ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಲೆಕ್ಕಕ್ಕೊಂದು ಸೇರ್ಪಡೆ

ಲೇಖನ ಲೆಕ್ಕಕ್ಕೊಂದು ಸೇರ್ಪಡೆ ಶಾಂತಿ ವಾಸು ಚೀನಿಯರ ಕೆಟ್ಟ ಮನಸ್ಥಿತಿಯ ಕನ್ನಡಿ ಕೊರೊನ, ಭಾರತವನ್ನು ಪ್ರವೇಶಿಸುವ ಮೊದಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ಸಂಪೂರ್ಣ ದೇಹವನ್ನು ಅದೇನೋ ಹೊಸತರಹದ ದಿರಿಸಿನಿಂದ ಮುಖಸಹಿತ ಮುಚ್ಚಿಕೊಂಡ ಜನರು ಪ್ಲಾಸ್ಟಿಕ್ ಚೀಲದಲ್ಲಿ ಬಿಗಿಯಾಗಿ ಸುತ್ತಿದ ನೂರಾರು ಜನರ ಮೃತದೇಹಗಳನ್ನು ಒಟ್ಟೊಟ್ಟಿಗೇ, ಆಳವಾದ ಒಂದೇ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚುವುದು ಹಾಗೂ ಪೆಟ್ರೋಲ್ ಸುರಿದು ಸಾಮೂಹಿಕವಾಗಿ ಸುಡುವುದನ್ನು ನೋಡಿಯೇ ಪ್ರಪಂಚವು ನಡುಗಿಹೋಗಿತ್ತು. ಇದೇನು?? ಹೊಸದಾಗಿ ನಡೆದದ್ದೇ? ಅಥವಾ ಯಾವುದಾದರೂ ಸಿನಿಮಾಗಾಗಿ ಇರಬಹುದೇನೋ ಎಂದು ಗೊಂದಲಗೊಂಡ ಕೋಟ್ಯಂತರ ಭಾರತೀಯರಲ್ಲಿ ನಾನೂ ಒಬ್ಬಳು. ನಂತರದ ದಿನಗಳಲ್ಲಿ ಗುಂಪುಗುಂಪಾಗಿ ಚೀನೀ ಜನರು ನಿಂತಲ್ಲಿಯೇ ಹುಳುಗಳಂತೆ ಮುದುರಿ ಬೀಳುವ ದೃಶ್ಯವನ್ನು ಮಾಧ್ಯಮಗಳಲ್ಲಿ ತೋರಿಸಲಾಯಿತು. ಇದನ್ನು ಕಂಡ ನಮ್ಮನ್ನು ಹೆಚ್ಚಾಗಿ ಕಾಡಿದ್ದೆಂದರೆ, ಬಿದ್ದವರನ್ನು ಗಮನಿಸುವುದಾಗಲೀ ಏನಾಯಿತೆಂದು ತಿರುಗಿಯೂ ನೋಡುವ ವ್ಯವಧಾನವೋ ಕರುಣೆಯೋ ಇಲ್ಲದವರಂತೆ ಭಾವನಾರಹಿತರಾಗಿ ಓಡಾಡುತ್ತಿದ್ದ ಮಾಸ್ಕ್ ಧರಿಸಿದ ಚೀನಾ ಜನರ ಹೃದಯಹೀನತೆ. ಆಸ್ಪತ್ರೆಯ ದೃಶ್ಯಗಳಲ್ಲಿ ವೆಂಟಿಲೇಟರ್ ಹಾಕಿದ್ದರೂ ಉಸಿರಾಡಲು ಕಷ್ಟಪಡುವ ರೋಗಿಗಳ ನರಳಾಟ ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಕೊರೊನ ಎಂಬ ಹೊಸ ಖಾಯಿಲೆಯಿಂದ ಸಾವಿರಾರು ಸಂಖ್ಯೆಯ ಜನರು ಬೀದಿ ಹೆಣಗಳಾಗುತ್ತಿದ್ದಾರೆಂದೂ ಅವರನ್ನೆಲ್ಲಾ ಸಾಮೂಹಿಕವಾಗಿ ಹೂಳುತ್ತಿದ್ದಾರೆಂಬುದನ್ನೂ ನಾವೆಲ್ಲಾ ಅರಗಿಸಿಕೊಳ್ಳುವಷ್ಟರಲ್ಲಿ ನಮ್ಮೆಲ್ಲರ ಮಧ್ಯೆ ತನ್ನ ಕದಂಬಬಾಹುಗಳನ್ನು ಚಾಚಲು ಪ್ರಾರಂಭಿಸಿಯೇ ಬಿಟ್ಟಿತ್ತು ಅದೇ ಚೀನಾದ ಅನಾಮಿಕ ವೈರಸ್.. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯರ ಜೀವನದಲ್ಲೂ ಪ್ರಬಲ ಬದಲಾವಣೆ ತಂದ ಈ ವೈರಸ್ ಇಲ್ಲಿಯ ತನಕ ಲಕ್ಷಾಂತರ ಮಂದಿಯ ಪ್ರಾಣವನ್ನು ಬಲಿ ಪಡೆದಿದೆ. ಹಾಗೂ ಇನ್ನೂ ಮುಂದುವರೆಯುವ ಲಕ್ಷಣಗಳು ನಿಚ್ಚಳವಾಗಿವೆ.. ಪ್ರತಿ ಧರ್ಮದವರೂ ಅವರವರದೇ ರೀತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮೃತರ ಆತ್ಮವನ್ನು ಅಂತರಾತ್ಮನಲ್ಲಿ ವಿಲೀನಗೊಳಿಸುವ ಶ್ರೇಷ್ಠಪದ್ಧತಿಯನ್ನು ರೂಢಿಸಿಕೊಂಡು ಬಂದ ನಮ್ಮ ಭಾರತದಂತಹ ಪುಣ್ಯಭೂಮಿಯಲ್ಲಿ ಬದುಕಿದ ಮನುಷ್ಯರು ಬೀದಿ ಹೆಣಗಳಾಗಿಸುವುದನ್ನೂ, ಸತ್ತವರನ್ನು ದರದರನೇ ಎಳೆದೊಯ್ದು ಎತ್ತಿ ಹಳ್ಳಕ್ಕೆ ಬಿಸಾಡುವುದನ್ನು ಎಂದಿಗೂ ಯಾರೂ ಕಲ್ಪಿಸಿಯೂ ಇರಲಾರರು. ನಮ್ಮ ಸಂಸ್ಕೃತಿಯಲ್ಲಿಲ್ಲದ ಅನೇಕ ವಿಷಯಗಳಲ್ಲಿ ಅನ್ಯರನ್ನು ಅನುಸರಿಸುತ್ತಿರುವ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನುಷ್ಯರ ಸಂಸ್ಕಾರವನ್ನೂ ಅಮಾನುಷ್ಯವಾಗಿ ನಡೆಸಿಬಿಟ್ಟೆವು. ತನ್ನ ದೇಹಕ್ಕೆಂಥಹ ಅವಮಾನವಾಗುತ್ತಿದೆ ಎಂದು ಮೃತರಿಗೆ ತಿಳಿಯುವುದಿಲ್ಲವಾಗಲೀ, ಹತ್ತಿರ ಸುಳಿಯಲು ಅವಕಾಶವಿಲ್ಲದೆ ದೂರದಲ್ಲಿ ನಿಂತು ನೋಡುತ್ತಿರುವ ಸಂಬಂಧಿಕರು ಅಥವಾ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದ ಸಾರ್ವಜನಿಕರಲ್ಲಿ ಎಂಥ ಭಾವನೆ ಹಾಗೂ ಭಯ ಹುಟ್ಟಿಸುತ್ತಿವೆ ಎಂದು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಮೋದಿ ಬೇಕಾ ಮನಮೋಹನ್ ಸಿಂಗ್ ಬೇಕಾ ಎಂದು ಕೇಳಿ, ಒಂದನ್ನು ಒತ್ತಿ ಎರಡನ್ನು ಒತ್ತಿ ಎನ್ನುತ್ತಾ, ಮುಂದಿನ ಪ್ರಧಾನಿ ಯಾರೆಂಬ ದೊಡ್ಡ ಸಮೀಕ್ಷೆಯನ್ನು ಸರಳವಾಗಿ ಸದ್ದಿಲ್ಲದೇ ನಡೆಸಿ ನಿಂತಗಳಿಗೆಯಲ್ಲಿಯೇ ಮುಂದಿನ ಪ್ರಧಾನಿ ಯಾರೆಂದು ನಿಖರತೆ ಸಾರುವ ಆಪ್ಗಳು(app), ಕೇವಲ ಒಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ, ಕೋವಿಡೇತರ ರೋಗಿಗಳು ಯಾವ ಆಸ್ಪತ್ರೆಯನ್ನು ಎಡತಾಕಬೇಕು ಎಂಬ ವಿವರ ಒದಗಿಸುವುದನ್ನು ನಿರಾಕರಿಸುತ್ತಿವೆ ಏಕೆ?? ಪ್ರಮಾದಗಳನ್ನು ತಡೆಯಲಾಗದ ಇಚ್ಚಾಶಕ್ತಿಯ ಕೊರತೆ, ಕೊರೊನಾದಿಂದ ಧಿಡೀರನೆ ವ್ಯಕ್ತಿಯನ್ನು ಕಳೆದುಕೊಂಡ ದುಃಖ, ಮುಂದೇನು ಎಂದು ದಿಕ್ಕುತೋರದೆ ಚಿಂತೆಗೊಳಗಾದ ಕುಟುಂಬಸ್ಥರಿಗೆ, ಕೊನೆಪಕ್ಷ ಮೃತರ “ಮರ್ಯಾದಾ ಶವಸಂಸ್ಕಾರ”ದ ಭರವಸೆ ನೀಡುವಲ್ಲಿ ವಿಫಲವಾಯಿತು. ಸಾರ್ವಜನಿಕರಾದ ನಾವು ಅರಿತಿರಲೇಬೇಕಾದ ವಿಷಯವೆಂದರೆ ಯಾವುದೇ ಪಕ್ಷವಾಗಲಿ ಪ್ರಜಾಪ್ರಭುತ್ವದಲ್ಲಿ ಹಲವರು ಆಶಿಸಿದಂತೆ ಆಳಲು ಬರುವ ಜನನಾಯಕರ ಪ್ರಭುತ್ವವನ್ನೇ, ಆಯ್ಕೆ ಮಾಡದವರೂ ಸಹಾ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಆರಿಸಿದ ವ್ಯಕ್ತಿಯು ನಮ್ಮನ್ನು ಅವರಾಯ್ಕೆಯ ಹಲವರ ಅಧೀನಕ್ಕೆ ತಳ್ಳಿಬಿಡುವ ಸತ್ಯವನ್ನು ನಾವು ಅರಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಂತಹ ಲೋಕವ್ಯಾಪಿ ಸಮಸ್ಯೆಯ ಸನ್ನಿವೇಶವನ್ನೆದುರಿಸಿದ ಯಾವುದೇ ಜನರು ನಮ್ಮ ಮಧ್ಯೆ ಇಲ್ಲ. ನಮ್ಮ ದೇಶದ್ದಲ್ಲದ ಹಂತಕ ವೈರಸ್ಸಿನ ದಮನ ಮಾಡುವ ಔಷಧ ಬರುವ ತನಕ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ದೊಡ್ಡದಿದೆ. ಆದರೆ ಅದನ್ನು ಸರಳಗೊಳಿಸಿಕೊಂಡು,ಆದಷ್ಟು ಮನೆಯಲ್ಲಿರುವುದು, ಹೊರಹೋಗುವಾಗ ಮೂಗುಬಾಯಿ ಮುಚ್ಚುವ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುವುದರಿಂದ ಕೊರೊನ ತಡೆಯಬಹುದೆಂದಾದರೆ, ಇವೆಲ್ಲವನ್ನು ಅನುಸರಿಸಿ ಹೊಸ ಔಷದಕ್ಕೆ ಪ್ರಯೋಗ ಶಿಶುವಾಗುವುದನ್ನು ಹಾಗೂ ಸರ್ಕಾರೀ ಲೆಕ್ಕ ಪುಸ್ತಕದ ಖಾಯಿಲೆಗೋ ಅಥವಾ ಸಾವಿಗೋ ನಾವು ಒಂದು ಸಂಖ್ಯೆಯಾಗುವುದನ್ನು ತಪ್ಪಿಸಬಹುದು. ***********************

ಲೆಕ್ಕಕ್ಕೊಂದು ಸೇರ್ಪಡೆ Read Post »

ಇತರೆ, ಜೀವನ

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..!

ಲೇಖನ ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕೆ.ಶಿವು ಲಕ್ಕಣ್ಣವರ ಹಿಂದಿ ಹೇರಿಕೆಯು ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು; ಹಿಂದಿ ಹೇರಿಕೆಯ ವಿರುದ್ಧ ರಾಜ್ಯ ನಾಯಕರು ಕೆಂಡಾಮಂಡಲವಾಗಿದ್ದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ  ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೇ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ಮತ್ತೇ ದಕ್ಷಿಣ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆಗೆ ಮುಂದಾಗಿದೆ. ಇದಕ್ಕೆ ರಾಜ್ಯದಲ್ಲೂ ಸಹ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಹಾಗಾದರೆ ಏನಿದು ತ್ರಿಭಾಷಾ ನೀತಿ? ಇದಕ್ಕೆ ದಕ್ಷಿಣ ರಾಜ್ಯಗಳ ವಿರೋಧವೇಕೆ?..?– ಏನಿದು ತ್ರಿಭಾಷಾ ಸೂತ್ರ?— ಬಹುಭಾಷಾ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 1968 ರಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿತ್ತು. 1986 ರ ನೀತಿಯಲ್ಲಿಯೂ ಇದನ್ನು ಪುನರುಚ್ಚರಿಸಲಾಗಿತ್ತು. ಇದರಂತೆಯೇ ದೇಶದಾದ್ಯಂತ ಶಾಲಾ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಅಲ್ಲಿನ ಸ್ಥಳೀಯ ಮಾತೃಭಾಷೆಯ ಜೊತೆಗೆ ಇಂಗ್ಲೀಷ್​ ಹಾಗೂ ತೃತೀಯ ಭಾಷೆಯಾಗಿ ಹಿಂದಿಯನ್ನೂ  ಕಲಿಸುವುದು ಈ ನೀತಿಯ ಉದ್ದೇಶವಾಗಿತ್ತು. ಆದರೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆಯಿಂದ ಒಂದು ಭಾಷೆ ಒಂದು ಸಂಸ್ಕೃತಿ ನಿರ್ಮಾಣವಾಗುತ್ತದೆ. ಇದರಿಂದ ದ್ರಾವಿಡ ಭಾಷೆಗಳ ಅಸ್ಮಿತೆಗೆ ಕೊಡಲಿ ಪೆಟ್ಟು ಬಿದ್ದಂಗಾಗುತ್ತದೆ. ಇದರಿಂದ ಮುಂದೊಂದು ದಿನ ದ್ರಾವಿಡ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಈ ನೀತಿಯನ್ನು 1969 ರಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು. ಒಂದು ಹಂತದಲ್ಲಿ ಸ್ವತಂತ್ರ್ಯ ದ್ರಾವಿಡ ರಾಷ್ಟ್ರದ ಪರಿಕಲ್ಪನೆಯನ್ನೂ ಮುಂದಿಟ್ಟಿತ್ತು. ಕೊನೆಗೆ ಕೇಂದ್ರದ ನೀತಿಗೆ ಬೆನ್ನು ತೋರಿಸಿದ್ದ ತಮಿಳುನಾಡು ಈವರೆಗೆ ದ್ವಿಭಾಷಾ ಸೂತ್ರವನ್ನು ಮಾತ್ರ ಅನುಸರಿಸುತ್ತಿದೆ. ತಮಿಳುನಾಡಿನಲ್ಲಿ ಕಳೆದ 6 ದಶಕದಿಂದ ಹಿಂದಿ ಕಲಿಕೆ ಕಡ್ಡಾಯವಲ್ಲ. ಇದರಂತೆ ಅಲ್ಲಿನ ಮಕ್ಕಳು ತಮಿಳು ಹಾಗೂ ಆಂಗ್ಲ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಾತ್ರ ಹಿಂದಿಯನ್ನು ಸಾಮಾನ್ಯವಾಗಿ ಕಲಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತಮಿಳುನಾಡನ್ನು ಗುರಿಯಾಗಿಸಿಕೊಂಡು ಮತ್ತೇ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ, ಕೇಂದ್ರದ ಈ ನೀತಿಗೆ ಇದೀಗ ಕರ್ನಾಟಕ ಸೇರಿದಂತೆ ಉಳಿದೆಲ್ಲಾ ದಕ್ಷಿಣ ರಾಜ್ಯಗಳು ಒಮ್ಮೆಲೆ ತಿರುಗಿಬಿದ್ದಿವೆ. ರಾಜ್ಯದ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ..! ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವ ತೀರ್ಮಾನ ಹೊರಬೀಳುತ್ತಿದ್ದಂತೆಯೇ ರಾಜ್ಯ ನಾಯಕರು ಇದನ್ನು ಸಾರಾಸಗಟಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು’ ಎಂದಿದ್ದರು. ಕುಮಾರಸ್ವಾಮಿ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಇದೀಗ ಬಹುತೇಕ ರಾಜ್ಯದ ಎಲ್ಲಾ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಕೂಗೆತ್ತಿದ್ದಾರೆ. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಗುಡುಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ’ ಮಾಡಿದ್ದಾರೆ ಅವರು. ಮತ್ತೊಂದು ಟ್ವೀಟ್​ನಲ್ಲಿ, ‘ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿದೆ. ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ‘ಕೇಂದ್ರ ಸರ್ಕಾರ ಏಕಮುಖ ನಿರ್ಧಾರ ಕೈಗೊಳ್ಳುತ್ತಿದೆ. ನಾವೇನಾದರೂ ಹಿಂದೆ ಭಾಷೆಬೇಕೆಂದು ಕೇಳಿದ್ದೇವೆಯೇ? ಕೇಂದ್ರ‌ ಇದಕ್ಕೆ‌ ನೀತಿ ಜಾರಿಗೆ ತರುತ್ತಿರುವುದು ಕನ್ನಡಿಗರ ಮೇಲೆ ಬಲವಂತದ ಹಿಂದಿ ಹೇರಿಕೆಯಾಗಿದೆ. ನೆಲ‌, ಜಲ‌, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾರೆ ನಾವು ತಮಿಳುನಾಡು ಮಾದರಿಯ ಹೋರಾಟ ಮಾಡಲೂ ಸಿದ್ಧ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಅವರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು, ‘ಕೇಂದ್ರ ಸರ್ಕಾರದ ಈ ನೀತಿ ರಾಜ್ಯಗಳ ಸಂವೇದನೆ ಹಾಗೂ ಉತ್ತಮ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಂತಿರಬೇಕು. ಆದರೆ, ಈ ಭಾಷಾ ನೀತಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ಮೇಲಿನ ಯಾವುದೇ ಭಾಷಾ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದ್ದಾರೆ. ಒಟ್ಟಾರೆ ಕೇಂದ್ರದಲ್ಲಿ ಹೊಸ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ಮತ್ತೇ ಅಧಿಕಾರ ಹಿಡಿದ ಕೇವಲ ಮೂರು ದಿನಗಳಲ್ಲಿ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದೆ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದಾಗಲು ದಕ್ಷಿಣ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು ಪ್ರಬಲವಾಗಿ ವಿರೋಧಿಸಿತ್ತು. ಇದೀಗ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸಹ ಒಟ್ಟಾಗಿ ಕೇಂದ್ರದ ವಿರುದ್ಧ ಹಿಂದಿ ಹೇರಿಕೆ ವಿರೋಧದ ಹೋರಾಟಕ್ಕೆ ದನಿಗೂಡಿಸಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಚಳುವಳಿಯಾಗಿ ರೂಪಗೊಂಡರೂ ಅಚ್ಚರಿ ಇಲ್ಲ. ಹೀಗಿರುವಾಗ ಹಿಂದಿ ಹೇರಿಕೆಯನ್ನು ಕೈಬಿಟ್ಟರೇ ಒಳಿತು..! *****************************************************************

