ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ದರ್ಪಣ ನನಗೆ ಸಾಮಾನ್ಯವಾಗಿ ಆತ್ಮಚರಿತ್ರೆ, ವೈಚಾರಿಕ ಲೇಖನ, ಚರ್ಚೆ ಇಂತಹವುಗಳನ್ನು ಓದುವುದೆಂದರೆನೇ ಬಲು ಇಷ್ಟ. ಕೆಲವೂಮ್ಮೆ ಕವಿತೆಗಳನ್ನು ಓದಿದರೂ ಅದನ್ನು ಒಂದೇ ಬಾರಿಗೆ ಓದಲಾರೆ. ಅಂದರೆ ಕವನ ಸಂಕಲನದಲ್ಲಿ ಇರುವ ಎಲ್ಲಾ ಕವಿತೆಗಳನ್ನು ಒಂದೇ ಉಸಿರಿಗೆ ಓದಲಾರೆ. ಇವನ್ನೆಲ್ಲ ಬಿಟ್ಟು ಕತೆಗಳ ವಿಷಯಕ್ಕೆ ಬಂದರೆ ನನಗೆ ಕಾದಂಬರಿಗಳಿಗಿಂತ ಸಣ್ಣ, ಸಣ್ಣ ಕತೆಗಳನ್ನು ಓದುವುದೆಂದರೆ ಬಹಳ ಇಷ್ಟ.ಅದ್ದರಿಂದ ನನ್ನಲ್ಲಿ ಬಹಳಷ್ಟು ಕಥಾಸಂಕಲನಗಳ ಸಂಗ್ರಹವೇ ಇದೆ. ಹಾಗೆ ಕಥಾಸಂಕಲನಗಳು ಇಷ್ಟವಾಗಲು ಕಾರಣ ಒಂದೇ ಓದಿನಲ್ಲಿ ನಾವು ನಮ್ಮನ್ನು ಭಿನ್ನ, ಭಿನ್ನ ಪಾತ್ರದ ಒಳಗೆ ಹೊಕ್ಕು ಹೊರ ಬರಬಹುದು ಎಂಬ ಆಶಯವೇ ಇರಬಹುದೆನೊ?  ಇಂತಹ ಒಂದು ಕಥಾಸಂಕಲನವೇ ಎನ್. ಶೈಲಜಾ ಹಾಸನ್ ಅವರ ” ದರ್ಪಣ” . ಇದರಲ್ಲಿ ಒಟ್ಟು ಹದಿನೆಂಟು ಸಣ್ಣ, ಸಣ್ಣ ಕತೆಗಳಿದ್ದು ಎಲ್ಲವೂ‌ ನಮ್ಮ ಸುತ್ತ ಮುತ್ತ ನಡೆದ ಅಥವಾ ನಡೆಯ ಬಹುದಾದ ಘಟನೆಗಳಂತೆಯೆ ಭಾಸವಾಗುತ್ತದೆ. ಈ ಕಥಾಸಂಕಲನ ಇಷ್ಟವಾಗಲು ಇರುವ‌ ಪ್ರಮುಖ ಕಾರಣ ಬರಹ ಲೋಕದಲ್ಲಿ ಸ್ತ್ರೀಯರು  ಸ್ತ್ರೀ ಶೋಷಣೆಯ ಬಗ್ಗೆಯೆ ಬರೆಯುತ್ತಾರೆ, ಅವರಿಗೆ ಪುರುಷರ ವೇದನೆ , ಅವರ ಶೋಷಣೆ ಕಣ್ಣಿಗೆ ಕಾಣುವುದಿಲ್ಲ ಎಂಬ ಅಪಾವಾದವನ್ನು ಸುಳ್ಳಾಗಿಸುವಂತೆ ಕತೆ ನಿರೂಪಿಸಿದ್ದಾರೆ. ಇವರ ಎಲ್ಲಾ ಕತೆಗಳು ಮಾನವಿಯತೆಯಾ ನೆಲೆಗಟ್ಟಿನಲ್ಲಿಯೆ ಇದೆ. ಇವರ ಕತೆಯಾ ಇನ್ನೊಂದು ವಿಶೇಷವೆಂದರೆ ಪ್ರತಿ ಕತೆಯನ್ನು ಓದುಗರ ತೀರ್ಮಾನಕ್ಕೆ ಬಿಡುತ್ತಾರೆಯೇ ಹೊರತು, ಎಲ್ಲಿಯೂ ತಾವು ತಮ್ಮ ನಿರ್ಧಾರವನ್ನು ಓದುಗರ ಮೇಲೆ ಹೇರುವುದಿಲ್ಲ. ಅಥವಾ ಇದು ಸರಿ, ಇದು ತಪ್ಪು ಎಂದು ಬೆರಳು ಮಾಡಿ ತೋರಿಸುವುದಿಲ್ಲ. ಈಗೊಂದು ಘಟನೆ ನಮ್ಮ ಸುತ್ತಮುತ್ತಲಿನಲ್ಲಿಯೆ ನೆಡೆದಿರಬಹುದೇ ಎಂಬಂತೆ ಬರೆಯುತ್ತಾರೆ. ಹಾಗಂತ ಅದು ವರದಿಯಾ ರೂಪದಲ್ಲಿ ಇರುತ್ತದೆ ಎಂದು ಕೊಂಡರೆ ನಿಮ್ಮ ಗ್ರಹಿಕೆ ತಪ್ಪಾಗುತ್ತದೆ. ಈ ಕತೆಯನ್ನು ಓದುವ ಓದುಗ ,ಓದುವುದರ ಜೊತೆಗೆ ತನ್ನ ಭಾವನೆಗಳ ಹರವಿನಲ್ಲಿಯೇ ಸಾಗುವಂತೆ ಮಾಡುವುದರಿಂದ,ಕಥಾ ಪಾತ್ರಗಳನ್ನು ನಾವು ಸ್ವತಃ ಅನುಭವಿಸಿದಂತೆಯೆ ಇರುತ್ತದೆ. ಹಾಗಂತ ಯಾವುದೇ ಉತ್ಪ್ರೇಕ್ಷೆ, ಆಶ್ಲೀಲತೆಯಾ ಬಳಕೆ ಮಾಡುವುದಿಲ್ಲ. “ತಾಯಿಯ ಕರೆ” ಎಂಬ ಕತೆಯು ಹಣದ ಹಿಂದೆ ಓಡುತ್ತಿರುವ‌ ಇಂದಿನ ಯುವ ಪೀಳಿಗೆಯವರನ್ನು ಎದುರಿಗೆ ಕೂರಿಸಿಕೊಂಡು ಬುದ್ದಿಮಾತು ಹೇಳಿದಂತೆ ಇದ್ದರೆ, ” ಬದುಕ ಪಯಣದಲ್ಲೊಂದು ಆಕಸ್ಮಿಕ” ಕತೆಯು ಇಂದಿನ ದಿನಮಾನದಲ್ಲಿದಲ್ಲಿ ನೈತಿಕ ಅಧಃಪತನಕ್ಕೆ ಒಳಗಾಗುತ್ತಿರುವ ಯುವಕರ ಮನಸ್ಸಿನ ಕೈಗನ್ನಡಿಯಂತೆಯೂ, ಜೊತೆಗೆ ಸ್ವೇಚ್ಛಾಚಾರಕ್ಕೆ ತೆತ್ತಾ ಬೆಲೆಯಂತೆ ನಿರೂಪಿಸಲಾಗಿದೆ. ಆದರೆ ಇಲ್ಲಿ ಲೇಖಕಿ ತಾವು ಒಬ್ಬ ನ್ಯಾಯದೀಶೆಯಾ ಸ್ಥಾನದಲ್ಲಿ ನಿಲ್ಲದೇ, ಕೇವಲ ಕತೆಯಾ ನಿರುಪಕಿಯಾಗಿ ಓದುಗರ ಮನ ಸೆಳೆಯುತ್ತಾರೆ. ಅತ್ಯಾಚಾರಕ್ಕೊಳಗಾದ ಮನುಜ ಎಂಬ ಹೆಣ್ಣುಮಗಳಾ ಬಾಯಲ್ಲಿ ಸಮಾಜದ ಮುಂದೆನೆ‌ ಬದುಕಿ ತೋರಿಸುತ್ತೇನೆ ಎಂದು ಹೇಳಿಸುವ ಮಾತು ನಿಜ ಜೀವನದಲ್ಲಿ ಈ ರೀತಿಯ ಆಕಸ್ಮಿಕ ಘಟನೆಯಿಂದ ವಿಚಲಿತರಾದವರಿಗೆ ಹೇಳುವ ಮಾನಸಿಕ ಸ್ಥೈರ್ಯದ ಮಾತಿನಂತೆಯೂ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಾತಿನಂತೆಯೂ ಇದೇ. ಇದೆ ಕತೆಯಾ ಇನ್ನೊಂದು ರೂಪದಂತಿರುವ ” ನಿಗೂಢ” ಕತೆಯು ಸ್ವೇಚ್ಛಾಚಾರಕ್ಕೆ ತೆತ್ತ ಬೆಲೆಯಂತೆ ವಿವರಿಸಲಾಗಿದೆ.  ಅಸಾಮಾನ್ಯ ತಿರುವನ್ನು ನೀಡುವಾ ” ಪಸರಿಸಿದ ಗಂಧ” ಕತೆಯಲ್ಲಿ ಲೇಖಕಿ ಕೇಳುವ ಪ್ರಶ್ನೆ ಈ ಸಮಾಜ ಗಂಡು ತಪ್ಪು ಮಾಡಿದಾಗ ಹೆಣ್ಣು ಕ್ಷಮಿಸಿ ಅವನೊಂದಿಗೆ ಬಾಳಲಿ ಎಂದು ಹೇಳುತ್ತದೆ, ಅದೇ ಹೆಣ್ಣು ತಪ್ಪು ಮಾಡಿದ್ರೆ ಗಂಡು ಕ್ಷಮಿಸಲಿ ಅಂತ ಏಕೆ ಹೇಳೊಲ್ಲಾ? ಎಡವಿದ ಕಾಲನ್ನು ತುಂಡರಿಸಿ ಬದುಕೊದು ನ್ಯಾಯವೇ? ಎಂದು ಕೇಳುವ ಪ್ರಶ್ನೆ ಎಂತಹ ಪ್ರಜ್ಞಾವಂತಿಕೆಯ ಪ್ರಶ್ನೆಯ ಜೊತೆಗೆ ಸಮಾಜದ ಮಾನೊಭಾವದಲ್ಲಿ ಆಗಬೇಕಾದ ಬದಲಾವಣೆಯಾ ಧಿಕ್ಸೂಚಿಯಂತೆ ಇದೇ. ” ಅವನು ಅವಳುಮತ್ತು ಬದುಕು” ಎಂಬ ಕತೆಯಲ್ಲಿ ಪ್ರೇಮಿಗಳಾಗಿದ್ದವರು ಮದುವೆಯಾದ ಮೇಲೆ ಹೇಗೆ ಬದಲಾಗುತ್ತಾರೆ ಎಂಬುದರ ಬಹಳ ಸೂಕ್ಷ್ಮವಾದ ವಿಶ್ಲೇಷಣೆಯಂತೆ ಇದೆ. ” ದರ್ಪಣ” ಎಂಬ ಕತೆಯು ಇಂದು ನಮಗೆ ಹೆಚ್ಚಾಗಿ ಕಾಣಸಿಗುವ ಅತ್ತೆ ಸೊಸೆ ಕಲಹಕ್ಕೆ ಬಹಳ ಸುಲಭವಾಗಿ ಪರಿಹಾರವನ್ನು ಸೂಚಿಸಿದ್ದಾರೆ. ” ತಾಯಿಯ ಕರೆ” ಕತೆಯ ಮುಂದುವರಿದ ಭಾಗದಂತಿರುವಾ ” ನಿರಾಳ” ಎಂಬ ಕತೆಯು ಆಧುನಿಕತೆ ಎಂಬ ಹೆಸರಿನಲ್ಲಿ ಹೆತ್ತಾ ಮಕ್ಕಳನ್ನೆ ಸಣ್ಣ ವಯಸ್ಸಿನಲ್ಲೇ ದೂರ ಮಾಡಿದರೆ ಅದರ ಪರಿಣಾಮವೇ ನಾವು ನಮ್ಮ ವೃದ್ಧಾಪ್ಯದಲ್ಲಿ ವೃದ್ಧಾಶ್ರಮ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂಬ ಆಶಯವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಾರೆ. ಇದನ್ನು ಓದಿ ಒಂದಷ್ಟು ಜನ ಎಚ್ಚೆತ್ತು ಕೊಂಡರೆ ಅಷ್ಟು ವೃದ್ಧಾಶ್ರಮದಲ್ಲಿ ಇರುವವರ ಸಂಖ್ಯೆ ಕಡಿಮೆ ಆಗಬಹುದು. ” ಹೀಗೊಬ್ಬ ತಾಯಿ” ಎಂಬ ಕತೆಯಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುವ ಮಗನಾ ಆರೈಕೆಗೆ ಒಬ್ಬ ಒಂಟಿ ತಾಯಿ ಪಡುವ ಕಷ್ಟಗಳು ಮತ್ತು ಅಂತಹ ಮಗನನ್ನು ತಾನೆ ತನ್ನ ಕೈಯಾರೆ ಕೊಲ್ಲುವ ಪರಿಸ್ಥಿತಿಗೆ ಸಿಲುಕುವ ವಿಧಿಯಾಟದ ಚಿತ್ರಣ ಎಂತಹ ಕಲ್ಲು ಹೃದಯದವರ ಮನ ಕಲಕುವಂತೆ ಇದೇ. ಇನ್ನು ” ಚೈತ್ರ ಪಲ್ಲವಿ ಚಿಗುರಿತು” ಕತೆಯಲ್ಲಿ ಲೇಖಕಿ ‘ ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಗಾದೆ ಮಾತು ಸುಳ್ಳು ಎಂಬುದರ ಜೊತೆ ಜೊತೆಗೆ ಸಮಾಜದ ಗೊಡ್ಡು ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಟ್ಟು ಜೀವನಲ್ಲಿ ನವ ಚೈತ್ರ ಪಲ್ಲವಿ ಚಿಗುರಿಸಿಕ್ಕೊಳ್ಳಲು ಬೇಕಾದ ನೈತಿಕ ಬೆಂಬಲ ಮತ್ತು ಅದಕ್ಕಾಗಿ ಮಾಡುವ ಸಹಾಯ ಎರಡೂ ಅನುಕರಣಿಯಾ ಎಂಬುದನ್ನು ಒಪ್ಪುವಂತಹ ಮಾತಾಗಿದೆ.  ಇವಿಷ್ಟೇ ಅಲ್ಲದೇ ಕಥಾ ಸಂಕಲನದಲ್ಲಿ ಇರುವ ಎಲ್ಲಾ ಕತೆಗಳು ಮನೋಜ್ಞವಾಗಿರುವುದಲ್ಲದೇ ಮಾನವಿಯಾ ಮೌಲ್ಯಗಳನ್ನು ಯಾವುದೇ ಹೇರಿಕೆಯಿಲ್ಲದಂತೆ ಓದುಗರರಿಗೆ ಮಾಡಿಕೊಡುತ್ತದೆ ” ದರ್ಪಣ” ಎಂಬ ಪದದ ಅರ್ಥವೇ ಕನ್ನಡಿ . ಅಂತೆಯೇ ಈ ಕಥಾಸಂಕಲನವೂ ನಮ್ಮನಿಮ್ಮಲ್ಲರ ಜೀವನವನ್ನು ಕನ್ನಡಿಯಲ್ಲಿ ಮತ್ತೊಮ್ಮೆ ನೋಡಿಕೊಂಡಂತೆ ಭಾಸವಾಗುತ್ತದೆ. ಇದನ್ನು ಓದುವ ಖುಷಿ ನಿಮ್ಮದಾಗಲಿ.. ************ ಸಂಗೀತ ಶ್ರೀಕಾಂತ್.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ ಬಣ್ಣದ ಜೋಳಿಗೆ ಸ್ನೇಹಾ ಪಬ್ಲಿಕೇಶನ್ಸ್ ಗಾಯಿತ್ರಿ ರಾಜ್ “”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ ಆಗಬಲ್ಲಳು, ಯಾಕೆಂದರೆ ಬರಹಗಾರನಿಗೆ ಮೂಲತಃ ಇರಬೇಕಾದದ್ದು ತಾನು ಬರೆಯುವ ವಿಷಯದ ಅಧ್ಯಯನ ಮತ್ತು ಅರಿವು, ಮತ್ತು ಎಲ್ಲಾ ಪ್ರಕಾರಗಳಲ್ಲಿ ಬರೆಯೋದು, ಈಗಾಗಲೇ ಇವಳ ಕಥೆ, ಕವನ, ಪ್ರವಾಸಕಥನಗಳು ಸುಧಾ ತರಂಗ, ಕರ್ಮವೀರ, ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಸಂಪದ ಸಾಲು ಪತ್ರಿಕೆಯ ವರ್ಷಗಳ ಅಂಕಣಕಾರ್ತಿ ಕೂಡಾ… ಅಭಿನಂದನೆಗಳು, ಶುಭಾಶಯಗಳು ಗೆಳತೀ…ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿರೋ ಗಾಯತ್ರಿ ನಂಗೆ ಫೇಸ್ಬುಕ್ ಪರಿಚಯ, ಓದಿನ ಬರಹದ ಸಮಾನ ಆಸಕ್ತಿ ನಮ್ಮನ್ನು ಹತ್ತಿರ ತಂದಿದ್ದಾದರೂ ಬಹಳಷ್ಟು ಆಸಕ್ತಿಯ ಸಾಮ್ಯತೆಗಳು ಗೆಳೆತನವನ್ನು ಗಾಢವಾಗಿ ಬೆಸೆದಿದೆ, ಸಂಗೀತ, ಸಾಹಿತ್ಯ, ಕೆಲವು ಕಲೆ ಹವ್ಯಾಸಗಳ ಆಗರ ಆಗಿರೋ ಗಾಯತ್ರಿ ಸದಾ ಕ್ರಿಯೇಟಿವ್, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಇರೋ ಇವಳಿಗೆ ತನ್ನ ಬಿಡುವಿಲ್ಲದ ಕೆಲಸಗಳಲ್ಲೂ ಬರಹವನ್ನು ಆಪ್ತವಾಗಿಸಿಕೊಂಡವಳು, ಅಕ್ಷರವನ್ನು ಪದಗಳಾಗಿಸಿ, ಅದನ್ನು ತನ್ನ ಹಿಡಿತದಲ್ಲಿ ಇಟ್ಟು ಓದುಗರ ಮನಸ್ಥಿತಿಗನುಗುಣವಾಗಿ ಬರೆಯುವ ಚತುರತೆ ಇವಳಿಗೆ ತಾನಾಗಿ ಒಲಿದು ಬಂದಿದೆ,ಆ ಕರಾಳ ರಾತ್ರಿ… ಪ್ರವಾಹ ಮತ್ತು ಪ್ರಕೃತಿ ವಿಕೋಪದ ಹಲವು ಮುಖಗಳನ್ನು ಕಂಡಿದ್ದೀವಿ ಹಾಗೂ ಕಾಣುತ್ತಲೇ ಇದ್ದೀವಿ, ಇದರ ಜೊತೆ, ಮಾನವೀಯ ಭಾವನಾತ್ಮಕ ಸಂಬಂಧಗಳ ತಳುಕು, ಅಜ್ಜಿ ಮೊಮ್ಮಗನ, ಮತ್ತು ತನ್ನ ಮೇಲೇ ಅವಲಂಬಿತವಾಗಿರುವ ಅಸಹಾಯಕ ವೃದ್ಧ ಜೀವವನ್ನು ರಕ್ಷಿಸಲು ರಾಜೇಶ್ ಪಡುವ ಪಾಡು, ಜೀವಕ್ಕೇ ಹತ್ತಿರವಾದ, ಪ್ರೇಮವನ್ನು ಮೀರಿ ಅಜ್ಜಿಯನ್ನು ಉಳಿಸಿಕೊಳ್ಳಲು ಹೋರಾಡಿಯೂ , ಪ್ರವಾಹದ ಸಂಕಷ್ಟದಲ್ಲಿ ಬಹುಪಾಲು ಜೊತೆಗಿದ್ದು ಇನ್ನೇನೂ ಗುರಿ ಸೇರಿದ್ದೀವಿ ಅನ್ನೋಲ್ಲಿ ಎದುರಾದ ನಿರಾಸೆ … ಇಲ್ಲಿ ಎರಡು ಸಂಭವಗಳನ್ನು ನಮ್ಮ ಮುಂದಿಟ್ಟು ಕಥೆ ಮುಗಿಸುವ ಲೇಖಕಿಯ ಜಾಣ್ಮೆ, ನಿರೂಪಣೆ, ಪ್ರಬುದ್ಧತೆ ಇಷ್ಟವಾಗತ್ತೆ, ಮೊಮ್ಮಗನ ಅಂತಃಶಕ್ತಿಯಾಗಿ ಜೊತೆಗಿರುವ ಅಜ್ಜಿಯೇ ಅಂತಾ ಪ್ರವಾಹವನ್ನು ದಾಟಿಸುವ ಶಕ್ತಿ ಎಂದರೆ ತಪ್ಪಿಲ್ಲ ….