ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಕೂರಿಗಿ ತಾಳು

ಪುಸ್ತಕ ಪರಿಚಯ ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು.ಕಾವ್ಯವೆನ್ನುವುದು ಹುಡುಕಾಟವಲ್ಲ, ಅದೊಂದು ಮಿಡುಕಾಟ. ಕಾವ್ಯದಲ್ಲಿ ಮನರಂಜನೆ, ಶ್ರೀಮಂತಿಕೆ ಮತ್ತು ಉದಾತ್ತತೆ ಇರಬೇಕು. ಅದನ್ನು ಓದಿದವರು ಮೊದಲಿಗಿಂತ ಬೇರೆಯದ್ದೇ ವ್ಯಕ್ತಿತ್ವ ಹೊಂದಿದವರಾಗಿರಬೇಕು. ಅಂತಹ   ಕಾವ್ಯ ಶ್ರೇಷ್ಠ ಕಾವ್ಯ ಎನಿಸಿಕೊಳ್ಳುತ್ತದೆ .  ಕಾವ್ಯದಲ್ಲಿ ಭಾವದ ಅತೀ ಸಾಮಾನ್ಯತೆ ಇದ್ದರೆ ಅದು ಕಾವ್ಯದ ದೋಷ. ಇದರ ಸೀಮೋಲ್ಲಂಘನ ಮಾಡಬೇಕು. ಅಂತೆಯೇ ಕಾವ್ಯದಲ್ಲಿ ಅಲಂಕಾರ ಅತಿಯಾದರೆ ಅದೂ ಕೂಡ ದೋಷ. ಧ್ವನಿ ಅತಿಯಾದರೆ ಕಾವ್ಯದ ಪ್ರಭಾವ ಕುಗ್ಗುತ್ತದೆ. ಈ ವಾಸ್ತವತೆಯ ಅರಿವು ಪ್ರತಿಯೊಬ್ಬ ಕವಿಗೂ ಇರಲೇ ಬೇಕಾಗುತ್ತದೆ.                ಅತಿಯಾದ ಕಾವ್ಯಪ್ರೀತಿ ,ಭೂಮಿ ಪ್ರೀತಿ, ಮನುಷ್ಯ ಪ್ರೀತಿ ಹೊಂದಿರುವ ರಾಮಣ್ಣ  ಅಲ್ಮರ್ಸಿಕೇರಿಯವರು’ಕೂರಿಗೆ ತಾಳು’ ಅನ್ನುವ ವಿಶಿಷ್ಟವಾದ ಹಾಗು ಅಪ್ಪಟ ಗ್ರಾಮ್ಯ ಭಾಷೆಯ ಸೊಗಡು ಇರುವ ಕಾವ್ಯ ಸಂಕಲನ ಹೊರತಂದಿದ್ದಾರೆ. ಸಂಕಲನದ ಹೆಸರೇ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಿ.ರಾಮಣ್ಣ ಅಲ್ಮರ್ಸಿಕೇರಿಯವರ ಈ ಸಂಕಲನ ಅವರ ಅನುಭವ, ಕೃಷಿ ಬದುಕಿನ ಒಡನಾಟ, ತನ್ನೂರಿನ ಅದಮ್ಯ ಪ್ರೇಮ,ಭವಬಂಧನದ ರೀತಿನೀತಿಗಳನ್ನು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.ಕೊಯ್ದು,ಕೊರೆದು,ಕೂಡಿಟ್ಟುಒಕ್ಕಲಿಮಾಡಿ,ಸುಗ್ಗಿ ಮಾಡುತಹಂತಿ ಹಾಡು ಹಾಡಿಬಂಡಿಗೆ ಬಲವಾದ ಹೋರಿ ಹೂಡಿನೂರು ಚೀಲದ ಹಗೇವು ತುಂಬಿಸಿಗರ್ವದಿಂದ ಬೀಗುತ್ತಿದ್ದರು ನನ್ನೂರಿನ ಜನರು”ಅಂತ ತನ್ನೂರಿನ ಜನರ ಬಗ್ಗೆ ಅಭಿಮಾನದಿಂದ ಕವಿ ಹೇಳಿದ್ದಾರೆ. ಜನ್ಮಕ್ಕೆ ಕಾರಣನಾದ ಅಪ್ಪನೆಂದರೆ ಎಲ್ಲಾ ಮಕ್ಕಳಿಗೂ ಅಪ್ಯಾಯಮಾನ. ತೋಳುಗಳಲ್ಲಿ ಅಪ್ಪಿ ಬದುಕಿನಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ತಪ್ಪು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆ ಬೊಗಸೆಯಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು , ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ನಡೆಸಿದವನು, ಹೆಗಲ ಮೇಲೆ ಕೂರಿಸಿಗೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು, ಹೊಳೆಯಲ್ಲಿ ಈಜು ಕಲಿಸಿದವನು, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ಅಮ್ಮನಂತೆ ಸೇವೆ ಮಾಡಿದವನು ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ “ನಿನ್ನಂತ ಅಪ್ಪ ಇಲ್ಲಾ” ಅಂತ ಅನ್ನಿಸಿಕೊಂಡಂತಹ ಅಪ್ಪ ಕವಿಯ ಬದುಕಿನಲ್ಲು ಮಹತ್ವದ ಸ್ಥಾನ ಪಡೆದು ಗೆಳೆಯನಂತೆ, ತಾಯಿಯಂತೆ, ಗುರುವಂತೆ, ಮಾರ್ಗದರ್ಶಿಯಂತೆ, ಹಿತೈಷಿಯಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ತಂದವರು.ಮಗನಿಗಾಗಿ ಏನೆಲ್ಲಾ ಕಷ್ಟಪಟ್ಟ ಅಪ್ಪ ಕೊನೆಗೆ“ಹೂಡುವ ಎತ್ತು ಮಾರಿ ಮನೆಯ ಹೊಸ್ತಿಲುದಾಟುವಾಗ ಎಡವಿ ಬಿದ್ದು ನಿಟ್ಟುಸಿರು ಬಿಟ್ಟುಕಣ್ಣು ಮುಚ್ಚಿ ನನ್ನ ಮಗ ಚೆನ್ನಾಗಿ ಓದಬೇಕೇಂದುಕನವರಿಸುತ್ತಾ ಜೀವಬಿಟ್ಟ ಅಪ್ಪನಹತ್ತಾರು ಪ್ರಶ್ನೆಗಳಿಗೆಮಗ ಮಾತ್ರ ಉತ್ತರ”ಹೃದಯ ವಿದ್ರಾವಕ ಈ ಸನ್ನಿವೇಶ,ಸಂದರ್ಭ ಓದುಗರ ಮನಸ್ಸನ್ನು ಕರಗಿಸಿ ಕಣ್ತುಂಬಿಸಿ ಬಿಡುತ್ತದೆ.ಛಲಗಾತಿ ಗೆಳತಿಯೆಂದರೆ ಕವಿಗೆ ಪ್ರೀತಿಯ ಕಡಲು,ಚಂದ್ರಮಾನ ಬೆಳಕು ಚೆಲ್ಲಿದವಳು,ಎದೆ ಸೆಟೆದು ನಿಂತ ಛಲಗಾತಿ ಗೆಳತಿ , ಹೀಗೆಲ್ಲ ಇರುವ ಗೆಳತಿಗೆ ಹೀಗೆ ಹೇಳುತ್ತಾರೆ.ಬೆಳೆದು ಬೆಟ್ಟವಾಗಬೇಕೆಂಬಮಹದಾಸೆಯ ಕನಸು ಹೊತ್ತುನಡೆವ ಅವಳು ನಿಗಿನಿಗಿಕೆಂಡದಂತಹ ಸೂರ್ಯನಾಗುವಾಸೆಕಡುಕಷ್ಟ ಪೊರೆದು ಸುಖದೆಡೆಗೆಹೆಜ್ಜೆ ಹಾಕುವ ಗಳಿಗೆನಾ ಸಾಕ್ಷಿ ಆಗಬೇಕೆಂಬ ಆಸೆ ಹೊತ್ತವನು ಎಂದು ಬಯಸುತ್ತಾರೆ.ಜಾತಿ ಭೂತದ ಬಗ್ಗೆಯು ಕವಿಗೆ ತೀವ್ರ ಅಸಮಾಧಾನವಿದೆ.ಮುಗ್ಧಮನಸ್ಸುಗಳನ್ನು ಒಡೆಯುವ ಮತಾಂಧರನ್ನು ಕಂಡಾಗ ಕೆರಳಿ ಕೆಂಡವಾಗುವ ಕವಿಹಗಲೆಲ್ಲ ನಮ್ಮನ್ನಗಲದಹಾಲು ಬಾನುಂಡು ಅಕ್ಕರೆಯ ಮಾತಾಡಿದಿನವಿಡಿ ದುಡಿಸಿಕೊಂಡುಕತ್ತಲ ರಾತ್ರಿಯಲ್ಲಿ ಜಾತಿ ಲಾಬಿ ಮಾಡುವರಾಕ್ಷಸರನ್ನು ಕಂಡು ನಡುಗಿ ಹೋಗಿದ್ದೇನೆಎಂದು ಭೀತರಾಗಿ ಸ್ವಾರ್ಥ ಅವಕಾಶವಾದಿಗಳ ಕಂಡು ದಂಗು ಬಡಿದು ನಯವಂಚಕರ ವಂಚನೆಗೆ ರೋಸಿಹೋಗಿದ್ದಾರೆ.ಬರೀ ನಿರಾಸೆ,ಸಂಕಟ ನೋವು ಮಾತ್ರ ತೋರಿದೆ ಆಶಾವಾದಿಯಾಗುತ್ತಾ ಹೋಗುತ್ತಾರೆ. ಈ ಪ್ರಪಂಚದ ಎಲ್ಲಾ ದ್ವೇಷ, ಅಸೂಯೆ, ಸ್ವಾರ್ಥ,ಮೋಹ , ಮತ್ಸರ ಮಾಯವಾಗಿ, ಕೋಮುಗಲಭೆ,ಜಾತಿಸಂಘರ್ಷಗಳ ದುರಂತ ದೂರಾಗಿ ಪ್ರೀತಿ ,ಮಮತೆ ಮಾನವೀಯತೆ ಹೊಳೆಯಾಗಿ ಹರಿದುಅಣ್ವಸ್ತ್ರಗಳು ಸುಟ್ಟು ಬೂದಿಯಾಗಿಬಂದೂಕಿನ ಬಾಯಿಯ ಸದ್ದಡಗಿಯಾರಿಗೂ ಬೇಕಿಲ್ಲದ ಯುದ್ಧಗಳು ಕೊನೆಯಾಗಿ ಅನ್ನ ನೀರು ಅರಿವೆ ಅಕ್ಷರಸೂರು ಸರ್ವರಿಗೂ ಸಿಗುವಂತಾಗಲಿಎಂದು ಕವಿ ಆಶಿಸುತ್ತಾರೆ.ಮಾನವೀಯತೆ, ಮಾನವೀಯ ಜೀವ ಸೆಲೆ ಬತ್ತಿಹೋದ ವರ್ತಮಾನದ ಮರುಭೂಮಿಯಲ್ಲಿ ಮನುಷ್ಯ ಸಂಬಂಧಗಳನ್ನು ಹುಡುಕಿ ಕಾವ್ಯದ ಮೂಲಕ ಪ್ರೀತಿಯನ್ನು ಹಂಚಿ ಮನಸುಗಳ ಬೆಸೆಯುವ ಬಯಕೆ ಕವಿ ರಾಮಣ್ಣನವರದು .ಪ್ರತಿಯೊಬ್ಬ ಕವಿಯು ಪ್ರೀತಿ, ವಿಶ್ವಾಸ ಹಾಗೂ ಮನುಷ್ಯ ಪ್ರೀತಿಯನ್ನು ಎದೆಯಲ್ಲಿ ಕಾಪಿಟ್ಟುಕೊಳ್ಳುವ ಮನೋಧರ್ಮ ಹೊಂದಬೇಕಾಗಿದೆ ಎನ್ನುವ ಇವರ ವಿಶ್ವಪ್ರೇಮದ ಭಾವ ಆದರ್ಶ ಹಾಗೂ ಅನುಕರಣೀಯವಾಗಿದೆ.ದೀರ್ಘ ಕವಿತೆ ಬರೆಯುವ ಶಕ್ತಿ ಹೊಂದಿರುವ ಕವಿ ರಾಮಣ್ಣ ರವರಿಗೆ ಕಂಡುಕೊಂಡ ಎಲ್ಲವನ್ನೂ ಕವಿತೆಯಾಗಿಸುವ ತವಕ, ಹಾಗಾಗಿ ಕೆಲವೊಮ್ಮೆ ವಾಚ್ಯವಾಗುವ ಲಕ್ಷಣಗಳು ಕಂಡರೂ ಅವರ ಅನುಭವ, ನಿರಂತರ ಅಧ್ಯಯನ,ಕಾವ್ಯ ಶ್ರದ್ಧೆ, ಆಸಕ್ತಿ ಇವೆಲ್ಲವೂ ಅವರನ್ನು ಕವಿಯ ಸಾಲಿನಲ್ಲಿ ನಿಲ್ಲಿಸಲಡ್ಡಿ ಮಾಡದು.ಇವರ ಈ ಉತ್ಸಾಹ, ಧ್ಯಾನಸ್ಥತೆ, ಅಧ್ಯಯನ ಶೀಲತೆ ಮತ್ತಷ್ಟು ಹೆಚ್ಚಾಗಿ ಶ್ರೇಷ್ಠ ಕಾವ್ಯದ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ದಕ್ಕಲಿ ಎಂದು ಆಶಿಸುತ್ತೇನೆ. ****** ಎನ್ ಶೈಲಜಾ ಹಾಸನ