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! Read Post »

ಇತರೆ, ಜೀವನ

ವಿವಾಹ ವ್ಯವಸ್ಥೆ- ಒಂದು ಚರ್ಚೆ

ಚರ್ಚೆ ವಿವಾಹ ವ್ಯವಸ್ಥೆ- ಒಂದು ಚರ್ಚೆ ಚಂದಕಚರ್ಲ ರಮೇಶ ಬಾಬು ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ)  ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) ನಮ್ಮ ವಿವಾಹ ಪದ್ಧತಿಗಳಲ್ಲಿ ಗಾಂಧರ್ವ ವಿವಾಹ, ರಾಕ್ಷಸ ವಿವಾಹ ಅಂತ ಮತ್ತೆ ಸುಮಾರು ತರಗಳಿವೆ. ಆದರೆ ನಾವು ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ರೀತಿ ನೀತಿಗಳಿಗೆ ಸಂಬಂಧಪಟ್ಟಂತೆ ನಡೆಯುವ ವಿವಾಹಗಳ ಬಗ್ಗೆ ಮಾತ್ರ ಮಾತಾಡೋಣ. ಸದ್ಯದ ದಿನಗಳಲ್ಲಿ ಬಳಕೆಯಲ್ಲಿರುವ ಈ ’ಪ್ರೇ’ ಎನ್ನುವ ಪದದ ಅರ್ಥ ನಿಘಂಟುವಿನ ಪ್ರಕಾರ  “ಪ್ರೀತಿ, ಸ್ನೇಹ, ಅನುರಾಗ, ಮಮತೆ” ಅಂತೆಲ್ಲ ಇದೆ. ಸಂಸಾರದಲ್ಲಿಯ ಸದಸ್ಯರ ನಡುವೆ ಪ್ರೀತಿ, ಪ್ರೇಮ ಇರುತ್ತವೆ. ಆದರೆ ಅಲ್ಲಿಯ ಪ್ರೇಮಕ್ಕೂ, ವಿವಾಹ ಸಂಬಂಧೀ ಪ್ರೇಮಕ್ಕೂ ವ್ಯತ್ಯಾಸವಿದೆ. ವಿವಾಹ ಸಂಬಂಧದ ಪ್ರೇಮ ಎಂದರೆ ಗಂಡು ಹೆಣ್ಣಿನ ನಡುವಣ ಪ್ರೀತಿ ಮಾತ್ರ ಅಂತ ಸಿನಿಮಾಗಳಲ್ಲಿ ಬಳಸುವ ಅರ್ಥದಿಂದಲೇ ಹುಟ್ಟಿ ಬಂದಿದೆ. ಇನ್ನೂ ಹೇಳ ಬೇಕೆಂದರೆ ಬೇರೇ ಜಾತಿ, ಬೇರೇ ಪಂಗಡ, ಬೇರೇ ಧರ್ಮದ ಹುಡುಗ, ಹುಡುಗಿಯರ ನಡುವಿನ ಪ್ರೀತಿಗೆ ಮಾತ್ರವೇ ಪ್ರೇಮ ಎನ್ನುವ ಹಾಗೆ ಬಳಕೆ ಯಾಗುತ್ತಿದೆ. ಪ್ರೇಮ ವಿವಾಹ ಎಂದರೆ ಇದೇ ರೀತಿಯ ಮದುವೆ. ಒಂದೇ ಜಾತಿಯ ಹುಡುಗ ಹುಡುಗಿ ಇಷ್ಟಪಟ್ಟು ಮದುವೆಯಾದರೇ ಅದು ಪ್ರೇಮ ವಿವಾಹದ ಕೆಳಗೆ ಬರುತ್ತದಾ ? ಇದಕ್ಕೆ ಉತ್ತರವಿಲ್ಲ. ಮತ್ತೊಂದು ರೀತಿ ಮದುವೆಯ ಬಗ್ಗೆ ಜಾಸ್ತಿ ಹೇಳಬೇಕಿಲ್ಲ. ದೊಡ್ಡವರ ಅನುಭವಕ್ಕೆ ಮಣೆ ಹಾಕಿ, ಅವರು ನಮ್ಮ ಒಳಿತನ್ನೇ ನೋಡುತ್ತಾರೆ ಅಂತ ನಂಬಿ, ಅವರು ನಿರ್ಣಹಿಸಿದ ಹೆಣ್ಣು/ಗಂಡನ್ನು ತಾವೂ ನೋಡಿ, ಒಪ್ಪಿ ಮದುವೆಯಾಗುವುದು.. ಲವ್ ಮ್ಯಾರೇಜ್ ( ಈಗಿನ ಪ್ರೇಮ ವಿವಾಹಗಳ ತುಂಬಾ ಕೇಳಿ ಬರುವ ಹೆಸರು) ಮಾಡಿಕೊಳ್ಳ ಬಯಸುವ ಜೋಡಿಯ ವಾದನೆ “ ದೊಡ್ಡವರು ನೋಡಿ ನಿಶ್ಚಯಿಸಿದ ಮದುವೆಗಳಲ್ಲಿ ಪ್ರೀತಿ ಎಲ್ಲಿರುತ್ತದೆ ?” ಅಂತ. ಯಾಕಿರಬಾರದು ಅಂತ ಅವರಿಗೆ ಅನಿಸುವುದಿಲ್ಲ. ಆ ವಯಸ್ಸೇ ಹಾಗೆ. ದುಡುಕುತನ ತುಂಬಿದ ಪ್ರಾಯ. ತಾವು ಬಲೆಗೆ ಬಿದ್ದ ಆಕರ್ಷಣೆಗೆ ಒಂದು ವಾದನೆಯನ್ನು ಹುಟ್ಟಿಸಿಕೊಂಡು ಅದಕ್ಕೇ ಜೋತು ಬೀಳುವ ಕ್ರಮ. ಆದರೆ ಅದೊಂದೇ ವಾಸ್ತವವಲ್ಲ. ಕೆಲ ಹುಡುಗ/ಹುಡುಗಿಯರು ತಮ್ಮ ಶಾಲೆ ಕಾಲೇಜುಗಳಲ್ಲಿ ತಾವು ರುಚಿ ನೋಡಿದ ಮಧುರ ಗಳಿಗೆಗಳನ್ನು ಬರೀ ಮಕ್ಕಳ ಆಟಿಕೆಯ ಆಕರ್ಷಣೆ ಎಂದು ಮರೆತು ತಮ್ಮ ತಂದೆ ತಾಯಿ ನೋಡಿದ ಮದುವೆಗಳಿಗೆ ಒಪ್ಪುತ್ತಾರೆ. ಮತ್ತೆ ಕೆಲವರು ಅತ್ತ ಪ್ರೀತಿಸಿದವಳನ್ನು ಮದುವೆಯಾಗಲಾರದೇ ಭಗ್ನ ಪ್ರೇಮಿಗಳಾಗುತ್ತಾರೆ. ಅಥವಾ ದೊಡ್ಡವರು ಹೇಳಿದ ಮದುವೆಗೆ ಒಪ್ಪಿ ಬೇರೇ ಯಾರನ್ನೋ ಮದುವೆಯಾಗಿ ಆ ಬಂಧದಲ್ಲಿಯ ಆತ್ಮೀಯ ಭಾವನೆಗೆ ದೂರವಾಗುತ್ತಾರೆ. ಎರಡೂ ಪದ್ಧತಿಗಳಲ್ಲೂ ಒಳಿತುಗಳಿವೆ, ಕೆಡಕುಗಳಿವೆ. ಯಾವುದನ್ನೂ ನಾವು ಇದೇ ಸರಿಯೆಂದು ಹೇಳಲಾಗುವುದಿಲ್ಲ. ಯಾವುದನ್ನೂ ಬೇಡದ್ದೆಂದು ತೆಗೆದು ಹಾಕಲಾಗುವುದಿಲ್ಲ. ಪ್ರೇಮ ವಿವಾಹ ( ಲವ್ ಮ್ಯಾರೇಜ್ ) ಗಳು ಮಾತ್ರ ಇಷ್ಟು ದಶಕಗಳು  ಕಳೆದರೂ ತಂದೆ ತಾಯಿಗಳ ಮನಸ್ಸಿಗೆ ಬೆಂಕಿ ಹಚ್ಚುವ ಮದುವೆಗಳೇ. ತಾವು ಬೆಳೆಸಿದ ಮಕ್ಕಳು ತಮ್ಮ ಕಣ್ಣೆದುರಲ್ಲೇ ತಮ್ಮನ್ನು ಎದುರಿಸಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ತಮಗೆ ತಿಳಿದ ಹಾಗೆ ಮಾಡುವುದು ಯಾವ ತಂದೆ ತಾಯಿಗೂ ರುಚಿಸುವುದಿಲ್ಲ. ಮತ್ತೆ ಅವರ ಅಂತಸ್ತು, ಸಮಾಜದಲ್ಲಿ ಅವರಿಗಿರುವ ಮಾನ ಮರ್ಯಾದೆ ಮತ್ತೆ ಒಮ್ಮೊಮ್ಮೆ ಬರೀ ಅಹಂಕಾರ. ಇವೆಲ್ಲ ಅಡ್ಡ ಬರುತ್ತವೆ. ಕೆಲ ಸೌಮ್ಯ ಸ್ವಭಾವದ ತಂದೆ ತಾಯಿಯರು ತಮ್ಮ ಮಕ್ಕಳ ಆಯ್ಕೆ, ಭವಿಷ್ಯ ನೋಡಿ ಒಪ್ಪುತ್ತಾರೆ. ಅವರ ನಿಲುವು ಇಷ್ಟೇ “ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವವರು ಅವರಿಬ್ಬರೂ. ನಾವು ಇಂದು ಇದ್ದೇವೆ, ನಾಳೆ ಇಲ್ಲ. ಅವರ ಆಯ್ಕೆಗೆ ನಾವೇಕೆ ಅಡ್ಡಿ ಹೇಳುವುದು “ಅಂತ.  ಈ ತರದ ನಿಲುವಿನಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ದೂರದೃಷ್ಟಿ ಮತ್ತು ಅವರ ವೈರಾಗ್ಯ ಕಾಣುತ್ತದೆ. ಆದರೆ ಇಲ್ಲಿ ಬಹುಭಾಗ ನಮಗೆ ಕಾಣ ಸಿಗುವುದು ಮಧ್ಯ ತರಗತಿಯ ಕುಟುಂಬಗಳೇ. ಇವರಿಗಿಂತ ಒಂದು ಮೆಟ್ಟಿಲು ಮೇಲಿರುವ ವರ್ಗದವರು ಆಷ್ಟು ಬೇಗ ಪ್ರೇಮ ವಿವಾಹಕ್ಕೆ ಒಪ್ಪುವುದಿಲ್ಲ. ತಮಗಿರುವ ಎಲ್ಲ ರೀತಿಯ ದಾರಿಗಳಿಂದ ಮಕ್ಕಳನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾರೆ. ಒಪ್ಪದಿದ್ದಲ್ಲಿ ಹಿಂಸೆಗೂ ಹೇಸುವುದಿಲ್ಲ. ಇವರಿಗೆ ಸಮಾಜದ ನೋಟ ಮುಖ್ಯ. ಉತ್ತರ ಭಾರತದ ಕೆಲ ಭಾಗಗಳಲ್ಲಿ ಈ ರೀತಿಯ ಪ್ರೇಮ ವಿವಾಹಗಳಾದಲ್ಲಿ ಹೆಣ್ಣು ಕುಟುಂಬದ ಕಡೆಯವರು “ ಆನರ್ ಕಿಲ್ಲಿಂಗ್ ’ ಹೆಸರಲ್ಲಿ ಹುಡುಗನನ್ನು ಅಥವಾ ಇಬ್ಬರನ್ನೂ ಕೊಂದ ಪ್ರಕರಣಗಳು ಸಾಕಷ್ಟಿವೆ. ಅವರನ್ನು ತಮ್ಮ ಮನೆಗೆ ಬರಗೊಡದಿರುವುದು ಮುಂತಾದವುಗಳಿಂದ ಆ ದಂಪತಿಗಳಿಗೆ ಸಾತ್ವಿಕ ಹಿಂಸೆ ಕೊಡುತ್ತಾರೆ. ಪ್ರೇಮ ವಿವಾಹ ಮಾಡಿಕೊಂಡ ಜೋಡಿಗಳು ಒಮ್ಮೊಮ್ಮೆ ಭಿನ್ನ ಹಿನ್ನೆಲೆಗಳಿಂದ ಹೊಂದಾಣಿಕೆ ಕಾಣದೆ ಕಷ್ಟ ಪಡುತ್ತಾರೆ. ತಮ್ಮ ತಂದೆ ತಾಯಿಯರನ್ನು ಮತ್ತು ಬಂಧುವರ್ಗದವರ ಸಾನ್ನಿಹಿತ್ಯ ಕಳೆದುಕೊಂಡು ಮಾನಸಿಕ ದೌರ್ಬಲ್ಯಕ್ಕೊಳಗಾಗುತ್ತಾರೆ. ಈಗ ಎರಡೂ ಕಡೆಯ ವಾದಗಳನ್ನು ಒಮ್ಮೆ ತೂಗಿ ನೋಡೋಣ. ಪ್ರೇಮಿಗಳ ವಾದ: ನಾವು ಯುಕ್ತವಯಸ್ಕರಾಗಿದ್ದೇವೆ. ನಮ್ಮ ಬೇಕು ಬೇಡಗಳು ನಮಗೆ ಗೊತ್ತು. ನಮ್ಮ ವೈವಾಹಿಕ ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಮಗೆ ಅರಿವಿದೆ. ನೀವೇನೋ ತ್ಯಾಗ ಮಾಡಿದ್ದೇವೆ ಎನ್ನುವುದು ಬೇಡ. ನಮ್ಮ ಬಾಲ್ಯದ ಮಧುರಕ್ಷಣಗಳನ್ನು ನಾವು ನಿಮಗೆ ಕೊಟ್ಟಿಲ್ಲವೇ ? ನನಗೆ ಆ ಹುಡುಗನ/ಹುಡುಗಿಯ ಪರಿಚಯವಿದೆ. ಅವಳ/ಅವನ ಜೊತೆ ನನ್ನ ಬಾಳು ಹಸನಾಗಿರುತ್ತದೆ. ಸಮಾಜ ಬದಲಾಗುತ್ತಿದೆ. ನೀವು ಸಹ ಆಗಿ. ಇನ್ನೆಷ್ಟು ದಿನ ನೀವು ನಿಮ್ಮ ಇಷ್ಟಾಯಿಷ್ಟಗಳನ್ನು ನಮ್ಮ ಮೇಲೆ ಹೇರುತ್ತೀರಿ? ಅಮೆರಿಕ, ಯೂರೋಪ್ ದೇಶಗಳ ಜನರನ್ನು ನೋಡಿ. ತಮಗೆ ಬೇಕಾದವರನ್ನು ಡೇಟಿಂಗ್ ಗಳ ಮೂಲಕ ತಾವೇ ಆರಿಸಿಕೊಳ್ಳುತ್ತಾರೆ. ಹುಡುಗಿಯರಾದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಯಾರೋ ನೋಡಿದ ಅಪರಿಚಿತ ಹುಡುಗನಿಂದ ಕತ್ತು ಬಗ್ಗಿಸಿ ತಾಳಿ ಕಟ್ಟಿಸಿಕೊಳ್ಳಲು ನಾನು ತಯಾರಿಲ್ಲ ಅಂತಲೂ ಹೇಳುವುದಿದೆ. ದೊಡ್ಡವರ ವಾದಃ ನೀವೆಷ್ಟೇ ದೊಡ್ಡವರಾದರೂ ಸಮಾಜದಲ್ಲಿನ ಒಳಿತು ಕೆಡಕುಗಳ ಪರಿಚಯವಿರುವುದಿಲ್ಲ. ಅದಕ್ಕೆ ನಾವು ಹಿನ್ನೆಲೆ ಎಲ್ಲ ವಿಚಾರಿಸಿ, ನೋಡಿ ಮದುವೆ ಮಾಡುತ್ತೇವೆ. ಅದಕ್ಕೆ ಏಕೆ ಆಕ್ಷೇಪಣೆ? ನಾವೇನು ನಿಮ್ಮ ಶತ್ರುಗಳೇ ? ನಿಮ್ಮ ಒಳಿತು ಕೆಡುಕು ನಮಗೆ ಗೊತ್ತಾಗೋದಿಲ್ವಾ ? ನಾವದೆಷ್ಟು ನಮ್ಮ ಸುಖಗಳನ್ನು ತ್ಯಾಗ ಮಾಡಿ ನಿಮ್ಮನ್ನು ಬೆಳೆಸಿದ್ದೇವೆ ಗೊತ್ತಾ? ಕೊನೆಗೆ ಈ ತರನಾ ಮಾಡೋದು? ನಾವೆಲ್ಲ ಈ ತರದ ಮದುವೆ ಆದವರೇ. ನಾವೇನಾಗಿದ್ದೇವೆ ? ನಮ್ಮ ಜಾತಿಯವರಲ್ಲಿ ನಮ್ಮ ಮರ್ಯಾದೆ ಉಳಿಯುತ್ತದೆಯೇ ? ನಾಲ್ಕು ಜನದ ನಡುವೆ ಜೀವನ ನಡೆಸುವುದು ಹೇಗೆ ? ನಿಮ್ಮ ತಂಗಿಯ ಮದುವೆ ಹೇಗಾದೀತು ನೀನು ಈ ರೀತಿ ಮಾಡಿದರೆ ? ಎರಡೂ ಕಡೆಯ ವಾದಗಳಲ್ಲಿ ನಿಜಾಂಶಗಳಿಲ್ಲ ಅಂತ ಹೇಳಲಾಗದು. ೨೦ನೆಯ ಶತಮಾನದ ಕೊನೆಯಲ್ಲಿ ಪ್ರಾರಂಭವಾದ ತಂತ್ರಜ್ಞಾನದ ಸ್ಫೋಟ ಇಡೀ ಜಗತ್ತಿನ ಜೊತೆಗೆ ಭಾರತದ ಸಮಾಜಕ್ಕೂ ತನ್ನ ಪ್ರಭಾವ ತೋರಿತು. ಹೆಣ್ಣುಮಕ್ಕಳಿಗೆ ಕೆಲಸ ಸಿಗಲು ಆರಂಭವಾಯಿತು. ಕೈತುಂಬಾ ಸಂಬಳ ಬರಲು ಶುರುವಾಯಿತು. ಕೆಲಸದ ಸಲುವಾಗಿ ನಗರಗಳಿಗೆ ಹೋಗುವುದು ನಡೆಯಿತು. ಅಲ್ಲಿಯ ವರೆಗೆ ನೆಂಟರಿಷ್ಟರ ಮನೆಗಳಲ್ಲಿ ಇರುತ್ತಿದ್ದ ಹೆಣ್ಣು ಮಕ್ಕಳು ಪೇಯಿಂಗ್ ಗೆಸ್ಟ್ ಗಳಾಗಿ ಇರುತ್ತ ಸ್ವತಂತ್ರವಾಗಿ ಇರಲು ಶುರುವಾಯಿತು. ಇತರೆ ರಾಜ್ಯಗಳ, ಪ್ರದೇಶಗಳ ಹುಡುಗರ ಜೊತೆ ಬೆರೆಯುವುದು ಪ್ರಾರಂಭವಾಯಿತು. ಇದೆಲ್ಲದರ ಜೊತೆ ಅಂತರ್ಜಾಲ ತುಂಬಾ ಸುಲಭದಲ್ಲಿ ಸಿಗುವಂತಾಗಿ ಜಗತ್ತಿನ ಬೇರೇ ಬೇರೇ ಸಮಾಜಗಳ ರೀತಿ ನೀತಿ, ಆಚಾರ ವ್ಯವಹಾರ ಗೊತ್ತಾಗಲು ಮೊದಲಾಯಿತು. ಒಂದು ರೀತಿ ಹೇಳ ಬೇಕೆಂದರೆ ಅಲ್ಲಿಯ ವರೆಗಿದ್ದ ಸಮಾಜದ ಮುಖವೇ ಬದಲಾಯಿತು. ಆಗಲೇ ಈ ರೀತಿಯ ಪ್ರೇಮ ವಿವಾಹಗಳು ಸಹ ಹೆಚ್ಚುತ್ತ ಹೋದವು. ತನಗೆ ಮೆಚ್ಚುಗೆಯಾದ ಹುಡುಗ/ಹುಡುಗಿಯರಲ್ಲಿ ಗುಣ ನೋಡಲಾರಂಭಿಸಿದ ಯುವ ಪೀಳಿಗೆ, ತಾವಿರುವ ಸಮಾಜದ ಕಟ್ಟಳೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಪ್ರಾರಂಭವಾಯಿತು. ಅಲ್ಲಿಂದ ಪ್ರಾರಂಭವಾದ ಈ ಪ್ರೇಮ ವಿವಾಹದ ರಭಸ ದೊಡ್ಡವರು ನೋಡಿ ಮಾಡುವ ವಿವಾಹ ವ್ಯವಸ್ಥೆಯನ್ನು ಮತ್ತು ಅದರಲ್ಲಿಯ ಪ್ರೀತಿಯನ್ನು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ. ಹೀಗೆ ಬದಲಾದ ದೃಷ್ಟಿಕೋನಕ್ಕೆ ಪೂರಕವಾಗಿ ನಮ್ಮ ಚಲನ ಚಿತ್ರಗಳು ಸಹ ಪ್ರೇಮದ ಕತೆಗಳನ್ನು ತೆಗೆದು ಅವುಗಳ ಪರವಾಗಿ ತಮ್ಮ ವಾದವನ್ನು ಮಂಡಿಸುವ ಸಂದೇಶಗಳನ್ನು ನೀಡಲಾರಂಭಿಸಿದವು. ಇದರಿಂದ ಯುವಲೋಕವೆಲ್ಲ ಒಂದು ತರವಾದ ರೆಬೆಲ್ ಮನಸ್ತತ್ವವನ್ನು ಅಳವಡಿಸುಕೊಂಡಿತು. ತಂದೆ ತಾಯಿಯರ ಮಾತು ಲಕ್ಷ್ಯವಿಲ್ಲದಾಯಿತು. ತಮಗೊಂದು ಸ್ಪೇಸ್ ಎಂಬ ಹೊಸ ಪದವನ್ನು ಹುಟ್ಟು ಹಾಕಿಕೊಂಡು ತಾವು ಮಲಗುವ ಕೋಣೆಗೆ ಬಾಗಿಲು ಜಡಿತು ತಮ್ಮದೇ ಲೋಕದಲ್ಲಿ ಇರಲು ಆರಂಭಿಸಿತು. ಅಮ್ಮ ಅಡಿಗೆ ಮಾಡುವುದಕ್ಕೆ, ಅಪ್ಪ ಎಟಿಎಂ ಕಾರ್ಡಿಗೆ ಹಣ ಹಾಕುವುದಕ್ಕೆ ಎನ್ನುವ ಧೋರಣೆ ಜಾಸ್ತಿಯಾಯಿತು. ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ಮೇಲಂತೂ ಯುವ ಪೀಳಿಗೆ ತಮ್ಮದೇ ಆದ ಲೋಕದಲ್ಲಿ ಸಂಚರಿಸಲಾರಂಭಿಸಿತು. ಇವರಿಗೆ ಮಾಧ್ಯಮಗಳಲ್ಲಿಯ ತಮ್ಮ ಸ್ನೇಹಿತರು ಹೇಳಿದ್ದೇ ವೇದವಾಕ್ಯ, ಅವರು ಮಾಡಿದ್ದೇ ಅನುಕರಣೆಗೆ ಯೋಗ್ಯ. ಹೀಗಿರುವ ಇವರಿಗೆ ಅರೇಂಜ್ಡ್ ಮದುವೆಗಳಲ್ಲಿ ಪ್ರೀತಿ ಇರುವುದಿಲ್ಲ ಎನಿಸುವುದು ಸ್ವಾಭಾವಿಕವಾಯಿತು. ನಮ್ಮ ದೇಶದಲ್ಲಿಯ ಅಂಕೆ ಸಂಖ್ಯೆಗಳ ಪ್ರಕಾರ ಪ್ರೇಮ ವಿವಾಹಗಳು ಶೇಕಡಾ ೧೮ ಮಾತ್ರ. ಇದರರ್ಥ ಇನ್ನೂ ೮೨% ಹುಡುಗರು ತಮ್ಮ ತಂದೆತಾಯಿಯ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಅಂತಾಯಿತು. ಅವರು ತಮಗೆ ತೋರುವ ಪ್ರೀತಿ, ಭದ್ರತಾ ಭಾವಕ್ಕೆ ತಮ್ಮ ಮತ ಎಂದು ತೋರಿಸುತ್ತಿದ್ದಾರೆ ಅಂತಾಯಿತು. ಮತ್ತೆ ನಗರಗಳಲ್ಲಿ ಬಿಟ್ಟರೆ ನಮ್ಮ ಸಮಾಜದಲ್ಲಿ ಮದುವೆ ವಿಚ್ಛೇದನೆ ಸಹ ತುಂಬಾ ಕಮ್ಮಿ. ಇನ್ನೂ ಮದುವೆ ಎನ್ನುವ ವ್ಯವಸ್ಥೆಗೆ ಗೌರವ, ಮರ್ಯಾದೆ ತೋರುತ್ತಿದ್ದಾರೆ ಅಂತಾಯಿತು. ಏನೇ ಇರಲಿ ಎರಡೂ ಕಡೆಯವರು ಅರ್ಥ ಮಾಡಿಕೊಳ್ಳ ಬೇಕಾದ ಕೆಲ ವಿಷಯಗಳ ಕಡೆ ಗಮನ ಕೊಟ್ಟಲ್ಲಿ ಎರಡೂ ತರದ ವಿವಾಹಗಳು ಸಫಲವಾಗಿ ನಿಲ್ಲುತ್ತವೆ. ೧. ಮಕ್ಕಳು ತಮ್ಮ ತಂದೆ ತಾಯಿಯರ ಬಗ್ಗೆ ಗೌರವ ಹೊಂದಿರ ಬೇಕು. ಅವರು ತಮಗೆ ಒಳ್ಳೆಯ ಭಾಗಸ್ವಾಮಿಯನ್ನು ಹುಡುಕುತ್ತಾರೆ ಎನ್ನುವ ಭರವಸೆ ಇಡಬೇಕು. ತಮ್ಮ ಸ್ನೇಹಿತರು ಪ್ರೇಮದಲ್ಲಿ ಸಿಲುಕಿದಾರೆ ಎಂದು ತಾವು ಅನುಕರಿಸ ಬಾರದು. ೨. ಮಕ್ಕಳು ತಾವು ಪ್ರೇಮಿಸಿದ ವ್ಯಕ್ತಿಯನ್ನು ಮದುವೆಯಾಗ ಬೇಕೆಂದು ತಿಳಿಸಿದಾಗ ದೊಡ್ಡವರು ಸಹ ಅವರು ಆರಿಸಿದವರನ್ನು ಪರಿಶೀಲಿಸಿ ಒಪ್ಪಬೇಕು. ಮುಂದಿನ ಜೀವನ ಅವರದ್ದೇ ಅಲ್ಲವೇ ! ಸಮಾಜದಲ್ಲಿ ತಮ್ಮ ಅಹಂ, ಮರ್ಯಾದೆಯ ಬಗ್ಗೆ ಜಾಸ್ತಿ ಕಾಳಜಿ ಮಾಡಿ ಅವರ ಜೀವನಕ್ಕೆ ಕುತ್ತಗಬಾರದು. ೩. ದೊಡ್ಡವರು ನೋಡಿ ಮಾಡುವುದು ನಿಯಂತೃತ್ವ ಧೋರಣೆ ಎಂದು ಇವರು, ಪ್ರೇಮ ವಿವಾಹಗಳು ನಿಲ್ಲಲಾರವು ಎಂದು ದೊಡ್ಡವರು ನಿರ್ಣಯಿಸುವುದನ್ನು ಬಿಡಬೇಕು. ಎರಡೂ ಕಡೆಯವರು ತಮ್ಮ ಮುಂದಿನ ಪೀಳಿಗೆಗಳ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರಿಗೂ ನೋವಾಗದಂತೆ ಮದುವೆಗಳು ನಡೆಸ ಬೇಕು. ಬದಲಾಗುತ್ತಿರುವ ಸಮಾಜದ ಬಗ್ಗೆ ಗೌರವವಿಟ್ಟುಕೊಳ್ಳ ಬೇಕು. ಹಠಕ್ಕೆ ಬಿದ್ದು ಕುಟುಂಬಗಳಲ್ಲಿ ನೋವು, ಹಿಂಸೆ ತಂದುಕೊಳ್ಳಬಾರದು. ಮದುವೆ ಎನ್ನುವ ನಮ್ಮ ಸಂಸ್ಕೃತಿಯ ವ್ಯವಸ್ಥೆಯನ್ನು ಮುಂದಿನ ಕೆಲ ಪೀಳಿಗೆಗಳ ವರೆಗೂ ಮುಂದುವರೆಸುವಂತಾಗಬೇಕು. *********************************************************