ಅನೈತಿಕನಾ??ಅನೈತಿಕ ಈ ಪದಕ್ಕೇ ಯಾವ ಅರ್ಥ ಕೊಡಬೇಕು ಅನ್ನೋದು ಇವತ್ತಿಗೂ ಒಗಟೇ… ನಿಜ ಯಾವುದು ಅನೈತಿಕ? ಪುರಾಣಗಳ ಪುಟ ತುಂಬಾ ಧರ್ಮಸೂಕ್ಷ್ಮಗಳಡಿಯಲ್ಲಿ ಬರುವ ವಿಷಯ ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಚರ್ಚೆಗೆ, ನಿಂದನೆಗೆ ಗುರಿಯಾಗೋದು ವಿಡಂಬನೆಯಾ…. ವಿಪರ್ಯಾಸವಾ?? ಆದರೇ ನಮ್ಮಂತವರು ಸಮಾಜಕ್ಕೆ ಕುಹಕಕ್ಕೆ ಹೆದರಿ ಬರೆಯಲಾರದ ವಿಷಯವನ್ನು ತೆಗೆದುಕೊಂಡು ಲೀಲಾಜಾಲವಾಗಿ ಸುಂದರವಾಗಿ ನಿರೂಪಿಸಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೇ….ಬಡತನದ ಬಣ್ಣ ಕಡುಕೆಂಪು…..ಇನ್ನೊಬ್ಬರ ನೋವು, ಸಂಕಟ, ಹಸಿವು ನಿರಾಸೆಯನ್ನು ನಾವು ಅನುಭವಿಸಿದಂತೆ, ನಮ್ಮದೇ ಅನುಭವದಂತೆ ಓದುವವರಿಗೂ ತಮ್ಮದೇ ಅನುಭವ ಅನ್ನೋ ಹಾಗೇ ಅಕ್ಷರಗಳಲ್ಲಿ ನಿರೂಪಿಸುವುದರಲ್ಲಿ ಬರಹಗಾರರ ಚಾತುರ್ಯ ಜಾಣ್ಮೆ, ಓದುಗರ ಮನಗೆಲ್ಲುವ ಆಕರ್ಷಣೆ ಅಡಗಿರತ್ತೆ, ಈ ನಿಟ್ಟಿನಲ್ಲಿ ಲೇಖಕಿ ಈ ಕಥೆಯಲ್ಲಿ ಓದುವ ನಮ್ಮನ್ನೇ ಪಾತ್ರವಾಗಿಸಿ ಮನ ಮಿಡಿಯುವಂತೆ ಚಿತ್ರಿಸಿದ್ದಾರೆ….. ಹಸಿವಿನ ನೋವು ಸಂಕಟ ಮಾತ್ರವಲ್ಲ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ,” ಮಾಮ್ ” ಅಮಾನವಿ ಕುತಂತ್ರ,ಆಧುನಿಕತೆ ಹೆಚ್ಚಿದಷ್ಟೂ ಮನುಷ್ಯನ ಲಾಲಸೆ ಯೂ ಹೆಚ್ಚುತ್ತಲೇ ಹೋಗತ್ತಾ , ಜೊತೆಗೆ ಎಷ್ಟು ಸೌಲಭ್ಯಗಳು ಸಿಕ್ಕರೂ ಇನ್ನೂ ಇನ್ನೂ ಬೇಕೆನ್ನುವ ಹಪಾಹಪಿ ಜಾಸ್ತಿಯಾಗತ್ತಾ, ಸೋಮಾರಿತನ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚತ್ತಾ…. ಇದನ್ನು ಓದುತ್ತಿದ್ದರೆ ಭಯ ಅನ್ನಿಸತ್ತೆ… ಕಣ್ಮುಂದೆ ನೆಡೆದಂತೆ ಅನುಭವ ನೀಡುವ ಬರಹದ ಲೇಖಕಿಯ, ತಿಳುವಳಿಕೆ ಮತ್ತು ಅದನ್ನು ಓದುಗರ ಮನಕ್ಕಿಳಿಯುವಂತೆ ಬರಹಕ್ಕಿಳಿಸುವ ಜಾಣ್ಮೆ ಮೆಚ್ಚುವಂತಹದು,ನಿರ್ಧಾರ..ನಿಜ ದೈನಂದಿನ ಬದುಕಲ್ಲಿ ತುಂಬಾ ಗಹನ ಆಗಿದ್ದೂ ನಮ್ಮ ನಿರಾಸಕ್ತಿ ಬೇಜವಾಬ್ದಾರಿ ಇಂದಲೋ, ಮುಜುಗರ ಸೌಜನ್ಯ, ಅತ್ವಾ ಕರ್ತವ್ಯ ಜವಾಬ್ದಾರಿ ಎಂದೋ ಕೆಲವು ದುಡುಕಿನ ನಿರ್ಧಾರಗಳು ಬಾಳಪೂರ್ಣ ನಮ್ಮನ್ನು ಕಾಡಿ ಕಂಗೆಡಿಸುತ್ತವೆ, ಮನಸ್ಸು ಹೃದಯ ಎಂದು ಬದುಕಿಡೀ ನರಳುವ ಬದಲು ಬುದ್ದಿಗೆ ಸಾಣೆ ಹಿಡಿದು ಯೋಚಿಸಿ ನಿರ್ಧರಿಸಿದರೆ, ಬಹಳಷ್ಟು ಉತ್ತಮ ಜೀವನ ನೆಮ್ಮದಿಗೆ ಕಾರಣವಾಗುತ್ತದೆ, ಲೇಖಕಿಯ ಧನಾತ್ಮಕ ಯೋಚನೆ ಹಾಗೂ ಅದನ್ನು ಸಮಾಜಕ್ಕೂ ಧನಾತ್ಮಕತೆಯನ್ನು ಹರಡುವ ಉದ್ದೇಶ ಎರಡೂ ಸಫಲವಾಗಿದೆ,ಸುಂಟರಗಾಳಿ?ಏನೋ ಆಗಿದೆ ಅನ್ನೋ ಭಯ… ಅದು ತರುವ ಅಸಹನೆ…. ನಮ್ಮಲ್ಲಿನ ಕೀಳರಿಮೆ ತಪ್ಪಿತಸ್ಥ ಮನೋಭಾವನೆ ಎಷ್ಟು ಬೇಗ ನಮ್ಮನ್ನು ಪಾತಾಳಕ್ಕೆ ತಳ್ಳಬಹುದು ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ, ಅನುಮಾನ ಮತ್ತು ಅಹಂಕಾರ ಸಂಬಂಧಗಳ ಸಮಾಧಿಗೆ ತಳಹದಿ, ನಿಜ ಇದನ್ನು ಸರಳವಾಗಿ ಸುಲಭವಾಗಿ ಮನಸ್ಸಿಗಿಳಿವಂತೆ ಬಿಂಬಿಸಿದ ಲೇಖಕಿಗೆ ವಂದನೆಗಳು,ರಾಜಿ..?ಯಾರಾದರೂ ಯೋಚಿಸಲು ಮಾತನಾಡಲು ಸಂಕೋಚ ಮುಜುಗರ ಪಡುವ ಸಲಿಂಗ ಸಾಂಗತ್ಯದ ವಿಷಯವನ್ನೆತ್ತಿಕೊಂಡು, ಸುಲಲಿತವಾಗಿ ಅದನ್ನು ಬರಹಕ್ಕಿಳಿಸಿ, ಓದುಗರಿಗೂ ಎಲ್ಲೂ ಮುಜುಗರ ಆಗದಂತೆ, ಬಾಲ್ಯದಿಂದಲೂ ಹೆಣ್ಮಕ್ಕಳ ಮೇಲಾಗುವ ದೌರ್ಜನ್ಯದಿಂದ ದಾಂಪತ್ಯ ಸಾಂಗತ್ಯದ ಬಗ್ಗೆ ಹೆಣ್ಮಕ್ಕಳ ಮೇಲಾಗುವ ಪರಿಣಾಮ ಅದ್ಭುತವಾಗಿ ಬಿಂಬಿತವಾದ ಕಥೆ ಲೇಖಕಿಗೆ ಹ್ಯಾಟ್ಸಾಪ್ ಹೇಳದೇ ಬೇರೆ ಮಾತಿಲ್ಲ. “”ಬಾಳಲ್ಲಿ ನಿನ್ನಿಂದ ಸೂರ್ಯೋದಯ”, ದಲ್ಲಿ ಕರಾಳತೆ ಕವಿದ ಬದುಕೊಂದು ಸಾಮಾಜಿಕ ಸಂಪ್ರದಾಯಗಳ ಸಂಕೋಲೆ ಮೀರಿ ಬದುಕನ್ನು ಧನಾತ್ಮಕವಾಗಿ ಯೋಚಿಸುವ ನಿಟ್ಟಿನಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಿದರೇ….“ಪಿಂಕ್ ಶರ್ಟ್ ಮತ್ತು ಖಾಕಿ?” ನಾವು ಕಾಣದ ಸಮಾಜದ ವಿಭಿನ್ನ ವ್ಯಕ್ತಿ ಮತ್ತು ವ್ಯಕ್ತಿತ್ವ, ತನ್ನದಲ್ಲದ ತಪ್ಪಿಗೆ ತೃತೀಯ ಲಿಂಗಿ ಅನ್ನಿಸಿಕೊಂಡು ಬದುಕಿದ ಮನಸ್ಸಿನ ನೋವು ಕಳವಳ, ಪಾಡು ಪರದಾಟಗಳನ್ನ ಹೇಳುತ್ತಾ… ವ್ಯವಸ್ಥೆಯ ದೌರ್ಜನ್ಯ ಮತ್ತು ಕಾಯಬೇಕಾದವರೇ ಕೊಲ್ಲುವ ಮನಸ್ಥಿತಿಯ ಕ್ರೌರ್ಯ ಪರಿಸ್ಥಿತಿಯ ದುರ್ಬಳಕೆಯನ್ನು ಮಾಡಿಕೊಳ್ಳುವ ಅಧಿಕಾರಿ ವರ್ಗ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ ಲೇಖಕಿ, ಅಕ್ಷರಗಳನ್ನು ಪದಗಳನ್ನು ಸೇರಿಸಿ ಹನೆದ ಕಥೆ ಸಚಿತ್ರವಾಗಿ ಕಣ್ಮುಂದೆ ಬರತ್ತೆ,…” ಕಲ್ಲಾದಳೆ ಅಹಲ್ಯೆ…..?? ” ಈ ಕಥೆ ಓದುತ್ತಾ ಓದುತ್ತಾ ನಾನೇ ಅಹಲ್ಯೆ ಆಗ್ಬಿಟ್ಟಿದ್ದೆ, ಅಹಲ್ಯೆಯ ಮನದಾಳದ ಭಾವ ನೋವು ಆಕ್ರಂದನ ಆಕ್ರೋಶ ಹತಾಶೆ ಅಸಹಾಯಕತೆ, ಒಂದು ತಣ್ಣನೆ ಸೇಡು ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟ ಪರಿ ಅನನ್ಯ, ಪುರಾಣಗಳ ಪುಟಗಳನ್ನು ಮೂಲಕ್ಕೇ ಚ್ಯುತಿ ತರದೇ ಬಿಂಬಿಸೋದೇ ಒಂದು ದೊಡ್ಡ ಸಾಹಸ, ಈ ಕಥೆ ಓದಿದರೆ ಬಹುಶಃ ಲೇಖಕಿ ಪುರಾಣದ ಯಾವುದೇ ಒಂದು ಪಾತ್ರವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಅಳವಡಿಸಿ ಅದ್ಬುತ ಕಾದಂಬರಿ ಮಾಡಲು ಶಕ್ತಳು ಅನ್ನಿಸಿತು,“”ಅನಿರೀಕ್ಷಿತ ತಿರುವು “” ನಿಜಾ ಬಹಳ ಸಲ ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ತೀರಾ ಎಲ್ಲೋ ಮುಂಚೆನೇ ನೆಡೆದಂತೆ ಕನಸಲ್ಲಿ ಕಂಡಂತೆ ಈ ಮೊದಲೇ ಅನುಭವಕ್ಕೆ ಬಂದಂತೆ ಅನ್ನಿಸಿ ಗಾಬರಿ ಹುಟ್ಟಿಸುವುದು, ಇದು ಬಹಳ ಜನಕ್ಕೆ ಏನೆಂದು ಅರಿವಾಗೋದು ಇಲ್ಲಾ, ನಾವೇ ಇದೇನೂ ಸಿಕ್ಸ್ತ್ ಸೆನ್ಸಾ ಅನ್ನಿಸಿ ಕಳವಳ ಆಗೋದುಂಟು, ಅಂತಹ ಒಂದು ಎಳೆ ಹಿಡಿದು ಕಥೆ ಹೆಣೆದು ಅಲ್ಲಿಯೂ ಅನೂಹ್ಯ ತಿರುವಿಟ್ಟಿದ್ದಾರೆ ಲೇಖಕಿ, ಅನುಬಂಧಗಳ ಪರಸ್ಪರ ಮಿಡಿಯುವಿಕೆಯ ಭಾವಗಳ ತಾಕಲಾಟ ನಿರೂಪಣೆ ಚಂದ ಚಂದ,“”ಹೀಗೊಂದು ಅಂತ್ಯ “” ತನ್ನ ಬದುಕಿನಲ್ಲಿ ನೆಡೆಯೋ ಅಪಘಾತ ಲೇಖಕನ ಮುಂದಿಟ್ಟು ಅವನು ಕೊಡೋ ಅಂತ್ಯವನ್ನು ತಾನು ಅಪಾದಿಸಿಕೊಳ್ಳುವ ಅದನ್ನರಿಯದ ಲೇಖಕ ಅಂತ್ಯವನ್ನು ಸೂಚಿಸಿ ತೊಳಲಾಡುವ ಉದ್ವೇಗ, ಪರಿತಾಪ ಚೆನ್ನಾಗಿ ವ್ಯಕ್ತವಾಗಿದೆ, ಲೇಖಕರಿಗೆ ಇರಬೇಕಾದ ಸಾಮಾಜಿಕ ಪ್ರಜ್ಞೆ ಸೂಚ್ಯವಾಗೀ ಮೂಡಿ ಬಂದಿದೆ,“ವಿಷಸರ್ಪ” ಕೆಲವು ಬಾರಿ ನಾವು ಮನುಷ್ಯರನ್ನು ಮೊದಲು ನೋಡಿದಾಗಲೇ ಏನೋ ಒಂದು ಭಾವ ಉದ್ಭವ ಆಗ್ಬಿಡತ್ತೆ, ಅದರಲ್ಲಿ ಅವರ ಹೊರ ರೂಪ ನಮ್ಮಲ್ಲಿ ಸಲ್ಲದ ಋಣಾತ್ಮಕ ಅಂಶಗಳೇ ಎದ್ದು ಕಾಣಿಸಿದಂತಾಗೀ ವಿನಾಕಾರಣ ದ್ವೇಷ ಅಸಹನೆ ಬೆಳೆಯುತ್ತ, ಕೊನೆಗೊಂದು ಸಲ ನಮ್ಮ ತಪ್ಪು ಅರಿವಾಗೋದ್ರೊಳಗೆ ಏನಾದರೂ ಘಟನೆ ಸಂಭವಿಸಿರತ್ತೆ, ಅದಕ್ಕೇ ಹಿರಿಯರು ಹೇಳೋದೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾ, ಹಾವೂ ಮುಂಗುಸಿ ಕಥೆ ನೆನಪಾಯಿತು,“” ಅವ್ಯಕ್ತ ” ನಮ್ಮೊಳಗಿನ ಮಾನಸಿಕ ತಾಕಲಾಟಗಳು ಸಂಸಾರದ ಇತರ ಸದಸ್ಯರುಗಳ ಮೇಲಾಗುವ ಸಾಮಾಜಿಕ ಸಾಂಸಾರಿಕ ಮಾನಸಿಕ ಪರಿಣಾಮಗಳನ್ನು ಹೇಳುವ ಕಥೆ, ಇಂತಹ ವಿಷಮ ಸನ್ನಿವೇಶದಲ್ಲಿ ಆತುರ ಪಡದೇ ಸಾವಧಾನವಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಬೇಕಾದ ಅವಶ್ಯಕತೆ ಎತ್ತಿ ಹಿಡಿಯತ್ತೆ,“”ತಪ್ಪಿದ ತಾಳ ” ಅತಿಯಾದಲ್ಲಿ ಅಮೃತವೂ ವಿಷವೇ, ಕಾಮವೂ ಅದಕ್ಕೇ ಹೊರತಲ್ಲ, ಮನೋ ನಿಗ್ರಹ, ಇಂದ್ರಿಯ ನಿಗ್ರಹ ಸ್ವಸ್ಥ ಬದುಕಿಗೇ, ಸಂಸಾರ ಸಮರಸಕ್ಕೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ, ಯಾವುದು ಎಲ್ಲೇ ದಾಟಿದರೂ, ಯಾರೇ ಮಿತಿ ಮೀರಿದರೂ, ಪರಿಣಾಮ ಇಡೀ ವ್ಯವಸ್ಥೆಯ ಮೇಲಾಗುವುದು,ಎಲ್ಲಾ ಹದಿನೈದು ಕಥೆಗಳು ವಿಭಿನ್ನ ಕೋನಗಳಲ್ಲಿ ಭಿನ್ನ ವಸ್ತುಗಳಲ್ಲಿ ಬರೆದ ಲೇಖಕಿ ಮೊದಲ ಹೆಜ್ಜೆಯಲ್ಲೇ ತಾನೇನೂ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೊಸ ಲೇಖಕಿ ಎಂದೋ ತಿಳಿಯದೆಯೋ, ಇಲ್ಲದ ಪೂರ್ವಗ್ರಹಕ್ಕೆ ಒಳಗಾಗಿ ಓದದಿದ್ದರೆ ನಷ್ಟ ಓದುಗರದೆ, ಸಾಹಿತ್ಯಾಭಿಮಾನಿಗಳು ಒಮ್ಮೆ ಓದಿ, ಹೊಸ ಲೇಖಕರನ್ನು ಪ್ರೋತ್ಸಾಹಿಸಿ ಹಾರೈಸಿ, ಸ್ನೇಹ ಬುಕ್ ಹೌಸ್, ಫೀನಿಕ್ಸ್ ಬುಕ್ ಹೌಸ್ ಅಲ್ಲಿ ಮತ್ತು ಲೇಖಕರ ಬಳಿಯೂ “ಬಣ್ಣದ ಜೋಳಿಗೆ ” ಲಭ್ಯವಿದೆ, ********* ಪದ್ಮಜಾ ಜೋಯ್ಸ್ ತೀರ್ಥಹಳ್ಳಿ ,

