ಬಂದು ಕಚ್ಚಬೇಕಿತ್ತಾ…!’ ಎಂದು ಭಯದಿಂದ ಕಣ್ಣುಬಾಯಿ ಬಿಟ್ಟುಕೊಂಡು ಅಂದವನು, ‘ನನಗೀಗ ನೀವು ಹೇಳಿದ ಮೇಲೆ ಧೈರ್ಯ ಬಂತು ಶಂಕರಣ್ಣಾ…ಆದ್ದರಿಂದ ನೀವೇ ಇದಕ್ಕೊಂದು ಪರಿಹಾರವನ್ನೂ ಸೂಚಿಸಬೇಕು!’ ಎಂದು ಕೇಳಿಕೊಂಡ. ‘ನೀನೇನೂ ಹೆದರಬೇಡ ಮಾರಾಯಾ ನಾನಿದ್ದೇನೆ. ಎಲ್ಲಾ ಸಮ ಮಾಡುವ ನಡೀ…!’ ಎಂದು ಶಂಕರ ಗತ್ತಿನಿಂದ ಹೇಳಿದವನು ಕೂಡಲೇ ಅವನನ್ನು ಏಕನಾಥ ಗುರೂಜಿಯವರ ಹತ್ತಿರ ಕರೆದೊಯ್ದ.    ಆ ಸಮಯದಲ್ಲಿ ಗುರೂಜಿಯವರು ತಮ್ಮ ಹಳೆಯ ಮನೆಯ ಒಂದು ಪಾಶ್ರ್ವವನ್ನು ಒಡೆದು, ಮುಂದೆ ತಮ್ಮಲ್ಲಿ ನಿರಂತರ ನಡೆಯಲಿರುವ ವಿವಿಧ ಪೂಜಾ ಕೈಂಕರ್ಯಗಳಿಗೆ ಸಹಾಯಕವಾಗುವಂಥ ವಿಶಾಲವಾದ ಆಧುನಿಕ ಪಡಸಾಲೆಯೊಂದನ್ನು ನಿರ್ಮಿಸತೊಡಗಿದ್ದರು. ಅತ್ತ ಶಂಕರನ ಕಾರು ಬಂದು ತಮ್ಮ ಮನೆಯೆದುರು ನಿಂತುದನ್ನೂ, ಅವನೊಂದಿಗೆ ಶ್ರೀಮಂತನೊಬ್ಬ ಇಳಿದು ಬರುತ್ತಿರುವುದನ್ನೂ ಮತ್ತು ಅವನ ಮುಖದಲ್ಲಿದ್ದ ಕಳವಳವನ್ನೂ ಗ್ರಹಿಸಿದವರಿಗೆ ತಮ್ಮ ಪಡಸಾಲೆಯ ಕೆಲಸವು ನಿರ್ವಿಘ್ನವಾಗಿ ಸಮಾಪ್ತಿಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದೆನಿಸಿತು. ಆದ್ದರಿಂದ ಮಂದಹಾಸ ಬೀರುತ್ತ ಇಬ್ಬರನ್ನೂ ಬರಮಾಡಿಕೊಂಡು ತಮ್ಮ ಜ್ಯೋತಿಷ್ಯದ ಕೋಣೆಗೆ ಕರೆದೊಯ್ದರು.    ಶಂಕರ ತನ್ನ ಗೆಳೆಯನ ವ್ಯವಹಾರ ಮತ್ತು ಅವನ ಪ್ರಸ್ತುತ ಸಮಸ್ಯೆಯನ್ನು ಗುರೂಜಿಗೆ ಹಳೆಯ ಸಲುಗೆಯಿಂದ ವಿವರಿಸಿದ. ಆದರೆ ಅವರು ಅವನ ಸ್ನೇಹದತ್ತ ಗಮನಕೊಡದೆ ಅವನ ಮಾತುಗಳನ್ನು ಮಾತ್ರವೇ ಗಂಭೀರರಾಗಿ ಕೇಳಿಸಿಕೊಂಡರು ಹಾಗೂ ಕ್ಷಣಹೊತ್ತು ಕಣ್ಣುಮುಚ್ಚಿ ಧ್ಯಾನಸ್ಥರಂತೆ ಕುಳಿತು ಪ್ರವೀಣನ ಸಮಸ್ಯೆಗಳನ್ನು ತಮ್ಮದೇ ದೃಷ್ಟಿಕೋನದಿಂದ ಮಥಿಸಿದರು. ಗುರೂಜಿಯ ಗಾಂಭೀರ್ಯವನ್ನೂ ಅವರು ತನಗಾಗಿ ಧ್ಯಾನಿಸುತ್ತಿದ್ದ ರೀತಿಯನ್ನೂ ಕಂಡ ಪ್ರವೀಣನಿಗೆ ಅರ್ಧಕ್ಕರ್ಧ ಭಯ ಹೋಗಿಬಿಟ್ಟಿತು. ಆದರೆ ಅತ್ತ ಗುರೂಜಿಯ ಯೋಚನಾಲಹರಿ ಈ ರೀತಿ ಸಾಗುತ್ತಿತ್ತು, ‘ಓ ಪರಮಾತ್ಮಾ… ಕೊನೆಗೂ ನೀನು ನಮ್ಮ ಜೀವನಕ್ಕೊಂದು ಭದ್ರ ನೆಲೆಯನ್ನು ಕರುಣಿಸಿಬಿಟ್ಟೆ. ಅದಕ್ಕಾಗಿ ಅನಂತಾನಂತ ಕೃತಜ್ಞತೆಗಳು ದೇವಾ! ಹಾಗೆಯೇ ಈಗ ನಮ್ಮಲ್ಲಿಗೆ ನೀನು ಕಳುಹಿಸಿರುವ ಈ ವ್ಯವಹಾರವೂ ಸಾಂಗವಾಗಿ ನೆರವೇರುವಂಥ ಶಕ್ತಿಯನ್ನು ದಯಪಾಲಿಸು ಪ್ರಭುವೇ!’ಎಂದು ಪ್ರಾರ್ಥಿಸಿದರು. ನಂತರ ನಿಧಾನವಾಗಿ ಕಣ್ಣು ತೆರೆದು ಪ್ರವೀಣನನ್ನು ದಿಟ್ಟಿಸಿದರು. ಆಗ ಅವನು ಅವರನ್ನು ದೈನ್ಯದಿಂದ ನೋಡಿದ. ‘ಹೌದು ಪ್ರವೀಣರೇ, ನೀವು ಮಾಡಿರುವುದು ಮಹಾ ಅಪರಾಧವೇ ಆಗಿದೆ! ಅದರಲ್ಲಿ ಎರಡು ಮಾತಿಲ್ಲ’ ಎನ್ನುತ್ತ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಪ್ರವೀಣ ಭಯದಿಂದ ಇನ್ನಷ್ಟು ಇಳಿದುಹೋದ. ಅದನ್ನು ಗಮನಿಸಿದ ಗುರೂಜಿ, ‘ಆದರೂ ನೀವಿನ್ನು ಹೆದರಬೇಕಾಗಿಲ್ಲ. ನಿಮ್ಮ ಆ ಪಾಪಕೃತ್ಯವನ್ನು ಸರಿಪಡಿಸುವ ಮಾರ್ಗ ನಮ್ಮಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧರಿದ್ದೀರಾ?’ ಎಂದು ಮುಖದಲ್ಲಿ ನಿರ್ಭಾವ ತೋರಿಸುತ್ತ ಕೇಳಿದರು. ಆದರೂ ಅವರ ಕೆಳದುಟಿಯು ಸಣ್ಣಗೆ ಕಂಪಿಸುತ್ತಿದ್ದುದು ಯಾರ ಗಮನಕ್ಕೂ ಬರಲಿಲ್ಲ. ‘ಆಯ್ತು ಗುರೂಜಿ. ತಾವು ಹೇಗೆ ಹೇಳುತ್ತೀರೋ ಹಾಗೆ ನಡೆದುಕೊಳ್ಳುತ್ತೇನೆ. ಒಟ್ಟಾರೆ ನನ್ನ ಸಮಸ್ಯೆಯನ್ನು ನಿವಾರಿಸಿಕೊಡಬೇಕು ತಾವು!’ ಎಂದ ಪ್ರವೀಣ ನಮ್ರನಾಗಿ ಕೇಳಿಕೊಂಡ. ಆಗ ಗುರೂಜಿಯ ಮುಖದಲ್ಲಿ ನಗು ಮೂಡಿತು.  ‘ಆಯ್ತು, ಸರಿಮಾಡಿ ಕೊಡುವ. ಆದರೆ ಅದಕ್ಕಿಂತ ಮೊದಲು ಆ ಜಾಗವನ್ನು ನಾವೊಮ್ಮೆ ನೋಡಬೇಕಲ್ಲಾ…?’ ‘ಆಯ್ತು ಗುರೂಜಿ. ನಿಮಗೆ ಪುರುಸೋತ್ತಿದ್ದರೆ ಈಗಲೇ ಹೋಗಿ ನೋಡಿ ಬರಬಹುದು!’ ಎಂದ ಪ್ರವೀಣನು, ಶಂಕರನ ಮುಖ ನೋಡುತ್ತ, ‘ಹೇಗೇ…ಹೋಗಿ ಬರುವ ಅಲ್ಲವಾ…?’ ಎಂದು ಕಣ್ಣಿನಲ್ಲೇ ಪ್ರಶ್ನಿಸಿದ.  