ವಿವಾಹ ವ್ಯವಸ್ಥೆ- ಒಂದು ಚರ್ಚೆ Read Post »

ಇತರೆ, ಜೀವನ

ಇತರೆ

ರೈತರ ಆಪತ್ಭಾಂದವ ಜೋಕಪ್ಪನೂ..! ಮಳೆ ತರುವ ದೇವರು ಜೋಕುಮಾರಸ್ವಾಮಿ. ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ. ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು ರೈತರು ಎದೆ ತಟ್ಟಿ ಹೇಳುತ್ತಾರೆ. ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ ‘ಜೋಕಪ್ಪ’ ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ. ಜೋಕುಮಾರನನ್ನು ಹೊತ್ತು ತರುವ ಬುಟ್ಟಿಯಲ್ಲಿ ಯಥೇಚ್ಛವಾಗಿ ಬೇವಿನ ಸೊಪ್ಪನ್ನಿಟ್ಟಿರುತ್ತಾರೆ. ಹಾಗಾಗಿಯೇ ದುರ್ಮರಣಕ್ಕೀಡಾದವರನ್ನು ಬೇವಿನ ಸೊಪ್ಪು ಮುಚ್ಚಿ ಶವ ಸಾಗಿಸಲಾಗುತ್ತದೆ. ಆ ಕಾರಣವಿಟ್ಟುಕೊಂಡೇ ಹಳ್ಳಿಯಲ್ಲಿ ತಮ್ಮೂರಿನ ಉಡಾಳರಿಗೆ, ಗೂಂಡಾಗಳಿಗೆ, ಫಟಿಂಗರಿಗೆ ‘ಅಂವಾ ಹೊಕ್ಕಾನಳ ಬೇವಿನ ತೊಪ್ಪಲ ದೊಳ್ಗ’ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿರುತ್ತಾರೆ. ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ. ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ ‘ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ’ ಎಲ್ಲವೂ ಆ ಹಾಡಿನಲ್ಲಿ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ ಎಂಬ ನಮ್ಮ ‘ಜನಪದ’ರದು. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ. ಬೇವಿನ ಸೊಪ್ಪು ಕಹಿಯಾದ ಹಾಗೂ ಔಷಧೀಯ ಗುಣವಿರುವ ಸೊಪ್ಪು.ಊರಲ್ಲಿ ಹೀಗೆಯೇ ಏಳು ದಿನ ತಿರುಗಾಡಿದನಂತರ ತಳವಾರರ ಮನೆಯಲ್ಲಿ ಬುಟ್ಟಿ ತುಂಬುವಷ್ಟು ಜೋಳದ ಕಡುಬು ಮಾಡಿ ಜೋಕುಮಾರನ ಮೈ ಮೇಲಿನ ವಸ್ತುಗಳನ್ನು ತೆಗೆದು ಆತನ ಕುತ್ತಿಗೆ ಮುಚ್ಚುವವರೆಗೆ ಕಡುಬುಗಳನ್ನು ಪೇರಿಸಿ ಇಡಲಾಗುತ್ತದೆ.ಒಂದು ಕೈಯ್ಯಲ್ಲಿ ಕೊಬ್ಬರಿ ಬಟ್ಟಲನ್ನು, ಇನ್ನೊಂದು ಕೈಯ್ಯಲ್ಲಿ ದೀಪ ಹಚ್ಚಿದ ಪರಟೆಯನ್ನು ಕೊಟ್ಟಿರುತ್ತಾರೆ. ಆ ನಂತರದಲ್ಲಿ ಗಂಡಸೊಬ್ಬನು ಜೋಕುಮಾರನನ್ನು ಕುಳ್ಳಿರಿಸಿದ ಬುಟ್ಟಿಯನ್ನು ಹೊತ್ತು ನಡೆಯುತ್ತಾನೆ. ಹೀಗೆ ಕತ್ತಲಲ್ಲಿ ಸಾಗಿದ ಜೋಕುಮಾರನನ್ನಾಗಲೀ, ಆತನ ಕೈಯ್ಯಲ್ಲಿಯ ದೀಪವನ್ನಾಗಲೀ ಯಾರೂ ನೋಡುವಂತಿಲ್ಲ. ನೋಡಿದರೆ ಅಪಶಕುನವಷ್ಟೇ ಅಲ್ಲ, ವರ್ಷ ತುಂಬುವದರೊಳಗಾಗಿ ನೋಡಿದಾತ ಲೈಂಗಿಕ ಹಗರಣದಲ್ಲಿ ಸಿಲುಕಿ ಅಪಮಾನವಾಗಿ ಇಲ್ಲವೇ ಪ್ರಾಣ ಕಳೆದುಕೊಳ್ಳುವ ಅಪಾಯವೂ ಉಂಟೆಂದು ಹೇಳಲಾಗುತ್ತದೆ ‘ಜನಪದ’ದಲ್ಲಿ. ಜೋಕುಮಾರನ ಹತ್ಯೆಯಾಗುವ ದಿನ ಆತ ಹಾಯ್ದು ಹೋಗುವ ದಾರಿಯುದ್ದಕ್ಕೂ ಮೊದಲೇ ಒಬ್ಬಾತ ‘ಜೋಕುಮಾರ ಬರ್ತಾನ, ಲಗೂ ಬಾಗ್ಲಾ ಮುಚ್ಚ್ರೀ’ ಎಂದು ಹೇಳುತ್ತಾ ಹೋಗುತ್ತಾನೆ. ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ. ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ ‘ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ’ ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ. ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ ‘ದಿನ’ ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ..! ಇದು ಜೋಕುರಸ್ವಾಮಿಯ ಜಾನಪದ ಕತೆ… ನಿಜಕ್ಕೂ ಜೊಕುಮಾರಸ್ವಾಮಿ ರೈತರ ದೇವರು. ಏಕೆಂದರೆ ರೈತರ ಪೀಕು-ಪೈರಿನ ಹುಲುಸುವಿಕೆ ಬಯಸುವ ದೇವರು ಜೋಕುಮಾರಸ್ವಾಮಿ. ಮಳೆಗಾಗಿ ಶಿವ-ಪಾರ್ವತಿಯರನ್ನು ಅಂಗಲಾಚಿ ಮಳೆ ತರಿಸುವ ದೇವರು.ಜೊಕುಮಾರಸ್ವಾಮಿಗಿಂತಲೂ ಮೊದಲು ಬಂದು ಹೋಗುವ ದೇವರು ಗಣೇಶ ಉಂಡಿ-ಕಡಬು ತಿಂದು ಸಂಪಲೇಪರಾಕೆನ್ನುತ್ತಾ ರೈತರ ಕಷ್ಟ-ಕಾರ್ಪಣ್ಯದತ್ತ ಗಮನ ಕೊಡದ ದೇವರು..! ಹೀಗಾಗಿಯೇ ಜೊಕಪ್ಪ ಅಥವಾ ಜೋಕುಮಾರಸ್ವಾಮಿ ರೈತರಿಗೆ ಆಪದ್ಭಾಂವ ಅನ್ನಲೇನೂ ಅಡ್ಡಿಯಿಲ್ಲ… *********************** ಕೆ.ಶಿವು.ಲಕ್ಕಣ್ಣವರ

ಇತರೆ Read Post »

ಇತರೆ, ಜೀವನ

ನಮ್ಮ ಮಕ್ಕಳು ಮಕ್ಕಳಲ್ಲ

ಸರಿತಾ ಮಧು ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ? ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು. ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಮಾವ ಅತ್ತೆ, ಚಿಕ್ಕಪ್ಪ ಚಿಕ್ಕಮ್ಮ ,ಅಣ್ಣ ಅಕ್ಕ , ಅಪ್ಪ ಅಮ್ಮ ರೊಂದಿಗೆ ನಲಿವಿನ ಸಮಯ ಕಳೆಯಲು ಅವಕಾಶವಿತ್ತು. ಹಗಲಿನಲ್ಲಿ ಹಾಡುವ ಹಕ್ಕಿಯೂ,ಓಡುವ ಎಳೆಗರುವೂ, ಮೂಡಣದ ಸೂರ್ಯ, ಹಸಿರೆಲೆಯ ಗಿಡಮರಗಳು, ಬಣ್ಣ ಬಣ್ಣದ ಹೂಗಳು, ಮಕರಂದ ಹೀರುವ ದುಂಬಿಗಳು ಒಂದಲ್ಲ ಎರಡಲ್ಲ . ಎಂಥ ಚಂದವಿತ್ತು ನಮ್ಮ ಬಾಲ್ಯ.ಸಂಜೆಯಾದೊಡನೆ ತಿಂಗಳ ಬೆಳಕಿನ ಅಂಗಳದಲ್ಲಿ ಅಜ್ಜನೇ ಮೇಷ್ಟ್ರು. ಅವನ ಬಾಯಿ ಲೆಕ್ಕಾಚಾರದ ಮುಂದೆ ಈಗಿನ ಕ್ಯಾಲ್ಕುಲೇಟರ್ ಸಹಾ ಹಿಂದೆಬೀಳುತ್ತಿತ್ತು.ಎಷ್ಟು ಸರಾಗವಾಗಿ ಮಗ್ಗಿಗಳನ್ನು ನನ್ನಜ್ಜ ಹೇಳುತ್ತಿದ್ದ. ಅಜ್ಜಿಯೇ ಕಥೆಯ ನಿರೂಪಕಿಯಾಗಿ ಲಾಲಿ ಹಾಡುವವರೆಗೂ ರಾತ್ರಿಯ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ.    ಟಿವಿ, ಮೊಬೈಲ್ ಗಳ  ಹಾವಳಿಯಿಲ್ಲದ ನಿರಾತಂಕ ಜೀವನ. ಐದು ವರ್ಷಗಳ ನಂತರವೇ ಊರಿನ ಕನ್ನಡ ಶಾಲೆಗೆ ಹೋಗುವುದು. ಹೆಚ್ಚಿನ ಹೊರೆಯಿಲ್ಲದ ಸರಳ ಕಲಿಕೆ ಆದರೂ ಶಾಶ್ವತ ಕಲಿಕೆಯಾಗಿತ್ತು.   ಬದಲಾದ ಕಾಲಕ್ಕೆ ಎಲ್ಲವೂ ಮರೆಯಾಯಿತು.ಈಗಂತೂ ಹುಟ್ಟುವ ಮೊದಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರು ನೊಂದಾಯಿಸಿ ತಮ್ಮ ಮಗುವಿಗೆ ಸೀಟೊಂದನ್ನು ಕಾಯ್ದಿರಿಸಲಾಗುತ್ತದೆ. ರಾತ್ರಿಯಿಡೀ ಸರತಿಸಾಲಿನಲ್ಲಿ ನಿಂತು ತಾವು ಕಷ್ಟಪಟ್ಟ ಅನೇಕ ವರ್ಷಗಳ ದುಡಿಮೆಯನ್ನು ಕೇವಲ ಒಂದು ವರ್ಷದ ಶಾಲಾ ಶುಲ್ಕಕ್ಕಾಗಿ ಖರ್ಚುಮಾಡುತ್ತೇವೆ. ಎರಡೂವರೆ ಮೂರು ವರ್ಷದ ಮಕ್ಕಳ ಬೆನ್ನಿಗೆ ಬಣ್ಣದ ಬ್ಯಾಗನ್ನು ಏರಿಸಿ, ಕೈಗೊಂದು ಊಟದ ಬ್ಯಾಗನ್ನು ಇಳಿಬಿಟ್ಟು, ಹಳದಿ ಬಣ್ಣದ ಬಸ್ಸನ್ನು ಅವಸರದಿಂದಲೇ ಹತ್ತಿಸಿ ಟಾಟಾ, ಬೈಬೈ ಹೇಳಿ ನಿಟ್ಟುಸಿರು ಬಿಡುತ್ತೇವೆ. ಅಲ್ಲಿಗೆ ಒಂದು ದಿನದ ಮಗುವಿನ ಪಯಣ ಯಶಸ್ವಿಗೊಳಿಸಿದ ನಿರಾಳತೆ. ಆದರೆ ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಟ ಮಗುವಿನ ಮನಸ್ಸು ಅರಿಯಲು ನಾವು ವಿಫಲವಾದೆವಲ್ಲ! ಬಾಲ್ಯದ ಚಿಗುರುವ ಕನಸುಗಳ ಅಲ್ಲಿಯೇ ಹೊಸಕಿಹಾಕಿಬಿಟ್ಟೆವಲ್ಲ.ನಮ್ಮ ನಿರೀಕ್ಷೆಗಳಿಗಾಗಿ ಅವರ ಕನಸುಗಳನ್ನು ಸೀಲ್ ಮಾಡಿಬಿಟ್ಟೆವಲ್ಲ. ಖಲೀಲ್ ಗಿಬ್ರಾನ್ ಒಬ್ಬ ಅಮೆರಿಕದ ಕವಿ ತನ್ನ ಕವಿತೆಯೊಂದರಲ್ಲಿ ಹೇಳುವಂತೆ:    Your children are not children   They are the sons and daughters of life’s longing for itself   They come through you but not from you   And though they are with you ,   Yet they belong not to you “     ಹೀಗೆ ಸಾಗುವ ಪದ್ಯವೊಂದರಲ್ಲಿ “ನಿಮ್ಮ ಮಕ್ಕಳು , ಮಕ್ಕಳಲ್ಲ ಜೀವದ ಸ್ವಪ್ರೇಮದ ಪುತ್ರ ಪುತ್ರಿಯರು ಅವರು ನಿಮ್ಮ ಮೂಲಕ ಬಂದಿದ್ದಾರೆಯೇ ನಿಮ್ಮಿಂದಲ್ಲ ನಿಮ್ಮ ಜೊತೆ ಇರುವುದಾದರೂ ನಿಮಗೆ ಸೇರಿದವರಲ್ಲ”   ಹೌದು ಮಕ್ಕಳ ಮೇಲೆ ನಮ್ಮ ನಿರೀಕ್ಷೆ ಎಂದೂ ಅತಿಯಾಗಬಾರದು.ನಮ್ಮ ಕನಸುಗಳ ಈಡೇರಿಕೆಗೆ ಅವರನ್ನು ಬಳಸಿಕೊಳ್ಳಬಾರದು.ನಾವೆಂದೂ ಅವರನ್ನು ನಮ್ಮಂತೆ ಮಾಡಲು ಪ್ರಯತ್ನಿಸಬಾರದು.ಕಾರಣ ಅವರ ಕನಸಿನೊಳಗೆ ನಮ್ಮ ಪ್ರವೇಶವಿರಕೂಡದು.ನಮ್ಮ ಪ್ರೀತಿಯನ್ನು ಮಕ್ಕಳಿಗೆ ನೀಡಬೇಕೇ ಹೊರತು ಆಲೋಚನೆಗಳನ್ನಲ್ಲ.   ಡಾ||ಸಿ.ಆರ್.ಚಂದ್ರಶೇಖರ್ ರವರು ತಮ್ಮ ಮನಸ್ಸೇ ನೀ ಪ್ರಶಾಂತವಾಗಿರು ಪುಸ್ತಕದಲ್ಲಿ(ಪು.74) ಹೇಳುತ್ತಾರೆ ನಿರೀಕ್ಷೆಗಳನ್ನು ತಗ್ಗಿಸಿ, ಸಾಧ್ಯವಾದರೆ ನಿವಾರಿಸಿಕೊಳ್ಳಿ. ಅವರ ಮಾತಿನಂತೆ ಖಂಡಿತವಾಗಿ ನಿರೀಕ್ಷೆಗಳಿಂದ ನಿರಾಸೆಯೂ, ನಿರ್ಲಿಪ್ತತೆಯಿಂದ ನೆಮ್ಮದಿಯೂ ದೊರೆಯುತ್ತದೆ. ಮಕ್ಕಳ ಪಾಲನೆ, ಪೋಷಣೆ, ವಿದ್ಯಾಭ್ಯಾಸ,ಮದುವೆ, ಉದ್ಯೋಗ ಎಲ್ಲವೂ ನಮ್ಮ ಕರ್ತವ್ಯ. ಆದರೆ ಇದಕ್ಕೆ ಪ್ರತಿಫಲವಾಗಿ ಪ್ರೀತಿ, ಆಸರೆ,ಹಣ,ವೃದ್ಧಾಪ್ಯದಲ್ಲಿ ನೆರವನ್ನು ನಿರೀಕ್ಷಿಸಬೇಡಿ ಎನ್ನುತ್ತಾರೆ ಡಾಕ್ಟರ್. ಹಾಗಿದ್ದರೆ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ್ದಕ್ಕೆ ನಿರೀಕ್ಷೆ ಇರಬಾರದೇ?        ಇರಲಿ, ಆದರದು ಒತ್ತಾಯಕ್ಕಲ್ಲ.ನಿಮ್ಮ ಆಸೆ ಆಕಾಂಕ್ಷೆಗಳನ್ನು ,ಗುರಿಗಳನ್ನು ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅವರ ಹುಟ್ಟು ನಿಮಗೆ ಅದೃಷ್ಟ ತಂದಿತೆಂದು , ಸಂಪತ್ತಿಗೆ ಅಧಿಪತಿಯಾದರೆಂದು ಯಾವುದೇ ಮಗುವನ್ನು ಮೆರೆಸುವುದಾಗಲೀ ಅಥವಾ ಉಂಟಾದ ಸಾಲ ನಷ್ಟಗಳಿಗೆ ಹುಟ್ಟಿದ ಮಗುವಿನ ಜಾತಕವೇ ಕಾರಣವೆಂದು ಹೀಗಳೆಯುವುದಾಗಲೀ ಸಲ್ಲದು. ಮಕ್ಕಳಿಗೆ ಅವರ ಆಸೆ ಆಕಾಂಕ್ಷೆಗಳಿಗೆ ಅನುಗುಣವಾದ ಶಿಕ್ಷಣ ನೀಡಿ, ಆದರೆ ಸಮಾಜದ ಇತರೆ ಮಕ್ಕಳೊಂದಿಗೆ ಹೋಲಿಕೆ ಖಂಡಿತಾ ಬೇಡ. ಜೀವನೋಪಾಯಕ್ಕಾಗಿ ಅವಶ್ಯಕವಾಗಿ ನ್ಯಾಯಯುತವಾದ ದುಡಿಮೆಯೊಂದನ್ನು ಮಾಡುವಂತಿರಲಿ. ದುಡಿಯದೇ ಅಥವಾ ಕೆಲಸ ಮಾಡದೇ ಸುಲಭ ಮಾರ್ಗದಲ್ಲಿ ಹಣ ಗಳಿಸುವುದನ್ನು ತಪ್ಪು ಎಂಬ ಅರಿವು ನೀಡಿದರೆ ಸಾಕು. ಮಕ್ಕಳೆಂದಿಗೂ ನಿಮ್ಮ ಹಣವನ್ನು ಹಿಂತಿರುಗಿಸುವ ಯಂತ್ರಗಳಲ್ಲ. ಬಂಡವಾಳ ಹೂಡಿ ಲಾಭವನ್ನು ನಿರೀಕ್ಷಿಸುವ ವ್ಯವಹಾರವಲ್ಲ.ಬದಲಾಗಿ ಪ್ರೀತಿ, ಸಂಸ್ಕಾರ , ಜವಾಬ್ದಾರಿ , ಶಿಕ್ಷಣ , ಮಾನವೀಯತೆ ನೀಡಿ ನಿರ್ಲಿಪ್ತವಾಗಿ ನೆಮ್ಮದಿಯಿಂದ ನಿಂತು ಬಿಡಿ ಕಾರಣ ಮಕ್ಕಳು ನಿಮ್ಮ ಮಕ್ಕಳಲ್ಲ, ನಿಮ್ಮ ಮೂಲಕ ಬಂದ ದೈವ ಸೃಷ್ಟಿಗಳು. ****************************************

ನಮ್ಮ ಮಕ್ಕಳು ಮಕ್ಕಳಲ್ಲ Read Post »