ಕೂರಿಗಿ ತಾಳು Read Post »

ಪುಸ್ತಕ ಸಂಗಾತಿ

ಮೌನಯುದ್ಧ

ಪುಸ್ತಕ ಪರಿಚಯ ಮೌನ ಯುದ್ದ(ಕವನಸಂಕಲನ) ಕವಿ: ಸುರೇಶ್ ಎಲ್. ರಾಜಮಾನೆ ಪ್ರಕಾಶನ: ವಿಶ್ವ ಖುಷಿ ಪ್ರಕಾಶನ, ನವನಗರ ಬಾಗಲಕೋಟ. ಪುಟಗಳು: 92  ಬೆಲೆ: 120/- ಪ್ರಕಟಿತ ವರ್ಷ: 2018 ಕವಿಯ ಸಂಪರ್ಕ ಸಂಖ್ಯೆ: 8105631055          ಗಂಭೀರ ಕಾವ್ಯಾಧ್ಯಯನ ಮೂಲಕ ನಿರಂತರ ಅನುಸಂಧಾನದಲ್ಲಿ ತೊಡಗಿ ಕಾವ್ಯ ರಚನೆ ಕೃಷಿಗೆ ಮುಂದಾಗಿರುವ ರನ್ನಬೆಳಗಲಿಯ ಯುವಕವಿ ಸುರೇಶ್ ರಾಜಮಾನೆಯವರು “ಸುಡುವ ಬೆಂಕಿಯ ನಗು” ಎನ್ನುವ ಕೃತಿಯನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಈಗ “ಮೌನಯುದ್ಧ”ದ ಮೂಲಕ ನಮ್ಮೊಂದಿಗೆ ಮಾತಿಗಿಳಿದಿದ್ದಾರೆ.          ಇಲ್ಲಿ ಕವಿ ಹೇಳುವಂತೆ ‘ನನ್ನ ಭಾವನೆಗಳೊಂದಿಗೆ ಮತ್ತೊಬ್ಬರ ಭಾವನೆಗಳನ್ನು ಮನಸ್ಸಿಗೆಳೆದುಕೊಂಡು ಮಾತಾಗುತ್ತೇನೆ, ಕವಿತೆಯ ಜೊತೆ ನಾನು ನಾನಾಗಿ ಹೋಗುತ್ತೆನೆ. ಭಾವವನ್ನು ಪ್ರೀತಿಸುವಷ್ಟೆ ಭಾವೊದ್ವೇಗವನ್ನು, ಸಂತೋಷವನ್ನು ಪ್ರೀತಿಸುವಷ್ಟೆ ಸಂಕಟವನ್ನು ಪ್ರೀತಿಸಬೇಕೆಂದು’ ಹೇಳುವ ಕವಿಯ ಮಾತು ಹೃದಯಸ್ಪರ್ಶಿಯಾಗಿದೆ. ‘ಬಾಚಿದಷ್ಟು ಅಗಲವಾದ ಹೆಗಲು ಬಗೆದಷ್ಟು ಭಾರವಾದ ಭಾವನೆಗಳ ಒಡಲು ನನ್ನ ಕವಿತೆ’ ಎನ್ನುವ ಕವಿ ಮನಸ್ಸು ‘ಅಂಗಳದಿ ಮಲ್ಲಿಗೆ ಬಾಡಿ ನಿಂತಿದೆ ಮೆಲ್ಲಗೆ ವಿಷದ ನೀರೆರೆದವರು ಯಾರು?’ ಎಂದು ಪ್ರಶ್ನಿಸುತ್ತದೆ. ‘ಬೆಳಗಲಿ ದೀಪ ಬಡವರ ಬಾಗಿಲಲಿ ಗುಡಿಸಲಿನಲಿ’ ಎಂದು ನಿರೀಕ್ಷಿಸುತ್ತದೆ.          “ಮೌನಯುದ್ಧ” ಕವನ ಸಂಗ್ರಹದಲ್ಲಿ ಓಟ್ಟು 56 ಕವಿತೆಗಳಿವೆ. ಕವಿ ಡಾ. ಟಿ. ಯಲ್ಲಪ್ಪ ಅವರ ಮೌಲಿಕವಾದ ಮುನ್ನುಡಿ ಹಾಗೂ ಗುರುಮಾತೆ ಲಲಿತಾ ಹೊಸಪ್ಯಾಟಿ ಅವರ ಬೆನ್ನುಡಿ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರ ನೋವು, ನಿರಾಶೆ, ಹಸಿವು, ಬಡತನ, ಪ್ರೀತಿ-ಪ್ರೇಮ ಹಾಗೂ ಮಾನವೀಯ ಸಂವೇದನೆಗಳು ಕವಿಯ ಜೀವನ ಸಂಗ್ರಾಮದ ಏರಿಳಿತಗಳು ಇಲ್ಲಿನ ಕವಿತೆಗಳ ವಸ್ತು-ವಿಷಯಗಳಾಗಿವೆ.           ವರಕವಿ ಬೆಂದ್ರೆ ಅವರ ಗಾಢ ಪ್ರಭಾವಕ್ಕೆ ಒಳಗಾದ ಎಲ್ಲಾರ್ ಸೂರ್ಯ ಅವರು ‘ನನ್ನೊಳಗಿನ ನಾನು’ ಕವಿತೆಯಲ್ಲಿ ಅಪ್ಪನ ಹಸಿವು ಬಡತನದ ನೆನಪುಗಳನ್ನು ಕವಿತೆಯಾಗಿ ಹಸಿರಾಗಿಸಿದ್ದಾರೆ. ‘ಮಗುವಿನ ನಗುವಿನ ಗೆದ್ದಷ್ಟು ಖುಷಿ ಹಸಿವಿನ ಹೊಟ್ಟೆಗೆ ಉಂಡಷ್ಟು ಖುಷಿ’ ಎನ್ನುವ ಕವಿ ನೈಜ ಬದುಕಿನ ವಾಸ್ತವಿಕತೆಯನ್ನು ಓದುಗರೆದುರು ಬಿಚ್ಚಿಡುತ್ತಾರೆ. ಹಾಗೆಯೇ ನೀರಾಭರಣ ಸುಂದರಿ, ಸ್ವರಭಾರ, ಹೊಟ್ಟೆಯೊಳಗಿನ ಉರಿ ಹಾಗೂ ನನ್ನವ್ವ ಕವಿತೆಗಳು ಓದುಗರನ್ನು ಚಿಂತನೆಗೆ ತೊಡಗಿಸುತ್ತವೆ.          ಸಾಮಾಜಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಕವಿಹೃದಯ “ಮೌನಯುದ್ಧ”ಕ್ಕೆ ಸಿದ್ಧವಾಗಿದೆ. ‘ಸಾಹಸ ಭೀಮ ಶಕ್ತಿಯನು ಸಾಗರವಾಗಿಸಿ ವಿಜಯದ ಕಹಳೆಯ ಮುಗಿಲ ಮುಟ್ಟಿಸಿ’ ಎನ್ನುವಲ್ಲಿ ಶಕ್ತಿಕವಿ ರನ್ನನ ಪ್ರಭಾವ ಎದ್ದು ಕಾಣುತ್ತದೆ.‍          ಕಾವ್ಯದ ಅಂತಃಸತ್ವವನ್ನು ಹೀರಿ ಮೌಲಿಕ ಕವಿತೆಗಳನ್ನು ಬರೆಯುವ ಕವಿ ಸುರೇಶ್ ರಾಜಮಾನೆಯವರಿಗೆ ಬರುವ ನಾಳೆಗಳಲ್ಲಿ ಉಜ್ವಲ ಭವಿಷ್ಯವಿದೆ. ************************ ಬಾಪು ಖಾಡೆ

ಮೌನಯುದ್ಧ Read Post »