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ದೃಷ್ಟಾಂತದ ಮೂಲಕ ನೀತಿಯ ಬೋಧನೆ. ಸೋಮೇಶ್ವರ ಶತಕ ಕೃತಿ : ಸೋಮೇಶ್ವರ ಶತಕಪುಲಿಗೆರೆ ಸೋಮನಾಥ.ಕನ್ನಡ ಸಾಹಿತ್ಯ ಪರಿಷತ್ತು.ಚಾಮರಾಜಪೇಟೆ.ಬೆಂ.ಮರು ಮುದ್ರಣ:೨೦೨೦.ಬೆಲೆ :೬೦. ಪುಸ್ತಕ ಪರಿಚಯ: ಕೃತಿ: *ಸೋಮೇಶ್ವರ ಶತಕಪುಲಿಗೆರೆಯಸೋಮನಾಥ ನಾವೆಲ್ಲಾ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪಠ್ಯಪುಸ್ತಕದಲ್ಲಿ ‘ ಹರಹರಾ ಶ್ರೀಚೆನ್ನ ಸೋಮೇಶ್ವರ ‘ ಎಂದು ಕೊನೆಗೆ,ಮತ್ತೆ ಮತ್ತೆ ರಾಗವಾಗಿ ಹಾಡುವ ಪದ್ಯಗಳನ್ನು ಓದಿಯೇ ಇದ್ದೇವೆ.ಈಗಲೂ ಒಂದರಿಂದ ಹನ್ನೆರಡನೆ ತರಗತಿಯ ವರೆಗಿನ ಕನ್ನಡ ಪಠ್ಯದಲ್ಲಿ, ಎರಡು ಮೂರು ಪಠ್ಯಗಳಲ್ಲಾದರೂ ಈ ಬಗೆಯ ಪದ್ಯಗಳಿವೆ.ಇವು ಪುಲಿಗೆರೆ ಸೋಮೇಶ್ವರನ ಶತಕದಿಂದ ಆರಸಿ ಇಡುತ್ತಿದ್ದ ಪದ್ಯಗಳು.ಬಿಡಿ ಬಿಡಿಯಾಗಿರುವ ಈ ಪದ್ಯಗಳು ನೀತಿಬೋಧಕವಾದವು. ದೃಷ್ಟಾಂತಗಳ ಮೂಲಕ ಸರಿ ತಪ್ಪುಗಳನ್ನು,ಸಾಮಾಜಿಕ ನಡವಳಿಕೆಯನ್ನು ತಿಳಿಸುವ ಅಲಿಖಿತವಾದ ಜನಮಾನಸದ ಶಾಸನಗಳಂತಿರುವ ಪದ್ಯಗಳು ಇವು. ಹಾಗೆ ನೋಡಿದರೆ ನಮ್ಮ ಹಲವು ಜನಪದ ತ್ರಿಪದಿಗಳು,ಗಾದೆಗಳೂ,ಶರಣರ ನುಡಿಗಳು,ಸರ್ವಜ್ಞನ ವಚನಗಳು,ಕೀರ್ತನೆಕಾರರ ನುಡಿಗಳು..ಇವೆಲ್ಲಾ ಬಹುಪಾಲು ಸಾಮಾಜಿಕ ಧಾರ್ಮಿಕ ನಡಾವಳಿಗಳನ್ನು ಕುರಿತು ಹೇಳುತ್ತಲೇ,ಮಾರ್ಗದರ್ಶಿಯೂ ಚಿಂತನೆಗೆ ಹಚ್ಚುವವೂ ಆಗಿವೆ. “ಸೋಮೇಶ್ವರ ಶತಕ ” ರಚನೆಕಾರ ಪುಲಿಗೆರೆ ಸೋಮೇಶ್ವರ ಅಥವಾ ಪಾಲ್ಕುರಿಕೆ ಸೋಮೇಶ್ವರನೇ ಎಂಬ ಗೊಂದಲವಿದೆ.ಹನ್ನೆರಡನೆ‌ ಶತಮಾನದ ಅಂತ್ಯದಲ್ಲಿದ್ದ ಪಾಲ್ಕುರಿಕೆ ಸೋಮನಾಥನು ಸಂಸ್ಕೃತ, ತೆಲುಗು,ಕನ್ನಡ ಮೂರು ಭಾಷೆಗಳಲ್ಲೂ ಪಾಂಡಿತ್ಯ ಪಡೆದವನಾಗಿದ್ದ.ಆದರೆ,ಇವನು ಗೋದಾವರಿ ಪ್ರಾಂತ್ಯದಲ್ಲಿದ್ದನೆಂದು,ಇವನಿಂದ‌ ಇದು ರಚಿತವಾಗಿಲ್ಲವೆಂದು ಕವಿಚರಿತೆಕಾರರು ಹೇಳಿದ್ದಾರೆ.ಮತ್ತೊಬ್ಬರು, ಪುಲಿಗೆರೆ ಸೋಮನಾಥ. ಸುಮಾರು ಹದಿನಾರನೇ ಶತಮಾನ.ಧಾರವಾಡದ ಜಿಲ್ಲೆ,ವೀರಶೈವ ಕವಿಯಾಗಿದ್ದವನು.ಕೃತಿಯಲ್ಲಿ‌ಸೋಮ‌ ಎಂದಷ್ಟೇ ಕವಿ ಹೆಸರಿದೆ.ಈ ಧಾರವಾಡದ ಕವಿ ಪುಲಿಗೆರೆ ಸೋಮನಾಥನೇ‌ ಶತಕದ ಕವಿಯೆಂದು ವಿದ್ವಾಂಸರು ಊಹಿಸಿದ್ದಾರೆ. ಶತಕವೆಂದರೆ ನೂರು.ಆರಂಭದ ಸ್ತುತಿ ಮತ್ತು ಅಂತ್ಯದ ಶತಕದ ಉಪಯೋಗ ತಿಳಿಸುವ ಪದ್ಯಗಳನ್ನು ಸೇರಿಸಿ,ಒಟ್ಟು ನೂರ ಮೂರು ಪದ್ಯಗಳು ಇದರಲ್ಲಿವೆ.ಮೊದಲ ಮತ್ತು ಕೊನೆಯ ಪದ್ಯಗಳು ಸ್ರಗ್ಧರಾ ವೃತ್ತದಿಂದ ಕೂಡಿದ್ದು,ಉಳಿದವು ಮತ್ತೇಭವಿಕ್ರೀಡಿತವೆಂಬ ವೃತ್ತ ಪದ್ಯಗಳಲ್ಲಿ ರಚನೆಯಾಗಿವೆ. ” ಸೋಮೇಶ್ವರ ಶತಕ” ಕೃತಿಯ ಸಂಪಾದನೆ ಬಹಳ ಅರ್ಥಪೂರ್ಣವಾಗಿದೆ.ಪದ್ಯಗಳು, ಅವುಗಳಿಗೆ ಭಾವಾರ್ಥ,ಟಿಪ್ಪಣಿ,ಜೊತೆಗೆ ಆ ಪದ್ಯಗಳಲ್ಲಿ ಉಲ್ಲೇಖಿಸಿರುವ ಕಥಾ ಎಳೆಗಳು ತಿಳಿಯದವರಿಗೆ ಪೂರ್ಣ ವಾಗಿ ತಿಳಿಯಲಿ ಎಂಬ ಆಶಯದೊಂದಿಗೆ ನೀಡಿರುವ ಮುವತ್ತು ಮೂಲಕಥೆಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.ಹಾಗಾಗಿ,ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ, ಓದುಗರೆಲ್ಲರಿಗೂ ಯಾವುದೇ ಗೊಂದಲವಿಲ್ಲದೆ ಸರಳವಾಗಿ ಗ್ರಹಿಸಲು ಉಪಯುಕ್ತವಾಗಿ ರೂಪಿಸಿಕೊಡಲಾಗಿದೆ. ಸೋಮೇಶ್ವರ ಶತಕದ ಪದ್ಯಗಳು ಎಷ್ಟು ಜನಪ್ರಿಯವಾದವು ಎಂದರೆ; ಎಳೆಗರು ಎತ್ತಾಗದೆ,ಬಡವಂ ಬಲ್ಲಿದನಾಗನೆ,ಹಲವು ಹಳ್ಳ ಸೇರಿ ಸಮುದ್ರವಾಗದೆ,ಮಡಿಯೆ ನಿರ್ಮಲ‌ ಚಿತ್ತ…ಹೀಗೆ ಗಾದೆಗಳಂತೆ,ನಾಣ್ನುಡಿಗಳಂತೆ ರೂಢಿಗತವಾಗಿ ಬಳಸುವ ಮಾತುಗಳಾಗಿವೆ. ಈ ಶತಕದ ಪದ್ಯಗಳು ನಾಲ್ಕು ಸಾಲಿನಲ್ಲಿದ್ದು ಕೆಲವು ದೃಷ್ಟಾಂತಗಳ ಮೂಲಕ ನೀತಿ, ತಿಳುವಳಿಕೆ ‌ಹೇಳುತ್ತವೆ. ” ಉಣದಿರುವ ಧನಮಿರ್ದೊಡೇನು,ಸುತನಿರ್ದೇಂ‌ ಮುಪ್ಪಿನಲ್ಲಾಗದಾ,ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ‌ ಬಂದೇನದಾಪತ್ತಿನೊಳ್ ಮಣಿದುಂ‌ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದ ತೃಣವೇ ಪರ್ವತವಲ್ಲವೇ‌ ಹರಹರಾ ಶ್ರೀಚೆನ್ನ ಸೋಮೇಶ್ವರ.!”(೧೬) ಉಪಯೋಗಿಸದಿರುವ ಹಣವೂ,ಮುಪ್ಪಿನಲ್ಲಿರುವ ತಂದೆ ತಾಯಿಯನ್ನು ನೋಡದ ಮಗನೂ,ಪೈರು ಒಣಗುವಾಗ ಬಾರದ‌ ಮಳೆಯೂ,ಕಷ್ಟಕಾಲದಲ್ಲಿಯೂ ಬಂದು ವಿಚಾರಿಸಿಕೊಳ್ಳದ ನಂಟರೂ ಇದ್ದು ಪ್ರಯೋಜನವಿಲ್ಲ‌.ಉಪಯೋಗವಿಲ್ಲ.ಆದುದರಿಂದ ಸಮಯಕೆ ಸರಿಯಾಗಿ ಒದಗಿದ ಹುಲ್ಲುಕಡ್ಡಿಯೂ,ಅಂದರೆ‌ ಸಣ್ಣ‌ಸಹಾಯವೂ ಪರ್ವತಕ್ಕೆ ಸಮಾನವಾದುದು.ಹೀಗೆ ಸಾಮಾಜಿಕ ಜೀವನದ ವಿವರಗಳನ್ನೇ ಉದಾಹರಿಸುತ್ತಾ ಸರಿ ತಪ್ಪುಗಳ, ಒಳಿತು ಕೆಡಕುಗಳ ವಿಚಾರ ಮಾಡಿದ್ದಾನೆ‌ ಕವಿ. ” ಮದನಂ ದೇಹವ ನೀಗಿದಂ,ನೃಪವರಂ ಚಂಡಾಲಗಳಾದ,ಪೋದುದು ಬೊಮ್ಮಂಗೆ ಶಿರಸ್ಸು,ಭಾರ್ಗವನು ಕಣ್ಗಾಣಂ,ನಳಂ‌ ವಾಜಿಪಂ,ಸುಧೆಯಂ‌ ಕೊಟ್ಟು ಸುರೇಂದ್ರ ಸೋಲ್ತ,ಸತಿಯಂ ಪೋಗಾಡಿದಂ ರಾಘವಂ,ವಿಧಿಯಂ ಮೀರುವನಾವನೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರ. “(೨೭) ಮನ್ಮಥನು ದೇಹವನ್ನೇ ಕಳೆದುಕೊಂಡನು,ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದನು,ಬ್ರಹ್ಮನಿಗೆ ಒಂದು ತಲೆಯೇ ಹೋಯಿತು.ಶುಕ್ರಾಚಾರ್ಯರಿಗೆ ಒಂದು ಕಣ್ಣು ಹೋಯಿತು.ನಳ‌ ಮಹಾರಾಜನು ಕುದುರೆಯ ನೋಡಿಕೊಂಡಿರಬೇಕಾಯಿತು,ಇಂದ್ರನು ಅಮೃತವನ್ನು ಕಳೆದುಕೊಂಡು ಯುದ್ದದಲ್ಲಿ ಸೋತು ಹೋದನು,ಶ್ರೀರಾಮನು ತನ್ನ ಹೆಂಡತಿಯನ್ನು ಕಳೆದುಕೊಂಡನು…ಹೀಗಿರುವಾಗ ಲೋಕದಲ್ಲಿ ದುರಾದೃಷ್ಟವನ್ನು ಮೀರಲು ಯಾರಿಗೆ ಸಾಧ್ಯ.ಎಲ್ಲರೂ ಬಂದುದನ್ನು ಅನುಭವಿಸಲೇಬೇಕು ಎಂದು ಕವಿ ಹೇಳುತ್ತಾನೆ.ಈ ಒಂದು ಪದ್ಯಭಾಗದಲ್ಲೇ ಏಳುಕಥೆಗಳ ಉಲ್ಲೇಖವಿದೆ.ಕಾಮ‌ ದಹನದ‌ ಕಥೆ,ಹರಿಶ್ಚಂದ್ರನ ಕಥೆ,ರಾಮಾಯಣದ ಕಥೆ,..ಹೀಗೆ ನಾಲ್ಕು ಪದ್ಯ ಗಳಲ್ಲೇ ಹಲವು ಕತೆಗಳ ನಿದರ್ಶನಗಳ ಮೂಲಕ ಅದೃಷ್ಟ ದುರಾದೃಷ್ಟ ನಮ್ಮ ಕೈಯಲಿಲ್ಲವೆಂದು ಕವಿ ಚಿತ್ರಿಸಿದ್ದಾನೆ. ಪಾಠ ಮಾಡುವಾಗ ಶಿಕ್ಷಕರು ಎಡವಬಾರದೆಂದು,ಮಕ್ಕಳೇ‌ ಓದುವಾಗ ಅವರಿಗೂ ತಿಳಿಯಲಿ ಎಂದು ಈ ಕೃತಿಯ ಸಂಪಾದಕರು ಈ ಎಲ್ಲಾ ಉಲ್ಲೇಖಿತ ಕಥಾ ಎಳೆಗಳನ್ನು ಹಿಡಿದು,ಅವುಗಳ ಮೂಲಕಥೆಗಳನ್ನು ಒದಗಿಸಿದ್ದಾರೆ.ಆ ಮೂಲಕ ಈ ಪುಸ್ತಕದ ಉಪಯುಕ್ತತೆ ಹೆಚ್ಚಾಗಿದೆ. ಈ ಶತಕದ ಪದ್ಯಗಳಲ್ಲಿರುವ ವಿಷಯವು ನೀತಿಬೋಧಕವೆಂದು ಆಗಲೇ‌ ಹೇಳಿದ್ದೇನೆ.ಆ ನೀತಿ,ಒಣ ಬೋಧನೆಯಂತಾಗಬಾರದೆಂದು ಕವಿ ಹೋಲಿಕೆ,ಉಪಮೆ,ದೃಷ್ಟಾಂತ ಗಳನ್ನು ನೀಡುತ್ತಾ ಅಂತಿಮವಾಗಿ ನೀತಿ ಹೇಳಿದ್ದಾನೆ.ಹೀಗಾಗಿ ಈ ಪದ್ಯಗಳು ಸೊಗಸಿನಿಂದ ಕೂಡಿದ್ದು,ಓದಿಸಿಕೊಳ್ಳುವ,ಸಂವಾದಿಸುವ ಸಾಮರ್ಥ್ಯ ಹೊಂದಿವೆ. ಮತ್ತೊಂದು ವಿಚಾರವೆಂದರೆ, ಈ ಪದ್ಯಗಳಲ್ಲಿರುವ ವಿಷಯಗಳೆಲ್ಲವೂ ಸಾರ್ವಕಾಲಿಕವಾದವೆ,ಪ್ರಗತಿಪರವೇ ಎಂದೇನಾದರೂ ಪ್ರಶ್ನೆ ಹಾಕಿಕೊಂಡರೆ,ಇಲ್ಲಿ,ಅನೇಕ ವಿಚಾರಗಳು ಎಲ್ಲ ಕಾಲಕ್ಕೂ ಬೇಕಾದತಂಹವು ಇವೆ.ಆದರೆ,ಕೆಲವು ವಿಚಾರಗಳು ಕವಿ ಬಾಳಿ ಬದುಕಿದ ಸಮಾಜದಲ್ಲಿ ಆಗ ಮಾನ್ಯತೆ ಪಡೆದಿದ್ದು,ಪ್ರಸ್ತುತದಲ್ಲಿ ಅವುಗಳು ಅರ್ಥ ಕಳೆದುಕೊಂಡಿವೆ.ಇವತ್ತಿನ ಸಮಾಜದಲ್ಲಿ ಅಂತಹ ವಿಷಯಗಳಿಗೆ ‌ಮೌಲ್ಯವಿಲ್ಲ.ನಿದರ್ಶನಕೆ ; ಹೀಗಾಗಲೇ ಉಲ್ಲೇಖಿಸಿರುವ ‘ಉಣದಿರ್ದ ಧನವಿದ್ದರೇನು ಪ್ರಯೋಜನ’ ಅಂತಹ ಪದ್ಯಗಳು ಎಲ್ಲಾ ಕಾಲ‌ಕ್ಕೂ ಸೂಕ್ತವಾದವು.