ಇತರೆ, ಜೀವನ

ಕ್ಷಮಯಾ ಧರಿತ್ರೀ …

ಕ್ಷಮಯಾ ಧರಿತ್ರೀ … ಲಕ್ಷ್ಮಿ ನಾರಾಯಣ ಭಟ್ ಜೀವನ ಪ್ರವಾಹ ನಿಂತ ನೀರಲ್ಲ; ಅದು ಚಿರಂತನ. ನಿರಂತರವಾಗಿ ಹರಿಯುತ್ತಲೇ ಇರುವುದು ಅದರ ಸ್ವ-ಭಾವ. ಯಾವುದು ವ್ಯಕ್ತಿ/ವಸ್ತುವೊಂದಕ್ಕೆ ಸಹಜ ಭಾವವಾಗಿರುತ್ತದೋ ಅದೇ ಅದರ ಸ್ವಭಾವ. ಆದರೆ ಸ್ವಭಾವವನ್ನು ಪರಿಶ್ರಮ, ಚಿಂತನೆಗಳಿಂದ ಪರಿಷ್ಕರಿಸಿಕೊಳ್ಳಬಹುದು. ಇದು ಮನುಷ್ಯನಾದವನಿಗೆ ಮಾತ್ರ ಪ್ರಕೃತಿಯೇ ಕರುಣಿಸಿದ ವಿಶೇಷ ಕರ್ತೃತ್ವ. ಇದರಿಂದ ಆತ ಪ್ರಕೃತಿಯನ್ನೂ ಮಣಿಸಬಲ್ಲ! ಉದಾಹರಣೆಗೆ, ಎತ್ತರದಿಂದ ತಗ್ಗಿಗೆ ಹರಿಯುವುದು ನೀರಿನ ಸ್ವಭಾವವಲ್ಲವೇ? ಆ ಸ್ವಭಾವವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿರ್ತಿಸಿದಾಗ, ಜೋಗದಲ್ಲಿ ಜಲಪಾತವಾಗಿ ಧುಮುಕುವ ಶರಾವತಿ ನದಿ ನಮಗೆ ಅತ್ಯಾವಶ್ಯಕವಾದ ವಿದ್ಯುಚ್ಛಕ್ತಿಯನ್ನು ಕೊಡುವ ಅಪಾರ ಸಂಪನ್ಮೂಲವಾಗಿ ಬದಲಾಗುತ್ತಾಳೆ. ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಪರಿಷ್ಕರಣವಿಲ್ಲದೇ ಹೋಗುತ್ತಿದ್ದರೆ ಶರಾವತಿ ಹಾಗೆ ಹರಿದು, ಹೀಗೆ ಧುಮ್ಮಿಕ್ಕಿ ಸಾಗರವನ್ನು ಸೇರಿ ನಿರ್ಲಿಪ್ತ ಭಾವದಿಂದಿರುತ್ತಿದ್ದಳಲ್ಲವೇ? (ಮಹಾತ್ಮಾ ಗಾಂಧೀಜಿ ಶಿವಮೊಗ್ಗಕ್ಕೆ ಬಂದೂ ಜೋಗ ಜಲಪಾತ ನೋಡಲು ಹೋಗಿರಲಿಲ್ಲ! ಕಲೆ ಮತ್ತು ಪ್ರಕೃತಿ ಸೌಂರ್ಯದ ಬಗ್ಗೆ ಅವರ ನಿಲುವು ಬೇರೆಯೇ ಇತ್ತು; ಅದನ್ನು ವಿವರವಾಗಿ ಪ್ರಸ್ತಾಪಿಸಲು ಇದು ಸೂಕ್ತ ವೇದಿಕೆಯಲ್ಲ, ಅಷ್ಟೇ.) ಮನುಷ್ಯನ ಸ್ವಭಾವವೂ ಇದಕ್ಕೆ ವ್ಯತಿರಿಕ್ತವಾಗಿಲ್ಲ! ‘ಮಂಗನಿಂದ ಮಾನವ’ ಎಂಬ ಮಾತೊಂದಿದೆಯಲ್ಲವೇ? ಇದು ಸ್ಥೂಲವಾಗಿ ನಮ್ಮ ಬದುಕಿನ ರೀತಿಯನ್ನೇ ನರ್ದೇಶಿಸುತ್ತದೆ. ಬಾಲ್ಯದಿಂದ ತೊಡಗಿ ಹರೆಯದ ವರೆಗೂ – ಕೆಲವೊಮ್ಮೆ ಕೊನೆಗಾಲದ ವರೆಗೂ – ಚಿತ್ತ ಚಾಂಚಲ್ಯ, ಜಿಹ್ವಾ ಚಾಪಲ್ಯ, ಇಂದ್ರಿಯ ದೌರ್ಬಲ್ಯಗಳನ್ನು ಹದ್ದುಬಸ್ತಿನಲ್ಲಿಡದೇ ಹೋದರೆ ನಾವು ‘ಮರ್ಕಟ’ ಹಂತದಿಂದ ‘ಮಾನ’ವುಳ್ಳ – ಅಂದರೆ ಹದವರಿತು ಬಾಳಬಲ್ಲ ಮನುಷ್ಯತ್ವವನ್ನು ಪಡೆಯುವುದು ಅಸಾಧ್ಯ ಎಂದು ನನ್ನ ನಂಬಿಕೆ. ಇದು ಮಾನವೀಯತೆಯೆಡೆಗೆ ನಮ್ಮ ಮೊದಲ ದೃಢ ಹೆಜ್ಜೆ. ಮಾನವೀಯತೆಯ ಲಕ್ಷಣಗಳೆಂದರೆ ಪಕ್ವತೆ ಮತ್ತು ಆರ್ದ್ರತೆ. ಇದನ್ನೇ “ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು” ಎಂದು ಸರ್ವಜ್ಞ ಹೇಳಿದ್ದು. ಆದರೆ ಇದು ಬಡಪೆಟ್ಟಿಗೆ ಸಾಧಿತವಾಗುವುದಿಲ್ಲ. ಜೀವನದಲ್ಲಿ ಅನೇಕ ಅನುಭವಗಳ ಮೂಲಕ, ಪ್ರಾಯ ಸಂದಂತೆ ನಿಧಾನವಾಗಿ ಬರಬೇಕಾದದ್ದೇ ಹೊರತು ರಾತ್ರಿ ಬೆಳಗಾಗುವುದರೊಳಗೆ “ಓ ನಾನು ಈಗ ಪರಿಪಕ್ವತೆಯನ್ನು ಪಡೆದೆ” ಎಂದಂತಲ್ಲ. ಅದು ಅಕಾಲಿಕವಾಗಿ ಬರಲೂ ಬಾರದು. ಅದು ಲೋಕ ವ್ಯವಹಾರಕ್ಕೆ ವಿರುದ್ಧವಾದದ್ದು ಮತ್ತು ಜನಸಾಮಾನ್ಯರಾದ ನಮ್ಮ ನಿಮ್ಮಂತಹವರಿಗಲ್ಲ. ವಿರಳಾತಿವಿರಳವಾಗಿ ಮಹಾತ್ಮರಿಗೆ ಮಾತ್ರ ದಕ್ಕುವಂತದ್ದು. ಉದಾಹರಣೆಗೆ ಬುದ್ಧ: “ಜಗವೆಲ್ಲ ಮಲಗಿರುವಾಗ ಅವನೊಬ್ಬ ಎದ್ದ” ಅದಕೆಂದೇ ಅವನು “ಬುದ್ಧ”. ಎಲ್ಲರೂ ಹಾಗೆ ಮಾಡಕೂಡದು. ಹಾಗಾಗಿ ನಮ್ಮ ಭಾರತೀಯ ಪರಂಪರೆಯಲ್ಲಿ ಸನ್ಯಾಸಿಯಾಗಬೇಕಾದರೆ ಮದುವೆಯ ಮೊದಲು ತಾಯಿಯ ಒಪ್ಪಿಗೆ, ಮದುವೆಯ ಬಳಿಕವಾದರೆ ಹೆಂಡತಿಯ ಒಪ್ಪಿಗೆ ಕಡ್ಡಾಯ. ಒಬ್ಬನೇ ಮಗ ಸನ್ಯಾಸಿಯಾಗುವುದು ಶಂಕರರ ತಾಯಿಗೆ ಇಷ್ಟವಿರಲಿಲ್ಲ; ಆ ತಾಯಿಯ ಒಪ್ಪಿಗೆಯನ್ನು ಪಡೆಯಲು ಒಂದು ಮೊಸಳೆಯ ಕಥೆ ಬರುತ್ತದೆ. ಇದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಮೊಸಳೆ ಶಂಕರರ ಕಾಲನ್ನು ಹಿಡಿದಿದೆ ಎಂಬಾಗ ಶಂಕರರು ತಾಯಿ ಆರ್ಯಾಂಭ ಅವರಲ್ಲಿ “ತಾಯೇ, ನಾನು ಸನ್ಯಾಸಿಯಾಗಲು ನೀನು ಒಪ್ಪಿಗೆ ಕೊಟ್ಟರೆ ಈ ಮೊಸಳೆ ನನ್ನನು ಬಿಟ್ಟು ಬಿಡುವುದಂತೆ” ಎಂದಾಗ ತಾಯಿ ಕರುಳು ಚುರುಕ್ ಅಂದಿರಬೇಕು. ಮಗ ಬದುಕಿದರೆ ಸಾಕು ಎಂದ ತಾಯಿ ಒಪ್ಪಿಗೆ ಕೊಟ್ಟರಂತೆ. ಈ ಕಥೆಯ ಸತ್ಯಾಸತ್ಯತೆ ಇಲ್ಲಿ ಪ್ರಸ್ತುತವಲ್ಲ. ‘ಸನ್ಯಾಸತ್ವಕ್ಕೆ ತಾಯಿಯ ಒಪ್ಪಿಗೆ’ ಎಂಬ ತಾತ್ವಿಕತೆ ಮುಖ್ಯ, ಅಷ್ಟೇ. ಈ ಪದ್ಧತಿಯನ್ನು ಮಾಡಿದ ಉದ್ದೇಶವೆಂದರೆ ಯಾರೂ ಉಡಾಳರಾಗಿ ಸಂಸಾರದ ಜವಾಬ್ದಾರಿಯಿಂದ ಸುಖಾ ಸುಮ್ಮನೆ ಓಡಿ ಹೋಗಬಾರದು ಎನ್ನುವುದಷ್ಟೇ ಎಂದು ನನ್ನ ಅಭಿಪ್ರಾಯ. ಇರಲಿ. ಅದಕ್ಕೆ ಹೇಳಿದ್ದು ಅಕಾಲಿಕವಾಗಿ ವೈರಾಗ್ಯ ಬರಬಾರದು. ವಾತ್ಸಾಯನನನ್ನು ಓದುವ ಪ್ರಾಯದಲ್ಲಿ ವೇದಾಂತ, ಭಗವದ್ಗೀತೆ ಸಲ್ಲ. ಅಂದರೆ ಅದನ್ನು ಓದಲೇ, ಕಲಿಯಲೇ ಬಾರದು ಎಂಬ ನಿರ್ಬಂಧವಿಲ್ಲ; ಆದರೆ ಅದರಲ್ಲೇ ಮುಳುಗಿ ಹೋಗಬಾರದು ಎನ್ನುವ ಭಾವ. ಹಾಗಾದರೆ ಪಕ್ವತೆ, ಆರ್ದ್ರತೆಯನ್ನು ಸಾಧಿಸುವ ಬಗೆ ಹೇಗೆ? ಮನುಷ್ಯನ ಜೀವನದಲ್ಲಿ ಬಹುಶಃ ಕ್ಷಮಾಗುಣಕ್ಕಿಂತ ದೊಡ್ಡ ಮಾನವೀಯತೆ ಇಲ್ಲವೇನೋ! ಹಾಗಾಗಿ ವ್ಯಕ್ತಿತ್ವದ ಪಕ್ವತೆ,ಆರ್ದ್ರತೆಗಳ ಒಂದು ವಿಶೇಷ ಲಕ್ಷಣ ಅಂದರೆ ಕ್ಷಮಾಗುಣ ಎಂದು ನಾವು ತಿಳಿಯಬಹುದು. ತನ್ನ “ಶ್ರೀ ರಾಮಾಯಣ ದರ್ಶನಂ” ನಲ್ಲಿ ಕವಿ ಕುವೆಂಪು ಅವರು ಈ ಮಾತು ಹೇಳುತ್ತಾರೆ: “ಪಾಪಿಗುದ್ಧಾರಮಿಹುದೌ ಸೃಷ್ಟಿಯ ಈ ಮಹದ್ವ್ಯೂಹದೋಳ್” ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳದೆ ಕ್ಷಮಾಗುಣವನ್ನು ರೂಢಿಸಿಕೊಳ್ಳಲು ಅಸಾಧ್ಯ. ಶಿರಚ್ಛೇಧದ ಮೂಲಕ ಮರಣದಂಡನೆಯನ್ನು ಜಾರಿಗೊಳಿಸುವ ದೇಶದಲ್ಲೂ ಕ್ಷಮಾಗುಣಕ್ಕೆ ಆದ್ಯತೆ ಇದೆಯೆಂಬುದನ್ನು ನಾವು ಮರೆಯಬಾರದು. ಮತ್ತು ಈ ಕ್ಷಮಾದಾನದ ಪರಮಾಧಿಕಾರ ಕೊಡಲ್ಪಟ್ಟಿರುವುದು ಪ್ರಭುತ್ವಕ್ಕಲ್ಲ, ಬದಲಾಗಿ ಅನ್ಯಾಯಕ್ಕೊಳಗಾದ ವ್ಯಕ್ತಿ ಅಥವಾ ಆತನ ನಿಕಟ ಕುಟುಂಬ-ಸಂಬಂಧಿಗೆ ಮಾತ್ರ. [ಇದನ್ನು ಈಗ ಅಪರಾಧ ಶಾಸ್ತ್ರ ದಲ್ಲಿ  ಎಂಬ ಹೆಸರಿನಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಇದು ಈ ಅಧ್ಯಯನ ಕ್ಷೇತ್ರವೊಂದರ ಇತ್ತೀಚಿಗಿನ ಹೊಸ ಬೆಳವಣಿಗೆ.] ಇದೊಂದು ಸತ್ಯ ಘಟನೆ. ಕೊಲ್ಲಿ ರಾಷ್ಟ್ರವೊಂದರಲ್ಲಿ ಒಂದು ಕುಟುಂಬದ ನಾಲ್ಕೈದು ಮಂದಿಯನ್ನು ಬರ್ಬರವಾಗಿ ಹತ್ಯೆಗೈದುದಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಗಿತ್ತು. ಆ ದೇಶದ ಪದ್ಧತಿಯಂತೆ ಸಾರ್ವಜನಿಕವಾಗಿ ಅಪರಾಧಿಯ ತಲೆ ಕಡಿದು ಮರಣದಂಡನೆಯನ್ನು ವಿಧಿಸುವುದು ರೂಢಿ. ಅಲ್ಲಿ ನೆರೆದಿದ್ದವರಲ್ಲಿ ಆ ಕುಟುಂಬದ ನಿಕಟ ಸಂಬಂಧಿಯೂ ಇದ್ದ. ಆತನಿಗೆ ಅಪರಾಧಿಯ ಬಗ್ಗೆ ಅತ್ಯಂತ ದ್ವೇಷ, ತಿರಸ್ಕಾರ, ಜಿಗುಪ್ಸೆ ಎಲ್ಲವೂ ಇತ್ತು. ಇದು ಸಹಜ ತಾನೇ? ಇನ್ನೇನು ಶಿಕ್ಷೆ ಜಾರಿಯಾಗಬೇಕೆನಿಸುವಷ್ಟರಲ್ಲಿ ಅಪರಾಧಿ ಆ ಕುಟುಂಬ ಸದಸ್ಯನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸುವಂತೆ ಬಗೆ ಬಗೆಯಾಗಿ ಬೇಡಿಕೊಂಡ. ಯಾಕೋ ಏನೋ ಆ ಕ್ಷಣದಲ್ಲಿ ಆತನ ಮನ ಕರಗಿ ಕ್ಷಮಾದಾನ ಮಾಡಿದನಂತೆ. ಆ ಬಳಿಕ ಆತ ಹೇಳಿದ ಮಾತು ತುಂಬಾ ಅರ್ಥಪೂರ್ಣ ಮಾರ್ಮಿಕವಾಗಿತ್ತು: “ನನ್ನ ಹೃದಯದ ಕಹಿಯೆಲ್ಲಾ ಈಗ ಬತ್ತಿ ಹೋಗಿದೆ. ನನ್ನೊಳಗೆ ಅನಿರ್ವಚನೀಯ ಶಾಂತಿ ತುಂಬಿದ ಧನ್ಯತಾ ಭಾವ ಅರಳಿದೆ. ಕ್ಷಮಾಗುಣಕ್ಕೆ ಇಂತಹ ಶಕ್ತಿ ಇದೆಯೆಂದು ನನಗೆ ಈ ವರೆಗೂ ತಿಳಿದಿರಲಿಲ್ಲ! ಅಪರಾಧಿಯನ್ನು ಕ್ಷಮಿಸಲು ನನಗೆ ಪ್ರೇರಣೆ ನೀಡಿದ ಪರಮ ದಯಾಳು ದೇವರಿಗೆ ನಾನು ಚಿರಋಣಿ.” ಈ ತೃಪ್ತ ಭಾವವನ್ನು ಕಿಂಚಿತ್ ಪ್ರಮಾಣದಲ್ಲಾದರೂ ಅರ್ಥೈಸಿಕೊಳ್ಳಬೇಕಿದ್ದರೆ ನಾವೂ ಯಾರನ್ನಾದರೂ ಕ್ಷಮಿಸಿದ್ದರೆ ಮಾತ್ರ ಸಾಧ್ಯ ಎಂಬುದನ್ನು ಪ್ರಾಮಾಣಿಕವಾಗಿ ವಿನಮ್ರತೆಯಿಂದ, ಸ್ವಾನುಭವದಿಂದ ನಾನು ಹೇಳಬಲ್ಲೆ. (ನನ್ನ ಅನುಭವ ಬಹಳ ದೊಡ್ಡ ಮಟ್ಟದ್ದು ಎಂದಾಗಲಿ, ನಾನು ಕ್ಷಮಾಗುಣದ ಸಾಕಾರಮೂರ್ತಿ ಎಂಬ ಅಹಂಕಾರವಾಗಲಿ ಒಂದಿಷ್ಟೂ ಇಲ್ಲದೆ ಈ ಮಾತನ್ನು ಬಹಳ ಸಂಕೋಚದಿಂದ ಹೇಳುತ್ತಿದ್ದೇನೆ. ಆ ಘಟನೆಯ ವಿವರಗಳನ್ನು ಮಾತ್ರ ಇಲ್ಲಿ ಈಗ ಹೇಳುವ ಸ್ಥಿತಿಯಲ್ಲಿ ನಾನಿಲ್ಲ, ಕ್ಷಮಿಸಿ.) ತನಗೆ ಕೇಡು ಬಗೆದವರಿಗೂ ಮನಸಾರೆ ಒಳಿತನ್ನು ಹಾರೈಸುವುದು ಮಾನವೀಯತೆಯ ಪರಾಕಾಷ್ಠೆಯಲ್ಲದೆ ಮತ್ತಿನ್ನೇನು? ನನಗೆ ತಿಳಿದಿರುವ ಎರಡು ಬದ್ಧ ದ್ವೇಷಿ ಕುಟುಂಬದ ಓರ್ವ ಹಿರಿಯ ಮರಣ ಹೊಂದಿದಾಗ ಜೀವನದುದ್ದಕ್ಕೂ ಆತನ ಕಡು ವೈರಿಯಾಗಿದ್ದಾತ ಶವ ಸಂಸ್ಕಾರಕ್ಕೆ ಬಂದು ಬಿಕ್ಕಿ ಬಿಕ್ಕಿ ಅತ್ತು (ಅದು ನಾಟಕವಾಗಿರಲಿಲ್ಲ ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ) ಕುಗ್ಗಿ ಹೋದ ಘಟನೆ ನನ್ನ ಮನಸ್ಸಿನಲ್ಲಿದೆ. ಅದನ್ನು ಆ ಸತ್ತ ವ್ಯಕ್ತಿ ಜೀವಂತವಾಗಿರುವಾಗಲೇ ಮಾಡಿದ್ದರೆ ಒಳಿತಿತ್ತು ಎನ್ನುವ ವ್ಯಾವಹಾರಿಕ ಮಾತು ಬೇರೆ. ಅದು ವ್ಯಕ್ತಿ ಬಹಳ ಆಳವಾಗಿ ಯೋಚಿಸಿ     ಮಾಡಿದ ಕೆಲಸವಾದ್ದರಿಂದ  ಮಹತ್ವದ್ದು ಎಂದು ನನ್ನ ಭಾವನೆ. ಸಾಯಿಸಲೆತ್ನಿಸಿದ ರಾಕ್ಷಸಿ ಪೂತನಿಗೂ ಶ್ರೀ ಕೃಷ್ಣ ಮೋಕ್ಷವನ್ನು ಕರುಣಿಸಿದ. ಆಕೆಯದು ತೋರಿಕೆಯ ಕಪಟ ಮಾತೃತ್ವವಾಗಿದ್ದರೂ ಕೃಷ್ಣ ಅದನ್ನು ನೋಡಿದ ಬಗೆ ಬೇರೆ. ಹಾಗೆಯೇ ತನ್ನನ್ನು ಶಿಲುಬೆಗೇರಿಸಿದವರ ಬಗ್ಗೆ “ಮರಣವೃಕ್ಷದೊಳಮೃತ ಫಲದಂತೆ” (‘ಗೊಲ್ಗೊಥಾ’ – ಮಂಜೇಶ್ವರ ಗೋವಿಂದ ಪೈ) ಕಾಣುತ್ತಿದ್ದ ಯೇಸುಸ್ವಾಮಿಯೂ “ತನ್ನ ಕಡಿರ್ಗೆ ತಣ್ಣೆಳಲೀವ ಮರದಂತೆ” (‘ಗೊಲ್ಗೊಥಾ’) ಈ ಮಾತನ್ನು ಹೇಳಿದ: “ತಂದೆಯೇ, ಅವರ ಅಪರಾಧಗಳನ್ನು ಕ್ಷಮಿಸು; ತಾವೇನು ಮಾಡುತ್ತಿದ್ದೇವೆ ಎಂಬುದನ್ನರಿಯರು” ಕ್ಷಮಾಗುಣದ ಚರಮ ಸೀಮೆ ಇದು ಎಂಬುದಕ್ಕೆ ಬೇರೆ ಉದಾರಹರಣೆ ಬೇಕೇ? ನೀವು ಹೇಳಬಹುದು ಇದು ಅಂತಹ ದೈವಾಂಶ ಸಂಭೂತರಿಗೆ ಮಾತ್ರ ಸಾಧ್ಯ. ನಮ್ಮಂತಹ ಹುಲು ಮಾನವರಿಗಲ್ಲ. ಒಪ್ಪಿದೆ. ನನ್ನ ಯೋಚನೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಇನ್ನೊಂದು ಸತ್ಯ ಘಟನೆಯನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಆ ಘಟನೆ ಹೀಗಿದೆ: ಒಮ್ಮೆ ನಮ್ಮ ಕಾಲೇಜಿಗೆ ಓರ್ವ ಅಮೇರಿಕನ್ ಮಹಿಳೆ ಬಂದಿದ್ದರು. ಇದು ನಮ್ಮ ಕಾಲೇಜಿಗೆ ವಿಶೇಷವೇನೂ ಅಲ್ಲ. ಅವರ ಭಾಷಣ ಪೂರ್ವಸೂಚನೆ ಇಲ್ಲದೆ ನಿಗದಿಯಾಯಿತು. ಎಲ್ಲರೊಂದಿಗೆ ನಾನೂ ಆ ಭಾಷಣ ಕೇಳಲು ಹೋಗಿದ್ದೆ. ಅವರು ಒಂದು ಘಟನೆಯನ್ನು ವಿವರಿಸಿದರು. ಅಮೇರಿಕಾದಲ್ಲಿ ಸಾಮಾನ್ಯವಾಗಿ ಎಲ್ಲರೂ ವಾರಾಂತ್ಯದಲ್ಲಿ ಸಕುಟುಂಬವಾಗಿ ಅವರು ಮನೆಯಿಂದ ದೂರ ಸಂಚಾರಕ್ಕೆ ಹೋಗುತ್ತಾರೆ. ಹಾಗೆಯೇ ಒಂದು ಕುಟುಂಬ ತನ್ನ ಐವರು ಮಕ್ಕಳೊಂದಿಗೆ ಊರ ಹೊರಗೆ ಹೋಗಿ ರಾತ್ರಿ ಕಾಲದಲ್ಲಿ ತೆರೆದ ಬಯಲಲ್ಲಿ ತಮ್ಮ ತಮ್ಮ ಸ್ಲೀಪಿಂಗ್ ಬ್ಯಾಗ್ ನಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದರು. ಬೆಳಗ್ಗೆ ಎದ್ದು ನೋಡುವಾಗ ಅವರ ಕೊನೆಯ ಮಗಳು ಸುಮಾರು ಹದಿಮೂರು ವಯಸ್ಸಿನ ಹುಡುಗಿ ಕಾಣೆಯಾಗಿದ್ದಳು. ಎಲ್ಲೆಲ್ಲೋ ಹುಡುಕಿ ಸೋತ ಅವರಿಗೆ ಕೊನೆಗೆ ಆ ಹುಡುಗಿಯ ಮೃತ ದೇಹ ಒಂದು ಪೊದೆಯಲ್ಲಿ ಎರಡು ದಿನಗಳ ಬಳಿಕ ಸಿಕ್ಕಿತು. ಆಕೆಯನ್ನು ಅಮಾನುಷವಾಗಿ ಬಲಾತ್ಕರಿಸಿ ಕೊಂದು ಬಿಟ್ಟಿದ್ದ ಓರ್ವ ಪಾತಕಿ. ಆ ಕುಟುಂಬ ತನ್ನ ಶಾಂತಿ, ನೆಮ್ಮದಿಯನ್ನು ಕಳೆದುಕೊಂಡು ದು:ಖದಲ್ಲಿ ಮುಳುಗಿತ್ತು. ಆ ಮೇಲೆ ಗೊತ್ತಾಯಿತು ಇದು ಓರ್ವ ವಿಕೃತ ಕಾಮಿಯ ಕೆಲಸ; ಆತ ಈಗಾಗಲೇ ಸುಮಾರು ಹದಿನೈದು ಮಂದಿ ಅಮಾಯಕ ಹೆಣ್ಣುಮಕ್ಕಳನ್ನು ಇದೇ ರೀತಿ ಬಲಾತ್ಕರಿಸಿ ಕೊಂದು ಹಾಕಿದ್ದ. ಸರಿ! ಕಾನೂನಿನ ಕೈಗಳಿಂದ ಅಪರಾಧಿ ಧೀರ್ಘ ಕಾಲ ತಪ್ಪಿಸಿಕೊಳ್ಳಲಾರ ಎಂಬುದು ಅಪರಾಧ ಶಾಸ್ತ್ರದ ಒಂದು ಪ್ರಮೇಯ. ಸ಼ುಮಾರು ಇಪ್ಪತ್ಮೂರು ವಯಸ್ಸಿನ ಓರ್ವ ಯುವಕ ಈ ಕೃತ್ಯ ಮಾಡಿದವನು ಎಂದು ಪೊಲೀಸರು ಸಾಕ್ಷ್ಯಾಧಾರಗಳ ಮೂಲಕ ಕಂಡು ಹಿಡಿದು ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಇತ್ತ ಮಗಳನ್ನು ಕಳೆದುಕೊಂಡ ಆ ತಾಯಿ ಮಾನಸಿಕ ರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಯಿತು. ಚಿಕಿತ್ಸೆಯ ಭಾಗವಾಗಿ ನೊಂದು, ಬೆಂದ ಆ ಮಹಿಳೆಗೆ ಮಾನಸಿಕ ತಜ್ಞರು ಆ ಅಪರಾಧಿಯನ್ನು ಕ್ಷಮಿಸಿದರೆ ಆಕೆಗೆ ಮಾನಸಿಕ ನೆಮ್ಮದಿ ಸಿಕ್ಕರೂ ಸಿಗಬಹುದು ಎಂದು ಹೇಳಿದರು. ಹಾಗೆ ಆಕೆಯ ಪತಿ ಆಕೆಯನ್ನು ಇದಕ್ಕೆ ಒಪ್ಪಿಸಿದರಂತೆ. ಆಗ ಆ ಮಹಿಳೆ ಆ ಬಗ್ಗೆ ಯೋಚಿಸಿ, “ನೋಡೋಣ. ಪ್ರಯತ್ನ ಪಡುವೆ” ಎಂಬ ಪ್ರಾಮಾಣಿಕತೆಯಿಂದ ಆ ಯುವಕನನ್ನು ಜೈಲಿನಲ್ಲಿ ಭೇಟಿಯಾಗುತ್ತಾಳೆ. ಮೊದಲಿಗೆ ಅವಳ ಮನವಿಯನ್ನು ತಿರಸ್ಕರಿಸಿದ ಅಪರಾಧಿ ಕೊನೆಗೂ ಮನಸ್ಸು ಬದಲಿಸಿ ಆಕೆಯನ್ನು ಭೇಟಿಯಾಗಲು ಒಪ್ಪುತ್ತಾನೆ. ಈ ಮಹಿಳೆ ಅಲ್ಲಿಗೆ ಹೋಗಿ ಆತನಲ್ಲಿ ಮಾತನಾಡಿ “ನಾನು ನಿನ್ನನ್ನು ಮನ:ಪೂರ್ವಕವಾಗಿ ಕ್ಷಮಿಸಿದ್ದೇನೆ” ಎಂದು ಹೇಳಿದರೂ ಆತ ಅದನ್ನು ನಿರ್ಭಾವುಕವಾಗಿ ಕೇಳಿಸಿಕೊಂಡನಂತೆ. ಅವನಲ್ಲಿ ಯಾವ ಬದಲಾವಣೆಯನ್ನೂ ಆ ತಾಯಿ ಕಾಣಲಿಲ್ಲವಂತೆ. ಆದರೆ ಆಕೆ ಆತನನ್ನು ಮನ:ಪೂರ್ವಕವಾಗಿ ಕ್ಷಮಿಸಿ ಹಿಂತಿರುಗಿ ಬಂದ ಮೇಲೆ ನಿಧಾನವಾಗಿ ಆಕೆಯ ಮಾನಸಿಕ ಸ್ವಾಸ್ಥ್ಯ ಮರುಕಳಿಸಿತಂತೆ. ಇಷ್ಟು ಹೇಳಿ ಆ ಅಮೇರಿಕನ್ ಮಹಿಳೆ ತನ್ನ ಮಾತು ಮುಗಿಸಿ “ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಸ್ಸಂಕೋಚವಾಗಿ ತಿಳಿಸಿ: ಎಂದಾಗ ಸಭೆಯಲ್ಲಿ ಒಂದು ಮೌನ ಆವರಿಸಿತ್ತು. ಆಗ ನಾನು ಹೇಳಿದೆ: “ಇದು ಕೇಳಲಿಕ್ಕೇನೋ ಬಹಳ ಚೆನ್ನಾಗಿದೆ. ಆದರೆ ನಿಜ ಜೀವನದಲ್ಲಿ ಹೀಗಾಗುವುದು ಸಾಧ್ಯವೇ ಎಂಬ ಬಗ್ಗೆ ನನಗೆ ಸಂದೇಹವಿದೆ” ಆ ಅಮೇರಿಕನ್ ಮಹಿಳೆ ತಕ್ಷಣ ಯಾವ ಉತ್ತರವನ್ನೂ ಕೊಡದೆ ಉಳಿದವರ ಅಭಿಪ್ರಾಯಗಳನ್ನು ಕೇಳತೊಡಗಿದರು. ವಿದ್ಯಾರ್ಥಿಗಳೂ, ಅಧ್ಯಾಪಕರೂ

