ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಹೊಸ ಭರವಸೆಯೊಂದಿಗೆ..

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಹೊಸ ಭರವಸೆಯೊಂದಿಗೆ..    ಜ್ಯೋತಿ  ಡಿ.ಬೊಮ್ಮ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ ತನ್ನ ಆಪೋಷನಕ್ಕೆ ತೆಗೆದುಕೊಳ್ಳುವದೊ ಎಂಬ ಭಯದಲ್ಲೆ ದಿನಕಳೆದಿದ್ದಾಯಿತು.ಒಬ್ಬರನ್ನೊಬ್ಬರು ಸದಾ ಅನುಮಾನದಿಂದ ನೋಡುತ್ತ ಸಂಬಂಧಗಳನ್ನೆಲ್ಲ ದೂರಗೊಳಿಸಿ ಒಂದು ಸೀಮಿತ ವಲಯದಲ್ಲೆ ಪರಸ್ಪರರಿಂದ ದೂರವಾಗಿ ಬದುಕಿದ ಆ ಕ್ಷಣಗಳು ಈಗ ನೆನಪಿಸಿಕೊಂಡಾಗ ಮತ್ತೆ ವಿಷಾದ ಕಾಡುತ್ತದೆ.ಕರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಅಷ್ಟೊಂದು ವೈಭವಿಕರಿಸಿ ಭಯಗೊಳಿಸುವ ಅಗತ್ಯವಿತ್ತೆ ..ಎಂಬ ಪ್ರಶ್ನೆಗೆ ಈಗ ಉತ್ತರ ಬೇಕಾಗಿಲ್ಲದಿರಬಹುದು.ಎಕೆಂದರೆ ಈಗ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುತ್ತಿರುವ ಅದನ್ನು ಮತ್ತೆ ನೆನಪಿಸಿಕೊಳ್ಳದಿರುವದೆ ಸೂಕ್ತ.  ಆದರೆ ಆ ಸಂದರ್ಬದಲ್ಲಿ ಜನರಿಗೆ ಕಾಡಿದ ಒಂಟಿತನ ,ಖಿನ್ನತೆ , ನೆನೆಸಿ ಕೊಂಡರೆ ಮನ ಕಂಪಿಸದೆ ಇರದು. ಮೊದಮೊದಲು ಲಾಕ್ ಡೌನ್ ಅನ್ನು ಸಂಭ್ರಮಿಸಿದವರೆ ಎಲ್ಲರು. ಮನೆಯ ದಿಗ್ಬಂಧನ ಮುಂದುವರೆದಂತೆ ಅದರ ಪ್ರತಿಕೂಲ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೂ ತೊರತೊಡಗಿತು..ಕಾರ್ಮಿಕರು ಇನ್ನಿಲ್ಲದಂತೆ ತೊಂದರೆಗೊಳಗಾದರು.ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಈಗಲೂ ಪರದಾಡುತಿದ್ದಾರೆ. ಕರೋನಾ ಮಾರಿಯೂ ಪ್ರತಿಯೊಬ್ಬರ ಶಿಸ್ತು ಬದ್ಧ ಜೀವನ ಕ್ರಮವನ್ನೆ ಕಸಿದುಕೊಂಡು ಬಿಟ್ಟಿತು. ಒಂದೊಂದು ಕಷ್ಟವು ಒಂದೊಂದು ಪಾಠ ಕಲಿಸಿಯೆ ಹೋಗುತ್ತದೆ.ಕರೋನಾ ಕಾಲಘಟ್ಟದ ಸಂದರ್ಭ ವೂ  ನಮಗೆ ಅನೇಕ ಪಾಠ ಕಲಿಸದೆ ಇರಲಿಲ್ಲ.ಮೊಟ್ಟ ಮೊದಲು ಮಾನವನ ಅತೀ ವೇಗದ ಬದುಕಿಗೊಂದು ಬ್ರೇಕ್ ಹಾಕಿತು.ಧಾವಂತ ಬದುಕಿನಲ್ಲಿ ಯಾಂತ್ರಿಕವಾಗಿದ್ದ ಸಂಭಂದಗಳು ಮತ್ತೆ ಬೆಸೆದವು ,ಬಾಂಧವ್ಯದ ಸೆಲೆ ವೃದ್ಧಿಸಿತು. ಮನೆಯಲ್ಲಿ ತಯ್ಯಾರಿಸಿ ಸೇವಿಸುವ ಆಹಾರದ ಮಹಾತ್ಮೆಯ ಅರಿವಾಯಿತು.ಪ್ರಕೃತಿ ಮತ್ತೆ ನಳನಳಿಸಿತು ಮಾಲಿನ್ಯವಿಲ್ಲದೆ.ಹಣ ಒಂದೇ ಪ್ರತಿಯೊಂದಕ್ಕೂ ಪರಿಹಾರವಲ್ಲ ಎನ್ನುವದು ಈ ಕರೋನಾ ಕಲಿಸಿಕೊಟ್ಟಿತು. 2020 ರ  ಕಾಲಘಟ್ಟದಲ್ಲಿ ಕರೋನಾ ಸೋಂಕಿಗೆ ಒಳಗಾದ ಕುಟುಂಬಗಳಲ್ಲಿ ನಮ್ಮದು ಒಂದು.ಆ ಸಂದರ್ಭದಲ್ಲಿ ನಾನು ಅನುಭವಿಸಿದ ತವಕ ತಲ್ಲಣಗಳು ಅಪಾರ.ರೋಗ ಲಕ್ಷಣಗಳು ಅಷ್ಟಾಗಿ ಭಾದಿಸದಿದ್ದರೂ ಅದರ ಸುತ್ತಲಿನ ಸರ್ಕಾರದ ಕಟ್ಟಳೆಗಳು ನಿಜವಾಗಿಯು ನಲುಗಿಸಿದ್ದವು. ಮುಂದೆಯೂ ಅದರೊಂದಿಗೆ ಬದುಕುವ ಅನಿವಾರ್ಯತೆ ಪ್ರತಿಯೊಬ್ಬರಿಗೂ. ಅಂತರ ಮತ್ತು ಮುಖಗವಸು ಕಡ್ಡಾಯವೆ. ಒಂದೂ ರೀತಿಯಲ್ಲಿ ಕರೋನಾ ಪಿಡುಗು ನಮ್ಮನ್ನು ಕಾಡಿದಷ್ಟು ಬದುಕುವ ಛಲ ಮತ್ತು ಆತ್ಮವಿಶ್ವಾಸ ಹೆಚ್ಚಿಸಿತು.ಮುಂದೆಯೂ ಅದರೊಂದಿಗೆ ಬದುಕಬೇಕು ,ಬದುಕೋಣ ,ಮತ್ತೊಂದು ಹೊಸವರ್ಷವನ್ನು ಸ್ವಾಗತಿಸುತ್ತ..ಹೊಸ ಭರವಸೆಯೊಂದಿಗೆ.. ಹೊಸ ಬೆಳಕಿನೊಂದಿಗೆ. **************************************   

ಹೊಸ ಭರವಸೆಯೊಂದಿಗೆ.. Read Post »

ಇತರೆ, ಜೀವನ

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ

ಬುಡಕಟ್ಟು ಜನಾಂಗದ ಬಗ್ಗೆ ಬೆಳಕು ಚೆಲ್ಲುವ ಲೇಖನ ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ ಆಶಾ ಸಿದ್ದಲಿಂಗಯ್ಯ ಕಾಡುಗೊಲ್ಲ ಬುಡಕಟ್ಟು ಜನಾಂಗವು ತುಮಕೂರು, ಮತ್ತು ಚಿತ್ರದುರ್ಗ,ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಗೊಂಡಿದ್ದಾರೆ ಉಳಿದಂತೆ   ದಾವಣಗೆರೆ, ಬಳ್ಳಾರಿ ಗಡಿಭಾಗ  ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ರಾಮನಗರ  , ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ವಿರಳವಾಗಿ ಕಾಣಸಿಗುತ್ತಾರೆ. ಒಟ್ಟಾರೆ ಕರ್ನಾಟಕದಲ್ಲಿ ಇವರ ಜನಸಂಖ್ಯೆ ಹತ್ತು ಲಕ್ಷ ಇದೆ. ಕಾಡುಗೊಲ್ಲರನ್ನು ಮುನ್ನೆಲೆಗೆ ತರಲು  ಮತ್ತು ಸರ್ಕಾರ ಅವರನ್ನು ಗುರುತಿಸಲು ಹಿಂದುಳಿದ  ವರ್ಗಗಳ ಶಾಶ್ವತ  ಆಯೋಗದ ಮಾಜಿ ಅಧ್ಯಕ್ಷರಾದ ಸಿ. ಎಸ್ ದ್ವಾರಕನಾಥ ರವರು, ಚಲನಚಿತ್ರ ನಟರಾದ ಚೇತನ್ ಅಹಿಂಸಾರವರು, ಮತ್ತು ಕಾಡುಗೊಲ್ಲ ಆಸ್ಮಿತೆ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ಕೆ. ನಾಗಣ್ಣರವರು ಇನ್ನು ಅನೇಕರು ಹೋರಾಟ ಮಾಡಿದ್ದಾರೆ. ಅವರ ಹೋರಾಟದಿಂದಾಗಿ  ಸರ್ಕಾರ ಕಾಡುಗೊಲ್ಲರನ್ನು ಪ್ರತ್ಯೇಕಿಸಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. .  ಸಂಧರ್ಭದಲ್ಲಿ ಕಾಡುಗೊಲ್ಲ ಹೋರಟಗಾರರಲ್ಲಿ ಹಿರಿಯರಾದಂತಹ ದಿವಗಂತ ನಾಗಪ್ಪರವರನ್ನು ಸ್ಮರಿಸಬೇಕು. ಈಗಲೂ ಕೂಡ ಕಾಡುಗೊಲ್ಲರ ಹಟ್ಟಿಗೆ ಹೋದರೆ ಈ ರೀತಿಯ ಗುಡಿಸಲುಗಳನ್ನು ಕಣ್ಣಾರೆ ನೋಡಬಹುದು. ಒಂದು ಕಡೆ ಮೂಢನಂಬಿಕೆಯಾದರೂ ಬುಡಕಟ್ಟು ಜೀವನವನ್ನು ಉಳಿಸಿಕೊಂಡಿರುವ ಜನಾಂಗ. ಇವತ್ತಿಗೂ ಕಾಡುಗೊಲ್ಲ ಜನಾಂಗದವರು ಬಾಣಂತಿಯರನ್ನು ಈ ಗುಡಿಸಲಿನಲ್ಲಿ 2 ವರೆ ತಿಂಗಳು ಬಿಡುತ್ತಾರೆ  ಇದು ಆಧುನಿಕ ನಾಗರೀಕ ಸಮಾಜಕ್ಕೆ ಮೂಡನಂಬಿಕೆಯಾಗಿ ಕಂಡರೂ  ಬುಡಕಟ್ಟು ಸಮುದಾಯವೋಂದು  ಆದಿಮಾನವನ ಅವಾಸಸ್ಥಾನವನ್ನು ನೆನಪಿಸಿಕೊಳ್ಳುವ ಸಾಂಕೇತಿಕವಾದ ಆಚರಣೆಯ ರೀತಿ ಕಾಣುತ್ತದೆ  ಇಂತಹ  ಅನಾದಿಕಾಲದ ಬುಡಕಟ್ಟು ಜೀವನವಿಧಾನವನ್ನು ಉಳಿಸಿಕೊಂಡು ಬರುತ್ತಿರುವ ಕರ್ನಾಟಕದ ಏಕೈಕ ಬುಡಕಟ್ಟು ಎಂದರೆ ಅದು ಕಾಡುಗೊಲ್ಲರು ಮಾತ್ರ  ಇದು ಕೆಲವೊಮ್ಮೆ ತನ್ನನ್ನೇ ತಾನು ಶೋಷಣೆ ಮಾಡಿಕೊಳ್ಳುವ ಕ್ರಮವಾಗಿಯೂ ಕಾಣುತ್ತೆ.  ಕಾಡುಗೊಲ್ಲರು ಅನಾದಿ ಕಾಲದಿಂದ ಪಾಲಿಸಿಕೊಂಡು ಬಂದಂತಹ ಧಾರ್ಮಿಕ ನಂಬಿಕೆಯನ್ನು ಗೌರವಿಸೋಣ. ಕಾಡುಗೊಲ್ಲರ ಆರಾಧ್ಯದೈವ ಜುಂಜಪ್ಪ, ಕಾಡುಗೊಲ್ಲರ ದೇವರ ಇಷ್ಟದ ಹೂವು ಸಾದ ಪುಷ್ಪ, ನಮ್ಮ ಬುಡಕಟ್ಟು ದೇವರುಗಳನ್ನು ಮುನ್ನೆಲೆಗೆ ತರೋಣ. ಗುಡಸಲಿನಲ್ಲಿ ಕಾಡಿನಲ್ಲಿ ಜನ್ಮ ತಳೆಯುವ ಕಾಡುಗೊಲ್ಲರ ಮಕ್ಕಳು ಕಷ್ಟ ಸಹಿಷ್ಣುತೆ ಹೊಂದಿರುತ್ತಾರೆ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ.ಕಷ್ಟವನ್ನು ಎದುರಿಸುವ ಅವರ ಗುಣ ಅವರ ಪ್ರಬುದ್ಧತೆಯನ್ನು ತೋರುತ್ತದೆ. ಬ್ರಾಹ್ಮಣ್ಯವನ್ನು ಮರುಪ್ರಶ್ನೆ ಮಾಡದೇ ಪಾಲಿಸುವ ಜನರು ಬುಡಕಟ್ಟು ಜನಾಂಗದ ಧಾರ್ಮಿಕ ಭಾವನೆಗಳ ನಂಬಿಕೆಯನ್ನು ಪ್ರಶ್ನಿಸುತ್ತಾರೆ. ಬುಡಕಟ್ಟು ಜನಾಂಗದ ಬಗ್ಗೆ ಅನ್ವೇಷಣೆ ಮಾಡುತ್ತ ಹೊದಂತೆ ಕಾಡಿನೊಂದಿಗೆ ಅವರ ಒಡನಾಟ ಪ್ರಕೃತಿಯೊಂದಗಿನ ಅವಿನಾಭಾವ ಸಂಬಂಧವನ್ನು ಪರಿಚಯಿಸುತ್ತದೆ. ಆಧುನಿಕ ಸಮಾಜದ ಜೀವನದ ಜಂಜಾಟದಲ್ಲಿ ನಾಲ್ಕು ಜನ ಏನಾನ್ನುತ್ತಾರೊ ಎಂಬ ಭಯದಲ್ಲಿ ಜನರನ್ನ ಮೆಚ್ಚಿಸುವ ಬಗ್ಗೆಯೇ ಯೋಚಿಸುತ್ತಾ ಜೀವನ ಸವೆಸುವ ಅದೆಷ್ಟೋ ಮಧ್ಯಮ ವರ್ಗದ ಜನ ನಮ್ಮ ನಡುವೆ ಇದ್ದಾರೆ. ಇದನ್ನೆಲ್ಲಾ ನೋಡಿದಾಗ ಬುಡಕಟ್ಟು ಜೀವನ ಶೈಲಿ, ಒತ್ತಡವಿಲ್ಲದ, ಪ್ರಕೃತಿ ಪರವಾದ ಜೀವನ ಪ್ರತಿಯೊಬ್ಬರಿಗೂ ಆದರ್ಶಮಯ. ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ಒಂದು ಮನೆಯಲ್ಲಿರುವ ಸಾಮಾಜಿಕ ಘಟಕವನ್ನು ಮನೆಜನ ಎಂದು ಕರೆಯಲಾಗುತ್ತದೆ. ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನಪ್ರಾಣಿಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ ಗುಹೆಗಳೂ ಇವನ ತಂಗುದಾಣಗಳಾದುವು. ಆಹಾರಕ್ಕಾಗಿ ಅಲೆಮಾರಿಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಆವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು. ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಆವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ. ನೀಲಗಿರಿ ಬೆಟ್ಟಗಳಲ್ಲಿನ ತೋಡ ಜನಾಂಗದವರ ಗುಡಿಸಲಿನಂತೆಯೇ ಕಾಡುಗೊಲ್ಲರ ಗುಡಿಸಲು ಇದೆ. ಈಗಲೂ ಇದೇ ರೀತಿಯ ಗುಡಿಸಲುಗಳನ್ನು ನಾವು ನಮ್ಮ ಕಾಡುಗೊಲ್ಲ ಜನಾಂಗದ ಗುಡಿಸಲಿನಲ್ಲಿಯೂ ಕಾಣಬಹುದು. ಆದಿವಾಸಿತಾಣಗಳು ಪ್ರವಾಸತಾಣಗಳಾಗಲಿ. ಆ ಮೂಲಕ ಬುಡಕಟ್ಟು ಜನಾಂಗ ಮುನ್ನೆಲೆಗೆ ಬರಲಿ,ಅವರ ಅಭಿವೃದ್ಧಿ ಬಗ್ಗೆ ಸರಕಾರ ಗಮನ ಹರಿಸಲಿ. ************************************************