ಆದರೆ,ವಿಧವೆ,ಒಂಟಿ ಬ್ರಾಹ್ಮಣ, ಜೈನ ಸಂನ್ಯಾಸಿ,ಅಂಗಹೀನನು…ಇವೆಲ್ಲವೂ ಅಪಶಕುನವಾದದ್ದು,ಇವುಗಳನ್ನು ಕಂಡಾಗ ನಿಪುಣರು ಹೊರಹೋಗುವುದಿಲ್ಲಾ ಎಂಬ ಮಾತು ಅವತ್ತಿನ ಸಾಮಾಜಿಕ ನಂಬಿಕೆ,ನಡವಳಿಕೆಯನ್ನು ಯಥಾ ಪ್ರಕಾರ ಬಿಂಬಿಸಿದಂತಿದೆ. ” ಧರೆ ಬೀಜಂಗಳ ನುಂಗೆ,ಬೇಲಿ ಹೊಲನೆಲ್ಲಂ‌ ಮೇದೊಡೆಂ,ಗಂಡ ಹೆಂಡಿರನತ್ಯುಗ್ರದಿ ಶಿಕ್ಷಿಸಲ್,ಪ್ರಜೆಗಳಂ ಭೂಪಾಲಕಂ ಭಾದಿಸಲ್,ತರುವೇ ಪಣ್ಗಳ ಮೆಲ್ಲೆ,ಮಾತೆ ವಿಷಮಂ ಪೆತ್ತರ್ಭಂಕಂಗೂಡಿಸಲ್,ಹರಂ‌ಕೊಲ್ಲಲ್ ಪರ ಕಾಯ್ವನೇ ಹರ ಹರಾ ಶ್ರೀಚೆನ್ನ ಸೋಮೇಶ್ವರ! “(೨೯) ಎಂಬ ಪದ್ಯದಲ್ಲಿ ರಕ್ಷಿಸಬೇಕಾದವರೇ ಭಕ್ಷಕರಾದರೆ ಯಾರು ರಕ್ಷಿಸಲು ಸಾಧ್ಯ ಎಂದು ಕವಿ ಕೇಳುತ್ತಾರೆ.ಬಸವಣ್ಣನ‌ ” ಒಲೆ ಹತ್ತಿ ಉರಿದರೆ ನಿಲ್ಲಬಹುದಲ್ಲದೆ,ಧರೆ ಹತ್ತಿ ಉರಿದರೆ ನಿಲಲಾಗದು” ವಚನವೂ ಇದೇ ನುಡಿಗಳನ್ನು ಹೇಳುತ್ತಾ,ಕಾಯುವವರೆ ಕೊಲ್ಲಲು ನಿಂತರೆ ಇನ್ಯಾರಿಗೆ ದೂರುವುದು ಎಂದು ಪ್ರಶ್ನಿಸುತ್ತದೆ‌.ಇಂತಹ ಹಲವಾರು ‌ಪದ್ಯಗಳು,ಗುರು,ಜ್ಞಾನ, ವಿದ್ಯೆ,ಹಣ,ಅಧಿಕಾರ,ಬಂಧು ಮಿತ್ರರು,ರಾಜ,ಮಂತ್ರಿ,ಅಧಿಕಾರಿಗಳಿಗಿರಬೇಕಾದ ಸಾಮರ್ಥ್ಯ.. ಹೀಗೆ ಇವುಗಳೆಲ್ಲದರ ಗುಣ ಲಕ್ಷಣ ಕುರಿತು ಆಡಿರುವ ನುಡಿಗಳು ಇವತ್ತಿಗೂ ಅನ್ವಯಿಸುತ್ತವೆ.ಮತ್ತು ಉಪಯುಕ್ತತೆ ಪಡೆದಿವೆ.ನಿದರ್ಶನಗಳ ಮೂಲಕ ಹೇಳುವುದರಿಂದ ಓದುಗ,ಕೇಳುಗರ‌ ಮನದಲ್ಲಿ ಉಳಿದು,ತಿಳುವಳಿಕೆಗೆ,ಚಿಂತನೆಗೆ ದೂಡುವ ಪದ್ಯಗಳಾಗಿವೆ.ಹಾಗಾಗಿ ಸೋಮೇಶ್ವರ ಶತಕವು ಮರುಓದಿಗೆ,ಪರಾಮರ್ಶನಕೆ ಒಳಗಾಗುತ್ತಲೇ ಇರುತ್ತದೆ. ಕವಿ ಪರಿಚಯ,ಪದ್ಯಗಳು,ಭಾವಾರ್ಥ,ಟಿಪ್ಪಣಿ,ಮೂಲಕಥೆಗಳು ಅಂದರೆ ಕಾಮದಹನದ ಕಥೆ,ಹರಿಶ್ಚಂದ್ರನ‌ ಕಥೆ,ಬಲಿಚಕ್ರವರ್ತಿಯ ಕಥೆ,ಅಹಲ್ಯೆಯ ಕಥೆ..ಹೀಗೆ ವಿನ್ಯಾಸಗೊಳಿಸಿ,ಸಿದ್ದಪಡಿಸಿರುವ ಸಂಪಾದಕರ ಶ್ರಮ ಮತ್ತು ಪಾಂಡಿತ್ಯಕ್ಕೆ ನಮಿಸಲೇಬೇಕಾಗುತ್ತದೆ.ಇಂತಹ ಪುಸ್ತಕವನ್ನು ಪುನರ್ ಮುದ್ರಣ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ. ಆದರೆ,ಪುನರ್ ಮುದ್ರಣದಲ್ಲಿ ಸಂಪಾದಕರು ಯಾರು ಎಂದೇ‌ ತಿಳಿಯುತ್ತಿಲ್ಲಾ.ಅದನ್ನು ಇರುವುದು ಸಮಂಜಸವಲ್ಲ. ” ನೀತಿಯ ಕಟುತ್ವದ ಕಹಿ ಗುಳಿಗೆಗಳನ್ನು ಕಥೆಯ ಜೇನಿನಲಿ ಅದ್ದಿ ಉಣಿಸುವಆರೋಗ್ಯಕರ ನುಡಿಮುತ್ತುಗಳು ” ಈ ಶತಕದ ಪದ್ಯಗಳು. ********* ಡಾ.ಸುಜಾತಾ ಲಕ್ಷೀಪುರ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಎದೆಯ ಕದ ತೆರೆದಾಗ. “ಎದೆಯ ಕದವ ತೆರೆಯುತಿರೆ| ಒಳಗೆ ಬೆಳಕು ಹರಿಯಿತು|ಹೂಗಳೆಸಳು ಬಿರಿಯುತಿರೆ |ತುಂಬಿ ಹಾಡು ಮೊರೆಯಿತು”——ಕವಿ ಕಯ್ಯಾರರ ‘ಯುಗಾದಿ’ ಕವನದ ಸಾಲುಗಳಿವು.ಯುಗಾದಿ ಸಮೃದ್ಧಿಯ ಸಂಕೇತ.ಪ್ರಕೃತಿ-ಮಾನವ ಅನುಸಂಧಾನದ ಪ್ರತೀಕ.ಕವಿಗಳು ಪರಿಸರ ಪ್ರೇಮಿಗಳು.ಮಣ್ಣಿನಲ್ಲಿ ಸ್ವರ್ಣವನ್ನು, ಶಿಲೆಯಲ್ಲಿ ಶಿಲ್ಪವನ್ನು ಕಾಣುವವರು.ಎದೆಯ ಕದ ತೆರೆದು ಆತ್ಮದ ಮಿಂಚನ್ನು ಹೊಳೆಯಿಸುವವರು.ಅಂತರಂಗದ ಬೆಳಕಲ್ಲಿ ಬಹಿರಂಗವನ್ನು ಬೆಳಗಿಸುವವರು.ಮೊಗ್ಗು ಹೂವಾಗಿ ದಳ ಬಿರಿದು ನಿಂತಾಗ ಒಂದು ರೀತಿಯ ನಿಸ್ವನ.ಹೂವಿನ ಮಕರಂದ ಹೀರುವ ದುಂಬಿಗಳು,ಝೇಂಕಾರದ ನಾದಮಯತೆ,ನವನವೋನ್ಮೇಷ, ಮಾಧುರ್ಯದ ಮೊರೆತಕ್ಕೆ ಮನವರಳುವುದು ಸಹಜ.ಹೀಗೆ ರವಿ ಕಾಣದ್ದನ್ನು ಕವಿ ಕಂಡೇ ಕಾಣುತ್ತಾನೆ ಎಂಬುದಂತೂ ಸತ್ಯ.“ಎದೆಎದೆಗೂ ವ್ಯತ್ಯಯ ಹಾಳಾಗಲಿ ಎದೆಎದೆ ಗೂಡಲಿ ಹಾಲಾಗಲಿ” ಎಂಬ ವಿ.ಗ ನಾಯಕರ ಸಾಲುಗಳು ಇಲ್ಲಿ ನೆನಪಾಗುತ್ತವೆ.ದ್ವೇಷಿಸುವ ಎದೆಗಳು ಬೇಡ, ಪ್ರೀತಿಸುವ ಎದೆಗಳು ಬೇಕು.ಎದೆಎದೆಗಳ ಮಿಳಿತ ಜೀವಜೀವದ ಸೆಳೆತ.ಎದೆಯ ಆಕಾರಕ್ಕೆ ಆಕರ್ಷಣೆಯಿದೆ.ಹೃದಯದ ತುಡಿತದಲ್ಲಿ ಪ್ರೀತಿಯ ಮಿಡಿತವಿದೆ.ಕವಯಿತ್ರಿ ಆಶಾ ದಿಲೀಪ್ ಸುಳ್ಯಮೆ ಅವರ ಚೊಚ್ಚಲ ಕವನ ಸಂಕಲನದ ಶೀರ್ಷಿಕೆ “ಎದೆಯ ಕದ”.ವಿಷಯ ವೈವಿಧ್ಯತೆಯ ನಲುವತ್ತೆರಡು ಕವನಗಳ ಈ ಸಂಕಲನ 2016 ರಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ಇದರ ಪ್ರಕಾಶಕರು.ಬಿಡುಗಡೆಯಾದ ಸಂದರ್ಭದಲ್ಲಿ ಓದಿ ಖುಷಿ ಪಟ್ಟವರಲ್ಲಿ ನಾನೂ ಒಬ್ಬ.ಈಗ ಮತ್ತೊಮ್ಮೆ ಕಣ್ಣು ಹಾಯಿಸುವ ಅವಕಾಶ ಲಭಿಸಿದೆ.ಕವನಗಳ ಬಗ್ಗೆ ಕೆಲವು ಮಾತುಗಳನ್ನು ಹೇಳ ಬೇಕು ಎನಿಸಿದೆ.ಇಲ್ಲಿ ಕಲೆಹಾಕಿದ ಕವನಗಳೆಲ್ಲವು ಭಾವ ಕೇಂದ್ರಿತ ರಚನೆಗಳು.ಆಶಾ ಅವರು ಭಾವನೆಯ ಬಲೆ ಹೆಣೆದು ಕಾವ್ಯ ಕಟ್ಟಿದ್ದಾರೆ.ಅನುಭವಕ್ಕೆ ದಕ್ಕಿದ್ದನ್ನು ಸಶಕ್ತ ಪದಗಳಲ್ಲಿ ಅಭಿವ್ಯಕ್ತಿಸಿದ್ದಾರೆ.ಎದೆ ಮುಟ್ಟುವ ರಚನೆಗಳಿಗೆ ಭಾವವೇ ಮೂಲದ್ರವ್ಯ ವಾದರೂ ಇಲ್ಲಿ ಎದೆಯ ಕದ ತೆರೆದಾಗ ಅನುಭವದ ಅಂತರ್ಧ್ವನಿ ಅನುರಣಿಸುವುದನ್ನು ಕಾಣಬಹುದು.ಮುನ್ನುಡಿಯಲ್ಲಿ ಸಾಹಿತಿ, ಮಾಧ್ಯಮ ತಜ್ಞ ಡಾ ವಸಂತಕುಮಾರ್ ಪೆರ್ಲ ಅವರು ಹೇಳುವಂತೆ ‘ಈ ಸಂಕಲನದಲ್ಲಿ ಮನೆ, ಮಕ್ಕಳು, ಸಂಸಾರ ಜೊತೆಗೆ ಕೆಲವು ಪ್ರಕೃತಿ ಚಿತ್ರ ಗಳು ಇವೆ.ಎಲ್ಲವುಗಳ ಕಡೆಗೆ ಒಂದು ಸಹೃದಯ ವೀಕ್ಷಣೆ ಕವಯಿತ್ರಿಯಲ್ಲಿ ಕಂಡುಬರುತ್ತದೆ.ಚಿತ್ರಕ ಸನ್ನಿವೇಶವೊಂದನ್ನು ಕೊಡುತ್ತಲೇ ಅದರಾಚೆಗಿನ ಅರ್ಥ ಭಾವಗಳನ್ನು ಭಾಷಿಕ ಸಂವಿಧಾನದ ಮೂಲಕ ಕಟ್ಟಿಕೊಡುವ ಪರಿ ಸಂತೋಷ ಕೊಡುತ್ತದೆ.ಈ ಮಾತಗಳು ಎದೆಯ ಕದ ತೆರೆದು ನೋಡುವ ಕುತೂಹಲ ವನ್ನು ಹೆಚ್ಚಿಸುತ್ತದೆ’.ಕಾವ್ಯ ಸಹಜವಾಗಿ ಹುಟ್ಟು ವ ಕ್ರಿಯೆ.ಅತಿಯಾದ ನೋವು ಮತ್ತು ಸಂತೋಷವಾದಾಗ ಜೀವ ಪಡೆಯುತ್ತದೆ.ಇದು ಆಶಾ ಅವರು ಕಂಡುಕೊಂಡ ಸತ್ಯ.ಮೌನರೋದನದಲ್ಲಿ ರೋಮಾಂಚನದ ಉತ್ತುಂಗದಲ್ಲಿ ಸುಖದುಃಖದ ಕಟ್ಟೆಯೊಡೆದು ಕಾವ್ಯಕನ್ನಿಕೆ ಹುಟ್ಟುತ್ತಾಳೆ ಎಂಬುದು ಅನುಭವ ಜನ್ಯ.ಆದರೆ ‘ಬರೆಯಲು ಹೊರಟರೆ ಸುಂದರ ಕವಿತೆ| ಪದಗಳ ಮರ್ಮವ ಅರಿಯದೆ ಹೋದೆ’ ಎಂಬ ಮರುಕ ‘ಒಂಟಿ ನಾನು’ ಕವನದಲ್ಲಿದೆ.ಕ ವಯಿತ್ರಿ ‘ಭಾವ ಜೀವ ರಸಿಕನೆದೆಗೆ ದಾಳಿಯಿಡುವ ಕವಿಯು ನಾನಾಗ ಬೇಕು| ನನ್ನ ಕವಿತೆಯ ಪ್ರಾಸ ನೀನಾಗ ಬೇಕು|ನಾ ಭಾವವಾದರೆ ಜೀವ ನೀನಾಗ ಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.ನಲ್ಲೆಯ ನಲ್ನುಡಿ ಯ ಕೇಳದೆ ವಿಚಲಿತನಾದ ನಲ್ಲ ಆಸೆ ಮುತ್ತುಗಳ ಪೋಣಿಸುತ ಎದೆ ಬಾಗಿಲಿಗೆ ತೋರಣ ಕಟ್ಟಿ ಕಾಯುತ್ತಾನೆ.ಏಕಾಂಗಿಯಾಗಿರುವ ಆತನ ಭಾವನೆಗಳು ಬಂಧನಕ್ಕೊಳಗಾಗಿದೆ. ‘ನನ್ನೆದೆಯ ಕದವನ್ನು’ ಸರಳತೆ ಮತ್ತು ಆರ್ದ್ರತೆಗಳಿಂದ ಗಮನ ಸೆಳೆಯುತ್ತದೆ.ಸಂಕಲನದ ಮೊದಲ ಕವಿತೆ ‘ಯಾವ ಮಾಯೆಯಮ್ಮಾ’ ಜೀವದನಿ ತುಂಬಿ ಕೊಂಡ ಭಾವ ಗೀತೆ.ಹೆಣ್ಣು ಮಾಯೆ ಆಕೆಯ ಮಹಿಮೆ ಅಪಾರ.ಸಕಲ ಜೀವದ ಭಾಗ್ಯ ದಾಯಿನಿ ಆಕೆ.’ಅಷ್ಟವೈರಿಗಳನ್ನು ದಮನಮಾಡಿಸಿ| ಸ್ವರ್ಗ ದಾರಿಯಲ್ಲಿ ನಮ್ಮನ್ನು ನಡೆಸು’ ಎಂಬ ಪ್ರಾರ್ಥನೆ (ಗೀತೆ)ಯಾಗಿಯೂ ಈ ರಚನೆ ಸಲ್ಲುತ್ತದೆ.ತಾಯಿಗೆ ಮಕ್ಕಳು ಅಂದರೆ ಮಮತೆ.ಹೊತ್ತು ಸಲಹಿದಾಗ ಕಂದನ ಮುಖವರಳುವುದು ಸಹಜ.ಆದು ಹೆತ್ತ ನೋವನ್ನು ಮರೆಸುತ್ತದೆ.’ಅಮ್ಮ ಎನ್ನುವ ಕಂದನ ಕೂಗಲಿ|ಬ್ರಹ್ಮಾಂಡದ ಭವ್ಯತೆ ಅಡಗಿತ್ತು’ (ಅಮ್ಮ) ಎಂಬೀ ಸಾಲುಗಳಲ್ಲಿ ದರ್ಶನದ ಕಲ್ಪನೆಯಿದೆ.ಮಹಿಳೆ ಎಂದರೆ ಮಹಾ ಇಳೆ.ಸಕಲ ಚರಾಚರಗಳಿಗೂ ಜೀವ ಚೈತನ್ಯ ನೀಡುವವಳು.ಮಹಿಳೆ ತಾಯಿಯೂ ಹೌದು.ಭೂದೇವಿಯೂ ಹೌದು.’ಭರತ ಭೂಮಿ ವಿಶ್ವ ವಂದ್ಯೆ ಜನ್ಮದಾತೆಯು’ಎಂದು ಆರಂಭವಾಗುವ ‘ಭರತಭೂಮಿ ವಿಶ್ವ ವಂದ್ಯೆ’ ಎನ್ನುವ ಕವನದಲ್ಲಿ ದೇಶಪ್ರೇಮವುಕ್ಕಿಸುವ ಭಾವನೆಗಳಿವೆ.’ವೇಷ ಬೇರೆ ಭಾಷೆ ಬೇರೆ ಒಲವು ಮೆರೆಯಲಿ |ಪ್ರೀತಿ ಉಳಿದು ದ್ವೇಷ ಅಳಿದು ನಗೆಯು ಚಿಮ್ಮಲಿ’ ಎಂಬ ಆಶಯವಿದೆ.ಬದುಕಿನ ಉನ್ಮಾದ’ ವಿಷಾದ,ಪ್ರೀತಿ ,ತೀವ್ರತೆಯನ್ನು ಆಪ್ತವಾಗಿ ಕಟ್ಟಿಕೊಡುವ ‘ತೂಗದ ತೊಟ್ಟಿಲು’ ಅಂತರಂಗದ ನಿಸ್ವನ.’ಒಲುಮೆ ತುಂಬಿದ ಮನೆಯಲ್ಲಿ| ತೂಗಲಿಲ್ಲ ತೊಟ್ಟಿಲು| ಕೊನೆಗೂ ಕಂದನ ಕನಸು ಕಾಡಿದೆ|ಬರಿದಾಗಿದೆ ಮಡಿಲು’.ಬದಲಾವಣೆಯ ಕಾಲಘಟ್ಟದಲ್ಲಿ ಪ್ರೀತಿ ಮಮಕಾರ ಯಾಂತ್ರಿಕವಾದಾಗ,ಸಹಜತೆಯ ಒರತೆ ಬತ್ತಿ ಹೋಗುವುದನ್ನು ಇಲ್ಲಿ ಕಾಣಬಹುದು.ದಾರ್ಶನಿಕ ಹೊಳಹು ಗಳನ್ನು ನೀಡುವ ‘ಆತ್ಮದೇಗುಲ’ದಲ್ಲಿ ‘ಬಾಳ ಹಾದಿ ಚಿಮ್ಮಿ ನಗಲಿ ಹೂವ ಹಾಸಿಗೆ| ಒಲವ ಧಾರೆ ಹರಿದು ಬರಲಿ ಬಾಳ ಹಣತೆಗೆ’ ಎಂಬ ಆಶಯವಿದೆ.’ಸಿಹಿಯುಂಟು ಕಹಿಯುಂಟು ಜೀವನ ಯಾತ್ರೆಲಿ| ಮರೆಯಲು ಕಲಿತೋನೆ ಜಾಣ ಈ ಜಗದಲಿ’ ಈ ವಾಸ್ತವ ಸತ್ಯ ‘ಹೋಗೋಣ ಬಾರೆ’ ಕವನದಲ್ಲಿದೆ.‘ವಂದನೆ-ಅಭಿನಂದನೆ’ಯಲ್ಲಿ ಸಾಮರಸ್ಯದ ಸಂದೇಶವಿದೆ.’