ಪುಸ್ತಕ ಸಂಗಾತಿ

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು

ಪುಸ್ತಕ ವಿಮರ್ಶೆ ನಾಗರಾಜಹರಪನಹಳ್ಳಿ ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಕೃತಿ ಹಾಗೂ ಇನ್ನೊಂದು ಸಾರ್ವಜನಿಕರ ಕವಿ ಎಂದೇ ಹೆಸರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ `ನನ್ನ ಜನಗಳು ಮತ್ತು ಇತರೆ ಕವಿತೆಗಳು’. ಕನ್ನಡದಲ್ಲಿ ಬಹಳ ಮಹತ್ವದ ಎರಡು ಕೃತಿಗಳ ಹೆಸರು ಹೇಳಿ ಅಂತ ಯಾರಾದರೂ ನನ್ನ ಪ್ರಶ್ನಿಸಿದರೆ ನಾನು ಮೊದಲು ಹೇಳುವ ಕೃತಿಗಳ ಹೆಸರು `ಎದೆಗೆ ಬಿದ್ದ ಅಕ್ಷರ’, `ನನ್ನ ಜನಗಳು’ ಕವಿತಾ ಸಂಕಲನ. ಯಾಕೆ ಈ ಎರಡು ಕೃತಿಗಳು ಮಹತ್ವದವು ? ಯಾಕೆ ಈ ಕೃತಿಗಳನ್ನು ಓದಬೇಕು ? ಎಂಬುದಕ್ಕೆ ಒಂದಿಷ್ಟು ಹಿನ್ನೆಲೆ ಕಾರಣಗಳನ್ನು ನೋಡಬೇಕಾಗುತ್ತದೆ. ಹಾಗೆಯೇ ದೇವನೂರು ಮತ್ತು ಡಾ.ಸಿದ್ದಲಿಂಗಯ್ಯ ಇಬ್ಬರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರೆ, ದೇವನೂರು ನನ್ನ ಮೊದಲ ಉತ್ತರ. ಕಾರಣ ಇದೆ. ವಿವರಿಸುವೆ. ಇಬ್ಬರದೂ ಒಂದೊಂದು ದಾರಿ. ಇಬ್ಬರೂ ಬದುಕಿರುವಾಗಲೇ ಇತಿಹಾಸ ಸೃಷ್ಟಿಸಿದವರು. ಇಬ್ಬರಲ್ಲೂ ಅಗಾಧ ಪ್ರತಿಭೆ ಇದೆ. ಇಬ್ಬರೂ ಕರ್ನಾಟಕದ ಜನ ಜೀವನದ ಮೇಲೆ, ಶೋಷಿತರ ಮೇಲೆ, ದುಡಿಯುವ ಜನರ, ದಲಿತ ಸಮುದಾಯದ ಅಕ್ಷರಸ್ಥರ  ಆಲೋಚನೆಗಳ ಮೇಲೆ ಪ್ರಭಾವ ಬೀರಿದವರು. ಒಬ್ಬರು ಅಧಿಕಾರದ ಬೆನ್ನು ಹತ್ತಿದವರು. ಇನ್ನೊಬ್ಬರು ಅಧಿಕಾರ ಕೇಂದ್ರವೇ ತಮ್ಮ ಮನೆಯ ಬಳಿಗೆ ಬರುವಂತೆ ಬದುಕಿದವರು. ಮುಖ್ಯಮಂತ್ರಿಯೇ ಮನೆಬಾಗಿಲಿಗೆ ಬಂದು ಮಾತಾಡಿಕೊಂಡು, ಸಲಹೆ ಕೇಳಿಕೊಂಡು ಹೋಗುವಂತೆ ಬದುಕಿದವರು. ಒಬ್ಬರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಾತ್ವಿಕ ಕಾರಣಕ್ಕೆ ನಿರಾಕರಿಸಿದವರು. ಮತ್ತೊಬ್ಬರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಸ್ಥಾನವನ್ನು ಅಪ್ಪಿಕೊಂಡವರು. ಒಬ್ಬರು ಸಮಾಜದ ಮತ್ತು ಸರ್ಕಾರದ ನಡೆಗಳಿಗೆ ಪ್ರತಿಕ್ರಿಯಿಸುತ್ತಾ ಸಾಗಿದವರು. ಮತ್ತೊಬ್ಬರು ಎಲ್ಲಾ ಘಟನೆಗಳಿಗೂ ಪ್ರತಿಕ್ರಿಯಿಸಿದೇ ಮೌನಿಯಾದವರು. ಇದೆಲ್ಲಾ  ಸಿದ್ಧಲಿಂಗಯ್ಯ ಮತ್ತು ದೇವನೂರು ಸಮಕಾಲೀನರಿಗೆ ಗೊತ್ತಿದೆ. ಆದರೆ ಅವರ ನಂತರದ ತಲೆಮಾರಿಗೆ, ಇವತ್ತಿನ ಯುವ ಜನಾಂಗಕ್ಕೆ ಈ ಇಬ್ಬರು ಬರಹದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬಹುದು, ಆದರೆ ಅವರ ಬದುಕಿನ ದಾರಿಯ ಬಗ್ಗೆ, ನಿಲಯವುಗಳ ಬಗ್ಗೆ, ಸವೆಸಿದ ಬದುಕಿನ ವಿವರಗಳು ಗೊತ್ತಿರಲಿಕ್ಕಿಲ್ಲ.ಜೊತೆಗೆ  ಕೆಲ ಸಂಗತಿಗಳು ಮರೆತು ಹೋಗಬಾರದು ಎಂಬ ಕಾರಣಕ್ಕೆ ಇಲ್ಲಿ ಪ್ರಸ್ತಾಪಿಸುವೆ. ಕಾರಣ ನಮ್ಮ ಕಣ್ಣ ಮುಂದಿರುವ ಎರಡು ಭಿನ್ನ  ದಾರಿಗಳ ಆಯ್ಕೆಯಲ್ಲಿ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಇದ್ದರೆ ಒಳಿತು. ಇವತ್ತಿನ ಆಧುನಿಕ ಯುಗದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆವ  ಮನಸ್ಥಿತಿಯಲ್ಲಿ ಕಠಿಣ ಹಾದಿಯನ್ನು, ಆದರ್ಶದ ಮೌಲ್ಯದ ಹಾದಿಯನ್ನು ಹಿಡಿಯುವವರು ಎಷ್ಟು ಜನ ಇದ್ದಾರೆ ? ಯಾರಿಗೆ ಬೇಕಾಗಿದೆ ಕಠಿಣ ಹಾದಿ ?  ಈಗ ಕಠಿಣ ಹಾದಿ ಬೇಕೋ,  ಅವಕಾಶವಾದಿ ದಾರಿ ಬೇಕೋ ಎಂಬ ನಿರ್ಣಯ ಹೊಸ ತಲೆಮಾರಿಗೆ ಬಿಟ್ಟದ್ದು. ದೇವನೂರು ಮಹಾದೇವ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೧ರಲ್ಲಿ. ಅವರ ನೀಳ್ಗತೆ ಒಡಲಾಳ ಎಂ.ಎ.ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಹಸಿವು ಮತ್ತು ಆಸ್ತಿತ್ವದ ಪ್ರಶ್ನೆಯನ್ನು ಕಟ್ಟಿಕೊಡುವ ಹಾಗೂ ದಲಿತರ ಹಸಿವಿನ ಹೋರಾಟವನ್ನು ಒಡಲಾಳದ  ಸಾಕವ್ವನ ಧ್ವನಿಯ ಮೂಲಕ ಕಟ್ಟಿಕೊಡುವ ಲೇಖಕ ಹೊಸ ಲೋಕವನ್ನು ಕನ್ನಡಿಗರ ಮುಂದೆ ಇಟ್ಟಿದ್ದರು. ಇದಕ್ಕೂ ಮುನ್ನ ದ್ಯಾವನೂರು ಕಥಾ ಸಂಕಲನ ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿತ್ತು. ಕುಂಬಾರ ವೀರಭದ್ರಪ್ಪನವರು ಆ ಹೊತ್ತಿಗಾಗಲೇ ದಲಿತರ ಹಸಿವಿನ ಕತೆಯನ್ನು ಠೊಣ್ಣಿ  ಮತ್ತು ಕತ್ತಲನು ತ್ರಿಶೂಲ ಹಿಡಿದ ಕತೆ ಹಾಗೂ  ಇತರ ಕತೆಗಳಲ್ಲಿ ಕಟ್ಟಿಕೊಟ್ಟಿದ್ದರು. ಕುಂವೀ ಕತೆಗಳಲ್ಲಿ ಬರುವ ಆಕ್ರೋಶ, ದೇವನೂರು ಕತೆಗಳಲ್ಲಿ ಭಿನ್ನವಾಗಿದ್ದರೂ, ಭಾಷಾ ಬಳಕೆ ಮತ್ತು ಕತೆ ಕಟ್ಟುವ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಿಂದ ದ್ಯಾವನೂರು ಕತೆಗಳು ಕನ್ನಡದಲ್ಲಿ ಮೈಲಿಗಲ್ಲಾದವು. ದೇವನೂರು ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯಂತೂ ಕನ್ನಡ ಬರುವವರೆಲ್ಲಾ ಓದಲೇ ಬೇಕಾದ ಕೃತಿ. ಎದೆಗೆ ಬಿದ್ದ ಅಕ್ಷರದಲ್ಲಿ ಬರುವ ಆರಂಭದ  ಲೇಖನಗಳಾದ  ನಾನು ಚಿತ್ರಿಸಿದಂತೆ ನನ್ನ ದೇವರು, ನನ್ನ ದೇವರು, ಮನವ ಕಾಡುತಿದೆ, ದಯೆಗಾಗಿ ನೆಲ ಒಣಗಿದೆ, ಮೂರ್ಛಾವಸ್ಥೆಯಲ್ಲಿ ಕಾರುಣ್ಯ, ಕೇವಲ ಮನುಷ್ಯನಾಗುವುದೆಂದರೆ, ಅಸ್ಪೃಶ್ಯತೆ ನಿನ್ನ ಮೂಲ ಎಲ್ಲಿ? ಎಂಬ ಪುಟ್ಟ ಪುಟ್ಟ ಬರಹಗಳನ್ನು ಓದಲೇ ಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು…ಎಂಬ ಆಶಾವಾದ ದೇವನೂರು ಅವರದು. ನನ್ನದು ಕೂಡಾ.  