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ Read Post »

ಇತರೆ, ಜೀವನ

ದೊಡ್ಡವರ ಮನೆಯ ಸಣ್ಣ ಕತೆ

ಅನುಭವ ದೊಡ್ಡವರ ಮನೆಯ ಸಣ್ಣ ಕತೆ ವೀಣಾ ನಿರಂಜನ್ ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ. ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ ಸಿದ್ಧ ಮಾಡಿ ಕೊಳ್ಳುತ್ತಿದ್ದಳು. ನಡು ನಡುವೆ ಮಗನನ್ನು ಮಾತನಾಡಿಸುತ್ತ ಮಾತಲ್ಲೇ ಮುದ್ದುಗರೆಯುತ್ತಿದ್ದಳು. ಹಾಗೆಯೇ ತಿಂಡಿ ತಯಾರಿಸುತ್ತಿದ್ದ ಶರಾವತಿ ತರಕಾರಿ ಮಾರಲು ಬಂದವನೊಡನೆ ಐವತ್ತು ರೂಪಾಯಿಗೆ ಚೆನ್ನಾಗಿ ಚೌಕಾಶಿ ಮಾಡಿ ಕೊಂಡಳು. ಮಗನಿಗೆ ಸಾವಿರಾರು ರೂಪಾಯಿಗಳ ಇಂಪೋರ್ಟೆಡ್ ಫುಡ್ ನಿಂದ ಬ್ರೆಕ್ ಫಾಸ್ಟ್ ತಯಾರಿಸಿದಳು. ಅದು ಇಂಪೋರ್ಟೆಡ್ ಅಲ್ವಾ, ನೀಟಾಗಿ ಜಬರ್ದಸ್ತಾಗಿ ಪ್ಯಾಕ್ ಮಾಡಿದ ಫುಡ್. ಅದರಲ್ಲಿ ಚೌಕಾಶಿ ಇರುವುದಿಲ್ಲ. ಇದರ ಮಧ್ಯೆಯೇ ಕೆಲಸಕ್ಕೆ ಬಂದ ಹೊನ್ನಮ್ಮಳಿಗೆ ಮಹಡಿ ಮೇಲಿನ ರೂಂಗಳನ್ನು, ಬಾಲ್ಕನಿ, ಫೊರ್ಟಿಕೊ ಎಲ್ಲವನ್ನೂ ಗುಡಿಸಿ ಒರೆಸುವಂತೆ ನಿರ್ದೇಶಿಸಿದಳು. ಹಾಗೇ ವಾರಕ್ಕೆ ಒಂದೆರಡು ಸಲ ಮಾತ್ರ ಆ ಕೆಲಸವಾದ್ದರಿಂದ ಹೊನ್ನಮ್ಮನ ಸಂಬಳವನ್ನು ತುಸು ಎಳೆದಾಡಿ ಇಷ್ಟು ಅಂತ ಗೊತ್ತು ಮಾಡಿದಳು. ಸಂಜೆಯಾಗುತ್ತಿದ್ದಂತೆ ಬಂದವರಿಗೆಂದು ಆರ್ಡರ್ ಮಾಡಿದ ಅಗ್ಗದ ಕೇಕು, ಮನೆಗೆಂದು ಆರ್ಡರ್ ಮಾಡಿದ ಪೇಸ್ಟ್ರಿ ಎಲ್ಲವೂ ಬಂದವು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಡಗರದಿಂದ ಓಡಾಡುತ್ತಿದ್ದರು. ಅತಿಥಿಗಳು ಬಂದು ಸೇರಿದ ಮೇಲೆ ಭರ್ಜರಿ ಪಾರ್ಟಿ ನಡೆಯಿತು. ಬರ್ಥಡೇ ಬಾಯ್ ಜೊತೆಗೆ ಮನೆಯವರ, ಅತಿಥಿಗಳ ಫೋಟೋ ಶೂಟ್ ಆಯಿತು. ಎಲ್ಲರೂ ಡಿನ್ನರ್ ಗೆಂದು ಕುಳಿತಾಗ ಒಂದು ಅಹಿತಕರ ಘಟನೆ ನಡೆದು ಬಿಟ್ಟಿತು. ಮೇಲೆ ಓಪನ್ ಬಾಲ್ಕನಿಯಲ್ಲಿ ನಡೆಯುತ್ತಿದ್ದ ಡಿನ್ನರ್ ಗೆ ಎಲ್ಲಿಂದಲೋ ಮೂರು ಕೋತಿಗಳು ಪ್ರತ್ಯಕ್ಷವಾಗಿ ಕಿಸ್ ಕಿಸ್ ಎಂದು ಗುರುಗುಟ್ಟ ತೊಡಗಿದವು. ಶೇಖರ್ ಬಾಬು ಮಗನನ್ನು ಕೋತಿಗಳನ್ನು ಓಡಿಸಲು ಛೂ ಬಿಟ್ಟರು. ಕೋತಿಗಳು ಅವನನ್ನು ನೋಡಿ ಮತ್ತೊಮ್ಮೆ ಕಿಸ್ ಎಂದವು. ಅವನು ಹೆದರಿ ಶರಾವತಿಯ ಕಾಲ ಬುಡದಲ್ಲಿ ಸುತ್ತುತ್ತಾ ಕುಂಯ್ ಗೂಡ ತೊಡಗಿದ. ಶೇಖರ್ ಬಾಬು ಒಮ್ಮೆಲೇ ಕೋಪದಿಂದ ಗುಡುಗಿದರು, ” ಥೂ  ನೀನೆಂಥ ನಾಯಿಯೋ ಬೊಗಳೋ ಬೊಗಳು”. ಅತಿಥಿಗಳು ಉಕ್ಕಿ ಬರುವ ನಗೆಯನ್ನು ತಡೆಯುತ್ತ ಸಭ್ಯತೆ ಮೆರೆದರು. ಶರಾವತಿ ಕಣ್ಣಂಚಿನ ನೀರು ತುಳುಕುವುದನ್ನು ತಡೆದಳು! ************************************************************************

ದೊಡ್ಡವರ ಮನೆಯ ಸಣ್ಣ ಕತೆ Read Post »

ಇತರೆ, ಜೀವನ

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ. ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ. ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ.. ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ ಇರುತ್ತವೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ. ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು. ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ. ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು!…… (ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ) ****************************************

ಶರದದ ಹಗಲಲ್ಲಿ ಆಷಾಢದ ಮೋಡಗಳು… Read Post »