ಹಿಂದೂ ಸಿಖ್ಖ ಕ್ರೈಸ್ತ ಮುಸಲ್ಮಾನರು| ಒಟ್ಟಿಗೆ ಬದುಕುವ ರೀತಿಯೆ ಅಭಿಮಾನವು’ ನಿಜವಾಗಿಯು ಇದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಸಂದರೂ ಅಳಿಯಲಿಲ್ಲ ಗುಲಾಮಗಿರಿ.’ಎಲ್ಲಿದೆ ಸಮಾನತೆ ಮೀಸಲಾತಿ| ಸ್ತ್ರೀ ಸ್ವಾತಂತ್ರ್ಯದ ಅನುಭೂತಿ’ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.ಹಳತಿಗೆ ವಿದಾಯ, ಹೊಸತಿಗೆ ಸ್ವಾಗತ ಹೇಳುವ ಸಂದರ್ಭವನ್ನು ನೆನಪಿಸುವ ‘ವಿದಾಯ’ ವರ್ತಮಾನದ ವೈಚಿತ್ರ್ಯ ವನ್ನು ಧ್ವನಿಸುವ ‘ನಲುಗುತ್ತಿದೆ ವರ್ತಮಾನ’ಕನಸು ಭ್ರಮೆಯಾಗಿ ಕಾಡುವ ಘಟನೆಗಳನ್ನು ಪಲ್ಲವಿಸುವ ‘ಭ್ರಮೆ’ ಅರ್ಥ ಸಂಚಲನ ಮೂಡಿಸುತ್ತದೆ.ವಿಕೃತ ಮನಸುಗಳ ಅಮಾನುಷ ವರ್ತನೆಗಳಿಗೆ ಮುಖಾಮುಖಿ ಯಾಗುವ ‘ಭಯಾನಕ ರಾತ್ರಿ’ಯಲ್ಲಿ ಸೂಚ್ಯಾರ್ಥವಿದೆ.ಇಂಟರ್ನೆಟ್ ಯುಗದಲ್ಲಿ ಭಾವನೆಗಳ ಒರತೆ ಬರಿದಾಗುವ ಸಂದಿಗ್ಧ ಪರಿಸ್ಥಿತಿ ‘ಒಂಟಿ ಹಕ್ಕಿಯ ಮರ್ಮರ’ದಲ್ಲಿದೆ. ಪರಿಸರವನ್ನು ಉಳಿಸಬೇಕಾದ ಅನಿವಾರ್ಯತೆ ‘ಕೆಡಿಸದಿರು ಪರಿಸರವ’ಕವನ ಸಾರಿ ಹೇಳುತ್ತದೆ.’ಗೆಳತಿ’,’ಕಳೆದು ಹೋದ ಬಾಲ್ಯ’,’ಅರಳುವ ಹೂಗಳು’ ‘ನೆನಪಿದೆಯಾ ಗೆಳತಿ’ ಭಾವನೆಗಳಿಗೆ ಶಬ್ದ ರೂಪ ಕೊಡುವ ಕ್ರಿಯೆಯಲ್ಲಿ ಯಶಸ್ವಿಯಾಗಿದೆ.ಪ್ರೀತಿ ವಾತ್ಸಲ್ಯಕ್ಕಾಗಿ ಕವಯಿತ್ರಿಯ ‘ಹಂಬಲ’ ಸಾರ್ವಕಾಲಿಕ ಮೌಲ್ಯ ಪಡೆದ ಕವನವಾಗಿ ಸಲ್ಲುತ್ತದೆ.ಸರಳವಾಗಿ ಹೇಳುತ್ತಲೇ ಸಂಕೀರ್ಣವಾಗುವ ರಚನೆಗಳೂ ಸಂಕಲನದಲ್ಲಿ ಇಲ್ಲದ್ದಿಲ್ಲ.ನವೋದಯದ ನಾದಮಯತೆ,ನವ್ಯದ ಧ್ವನಿ ಶಕ್ತಿ ಆಶಾ ದಿಲೀಪ್ ಅವರ ಕವನಗಳಲ್ಲಿ ಕಾಣಬಹುದು.ಹೆಚ್ಚಿನವುಗಳೂ ಗೇಯತೆಯ ರಚನೆಗಳು.ಸಂದರ್ಭೋಚಿತವಾಗಿ ಬರೆದವುಗಳು.ಅವರ ಭಾಷೆ,ಭಾವ, ಲಯ ಆಪ್ತವಾಗುತ್ತದೆ.ಪ್ರತಿಮೆ ಸಂಕೇತಗಳಿಂದ ತಾಜಾ ಅನಿಸುತ್ತದೆ.ಗೌರವಾನ್ವಿತ ಗುರು ಸಾವಿತ್ರಿ ಎಸ್ ರಾವ್ ‘ಎದೆಯ ಕದ’ಕ್ಕೆ ಬೆನ್ನುಡಿ ಬರೆದಿದ್ದಾರೆ.ಆಶಾ ಅವರ ಕ್ರಿಯಾಶಕ್ತಿ, ಧೀಶಕ್ತಿಗೆ ಕನ್ನಡಿ ಹಿಡಿದಿದ್ದಾರೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಮತ್ತು ಆಕಾಶ ಡಾ.ಧನಂಜಯ ಕುಂಬ್ಳೆ ಕವಿಮಿತ್ರ ಡಾ.ಧನಂಜಯ ಕುಂಬ್ಳೆಯವರ ‘ನಾನು ಮತ್ತು ಆಕಾಶ’ ವಿಮರ್ಶಾ ಸಂಕಲನದ ಬರಹಗಳನ್ನು ಮರುಓದುವ ಅವಕಾಶ ಲಭಿಸಿದೆ. ಹದಿನಾರು ವರ್ಷಗಳ ಹಿಂದೆ ಪುಟ ತಿರುವಿ ದೃಷ್ಟಿ ಹಾಯಿಸಿದ್ದೆ ಅಷ್ಟೆ. ಈಗ ಅನುಭವಿಸಿದ ಸಾರ್ಥಕ ಭಾವ. ೨೦೦೩ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪುಸ್ತಕ ಪ್ರಕಾಶನ ಧನಸಹಾಯ ಯೋಜನೆಯಲ್ಲಿ ಆಯ್ಕೆಯಾದ ಈ ಕೃತಿಯನ್ನು ಪುತ್ತೂರಿನ ಅನನ್ಯ ಪ್ರಕಾಶನ ಹೊರ ತಂದಿದೆ. ಧನಂಜಯ ಅವರ ಭಾವಗಳು, ಸಂವೇದನೆಗಳು, ಚಿಂತನೆಗಳು ತ್ರಿಮುಖಿ ಲಹರಿಗಳಾಗಿ ಇದರಲ್ಲಿ ಹರಿದಿದೆ. ಅವರ ಅನುವಭವಕ್ಕೆ ದಕ್ಕಿದ ಆಕಾಶದ ಆಕಾರ, ವಿಕಾರ ಬೆಡಗಿನೊಳಗೆ ಬೆರಗು ಮೂಡಿಸುತ್ತದೆ. ನೆಲದ ಧ್ಯಾನದಲ್ಲಿ ಎಲ್ಲವನ್ನೂ ಧೇನಿಸಿದ್ದಾರೆ. ವ್ಯಕ್ತಿ- ಕೃತಿ- ಪ್ರೀತಿ ಅಕ್ಷರಗಳಲ್ಲಿ ದಾಖಲಾಗಿದೆ. ಒಟ್ಟು ೨೫ ಬರಹಗಳಿರುವ ಈ ಪುಟ್ಟ ಸಂಕಲನಕ್ಕೆ ಪ್ರೊ.ತಾಳ್ತಜೆ ವಸಂತಕುಮಾರ್  ಮುನ್ನುಡಿ ಬರೆದಿದ್ದಾರೆ. “ತಮ್ಮ ಬರಹಗಳಲ್ಲಿ ಏಕತಾನತೆಯ ಬದಲಾಗಿ ವೈವಿಧ್ಯವನ್ನು ಆರಿಸಿಕೊಳ್ಳುವ ಧನಂಜಯರ ಹುರುಪು ಮೆಚ್ಚುಗೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಕೃತಿಯಲ್ಲಿ ವ್ಯಕ್ತಿಚಿತ್ರಗಳೂ, ಸಾಹಿತ್ಯ ವಿಮರ್ಶೆಯೂ, ಸಮಕಾಲೀನ ವಿದ್ಯಮಾನಗಳೂ ಎಡೆಪಡೆಯುತ್ತವೆ.  ಇದರಿಂದಾಗಿ ಓದುಗರ ಆಸಕ್ತಿಯೂ ಕದಡದಂತೆ ಕಾಯ್ದುಕೊಳ್ಳುವುದರ ಜೊತೆಗೆ ಬರಹಗಳ ಬಂಧ ಗಟ್ಟಿಯಾಗಿರುವಂತೆ ಜಾಗ್ರತೆ ವಹಿಸುವ ವಸ್ತುವಿನ ಆಯ್ಕೆಯ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುವ ಸೌಲಭ್ಯಗಳನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ಆ ಮೂಲಕ ಆಪ್ತರಾಗುತ್ತಾರೆ” – ಇದು ತಾಳ್ತಜೆಯವರ ಮಾತು. ಆಕಾಶ ಸಾವಿರಾರು ನಕ್ಷತ್ರಗಳನ್ನು ಅರಳಿಸುತ್ತಿರುವಾಗ ಧನಂಜಯರು ಅವರೊಳಗಿನ ನಕ್ಷತ್ರ ಸದೃಶ ಸೃಜನಶೀಲತೆಯನ್ನು ಅರಳಿಸಿದ್ದಾರೆ. ಅವುಗಳು ಬರಹ ರೂಪದಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯದ ದಾರಿಗನಿಗೆ ದೀಪಗಳಾಗಿ ಕಾಣಿಸಿಕೊಳ್ಳುತ್ತವೆ.    ‘ನಾನು ಮತ್ತು ಆಕಾಶ’ದಲ್ಲಿ ಕಲೆ ಹಾಕಿರುವ ಬರಹಗಳಲ್ಲಿ ಹೆಚ್ಚಿನವುಗಳು ಅಂಕಣಸ್ವರೂಪದವುಗಳು. ವಿಷಯವನ್ನು ಹಿಗ್ಗಿಸುವ ಜಾಣ್ಮೆ ಲೇಖಕರಿಗಿದ್ದರೂ ಅಂಕಣಬರಹಗಳ ಇತಿ ಮಿತಿಗಳಿಗನುಗುಣವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಬರವಣಿಗೆ ಸರಳವಾಗಿದ್ದರೂ ಪ್ರಬುದ್ಧತೆ ಬಂದುಬಿಟ್ಟಿದೆ. ಸರಸ ನಿರೂಪಣೆ, ಬಿಚ್ಚು ಮನಸ್ಸಿನ ಅಭಿವ್ಯಕ್ತಿ. ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಅಪಾರವಾದ ಓದಿನಿಂದ ಪಡೆದ ಜ್ಞಾನ ಪ್ರಜ್ವಲಿಸುತ್ತದೆ. ಮುನ್ನುಡಿಯಲ್ಲಿ ಬರಹಗಳ ಅಂತರ್ದರ್ಶನವಿದ್ದರೆ ನಲ್ನುಡಿಗಳ ಮೂಲಕ ಡಾ. ಶ್ರೀಧರ ಎಚ್. ಜಿ.ಯವರು ಕುಂಬ್ಳೆಯವರ ವ್ಯಕ್ತಿತ್ವವನ್ನು ಸ್ಪರ್ಶಿಸಿದ್ದಾರೆ.  ಒಟ್ಟು ಬರಹಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಮೊದಲ ಭಾಗ ‘ಭಾವ ಲಹರಿ’ಯಲ್ಲಿ ಏಳು, ಎರಡನೇಯ ಭಾಗ ‘ವಿಮರ್ಶಾ ಲಹರಿ’ಯಲ್ಲಿ ಹತ್ತು, ಕೊನೆಯ’ವ್ಯಕ್ತಿ ಲಹರಿ’ಯಲ್ಲಿ ಎಂಟು ಲೇಖನಗಳಿವೆ. ‘ಜೀವನ ವನದಲ್ಲಿ ಕವನ ಮಯೂರ’ ಶೀರ್ಷಿಕೆಯ ಲೇಖನದಲ್ಲಿ ಕಾವ್ಯ ಮಿಮಾಂಸೆಯಿದೆ. ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಬರೆದದ್ದೆಲ್ಲ ಕಾವ್ಯ ಎಂದುಕೊಂಡವರು ಇದನ್ನು ಓದಲೇಬೇಕು. ವಿದ್ಯಾರ್ಥಿಗಳಿಗಂತೂ ಉಪಯುಕ್ತವಾದ ಲೇಖನವಿದು. ‘ಕಾಲದ ಅನಿರ್ವಚನೀಯತೆ’ಯಲ್ಲಿ ಕಾಲದ ಕುರಿತಾದ ವ್ಯಾಖ್ಯಾನವಿದೆ. ಸೇಡಿಯಾಪು ಅವರ ಬರಹಗಳನ್ನು ಇದು ನೆನಪಿಸುತ್ತದೆ. ‘ಬುದ್ಧ ಮತ್ತು ಅಕ್ಕ’ ಒಂದು ಸಂಶೋಧನಾ ಪ್ರಬಂಧಕ್ಕೆ ಅಗತ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡುತ್ತದೆ. ಶ್ರೀಮಂತಿಕೆಯನ್ನು ತ್ಯಜಿಸಿ ಸಾಂಸಾರಿಕತೆಯನ್ನು ಹರಿದು ಆಧ್ಯಾತ್ಮವನ್ನು ಬಾಳಿದ ಗೌತಮ ಬುದ್ಧ ಮತ್ತು ಅಕ್ಕ ಮಹಾದೇವಿ ಭಾರತದ ಬೆಳಕಾದವರು.  ‘ಮನಸು ಹರಿದಾಗ’ ಸಾಹಿತ್ಯದ ಸ್ವಾನುಭವವನ್ನು ನಿವೇದಿಸುತ್ತದೆ. ಎರಡು ಮೂರು ಉಪಕಥೆಗಳ ಮೂಲಕ ಬದುಕಿನ ‘ಭಾವ- ಅಭಾವ’ವನ್ನು ಚಿತ್ರಿಸಿದ ಕುಂಬ್ಳೆಯವರು ರಮಣ ಮಹರ್ಷಿಯ ಸಂದೇಶವನ್ನು ಉಲ್ಲೇಖಿಸುತ್ತಾರೆ. ಸಾಕ್ರಟೀಸ್, ಪ್ಲೇಟೊ, ಕ್ರೀಟೊ ಆಸ್ಕ್ಲಿಪಿಯಸ್ ಮೊದಲಾದವರ ಬಗ್ಗೆ ಕುತೂಹಲ ಮೂಡಿಸುತ್ತಾರೆ. ನಾಟ್ಯ ಚಪಲವಿರುವವರಲ್ಲಿ ಕಾಪಟ್ಯವೂ ಇದೆ ಎನ್ನುವ ಸತ್ಯದ ಕುರಿತಾದ ಚರ್ಚೆ ‘ನಾಟ್ಯ ಲಹರಿ’ಯಲ್ಲಿದೆ. ನಾಟ್ಯ ಎನ್ನುವುದು ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನು ರೂಢಿಸಿಕೊಂಡ ಬೇರೆ ಬೇರೆ ವ್ಯಕ್ತಿಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವುದನ್ನು ಗಮನಿಸಬಹುದು. ‘ಬೆಳಕಿನ ಹಾದಿ’ ಒಂದು ಸುಂದರ ರೂಪಕ. ಧನಂಜಯ ಅವರು ಪ್ರಾಚೀನ ತುಳು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದವರು. ಈ ಸಂಕಲನದಲ್ಲಿ ಅದಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಅವುಗಳಲ್ಲಿ ಒಂದು ‘ತುಳು ಸಾಹಿತ್ಯ- ಕೆಲವು ಟಿಪ್ಪಣಿಗಳು’. ಇನ್ನೊಂದು ‘ತುಳು ಕಾವ್ಯಕ್ಕೆ ಕಾಸರಗೋಡಿನ ಕೊಡುಗೆ’. ತುಳುವಿಗೆ ಪ್ರಾಚೀನ ಲಿಖಿತ ಸಾಹಿತ್ಯ ಪರಂಪರೆಯಿತ್ತು ಎಂಬುದನ್ನು ಸಾಬೀತು ಪಡಿಸುವ ಬರಹಗಳಿವು. ಕುಂಬ್ಳೆಯವರ ವಿಮರ್ಶಾ ಪ್ರಜ್ಞೆಗೆ ಸಾಕ್ಷಿಯಾಗ ಬಲ್ಲ ಲೇಖನಗಳು ವ್ಯಕ್ತಿಚಿತ್ರಗಳಾಗಿಯೂ, ಕೃತಿ -ಸ್ಮೃತಿಗಳಾಗಿಯೂ ಇಲ್ಲಿ ದಾಖಲಾಗಿವೆ. ಬೇಂದ್ರೆ, ಕಾರಂತ, ಸೇಡಿಯಾಪು,  ಕಯ್ಯಾರ, ಏರ್ಯ, ಅಮೃತ, ಚಿತ್ತಾಲ, ವೇಣುಗೋಪಾಲ ಕಾಸರಗೋಡು, ಜನಾರ್ದನ ಎರ್ಪಕಟ್ಟೆ ಮೊದಲಾದವರ ಕೃತಿಗಳ ಅನನ್ಯತೆಯನ್ನು ಅಧ್ಯಯನಾತ್ಮಕವಾಗಿ  ವಿಶ್ಲೇಷಿಸಿದ್ದಾರೆ.  ‘ಹೊಸ ಕಾವ್ಯದ ಹೆಜ್ಜೆ’ ಲೇಖನದಲ್ಲಿ ನವೋದಯ, ನವ್ಯ,  ನವ್ಯೋತ್ತರ ಕಾಲಘಟ್ಟದ ಆಶಯ ಮತ್ತು ಆಕೃತಿಗಳ ಬಗ್ಗೆ ಚರ್ಚಿಸಲಾಗಿದೆ. ಅಡಿಗ, ಎಕ್ಕುಂಡಿ, ರಾಮಾನುಜನ್, ತಿರುಮಲೇಶ್ ಮೊದಲಾದವರ ಸತ್ವವನ್ನು ಮೈಗೂಡಿಸಿಕೊಂಡು ತನ್ನದೇ ಆದ ಹೊಸ ಕಾವ್ಯ ಮಾರ್ಗವನ್ನು ರೂಪಿಸಿದ ಡಾ. ರಾಧಾಕೃಷ್ಣ ಬೆಳ್ಳೂರು ಅವರ ‘ಅಗ್ನಿ ಜಿಹ್ವಾ’ ವನ್ನು ಪರಾಮರ್ಶಿಸಲಾಗಿದೆ. ಶಿವರಾಮ ಕಾರಂತರು ತಾವು ಪರಂಪರೆಯನ್ನು ಮುರಿಯುವುದರ ಮೂಲಕ ಪರಂಪರೆಯ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿದವರು. ಈ ಮಾತಿಗೆ ಪೂರಕವಾಗುವಂತೆ ಕಾರಂತರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಹೊಸ ಪ್ರಯೋಗಗಳ ಬಗ್ಗೆ ‘ಯಕ್ಷಗಾನ ಮತ್ತು ಕಾರಂತ’ ಲೇಖನದಲ್ಲಿ ತಿಳಿಸಲಾಗಿದೆ.   ‘ಸೇಡಿಯಾಪು: ಒಂದು ನೆನಪು’ ಲೇಖನದಲ್ಲಿ ಸೇಡಿಯಾಪು ಅವರ ಬರವಣಿಗೆಯನ್ನು ಸೃಜನಶೀಲ, ಶಾಸ್ತ್ರೀಯ ಮತ್ತು ವೈಯುಕ್ತಿಕ ನೆಲೆಯಲ್ಲಿ ಸ್ಥೂಲವಾಗಿ ಗುರುತಿಲಾಗಿದೆ.  ಆ ಪ್ರಖಾಂಡ ಪಂಡಿತನ ನೆನಪಿನಲ್ಲಿ ಕುಂಬ್ಳೆ ಬರೆದ ಭಾವನಾತ್ಮಕ ಕವನವನ್ನು ಅಳವಡಿಸಲಾಗಿದೆ. ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಬಿತ್ತರಗೊಂಡ ವಿಚಾರ ಲಹರಿಯ ಟಿಪ್ಪಣಿ ‘ವೃತ್ತ್ತಿ-ಪ್ರವೃತ್ತಿ’. ಡಾ. ನಾ ಮೊಗಸಾಲೆ, ಈಶ್ವರಯ್ಯ, ಚೊಕ್ಕಾಡಿ, ವೈದೇಹಿ,  ಮಾವಿನಕುಳಿ ಹೀಗೆ ಸಾಹಿತ್ಯ ಕಲಾ ಪ್ರಕಾರದ  ಪಂಚರನ್ನು ಪರಿಚಯಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಚುಟುಕು ಪ್ರಕಾರದ ಸ್ಥಾನ-ಮಾನ ಬಗೆಗಿನ ‘ಚುಟುಕು ಕನ್ನಡದ ಸ್ಫಟಿಕ’  ಅಧ್ಯಯನ ಯೋಗ್ಯ. ಕನ್ನಡ ಕಾವ್ಯ ಪ್ರಪಂಚವನ್ನು ಸಹೃದಯ ಭಾವ ಪ್ರಪಂಚಕ್ಕೆ ಧಾರೆಯೆರೆದ ಗಮಕಿ ಶಕುಂತಲಾಬಾಯಿ ಕುರಿತಾದ ಬರಹವೂ ರಸಾರ್ದ್ರವಾಗಿದೆ.  ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಫ್ರೊ.ವೇಣುಗೋಪಾಲ ಕಾಸರಗೋಡು ಗಡಿನಾಡಿನ ಎರಡು ಕಣ್ಣುಗಳು. ಸಾಹಿತ್ಯ ರಚನೆ ಮತ್ತು ಸಂಘಟನೆ, ಕನ್ನಡ ಹೋರಾಟಗಳಲ್ಲೂ ಬದುಕನ್ನು ಕಳೆದವರು. ಮಹತ್ವದ ಸಾಹಿತ್ಯ ಕೃತಿಗಳನ್ನು ರಚಿಸಿ ಅಖಿಲ ಕರ್ನಾಟಕದ ಗಮನ ಸೆಳೆದವರು. ಕಯ್ಯಾರರ ಶಿಶುಗೀತೆಗಳ ಬಗ್ಗೆ ಕುಂಬ್ಳೆಯವರು ಪರಾಮರ್ಶಿಸಿದ್ದಾರೆ. ಅದೇ ರೀತಿ ವೇಣುಗೋಪಾಲರ ‘ದೃಷ್ಟಿ ಮತ್ತು ಸೃಷ್ಟಿ’ಗಳ ಕುರಿತಾಗಿ ಹೊಸ ಬೆಳಕು ನೀಡಿದ್ದಾರೆ. ಔಚಿತ್ಯ ಪೂರ್ಣ ಮೌಲಿಕ ಬರಹಗಳಿವು.      ‘ನಾನು ಮತ್ತು ಆಕಾಶ’ ಪ್ರಕಟವಾದಾಗ ಡಾ.ಧನಂಜಯ ಕುಂಬ್ಳೆಯವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಸೇರಿ ಅದೇ ವೃತ್ತಿಯಲ್ಲಿ ಮುಂದುವರಿದರು. ಈಗ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಪ್ರಕೃತ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರು. ಬೋಧನೆ, ಶೋಧನೆ, ಸಂಘಟನೆ,  ಕಾರ್ಯಕ್ರಮಗಳ ಆಯೋಜನೆ, ನಿರೂಪಣೆ, ನಿರಂತರ ಸಾಹಿತ್ಯ ರಚನೆಯ ಮೂಲಕ ನಾಡಿನಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಲ್ಕು ಕವನ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ಕ್ಕಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಸುದೀರ್ಘ ಕಾಲದ ಅಧ್ಯಯನ ಮತ್ತು ಅನುಭವದಿಂದ ಅವರ ಮನಸ್ಸು ಪಕ್ವವಾಗಿದೆ. ದೇಹ ಪುಷ್ಟವಾಗಿದೆ. ಸ್ನೇಹ (ವಲಯ) ವಿಸ್ತಾರವಾಗಿದೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ನೀಡುವ ಶಕ್ತಿ ಅವರಿಗಿದೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ –

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಾಲಕ್ಕಿ ಕೋಗಿಲೆ ಮಾರ್ಚ್ ತಿಂಗಳಿನಲ್ಲಿ ಬರಹ ಓಡಾಟ ಎಂದುಕೊಂಡು ಸದಾ ಕೆಲಸದ ಒತ್ತಡದಲ್ಲಿದ್ದ ನನಗೆ ಒಮ್ಮೆಲೆ ಅನಿರೀಕ್ಷಿತವಾಗಿ ಕೋವಿಡ- 19 ನಿಂದಾಗಿ ಲಾಕ್ಡೌನ ಆದಾಗಿನಿಂದ ಮಾನಸಿಕ ಗೊಂದಲ.ಭಯದಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಸುಧಾರಿಸಿಕೊಳ್ಳಲು ಕೆಲವು ದಿನಗಳು ಬೇಕಾದವು.ಬಳಿಕ ನಾವೆಲ್ಲ ನಮ್ಮ ಆಸಕ್ತಿಗೆ ತಕ್ಕಂತೆ ಮನಸ್ಸು ಪ್ರಪುಲ್ಲಗೊಳಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅಕ್ಷತಾಕೃಷ್ಣಮೂರ್ತಿ ಅವರ ಹಾಲಕ್ಕಿ ಕೋಗಿಲೆ. ಮುಖಪುಟದಲ್ಲಿದ್ದ ಮುಗ್ಧ ನಗುವಿನ ಸುಕ್ರಜ್ಜಿಯನ್ನು ಕಂಡ ಮೇಲಂತೂ ಒಂಥರಾ ಖುಷಿ. ಇದಕ್ಕೆ ಒಂದು ತಿಂಗಳ ಮೊದಲಷ್ಟೆ ಬಡಗೇರಿಯ ಸುಕ್ರಜ್ಜಿಯವರ ಮನೆಯಂಗಳದಲ್ಲಿ ವೈಶಿಷ್ಟಪೂರ್ಣವಾಗಿ ಕವಿ ಕಥೆಗಾರ ಜಯಂತಕಾಯ್ಕಿಣಿಯವರು ಬಿಡುಗಡೆಗೊಳಿಸಿದ ಕೃತಿ ಇದು.ಆ ಬಿಡುಗಡೆಯ ಕ್ಷಣ ಮರೆಯಲಾಗದು.ನಿರಾಡಂಬರವಾದ ಸರಳ ಸಮಾರಂಭದಲ್ಲಿ ಅತ್ಯಂತ ಆತ್ಮೀಯ, ಪ್ರೀತಿಯ, ಒಂದು ರೀತಿಯಲ್ಲಿ ದಿವ್ಯ ಎನಿಸಬಹುದಾದ ವಾತಾವರಣದಲ್ಲಿಜಾನಪದ ಹಾಡುಗಾರ್ತಿಯರಾದ ಪದ್ಮಾವತಿ, ಕುಸಲಿ, ಲಲಿತಾ ಅವರ ಹಾಡಿನ ಹಿನ್ನೆಲೆಯಲ್ಲಿ ಜಯಂತಕಾಯ್ಕಿಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಸುಕ್ರಜ್ಜಿಯವರ ಕೈಗಿಟ್ಟ ಅಪರೂಪದ ಘಳಿಗೆಯಲ್ಲಿ ನಾನೂ ಪಾಲುದಾರಳಾಗಿದ್ದೆ. ಈ ಹಾಲಕ್ಕಿ ಹಾಡುಗಾರ್ತಿಯರ ಹೃದಯ ತುಂಬುವ ಮನಸ್ಸು, ಮುಖದಲ್ಲಿನ ಸಂತೃಪ್ತ ಭಾವ, ಜೀವನ ಪ್ರೀತಿ, ಪ್ರಾಮಾಣಿಕ ಪಾರದರ್ಶಕ ವ್ಯಕ್ತಿತ್ವ ಇತರರಿಗೆ ಮಾರ್ಗದರ್ಶನ ಎನಿಸುವಂತಹುದ್ದು.ಕನ್ನಡ ಜಾನಪದ ಸಾಹಿತ್ಯದ ವೈಶಿಷ್ಟಪೂರ್ಣ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪೂರ್ವವಾದದ್ದು.                       ನಾಡೋಜ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಲಕ್ಕಿ ಒಕ್ಕಲು ಬುಡಕಟ್ಟಿನ  ಸುಕ್ರಿ ಬೊಮ್ಮಗೌಡ ಅವರ ಜೀವನ ಪರಿಚಯಿಸುವ ಇಪ್ಪತ್ತೊಂದು ಲೇಖಕರ ಬರಹಗಳ ಗುಚ್ಛವೇ ಹಾಲಕ್ಕಿ ಕೋಗಿಲೆ. ಸುಕ್ರಜ್ಜಿ ಬದುಕಿನ ಶೈಲಿ, ಸರಳತೆ, ಜಾನಪದ ಜಗತ್ತಿಗೆ ಅವರ ಕೊಡುಗೆ, ಅವರ ಸಮಾಜಮುಖಿ ವ್ಯಕ್ತಿತ್ವ ಮುಂತಾದ ವಿಷಯಗಳ ಕುರಿತು ಹತ್ತಿರದಿಂದ ಸುಕ್ರಜ್ಜಿಯವರನ್ನು ಕಂಡ ಲೇಖಕರು ಸರಳ ಸುಂದರವಾಗಿ, ಆತ್ಮೀಯವಾಗಿ ತೆರೆದಿಟ್ಟಿದ್ದಾರೆ. ಇದು ಜಾನಪದದಲ್ಲಿ ಅರಳಿದ ಹೂವಿಗೆ ಸರಳವಾಗಿ ಸುಂದರವಾಗಿ ಸಂದ ಗೌರವವೆನಿಸುತ್ತದೆ. ಸುಕ್ರಜ್ಜಿಯ ಸಾಮಾಜಿಕ ಕಳಕಳಿ, ಔಷಧೀಯ ಸಸ್ಯಗಳ ಕುರಿತು ಜ್ಞಾನವು ತುಂಬ ಮಹತ್ವಪೂರ್ಣವಾದದ್ದು. ಸಾವಿರಗಟ್ಟಲೇ ಹಾಡುಗಳ ಧ್ವನಿಭಂಡಾರವಾದ ಸುಕ್ರಜ್ಜಿಗೆ ಅಕ್ಷತಾ ಅವರು ಬಳಸಿದ `ಧ್ವನಿದೂತೆ’ ಪದ ಮಾರ್ಮಿಕ ವೆನಿಸಿತು.             ಹಲವಾರು ಲೇಖಕರು ಸುಕ್ರಜ್ಜಿಯವರ ಕಷ್ಟದ ಜೀವನದ ಕ್ಷಣಗಳನ್ನು ಎಳೆಎಳೆಯಾಗಿ ಬಿಡಿಸುತ್ತ ಸುಕ್ರಜ್ಜಿಯವರ ಜಾನಪದ ಹಾಡುಗಳ ಧಾರೆಯಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ಸುಕ್ರಜ್ಜಿಯ ಪ್ರತಿಭೆ, ನಮ್ಮ ನಾಡಿನ ಹೆಮ್ಮೆಯಾಗಿ ಸುಕ್ರಜ್ಜಿ, ಜಾನಪದದ ಅಗಣಿತ ನಿಧಿಯಾಗಿ, ಲೋಕಸಿರಿಯಾಗಿ, ಕಲಾಸಿರಿಯಾಗಿ ಸುಕ್ರಜ್ಜಿಯ ಜೀವನ ಸುಂದರವಾಗಿ ಈ ಕೃತಿಯಲ್ಲಿ ಅನಾವರಣಗೊಂಡಿದೆ. `ನೀನೊಂದುಕೋಗಿಲೆಯೋ’ ಜನಪದ ಜಗದ ಬಾಗಿನವೋ’ ಎಂಬುದಾಗಿ ಹಿರೇಗುತ್ತಿಯವರು ರೂಪಕ ನೀಡಿರುವುದು ಉತ್ಫ್ರೇಕ್ಷೆ ಅನಿಸುವುದಿಲ್ಲ. ಸುಕ್ರಜ್ಜಿಯ ಸರಳ ಬದುಕು, ಪ್ರತಿಭೆ, ಸಮಾಜಮುಖಿ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ನಿಲ್ಲುವಲ್ಲಿ ಪ್ರಸ್ತುತ ಕೃತಿ ಪ್ರೇರಣೆಯಾಗಿ ನಿಲ್ಲುತ್ತದೆ. ಇಂತಹ ಅಮೂಲ್ಯಕೃತಿ ಲೋಕಾರ್ಪಣೆ ಮಾಡಿದ ಅಕ್ಷತಾಕೃಷ್ಣಮೂರ್ತಿ ಹಾಗೂ ಅವರ ವಿವರ ಕಟ್ಟಿಕೊಟ್ಟ ಲೇಖಕರಿಗೆ ವಂದನೆಗಳು.ಜೊತೆಗೆ ಈ ಕೃತಿಗೆ ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಸರಸ್ವತಿ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು. ************ ಡಾ. ಪ್ರೀತಿ ಭಂಡಾರಕರ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