ಅತ್ಯಂತ ಕಡಿಮೆ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇವನೂರು ಭಾರತೀಯ ಸಾಹಿತ್ಯಕ್ಕೆ ಹೆಸರು ತಂದು ಕೊಟ್ಟಿದ್ದರು. ಮೈಸೂರಿನ ಸಿಐಐಎಲ್ ನಲ್ಲಿ ಕೆಲಸ ಮಾಡುತ್ತಿದ್ದ ದೇವನೂರು ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವುದಿಲ್ಲವಾದರೆ, ಅಧ್ಯಕ್ಷತೆ ವಹಿಸಿ ಮಾತನಾಡುವುದು ವ್ಯರ್ಥ ಎಂದು ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಲು ನಿರಾಕರಿಸಿದರು. ಹೀಗೆ ಆದರ್ಶದ ಹಾದಿಯನ್ನು ದೇವನೂರು ಆಯ್ಕೆ ಮಾಡಿಕೊಂಡರು. ದಲಿತ ಚಳುವಳಿಯನ್ನು ಪ್ರಭಾವಿಸಿದರು. ನಾಡಿನ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಲು ಯತ್ನಿಸಿದರು. ಈಗಲೂ ಚಲನಶೀಲ ರಾಜಕೀಯ ಪಕ್ಷ ಕಟ್ಟಲು ಅವರ ಪ್ರಯತ್ನ ನಿಂತಿಲ್ಲ. ಇನ್ನು ಸಿದ್ಧಲಿಂಗಯ್ಯ ೧೯೭೫ ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. ೧೯೭೯ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ನೀಡಿದರು. ಆಗ ಸಿದ್ದಲಿಂಗಯ್ಯ ಕರ್ನಾಟಕದ ಸಾರ್ವಜನಿಕ ಕವಿ ಎಂದೇ ಹೆಸರಾಗಿದ್ದರು. “ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು,ವದೆಸಿಕೊಂಡು ವರಗಿದವರು ನನ್ನ ಜನಗಳು.ಹೊವಲನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು”.  “ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ ಛಡಿಯ ಏಟು ಹೊಡೆದವರ ಕುತತಿಗೆಗಳ ಹಿಡಿದರು ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು  ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ, ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು  ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು… ಹೀಗೆ… ಸಿದ್ಧಲಿಂಗಯ್ಯನವರ  ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದರು. ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯನವರ ಕಾವ್ಯ ಬಳಕೆಯಾಯಿತು. ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ೧೯೭೫ ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ  ಎರಕದಲ್ಲಿ ರೂಪುಗೊಂಡರು. ಅದಕ್ಕಾಗಿಯೇ ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳನ್ನು ಹಾಡುತ್ತಿದ್ದರು. ಅದಕ್ಕಾಗಿಯೇ ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು ಎನ್ನುತ್ತಾರೆ ಕನ್ನಡದ ಖ್ಯಾತ ವಿಮರ್ಶಕ ಡಿ.ಆರ್.ನಾಗರಾಜ್. ಕುತೂಹಲದ ಸಂಗತಿಯೆಂದರೆ ಕವಿ ಸಿದ್ಧಲಿಂಗಯ್ಯನವರ  ಮೊದಲ ಕವಿತೆಗಳಲ್ಲಿ  ಅಂಬೇಡ್ಕರ್,ಮಾರ್ಕ್ಸವಾದ  ಕಾಣುವ ಭಾವನೆಗಳ ಖಾಚಿತ್ಯ  ಅವರ ಎರಡನೇಯ ಹಂತದ ಕಾವ್ಯದಲ್ಲಿಲ್ಲ ಎಂದು ಡಿ.ಆರ್.ನಾಗರಾಜ್ ಗುರುತಿಸಿದ್ದಾರೆ. ಹೌದು. ಮುಂದೆ ರಾಮಕೃಷ್ಣ ಹೆಗಡೆ ಅವರ ಸ್ನೇಹದಿಂದ ವಿಧಾನ ಪರಿಷತ್ತನ್ನು ಸಹ ಸಿದ್ಧಲಿಂಗಯ್ಯ ಪ್ರವೇಶಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಹ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು.  ಅನೇಕ ಪ್ರಚಲಿತ ವಿದ್ಯಮಾನಗಳಿಗೆ ಮೌನಿಯಾದರು. ಪಂಪ ಪ್ರಶಸ್ತಿ ಸಹ ಪಡೆದರು. ೨೦೨೦ ಫೆಬ್ರುವರಿಯಲ್ಲಿ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ ಸಿದ್ಧಲಿಂಗಯ್ಯ ಪ್ರಭುತ್ವವನ್ನು ಹೊಗಳಿದರು. ಮುಖ್ಯಮಂತ್ರಿಯ ಕಾರ್ಯವೈಖರಿ ಪ್ರಶಂಸಿದರು. ಪ್ರಭುತ್ವದ ಜೊತೆಗಿದ್ದೇ, “ಅರಸರನ್ನು ಒಲೈಸಿ ಬಾಳುವುದು ಕಡು ಕಷ್ಟ” ಎಂದ ಪಂಪನ ಹೆಸರೆತ್ತಲಿಲ್ಲ ನಮ್ಮ ಸಿದ್ಧಲಿಂಗಯ್ಯನವರು.  ಪಂಪನ ಕಾವ್ಯದ ಒಂದೇ ಒಂದು ಸಾಲನ್ನು ಅವರ ಪ್ರಸ್ತಾಪಿಸಲಿಲ್ಲ. ಸಾಹಿತ್ಯದ ಕುರಿತು ಮಾತೇ ಆಡಲಿಲ್ಲ. ದಲಿತ ಚಳುವಳಿಗೆ ದಿಕ್ಕು ತೋರಿಸಿಬೇಕಿದ್ದ ಕ್ರಾಂತಿಕಾರಿ ಕವಿ ಮೌನಕ್ಕೆ ಜಾರಿದರು. ಇದೇ ಕಾಲದ ವಿಪರ್ಯಾಸ. ಎರಡು ಧ್ರುವಗಳು : ಈಗಲೂ ಸರ್ಕಾರಗಳು ಎಡವಿದಾಗ ಅದಕ್ಕೆ ಪ್ರತಿಕ್ರಿಯಿಸುತ್ತಾ ಪ್ರತಿರೋಧವನ್ನು ಕಾಲ ಕಾಲಕ್ಕೆ  ದೇವನೂರು ಮಹಾದೇವ ಎತ್ತುತ್ತಲೇ ಬಂದಿದ್ದಾರೆ. ತಾವು ನಡೆದ ದಾರಿಯಲ್ಲಿ ಉತ್ತರ ಧ್ರುವ, ದಕ್ಷಿಣ ಧ್ರುವಗಳಿಂತಿರುವ ದೇವನೂರು ಮತ್ತು ಸಿದ್ಧಲಿಂಗಯ್ಯ ನಾಡಿನ ಯುವ ಜನತೆಗೆ ಏನು ಸಂದೇಶವನ್ನು ತಮ್ಮ ಬದುಕಿನ ಮೂಲಕ ಹೇಳಿದ್ದಾರೆ ಎಂಬುದು ನಮ್ಮ ಕಣ್ಣಮುಂದಿದೆ. ಆಯ್ಕೆ ಮಾತ್ರ ನಮ್ಮದು… ******************