ಇತರೆ, ಜೀವನ

ಅಂಕಣ ಬರಹ–02 ಶಾಂತಿ ವಾಸು ಹೋದ ಅಂಕಣದಲ್ಲಿ ರೇಡಿಯೋ ನಮ್ಮ ಜೀವನವನ್ನು ಆಕ್ರಮಿಸಿದ ಕಾಲ ಹಾಗೂ ರೀತಿಯನ್ನು ನೋಡಿದೆವು. ನಮ್ಮನ್ನು ಆಧುನಿಕ ಕಾಲದ ಪ್ರತಿನಿಧಿಗಳನ್ನಾಗಿಸಿದ ರೇಡಿಯೋ ಬಗ್ಗೆ ಈಗ ಇನ್ನಷ್ಟು ವಿಷಯಗಳನ್ನು ತಿಳಿಯೋಣ ಬನ್ನಿ. ಸಂಶೋಧನೆಗಾಗಿ ನೋಬಲ್ ಪ್ರಶಸ್ತಿ ಪಡೆದ ಇಟಲಿಯ  ಗೂಗ್ಮಿಯೆಲ್ಮೋ ಮಾರ್ಕೋನಿಯಿಂದ 1885 ರಲ್ಲಿ ತಂತಿರಹಿತ ಸಂದೇಶ ರವಾನಿಸುವ ಮೂಲಕ ಕಂಡುಹಿಡಿಯಲ್ಪಟ್ಟ ರೇಡಿಯೋ ಎಂಬ ಒಂದು ಅದ್ಭುತವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಭೌತವಿಜ್ಞಾನಿ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ, ದೂರಸಂಪರ್ಕ ಹಾಗೂ ರೇಡಿಯೋ ವಿಜ್ಞಾನಿ ಸರ್. ಜಗದೀಶ್ ಚಂದ್ರ ಬೋಸ್ ಅವರ ಕೊಡುಗೆ ರೇಡಿಯೋ ಹಾಗೂ ದೂರ ಸಂಪರ್ಕದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರವಾದದ್ದು. ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಹಾಗೂ ತಮ್ಮ ಸಂಶೋಧನೆಗಳಿಗೆ ಅಗತ್ಯವಾದ ಉಪಕರಣಗಳನ್ನು ತಾವೇ ಸ್ವತಃ ಕಂಡು ಹಿಡಿದುಕೊಂಡಿದ್ದ ಮಹಾಜ್ಞಾನಿ, ಅಧ್ಯಾತ್ಮ ಚಿಂತಕ, ನಮ್ಮ ಭಾರತದ ಹೆಮ್ಮೆಯ ಪುತ್ರ “ಜ್ಞಾನ ಯಾರ ಸ್ವತ್ತೂ ಅಲ್ಲ. ಅವರವರ ಶ್ರಮದ ಪ್ರತಿಫಲ ಅವರವರಿಗೆ” ಎಂದು ಜಗತ್ತಿಗೆ ಸಾರಿದ, ಪ್ರತಿಷ್ಠಿತ ನೈಟ್ ಹುಡ್ ಪ್ರಶಸ್ತಿಯೊಂದಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿ, ಕಲ್ಕತ್ತಾದಲ್ಲಿ “ಬೋಸ್ ಇನ್ಸ್ಟಿಟ್ಯೂಟ್” ಆರಂಭಿಸಿದ ನಮ್ಮ ಭಾರತದ ಹೆಮ್ಮೆಯ ಸಸ್ಯ ವಿಜ್ಞಾನಿ ಇವರು ಎಂಬುದು ಹೆಮ್ಮೆ ಪಡತಕ್ಕ ವಿಷಯ. ರೇಡಿಯೋದ ಕಾರ್ಯವಿಧಾನ, ಉಪಯೋಗಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ 1932ರಲ್ಲಿ ಮಂಗಳೂರಿನ ವಿದ್ವಾನ್. ಹೊಸಬೆಟ್ಟು ರಾಮರಾವ್ ಅವರು “ಆಕಾಶವಾಣಿ” ಎಂಬ ಹೆಸರಿನ ಸುಮಾರು 20 ಪುಟಗಳ ಒಂದು ಪುಸ್ತಕವನ್ನು ಬರೆದಿದ್ದರು . ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾಕ್ಟರ್ ಎಂ.ವಿ.ಗೋಪಾಲಸ್ವಾಮಿಯವರು ದೇಶಕ್ಕೆ ಹೊಸತನ್ನು ಪರಿಚಯಿಸುವ ಸಲುವಾಗಿ ಲಂಡನ್ನಿನಿಂದ ಕಡಿಮೆ ವಿದ್ಯುತ್ ಬಳಕೆಯ “ಟಾಲ್” ಎಂಬ ಟ್ರಾನ್ಸಮೀಟರನ್ನು ತಂದು 1935 ಸೆಪ್ಟೆಂಬರ್ 10ರಂದು, ರಾಷ್ಟಕವಿ ಕುವೆಂಪುರವರಿಂದ ಕವನವಾಚನ ಮಾಡಿಸುವ ಮೂಲಕ ಭಾರತ ದೇಶದ ಮೊದಲ ಬಾನುಲಿ ಕೇಂದ್ರವನ್ನು ಮೈಸೂರಿನ ತಮ್ಮ ವಿಠ್ಠಲವಿಹಾರ ಮನೆಯಲ್ಲಿ ಸ್ಥಾಪಿಸಿದರು. ಆಗಿನ ಮೈಸೂರಿನ ಮಹಾರಾಜರು ಸ್ವತಃ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು ಅದನ್ನು ಆಲಿಸಿದ್ದರು ಎಂಬುದು ವಿಶೇಷ. ಬಾನಿನಿಂದ ತರಂಗಗಳು ಹೊತ್ತು ತಂದ ಉಲಿಯನ್ನು ರೇಡಿಯೋದಲ್ಲಿ ಕೇಳಬಹುದಾದ ಅದ್ಭುತವನ್ನು ಅಂದಿನ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ, ಸಾಹಿತಿ ನಾ. ಕಸ್ತೂರಿಯವರು “ಆಕಾಶವಾಣಿ” ಎಂದು ಕರೆದರು. ಭಾನುವಾರ ಹೊರತು ಪಡಿಸಿ, ಮಿಕ್ಕ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣವನ್ನು ಪ್ರಸಾರ ಮಾಡುತ್ತಿದ್ದ ಬಾನುಲಿ ಕೇಂದ್ರವನ್ನು ಸ್ವಾತಂತ್ರ್ಯಾ ನಂತರ ಅಂದರೆ 1950 ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಿಸಲಾಯಿತು. ಹಾಗೂ 1956 ರಲ್ಲಿ ಕೇಂದ್ರಸರ್ಕಾರವು “ಆಕಾಶವಾಣಿ” ಎಂಬ ಹೆಸರನ್ನೇ ಅಧಿಕೃತವಾಗಿ ಘೋಷಣೆ ಮಾಡಿತು. ದಾಖಲೆಗಳ ಪ್ರಕಾರ 1954 ರಲ್ಲಿ ಭಾರತದ ಮೊದಲ ವ್ಯಾಪಾರಿ ರೇಡಿಯೋ ಅಂದರೆ ಆಂಟೆನೋ ಇದ್ದ ಕಮರ್ಷಿಯಲ್ ಟ್ರಾನ್ಸಿಸ್ಟರ್  ಮಾರಾಟವಾಯಿತು. ಇದನ್ನು ಹೋದ ಕಡೆಯಲ್ಲೆಲ್ಲ ಹೊತ್ತು ಹೋಗಬಹುದಾದರಿಂದ, ಹಾಗೂ ದರದ ದೃಷ್ಟಿಯಿಂದ ಅಗ್ಗವಾಗಿದ್ದ ಟ್ರಾನ್ಸಿಸ್ಟರ್ ಎಂಬುದು ಆ ದಿನಗಳಲ್ಲಿ ಒಂದು ಮನರಂಜನಾ ವಸ್ತುವಾಗಿ ಬಹುದೊಡ್ಡ ಮಾರುಕಟ್ಟೆಯೊಂದಿಗೆ ಬಹು ಜನಪ್ರಿಯತೆಯ ಕೇಂದ್ರ ಬಿಂದುವಾಯಿತು. ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ದೃಷ್ಟಿಯಿಂದ ಆರಂಭವಾದ ರೇಡಿಯೋ ಎಂಬ ಆ ಕಾಲದ ಆಧುನಿಕ ತಂತ್ರಜ್ಞಾನವು, ಜಾಹೀರಾತು ಪ್ರಪಂಚಕ್ಕೆ ಭದ್ರವಾದ ಅಡಿಗಲ್ಲನ್ನು ನೆಟ್ಟಿತು. ಜಾಹೀರಾತುಗಳನ್ನು ಕೇವಲ ಕೇಳಬಹುದಾಗಿದ್ದ ಆ ಕಾಲಘಟ್ಟದಲ್ಲಿ ಆಲ್ ಇಂಡಿಯಾ ರೇಡಿಯೋ (A.I.R)ದ ಭಾಗವಾಗಿ 1959ರಲ್ಲಿ ದೂರದರ್ಶನವನ್ನು ಆರಂಭಿಸಲಾಯಿತು. ಇದು ಕೂಡ ವಾಣಿಜ್ಯ ದೃಷ್ಟಿಯಿಂದಲೇ ಸ್ಥಾಪಿತವಾದದ್ದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಾಗಿ ಮೊದಲೇ ಹೇಳಿದ ಜಾಹೀರಾತಿನೊಂದಿಗೆ ದೂರದರ್ಶನದಲ್ಲಿ ಡಾಬರ್ ಚವನ್ ಪ್ರಾಶ್, ನಿರ್ಮಾ ವಾಷಿಂಗ್ ಪೌಡರ್ ವಿಕೋ ಟರ್ಮರಿಕ್ ಕ್ರೀಮ್, ಲಿರಿಲ್ ಸೋಪು ಹಾಗೂ ಸಿಯಾರಾಂ ಸೂಟಿಂಗಿನ ಜಾಹೀರಾತು ಕೂಡ ಸೇರಿಕೊಂಡದ್ದು ಹೌದಲ್ಲವೇ? ಆಗಿನ ಜನರಿಗೆ ಆದ ಹೊಸ ಹೊಸ ಅವಿಷ್ಕೃತ ವಸ್ತುಗಳ ಪರಿಚಯ, ನೋಡುವ ಮುಟ್ಟುವ ಉತ್ಸಾಹ,  ಉಪಯೋಗಿಸುವಾಗಿನ ಪುಳಕ ಈಗೊಂದೂ ಇಲ್ಲ. ಏಕೆಂದರೆ ಕೆಲವೇ ಕೆಲವನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಗಿನದ್ದರ ಸುಧಾರಿತ ವ್ಯವಸ್ಥೆ ಹಾಗೂ ರೂಪಾಂತರ ಅಷ್ಟೇ ಆಗಲೀ ಯಾವುದೂ ಹೊಸತಲ್ಲ.  ಶ್ರೀಸಾಮಾನ್ಯರಿಗಾಗಿಯೇ, ರೇಡಿಯೋಗಳ ನಿಗದಿತ ಕಾರ್ಯಕ್ರಮಗಳ ಏಕತಾನತೆಯನ್ನು ಹೋಗಲಾಡಿಸವ ಸಲುವಾಗಿ, ಸುಧಾರಿತ ಹಾಗೂ ಉತ್ತಮಗುಣಮಟ್ಟದ ಕಾರ್ಯಕ್ರಮ ರೂಪಿಸುವ ಹಾಗೂ ಸರ್ಕಾರದ ವರಮಾನವನ್ನು ಹೆಚ್ಚುಮಾಡುವ ಹೆಚ್ಚು ಸ್ಪಷ್ಟತೆಯ ಎಫ್. ಎಂ (frequency modulation ಆವರ್ತನ ಮಾಡ್ಯುಲೇಶನ್) ಕೇಂದ್ರಗಳು ಸ್ಥಾಪಿತವಾದವು. MHz(ಮೆಗಾಹರ್ಡ್ಜ್) ತರಂಗಾಂತರದ ಮೇಲೆಯೇ ಇಂದಿಗೂ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಎಫ್.ಎಂ. ರೇಡಿಯೋಗಳು ಹಾಗೂ ದೂರದರ್ಶನದ ಹಲವಾರು ಚಾನೆಲ್ಲುಗಳಿಗೆ ಜಾಹೀರಾತುಗಳಿಂದ ಬರುವ ಹಣವೇ ಜೀವಾಳ ಹಾಗೂ ಹಿರಿಮೆ. ********************************************************

Read Post »