ಆದರೆ ಅತ್ತ, ‘ಈಗಲೇ ಹೋಗುವುದಾ…?’ ಎಂದ ಗುರೂಜಿ ಬೇಕೆಂದೇ ಕೆಲವುಕ್ಷಣ ಯೋಚಿಸುವಂತೆ ನಟಿಸಿದವರು ನಂತರ, ‘ಸರಿ. ಹೊರಡುವ…!’ ಎಂದರು. ‘ನೋಡಮ್ಮಾ ದೇವಕೀ… ಎಲ್ಲಿದ್ದೀಯೇ?’ ಎಂದು ಹೆಂಡತಿಯನ್ನು ಕೂಗಿ ಕರೆದರು. ಅವಳು ಅಡುಗೆ ಕೋಣೆಯಿಂದಲೇ, ‘ಏನೂಂದ್ರೆ….?’ ಎಂದಳು. ‘ಪಡಸಾಲೆಯ ಕೆಲಸವನ್ನು ಸ್ವಲ್ಪ ಗಮನಿಸುತ್ತಿರು. ನಾವು ಹೊರಗೆ ಹೋಗಿ ಬರುತ್ತೇವೆ…’ ಎಂದು ಸೂಚಿಸಿದರು. ‘ಆಯ್ತು, ಹೋಗಿ ಬನ್ನಿ…!’ ಎಂಬ ಅವಳ ಉತ್ತರ ಸಿಗುತ್ತಲೇ ಎದ್ದು ಅವರೊಂದಿಗೆ ಹೊರಟರು.                                                                                    *** ಗುರೂಜಿ ಮತ್ತು ಶಂಕರನೊಂದಿಗೆ ಪ್ರವೀಣ ಮಸಣದಗುಡ್ಡೆಗೆ ಬಂದವನು ಅಲ್ಲಿಂದ ಸ್ವಲ್ಪ ದೂರವಿದ್ದ ಸುರೇಶನ ಸರಕಾರಿ ಕಾಲೋನಿಗೆ ಅವರನ್ನು ಕರೆದೊಯ್ದ. ಅಲ್ಲಿನ ಅಶ್ವತ್ಥ ಮರದ ಕಟ್ಟೆಯೊಂದಲ್ಲಿ ಗುರೂಜಿಯವರನ್ನು ಕುಳ್ಳಿರಿಸಿದವನು ಶಂಕರನನೊಂದಿಗೆ ಸುರೇಶನ ಮನೆಯತ್ತ ಹೋದ. ಸುರೇಶ ಆಹೊತ್ತು ತನ್ನ ಬಡಾವಣೆಯ ಕೊನೆಯ ಸಾಲಿನ ಹರಕು ಮುರುಕು ಮನೆಯೊಂದರಲ್ಲಿ ಕುಡಿದು ಮತ್ತನಾಗಿ ಮಲಗಿದ್ದ. ಪ್ರವೀಣ ಮತ್ತು ಶಂಕರನ ಚೆನ್ನಾಗಿ ಪರಿಚಯವಿದ್ದ ಅಲ್ಲಿನವರಲ್ಲಿ ಒಂದಿಬ್ಬರು ಗಂಡಸರು ಅವರನ್ನು ಕಂಡು ದಡಬಡನೆದ್ದು ಬಂದು ಅವರಿಂದ ವಿಷಯ ತಿಳಿದುಕೊಂಡವರು ಕೂಡಲೇ ಸುರೇಶನನ್ನು ಎಬ್ಬಿಸಲು ಅವನ ಮನೆಯೊಳಗೆ ನುಗ್ಗಿದರು. ಆದರೆ ಸುರೇಶ ಏಳುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವರಲ್ಲೊಬ್ಬ ಸುರೇಶನ ನೆತ್ತಿಗೆ ಒಂದು ಚೊಂಬು ತಣ್ಣೀರು ಸುರಿದು ಎಬ್ಬಿಸಬೇಕಾಯಿತು. ಅದರಿಂದ ಸುರೇಶ ಎಚ್ಚರಗೊಂಡು ಕೆಂಡಾಮಂಡಲನಾದವನು ಇಬ್ಬರಿಗೂ ಕೆಟ್ಟಕೆಟ್ಟ ಪದಗಳಿಂದ  ಬಯ್ಯುತ್ತ ಎದ್ದು ಕುಳಿತ. ಆದರೆ ಅವರು ಅವನ ಅಂಥ ಬೈಗುಳವನ್ನು