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು Read Post »

ಪುಸ್ತಕ ಸಂಗಾತಿ

ನಾಡಿ ಮಿಡಿತದ ದಾರಿ

ಪುಸ್ತಕಪರಿಚಯ ಪುಸ್ತಕ : ನಾಡಿ ಮಿಡಿತದ ದಾರಿ 🩺(ವೈದ್ಯಲೋಕದ ಅನುಭವ ಕಥನಗಳು) ಲೇಖಕರು: ಡಾ|| ಶಿವಾನಂದ ಕುಬಸದಪ್ರಕಾಶನ: ನೀಲಿಮಾ ಪ್ರಕಾಶನಬೆಂಗಳೂರುಪುಟಗಳು: 160ಬೆಲೆ: ರೂ. 130/-ಪ್ರಕಟಿತ ವರ್ಷ: 2019ಲೇಖಕರ ದೂರವಾಣಿ: 9448012767 ವೃತ್ತಿಯಿಂದ ಪರಿಣತ ಶಸ್ತ್ರ ಚಿಕಿತ್ಸಕರಾಗಿ, ಜನಾನುರಾಗಿ ವೈದ್ಯರಾಗಿ, ವಿವಿಧ ವ್ಯಾಧಿಗಳ ಕುರಿತು ಜನತೆಗೆ ಮಾಹಿತಿ ನೀಡುವ ವಕ್ತಾರರಾಗಿ, ಗ್ರಾಮೀಣರ ಮೂಡನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವ ಆಪ್ತ ಬಂಧುವಾಗಿ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಕಾಯಕ ಯೋಗಿಯಾಗಿ, ಸೃಜನಶೀಲ ಕವಿ, ಲೇಖಕರಾಗಿ ಒಂದು ಪ್ರದೇಶದ ಒಂದು ಕಾಲಗಟ್ಟದ ಇತಿಹಾಸಕಾರರಾಗಿ, ಎಲ್ಲರನ್ನು ಪ್ರೀತಿ, ಗೌರವ, ವಿಶ್ವಾಸದಿಂದ ಕಾಣುವ ವೈದ್ಯ ಸಾಹಿತಿಯಾಗಿರುವ ಮುಧೋಳದ ಡಾ|| ಶಿವಾನಂದ ಕುಬಸದ ಅವರು ಕಳೆದ ವರ್ಷ ಪ್ರಕಟಿಸಿದ “ನಾಡಿ ಮಿಡಿತದ ದಾರಿ” ಇಂದಿನ ಕೃತಿ ಪರಿಚಯ. ವೈದ್ಯಲೋಕದ ಜೀವನಾನುಭವಗಳ ಸುಂದರ ಇಪ್ಪತ್ನಾಲ್ಕು ಕಥನಗಳು ಇಲ್ಲಿ ದೃಶ್ಯಕಾವ್ಯಗಳಾಗಿವೆ. ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಜಾಡ್ಯಗಳಿಗೆ ಪರಿಹಾರೋಪಾಯ ಇಲ್ಲಿನ ವಿಷಯ ವಸ್ತು. ಲೇಖಕಿ ವೀಣಾ ಬನ್ನಂಜೆ ಅವರ ಅನುಭಾವದ ಮುನ್ನುಡಿ ಹಾಗೂ ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಅವರ ಆತ್ಮೀಯತೆಯ ಮಾತುಗಳು ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ. ಇಲ್ಲಿರುವ ಎಲ್ಲ ಅನುಭವಾಮೃತದ ಕಥೆಗಳು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ವರ್ತಮಾನದ ಸಾಂದರ್ಭಿಕ ಸಮಸ್ಯೆಗಳ ಮೇಲೆ ಸ್ಟೆಥಸ್ಕೋಪ್ ಆಡಿಸಿ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಪೋಷಿಸಿ ರೋಗಿಗಳ ಮನೋಜ್ಞ ಚಿತ್ರಣ ನೀಡಿದ್ದಾರೆ. ಇಲ್ಲಿನ ಅಂಕಣ ಬರಹಗಳಿಗೆ ಕಥೆಗಳ ಜೀವದ್ರವ್ಯವಿದೆ. ಜಾತಕ, ಕುಂಡಲಿ ನಕ್ಷತ್ರಗಳಿಗಿಂತಲೂ ಆಸ್ತಿಕನಾಗಿ ರಕ್ತಪರೀಕ್ಷೆ, ನಾಡಿ ಮಿಡಿತ ಹಾಗೂ ಸೂಕ್ತ ಚುಚ್ಚು ಮದ್ದಿನ ಮೂಲಕ ರೋಗಿಯನ್ನು ಗುಣಪಡಿಸಬೇಕು ಎಂಬುದು ವೈದ್ಯರ ಆಶಯ. ವೃತ್ತಿ ಧರ್ಮದಲ್ಲಿ ದೇವರನ್ನು ಕಾಣುವ ಇವರು ‘ದಯವೇ ಧರ್ಮದ ಮೂಲ’ ಎನ್ನುತ್ತಾರೆ. ಇಲ್ಲಿನ ಕಥೆಗಳು ನೈಜ ಬದುಕಿನ ಅಭಿವ್ಯಕ್ತಿಯಾಗಿದ್ದು ಯಾವುದೂ ಸಹ ಕಾಲ್ಪನಿಕವಾಗಿಲ್ಲ. ‘ವೃತ್ತಿ ಸಾರ್ಥಕ್ಯದ ಆ ದಿನ’ ಎಂಬ ಬರಹ ಹೃದಯಸ್ಪರ್ಶಿಯಾಗಿದ್ದು ಹೆರಿಗೆ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಜೀವನ್ಮರಣದೊಡನೆ ಹೋರಾಡುತ್ತಿರುವಾಗ ವೈದ್ಯರೇ ಸ್ವತಃ ರಕ್ತದಾನ ನೀಡಿ, ನಿರಂತರ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅವಳ ಪ್ರಾಣ ಉಳಿಸಿದ ರೋಚಕ ಅನುಭವಗಾಥೆ ಓದುಗರಲ್ಲಿ ಧನ್ಯತಾ ಭಾವ ಮೂಡಿಸುತ್ತದೆ. ‘ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ’ ಎಂಬ ಲೇಖನದಲ್ಲಿ ತಾಯಿಯೇ ಸರ್ವಸ್ವ ಎಂದು ನಂಬಿದ ವೈದ್ಯಮಿತ್ರರೊಬ್ಬರು ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾದ ತಾಯಿಯನ್ನು ಏಳು ವರ್ಷಗಳ ಕಾಲ ಮಗುವಿನಂತೆ ಉಪಚರಿಸಿದ ಸಂಗತಿ ಎಲ್ಲರಿಗೂ ಆದರ್ಶಪ್ರಾಯ ಹಾಗೂ ಅನುಕರಣಿಯ. ‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’ ಎನ್ನುವ ಕವಿವಾಣಿಯಂತೆ ಇಲ್ಲಿ ರೋಗಿಯೊಬ್ಬ ತನಗೆ ಕ್ಯಾನ್ಸರ್ ಕಾಯಿಲೆ ಇದ್ದರೂ ಸಹ ಮನೆಯವರಿಗೆ ಹೇಳದೆ ತಾನೇ ಅನುಭವಿಸುವ ಸ್ಥಿತಿ ಕಂಡ ವೈದ್ಯರು ಅವನಲ್ಲಿ ಯೋಗಿಯ ಗುಣವನ್ನು ಕಾಣುತ್ತಾರೆ. ‘ಗುಟಕಾ ಎಂಬ ಹೊಗೆಯಿಲ್ಲದ ಬೆಂಕಿ’ ಎಂಬ ಕಥೆಯಲ್ಲಿ ಇಂದಿನ ಸಮಾಜದಲ್ಲಿ ಯುವಜನಾಂಗ ದುಶ್ಚಟಗಳಿಗೆ ದಾಸರಾಗುವುದನ್ನು ಕಂಡು ಖೇದ ವ್ಯಕ್ತಪಡಿಸುತ್ತಾರೆ. ಒಂದು ದಿನ ವೈದ್ಯರು ಆಸ್ಪತ್ರೆಗೆ ಬರದೇ ಮರುದಿನ ಬಂದಾಗ ಸಿರಿವಂತ ರೋಗಿ ಒಬ್ಬ ಕೋಪಗೊಂಡು ಬೈದಾಗಲೂ ಸಹ ಸ್ಥಿತಪ್ರಜ್ಞರಾಗಿ ಉಪಚರಿಸಿದ್ದು ಶ್ಲಾಘನೀಯ. ನೇಣು ಹಾಕಿಕೊಂಡು ಬದುಕುಳಿದವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಆಪ್ತ ಗೆಳೆಯನಂತೆ ತಿಳಿಸಿದ್ದಾರೆ. “ಮಡದಿ ಎಂಬ ಮಹಾಗುರು” ಎಂಬ ಅಧ್ಯಾಯದಲ್ಲಿ ಮದ್ಯಪಾನ ವ್ಯಸನಕ್ಕೆ ಒಳಗಾದ ಗಂಡನನ್ನು ಪತ್ನಿಯೊಬ್ಬಳು ಮದ್ಯವ್ಯಸನದಿಂದ ಮುಕ್ತನಾಗಿ ಮಾಡಿದ ಕಥೆ ಮಾರ್ಮಿಕವಾಗಿದೆ. ಮದ್ಯ ಸೇವನೆಯಿಂದ ಶರೀರದ ಮೇಲಾಗುವ ದುಷ್ಪರಿನಾಮಗಳ ಬಗ್ಗೆ ವಿವರಿಸುವಾಗ ಇಲ್ಲಿ ವೈದ್ಯರು ಶಾಲಾ ಅಧ್ಯಾಪಕನಂತೆ ಗೋಚರಿಸುತ್ತಾರೆ. ಅಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಪಿಯುಸಿಯಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಾಗ ಅಪ್ಪನ ಮೊಗದಲ್ಲಿ ಮೂಡುವ ಗೆಲುವಿನ ಗೆರೆ, ಮಗ ವೈದ್ಯನಾದಾಗ ಕಣ್ಣಂಚಲ್ಲಿ ಹೊಮ್ಮಿದ ಸಾರ್ಥಕತೆ, ಕೈಬೆರಳು ಹಿಡಿದು ನಡೆಸಿದ ಅಪ್ಪ ಕೈಬಿಟ್ಟು ಹೋದಾಗ ಉಂಟಾಗುವ ಶೂನ್ಯತೆ. ಇವೆಲ್ಲವೂ “ಅಪ್ಪ ನೆನಪಾಗುತ್ತಾನೆ” ಎಂಬ ಅಧ್ಯಾಯದಲ್ಲಿ ಸಿನಿಮಾ ರೀಲಿನಂತೆ ಅಪ್ಪನ ನೆನಪುಗಳು ಬಿಚ್ಚಿಕೊಳ್ಳುತ್ತವೆ. ಹೀಗೆ ಇಲ್ಲಿರುವ ಎಲ್ಲ ಬರಹಗಳ ಹಿಂದೆ ಸ್ವಾರಸ್ಯಕರ ಅನುಭವ ಅವಿಸ್ಮರಣೀಯ ಸಂಗತಿಗಳು ಕಥಾವಸ್ತುಗಳಾಗಿವೆ. ವಾಸ್ತವ ಸಮಾಜಕ್ಕೆ ಕೈಗನ್ನಡಿಯಾಗಿ, ಸ್ವಸ್ಥ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಲ್ಲುವ ಈ ಕೃತಿ ಸಾರಸ್ವತ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆ. ಈಗಾಗಲೇ “ಇಷ್ಟು ಮಾಡಿದ್ದೇನೆ” ಎಂಬ ಕವಿತಾ ಸಂಕಲನ ಹಾಗೂ “ಗಿಲೋಟಿನ್” ಎನ್ನುವ ಯುರೋಪ್ ಪ್ರವಾಸ ಕಥನ ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಮೂಡಿ ಬರಲಿ ಎಂಬುದು ನಮ್ಮೆಲ್ಲರ ಬಯಕೆ. **** ಬಾಪು ಖಾಡೆ

ನಾಡಿ ಮಿಡಿತದ ದಾರಿ Read Post »