ಕ್ಷಮಯಾ ಧರಿತ್ರೀ … Read Post »

ಇತರೆ, ಜೀವನ

ಯಡ್ರಾಮಿಯ ಉಡುಪಿ ಹೋಟೆಲ್

ಪ್ರಬಂಧ ಮಲ್ಲಿಕಾರ್ಜುನ ಕಡಕೋಳ   ಹಾಗೆ ನೋಡಿದರೆ ನಮ್ಮ ಯಡ್ರಾಮಿಗೆ  ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿಗುರುತು ಬ್ಯಾಂಕ್ ಬಂದಿತ್ತು. ಸುಂಬಡ ಹಾದಿಬದಿಯ ಬಹುಪಾಲು ಬೆಳಕಿಲ್ಲದ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ.  ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ ಪತರಾಸುಗಳು, ಹಳೆಯ ಮೇಜು, ಮುಪ್ಪಾನು ಮುರುಕು ಬೆಂಚುಗಳು, ಮಣ್ಣುನೆಲದ ದೇಸಿಯ ಈ ಹೋಟೆಲುಗಳೆದುರಿಗೆ “ಉಡುಪಿ  ಬ್ರಾಹ್ಮಣರ ಹೋಟೆಲ್ ” ಬೋರ್ಡ್ ಹೊತ್ತು ಆರ್ಸಿಸಿ ಬಿಲ್ಡಿಂಗಿನಲ್ಲಿ ಈಸ್ಟ್ ಇಂಡಿಯಾ ಕಂಪನಿ‌ಯಂತೆ ಯಡ್ರಾಮಿಯಲ್ಲಿ ಝಂಡಾ ಊರಿತು. ಅದು ಆಗ ಮದುವೆ ಹೆಣ್ಣಿನಂತೆ ಅಲಂಕರಿಸಿತ್ತು. ಕಲರ್ಫುಲ್ ಕುರ್ಚಿ, ಟೇಬಲ್ ಗಳು, ಚೆಂದನೆಯ ಗಲ್ಲಾಕುರ್ಚಿ, ಆ ಕುರ್ಚಿ ಮೇಲ್ಭಾಗದ ಮೆರುಗಿನ ಬಣ್ಣದ ಗೋಡೆಗೆ ಅಷ್ಟಮಠದ ಭಗವತ್ಪಾದರ ಫೋಟೋ. ಅದನ್ನು ನೋಡಿದರೆ ಸಾಕು ಇವರು ಮಂಗಳೂರು, ಉಡುಪಿ ಬ್ರಾಹ್ಮಣರೆಂದು ಹೇಳಬಹುದಿತ್ತು. ಉಡುಪಿ ಕಡೆಯಿಂದ ಬರುವಾಗಲೇ  ರುಚಿಕರವಾದ ಖಾದ್ಯ ತಯಾರಕ ಒಂದಿಬ್ಬರು ಅಡುಗೆ ಭಟ್ಟರು, ಸಪ್ಲಯರೊಂದಿಗೆ  ಹೊಸರುಚಿ ಬಡಿಸುವ ಸೌಟುಗಳನ್ನೂ ತಂದಿದ್ದರು. ಇನ್ನು ಕ್ಲೀನಿಂಗ್ ಗೆ ಲೋಕಲ್ ಕೆಲಸಗಾರರನ್ನು ನೇಮಿಸಿಕೊಂಡರು. ಬಿಳಿ ಆಫ್ ಶರ್ಟ್, ಅಚ್ಚ ಬಿಳಿ ಲುಂಗಿಯ ಭಟ್ಟರು ಗಲ್ಲಾ ಪೆಟ್ಟಿಗೆ ಮೇಲೆ ಕುಂತು ಸಂಜೀಮುಂದ ಬರುವ “ಉದಯವಾಣಿ”ಯಲ್ಲಿಯ ಕರಾವಳಿ ಸುದ್ದಿಗಳನ್ನು ಓದುವಲ್ಲಿ ತೋರುವಷ್ಟೇ ಆಸಕ್ತಿಯನ್ನು ಹೋಟೆಲಿನ ಶುಚಿ ಮತ್ತು ರುಚಿಯಲ್ಲೂ ತೋರಿಸುತ್ತಿದ್ದರು. ಹಾಡಿನ ಶೈಲಿಯ ಮಧುರ ಮೆಲುದನಿಯ ಭಟ್ಟರ ಮಾತುಗಳಿಗೆ ನಮ್ಮ ಮೊಗಲಾಯಿ ಸೀಮೆಯ ಹಳ್ಳೀಮಂದಿ ಮುರಕೊಂಡು  ಬಿದ್ದಿದ್ರು. ಯಡ್ರಾಮಿ ಅಷ್ಟೇಅಲ್ಲ ಸುತ್ತಮುತ್ತಲ ಹತ್ತಾರು ಹಳ್ಳಿಯ ನಾಲಗೆಗಳಿಗೆಲ್ಲ ಭಟ್ಟರ ಹೊಟೆಲಿನ ಅಕ್ಕಿ ಖಾದ್ಯಗಳ ಹೊಸರುಚಿಯದೇ ಬಿಸಿ – ಬಿಸಿ, ಮಾತು – ಮಾತು. ದೋಸೆ, ಇಡ್ಲಿ, ವಡೆ, ಭಟ್ಟರ ಕೇಸರಿಬಾತಿನ ಪರಿಮಳ ನಮ್ಮ ಸಿರಾಕ್ಕೆ ಇಲ್ಲದಿರುವುದು ಸಾಬೀತು ಮಾಡಿದಂಗಿತ್ತು. ಇಡ್ಲಿ ವಡಾ ತಿನ್ನಲು ಎರಡೆರಡು ಸ್ಟೀಲ್ ಚಮಚಗಳು. ಸ್ಟೀಲ್ ಗಿಲಾಸಿನಲ್ಲಿ ಕುಡಿಯುವ ನೀರು. ನೀರು ತುಂಬಿದ ಸ್ಟೀಲ್ ಜಗ್. ಅದುವರೆಗೆ ಪ್ಲಾಸ್ಟಿಕ್ ಮತ್ತು ಗಿಲಾಟಿ ಗಿಲಾಸುಗಳಲ್ಲಿ ನೀರು ಕುಡಿದ ಗಿರಾಕಿಗಳಿಗೆ ಇದೆಲ್ಲ ಹೊಸ ಮೇಜವಾನಿ, ಸಹಜವಾಗಿ ಖುಷಿಕೊಟ್ಟದ್ದು ಸುಳ್ಳಲ್ಲ. ನಮ್ಮ ದೇಸಿಯ ಹೋಟೆಲುಗಳಲ್ಲಿ ಚಾರಾಣೆಗೆ ಸಿಗುವ ಸಾದಾ ಚಹ ಇಲ್ಲಿ ಬಾರಾಣೆ. ಹೊಟ್ಟೆ ತುಂಬಾ ನಾಸ್ಟಾ ಮಾಡಿದ ಗಿರಾಕಿಗಳು ದೀಡು ರುಪಾಯಿಯ ಕೇಟಿ ಕುಡಿಯಲು ಹಿಂದೇಟು ಹಾಕುತ್ತಿರಲಿಲ್ಲ. ಆಗ ಬರೀ ಬಾರಾಣೆಗೆ ಕಟ್ಟಿಗೆ ಒಲೆ ಊದಿ ಗಟ್ಟಿಯಾದ ಕೇಟೀ ಮಾಡುತ್ತಿದ್ದ ಚಾ ದುಕಾನಿನ ಎಕ್ಸಕ್ಲೂಸಿವ್  ಕೇಟೀ ಸ್ಪೆಷ್ಲಿಸ್ಟಗಳಾದ ಮುಗಳಿ ದುಂಡಪ್ಪ, ರಾವೂರ ಬಸಣ್ಣ, ಬಸಗೊಂಡೆಪ್ಪ, ಬ್ಯಾಳಿ ಶಾಂತಪ್ಪನವರ ಕಿಟ್ಲಿ ಕೇಟೀಯ  ಖಾಸಬಾತ್ ಖಾಯಂ ಗಿರಾಕಿಗಳಿಗೂ ಉಡುಪಿ ಹೊಟೇಲಿನ ಕಾಸ್ಟಲೀ ಖಡಕ್ ಟೀ ಕುಡಿಯುವ ಖಾಯಷ್. ನಮ್ಮ ಗಾಂವಟೀ ಹೊಟೇಲುಗಳು ಮಾಡಿದ ಪೂರಿ ಭಾಜಿ ಪುಟಾಣಿ ಚಟ್ನಿಗೆ ಸಕ್ಕರೆ, ಸೂಸ್ಲಾದ ಮೇಲೂ, ಉಪ್ಪಿಟ್ಟಿನ ಮೇಲೂ ಸಕ್ಕರೆ ಉದುರಿಸಿಕೊಂಡು  ಹೀಗೆ ಎಲ್ಲದಕ್ಕೂ ಸಕ್ಕರೆ ಉದುರಿಸಿಕೊಳ್ಳುವ ಗೋಧಿ ಖಾದ್ಯದ ನಾಲಗೆಗಳಿಗೆ ಉಡುಪಿ ಖಾದ್ಯಗಳು ಬರೀ ರುಚಿಯನ್ನಷ್ಟೇ ಬರಿಸಲಿಲ್ಲ. ಉಡುಪಿ ಹೋಟೆಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವಾಯಿತು. ಅಂತೆಯೇ ಕಡುಬಡವರು ಕೂಡ ಉಡುಪಿ ಹೋಟೆಲಿಗೆ ಹೋಗಿ ಉಡುಪಿ ಕೃಷ್ಣನ ದರ್ಶನ ಪಡಕೊಂಡು ಬಂದಷ್ಟೇ ಸಂತೃಪ್ತರಾಗುತ್ತಿದ್ದರು. ಜವೆಗೋಧಿಯ ಉದುರು ಉಪ್ಪಿಟ್ಟು ಕೊಡುತ್ತಿದ್ದ ಶಿವಣ್ಣನ  ಜವಾರಿ ರುಚಿಯ ಮುಂದೆ ಹೈಬ್ರಿಡ್ ರವೆಯ ” ಉಪ್ಮಾ “ಆರ್ಡರ್ ಮಾಡುವಲ್ಲಿ ನಮ್ಮ ನಾಲಗೆ ರುಚಿಗಳು ಕಲಕಾಗಿದ್ದವು ಎಂದರೆ ಉಡುಪಿ ಹೊಟೆಲ್ ಪ್ರಭಾವ ಯಾವ ಪ್ರಮಾಣದ್ದೆಂದು ಅರ್ಥೈಸಬಹುದು.  ಈಗ್ಗೆ ಎರಡು ವರ್ಷದ ಹಿಂದೆ ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಅಲ್ಲೀಗ ಫಿಜ್ಜಾ, ಬರ್ಗರ್, ದಾಬಾ ಕಲ್ಚರ್. ವೈನ್ ಸೆಂಟರ್, ರೆಸ್ಟುರಾಗಳು ಪ್ರವೇಶ ಪಡೆದಿವೆ. ಇದರ ನಡುವೆ ಉಡುಪಿ ಹೋಟೆಲ್ ಕಣ್ಮರೆಯಾಗಿದೆ. ಭಟ್ಟರ ವಯಕ್ತಿಕ ಕಾರಣಗಳಿಂದಾಗಿ ಕೆಲವು ವರ್ಷಗಳ ಹಿಂದೆಯೇ ನಾಪತ್ತೆಯಾಯಿತು. ಈಗೀಗ ಹೊಸ ಬಸ್ ಸ್ಟ್ಯಾಂಡ್ ಹತ್ತಿರದ ಹೋಟೆಲುಗಳ ಗೋಧಿ ಖಾದ್ಯಗಳಿಗೆ  ಬದಲು ಅಕ್ಕಿ ಖಾದ್ಯದ ವಿವಿಧ ತಿಂಡಿ ಪದಾರ್ಥಗಳು ಯಾಕೋ ಅನ್ನಭಾಗ್ಯದ ನೆನಪು ತರಿಸುತ್ತಿವೆ ? ಆದರೆ ಪಥ್ಯ ಮಾಡುವ ಉತ್ತಮರೆಲ್ಲ ಎತ್ತ ಹೋದರೋ ಎಂಬ ನಮ್ಮ ಕಡಕೋಳ ಮುತ್ಯಾ ಮಡಿವಾಳಪ್ಪನ ಹಾಡಿನಂತೆ  ನೆಲದ ನೆನಪಿನ ರುದ್ರಯ್ಯ ಮುತ್ಯಾ, ಹಲಕರಟಿ ಶಿವಣ್ಣನಂಥವರು ಎತ್ತ ಹೋದರೋ ಗೊತ್ತಿಲ್ಲ. ನಮ್ಮ ನಾಲಗೆಗಳು ಮಾತ್ರ ಹೊಸರುಚಿಯ ಬಲೆಯಲ್ಲಿ ಬಿದ್ದು ಜವಾರಿ ರುಚಿ ಮತ್ತು ಅಭಿರುಚಿಯನ್ನೇ ಕಳಕೊಂಡಿವೆ. ***************