ಕೇಳಿ ತಮಾಷೆಯಾಗಿ ನಗುತ್ತ ಪ್ರವೀಣ, ಶಂಕರರು ಬಂದಿರುವುದನ್ನು ಅವನಿಗೆ ತಿಳಿಸಿದರು. ಅವರ ಹೆಸರು ಕಿವಿಗೆ ಬೀಳುತ್ತಲೇ ಸುರೇಶ ತಟ್ಟನೆ ನೆಟ್ಟಗಾದ. ‘ಓಹೋ, ಆ ಬೇವರ್ಸಿ ಬಂದಿದ್ದಾನಾ…? ಅಂವ ನನ್ನನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅಂತ ಗೊತ್ತಿತ್ತು ಬಿಡಿ!’ ಎಂದು ನಗುತ್ತ ಎದ್ದು ತೂರಾಡುತ್ತ ಹೊರಗೆ ಬಂದ. ಅಲ್ಲಿ ತನ್ನ ವಠಾರದವರೆಲ್ಲರೂ ತಂತಮ್ಮ ಹೊಸ್ತಿಲು, ಅಂಗಳದಲ್ಲಿ ನಿಂತುಕೊಂಡು ತನ್ನತ್ತ ಕುತೂಹಲದಿಂದ ನೋಡುತ್ತಿದ್ದುದನ್ನು ಕಂಡ ಸುರೇಶ ತನ್ನ ಮಹತ್ವವನ್ನು ಸಾರುವ ಉದ್ದೇಶದಲ್ಲಿ,‘ನಮಸ್ಕಾರ ಪ್ರವೀಣಣ್ಣ… ಏನು ವಿಷಯ ಮಾರಾಯ್ರೇ…?’ಎಂದು ಸಂಗತಿ ತನಗೆ ಗೊತ್ತಿದ್ದರೂ ಜೋರಿನಿಂದ ಪ್ರಶ್ನಿಸಿದ. ಅವನ ಅಹಂಕಾರದ ಮಾತುಗಳನ್ನು ಕೇಳಿದ ಪ್ರವೀಣ, ಶಂಕರರಿಬ್ಬರಿಗೂ ಕೆಟ್ಟ ಕೋಪ ಬಂತು. ಆದರೆ ಈ ಸಮಯದಲ್ಲಿ ತಾಳ್ಮೆಗೆಟ್ಟರೆ ಕೆಲಸ ಕೆಡುವುದೆಂದು ವಿವೇಕ ಎಚ್ಚರಿಸಿತು. ‘ಏನಿಲ್ಲ ಮಾರಾಯಾ ನಮ್ಮ ಗುರೂಜಿಯವರು ಬಂದಿದ್ದಾರೆ. ಮೊನ್ನೆ ನೀನು ತೋರಿಸಿದ ನಾಗನ ಕಲ್ಲಿದ್ದ ಆ ಜಾಗ ಮತ್ತು ಅದರ ಕಥೆಯನ್ನು ಸ್ವಲ್ಪ ಅವರಿಗೆ ಹೇಳಬೇಕಿತ್ತಲ್ಲವಾ…?’ ಎಂದು ಪ್ರವೀಣ, ‘ಈಗಲೇ ಹೊರಡು…!’ ಎಂಬಂಥ ಭಾವದಿಂದ ಆಜ್ಞಾಪಿಸಿದ. ‘ಅರೇ, ಅದಕ್ಕೇನಂತೆ ಹೋಗುವ. ನಡೆಯಿರಿ!’ ಎಂದು ಸುರೇಶ ಅವರಿಗಿಂತ ಮುಂದೆ ನಡೆದವನು ತಟ್ಟನೆ ನಿಂತು,‘ಆದರೆ ಪ್ರವೀಣಣ್ಣ ನನಗೀಗ ಸ್ವಲ್ಪ ಎದುರು ಹಾಕದೆ (ಸಾರಾಯಿ ಕುಡಿಯದೆ) ಕೈಕಾಲು ಅಲ್ಲಾಡುವುದಿಲ್ಲ ನೋಡಿ. ಆಗ ಸ್ವಲ್ಪ ಕುಡಿದು ಮಲಗಿದ್ದೆ. ಆದರೆ ಈ ದರ್ವೇಶಿಗಳಿದ್ದಾರಲ್ಲ…ಇವರು, ನೀವು ಬಂದ ಸುದ್ದಿಯನ್ನು ಹೇಳುವ ಗಡಿಬಿಡಿಯಲ್ಲಿ ನನ್ನ ಮಂಡೆಗೆ ಸಮಾ ನೀರು ಸುರಿದು ಎಬ್ಬಿಸಿ ಎಲ್ಲಾ ಹಾಳು ಮಾಡಿಬಿಟ್ಟರು!’