ಪುಸ್ತಕ ಸಂಗಾತಿ

ಪ್ರೀತಿ ಮತ್ತು ಪ್ರೀತಿ ಮಾತ್ರ

ಪ್ರೀತಿ ಮತ್ತು ಪ್ರೀತಿ ಮಾತ್ರಲೇಖಕರು – ಜ್ಯೋತಿ ಗುರು ಪ್ರಸಾದ್ ಆರಂಭದ ಲೇಖನದಲ್ಲಿ ಪರಿಸರ ಹೋರಾಟಗಾತಿಯಾದ ದಿವಂಗತ ಕುಸುಮಾ ಸೊರಬ ಅವರ ಬಗ್ಗೆ ತಿಳಿಸುತ್ತಾ ಲೇಖಕಿಯು ಅವರ ಈ ಮಾತುಗಳನ್ನುಉಲ್ಲೇಖಿಸುತ್ತಾರೆ ಗಮನಿಸಿ – ” ಗಿಡ ಬೆಳೆಸಿದೆವನಿಗೆ ನರಕವಿಲ್ಲ” ಎಂಬ ಅಂಶ ಗರುಡ ಪುರಾಣದಿಂದಲೇ ಆರಂಭವಾಗಿ ಅಂದಿನ ಜನಜೀವನದ ದಿನನಿತ್ಯ ಕಾರ್ಯಕ್ರಮವಾಗಿತ್ತು. ಪರಿಸರ ರಕ್ಷಣೆ ಹಾಗೆಂದು ತಿಳಿದುಕೊಳ್ಳದೆಯೇ ಜೀವನದ ಆಂಗ ಆಗಿತ್ತು. ಈಗ ಮಾತ್ರ ಇದು ಫ್ಯಾಶನ್. ಮಳೆ – ಇಳೆ ಎಂಬ ಪೃಥ್ವಿಯನ್ನು ರಕ್ಷಣೆ ಮಾಡುವುದೇ ಎಂದರೆ ತನ್ನನ್ನು ತಾನೆ ರಕ್ಷಣೆ ಮಾಡಿಕೊಳ್ಳುವುದೇ ಮಹಿಳೆಯ ರಕ್ಷಣೆ. ಮದುವೆ ಮುಂಜಿಗಳಿಗೆ ಹೋಗಲು ಅನುಮತಿ ಬೇಕಾಗಿಲ್ಲ. ಆದರೆ ಯಾವುದೆ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಹಿಳೆಗೆ ‘ ಅನುಮತಿ’ ಬೇಕಾಗಿದೆ. ಎಷ್ಟೊಂದು ಸತ್ಯವಿದೆ ! ಇಂತಹ ಮಾತುಗಳನ್ನು ಪ್ರಾಮುಖ್ಯ ಮಾಡುತ್ತ ಹೋಗುವಲ್ಲಿ ಲೇಖನ ಹೆಚ್ಚುಪರಿಣಾಮಕಾರಿಯಾಗಿದೆ.ದಾಂಪತ್ಯದ ಬಗ್ಗೆ ಸೊಗಸಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ “ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಹರಿಯುವುದೇ ದಾಂಪತ್ಯ ನಿಷ್ಠೆ”.ಗೊಮ್ಮಟನ ಎತ್ತರವನ್ನು ಕಣ್ಮುಂದೆ ನಿಲ್ಲಿಸಲು ಬರೆದ ಈ ಸಾಲುಗಳು ಲೇಖನದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಫಲ“ಭೂಮಿಯ ತಾಳ್ಮೆಯನ್ನು ಆಕಾಶಕ್ಕೆ ಮುಟ್ಟಿಸಲು ಹೊರಟಿರುವಂಥ ಸಂತ. ಮನುಷ್ಯ ಕುಲದಲ್ಲಿ ಎತ್ತರದ ಮೌಲ್ಯಗಳಿಗೆ ಎಲ್ಲಿಯವರೆಗೆ ಪ್ರಾಶಸ್ತ್ಯಇರುವುದೋ ಅಲ್ಲಿಯವರೆಗೆ ನಮ್ಮ ಬಾಹುಬಲಿ ಬೆಳಯುತ್ತಿರುತ್ತಾನೆಶುದ್ಧ ಮನಸುಗಳ ಭಾಗವಾಗುತ್ತಾನೆ ಬಾಹುಬಲಿಯ ನಗ್ನತೆಯು ನಮ್ಮ ತೆರೆದ ಮನಸ್ಸಿನ ದಿಟ್ಟತನವಾಗಿ ನಮ್ಮ ಹೃದಯದ ಸೌಂದರ್ಯವನ್ನು ಕಾಯ್ದುಕೊಳ್ಳಲಿ” ಎಂಬಮಾತುಗಳು ಗೊಮ್ಮಟನ ಎತ್ತರವನ್ನು ಸಹೃದಯಿಗಳ ಕಣ್ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್ ರವರು ‘ ಪುಣ್ಯಕೋಟಿ ‘ ಪದ್ಯದ ಬಗ್ಗೆ ಎತ್ತಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತ ಓದುಗರನ್ನು ಯೋಚನೆಗೆ ಹಚ್ಚುತ್ತಾರೆ.ಪೂ.ಚಂ.ತೇಜಸ್ವಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿತೆರೆದಿಡಲು ಲೇಖಕಿಯು ಹೇಳುವ ಮಾತುಗಳು ಅವರ ಆಆಶಯವನ್ನು ನೆರವೇರಿಸುತ್ತ ಲೇಖಕಿಯ ಪ್ರೌಢ ಭಾಷಾ ಶೈಲಿಗೆ ಸಾಕ್ಷಿಯಾಗುತ್ತವೆ. ಕೆಳಗಿನ ಸಾಲುಗಳನ್ನು ಓದಿರಿ-೧. ತೇಜಸ್ವಿಯವರ ಬಗ್ಗೆ ಬರೆಯುವುದೆಂದರೆ ಜೀವನದಸರಳ ಸತ್ವಗಳನ್ನು ನಮಗೆನಾವೇ ಸಂಶೋಧಿಸಿಕೊಂಡಂತೆತೋರಿಕೆಯ ಯಾವುದೇ ಭಾರವಿಲ್ಲದೆ ಅವರ ಆತ್ಮಸಾಕ್ಷಿಗೆಅನುಗುಣವಾಗಿ ಅನಾವರಣವಾಗುವ ತೇಜಸ್ವಿ ಕುವೆಂಪುಅವರು ಆಶಯಗಳಿಗೆಲ್ಲಾ ರೂಪಕದಂತಿದ್ದಾರೆ.೨. ಕೀರ್ತಿ ಶನಿ ತೊಲಗಾಚೆ ದೂರ’ ಎನ್ನುವ ತಂದೆಯ ಕವಿವಾಣಿಗೆ ತಾವೇ ದನಿಯಾಗಿ,ತಮ್ಮ ಸ್ವತಂತ್ರ ವ್ಯಕ್ತಿತ್ವದಿಂದತಮ್ಮ ಕೃಷಿ ಆಸಕ್ತಿಯಲ್ಲಿ ತೊಡಗಿಸಿಕೊಂಡು ನಶ್ವರದ ಈಪುಟ್ಟ ಜೀವನದಲ್ಲಿ ಯಾವ ಸೋಗೂ ಇಲ್ಲದೆ ಒಬ್ಬ ‘ಸರಳ ಮನುಷ್ಯ’ ನಾಗಿ ಹೇಗೆ ಸಲ್ಲ ಬಹುದು ಎಂಬುದಕ್ಕೆ ತೇಜಸ್ವಿಖಂಡಿತ ಮಾದರಿಯಾಗಿದ್ದಾರೆ.