ಇತರೆ, ಜೀವನ

ಬದುಕು ಎಷ್ಟೊಂದು ಸುಂದರ

ಲೇಖನ ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ ಆಗ ಬದುಕು ಎಷ್ಟೊಂದು ಸುಂದರ. ಪಲ್ಲವಿ ಪ್ರಸನ್ನ ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ. ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ  ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು. ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ ಸವಿಯುತ್ತ ಅದರಲ್ಲಿ ನಿಮ್ಮ ಪರಕಾಯ ಪ್ರವೇಶವಾಗುವಂತೆ ಓದಿದರೆ ಆ ಓದಿನಲ್ಲೂ ಒಂಥರಾ ನಿರಾಳ.ಆಕಳು ಕರೆಯುವಾಗಲೂ ಸಹ ಹಾಡುಹೇಳಿಕೊಳ್ಳುತ್ತಾ ಅದರ ಮೈ ದಡವಿ ,ಅದ್ಭುತ ಅನುಭವ ನಿಮಗಾಗುತ್ತದೆ. ಮಗು ನೀವೊಬ್ಬರೆ ಇರುವಾಗ ಅಪ್ಪಿಕೊಂಡು ಮುದ್ದು ಮಾಡುವುದ ಅನುಭವಿಸಿ ನೋಡಿ ಅದು ಬಿಟ್ಟು ನನಗೆ ಕೆಲಸ ಇದೆ ಹೋಗೋ ಆಚೆ ಎಂದು ದೂರ ತಳ್ಳಿದರೆ ಪಾಪ ಮಗುವಿಗೂ ಬೇಸರ ನಿಮಗೂ ಕಳವಳ.ನನ್ನ ಮಗನಿಗೆ ನಾನು ಅವನು ಮಲಗಿ ನಿದ್ರಿಸುವಾಗ ಸಣ್ಣದಾಗಿ ಮುತ್ತು ಕೊಡಬೇಕೆನಿಸುತ್ತದೆ ,ನನ್ನ ಯಜಮಾನರು ಮಲಗಿರುವವನ ಏಕೆ ಮುದ್ದೀಸ್ತೀಯಾ ಅಂತ ಬಯ್ದರೂ ಮೆಲ್ಲಗೆ ಎಚ್ಚರ ಆಗದಂತೆ ಪಪ್ಪಿ ಕೊಡುತ್ತೇನೆ .ಇದರಲ್ಲೇ ಏನೋ ಒಂಥರಾ ಹಿತ .ನೀವೂ ಅನುಭವಿಸಿ ನೋಡಿ. ಹಾಗೆಯೇ  ತರಕಾರಿ ಗಿಡಕ್ಕೆ ನೀರುಣಿಸುವುದು, ಹೂವಿನ ಗಿಡದ ಆರೈಕೆಯಲ್ಲಿ ಹೂವು ನಳ ನಳಿಸುವಂತಾದರೆ ಅದರ ಸೌಂಧರ್ಯವನ್ನು ಆಸ್ವಾಧಿಸುತ್ತ ,ನಮಗೆ ಎಷ್ಟು ಸಮಯವಿದ್ದರೂ ಅದು ಕಡಿಮೆಯೇ, ಹಾಗೆಯೇ ಏನಾದರೂ ಬರೆಯುವ ಹವ್ಯಾಸವಿದ್ದರೆ ಒಂಟಿಯಾಗಿ ಕುಳಿತು ಅನುಭವಿಸಿ ಬರೆದಾಗ ನಾಲ್ಕು ಜನರು ಚೆಂದ ಬರಿದ್ಯೆ ಎನ್ನುವ ಮಾತು ನಮ್ಮಲ್ಲಿ ಸಾರ್ಥಕ್ಯ ಭಾವನೆ ,ಸ್ಫೂರ್ತಿ ಮೂಡಿಸುತ್ತದೆ .ಇಷ್ಟೆಲ್ಲದರ ಮಧ್ಯೆ ನಮಗೆ ಬೇರೆಯವರ ಸುದ್ಧಿ ಹೇಳಲು ,ಕೇಳಲು ಸಮಯವೂ ಇರುವುದಿಲ್ಲ,ಇದ್ದರೂ ಇದು ಕಾಲ ಹರಣದ ಜೊತೆ ನಮ್ಮ ನೋವಿಗೆ ಕಾರಣ. ಯಾರೇನೆಂದರೂ ಒಂಟಿಯಾಗಿ ನಮ್ಮ ಚಟುವಟಿಕೆಯಲ್ಲಿ ತೊಡಗುವುದೇ ಉತ್ತಮ. ಮೌನಕ್ಕಿಂತ ಸುಂದರ ಮಾತಿಲ್ಲ.ಕಾಡಿ ಬೇಡಿ ಪಡೆಯುವ ಮಿತ್ರರಿಗಿಂತ ,ನೆರೆ ಹೊರೆ ಯವರಿಗಿಂತ ನಿಸರ್ಗ ತುಂಬಾ ನಿಸ್ವಾರ್ಥಿ ,ಅದು ನಮಗೆ ಏನೆಲ್ಲ ಕೊಟ್ಟಿತು ,ಏನೂ ಬಯಸುವುದಿಲ್ಲ ,ನಿಮ್ಮದೇ ತೋಟ ಇದ್ದರೆ ಒಂದು ಸುತ್ತು ತಿರುಗಿ ಹಸಿರನ್ನು ಆಸ್ವಾದಿಸಿ . ಇನ್ನೂ ಅಡಿಗೆ ಕೂಡಾ ಪ್ರೀತಿಯಿಂದ ಮಾಡಿ ಬಡಿಸಿ ,ಅದರಲ್ಲಿ ಮನೆಯ ಜನಗಳ ತೃಪ್ತಿ ಗಮನಿಸಿ ಇದರಿಂದ ನೀವು ಊಟ ಮಾಡದಿದ್ದರೂ ನಿಮ್ಮ ಹೊಟ್ಟೆ ತುಂಬುತ್ತದೆ. ಸದಾ ಒಂದಲ್ಲಾ ಒಂದು ಕೆಲಸದಲ್ಲಿದ್ದರೆ ಯಾವ ಚಿಂತೆ ನೋವು ನಮಗೆ ಬಾಧಿಸುವುದಿಲ್ಲ.ಇದು ನಾನು ಕಂಡು ಕೊಂಡ ಸತ್ಯ. ಇದೇ ಅನಿವಾರ್ಯ,ಇದೇ ಸತ್ಯ,ಇದೇ ಜೀವನ ಎಂದು ನಮ್ಮ ಮನಸ್ಸಿಗೆ ನಾವೇ ಸಾಂತ್ವನಿಸುತ್ತ ಅಳುಕನ್ನು ದೂರ ಮಾಡುತ್ತಾ ಅಲ್ಲೊಂದು ಶಾಂತಿ,ಪ್ರೀತಿ ,ಸಹನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.ಆವಾಗ ನಿಮ್ಮ ಜೀವನ ಸದಾ  ಸುಂದರವಾಗಿರುತ್ತದೆ. *************************************

ಬದುಕು ಎಷ್ಟೊಂದು ಸುಂದರ Read Post »

ಜೀವನ

“ಉಳ್ಳವರು ಶಿವಾಲಯವ ಮಾಡುವರು”

ಅನಿಸಿಕೆ “ಉಳ್ಳವರು ಶಿವಾಲಯವ ಮಾಡುವರು” ವೀಣಾ ದೇವರಾಜ್           ನಿಜಕ್ಕೂ ಅಣ್ಣನ ಈ ವಚನವು ಬರಿಯ ಪುಸ್ತಕಗಳಿಗೆ ಮತ್ತು ಹಾಡುಗಾರರಿಗೇ ಸೀಮಿತವಾಗಿವೆ. ಕಾರ್ಯರೂಪಕ್ಕೆ ಬರುವುದೆಂದೊ. ಹಿರಿಯರು ‘ಉಳ್ಳವರು ಶಿವಾಲಯವ ಮಾಡುವರು ‘ ಎಂದರು, ಆದರೆ ಇಂದಿನ ಉಳ್ಳವರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಮಾತ್ರ ಆಲಯ ಮಾಡಿಕೊಳ್ಳುವರೇ ಹೊರತು ಸಮಾಜಕ್ಕಾಗಿ ಯಾವ ಉಪಯೋಗಕ್ಕೂ ಬಾರದು. ಇಂಥಹವರಿಂದ ಪರಿವರ್ತನೆ ಬಯಸುವುದು ಸಾಧ್ಯವೇ?        ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ ದಂಪತಿಗಳು, ದಾಸೋಹ ಮಾಡುವ ಶಕ್ತಿ ಇರದಿದ್ದರೂ ಅಂತಹ ಮನಸ್ಸಿತ್ತು. ಲಕ್ಕಮ್ಮತನ್ನ ಬಿಡುವಿನ ಸಮಯದಲ್ಲಿ ಹೊಲಗಳಲ್ಲಿ ಕಟಾವು ಮಾಡುವಾಗ, ಭತ್ತದರಾಶಿ ಮಾಡುವಾಗ ಸುತ್ತಮುತ್ತ ಹಾರಿಬಿದ್ದ ಕಾಳುಗಳನ್ನು ಆಯ್ದು ತಂದು ದಾಸೋಹ ಮಾಡುತ್ತಿದ್ದರು. ಆಗ ಆಹಾರದ ಒಂದೊಂದು ಅಗುಳಿಗೂ ಬೆಲೆಯಿತ್ತು. ಯಾವುದನ್ನೂ ವೃಥಾ ಹಾಳುಮಾಡುತ್ತಿರಲಿಲ್ಲ. ಅವರಿವರೆನ್ನದೆ ಹಸಿದವರಿಗೆ ಉಣಬಡಿಸುವುದು ಸಹಜವಾಗಿತ್ತು.           ನಮ್ಮ ಈಗಿನ ಪೀಳಿಗೆಯಲ್ಲಿ ಅನ್ನ ಹಾಗೂ ಹಣದ ಬೆಲೆಯೇ ತಿಳಿಯದಾಗಿದೆ. ಕೆಲವರಿಗೆ ಅದೇನು ಪ್ರತೀಷ್ಟೆಯೊ, ಊಟದ ತಟ್ಟೆಯಲ್ಲಿ ಸ್ವಲ್ಪ ಊಟವನ್ನೊ ಇಲ್ಲ ಕುಡಿಯಲು ಕೊಟ್ಟ ಪಾನೀಯವನ್ನೊ ಸ್ವಲ್ಪ ಸ್ವಲ್ಪ ಬಿಡುವ ಅಭ್ಯಾಸವಿರುತ್ತದೆ. ಅದನ್ನು ಬಳಸುವ ಹಾಗೂ ಇಲ್ಲ. ಒಲ್ಲದ ಮನಸ್ಸಿನಿಂದ ಆಚೆಗೆ ಸುರಿಯ ಬೇಕಾಗುತ್ತದೆ. ಮೊದಲಿನಂತೆ ಹಸುಗಳಿಗೆ ಮುಸುರೆ ನೀರೆಂದು ಕೊಂಡು ಹೋಗುವವರೂ ಇಲ್ಲವಾಗಿದ್ದಾರೆ.        ಮನೆಯಲ್ಲಿನ ಕಸದ ಬುಟ್ಟಿಗೆ ಹಾಕಿ, ಜಿರಲೆಗಳ ಸಂತತಿಗೆ ಪೌಷ್ಟಿಕ ಆಹಾರ ಉಣಬಡಿಸಿ, ಮನೆಯ ಸದಸ್ಯರು ನಾಲ್ವರಾದರೆ ಅವುಗಳ ಸಂಖ್ಯೆ ನಾನೂರಾಗಿ, ಅವನ್ನು ತಿನ್ನಲು ಹಲ್ಲಿಗಳೂ ಬಂದು ‘ ಮಕ್ಕಳಿರಲವ್ವ ಮನೆ ತುಂಬ’ ಎನ್ನುವ ನಾಣ್ನುಡಿ  ಬದಲಿಗೆ ‘ಜಿರಲೆ ಹಲ್ಲಿಗಳಿರಲವ್ವ ಮನೆ ತುಂಬ’ಎನ್ನಬೇಕಾಗುತ್ತದೆ.         ಅಷ್ಟೇ ಆದರೆ ಹೇಗೋ ಆದೀತೇನೋ! ಮಾರನೆಯ ಬೆಳಗಿನಲ್ಲಿ ಜೋರು ದ್ವನಿಯಲ್ಲಿ ‘ಕಸ’ ಎಂದು ಬೈದಾಡಿಕೊಂಡು, ಕೂಗಾಡಿಕೊಂಡು  ಮನೆಯ ಕಸ ತೆಗೆದುಕೊಂಡು ಹೋಗಲು ಬರುವ ನಮ್ಮ ಮಹಾ ನಗರ ಪಾಲಿಕೆಯ ಬಜಾರಿ ಸುಬ್ಬಮ್ಮನಿಗೆ (ಕ್ಷಮೆ ಇರಲಿ), ಹೆದರಿಕೊಂಡು ಮೆತ್ತಗೆ ಹೋಗಿ ಬೀದಿ ಬದಿಯಲ್ಲಿ ಕಸದ ಚೀಲವನ್ನು ಇಟ್ಟು  ಬಂದೆವೊ ಬಚಾವು. ಸುಬ್ಬಮ್ಮನ ಕಣ್ಣಿಗೆ ಬಿದ್ದು, ಅದು ನಮ್ಮದೇ ಕಸ ಎಂದು ಗೊತ್ತಾಯಿತೊ ಮರ್ಯಾದೆ ಬೀದಿಗೆ ಬಂತು ಎಂದ ಹಾಗೇ. ನಮ್ಮ ಸುಬ್ಬಮ್ಮ ಬೀದಿಯ ಎಲ್ಲಾ ಹೆಂಗಳೆಯರಿಗೂ ಗಟವಾಣಿ ಅತ್ತೆ ಇದ್ದಂತೆಯೇ! ಅವಳಂದಂತೆ ಅನ್ನಿಸಿಕೊಂಡು ,ಎದುರು ಮಾತೂ ಆಡದೆ, ಅಕ್ಕಪಕ್ಕದವರೇನಾದರೂನೋಡುತ್ತಿದ್ದಾರೊ, ಯಾರಾದರೂ ಕೇಳಿಸಿಕೊಂಡರೊ ಎಂದು ಕತ್ತು ಆಚೀಚೆ ತಿರುಗಿಸಿ ನೋಡಿ ಸರಸರನೆ ಮನೆಯೊಳಗೆ ಸೇರಿಕೊಳ್ಳಬೇಕು.            ಅನ್ನಂ ಪರಃ ಬ್ರಹ್ಮಂ ; ಎನ್ನುವ ಮಾತನ್ನು ಅರ್ಥೈಸಿಕೊಂಡು, ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ತಟ್ಟೆಯಲ್ಲಿ ಊಟ ಬಿಡಬಾರದು, ಬೇಕಾದ್ದನ್ನು,ಬೇಕಾದಷ್ಟು ಮಾತ್ರವೇ ತಟ್ಟೆಯಲ್ಲಿ ನೀಡಿಸಿಕೊಳ್ಳಬೇಕು ಎಂದು ತಿಳಿಹೇಳಬೇಕು. ಚಿಕ್ಕಂದಿನಲ್ಲೇ ರೂಢಿಸಿಕೊಂಡಲ್ಲಿ ಸ್ವಲ್ಪವಾದರೂ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎಂಬಂತೆ ಒಬ್ಬೊಬ್ಬರಿಂದಲೂ ಒಂದೊಂದು ತುತ್ತು ಆಹಾರ ಉಳಿದರೆ ಹೆಚ್ಚಲ್ಲದಿದ್ದರೂ ದಿನಕ್ಕೆ ಒಂದು ಮನೆಯಲ್ಲಿ ಒಂದು ಹಿಡಿ ಧಾನ್ಯ ಉಳಿಯುತ್ತದೆ.            ಹಾಗೇ ಉಳ್ಳವರು ಮಾತ್ರವಲ್ಲದೇ ಎಲ್ಲರೂ ತಮ್ಮಕೈಲಾದಷ್ಟು ಹಣ ದಾನಮಾಡಿ ಧರ್ಮಛತ್ರಗಳನ್ನು ಕಟ್ಟಬಹುದು, ಹಸಿದವರಿಗೆ ಎರಡು ತುತ್ತು ಅನ್ನ ನೀಡಬಹುದು. ಈ ಶತಮಾನದ ಮಹಾ ಮಾರಿ ಬಂದು ಎಷ್ಟೊ ಜನರಿಗೆ ಪಾಠ ಕಲಿಸಿದೆ. ‘ನಡೆದಾಡುವ ದೇವರಂ’ತವರೂ ನೂರಾರು ಜನರು ಹುಟ್ಟಿ ಬರಲಿ.           *********************************