ಎಂದು ಆ ಇಬ್ಬರತ್ತ ಕೋಪದಿಂದ ದಿಟ್ಟಿಸುತ್ತ ಹೇಳಿದ. ಆದರೆ ಅವರು ಆಗಲೂ ತಮಾಷೆಯಿಂದ ನಗುತ್ತ ನಿಂತಿದ್ದರು. ‘ಆಯ್ತು, ಆಯ್ತು ಮಾರಾಯಾ. ಸ್ವಲ್ಪವೇನು ಕೆಲಸವಾದ ಮೇಲೆ ಇಡೀ ಬಾಟಲಿಯನ್ನೇ ಕೊಡಿಸುತ್ತೇನೆ. ಕುಡಿದು ಬಿದ್ದು ಸಾಯಿ ಅತ್ಲಾಗೆ. ಈಗ ಮೊದಲು ನಡೆ!’ ಎಂದು ಪ್ರವೀಣ ತನ್ನ ಕೋಪವನ್ನು ತಮಾಷೆಯೊಂದಿಗೆ ಬೆರೆಸಿ ತೋರಿಸಿದ.‘ಹಾಗಾದರೆ ಸರಿ ಹೋಗುವ…!’ ಎಂದು ಸುರೇಶ ತಾಳತಪ್ಪಿದ ಹೆಜ್ಜೆಗಳನ್ನಿಡುತ್ತ ಮುಂದೆ ನಡೆದ.    ಸ್ವಲ್ಪಹೊತ್ತಿನಲ್ಲಿ ಸುರೇಶ ಗುರೂಜಿಯವರನ್ನು ಅಲ್ಲಿನ ಕುರುಚಲು ಹಾಡಿಯತ್ತ ಕರೆದುಕೊಂಡು ಹೋಗಿ ಆ ಪೊದೆಯನ್ನು ತೋರಿಸಿದ. ಪ್ರವೀಣನಿಗೆ ಮೂತ್ರ ಹುಯ್ಯಲು ಆ ಸ್ಥಳವು ಬಹಳ ಇಷ್ಟವಾಗಿದ್ದುದರಿಂದ ಆ ಪರಿಸರವಿಡೀ ಗಬ್ಬು ವಾಸನೆ ಬೀರುತ್ತಿತ್ತು. ಗುರೂಜಿಯವರು ಕುತೂಹಲದಿಂದ ಅದರತ್ತ ಹೋದವರಿಗೆ ಒಮ್ಮೆಲೇ ವಾಂತಿ ಬಂದಂತಾಯಿತು. ಆದರೂ ಮೂಗು ಮುಚ್ಚಿಕೊಂಡು ಆ ಜಾಗವನ್ನೂ ಅಲ್ಲಿನ ಕಲ್ಲುಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸತೊಡಗಿದರು. ಆದರೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಉಸಿರುಗಟ್ಟಿತು. ತಟ್ಟನೆ ಈಚೆಗೆ ಧಾವಿಸಿ ಬಂದವರು, ‘ಛೇ, ಛೇ! ಎಂಥದಿದು ಪ್ರವೀಣರೇ… ಎಷ್ಟು ವರ್ಷಗಳಿಂದ ಇಲ್ಲಿ ಗಲೀಜು ಮಾಡುತ್ತಿದ್ದೀರಿ…? ಈ ಜಾಗವಿಡೀ ಸರ್ಕಾರಿ ಪಾಯಿಖಾನೆಯ ಥರಾ ನಾರುತ್ತಿದೆಯಲ್ಲ. ಅಪಚಾರ ಅಪಚಾರ…!’ ಎಂದು ಗೊಣಗಿದರು. ಅಷ್ಟು ಕೇಳಿದ ಪ್ರವೀಣನಿಗೆ ಭಯ, ಅವಮಾನವೆಲ್ಲವೂ ಒಟ್ಟೊಟ್ಟಿಗಾಯಿತು. ಪೆಚ್ಚು ನಗುತ್ತ ನಿಂತುಕೊಂಡ. ಗುರೂಜಿಯವರು ಆ ಪೊದೆಯ ಸುತ್ತಮುತ್ತ ದಟ್ಟ ಮರಗಳಿಂದ ತುಂಬಿದ ಪ್ರದೇಶವೊಂದನ್ನು ಮೂಗು ಮುಚ್ಚಿಕೊಂಡೇ ಪರೀಕ್ಷಿಸುತ್ತ ಸ್ವಲ್ಪಹೊತ್ತು ಸುತ್ತಾಡಿದರು. ಅಲ್ಲೊಂದು ಕಡೆ ವಿಶಾಲವಾದ ಮನೆಯಿದ್ದು ಈಗ ಅದರ ನಾಮಾಶೇಷ ಮಾತ್ರವೇ ಉಳಿದಿದ್ದುದು