೩. ಯಾವ ವಶೀಲಿ ಬಾಜಿಗಳಿಗೂ ಒಳಗಾಗಿದೆ ಪರಿಸರದಮುಖ್ಯ ಜೀವವಾಗಿ ಹಕ್ಕಿಯಂತೆ, ಮರದಂತೆ ಜೀವಿಸುತ್ತಾ ಇರುವ ಅವರ ಜೀವನ ತೆರೆದ ಪುಸ್ತಕದಂತಿದೆ.ವೀಚಿ (ಚಿಕ್ಕ ವೀರಣ್ಣನವರು )ಯವರ ಏನೂ ತಿಳಿಯದಓದುಗನಿಗೂ ಸಹ ಅವರ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಲು “ಇರುವ ಬದುಕನೆತ್ತರಿಸಲು, ಉತ್ತರಿಸಲು ಧ್ಯಾನಿಸು”,“ಪ್ರೀತಿಗೊಂದೇ ಮುಖವು ದ್ವೇಷಕ್ಕೆ ಹಲವಾರು”,“ಮುದವೆಂದರೇನನ್ನೋ ಕಲಿಯುವುದಿಲ್ಲ ತಾನೇ ಅದಾಗುವುದು” ಎಂಬ ಸಾಲುಗಳನ್ನು ಗುರುತಿಸಿದ್ದಾರೆ.ಹಾಗೆ ” ಕನ್ನಡಿಯೋ ಅಥವಾ ದೀಪವೋ ಆಗದ ಸಾಹಿತ್ಯ ಚಿಂತನೆ ವ್ಯರ್ಥ” ಎಂಬ ಡಿ. ಆರ್. ನಾಗರಾಜರವರ ಉಕ್ತಿಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಲೇಖಕರಾದ ಮುರಾರಿ ಬಲ್ಲಾಳರ ಬರಹದ ಬಗ್ಗೆ ಓದುಗರ ಕುತೂಹಲ ಮೂಡಿಸುವಲ್ಲಿ ಲೇಖಕಿಯು ಸಫಲರಾಗಿದ್ದಾರೆ.ಪ್ರೇಮವನ್ನು ಕುರಿತು ಲೇಖಕಿ ನೀಡಿರುವ ವ್ಯಾಖ್ಯಾನವುಎಷ್ಟು ಅರ್ಥಪೂರ್ಣ.”ಪ್ರೇಮ ನಮ್ಮ ಪ್ರಬುದ್ಧ ಆಯ್ಕೆಯ ಒಂದು ಸ್ಥಾಯಿಯಾದ ಶೋಧ. ಅದನ್ನು ಎಳೆದು ತಂದುಗಂಟು ಹಾಕಲಾಗುವುದಿಲ್ಲ”ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗ್ಗೆ ಲೇಖಕಿಯು ಹೇಳಿದ ಮಾತು ಹದಿನಾರು ವರ್ಷಗಳು ಕಳೆದರೂ ಪ್ರಸ್ತುತವಾಗಿದೆಸ್ತ್ರೀವಾದದ ಬಗ್ಗೆ ಜ್ಯೋತಿಯವರ ಪ್ರತಿಪಾದನೆ ಹೀಗಿದೆ _ “ಸ್ತ್ರೀವಾದವೆಂದರೆ ಹೆಣ್ಣಿನ ನೈಸರ್ಗಿಕ ಅಸ್ತಿತ್ವವನ್ನು ಉಳಿಸಿ ಕೊಂಡು ಆ ಸವಿಯ ಸ್ವಾತಂತ್ರದಲ್ಲೇ ಕಂಡು ಕೊಳ್ಳುವ ವ್ಯಕ್ತಿತ್ವದ ಪೂರ್ಣದೃಷ್ಟಿಯೆ ಹೊರತು ಬರಿಯ ವಾದಕ್ಕಾಗ ವಾದ ಮಾಡುವ ಒಣವಾದವಲ್ಲ” ಎಂಬ ಲೇಖಕಿಯವರ ಅಭಿಪ್ರಾಯ ಪರಿಪಕ್ವವಾಗಿದೆ. ಭಾರತದ ಸಾಂಸ್ಕೃ,ತಿಕ ಅನನ್ಯತೆಯನ್ನು ಪ್ರಸ್ತಾಪಿಸಿ “ತಲೆಬಾಗುವ ವಿನಯವೇ,ಕೈ ಜೋಡಿಸುವ, ಆಕಾಶಕ್ಕೆ ಕೈಯೊಡ್ಡಿಪ್ರಾರ್ಥಿಸುವ, ಎದೆ ಮುಟ್ಟಿ ದೇವರನ್ನು ಸ್ಪರ್ಶಿಸುವ ಅಂತರಂಗದ ಆಲಾಪವೇ ನನಗೆ ನಮ್ಮ ದೇಶದ ಮಹತ್ವ ಸಾಂಸ್ಕೃತಿಕ ಅನನ್ಯತೆ” ಈ ಮಾತು ನೈಜ ದೇಶಪ್ರೇಮದ ಪ್ರತೀಕ.ಬದುಕು ಬರಹದ ನಡುವೆ ಅಂತರಉಳಿಸಿಕೊಂಡ ಲೇಖಕ ಲಂಕೇಶ್ ರವರನ್ನು ಕಂಡಾಗ ಆದ ಭ್ರಮನಿರಸನ ಕುರಿತು ತಿಳಿಸಿದ್ದಾರೆಕೆಲವೊಂದು ಚಲನೆ ಚಿತ್ರಗೀತೆಗಳ ವಿಮರ್ಶೆ, ಮೆಚ್ಚಿನನಟರ ಬಗ್ಗೆ ಬರೆಯುವಂತೆ ಬಿ. ಆರ್. ಲಕ್ಷ್ಮಣ್ ರಾವ್ ರವರ ಪ್ರೇಮದ ಕುರಿತು ಪಂದ್ಯವನ್ನು ಟೀಕಿಸುತ್ತಾ.”ಆಕ್ಟ್ಆಫ್ ಲಿವಿಂಗ್” ಬಗ್ಗೆ ಹೇಳವಲ್ಲಿ ವಿಶೇಷ ಹೊಳಹುಗಳಿವೆಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯನ್ನು ನೆನೆಯುವಕೃತಜ್ಞತೆಯ ಮಹಾಪೂರದಲ್ಲಿ “ಸೂರ್ಯ ನಮಸ್ಕಾರ’ದ,‘ ಸಂಧ್ಯಾವಂದನೆ’ ಯು ‘ಗಾಯತ್ರಿ ಮಂತ್ರ’ದ ಎಲ್ಲಾ ಫಲಸಿದ್ಧಿಸುತ್ತವೆ. ಮುಖ್ಯ ಬೇಕಾಗಿರುವುದು ಒಳನೋಟ – ನಿಜದ ಸಂತಸವೆನ್ನವ ಲೇಖಕರ ಈ ಮಾತುಗಳು ಮನದಆಳಕ್ಕೆ ಇಳಿಯುತ್ತವೆ ಎಂಬುದು ಅಷ್ಟೇ ನಿಜ.ಮತಾಂಧರ ಕಣ್ಣಿಗೆ ಅಂಜನ ಹಾಕುವ ಅಂಜನೆ ಬೇಕಾಗಿದೆ ಎಂಬ ಸತ್ಯದ ಬೆಳಕಿನಲ್ಲಿ ಆಂಜನೇಯನ ಕಲ್ಪನೆಯಿದೆ.ಒಟ್ಟಾರೆ ಈ ಕೃತಿಯು ಲೇಖಕರ ಪ್ರಬುದ್ಧ ಚಿಂತನೆ ಹಾಗೂ ಪ್ರತಿಭೆಯ ಭಾರಕ್ಕೆ ಬಾಗಿದ ಕೃತಿಯೆನ್ನಬಹುದು. ಪ್ರೀತಿಗೆ ಪಾತ್ರರಾದವರ, ಪ್ರೀತಿಯ ಹಾಡುಗಳು ಹಾಗೂ ಪ್ರೀತಿಯ ವಸ್ತುಗಳೊಂದಿಗೆ ಪ್ರೀತಿಯ ಸೋಜಿಗವನ್ನು ನೋಡುತ್ತಾ ಬದುಕಿನ ಪ್ರೀತಿಗೆ ಬೇಕಾದ ಒಳನೋಟವನ್ನು ಒದಗಿಸುವ ಈ ಕೃತಿಯ ಶೀರ್ಷಿಕೆಯು ಸಮಂಜಸವಾಗಿದೆ ********** ಎಂ. ಆರ್. ಅನಸೂಯ