“ಉಳ್ಳವರು ಶಿವಾಲಯವ ಮಾಡುವರು” Read Post »

ಇತರೆ, ಜೀವನ

ಲಿವಿಂಗ್ ಟುಗೆದರ್

ಲೇಖನ ಲಿವಿಂಗ್ ಟುಗೆದರ್ ಸುಜಾತಾ ರವೀಶ್ ಇಬ್ಬರೂ ಸಮಾನ ಮನಸ್ಕರು ಒಂದೇ ಸೂರಿನಡಿ ವಾಸಿಸುತ್ತಾ ಭಾವನಾತ್ಮಕ ಹಾಗೂ ದೈಹಿಕ ಸಂಬಂಧಗಳನ್ನು ವಿವಾಹ ವ್ಯವಸ್ಥೆ ಇಲ್ಲದೆ ಹೊಂದಿ ಜೀವಿಸುವುದಕ್ಕೆ livein relationship ಅಥವಾ ಸಹಬಾಳ್ವೆ ಪದ್ಧತಿ ಎನ್ನುತ್ತಾರೆ.  ಈಗ ಎರಡು ದಶಕಗಳಿಂದೀಚೆಗೆ ಪ್ರಪಂಚದಲ್ಲಿ ಶುರುವಾಗಿರುವ ಹಾಗೂ ಸಮಾಜಶಾಸ್ತ್ರಜ್ಞರು ಮತ್ತು ಮಾನವ ಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ವ್ಯವಸ್ಥೆ ಇದು ಪ್ರಚಲಿತ ಅಸ್ತಿತ್ವದಲ್ಲಿರುವ ಕುಟುಂಬ ಎಂಬ ಸಾಮಾಜಿಕ ಪರಿಕಲ್ಪನೆಯಿಂದ ಹೊರತಾದ ಹೊಸ ಬದಲಾವಣೆಯ ಅಲೆ ಇದು .  ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಜೀವನವೇ ಸವಾಲು ಹಾಗೂ ಸಮಸ್ಯೆಗಳ ಪಯಣ .  ಆಗ ಸಾಹಚರ್ಯದ ಅಗತ್ಯವಿರುತ್ತದೆ . ಅದೇ ಸಂಸಾರ ಮದುವೆಯ ವ್ಯವಸ್ಥೆಗೆ ಕಾರಣೀಭೂತವಾಗುತ್ತದೆ.  ಆದರೆ ಈಗಿನ ಸಾಮಾಜಿಕ ಪರಿವರ್ತನೆಗಳ ದಾಳಿ, ಸಾಂಸಾರಿಕ ಬಂಧಗಳ ಶಿಥಿಲತೆ, ಹಳಸಿದ ಸಡಿಲಾದ ಸಂಬಂಧಗಳಿಗೆ ಕಾರಣವಾಗಿ ವಿವಾಹ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ.  ಹಾಗೂ ಈ ರೀತಿ ವಿವಾಹ ವ್ಯವಸ್ಥೆಯ ವಿರುದ್ಧ ಎತ್ತಿದ ಪ್ರಶ್ನೆಯೇ ಈ ಸಹಬಾಳ್ವೆ ಜೀವನ ಪದ್ಧತಿ.  ಮೊದಲಿಗೆ ಈ ಪದ್ಧತಿಗೆ ಕಾರಣಗಳೇನು ಎಂಬುದರ ಬಗ್ಗೆ ದೃಷ್ಟಿ ಹರಿಸಿದಾಗ…  ಜಾಗತೀಕರಣ  ಯಾವುದೇ ಆರ್ಥಿಕ ಬದಲಾವಣೆ ಸಾಮಾಜಿಕ ಮತ್ತು ನೈತಿಕ ಬದಲಾವಣೆಯನ್ನು ತರುತ್ತದೆ. ಕೈಗಾರೀಕರಣದ ಪ್ರಭಾವದಿಂದ ದೀರ್ಘಕಾಲದ ಕೆಲಸ ಒತ್ತಡದ ಜೀವನ ಹಾಗೂ ನಿಷ್ಕ್ರಿಯ ಸಾಮಾಜಿಕ ಜೀವನಗಳು ಮದುವೆಯ ಕಡೆಯಿಂದ ಅನ್ಯ ಸಂಬಂಧಗಳತ್ತ ಆಕರ್ಷಿಸುತ್ತದೆ.  ಪಾಶ್ಚಿಮಾತ್ಯೀಕರಣ ಆಧುನೀಕರಣದತ್ತ ಮಾರು ಹೋಗುತ್ತಿರುವ ಯುವ ಜನಾಂಗ ಪಾಶ್ಚಾತ್ಯ ಉಡುಗೊರೆಯಾದ ಲಿವ್ ಇನ್ ರಿಲೇಶನ್ ಶಿಪ್ ಅನ್ನು ಆಹಾರ ವಸ್ತ್ರ ಆಚಾರ ವಿಚಾರದಂತೆ ಇದನ್ನು ಕೂಡ ಅಂಧಾನುಕರಣೆ ಮಾಡುತ್ತಿದೆ. ಇವುಗಳೊಂದಿಗೆ ಜನಸಂಖ್ಯೆಯ ಚಲನಶೀಲತೆ (ಹೆಚ್ಚಿನ ಉದ್ಯೋಗ ನಿಮಿತ್ತ) ಸಹ ತನ್ನದೇ ಕೊಡುಗೆ ನೀಡುತ್ತಿದೆ . ಮಹಿಳಾ ಶಿಕ್ಷಣ ಮಟ್ಟ ಏರಿಕೆ ಪುರುಷರಂತೆ ಸ್ತ್ರೀಯರು ಸಹ ಶಿಕ್ಷಣ ಉದ್ಯೋಗ ಎಲ್ಲ ರಂಗಗಳಲ್ಲೂ ಸಮಾನತೆ ಹೊಂದುತ್ತಿದ್ದಾರೆ.  ಹಾಗಾಗಿ ಮದುವೆಯ ವಯಸ್ಸಿನ ಸರಾಸರಿ ಏರಿಕೆ ಮತ್ತು ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಹಾಗೂ ಜೊತೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂದಿನ ಯುಗದ ಮಹಿಳೆಯರನ್ನು ಹೆಚ್ಚು  ದಿಟ್ಥರಾಗಿಸುತ್ತದೆ. ಹೊಸದಾಗಿ ಸಂಬಂಧ ಬೆಳೆಸುವುದರೊಂದಿಗೆ ಗಂಡ ಹೆಂಡಿರ ನಡುವಣ ಪ್ರತ್ಯೇಕತೆ ಉದ್ವಿಗ್ನತೆ ಘರ್ಷಣೆ ಹೆಚ್ಚಿಸಿ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ . “ಜೀವನಕ್ಕಾಗಿ ಸತ್ತ ಸಂಬಂಧದ ಹೊರೆ ಹೊರುವುದಕ್ಕಿಂತ ಸಂಬಂಧವನ್ನು ಕೊನೆಗಾಣಿಸಿ ಕೊಳ್ಳುವುದು ಉತ್ತಮ” ಎಂಬ ನಿಲುವಿಗೆ ಅಂಟಿಕೊಳ್ಳುವುದನ್ನು ಕಾಣಬಹುದು.  ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ ಮಹಿಳೆಯರಾಗಲಿ ಪುರುಷರಾಗಲಿ ವೃತ್ತಿ ಜೀವನವೇ ಕೇಂದ್ರಬಿಂದು ಆಗುತ್ತಿದೆ.  ಹಾಗಾಗಿ ಮದುವೆಯ ವಯಸ್ಸಿನಲ್ಲಿ ವಿಳಂಬ, ವೈವಾಹಿಕ ಅಡ್ಡಿ ಪಡಿಸುವಿಕೆ ಮದುವೆಯ ಪೂರ್ವಭಾವಿಯಾಗಿಯೋ ಅಥವಾ ಮದುವೆಯವರೆಗಿನ ಸ್ಟಾಪ್ ಗ್ಯಾಪ್ ವ್ಯವಸ್ಥೆ ಆಗಿಯೋ ಈ ಲಿವ್ ಇನ್ ರಿಲೇಷನ್ ಶಿಪ್ ಗಳು ಜನಪ್ರಿಯ ಆಗುತ್ತಿವೆ . ಸಂಸಾರದಲ್ಲಿನ ನಿರ್ಬಂಧ ಅಸಮಾನತೆ ಹಾಗೂ ಮಾನಸಿಕ ದೈಹಿಕ ಹಿಂಸೆಗಳನ್ನು ಮೌನವಾಗಿ ಯಾರೂ ಸಹಿಸುತ್ತಿಲ್ಲ ಹೀಗಾಗಿ ಈ ಪದ್ಧತಿ  ಸಾಂಸ್ಥಿಕ ವೈವಾಹಿಕ ಸಂಕೋಲೆಯಿಂದ ಬಿಡಿಸಿಕೊಳ್ಳುವ ಮಾರ್ಗವಾಗಿಯೂ ಪರಿಣಮಿಸಿದೆ . ಆದರೆ ಭಾರತದಂತಹ ಪುರಾತನ ಸಂಸ್ಕೃತಿಯ ದೇಶದಲ್ಲಿ ಇದು ಸರಿಯೇ? ನಿಜಕ್ಕೂ ಇದು ಒಂದು ನೈತಿಕ ಅಧಃಪತನವೇ ಸರಿ.  ಮದುವೆ ಎಂಬುದು ಸಮಾಜ ಅಂಗೀಕರಿಸಿದ ರಕ್ಷಣೆ ಕೊಟ್ಟ ಒಂದು ವ್ಯವಸ್ಥಿತ ಒಡಂಬಡಿಕೆ. ನ್ಯಾಯಸಮ್ಮತವೂ ಸಹ . ಆದರೆ ಈ ಲಿವ್ ಇನ್ ಸಂಬಂಧಗಳು ಮನುಷ್ಯರಲ್ಲಿ ಬದ್ಧತೆಯ ಕೊರತೆಯನ್ನುಂಟು ಮಾಡುತ್ತದೆ.  ಬಟ್ಟೆ ಬದಲಿಸುವ ಹಾಗೆ ಸಂಗಾತಿಯನ್ನು ಬದಲಾಯಿಸಬಹುದು . ನೈತಿಕ ಸಾಮಾಜಿಕ ಮೌಲ್ಯಗಳು ಪ್ರಪಾತದ ದಾರಿ ಹಿಡಿಯುತ್ತಿರುವ ದ್ಯೋತಕ. ಕುಟುಂಬ ವ್ಯವಸ್ಥೆಯಲ್ಲಿ ಪ್ರಬಲವಾಗಿರುವ ಕರ್ತವ್ಯ’ ತ್ಯಾಗ, ಬದ್ಧತೆ ಮತ್ತು ವಿಧೇಯತೆ ಜಾಗದಲ್ಲಿ ಈ ಸಂಬಂಧ ಸ್ವಾರ್ಥ ,ಸಹವಾಸ ಕಾಮತೃಪ್ತಿ, ಸಮಾನತೆ ಮತ್ತು ಒಗ್ಗಿ ಕೊಳ್ಳುವಿಕೆ ಅಂತಹ ದುರ್ಬುದ್ಧಿ ಬಿತ್ತುತ್ತಿದೆ_  ಸಾಮಾಜಿಕ ಬಂಧಗಳ ಬಗ್ಗೆ ಅಗೌರವ ಸಂಬಂಧಗಳಲ್ಲಿ ಅಸಹನೆ ಅಸಹಿಷ್ಣುತೆಗಳು ಸ್ಯೆ ಕೊರತೆ ಹುಟ್ಟುಹಾಕುತ್ತಿದೆ . ಹಕ್ಕುಗಳು ಜವಾಬ್ದಾರಿಗಳೂ ಇರದ ಜೀವನ ದೀರ್ಘಕಾಲದಲ್ಲಿ ಮಾನಸಿಕ ಸಮಸ್ಯೆಗಳನ್ನು ತರುತ್ತದೆ ಇಲ್ಲಿ ದೈಹಿಕ ಹೊಂದಾಣಿಕೆ ಹಾಗೂ ಭಾವನಾತ್ಮಕ ಅಂಶಗಳೇ ಮುಖ್ಯವಾಗಲಿ ಬೇರೆ ಉತ್ತಮ ಅಂಶಗಳು ಗೌಣವಾಗುತ್ತದೆ . ಸಾಮಾಜಿಕ ಬೇಜವಾಬ್ದಾರಿತನ ಯಾವುದೇ ಭದ್ರತೆ ಇಲ್ಲದ ಸಂಬಂಧಗಳು ಅಕ್ರಮ ಸಂತಾನಗಳಿಗೆ ಅನೈತಿಕತೆಗೆ ಮತ್ತಷ್ಟು ಎಡೆಮಾಡಿಕೊಡುತ್ತದೆ . ಸಾಮುದಾಯಿಕವಾಗಿ ಗೌರವ ಸ್ಥಾನಮಾನಗಳಿರದೆ ನೋವುಗಳನ್ನು ಉಂಟು ಮಾಡುತ್ತದೆ.  ಕಾನೂನುಬದ್ಧವಲ್ಲದ ಜನ್ಮ ಕೊಟ್ಟ ಮಕ್ಕಳು ಮತ್ತು ಅವರ ಬೆಳವಣಿಗೆಯಲ್ಲಿ ಅವರ ಮಾನಸಿಕ ಪರಿಸ್ಥಿತಿ ಇವುಗಳ ಬಗ್ಗೆ ಯೋಚಿಸುವಾಗ ಬರೀ ಸ್ವಾರ್ಥಪರತೆ ಕಾಮ ವಾಂಛೆಗಳೇ ಪ್ರಧಾನವಾದ ಈ ಸಂಬಂಧಗಳು ಸಾಧುವೇ ಅಗತ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ . ಭವ್ಯ ಪ್ರಾಚೀನ ಸಂಸ್ಕೃತಿಯ ನಮ್ಮ ದೇಶ ತನ್ನ ಕುಟುಂಬ ವ್ಯವಸ್ಥೆ ಪರಸ್ಪರ ಮಮತೆ ವಾತ್ಸಲ್ಯದಿಂದಲೇ ಪ್ರಪಂಚದಲ್ಲಿ ಪ್ರಸಿದ್ಧ . ಮೌಢ್ಯ ಅಂಧಾನುಕರಣೆಯಿಂದ ಸಚ್ಚರಿತೆಯ ಎಳನೀರನ್ನು ಬಿಟ್ಟು ಕೊಚ್ಚೆ ಗುಂಡಿನ ಕಲುಷಿತ ನೀರಿಗೆ ಆಸೆ ಪಡುವುದು ತರವೇ?   *******************************************