ಕಾಣಿಸುತ್ತಿತ್ತು. ಆದ್ದರಿಂದ ಈ ಬನವೂ ಅದಕ್ಕೆ ಸಂಬಂಧಿಸಿದ್ದು ಎನ್ನುವುದು ಅವರಿಗೆ ಸ್ಪಷ್ಟವಾಯಿತು. ಮತ್ತೊಮ್ಮೆ ಅವೆಲ್ಲವನ್ನೂ ಪರಿಶೀಲಿಸಿ ಮುಂದಿನ ಕಾರ್ಯಚರಣೆ ಏನೆಂಬುದರ ಕುರಿತು ಅಲ್ಲಿಯೇ ನಿರ್ಧರಿಸಿಬಿಟ್ಟರು. ಈಗ ಸುರೇಶ ಮಾತನಾಡಿ,‘ಆ ಜಾಗದ ವಾರಸುದಾರರು ಈಗ ಇಲ್ಲಿ ಸುತ್ತಮುತ್ತ ಯಾರು ಇಲ್ಲ. ಜಾಗವು ಸರಕಾರದ ಸ್ವಾಧೀನದಲ್ಲಿದೆ! ಎಂದ. ಗುರೂಜಿ ಅವನ ಹೇಳಿಕೆಯನ್ನು ಕೇಳಿಸಿಕೊಂಡರಾದರೂ ಅವರಿಗೆ ಅದರಲ್ಲಿ ವಿಶ್ವಾಸ ಬರಲಿಲ್ಲ. ಆದ್ದರಿಂದ ಆ ಕುರಿತು ಸತ್ಯವನ್ನು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಪ್ರವೀಣ ಮತ್ತು ಶಂಕರನಿಗೆ ವಹಿಸಲಿಚ್ಛಿಸಿದವರು,‘ನೋಡಿ ಪ್ರವೀಣರೇ, ನೀವಿನ್ನು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಇಲ್ಲಿನ ಸಂಗತಿ ಏನೆಂಬುದು ನಮಗೆ ಸ್ಪಷ್ಟವಾಗಿದೆ. ಅವೆಲ್ಲವನ್ನೂ ಸುಸೂತ್ರವಾಗಿ ಪರಿಹರಿಸಿಕೊಡುವ ಜವಾಬ್ದಾರಿ ನಮ್ಮದು. ಆದರೆ ಸ್ವಲ್ಪ ದುಡ್ಡು ಖರ್ಚಾಗುತ್ತದೆ. ನೀವು ಕೂಡಲೇ ಆ ವ್ಯವಸ್ಥೆಯನ್ನು ಮಾಡಿಕೊಳ್ಳಿ ಮತ್ತು ಈ ಸ್ಥಳಕ್ಕೆ ಸಂಬಂಧಪಟ್ಟು ನಾವು ಹೇಳುವ ಕೆಲವು ಮುಖ್ಯ ವಿಚಾರಗಳನ್ನೂ ತಿಳಿದುಕೊಳ್ಳುವ ಕೆಲಸವನ್ನು ನೀವಿಬ್ಬರೂ ಮಾಡಬೇಕಾಗುತ್ತದೆ. ಎಷ್ಟು ಬೇಗ ಆ ಮಾಹಿತಿಯನ್ನು ತಂದು ನಮಗೆ ಒಪ್ಪಿಸುತ್ತೀರೋ ಅಷ್ಟೇ ಬೇಗ ನಿಮ್ಮ ಸಮಸ್ಯೆಯನ್ನೂ ನಿವಾರಿಸಿಕೊಡುತ್ತೇವೆ!’ ಎಂದರು ಗಂಭೀರವಾಗಿ. ‘ಹಣದ ವ್ಯವಸ್ಥೆ ಮಾಡಿಕೊಳ್ಳಿ…!’ಎಂದಾಕ್ಷಣ ಪ್ರವೀಣ ಸ್ವಲ್ಪ ಅಶಾಂತನಾದ. ಅದನ್ನು ಗಮನಿಸಿದ ಶಂಕರ,‘ಅದರ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುವುದು ಮಾರಾಯಾ ಸುಮ್ಮನಿರು…!’ ಎಂದು ಕಣ್ಣಿನಲ್ಲೇ ಅವನನ್ನು ಸಮಾಧಾನಿಸಿದ.    