ಯಡ್ರಾಮಿಯ ಉಡುಪಿ ಹೋಟೆಲ್ Read Post »

ಇತರೆ, ಜೀವನ

ವೃದ್ಧಾಶ್ರಮಗಳ ಸುತ್ತ

ಚಿಂತನೆ ಅರುಣ ರಾವ್ ನನ್ನ  ಶಾಲಾ ದಿನಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳನ್ನು ಕೇಳಿದ್ದ ನನಗೆ, ವೃದ್ಧಾಶ್ರಮ ಎಂಬ  ಹೊಸ ಆಶ್ರಮ ನವ  ಪ್ರಪಂಚವೊಂದನ್ನು ಪರಿಚಯಿಸಿತು. ನನ್ನ ಚಿಕ್ಕಂದಿನಲ್ಲಿ ವೃದ್ಧಾಶ್ರಮ ಎನ್ನುವ ಪದವನ್ನು ನಾನೆಂದೂ  ಕೇಳಿಯೇ  ಇರಲಿಲ್ಲ. ಆಗೆಲ್ಲಾ  ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು ಬಹಳ ಆನಂದದಿಂದ ಸಮರಸದಿಂದ ಕೂಡಿ ಬಾಳುವೆ ನಡೆಸುತ್ತಿದ್ದರು. ಇವರೆಲ್ಲರೂ ಇದ್ದಾಗ ಮಾತ್ರ ನಮ್ಮದೊಂದು ಸಂಸಾರವಾಗುತ್ತದೆ ಎಂದು ಎಲ್ಲರೂ ಬಲವಾಗಿ ನಂಬಿದ್ದರು. ವಯಸ್ಸಾದ  ತಂದೆ ತಾಯಿಗಳು ನಮಗೊಂದು ಹೊರೆ ಎಂದು ಮಕ್ಕಳು ಎಂದೂ ಭಾವಿಸುತ್ತಿರಲ್ಲಿಲ್ಲ‌.   ತಮ್ಮ ತಂದೆ ತಾಯಂದಿರು ಅಜ್ಜ -ಅಜ್ಜಿಯರನ್ನು ನೋಡಿಕೊಳ್ಳುವುದನ್ನು ನೋಡುತ್ತಲೇ ಬೆಳೆದ ಮಕ್ಕಳು, ತಮ್ಮ ತಂದೆ ತಾಯಿಗೆ ವಯಸ್ಸಾದಾಗ ತಾವು ನೋಡಿಕೊಳ್ಳಬೇಕೆಂಬ ಸಹಜ ಭಾವನೆಯಿಂದಲೇ ಬೆಳೆದು ದೊಡ್ಡವರಾಗುತ್ತಿದ್ದರು.  ಅವರನ್ನು ನೋಡಿಕೊಳ್ಳುವುದು  ಮಕ್ಕಳ ಆದ್ಯ ಕರ್ತವ್ಯವಾಗಿ, ಬಲವಂತ ಮತ್ತು ದಾಕ್ಷಿಣ್ಯ ರಹಿತವಾಗಿ ಸರಾಗವಾಗಿ ಸಾಗಿ ಹೋಗುತ್ತಿತ್ತು. ಭಾರತೀಯ   ಸಮಾಜದ ಒಟ್ಟಾರೆ ಚಿತ್ರಣ ಇದೇ ಆಗಿರುವಾಗ ಎಲ್ಲರೂ ಈ ವ್ಯವಸ್ಥೆಯನ್ನು ಯಥಾವಿಧಿ ಒಪ್ಪಿಕೊಂಡು, ಅದರಂತೆ ತಮ್ಮ ಮನಸ್ಥಿತಿಯನ್ನು ರೂಢಿಸಿಕೊಳ್ಳುತ್ತಿದ್ದರು.  ನಮ್ಮ ಪುರಾಣಗಳಲ್ಲಿ ಕಂಡು ಬರುವ ‘ಶ್ರವಣನ ಪಿತೃಭಕ್ತಿ’ ಕತೆಯೂ ಸಹ   ಇದನ್ನೇ ಒತ್ತಿಹೇಳುತ್ತದೆ.  ಶ್ರವಣಕುಮಾರನು ಕುರುಡರಾದ ತನ್ನ ತಂದೆ ತಾಯಿಯರ ಮನೋಭಿಲಾಷೆಯನ್ನು  ನೆರವೇರಿಸುವ ಸಲುವಾಗಿ,  ವಯಸ್ಸಾದ ಅವರನ್ನು  ಡೋಲಿಯಲ್ಲಿ ಕುಳ್ಳರಿಸಿಕೊಂಡು ಪುಣ್ಯಕ್ಷೇತ್ರಗಳಿಗೆ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸಿದ್ದು.  ನಂತರ ದಶರಥನ ಶಬ್ದವೇಧಿ ಬಾಣಕ್ಕೆ ಗುರಿಯಾಗಿ, ಸಾವಿನ ಅಂಚಿನಲ್ಲದ್ದಾಗಲೂ ಸಹ‌ ಅವನಿಗೆ ತನ್ನ ತಂದೆ-,ತಾಯಿಯರದೇ ಚಿಂತೆ. ಹಾಗಾಗಿ  ನಮ್ಮ ಇಂದಿನ ಯುವ ಜನಾಂಗ ಈ ಕತೆಯನ್ನು  ಮತ್ತೊಮ್ಮೆ ಕೇಳಬೇಕಿದೆ, ಮನವರಿಕೆ ಮಾಡಿಕೊಳ್ಳಬೇಕಿದೆ. ಏಕೆಂದರೆ  ಶ್ರವಣ ಕುಮಾರನು  ಸರ್ವಕಾಲಕ್ಕೂ, ಸರ್ವರಿಗೂ ಆದರ್ಶಪ್ರಾಯನಾಗಿದ್ದಾನೆ. ಉದಾಹರಣೆಗೆ ಸ್ವತ: ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರೇ ಈ ಕಥೆಯನ್ನು ಓದಿ, ಶ್ರವಣನಿಂದ ಪ್ರಭಾವಿತರಾಗಿ, ಕಾಯಿಲೆ ಪೀಡಿತರಾದ  ತಮ್ಮ ತಂದೆಯ ಸೇವೆಯನ್ನು  ಅವರ ಕೊನೆ ಉಸಿರಿರುವವರೆಗೂ ಮಾಡಿದರು.. ಆದರೆ  ಇಂದು ಎಲ್ಲವೂ ತಿರುಗು ಮರುಗಾಗಿದೆ. ಮಕ್ಕಳಿಗೆ ತಮ್ಮ ತಂದೆ ತಾಯಿ ತಮ್ಮ ಜೊತೆಯಲ್ಲಿದ್ದರೆ ಸರಿ‌ಬೀಳದು.  ಇದಕ್ಕೆ ಹಲವಾರು ಕಾರಣಗಳಿರಬಹುದು. ಅಜ್ಜ, ಅಜ್ಜಿಯರ  ಮುದ್ದಿನಿಂದಾಗಿ ತಮ್ಮ ಮಕ್ಕಳು ಹಾಳಾಗುತ್ತಿದ್ದಾರೆಂದೋ, ಸಂಜೆಯಾದರೆ ಧಾರಾವಾಹಿಗಳನ್ನು ನೋಡುವುದರಿಂದ ತಮ್ಮ ಮಕ್ಕಳು ಓದುತ್ತಿಲ್ಲವೆಂದೋ, ಅವರಿಂದಾಗಿ‌ ಮನೆಯಲ್ಲಿ ಪದೇಪದೇ ಜಗಳಗಳಾಗುತ್ತಿವೆಯೆಂದೋ  ಹೀಗೆ ಹತ್ತು ಹಲವು ಕಾರಣಗಳನ್ನು ನೀಡಿ,  ಮೊಮ್ಮಕ್ಕಳು ಅಜ್ಜಿ ಅಥವಾ ತಾತ ತಮ್ಮ  ಜೊತೆಯಲ್ಲಿ, ತಮ್ಮ ಮನೆಯಲ್ಲಿಯೇ  ಇರಬೇಕೆಂದು ಹಠ ಮಾಡಿ, ಅತ್ತು ಕರೆದು ಗೋಳಾಡಿದರೂ, ಮಕ್ಕಳ  ಮಾತನ್ನು‌ ಕೇಳದೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು, ತಮ್ಮ ಜೊತೆಯಲ್ಲಿಟ್ಟುಕೊಳ್ಳದೆ ಬೇರೆ ಮನೆ ಮಾಡಿ ಇಡುವುದು  ವಿಪರ್ಯಾಸವೇ ಸರಿ. ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳೊಂದಿಗೆ, ಮೊಮ್ಮಕ್ಕಳನ್ನು ಆಡಿಸುತ್ತಾ, ಕಾಲ ಕಳೆಯುವ ಕನಸನ್ನು ಹೊತ್ತ ವೃದ್ಧ ಜೀವಗಳು ವೃದ್ಧಾಶ್ರಮಕ್ಕೆ ಹೋಗಲು,   ತಾವೇ ಪ್ರತ್ಯೇಕವಾಗಿರಲು ಅದೆಷ್ಟು ನೊಂದುಕೊಂಡೀತೋ?   ಇಂದು ಇದು ಕೇವಲ  ಬಡವ ಹಾಗೂ ಮಧ್ಯಮ ತರಗತಿಯವರ ಸಮಸ್ಯೆಯಷ್ಟೇ ಅಲ್ಲದೆ, ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳ ಭವ್ಯ ಭವಿಷ್ಯದ ಬಗೆಗೆ ಕನಸು ಹೊತ್ತ ಪೋಷಕರು ಅವರಿಗಾಗಿ ಹಗಲಿರುಳು ಶ್ರಮಿಸಿ ಕಷ್ಟ ಪಡುತ್ತಾರೆ.  ಓದಿದ ಮಕ್ಕಳು  ಉದ್ಯೊಗಗಳನ್ನು ಅರಸುತ್ತಾ, ವಿದೇಶಕ್ಕೆ ಹೋಗುತ್ತಾರೆ. ನಂತರ ಅಲ್ಲಿಯೇ ಶಾಶ್ವತವಾಗಿ  ನೆಲೆನಿಂತು,  ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಪೋಷಕರಿಗೆ ಕಳುಹಿಸಿ ಕೊಡುವುದರಲ್ಲಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಆದರೆ  ಈ ಹಣ ಯಾವತ್ತಿಗೂ ಇವರನ್ನು ಪ್ರೀತಿಯಿಂದ ಮಾತನಾಡಿಸಲು ಸಾಧ್ಯವೇ?   ಇವರು ಅನಾರೋಗ್ಯ ಪೀಡಿತರಾದಾಗ  ಸೇವೆ ಮಾಡಲು ಸಾಧ್ಯವೇ? ಅವರು ಕಾಯಿಲೆ ಬಿದ್ದಾಗ ಅಕ್ಕರೆಯಿಂದ ಆರೈಕೆ ಮಾಡಲು ಸಾಧ್ಯವೇ?  ವಯಸ್ಸಾದಂತೆ ಮುದಿ ಜೀವಗಳು ಇತರರೊಂದಿಗೆ  ಮಾತುಕತೆಗಾಗಿ ಹಂಬಲಿಸುತ್ತಿರುತ್ತದೆ.ಆದರೆ ಮಕ್ಕಳಿಗಾಗಲೀ, ಮೊಮ್ನಕ್ಕಳಿಗಾಗಲೀ ಇವರೊಡನೆ ಮಾತನಾಡಲು‌ ಪುರುಸೊತ್ತೆಲ್ಲಿಯದು?  ಈಗ‌ಂತೂ ಮಗುವನ್ನು‌ ಯಾವ ಶಾಲೆಗೆ ಸೇರಿಸಿದಿರಿ ಎನ್ನುವಷ್ಟು ಸಹಜವಾಗಿ, ‘ ನಿಮ್ಮ ತಂದೇನ ಯಾವ ವೃದ್ಧಾಶ್ರಮಕ್ಕೆ ಸೇರಿಸಿದ್ರಿ? ಎಂದು ಕೇಳಲಾಗುತ್ತಿದೆ.ಪಟ್ಟಣ ಪ್ರದೇಶಗಳಿಗೆ ಹೋಲಿಸಿಕೊಂಡರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸ್ಥಿತಿ ವಿಭಿನ್ನವಾಗಿದೆ.  ವಯಸ್ಸಾದ ತಂದೆ ತಾಯಂದಿರು ಹಳ್ಳಿ ಗಳಲ್ಲಿ ವಾಸಿಸುತ್ತಿದ್ದರೆ, ಅವರ ಮಕ್ಕಳು ಕೆಲಸದ ಕಾರಣದಿಂದಲೋ ಮತ್ತೊಂದೋ ಆಗಿ ನಗರಗಳಲ್ಲಿ ನೆಲೆಸಿರುತ್ತಾರೆ.  ವರ್ಷದಲ್ಲಿ ಯಾವಾಗಲೋ ಒಮ್ಮೊಮ್ಮೆ ರಜಾ ದೊರೆತಾಗ ಊರಿಗೆ ಹೋದರೆ ಹೋದರು; ಇಲ್ಲದಿದ್ದರೆ ಇಲ್ಲ.  ತಮ್ಮ ಇಡೀ ಜೀವಮಾನ ಅದರಲ್ಲೂ ಯೌವ್ವನದ ಬಹು ಪಾಲು ಕುಟುಂಬದ, ಮಕ್ಕಳ ಏಳಿಗೆಗಾಗಿ ದುಡಿದು ಹಣ್ಣಾದ ಜೀವಗಳು ವೃದ್ಧಾಶ್ರಮದ ಬಾಗಿಲ ಬಳಿ ಕುಳಿತು ತಮ್ಮ ಮಕ್ಕಳು ಎಂದಿಗೆ ಬರುತ್ತಾರೋ?  ಎಂದು ಎದಿರು ನೋಡುವ ದೃಶ್ಯವಂತೂ ಕರುಳಿರಿಯುವಂತಹುದು.   ಹಾಗಿದ್ದರೂ  ವೃದ್ಧಾಶ್ರಮಗಳಲ್ಲಿನ ವಾಸ್ತವ್ಯ ಅಷ್ಟೇನೂ ಕಷ್ಟಕರವಾದುದಲ್ಲ. ಏಕೆಂದರೆ ಅಲ್ಲಿ ಅವರಿಗೆ ಅವರದೇ ವಯೋಮಾನದವರ ಜೊತೆ ಬೆರೆಯುವ, ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಅವಕಾಶ ಇಲ್ಲದಿಲ್ಲ. ಕಾಲಕಾಲಕ್ಕೆ ಊಟ, ನಿದ್ದೆ, ವಿಶ್ರಾಂತಿ, ಔಷಧ ಎಲ್ಲವೂ ದೊರಕುತ್ತದೆ. ಅದರೂ ಈ ಸೌಕರ್ಯಗಳು ಸ್ವಂತ ಮಕ್ಕಳ ಜೊತೆ ಇರುವ ನೆಮ್ಮದಿಯನ್ನು  ಸುಖ-ಸಂತೋಷವನ್ನು  ಎಂದಿಗೂ ಕೊಡಲಾಗದು. ” ದೋಸೆ ಮಗುಚಿ  ಹಾಕಿದಂತೆ”ಎನ್ನುವ ಗಾದೆ ಮಾತಿನಂತೆ   ಅಜ್ಜ,ಅಜ್ಜಿಯರನ್ನು ವೃದ್ಧಾಶ್ರಮದಲ್ಲಿಯೇ ನೋಡಿ ಅಭ್ಯಾಸವಿರುವ ಇವರ ಮಕ್ಕಳು  ತಮ್ಮ ತಂದೆ-ತಾಯಿಯರಿಗೆ ವಯಸ್ಸಾದ ಕಾಲಕ್ಕೆ ಅವರನ್ನೂ ಸಹ ವೃದ್ಧಾಶ್ರಮಕ್ಮೆ ಕಳುಹಿಸುವುದು ನೂರಕ್ಕೆ ನೂರರಷ್ಟು ನಿಜ.  ಏಕೆಂದರೆ ಮಕ್ಕಳು ನಾವು ಹೇಳಿಕೊಟ್ಟು ಕಲಿಯುವುದಕ್ಕಿಂತ ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ ಅಲ್ಲವೇ? ********************

ವೃದ್ಧಾಶ್ರಮಗಳ ಸುತ್ತ Read Post »