ಲಿವಿಂಗ್ ಟುಗೆದರ್ Read Post »

ಇತರೆ, ಜೀವನ

ಯೋಗ್ಯತೆಯಲ್ಲ ಯೋಗ ಬೇಕು

ಲೇಖನ ಯೋಗ್ಯತೆಯಲ್ಲ ಯೋಗ ಬೇಕು ಜ್ಯೋತಿ ಬಾಳಿಗಾ “ಯಾಕೆ ಒಳ್ಳೆ ಇಡ್ಲಿ ಹಿಟ್ಟು ಊದಿಕೊಂಡಹಾಗೆ ಮುಖ ಮಾಡಿ ಕೂತಿದ್ದೀಯಾ… ಏನಾಯಿತು ?” ಎಂದು ನನ್ನವರು ಕೇಳಿದಾಗ “ಯಾಕೋ ಮನಸ್ಸು ಸರಿಯಿಲ್ಲ ಕಣ್ರಿ.. ಅಳು ಬರುವ ಹಾಗಿದೆ…” ಎಂದು ನನ್ನ ಮನದ ಬೇಗುದಿಯನ್ನು ತಿಳಿಸದೇ ಮಾತನ್ನು ತಳ್ಳಿ ಹಾಕಿದೆ. “ವಿಷಯ ಏನೂಂತ ಹೇಳಿದ್ರೆ ನನಗೂ ಗೊತ್ತಾಗುತ್ತದೆ, ಅದು ಬಿಟ್ಟು ಮನಸ್ಸು ಸರಿಯಿಲ್ಲಾಂತ ಹೇಳಿದ್ರೆ ಹೇಗೆ …? ಇಡೀ ದಿನ ಓದುವುದು, ಬರೆಯೋದೆ ಆಯಿತು. ಯೋಚನೆ ಮಾಡಿ ಮಾಡಿ ತಲೆ ಹಾಳು ಮಾಡಿಕೊಳ್ಳೋದು ಅಲ್ಲದೇ ನಮ್ಮ ತಲೆನೂ ಕೆಡಿಸ್ತಾ ಇದ್ದೀಯಾ…” ಎಂದು ಹರಿಹಾಯ್ದರು. ಯಾವಾಗ ನಾನು ಸಪ್ಪಗಾದರೂ, ಅದರ‌ ನೇರ ಹೊಣೆ ನನ್ನ ಬರವಣಿಗೆಯ ಮೇಲೆ ಹಾಕುತ್ತಾರೆ. ಕೊನೆಗೆ ಬರೆಯೋದು ನಿಲ್ಲಿಸು ಎಂದು ನನ್ನ ಬುಡಕ್ಕೆ ಬರುತ್ತೆ ಮಾತು. ಅದಕ್ಕೆ ನನ್ನವರಿಗೆ ವಿಷಯ ಏನೂಂತ ಹೇಳುವ ಮನಸ್ಸು ಮಾಡಿದೆ. “ಅಲ್ಲಾರೀ‌… ಹೆಣ್ಣು ಮಕ್ಕಳು ಆಗದೇ ಇರೋದು ನಮ್ಮ ತಪ್ಪಾ ? ಹೆಣ್ಣು ಮಕ್ಕಳು ಮನೆಯ ನಂದಾದೀಪ. ಮನೆಗೊಂದು ಕಳೆ ಹೀಗೆ ಏನಾದರೂ ಪೋಸ್ಟ್ ಹಾಕಲಿ ಬೇಡ ಅನ್ನಲ್ಲ ನಾನು. ಆದರೆ ಹೆಣ್ಣುಮಕ್ಕಳು ಹುಟ್ಟಬೇಕು ಅಂದ್ರೆ ಪುಣ್ಯ ಮಾಡಿರಬೇಕಂತೆ, ಯೋಗ್ಯತೆ ಇದ್ದವರಿಗೆ ಮಾತ್ರ ಹೆಣ್ಣುಮಕ್ಕಳು ಹುಟ್ಟುತ್ತವೆಯಂತೆ … ಹೀಗೆ ಪೋಸ್ಟ್ ಹಾಕಿ ಹೊಟ್ಟೆ ಉರಿಸುತ್ತಾ ಇದ್ದಾರೆ‌ ಕಣ್ರಿ…” ಎಂದು ಗೋಳಿಟ್ಟೆ. “ಮಕ್ಕಳು ಹುಟ್ಟುವುದೇ ಒಂದು ಅದೃಷ್ಟ ಕಣೆ. ಹೆಣ್ಣಾಗಲಿ, ಗಂಡಾಗಲಿ ದೇವರು ಕೊಟ್ಟ ವರದಂತೆ ಸ್ವೀಕರಿಸಿ ಯೋಗ್ಯ ರೀತಿಯಲ್ಲಿ ಬೆಳಸಬೇಕೆ ಹೊರತು ಪಾಪ, ಪುಣ್ಯ ಎಂದು ಜಿದ್ದಿಗೆ ಬಿದ್ದವರ ಹಾಗೆ ಪೋಸ್ಟ್ ಹಾಕುವುದಲ್ಲ. ಒಮ್ಮೆ ಸುತ್ತಮುತ್ತಲಿನ ಜನರನ್ನು ನೋಡು, ಹೆಣ್ಣೋ, ಗಂಡೋ ಒಂದು ಮಗು ಹುಟ್ಟಿದರೆ ಸಾಕೂಂತ ಕಾಯುವ ಜೀವಗಳು ಎಷ್ಟಿವೆ ಗೊತ್ತಿಲ್ವಾ ? ಗಂಡು ಮಕ್ಕಳು ಹುಟ್ಟಿ ಏನು ತೊಂದರೆಯಾಗಿದೆ ನಿನಗೆ ? ಒಂದು ವೇಳೆ ಹೆಣ್ಣು ಮಕ್ಕಳೇ ಹುಟ್ಟಿದ್ರೆ ಏನ್ ಸಾಧನೆ ಮಾಡಿಸುತ್ತಿದ್ದೆ ನೀನು..? ನಿನ್ನ ಗಂಡು ಮಕ್ಕಳು ಯಾರಿಗೆ ಯಾವುದಕ್ಕೆ ಕಡಿಮೆ ಇದ್ದಾರೆ ಹೇಳು..? ” ಎಂದು  ಪ್ರಶ್ನೆಗಳ ಸುರಿಮಳೆ ಸುರಿಸಿದರು. ನಾನು ಮೌನವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. “ಮಕ್ಕಳು ತಂದೆ ತಾಯಿಯ ಕಷ್ಟ ಅರಿತುಕೊಂಡು ಅವರಿಗೆ ವಿಧೇಯರಾಗಿರಬೇಕೆ ಹೊರತು ಹೇಳಿದ ಮಾತು ಕೇಳದೆ, ಅಷ್ಟೇನೂ ಚೆನ್ನಾಗಿಲ್ಲದ ತಂದೆಯ ಆರ್ಥಿಕ ಸ್ಥಿತಿಯನ್ನು ನೋಡಿದರೂ ಕೂಡ ಹಠಮಾಡಿ ತಮಗೆ ಬೇಕಾದದ್ದನ್ನು ತರಿಸಿಕೊಳ್ಳುವವರು, ಅಮ್ಮನಿಗೆ ಆರೋಗ್ಯ ಸರಿಯಿಲ್ಲದಿದ್ದರೂ ಕಿಂಚಿತ್ತೂ ಸಹಾಯ ಮಾಡದೇ ಬರೀ ಅಲಂಕಾರ ಮಾಡಿಕೊಂಡು ಷೋಕೇಷಿನಲ್ಲಿ ಇಡುವ ಬೊಂಬೆ ತರಹ ಇದ್ದರೆ ಏನು ಪ್ರಯೋಜನ ಹೇಳು…? ಅವತ್ತು ಪರಿಚಯದವರ ಮನೆಗೆ ಹೋದಾಗ ನೀನೆ ನೋಡಲಿಲ್ವಾ? ಅವರ ಮನೆಯ ಪರಿಸ್ಥಿತಿ ನೋಡಿ ಅರ್ಥಮಾಡಿಕೊಳ್ಳದೆ ಹೊಸ ಮೊಬೈಲ್ ಬೇಕೂಂತ ಅಷ್ಟು ದೊಡ್ಡ ಹುಡುಗಿ ಹೇಗೆ ಹಠ ಮಾಡ್ತಿದ್ದಳು….”ಎಂದು ವಾಸ್ತವದ ಅರಿವು ಮಾಡಿಸಿ ಸಮಾಧಾನ ಮಾಡಿದರು. “ಹೌದು ರೀ… ನಾನು ಇಷ್ಟು ದಿನದಿಂದಸುಮ್ಮನೆ ತಲೆಕೆಡಿಸಿಕೊಂಡಿದ್ದೆ..” ಎಂದು ಹೇಳಿದೆ. “ಹೆಣ್ಣೋ, ಗಂಡೋ ಆರೋಗ್ಯವಂತ , ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವಂತ ಮಕ್ಕಳು ಮುಖ್ಯ ಕಣೆ..”  