ಗುರೂಜಿಯ ಆಜ್ಞೆಯಂತೆ ಗೆಳೆಯರಿಬ್ಬರು ಕೆಲವೇ ದಿನದೊಳಗೆ ಆ ಬನದ ಚರಿತ್ರೆಯನ್ನು ತಿಳಿದುಕೊಂಡು ಬಂದು ಅವರಿಗೊಪ್ಪಿಸಿದರು. ಆ ವರದಿಯ ಪ್ರಕಾರ, ‘ಸದ್ಯ ಬನದ ವಾರಸುದಾರರು ಈಶ್ವರಪುರದಲ್ಲಿ ಯಾರೂ ಇಲ್ಲ. ಅವರ ದೂರದ ಸಂಬಂಧಿಗಳಾದ ಒಂದೆರಡು ಕುಟುಂಬಗಳು ಇರುವುವಾದರೂ ಮೂಲ ಜಾಗಕ್ಕೆ ಸಂಬಂಧಿಸಿದವರ ಮಾಹಿತಿ ಮತ್ತು ವಿಳಾಸ ಅವರಿಗೂ ಗೊತ್ತಿಲ್ಲ ಹಾಗೂ ಬನದ ಜಾಗವೂ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಸ್ಮಶಾನವಿದ್ದ ಜಮೀನು ಮಾತ್ರ ಸರಕಾರದ್ದು. ಹಾಗಾಗಿ ಸ್ಮಶಾನದ ಸುತ್ತಮುತ್ತದ ಒಂದಷ್ಟು ಭೂಮಿ ಸಹಜವಾಗಿಯೇ ಪಾಳುಬಿದ್ದಿದೆ. ಅದರಲ್ಲಿ ಬನವೂ ಸೇರಿಬಿಟ್ಟಿದೆ!’ ಎಂದು ತಿಳಿದು ಬಂತು. ಅಷ್ಟು ವಿಷಯನ್ನು ತಿಳಿದ ಗುರೂಜಿಯವರು ಒಳಗೊಳಗೇ ಹರುಷಗೊಂಡರು.‘ಈಶ್ವರಪುರದ ಹೃದಯಭಾಗದಲ್ಲಿರುವ ನಾಗ ಬನವದು. ಅಲ್ಲಿ ಸುತ್ತಮುತ್ತಲ್ಲೆಲ್ಲೂ ಬೇರೊಂದು ಬನವೂ ಇಲ್ಲ. ಹಾಗಾಗಿ ಅದನ್ನು ತಮ್ಮಿಂದ ಊರ್ಜಿತಗೊಳಿಸುವುದೇ ನಾಗದೇವನಿಚ್ಛೆಯಿರಬೇಕು. ಅಷ್ಟಲ್ಲದೇ ತಮ್ಮ ಜೀವನದೇಳಿಗೆಯ ಕಾರ್ಯಸಾಧನೆಗೂ ಆ ಪರಿಸರವು ಹೇಳಿ ಮಾಡಿಸಿದಂತಿದೆ. ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಿ ತಮ್ಮದಾಗಿಸಿಕೊಳ್ಳಬೇಕು!’ ಎಂದು ನಿರ್ಧರಿಸಿದರು ಹಾಗೂ ಕೂಡಲೇ ಪ್ರವೀಣನನ್ನೂ ಶಂಕರನಿಗೂ ಮನೆಗೆ ಕರೆದು ತಮ್ಮ ಮನದಿಂಗಿತವನ್ನು ಅವರಿಗೆ ವಿವರಿಸಿದರು. ಜೊತೆಗೆ ಆ ಶುಭಕಾರ್ಯಕ್ಕೆ ತಗಲುವ ಖರ್ಚುವೆಚ್ಚವನ್ನೂ ಮತ್ತದನ್ನು ಹೊಂದಿಸುವ ಬಗೆಯನ್ನೂ ಹಾಗೂ ಆ ಕಾರ್ಯದಲ್ಲಿ ಪಾಲುಗೊಳ್ಳುವುದರಿಂದ ಅವರ ಜೀವನದಲ್ಲಾಗುವ ಸಮೃದ್ಧಿಗಳು ಯಾವ ಯಾವ ರೀತಿಯವು ಎಂಬುದನ್ನೆಲ್ಲ ಅಂದು ಶಂಕರನಿಗೆ ವಿವರಿಸಿದಂತೆಯೇ ಇಂದು ಪ್ರವೀಣನಿಗೂ ತಿಳಿಸಿ ಅವನನ್ನು ಸಜ್ಜುಗೊಳಿಸಿದರು.    