ಇತರೆ, ಜೀವನ

ಬಸವಣ್ಣನಿಗೊಂದು ಪತ್ರ

ಲೇಖನ ನೂತನ ದೋಶೆಟ್ಟಿ ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆಇವನಾರವ ಇವನಾರವ ಎನ್ನದಿರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು ಚೂರಾಗಿದ್ದ ನಮ್ಮ ಅಂದಿನ ಸಮಾಜಕ್ಕೆ ದಾರಿದೀವಿಗೆಯಾಗಿ ಬಂದು ಮೇಲು ಕೀಳೆಂಬುದನ್ನು ಧಿಕ್ಕರಿಸಿ ಕಾಯಕ ಮಂತ್ರದೀಕ್ಷೆ ಮಾಡಿದೆ. ಕಾಯಕವೇ ಧರ್ಮ ಎಂದು ಪ್ರತಿಪಾದಿಸುತ್ತಲೇ ಅಂದಿನ ಧಾರ್ಮಿಕತೆಗೆ ದಯವಿಲ್ಲದಾ ಧರ್ಮ ಅದೇವುದಯ್ಯಾ ?ಎಂದು ಪ್ರಶ್ನಿಸಿದೆ.ಇದು ಕೇವಲ ಪ್ರಶ್ನೆಯಾಗಿರದೆ ಸಹಸ್ರಾರು ಹಿಂದುಳಿದವರ, ಬಡಬಗ್ಗರ, ತುಳಿತಕ್ಕೆ ಒಳಗಾದವರ, ಶೋಷಿತರ, ದುರ್ಬಲ ವರ್ಗದವರ ಮನೋಬಲವನ್ನು ವೃದ್ಧಿಸಿ ಇತರರಂತೆ ತಾವೂ ಮನುಷ್ಯರು. ತಮಗೂ ಅವರಂತೆ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳುವ ಧೈರ್ಯದ್ರವ್ಯವಾಯಿತು.ಅಂತಹ ಧೈರ್ಯವನ್ನು ಜನಸಾಮಾನ್ಯರಲ್ಲಿ ತುಂಬುವ ಮೊಟ್ಟಮೊದಲ ಪ್ರಯತ್ನ ನಿನ್ನಿಂದ ನಡೆಯಿತು.ನೀನು ಅವರೆಲ್ಲರ ಆರಾಧ್ಯಧೈವವಾದೆ. ನಿನ್ನ ಕಾಯಕ ನಿನ್ನನ್ನು ಆ ಎತ್ತರಕ್ಕೆ ಏರಿಸಿತು.ಆನಂತರ ನಡೆದದ್ದೆಲ್ಲ ಕ್ರಾಂತಿಯೇ.ಹೀಗಿದ್ದ ನೀನು ,ನಿನ್ನ ಜೀವಿತಕಾಲದಲ್ಲೇ ಆರಂಭಿಸಿದ ಸಾಮಾಜಿಕ ಚಳವಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಯಿತು. ಪ್ರಬಲರು ದುರ್ಬಲರೊಂದಿಗೆತಮ್ಮನ್ನು ಗುರುತಿಸಿಕೊಳ್ಳಲು,ಅವರಿಗೆ ಸಮಾನ ಸ್ಥಾನ-ಮಾನಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿದರು.ಈ ಪ್ರತಿರೋಧದ ಜ್ವಾಲೆ ನಿನ್ನನ್ನೂ ಸೇರಿಸಿದಂತೆ ನಿನ್ನ ಆದರ್ಶ ಸಮಾಜದ ಕನಸನ್ನೂ ಆಹುತಿ ತೆಗೆದುಕೊಂಡಿತು.ಅದೂ ಮತ್ತೊಂದು ರೀತಿಯ ಕ್ರಾಂತಿಯೇ.ಆನಂತರ ಮತ್ತೊಮ್ಮೆ ನೀನು ಆರಾಧ್ಯದೈವವಾದೆ.ಅಂದು ನೀನು ಬೆಳೆಸಿದ ನಿನ್ನ ಮಕ್ಕಳು ದಾಯಾದಿಗಳಾಗಿ ಹೊಡೆದಾಡುತ್ತಿದ್ದಾರೆ.ಅವರು ಏಕೆ ಹೊಡೆದಾಡುತ್ತಿದ್ದಾರೆ ಎಂದು ನನ್ನಂಥ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಅದು ನನ್ನಂಥ ಸಾಮಾನ್ಯರಿಗೆ ಸಂಬಂಧಿಸಿದ್ದೂ ಅಲ್ಲ. ಅದೇನಿದ್ದರೂ ರಾಜಕಾರಣಿಗಳಿಗೆ, ಧರ್ಮದ ಮುಂದಾಳುಗಳಿಗೆ ಸಂಬಂಧಿಸಿದ್ದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಇವರಿಬ್ಬರ ನಡುವೆ ನೀನು ಹೇಗೆ ಮತ್ತು ಏಕೆ ಸಿಲುಕಿದೆ ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಿನ್ನನ್ನು ದೈವವಾಗಿ ಆರಾಧಿಸಬೇಕೆಂದು ನೀನೇನು ಅವರನ್ನು ಬೇಡಿಕೊಂಡಿದ್ದಿಲ್ಲ. ಅಥವಾ ನಿನ್ನನ್ನೇ ಆರಾಧಿಸಬೇಕೆಂದೂ, ಅವರು ನಿನ್ನ ನಂತರ ತಾವೇ ಒಪ್ಪಿಕೊಂಡು ಮುನ್ನಡೆಸಿದ ಧರ್ಮದ ಮೊದಲಿಗನೆಂದೂ ಹೇಳಿರಲಿಲ್ಲ. ಇದೆಲ್ಲ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಅವಶ್ಯಕತೆಯಾಗಿತ್ತು.ಅದಕ್ಕೆ ನಿಮಿತ್ತವಾಗಿ ಬಂದ ನೀನು ಎಲ್ಲರನ್ನೂ ಒಂದಾಗಿಸಿ, ಮುನ್ನಡೆಸಲು ಹರಸಾಹಸ ಮಾಡಿ ಒಂದು ಹಂತದಲ್ಲಿ ಯಶಸ್ವಿಯಾದೆ. ಇದನ್ನು ಸಹಿಸದ ಜನ ಅಂದೂ ಇದ್ದರು ತಾನೆ?ಈ ನೋವು ನಿನ್ನನ್ನು ಅವರೆಲ್ಲರಿಂದ ದೂರ ಸರಿಯುವಂತೆ ಮಾಡಿತೋ ಅಥವಾ ಅವರೇ ನಿನ್ನನ್ನು ಕಾಣದ ಲೋಕಕ್ಕೆ ಕಳಿಸಿದರೋ ಆ ಕೂಡಲಸಂಗನಿಗೆ ಮಾತ್ರ ಗೊತ್ತು. ಅಣ್ಣಾ, ವಿದ್ಯೆಯಿರದ ಆ ಕಾಲದ ಜನರಲ್ಲಿ ಅರಿವು ಮೂಡಿಸಲು ನೀನು ಪಡಬಾರದ ಪಾಡು ಪಟ್ಟೆ.ಎಲ್ಲರ ವಿರೋಧದ ನಡುವೆ ಏಕಾಂಗಿಯಾದರೂ ಅಚಲನಾಗಿ ನಿಂತೆ.ಕಮ್ಮಾರ, ಕುಂಬಾರ ಮೊದಲಾದ ಕಾಯಕದವರ ಬಾಳು ಭಂಡವಲ್ಲ. ಕಾಯಕವೇ ಕೈಲಾಸ ಎಂದು ಸಾರಿ ಮೊಟ್ಟಮೊದಲ ಬಾರಿಗೆ, ‘ ಡಿಗ್ನಿಟಿ ಆಫ್ ಲೇಬರ್’ – ಶ್ರಮಜೀವಿಗಳಿಗೆ ಗೌರವ ಸಲ್ಲಲೇಬೇಕಾದ ಹಕ್ಕಿನ ಪ್ರತಿಪಾದನೆ ಮಾಡಿದೆ. ಅದಾಗಲೇಇಂತಹ ಅನೇಕಾನೇಕ ಕಾಯಕಗಳು ಜಾತಿಗಳಾಗಿ ಪರಿಗಣಿತವಾಗಿದ್ದವು. ಆ ಜಾತಿಗಳು, ಅವರ ಅನಿವಾರ್ಯತೆ ಹಾಗೂ ಅವರ ಬಡತನ, ಅಂದಿನ ಮೇಲ್ವರ್ಗದ ಸಮಾಜಕ್ಕೆ ಆಳುವ ವರ್ಗಕ್ಕೆ ಬೇಕಾಗಿತ್ತು.ಅವರು ಸಂಘರ್ಷಕ್ಕೆ ಇಳಿದಾಗ ಅವರೆದುರು ನಿನ್ನ ಹೋರಾಟ ನಿನ್ನ ಜೀವಿತಕಾಲದಲ್ಲಿ ಸಫಲವಾಗಲಿಲ್ಲ. ಇದೆಲ್ಲ ನಡೆದು ಈಗ ೯ ಶತಮಾನಗಳೇ ಕಳೆದಿವೆ. ಆದರೂ ಕಾಲ ಮುನ್ನಡೆಯದೆ ನಿಂತಲ್ಲೇ ನಿಂತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿಗೆ ಇವೆ.ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ. ಅಯ್ಯಾಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಕಕ್ಕುಲಾತಿಯಿಂದ ಕಲಿಸಿದ ನಿನ್ನನ್ನೇ ಎಲವೋ ಎನ್ನುವುದಕಿಂತ ವಿಪರ್ಯಾಸ ಬೇಕೆ? ನನ್ನಂಥ ಸಾಮಾನ್ಯರಿಗೆ ದಾರಿ ತೋರುವ ಗುರುವ ಎಲ್ಲಿ ಹುಡುಕಲಿ ?ಈಗ ನೀನೊಂದು ‘ಬ್ರ್ಯಾಂಡ್’ ಆಗಿದ್ದೀಯಾ ಬಲ್ಲೆಯಾ ?ನಿನ್ನ ವಚನಗಳನ್ನು ತಮಗೆ ಬೇಕಾದಂತೆ, ತಮಗೆ ಬೇಕಾದಲ್ಲಿ ಉದ್ಧರಿಸಿ ಚಪ್ಪಾಳೆ ಗಿಟ್ಟಿಸುವ ನಾಯಕರು ಹೆಚ್ಚುತ್ತಿದ್ದಾರೆ. ನಿನ್ನ ಮೂರ್ತಿಗಳು ಎಲ್ಲೆಡೆ ಪ್ರತಿಷ್ಠಾಪನೆಯಾಗುತ್ತಿವೆ. ಕಡಲಾಚೆಯೂ ನೀನು ಪ್ರಸಿದ್ಧ. ರಾಜಕೀಯ ಹವಣಿಕೆಗಳಿಗೆ ನೀನು ದಾಳವಾಗಿದ್ದು ಮಾತ್ರ ನನಗೆ ಸಂಕಟವುಂಟು ಮಾಡುತ್ತದೆ ಏಕೆಂದರೆ ನೀನು ನಿನ್ನ ಕಾಲದಲ್ಲೂ ರಾಜಕೀಯದಾಟಕ್ಕೆ ದಾಳವಾಗಿದ್ದಿ. ನೀನಾಗಲೀ, ನಿನ್ನ ವಚನಗಳಾಗಲೀ ಧರ್ಮದ ಸೋಂಕಿರದ ಜೀವನಕ್ರಮ, ಸ್ವಾಸ್ಥ್ಯ ಆದರ್ಶ ಸಮಾಜದ ಬೆನ್ನೆಲುಬು ಮತ್ತು ಒಂದು ಅನನ್ಯ ಸಂಸ್ಕೃತಿ ಎಂದು ನನ್ನಂಥ ಸಹಸ್ರಾರು ಸಾಮಾನ್ಯರು ನಂಬಿಕೊಂಡು ಅದನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ. ಅಂತಹದರಲ್ಲಿ ನಮ್ಮ ಬದುಕನ್ನೇ ದಿಕ್ಕೆಡಿಸುತ್ತಿರುವ ವಿದ್ಯಾವಂತ, ಬುದ್ಧಿವಂತ, ಸುಶಿಕ್ಷಿತ ಎಂದು ಕರೆದುಕೊಳ್ಳುವ ಗುಂಪುಗಾರಿಕೆಯ ಜನರಿಗೆ ನನ್ನಂಥವರ ಧಿಕ್ಕಾರವಿದೆ.ಅಣ್ಣಾ, ಅಂಗೈಯಲ್ಲಿ ದೈವತ್ವವನ್ನು ಕಾಣಿಸಿದ ನಿನ್ನ ಉದಾರತೆ, ಹಿರಿತನ ಇಂಥವರಿಗೆ ಅಂದೂ ಅರ್ಥವಾಗಿರಲಿಲ್ಲ. ಈ ಲಾಭಕೋರ ಢೋಂಗಿಗಳ ನಡುವೆ ನೀನು ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವೆ?

ಬಸವಣ್ಣನಿಗೊಂದು ಪತ್ರ Read Post »

ಇತರೆ, ಜೀವನ

ಬದುಕು ಕಠೋರ

ಅನುಭವ ನಾಗರಾಜ ಮಸೂತಿ ಇವತ್ತು ಬದುಕು ಬಹಳ ಕಠೋರ ಅನಿಸ್ತು. ನಾವೆಲ್ಲ ಮನೆ ಮುಂದಿನ ಗೇಟ್ ಕೂಡ ದಾಟದ ಹಾಗೆ ಮನೆಯಲ್ಲಿಯೇ ಕೂತಿವಿ. ಹಳ್ಳಿ ಹೆಣ್ಣು ಮಗಳು ಮೊಸರು ಮಾರ್ತಾ ಮನೆ ಬಾಗ್ಲಿಗೆ ಬಂದ್ಲು. ನಮವ್ವಗ ಒಂದು ಒಳ್ಳೆ ಅಭ್ಯಾಸ ಏನಂದ್ರ ಯಾರೇ ಬರ್ಲಿ ಕರದ ಕುಂಡರ್ಸಿ ನೀರ ಕೊಟ್ಟ ಮಾತಾಡ್ಸುದು. ವ್ಯಾಪಾರ ಎರಡನೆ ಮಾತು. ಇದು ನಮ್ಮ ಮನೆ ಮಂದಿಗೆ ಹಿರೆರಿಂದ ಬಂದ ಬಳುವಳಿ. ಇರ್ಲಿ ಹಾಂ ಮೊಸರ ಮಾರಕ ಬಂದಾಕಿ ಮಸರು ಕೊಟ್ಲ ರೊಕ್ಕಾನು ತಗೊಂಡು ಕಥೆ ಹೇಳಾಕ ಸುರು ಮಾಡಿದ್ಲ. ಬಾಗಲಕೋಟಿ ಹತ್ರ ಪಕ್ಕದ ಹಳ್ಳಿ ಆಕೆದು . ಕಾಯಿಪಲ್ಯ, ಮೊಸರ, ಹಾಲ ಮಾರೊರು ಎಂಟತ್ತ ಮಂದಿ ಸೇರಿ ಟಾಟಾ ಎಸಿ ಗಾಡಿ ಬಾಡಗಿ ಮಾತಡ್ಕೊಂದ ಬಂದಾರ. ಇಲ್ಲಿ ನವನಗರದಾಗ ಎಲ್ಲೀ ವ್ಯಾಪರಕ್ಕ ಬಿಡವಲ್ಲರು.  ಕೊರೊನಾ ಬಂದೈತಿ ಅಂತ ಹೇಳಿ ಪೋಲಿಸರ ಮುಂಜ ಮುಂಜಾನೆ ಲಾಠಿ ಏಟ್ ಕೊಡಾಕ ಸುರು ಮಾಡ್ಯರಬೆ ಎವ್ವ, ಬುಟ್ಯಾಗಿನ ಕಾಯಿಪಲ್ಯ ಚೆಲ್ಲಾಕತ್ತಾರ, ಗಡಿಗ್ಯಾಗಿನ ಮಸೂರ ಚೆಲ್ಲಿದ್ರ. ಒಬ್ಬ ಗನಮಾಗ ಬಂದ ಕೇಳಿದ ಬೆಣ್ಣಿ ಇತ್ತಬೆ ಅರ್ಧ ಕಿಲೋ ಕೊಟ್ಟ್ಯಾ ಪೋಲಿಸ್ ಬಂದ್ರ ಹಂಗ ಓಡಿ ಹೋದನಬೇ. ರೊಕ್ಕಾನು ಕೊಡ್ಲಿಲ್ಲ, ಡಬ್ಬಿನ ಒಯ್ದಾಬೇ. ಎಡ್ನೂರು ಮುನ್ನೂರ ರೂಪಾಯಿಬೇ ಎವ್ವಾ, ಏನ್ ಮಾಡಬೇಕ ನೋಡ. ಅವ್ವಗ ತಡ್ಯಾಕಾಗಲಿಲ್ಲ ಬೈದ್ಲು ಮನಸು ಹಗರು ಮಾಡ್ಕೊಂಡಳು. ಮೊಸರ ಮಾರಾಕಿಗಿ ಸಮಾಧಾನ ಮಾಡಿದ್ಲ. ಎವ್ವ ಈ ಗಲಾಟ್ಯಾಗ ಯಾಕ್ ಬರ್ತಿ ಸುಮ್ಮನ ಮನ್ಯಾಗ್ ಇರ್ಬಾರ್ದ ಅಂದ್ಲ್. ಎಷ್ಟೇ ಆಗಲಿ ಹಳೆ ಮನುಷ್ಯಾರ ಒಬ್ಬರ ಕಷ್ಟ ತಮ್ಮ ಕಷ್ಟ ಅನ್ನುವಷ್ಟರ ಮಟ್ಟಿಗೆ ಅವರ ಪ್ರತಿಕ್ರಿಯೆ ಇರುತ್ತ. ಅಷ್ಟಕ್ಕ ಸುಮ್ಮನಾಗಲಾರದ ಮೊಸರ ಮಾರೊ ಹಳ್ಳಿ ಹೆಣ್ಣು ಮಗಳು ಒಳ್ಳೆಯದಷ್ಟ ಗೊತ್ತ , ಯಾರಾರ ಏನರ ಅಂದ್ರ ಜಗಳ ಮಾಡ್ತಾರ, ಆದರ ಕೆಟ್ಟದ ಬಯಸಾಂಗಿಲ್ಲ. ನಾವು ಮನ್ಯಾಗ ಕುಂತರ ಜನ ಎಲ್ಲಾ ಏನ್ ತಿನಬೇಕಬೇ ಎವ್ವ , ಬೆಳದಿದ್ನ ಕೆಡಿಸಿ ಏನ ಮಾಡುದೈತಿ ಅಲ್ಲನ ಬೇ? ಏನ ಒಂದೀಟು ತ್ರಾಸ್ ಆದಿತ್ತ ಬಂದ ಹೋಗಾಕ ಅಂದ ಬುಟ್ಟಿ ತೆಲಿ ಮ್ಯಾಲಿ ಹೊತ್ತ ಹೊಂಟ್ಲ. ಅವ್ವ ಹೌದು ನೀ ಕರೆಕ್ಟ್ ಅದಿಯವ, ಕಲ್ತವಕ ಬುದ್ಧಿ ಕಡಿಮೆ ಆಗ ಕತ್ತೈತಿ ಏನ್ ಮಾಡುದವ, ಹುಷಾರ್ ಹೋಗವ ಅಂತ ಹೇಳಿ ಕಳಿಸಿದ್ಲ. ಬದುಕು ಕಠೋರ ನಮ್ಮಂತವರಿಗೆ, ಏನು ಅರಿಯದ ಮುಗ್ಧರಿಗೆ ಅಷ್ಟೇ ಸರಳ. *************

ಬದುಕು ಕಠೋರ Read Post »

You cannot copy content of this page

Scroll to Top