ಎಂದು ಬೆನ್ನು ತಟ್ಟಿ ಹೋದರು. ನನಗೆ ನನ್ನ ಮಕ್ಕಳ ಬಾಲ್ಯದ ನೆನಪುಗಳು ಕಾಡಲು ಶುರುವಾದವು. ಮೊದಲನೆಯ ಮಗು ಹೆಣ್ಣಾಗಬೇಕೂಂತ ತುಂಬಾ ಆಸೆಯಿಂದ ಇದ್ದೆ. ಗಂಡು ಮಗು ಆದಾಗ ಆಸೆ ನಿರಾಸೆಯಾಗಿತ್ತು. ಗಂಡೋ ಹೆಣ್ಣೋ ಮಗು ಹುಟ್ಟಿತಲ್ವಾ ? ಸಂತೋಷ ಪಡು ಎಂದು ಮನೆಯವರೆಲ್ಲಾ ಹೇಳಿದರೂ ಮನಸ್ಸಿನಲ್ಲಿ ಹೆಣ್ಣಾಗಲಿಲ್ಲ ಎಂಬ ಕೊರಗು ಇದ್ದೆ ಇತ್ತು. ಅವನ ಹುಡುಗಾಟಿಕೆಯ ಬುದ್ಧಿಗೋ, ನನಗೆ ಮಗುವನ್ನು ನೋಡಿಕೊಳ್ಳಲು ತಿಳಿಯದೆಯೋ ದೊಡ್ಡ ಮಗ ನನ್ನಿಂದ ಏಟು, ಬೈಗುಳ ಸರಿಯಾಗಿ ತಿನ್ನುತ್ತಿದ್ದ. ನನಗೆ ಅವನಿಗೆ ತರಕಾರಿ ತಿನ್ನಿಸುವ ಹುಚ್ಚು. ಅವನಿಗೆ ತರಕಾರಿ ಅಂದರೆ ಗಂಟಲಿನಲ್ಲಿ ಇಳಿಯುತಿರಲಿಲ್ಲ. ಹೇಗಾದರೂ ಮಾಡಿ ತಿನ್ನಿಸಬೇಕೆಂದು ಬೇಯಿಸಿ ಮಿಕ್ಸಿಯಲ್ಲಿ ಹಾಕಿಯೋ ಹೊಸ ಹೊಸ ಸಂಶೋಧನೆ ಮಾಡಿಯೋ ಅವನಿಗೆ ತರಕಾರಿಯನ್ನು ತಿನ್ನಿಸುತ್ತಿದ್ದೆ. ನನ್ನ ಒತ್ತಾಯಕ್ಕೋ, ಹೆದರಿಕೆಗೋ ಆ ಕ್ಷಣ ತಿಂದರೂ ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ವಾಂತಿ ಮಾಡುತ್ತಿದ್ದ. ಹೀಗೆ ವಾಂತಿ ಬಳಿದು ಬಳಿದು ಸಾಕಾಗಿ ಕೊನೆಗೆ ನಾನು ಅಲ್ಲಲ್ಲಿ ಬಕೆಟ್ ಇಡೋಕೆ ಶುರು ಮಾಡಿದೆ. ವಾಂತಿ ಬಂದ ಕೂಡಲೇ ಬಕೆಟ್ನಲ್ಲೇ ವಾಂತಿ ಮಾಡಬೇಕೂಂತ ಕಲಿಸಿದ್ದೆ. ತರಕಾರಿ ತಿಂದ ಕೂಡಲೇ ಬಕೇಟ್ ನಲ್ಲಿ ವಾಂತಿ ಮಾಡೋದು ಮಾಡ್ತಿದ್ದ. ಆಮೇಲೆ ನಾನು ತೊಳೆದಿಡುವುದು ಹೀಗೆ ದಿನಾ ಹೋಗ್ತಾ ಇತ್ತು. ಯಾವಾಗ ನಾನು ಮತ್ತೊಮ್ಮೆ ತಾಯಿಯಾಗುವೆನೆಂದು ತಿಳಿಯಿತೋ ಎರಡನೆಯ ಮಗು ಹೆಣ್ಣಾಗಲಿ ಎಂದು ಆಶಿಸಿದ್ದೆ. ಮೊದಲನೆಯ ಸಲ ಇರುವಾಗ ಇದ್ದ ಗರ್ಭಿಣಿಯ ಲಕ್ಷಣ ಕಾಣಿಸದೇ ಇದ್ದಾಗ ನನ್ನ ಆಸೆ ಹೆಚ್ಚಾಯಿತು. ಮೊದಲನೆ ಗರ್ಭಾವಸ್ಥೆಯಲ್ಲಿ ನನಗೆ ಅಷ್ಟೊಂದು ವಾಂತಿ ಇರಲಿಲ್ಲ. ಎರಡನೆಯ ಗರ್ಭಾವಸ್ಥೆಯಲ್ಲಿ ನನಗೆ ವಾಂತಿ ಶುರುವಾಯಿತು. ಅನ್ನ ಬಿಡಿ, ನೀರು ಕುಡಿದರೂ ವಾಂತಿ ಬರುತಿತ್ತು. ನಾನು ಓಡಿ ಹೋಗಿ ಬಾತ್ ರೂಮಿನಲ್ಲಿ ವಾಂತಿ ಮಾಡಿ ಬರುತ್ತಿದ್ದೆ. ನನ್ನ ವಾಂತಿ ನೋಡಿ ನೋಡಿ ನನ್ನ ಮಗ ಒಂದು ದಿನ ಬಕೆಟ್ ಹಿಡಿದು ನಿಂತಿದ್ದಾನೆ. ಅಮ್ಮಾ… ಇದರಲ್ಲಿ ವಾಂತಿ ಮಾಡು ಎಂದು ಬಕೆಟ್ ಕೈಯಲ್ಲಿ ಕೊಟ್ಟ. ನನಗೂ ಓಡಿ ಓಡಿ ಸುಸ್ತಾಗಿದ್ದ ಕಾರಣ ಬಕೆಟ್ ನಲ್ಲಿ ವಾಂತಿ ಮಾಡಿ ಮಲಗಿದೆ. ಸ್ವಲ್ಪ ಹೊತ್ತಿನಲ್ಲಿ ಸದ್ದು ಕೇಳಿ ಎಚ್ಚೆತ್ತಾಗ ಮಗನ ಕೈಯಲ್ಲಿ ಕ್ಲೀನ್ ಮಾಡಿದ ಬಕೆಟ್ ಇದೆ. ಇವರು ಬಂದಿದ್ರಾ ಎಂದು ನೋಡಿದರೆ ಹಾಕಿದ ಲಾಕ್ ಹಾಗೇ ಇದೆ. ಆರೋಗ್ಯ ಸರಿಯಿಲ್ಲಾಂದ್ರೆ ಒಂದು ತೊಟ್ಟು ನೀರು ಕೊಡೋದಕ್ಕೂ‌ ಹೆಣ್ಣಿನ ಗತಿಯಿಲ್ಲ ಎಂದು ಎಷ್ಟೋ ಸಲ ಗಂಡು ಮಗು ಹುಟ್ಟಿದಾಗ ಬೇಸರ ಮಾಡಿಕೊಂಡಿದ್ದೆ. ಆದರೆ ನನ್ನೆಲ್ಲಾ ಮಾತುಗಳನ್ನು ಹಿಂಪಡೆಯುವಂತೆ ಮಾಡಿದ್ದ ನನ್ನ ಮಗ. ಕ್ಲೀನ್ ಆದ ಬಕೇಟ್ ನೋಡಿದಾಗನನಗಂತೂ ನಿಜವಾಗಿ ಅಳುನೇ ಬಂದು ಬಿಡ್ತು. ನನ್ನ ಕಂದನಿಗೆ ಅವಾಗ ಬರಿ ಎರಡುವರೆ ವರ್ಷ…!! ಅವನ ಗುಣವನ್ನು ‌ನೋಡಿದ ಮೇಲೆ ಮತ್ತೆಂದೂ ಹೆಣ್ಣು ಹುಟ್ಟಲಿಲ್ಲ ಎಂದು ದುಃಖವನ್ನು ಪಡಲಿಲ್ಲ ನಾನು. ಎರಡನೆಯ ಮಗುವೂ ಗಂಡು ಮಗುವಾದಾಗ ಸಂಭ್ರಮದಿಂದ ಸ್ವಾಗತಿಸಿದೆ. ನನಗಿನ್ನೂ ನೆನಪಿದೆ. ಎಂಟು ವರ್ಷದ ಹಿಂದೆ ನನಗೆ ಆರೋಗ್ಯ ಸಮಸ್ಯೆಯಿಂದವೈದ್ಯರು ಬೆಡ್ ರೆಸ್ಟ್ ಹೇಳಿದ್ದರು. ಇವರು ಅಡುಗೆಯನ್ನು ಮಾಡಿಕೊಟ್ಟು ತೋಟದ ಉಸ್ತುವಾರಿ‌ ನೋಡಿಕೊಳ್ಳಲು ಹೋದಾಗ ಇಬ್ಬರೂ ಗಂಡು ಮಕ್ಕಳೇ ನನ್ನ ಅಪ್ಪ ಅಮ್ಮನಂತೆ ನೋಡಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಅಡುಗೆಯಿಂದ ಹಿಡಿದು ಮನೆಯ ಸ್ವಚ್ಚತೆಯ ಕೆಲಸದಲ್ಲೂ ಜೊತೆಗೂಡುತ್ತಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಗಂಡು ಮಕ್ಕಳನ್ನು ಹೆಡೆದವರಿಗೆ ನೋವು ಕೊಡುವ ಪೋಷಕರೇ ಈಗ ಹೇಳಿ ಹೆಣ್ಣು ಮಕ್ಕಳು ಹುಟ್ಟಿದರೆ ಭಾಗ್ಯವೋ..? ಗಂಡೋ, ಹೆಣ್ಣೋ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಯೋಗ್ಯ ರೀತಿಯಲ್ಲಿ ಬೆಳಸುವುದು ಉತ್ತಮವೋ…?! *************************************************

ಯೋಗ್ಯತೆಯಲ್ಲ ಯೋಗ ಬೇಕು Read Post »