ಗುರೂಜಿಯವರ ಮಾತು ಕೇಳಿದ ಪ್ರವೀಣ ಮತ್ತು ಶಂಕರ ಆ ಕಾರ್ಯದ ಕುರಿತು ಭಾರೀ ಉತ್ಸುಕರಾದರು. ಗುರೂಜಿಯ ಮಾರ್ಗದರ್ಶನದಂತೆ ಅವರ ಹೇಳಿಕೆಯನ್ನು ಆ ಬನದ ಸುತ್ತಮುತ್ತಲಿನ ಜನರಲ್ಲಿ ಪ್ರಚಾರ ಮಾಡುತ್ತ ಬಂದರು. ಬಳಿಕ ಜೀರ್ಣೋದ್ಧಾರದ ವಿಷಯಕ್ಕೆ ಸಂಬಂಧಿಸಿ ನಗರಸಭೆಯಿಂದಲೂ ಕೆಲವೇ ದಿನದಲ್ಲಿ ‘ನೋ ಅಬ್ಜಕ್ಷನ್!’ ಲೆಟರ್ ಕೂಡಾ ಪ್ರವೀಣನ ಕೈಸೇರಿತು. ಆದ್ದರಿಂದ ದಟ್ಟ ಹಸಿರಿನಿಂದ ತುಂಬಿ ಆರೋಗ್ಯಪೂರ್ಣವಾಗಿದ್ದ ಆ ಬನವನ್ನು ಕೂಡಲೇ‘ಕಾಂಕ್ರೀಟ್ ಭವನ’ವನ್ನಾಗಿ ಮಾರ್ಪಡಿಸಲು ಶುಭದಿನವೊಂದನ್ನು ಗೊತ್ತುಪಡಿಸಲಾಯಿತು. ಆದರೆ ಅದಕ್ಕಿನ್ನೂ ಒಂದೂವರೆ ತಿಂಗಳ ಗಡುವಿತ್ತು. ಈ ಎರಡನೆಯ ಜೀರ್ಣೋದ್ಧಾರದ ಮೂಲಕ ಗುರೂಜಿಯವರಿಗೆ ತಮ್ಮ ಧಾರ್ಮಿಕ ವರ್ಚಸ್ಸು ಮತ್ತು ಸಂಪಾದನೆಯನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ಬಹಳ ಹಿಂದೆಯೇ ಅವರೊಳಗೆ ಹೊಸ ವಿಚಾರವೊಂದು ಮೊಳೆತಿತ್ತು. ಆದ್ದರಿಂದ ಇದೇ ಕಾರ್ಯಕ್ರಮದಲ್ಲಿ ಅದನ್ನು ಕಾರ್ಯಗತಗೊಳಿಸಲು ಅವರು ಮನಸ್ಸು ಮಾಡಿದರು. (ಮುಂದುವರೆಯುವುದು) ********* ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ. ********************************************

Read Post »

ಇತರೆ, ದಾರಾವಾಹಿ

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.

Read Post »

ಇತರೆ, ದಾರಾವಾಹಿ

‘ನಾನೇನು ನನ್ನ ಲಾಭಕ್ಕೆ ಆ ಪ್ರಾಣಿಗಳನ್ನು ಸಾಕಿದೆನಾ? ನೀವು ನಮಗಾಗಿ ಎಷ್ಟೊಂದು ಕಷ್ಟಪಡುತ್ತೀರಿ. ಅದಕ್ಕೆ ನನ್ನಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಯೋಚಿಸಿದೆ. ಹೀಗಿರುವಾಗ ಇಂಥ ಪರಿಸ್ಥಿತಿಯಲ್ಲಿ ತಾಳ್ಮೆಗೆಟ್ಟರೇನು ಬಂತು…?’ ಎಂದು ಅಳುತ್ತ ಹೇಳಿ ಧುರಧುರನೇ ಒಳಕ್ಕೆ ನಡೆದಳು.

Read Post »

You cannot copy content of this page

Scroll to Top