“ಪಮ್ಮಿ” ಹನಿಗವಿತೆಗಳು ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮ‌ಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ‌ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ ಹೇಳಿಬಿಡುವುದು.ಕೊನೆಯಲ್ಲಿ ಪಂಚ್ ಇರಬೇಕು ಅಂತಾರ,ಅದು ಪದಗಳ ಮೂಲಕ ಇಲ್ಲಾ ಅರ್ಥದಲ್ಲಿ ಮೂಡಿಸುವ ಪಂಚ್ ಆದರೂ ಆಗಬಹುದು.ಒಟ್ಟಿನಲ್ಲಿ ಹನಿಯಲ್ಲಿ ಕಡಲು,ಕನ್ನಡಿಯಲ್ಲಿ ಕರಿ ಎಂಬಂತೆ ಮೂರು ನಾಲ್ಕೋ ಸಾಲಿನಲ್ಲೇ ಬ್ರಹ್ಮಾಂಡ ತೋರಿಬಿಡುವ ಶಕ್ತಿಯುಳ್ಳವು ಚುಟುಕುಗಳು.ಕೆಲವು ಗಂಭೀರ,ಕೆಲವು ಹಾಸ್ಯಭರಿತ, ಮತ್ತೆ‌ ಕೆಲವು ಜಟಿಲ,ಮತ್ತಷ್ಟು ಸರಳ,ಸರಾಗ ..ಹೀಗೆ ಧೊಪ್ಪೆಂದು ಆಗಸದಿಂದ ಗಟ್ಟಿ ಮಳೆಹನಿಯೊಂದು ಕಾರ್ಮೋಡ ಸೀಳಿಕೊಂಡು ಧರೆಗೆ ಬಿದ್ದಂತೆ. ” ಮೌನವೆಂದರೆ…ಮಾತಿಲ್ಲದ ಮನೆಯೇಮಾತುಬಾರದ ಮಗಳೆಇದ್ಯಾವುದೂ ಇಲ್ಲವಾದರೆ! ‌‌‌‌‌‌‌‌‌ ಮೌನವೆಂದರೆ…ಮುನಿಸಿಕೊಂಡಮಾತಿರಬೇಕು.”.. ದೇಸು ಆಲೂರು ಮಾತು ಮೌನದ ನಡುವಿನ ಸಂಬಂಧ ಮತ್ತು ವ್ಯತ್ಯಾಸವನ್ನು ಹೇಳುವ ಈ ಚುಟುಕು ದೇಸು ಆಲೂರು ಅವರದು.ಬಾಯಿ ತೆರೆದರೆ ಸಾಕು ಹಾಸ್ಯ ಚಟಾಕಿಗಳ ಹಾರಿಸುತ್ತಾ,ಎಲ್ಲರನ್ನೂ ನಗಿಸಿ,ತನ್ನ ಸುತ್ತಮುತ್ತ ಸದಾ ಉತ್ಸಾಹದ ಅಲೆಯನ್ನು ಮೂಡಿಸಿಕೊಂಡುಬಿಡುವ ಚುಟುಕು ಕವಿ ದೇಸು ಅವರು.ಶಾಲೆ ಕಾಲೇಜುಗಳಿಗಿಂತ ಭಿನ್ನವಾದ ಕಲಿಕೆಯನ್ನು ಜೀವನದುದ್ದಕ್ಕೂ ಕಲಿಯುತ್ತಾ ಬಂದಿರುವ ದೇಸು ಅವರು ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು.ದುಡಿಮೆಯನ್ನೇ ದೈವವಾಗಿಸಿ ಬದುಕುತ್ತಿರುವವರು. “ಪಮ್ಮಿ”.. ಹರಿಣಿ ಹೆಸರಿನ ಹೆಂಡತಿಯನ್ನು ಪಮ್ಮಿಯಾಗಿಸಿ,ಆಗಾಗ ತಮಾಷೆಗೆ ಡುಮ್ಮಿ ಎನ್ನುತ್ತಾ,ಸಮಯಕ್ಕೆ ತಕ್ಕಂತೆ ನೀನೀಗ ಎರಡು ಮಕ್ಕಳ ಮಮ್ಮಿ ಎನ್ನುತ್ತಲೂ ತಮ್ಮ ದಾಂಪತ್ಯ ಜಗತ್ತನ್ನು ತೆರೆದಿಡುವ ದೇಸು ಅವರ ಚುಟುಕುಗಳು ಕಚಗುಳಿಯಿಡುವ ಮಾತ್ರೆಗಳು.ಪಮ್ಮಿ ಸಂಕಲನದ ಬಹುಪಾಲು ಹನಿಗವನಗಳು ಹಾಸ್ಯದ ಪಟಾಕಿಗಳೇ. ” ತವರಿನಲ್ಲಿದ್ದನನ್ನಾಕೆಗೆ ಕಾಗದ ಬರೆದೆ..ಪ್ರಿಯೆ,ಈ ಓಲೆ ತಲುಪಿದತಕ್ಷಣನಿನ್ನ ಕ್ಷೇಮದ ವಿಚಾರತಿಳಿಸತಕ್ಕದ್ದುಅತ್ತ ಕಡೆಯಿಂದ ಕಾಗದಬಂತು..ರೀ….ನಿಮ್ಮ ಕಾಗದ ಸಿಕ್ಕಿದೆ,ಆದರೆ…ವಾಲೆ‌ ಮಾತ್ರ ಸಿಕ್ಕಿಲ್ಲ..” ಹೆಂಡತಿಯನ್ನು ಪೆದ್ದತನದಲಿ ಕಾಣಿಸುವ ಇವರ ಬಹಳಷ್ಟು ಚುಟುಕುಗಳು ಅವಳು ಮೊದ್ದು,ಪೆದ್ದು,ಮುದ್ದು,ಸಿಡುಕು,ಕ್ಯಾತೆ ತೆಗೆವಾಕೆ ಎನ್ನುತ್ತಲೇ ಅವಳಿಲ್ಲದೆ ಬಾಳಿಲ್ಲಾ.ಅವಳ ಮಾತು,ಮುನಿಸು,ಸಿಟ್ಟಿಲ್ಲದೆ ಇರಲಾಗುವುದಿಲ್ಲವೆಂಬ ಪ್ರೀತಿಯನ್ನೂ ತೋರುತ್ತದೆ. ” ಪಮ್ಮಿಗೂ..ನನಗೂ ನಿತ್ಯ ಕದನಕದನದಲ್ಲೂ ಹೊಳೆಯುವುದುನನ್ನವಳ ವದನ “ ಪಮ್ಮಿ ತುಂಬಾ ಒಳ್ಳೆಯವಳಂತೆ ಪಕ್ಕದ ಮನೆಯಾಕೆ ಹೇಳ್ತಿದ್ರು ಎನ್ನುವ ದೇಸು,ಮಡದಿಯನ್ನು ರೇಗಿಸುತ್ತಾ,ಕಿಚಾಯಿಸುತ್ತಾ,ನಗಿಸುತ್ತಾ ಇಬ್ಬರು ಮಕ್ಕಳೊಡನೆ ಬಾಳ ಕಡಲನ್ನು ನಗುತ್ತಲೇ ಈಜುತ್ತಿದ್ದಾರೆ‌. ‘ ಮಹಿಳೆ..ಮಧ್ಯದ ಅಕ್ಷರ ತೆಗೆದರೆ ಹೊಳೆ..ತೆಗೆಯದಿದ್ದರೆ ಮಹಿಳೆಮಳೆ ಪ್ರತೀ ಜೀವನಾಡಿಯ ಉಸಿರು..ಮಹಿಳೆ,ಗಂಡಿನ ಯಶಸ್ಸಿನ ಉಸಿರು.. “ ಎಂದೆನ್ನುತ್ತಾ ಪಮ್ಮಿಯೆ ಎಲ್ಲಾ ಎನ್ನುತ್ತಾರೆ. ” ಗತ್ತು..ಅದೇನು ಗತ್ತೇ ಹುಡುಗಿಆ ಮುಂಗುರುಳಿಗೆ..!ಬಾಚಿ ತಬ್ಬಿ ನಗುತಿದೆನಿನ್ನ ಕೊರಳಿಗೆ..” ” ಸಾಂಗತ್ಯ.. ಶೃಂಗಾರ ಸಂಗತ್ಯ,ನವರಸದ ನೇಪಥ್ಯಸಮರಸದ ದಾಂಪತ್ಯ, ಕಾಲನಿಗೂ ಅಭೇದ್ಯ..” ಎಂದು ದಾಂಪತ್ಯದ ಅರ್ಥ ತಿಳಿದವರು ದೇಸು.ಮಡದಿ,ಮಗಳ ಕಣ್ಣುಗಳೇ ಮನೆಯ ನಾಲ್ಕು ಕಣ್ಣುಗಳೆಂದು ಸಂಭ್ರಮಿಸಿ,ಸಂಬಂಧಗಳೇ ಸತ್ತ ಮೇಲೆ ಭಾವನೆಗಳಿಗೆ ಕೆಲಸವಿಲ್ಲವೆಂದು ಸಂಬಂಧಗಳ ಜೋಪಾನ ಮಾಡುವವರು. ” ಅಮ್ಮನ ಮಾತಿಗೆ ಮನಸು ನಗುತದೆಮುಂದೆ ಹೋಗುತಿಲ್ಲ ಅಪ್ಪನ ವಯಸ್ಸುಹತ್ತು ವರ್ಷದಿಂದ ಒಂದೇ ಮಾತುನಿಮ್ಮಪ್ಪನಿಗಿನ್ನೂ ಐವತ್ತು..” ಎನ್ನುತ್ತಲೇ ಅಗಲಿದ ಅಮ್ಮನನ್ನು ಆಕಾಶದ ಚುಕ್ಕಿಗಳಲ್ಲಿ ಕಾಣುತ್ತಾ,ಅಲ್ಲಿ ಚನ್ನಾಗಿರಮ್ಮಾ..ಇಲ್ಲಿ ನಾವು ಚನ್ನಾಗಿರುತ್ತೇವೆ ಎಂದು ಭಾವುಕರಾಗಿಬಿಡುತ್ತಾರೆ. ” ದೇಸು ಕನ್ನಡದ ಕೂಸು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಕನ್ನಡಮ್ಮನ ಮಗ,ಕನ್ನಡ ಸಾಹಿತ್ಯ ಸೇವೆಗೆ ಸದಾ ನಿಂತಿರುವ ಕನ್ನಡದ ಬಂಟ. ಏನಕ್ಕಾ ಸಮಾಚಾರ ಎಂದೆನ್ನುತ್ತಾ ಕಣ್ಣರಳಿಸಿ ನಗುಮೊಗದಲಿ ಎದುರಾಗುವ ಈ ತಮ್ಮನ ಮನೆ, ಮನ ಸದಾ ಹೀಗೇ ಸಂತಸದಿಂದಿರಲಿ..ಇವರಿಂದ ಇನ್ನಷ್ಟು ಮತ್ತಷ್ಟು ಹನಿಗವನಗಳೊಂದಿಗೆ ಗಂಭೀರ ಸೃಜನಶೀಲ ಸಾಹಿತ್ಯದ ಹಲವು ಪ್ರಕಾರಗಳ ಬೆಳೆ ಉಲುಸಾಗಿ ಬೆಳೆಯಲಿ. ” ಕಬ್ಬಿಗರೆದೆಯಲಿ ನಲಿದಿದೆಕನ್ನಡಹಿಗ್ಗಿದೆ ಕನ್ನಡ ಹಿರಿದಿದೆ ಕನ್ನಡಕನ್ನಡಿಗರ ಮನೆ ಮನದಲಿನೆಲೆಸಿದೆ ಕನ್ನಡ” ಕನ್ನಡಕ್ಕಾಗಿ ಮಿಡಿವ,ತುಡಿವ ದೇಸುರವರ ಕನ್ನಡ ಸೇವೆ ‌ನಿರಂತರವಾಗಲಿ. |******* ಸುಜಾತಾ ಲಕ್ಷ್ಮೀಪುರ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕಾನನದ ಸುಮ ಶ್ರೀ ಉಮೇಶ ಮುನವಳ್ಳಿಯವರ‘ಕಾನನದ ಸುಮ’ ಕವನ ಸಂಕಲನ. ಸಾಹಿತ್ಯ ನಿರ್ಮಾಣದ ಪರಮ ಉದ್ದೇಶ ಒಳ್ಳೆಯದನ್ನು ಹೇಳುವುದು, ಒಳ್ಳೆಯದನ್ನು ಮಾಡಲು ಪ್ರೇರೇಪಿಸುವುದು ಮತ್ತು ಮುಂದಿನವರಿಗೆ ಸಾಗಿಸಿ ಸಾಗುವುದು. ಸಾಹಿತ್ಯ ವಸ್ತು ಯಾವುದೇ ಇರಲಿ, ಅದರ ಹಿಂದೆ ನಿಸರ್ಗವಿರುತ್ತದೆ ಮತ್ತು ಜಗತ್ತು ಇರುತ್ತದೆಯೆಂಬುದನ್ನು ಮರೆತು ಬರೆದರೆ ಅಂಥ ಸಾಹಿತ್ಯಕ್ಕೆ ಭವಿಷ್ಯವಿರುವುದಿಲ್ಲ. ಕವಿತೆಯಲ್ಲಿ ಉತ್ತಮ ಕವಿತೆ, ಕೆಟ್ಟ ಕವಿತೆ ಎಂಬುದಿರುವುದಿಲ್ಲ, ಅದು ಕವಿತೆ ಹೌದೋ ಅಲ್ಲವೋ? ಎಂಬುದಷ್ಟೇ ಗಣನೆಗೆ ಬರುತ್ತದೆ. ಅದು ಹೌದಾದರೆ ಉತ್ತಮವಾಗಿಯೇ ಇರುತ್ತದೆ. ಯಾವುದಕ್ಕೂ ಕಮಿಟೆಡ್ ಆಗಿರದೆ ಸ್ವತಂತ್ರವಾಗಿರುವುದು ಉತ್ತಮ ಕವಿತೆಯ ಲಕ್ಷಣ. ಕವಿಯಾದವನು ಲೌಕಿಕ ಆಕರ್ಷಣೆಯಿಂದ ತನ್ನನ್ನು ಬಿಡಿಸಿಕೊಂಡು, ಸಹೃದಯ(ಓದುಗ)ನನ್ನೂ ಬಿಡಿಸಿ, ತನ್ನ ರಚನೆಯ ಕಡೆಗೆ ಸೆಳೆಯುತ್ತಾನಲ್ಲ ಅದೇ ಅವನ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಶ್ರೀ ಉಮೇಶ ಮುನವಳ್ಳಿ ಅವರ ‘ಕಾನನದ ಸುಮ’ ಕವನ ಸಂಕಲನವನ್ನು ಅವಲೋಕಿಸಿದಾಗ ಬಹಳ ಸಂತೋಷವಾಯ್ತು. ಪ್ರಾಥಃಸ್ಮರಣೀಯರಾದ ಹೊಸಗನ್ನಡ ಸಾಹಿತ್ಯ ಸಂಭೂತರೆನಿಸಿದ ಶ್ರೀ ಬಿ. ಎಂ. ಶ್ರೀ ಅವರು ಇಂಗ್ಲೀಷ ಪ್ರಾಧ್ಯಾಪಕರಾಗಿದ್ದು, ಕನ್ನಡ ಸಾಹಿತಿಗಳಾಗಿದ್ದರು. ಎರಡೂ ಭಾಷೆಗಳೂ ಅವರಿಗೆ ಇಷ್ಟ. “ಇವಳ ಸೊಬಗನವಳು ತೊಟ್ಟು ನೋಡಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ” ಎಂದು ಎದೆದುಂಬಿ ಹಾಡಿದವರು. ಅವರು ಒಂದೆಡೆ “ನಾನು ಇಂಗ್ಲೀಷನ್ನೇನು ಕಡಿಮೆ ಪ್ರೀತಿಸುವುದಿಲ್ಲ; ಆದರೆ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೇನೆ” ಎಂದು ಉದ್ಗಾರ ತೆಗೆದವರು. ಇದನ್ನು ಯಾಕೆ ಹೇಳಿದೆನೆಂದರೆ ಶ್ರೀ ಮುನವಳ್ಳಿಯವರ ಮಾತೃಭಾಷೆ ಕನ್ನಡ ಮತ್ತು ಅಧ್ಯಯನದ ಭಾಷೆ ಇಂಗ್ಲಿಷ. ಇವರಿಗೂ ಆ ತಾಕಲಾಟ ಅನುಭವಕ್ಕೆ ಬಂದಿರಲು ಸಾಕು. ಶ್ರೀ ಮುನವಳ್ಳಿಯವರು ‘ಬಿ. ಎಂ. ಶ್ರೀ’ ಯವರು ಬಳಸಿದ ‘ಸೊಬಗು’ ಮತ್ತು ‘ತೊಡಿಗೆ’ ಪದಗಳನ್ನು ಪ್ರತಿಮೆಯಾಗಿ ಅರಿತು ಬರೆಯಲೆಂದು ಮನವಿ.[2:20 pm, 19/06/2020] UMESH MUNAVALLY: ‘ಕಾನನದ ಸುಮ’ ಕವನ ಸಂಕಲನಕ್ಕೆ ಕವಿಯ ಮಡದಿಯೇ ಮುನ್ನುಡಿ ಬರೆದುದು ಸಾಹಿತ್ಯ ಕ್ಷೇತ್ರಕ್ಕೆ ಹೊಸತು. ಅವರು ಮುನ್ನುಡಿಗೆ ಕೊಟ್ಟ ಶೀರ್ಷಿಕೆ ; “ನಿನ್ನ ಕವಿತೆಗೆ ನಾನೇ ಮುನ್ನುಡಿ” ಎಂಬುದು ಒಂದು ಅಧ್ಭುತ ಪ್ರತಿಮೆಯಾಗಿದೆ! ಶ್ರೀ ಮುನವಳ್ಳಿಯವರು ರಚಿಸಿರುವ, ರಚಿಸಲಿರುವ ಎಲ್ಲ ಸಾಹಿತ್ಯಕ್ಕೂ ಅವರೇ ಪ್ರತಿಮೆ ಮತ್ತು ಮತ್ತು ಪ್ರತೀಕವೆಂದರೆ ತಪ್ಪಾಗಲಾರದು. ಈ ಸಂಕಲನದ ‘ಋತು’ ಕವನ ಪ್ರತಿಮೆಗಳ ಸರಮಾಲೆ! ‘ನಿನ್ನ ಹಾರೈಕೆ’ ಯಲ್ಲಿ ಬಳಸಿದ ‘ಇತಿಹಾಸದ ಮಸಣ’ ಸುಂದರ ಪ್ರತೀಕ. ಮನುಷ್ಯನ ಬಾಳಿಗೆ ನಂಬಿಕೆ ಬಹಳ ಮುಖ್ಯ, ಇತರರನ್ನು ನಂಬುವ ಮೊದಲು ತನ್ನನ್ನು ನಂಬಬೇಕು, ನಂಬಿಕೆಯು ಬಾಳಿಗೊಂದು ಭರವಸೆ. ಈ ಮಾತಿಗೆ ಪ್ರತೀಕದಂತಿವೆ “ನನಗೂ ಒಬ್ಬ ಗೆಳೆಯ ಬೇಕು”, “ಬಾಳ ಕವಿತೆ”, ಮತ್ತು “ಸ್ಪಟಿಕದಂತೆ ಸ್ಪಷ್ಟ” ಕವಿತೆಗಳು. ಶ್ರಂಗಾರಭರಿತ ರಸಭರಿತ ಕಾವ್ಯದಂತಿದೆ “ಹೆಣ್ಣು” ಕವಿತೆ. ಕವಿತೆ, ಪ್ರಾಮಾಣಿಕ ಸಂವೇದನೆಯನ್ನು ಹೊರಹಾಕುವ ಒಂದು ಸೃಜನಶೀಲ ಕ್ರಿಯೆ. ಮೊಗ್ಗೊಂದು ಅರಳಿ ಹೂವಾಗಿ ಚಲುವನ್ನೂ ಸುಗಂಧವನ್ನೂ ಹೊರಸೂಸುವಂತೆ. ಸಿಂಪಿಗ ಬಟ್ಟೆಯನ್ನು ಕತ್ತರಿಸುವ ಪೂರ್ವದಲ್ಲಿ ತನಗೆ ಸಮಾಧಾನ ಆಗುವವರೆಗೆ ಅಳತೆ ತೆಗೆದುಕೊಳ್ಳುತ್ತಾನೆ. ಹಾಗೆಯೇ ಕವನ ರಚನೆಯ ಪೂರ್ವದಲ್ಲಿ ಕವಿ ಹಲವು ದಿಸೆಯಲ್ಲಿ ಯೋಚಿಸಬೇಕು. ಈ ಸಂಕಲನದ ಕೆಲವು ವಾಚ್ಯಾರ್ಥದ ಮತ್ತು ಉಪದೇಶಾತ್ಮಕ ಕವನಗಳನ್ನು ಬಿಟ್ಟರೆ ಉಳಿದೆಲ್ಲ ಕವನಗಳು ಉತ್ತಮವಾಗಿವೆ. ಓದುಗನನ್ನು ಚಿಂತನೆಗೆ ತೊಡಿಸುತ್ತವೆ. ಪ್ರಕೃತಿಯ ಒಮ್ಮೆ ಬನಶಂಕರಿಯಾದರೆ ಪ್ರಸಂಗ ಬಂದರೆ ರಣಭಯಂಕರೀಯೂ ಆಗುತ್ತಾಳೆ. ಹೊಲದಲ್ಲಿ ಬೆಳೆಯ ಜೊತೆ ಕಳೆಯೂ ಬೆಳೆಯುತ್ತದೆ. ರೈತ ಕಳೆ ತೆಗೆದು ಬೆಳೆ ನಳನಳಿಸುವಂತೆ ಮಾಡುತ್ತಾನೆ. ಹಾಗೆಯೇ ಸಮಾಜದಲ್ಲಿ ಒಳ್ಳೆಯದರ ನಡುವೆ ಕೆಟ್ಟದ್ದೂ ಇರುತ್ತದೆ, ಕವಿಯಾದವನು ಅದನ್ನು ಎದುರಿಸಬೇಕು. ಮನ ಮಿಡಿದಾಗ ಧ್ವನಿಯ ಅಲೆಗಳೇ ಕವನಗಳಾಗಿ ಮೂಡಿಬರುತ್ತವೆ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಾಗಿಲು ತೆರೆಯೇ ಸೇಸಮ್ಮ ಬಾಗಿಲು ತೆರೆಯೇ ಸೇಸಮ್ಮವೈಚಾರಿಕ ಲಲಿತ ಪ್ರಬಂಧಗಳುಲೇಖಕರು- ಶರತ್ ಭಟ್ ಸೇರಾಜೆಅಂಕಿತ ಪುಸ್ತಕ ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ. ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ. ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ. ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ. ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ. ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ. ಬಾಗಿಲು ತೆರೆಯೇ ಸೇಸಮ್ಮ – ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ. ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ. ಲೆಕ್ಕ ಹಾಕಿ ಸುಳ್ಳು ಹೇಳಿ – ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ. ಕಾರಂತಜ್ಜನ ಕಥೆಗಳು – ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ. ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.******* ಡಾ.ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಪುಸ್ತಕ: ಫೂ ಮತ್ತು ಇತರ ಕಥೆಗಳು ಲೇಖಕರು: ಮಂಜುನಾಯಕ ಚಳ್ಳೂರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರಾದ ಮಂಜುನಾಯಕ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿತು ಕೆಲಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸೃಜನಶೀಲ ಲೇಖಕರಾದ ಮಂಜುನಾಯಕ ಅವರ ಮೊದಲ ಕಥಾ ಸಂಕಲನ ಇದು. ಇಲ್ಲಿನ ಫೂ, ಖತಲ್ ರಾತ್ರಿ ಹಾಗೂ ತೇರು ಸಾಗಿತಮ್ಮ ನೋಡಿರೆ ಎಂಬ ಮೂರು ಕಥೆಗಳಿಗೆ ೨೦೧೮ರ ಟೊಟೊ ಯುವ ಪುರಸ್ಕಾರ ಲಭಿಸಿದೆ. ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿರುವ ಈ ಕಥಾ ಸಂಕಲನದಲ್ಲಿ ಒಟ್ಟು ೭ ಕಥೆಗಳಿವೆ. ವೈವಿಧ್ಯಮಯ ಕಥಾವಸ್ತುಗಳು, ಪಾತ್ರಗಳ ಮೂಲಕ ಇಲ್ಲಿನ ಕಥೆಗಳು ಓದುಗರನ್ನು ಸೆಳೆದುಬಿಡುತ್ತವೆ. ಈ ಪುಸ್ತವನ್ನ ಓದಿ ಮುಗಿಸುವಾಗ ಖುಷಿಯೊಂದು ಮನಸ್ಸನ್ನು ಆವರಿಸಿಕೊಂಡಿತ್ತು. ಈ ಕಥೆಗಳು ನಮ್ಮನ್ನು ಕೂಡ ಬಿಸಿಲ ಸೀಮೆಗೆ ಕರೆದೊಯ್ಯುತ್ತವೆ. ಅಲ್ಲಿನ ಜನರ ಬದುಕನ್ನು ಪರಿಚಯಿಸುತ್ತದೆ. ಇಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ ಉತ್ತರ ಕನ್ನಡ ಭಾಷೆಯನ್ನು ಬಳಸಲಾಗಿದೆ. ಮೊದಲ ಕಥೆ ‘ಫೂ’ ಅಲ್ಲಿ ಕುಟುಂಬದೊಳಗೆ ಹೆಣ್ಣಿನ ಮೇಲೆ ನಡೆಯುವ ಹಿಂಸೆಯನ್ನು ಪದರ ಪದರವಾಗಿ ತಿಳಿಸಲಾಗಿದೆ. ಚಿಕ್ಕ ಹುಡುಗನ ನಿರೂಪಣೆಯಂತು ಮನಸನ್ನು ತಟ್ಟುತ್ತದೆ ಅವಿವಾಹಿತಳಾದ ಜಯತ್ತೆಯ ಪಾತ್ರವಂತು ಮನದಲ್ಲಿ ಉಳಿದುಬಿಡುತ್ತದೆ. ಎಲ್ಲ ಕಷ್ಟಗಳನ್ನೂ ಅಣ್ಣ ಅತ್ತಿಗೆಯರ ಚುಚ್ಚುಮಾತುಗಳನ್ನು ಸಹಿಸಿಕೊಂಡೇ ಬರುವ ಜಯತ್ತೆ, ಪುಟ್ಟ ಬಾಲಕನೊಡನೆ ಆಕೆಯ ಒಡನಾಟ ತಾಯಿ ಮಗುವಿನಂತಿರುತ್ತದೆ. ‘ನನ ಹೊಟ್ಯಾಗ್ ಹುಟ್ಟೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ” ಎಂಬ ಮಾತಿನಲ್ಲಿ ಅಳಿಯನ ಮೇಲಿನ ಮಮತೆ ವಾತ್ಸಲ್ಯಗಳನ್ನು ಗಮನಿಸಬಹುದು. ಜಯತ್ತೆ ಎಂದರೆ ತನಗೆ ಜೀವ ಎಂದೂ ಆಕೆಯ ಬಾಯಲ್ಲಿ ಕಾಮನಬಿಲ್ಲಿತ್ತು ಎಂದು ಹೇಳುವ ಹುಡುಗ, ಅತ್ತೆ ಬಾಯಲ್ಲಿ ನೀರು ತುಂಬಿಕೊಂಡು ಬಿಸಿಲಿಗೆ ಮುಖ ಮಾಡಿ ಫೂ ಮಾಡುವಾಗಲೆಲ್ಲ ಮೂಡಿ ಬರುವ ಕಾಮನಬಿಲ್ಲನ್ನು ಕಂಡು ವಿಸ್ಮಯಗೊಳ್ಳುವ ಮುಗ್ಧ ಹುಡುಗ ತುಂಬ ಇಷ್ಟವಾಗಿಬಿಡುತ್ತಾನೆ. ಇಲ್ಲಿನ ಜಯತ್ತೆಯ ಪಾತ್ರವು ವೈದೇಹಿ ಅವರ ‘ಜಾತ್ರೆ’ ಸ್ಮೃತಿ ಕಥನದಲ್ಲಿ ಬರುವ ‘ಮಂಜತ್ತೆ’ಯ ಪಾತ್ರವನ್ನು ನೆನಪಿಸುತ್ತದೆ. ‘ಖತಲ್ ರಾತ್ರಿ’ ಕಥೆಯಲ್ಲಿ ಮೊಹರಂ ದೇವರುಗಳ ಕೊನೆಯ ರಾತ್ರಿಯೇ ಖತಲ್ ರಾತ್ರಿ. ಜಾತಿ ಧರ್ಮಗಳನ್ನು ಮರೆತಯ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬದ ಸಂಭ್ರಮವಿದೆ. ಜೊತೆಗೇ ಮಕ್ಕಳಲ್ಲಿ ಅಗಲಿದ ಅಪ್ಪನ ನೆನಪುಗಳಿವೆ. ಸಂತೋಷದ ಮಧ್ಯೆಯೇ ನೋವಿನ ಎಳೆಯೊಂದು ಗೋಚರಿಸುತ್ತದೆ. ‘ತೇರು ಸಾಗಿತಮ್ಮ ನೋಡಿರೆ’ ಕಥೆಯಲ್ಲಿ ಶ್ರೀಶೈಲ ಎಂಬ ಹುಡುಗನ ಹೃದಯವಿದ್ರಾವಕ ಕಥೆಯಿದೆ. ಓದಲು ಬುದ್ಧಿವಂತನಾದ ಆತನಿಗೆ ಭಜನೆಯ ಮೇಲೆ ಅಪಾರ ಆಸಕ್ತಿ. ಶಾಲೆ ಬಿಟ್ಟ ಮೇಲೆ ಶರಣಪ್ಪನಿಂದ ಸಾಧ್ಯವಾದಷ್ಟೂ ಭಜನೆಗಳನ್ನು ಕಲಿತು ಹಾಡುತ್ತಿದ್ದ. ಶರಣಪ್ಪ ಹುಡುಗನಿಗೆ ಪ್ರೀತಿಯ ಕಕ್ಕಪ್ಪನಾಗಿದ್ದ. ಕಕ್ಕಪ್ಪನ ಸಾವು ಶ್ರೀಶೈಲನ ಬದುಕಿನ ಮೇಲೆ ಮಾಡಿದ ದಟ್ಟ ಪರಿಣಾಮಗಳನ್ನು ವಿವರಿಸಲಾಗಿದೆ. ಸಮಾಜದ ಕಣ್ಣಿಗೆ ಹುಚ್ಚನಂತೆ ಕಾಣುವ ಮಗನ ಬಗ್ಗೆ ತಾಯಿಯ ದುಃಖ ಸಂಕಟಗಳಿವೆ. ‘ವಜ್ರಮುನಿ’ ಕಥೆಯಲ್ಲಿ ಕೆಟ್ಟ ಚಟಕ್ಕೆ ಬಲಿಯಾಗಿ ಇದ್ದದ್ದನ್ನೆಲ್ಲ ಕಳಕೊಂಡು ಕೆಲಸಕ್ಕೂ ಹೋಗದೆ ತನ್ನ ಜವಾಬ್ದಾರಿಗಳ ಕಡೆ ಗಮನ ಹರಿಸದೆ ಮಕ್ಕಳೊಂದಿಗೆ ಆಡುತ್ತಾ, ಕಾಲ ಬದಲಾದರೂ ತನ್ನ ನೆನಪುಗಳಲ್ಲೇ ಮೈಮರೆತಿರುವ ಭಗವಂತ ಊರವರ ದೃಷ್ಟಿಯಲ್ಲಿ ವಜ್ರಮುನಿಯಾದ ಕಥೆ ಹೇಳುತ್ತಾರೆ. ‘ಕನಸಿನ ವಾಸನೆ’ ಕಥೆಯಲ್ಲಿ ಮಿರ್ಚಿ ರಂಗಮ್ಮನ ಪಾತ್ರ ಗಮನಾರ್ಹವಾಗಿದೆ. ಲಚುಮನಿಗೆ ತನ್ನ ತಪ್ಪಿನ ಅರಿವಾಗಿ ಮನ ಪರಿವರ್ತನೆಗೊಂಡು “ತಪ್ಪಾತಾ ನಮವ್ವಾ” ಎಂದು ರಂಗಮ್ಮನಲ್ಲಿ ಕ್ಷಮೆಯಾಚಿಸಿ ಅವಳ ಮಡಿಲಲ್ಲಿ ಮಗುವಾಗಿ ಮಲಗುವ ಚಿತ್ರಣ ಅಪ್ಯಾಯಮಾನವಾಗಿದೆ. ‘ಪಾತಿ’ ಕಥೆಯಲ್ಲಿ ಬಾಲ್ಯದಿಂದ ಹದಿಹರೆಯದವರೆಗೆ ಜೊತೆಗೆ ಆಡಿಬೆಳೆವ ಮಕ್ಕಳ ಸಂಭ್ರಮ ಓದುಗರನ್ನೂ ತಮ್ಮ ಬಾಲ್ಯವನ್ನು ನೆನಪಿಸುವಂತೆ ಮಾಡುತ್ತದೆ. ಮತ, ವರ್ಣ ಬೇಧಗಳಿಲ್ಲದೆ ಹುಟ್ಟಿ ಬೆಳೆವ ಸ್ನೇಹ. ಮುಗಿಯದ ಮಾತು, ನಿಸ್ವಾರ್ಥ ಪ್ರೀತಿ, ಪರಸ್ಪರ ರೇಗಿಸುವಿಕೆ ಜಗಳ, ಮುನಿಸು, ರಾಜಿ ಕೋಪಗಳು ಅವರ ಸ್ನೇಹದ ಸಂಬಂಧವನ್ನು ಗಟ್ಟಿಗೊಳಿಸುತ್ತಿತ್ತು. ಈ ಕಥೆ ಓದಿ ಮುಗಿಸಿದಾಗ ಫಾತಿಮಳಂಥ, ಆಕೆಯ ಗೆಳೆನಂಥ ಸ್ನೇಹಿತರು ಇರಬೇಕೆಂದು ಅನಿಸಿಬಿಡುತ್ತದೆ.‘ಮಿಂಚುಹುಳ’ದ ಬಗ್ಗೆ ಕಲ್ಪನೆಯಲ್ಲಿ ಮೂಡಿದ ಕಥೆಯನ್ನೂ ಹೇಳುತ್ತಾರೆ. ಇದರಲ್ಲಿ ಲೇಖಕರ ಕಲ್ಪನೆಯಿಂದಲೇ ಕಥೆ ಕಟ್ಟುವ ರೀತಿಯನ್ನು ಗಮನಿಸಬಹುದು. ಇವರ ಕಥೆಯಲ್ಲಿ ಬಡತನದ ಬದುಕು, ಮುಗ್ಧ ಜನರ ಆಲೋಚನೆಗಳು, ಧಾರ್ಮಿಕ ನಂಬಿಕೆಗಳು, ಮಕ್ಕಳ ಮನದಲ್ಲಿ ಮೂಡುವ ಅದ್ಭುತ ಕಲ್ಪನೆಗಳು, ಹದಿಹರೆಯದವರ ಸಂಭ್ರಮ, ಆತ್ಮೀಯರ ಅಗಲುವಿಕೆಯಿಂದಾಗುವ ಪರಿಣಾಮಗಳು , ಎದುರಾಗುವ ಕಷ್ಟಗಳು, ಕುಟುಂಬದೊಳಗೆ ಹೆಣ್ಣಿಗಾಗುವ ಹಿಂಸೆ ಮನುಷ್ಯ ಸಂಬಂಧಗಳು, ಭಾವನಾತ್ಮಕ ವಿಚಾರಗಳನ್ನು ಎಲ್ಲವನ್ನು ಸಮರ್ಥವಾಗಿ ಕಥೆಗಳಲ್ಲಿ ಕಟ್ಟಿಕೊಡುತ್ತಾರೆ. ಇವರ ಬರಹ ತುಂಬ ಆಪ್ತವಾಗಿದ್ದು ನಿರೂಪಣೆಯ ಶೈಲಿಯೂ ಭಿನ್ನವಾಗಿದೆ. ಓದುಗರನ್ನೂ ತಮ್ಮ ಲೋಕಕ್ಕೆ ಕೊಂಡೊಯ್ಯುವ, ಓದಿ ಮುಗಿಯುವವರೆಗೆ ಅಲ್ಲೇ ಹಿಡಿದಿಡುವ ಶಕ್ತಿ ಈ ಕಥೆಗಳಿಗಿವೆ. ಇವರ ಬರವಣಿಗೆ ನಿರಂತರವಾಗಿ ಸಾಗುತಿರಲಿ, ಇನ್ನಷ್ಟು ಕಥೆಗಳು ಓದುಗರನ್ನು ತಲುಪಲಿ. ಸಾಹಿತ್ಯ ಲೋಕಕ್ಕೆ ಇಂಥ ಉತ್ತಮ ಕೃತಿಗಳನ್ನು ನೀಡುವಂತಾಗಲಿ. ****** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top