ಇತರೆ, ಜೀವನ

ಭೂತಾಯಿಗೆ ನಮನ

ಲೇಖನ ಭೂತಾಯಿಗೆ ನಮನ ರಾಘವೇಂದ್ರ ಈ ಹೊರಬೈಲು ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ  ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು ಮತ್ತು ಮಾರನೆ ದಿನ ಬೆಳ್ಳಂಬೆಳಗ್ಗೆ ಹೊಲದಲ್ಲಿ “ಅಚ್ಚಂಬ್ಲಿ ಅಳಿಯಂಬ್ಲಿ ಮುಚ್ಕಂಡ್ ತಿನ್ನೆ ಭೂಮ್ತಾಯಿ” ಎಂದು ಬೆಳೆಗಳಿಂದ ತುಂಬಿದ ಹೊಲದಲ್ಲಿ ಏನನ್ನೋ ಬೀರುತ್ತಾ, ಕೂಗುತ್ತಾ ಸಾಗುತ್ತಿದ್ದ ಅಪ್ಪನ ಧ್ವನಿಯನ್ನು ಮರೆಯಲು ಸಾಧ್ಯವೇ? ಸಾಂಸ್ಕೃತಿಕವಾಗಿ ಭಾರತವು ವಿಶ್ವದಲ್ಲೇ ಅತೀ ಶ್ರೀಮಂತ ರಾಷ್ಟ್ರ. ಹಬ್ಬ- ಹರಿದಿನಗಳ ವಿಷಯಕ್ಕೆ ಬಂದಿದ್ದೇ ಆದರೆ ನಮ್ಮಷ್ಟು ವಿವಿಧತೆ ಮತ್ತು ವಿಶೇಷತೆಯನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಒಂದೊಂದು ಹಬ್ಬವೂ ಅದರದೇ ವಿಶೇಷತೆ ಮತ್ತು ಪ್ರಾಮುಖ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಒಂದು ಕಾಲದಲ್ಲಿ ಭಾರತ ದೇಶದ ಹಬ್ಬಗಳೆಂದರೆ ಅವು ಭಕ್ತಿ, ಸಂಸ್ಕೃತಿ, ಬೆರೆಯುವಿಕೆ, ಸಂತೋಷಗಳ ಸಮ್ಮಿಲನವಾಗಿತ್ತು. ನಮ್ಮ ತಾತ ಮುತ್ತಾತಂದಿರೆಲ್ಲರೂ ಹಬ್ಬಗಳನ್ನು ಒಂದು ಭಯಕ್ಕಾಗಿ, ಭಕ್ತಿಗಾಗಿ, ಎಲ್ಲರ ಒಳಿತಿಗಾಗಿ ಗಾಂಭೀರ್ಯದಿಂದ ಆಚರಿಸುತ್ತಿದ್ದರು. ಆದರೆ ಇಂದು ಎಲ್ಲಾ ಬುಡ ಮೇಲಾಗಿದೆ. ಉದಾಹರಣೆಗೆ ಹೇಳಬೇಕೆಂದರೆ, ಗಣೇಶನ ಹಬ್ಬ, ದೀಪಾವಳಿ, ಹೋಳಿ ಮುಂತಾದವು ತಮ್ಮ ಮೂಲ ಅರ್ಥ ಕಳೆದುಕೊಂಡು ಅನರ್ಥದತ್ತ ಸಾಗುತ್ತಿವೆ. ಭಯ-ಭಕ್ತಿಯಿಂದ, ನಿರ್ಮಲ ಮನಸ್ಸಿನಿಂದ ಆಚರಿಸುತ್ತಿದ್ದ ಗಣೇಶನ ಹಬ್ಬ ಇಂದು ಹೊಡೆದಾಟ, ಕಿತ್ತಾಟದ ಹಬ್ಬವಾಗಿದೆ. ಯಾರೂ ತಪ್ಪಾಗಿ ಭಾವಿಸದೇ ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ, ಹಲವೆಡೆ ಗಣೇಶನ ಹಬ್ಬದಲ್ಲಿ ಗಣೇಶನೇ ಕಾಣೆಯಾಗಿ, ಅಶ್ಲೀಲ ಆರ್ಕೆಸ್ಟ್ರಾ, ಕುಡಿತ, ಕುಣಿತ, ಐಟಂ ಸಾಂಗುಗಳದ್ದೇ ಮೆರವಣಿಗೆ ನಡೆಯುತ್ತಿದೆ. ರಾಷ್ಟ್ರ ಕವಿ ಕುವೆಂಪುರವರ “ಕಟ್ಟಕಡೆಯಲಿ ದೇವರ ಗುಡಿಯಲಿ ಪೂಜಾರಿಯೇ ದಿಟದ ನಿವಾಸಿ ದೇವರೇ ಪರದೇಸಿ” ಎಂಬ ಮಾತಿನಂತೆ “ಕಟ್ಟಕಡೆಯಲಿ ಗಣೇಶನ ಹಬ್ಬದಲಿ ಆರ್ಕೆಸ್ಟ್ರಾ ಐಟಂ ಸಾಂಗುಗಳು, ಕುಡುಕರ ಹುಚ್ಚು ಕುಣಿತವೇ ದಿಟದ ನಿವಾಸಿ, ಗಣೇಶನೇ ಪರದೇಸಿ” ಅಲ್ವಾ? ದೀಪಗಳಿಂದ ಅಲಂಕೃತವಾಗಿ ಮನಸ್ಸಿನ ದುಃಖ ಕಳೆದು ಎಲ್ಲರ ಬಾಳಿಗೂ ಹರಷದ ಬೆಳಕನ್ನು ನೀಡುವಂತ ಹಬ್ಬವಾಗಲಿ ಎಂದು ಆಚರಿಸುತ್ತಿದ್ದ ‘ದೀಪಾವಳಿ ಹಬ್ಬ’ ಇಂದು ತನ್ನ ಅರ್ಥವನ್ನೇ ಕಳೆದುಕೊಂಡು ಪಟಾಕಿ ಮುಂತಾದ ಇಡೀ ಜೀವಸಂಕುಲಕ್ಕೇ ಕಂಟಕಪ್ರಾಯವಾದ ಸಿಡಿಮದ್ದುಗಳ ಸುಡುವಿಕೆಯ ಆಡಂಬರದಲ್ಲಿ ಮುಳುಗಿಹೋಗಿದೆ. ಹೆಚ್ಚು ಸಿಡಿಮದ್ದು ಸುಟ್ಟವನದೇ ಅದ್ದೂರಿ ದೀಪಾವಳಿ ಆಚರಣೆ ಎಂಬಂತಾಗಿರುವುದು ಶೋಚನೀಯ. ಇಂಥ ಆಡಂಬರದ, ಅಂತಸ್ತಿನ ಪ್ರತೀಕದಂತಿರುವ ಹಬ್ಬಗಳೆಂದರೆ ಮೊದಲಿನಿಂದಲೂ ನನಗೆ ಅದೇನೋ ಅಸಡ್ಡೆ. ಆದರೆ ಇಂತಹ ಹಬ್ಬಗಳ ನಡುವೆಯೇ ಅಂದು ನನ್ನ ನಿದ್ರೆಗೆಡಿಸಿ, ಅಮ್ಮ- ಅಪ್ಪನ ಬೈಗುಳಕ್ಕೆ ಎಡೆಮಾಡಿದ್ದ ಹಬ್ಬ, ಸದ್ದು-ಗದ್ದಲವಿಲ್ಲದೆ, ಇಡೀ ಜೀವಸಂಕುಲದ ತಾಯಿ, ನಿಜ ದೇವತೆ ಭೂಮಿತಾಯಿಯನ್ನು ಪೂಜಿಸುವ ‘ಭೂಮಿ ಹುಣ್ಣಿಮೆ’ ಇಂದಿಗೂ ಅರ್ಥವತ್ತಾಗಿ ನಡೆಯುತ್ತಿರುವ ಹಬ್ಬ. ನಗರ ಪ್ರದೇಶದ ಅದೆಷ್ಟೋ ಜನರಿಗೆ ಅರಿವೂ ಇರದ, ಹಳ್ಳಿಗಾಡಿನ ರೈತಾಪಿ ವರ್ಗದವರು ಆಚರಿಸಿಕೊಂಡು ಬರುತ್ತಿರುವ ಪಕ್ಕಾ ಗ್ರಾಮೀಣ ಹಬ್ಬ. ಗಣೇಶನ ಹಬ್ಬವಾದ ಹೆಚ್ಚು ಕಡಿಮೆ ಒಂದು ತಿಂಗಳ ಅಂತರದಲ್ಲಿ ಬರುವ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆಯನ್ನು ‘ಸೀಗೆ ಹುಣ್ಣಿಮೆ’ ಎಂದೂ ಕರೆಯಲಾಗುತ್ತದೆ. ಭತ್ತ, ಜೋಳ, ಅಡಿಕೆ ಮುಂತಾದ ಬೆಳೆ ತೆನೆಬಿಡುವ ಸಮಯವಿದು. ಅಂದರೆ ಬೆಳೆಗಳು ಗರ್ಭ ಧರಿಸುವ ಕಾಲ. ಅಂದರೆ ಭೂತಾಯಿಯು ಗರ್ಭವತಿಯಾಗುವ ಸುಂದರ ಗಳಿಗೆ. ಬೆಳೆಗಳನ್ನೇ ಗರ್ಭ ಧರಿಸಿದ ಭೂತಾಯಿಯೆಂಬ ಭಕ್ತಿಯಿಂದ ಪೂಜಿಸುವ ನಮ್ಮ ಹಳ್ಳಿಗರು ಭತ್ತದ ಸಸಿಗೋ ಅಥವಾ ಅಡಕೆ ಗಿಡಕ್ಕೋ ಅಥವಾ ಜೋಳದ ಗಿಡಕ್ಕೋ ಅಥವಾ ನಾವು ಬೆಳೆದ ಯಾವುದೋ ಬೆಳೆಗೋ ಸೀರೆ ಉಡಿಸಿ, ಹೂವಿನ ಹಾರ ಹಾಕಿ, ತಾಳಿಯನ್ನು ಕಟ್ಟಿ ಹೆಣ್ಣಿನಂತೆ ಸಿಂಗಾರ ಮಾಡಿ, ಹೊಲಗಳಲ್ಲಿ, ಊರುಗಳಲ್ಲಿ ಸಿಗುವ ನಾನಾ ತರದ ಸೊಪ್ಪು, ತರಕಾರಿ, ಗೆಡ್ಡೆ-ಗೆಣಸುಗಳನ್ನು ಹಿಂದಿನ ದಿನವೇ ತಂದು (ಸೊಪ್ಪು ಹೆರಕುವ ಶಾಸ್ತ್ರ ಎಂಬುದು ಅದರ ಹೆಸರು), ಇಡೀ ರಾತ್ರಿ, ಮನೆಮಂದಿಯೆಲ್ಲಾ ಎಚ್ಚರವಿದ್ದು, ಒಂದು ರೀತಿಯ ಜಾಗರಣೆಯನ್ನೇ ಆಚರಿಸಿ, ಬಗೆಬಗೆಯ ಅಡುಗೆ ಮಾಡಿ, ವಿಶೇಷವಾದ ಖಾದ್ಯ ತಯಾರಿಸಿ, ಸೂರ್ಯ ಉದಯಿಸುವ ಮುನ್ನವೇ ಮಾಡಿದ ಖಾದ್ಯ, ಪೂಜಾ ಪರಿಕರಗಳನ್ನು ತೆಗೆದುಕೊಂಡು, ಹೊಲಕ್ಕೆ ತೆರಳಿ, ಸಿಂಗರಿಸಿದ ಸಸಿಗೆ ನಾನಾತರಹದ ಖಾದ್ಯಗಳನ್ನು ಎಡೆಯಿಟ್ಟು, ಪೂಜಿಸಿ, ನಂತರ ಹೊಲದಲ್ಲಿರುವ ಬೆಳೆಗಳ ಮೇಲೆ ‘ಅಚ್ಚಂಬಲಿ’ (ಬೆಳೆಗಳ ಮೇಲೆ ಬೀರಲು ತಯಾರಿಸುವ ವಿಶೇಷ ಖಾದ್ಯ) ಬೀರುವುದರ ಮೂಲಕ ‘ಬಯಕೆ ಶಾಸ್ತ್ರವನ್ನು’ ಮಾಡುತ್ತಾರೆ. ಆಮೇಲೆ ಮನೆಮಂದಿಯೆಲ್ಲ ಹೊಲದಲ್ಲಿಯೇ ಊಟಮಾಡಿಕೊಂಡು ವಾಪಾಸಾಗುವ, ಭೂತಾಯಿಯನ್ನು ಭಕ್ತಿಪೂರ್ವಕವಾಗಿ ಪೂಜಿಸುವ ಮನಮುಟ್ಟುವ ಹಬ್ಬ . ಹೀಗೆ ಆಚರಿಸುವ ಈ ವಿಶೇಷವಾದ ಹಬ್ಬ ಮನೆ-ಮನೆಯ ಹಬ್ಬವಾಗುವುದರ ಬದಲು ಎಲ್ಲೋ ಒಂದಿಷ್ಟು ಗ್ರಾಮಗಳಿಗೆ ಸೀಮಿತವಾಗಿರುವುದು ದುರಂತ. ಬರುಬರುತ್ತಾ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ, ಕೃಷಿ ಜಮೀನು ಕೂಡಾ ದೊಡ್ಡ ದೊಡ್ಡ ಕಟ್ಟಡಗಳಿಗೆ ಜಾಗ ಬಿಟ್ಟುಕೊಟ್ಟು, ತಮ್ಮ ವಿಸ್ತಾರವಾದ ಹರವನ್ನು ಕಳೆದುಕೊಂಡಿವೆ. ಹಿಂದಿನ ದಿನಗಳ ನಿಷ್ಠೆ ಇಂದು ಈ ಹಬ್ಬದಲ್ಲೂ ಕಡಿಮೆಯಾಗುತ್ತಿರುವುದು ಸತ್ಯ. ಆದರೆ ಇಂತಹ ವಿಶೇಷ ಮತ್ತು ಭೂತಾಯಿಯನ್ನು ಪೂಜಿಸುವ ಹಬ್ಬವು ಸರ್ವರ ಹಬ್ಬವಾಗಲಿ. ಅದರ ಜೊತೆಗೆ ಅರ್ಥ ಕಳೆದುಕೊಂಡು ಎತ್ತೆತ್ತಲೋ ಸಾಗುತ್ತಿರುವ ಉಳಿದ ಹಬ್ಬಗಳೂ ಅರ್ಥಪೂರ್ಣವಾಗಿ ಭಕ್ತಿಯ, ಸ್ನೇಹದ, ಸಂಬಂಧದ, ಬೆರೆಯುವಿಕೆಯ ಧ್ಯೋತಕವಾಗಲಿ, ಅದರ ಮೂಲಕ ವೈವಿಧ್ಯಮಯ ಸಂಸ್ಕ್ರತಿಯ ನಮ್ಮ ದೇಶ ಸಾಂಸ್ಕೃತಿಕವಾಗಿ ಎಲ್ಲೆಲ್ಲೂ ರಾರಾಜಿಸಲಿ ಎಂಬುದೊಂದೇ ಆಶಯ. ************************************

ಭೂತಾಯಿಗೆ ನಮನ Read Post »

You cannot copy content of this page

Scroll to Top