ಪ್ರೀತಿ ಮತ್ತು ಪ್ರೀತಿ ಮಾತ್ರ Read Post »

ಪುಸ್ತಕ ಸಂಗಾತಿ

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ ಶತಮಾನದ ಭಾರತೀಯ ಬದುಕಿನ ವಿವರಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು, ನೋವು- ನಲಿವು, ಹತಾಶೆ, ಸಾವು, ಯಶಸ್ಸು… ಹೀಗೆ ಆಯಾ ಪ್ರದೇಶದ, ಭಾಷೆಯ ಆವರಣದಲ್ಲಿ ಮೈಪಡೆದ ಮನುಷ್ಯ ಜಗತ್ತಿನ ಚಿತ್ರಣ ಈ ಕೃತಿಯಲ್ಲಿದೆ. ಇಲ್ಲಿನ ಕತೆಗಳ ಆಯ್ಕೆಯ ಹಿಂದೆ ಶಾರದಾಪ್ರಸಾದರ ಸೂಕ್ಷ್ಮತೆ ಮತ್ತು ಭಾವುಕತೆ ಎದ್ದು ಕಾಣುತ್ತದೆ.ಯಾವ ಸಾಹಿತ್ಯ ಫ್ಯಾಷನ್ನುಗಳಿಂದ ಪ್ರಭಾವಿತರಾಗದ ಅವರ ಆಯ್ಕೆ, ತಮ್ಮ ಮನಸ್ಸಿಗೆ ತಟ್ಟಿದ ಕಥೆಗಳನ್ನು ಅವರು ಕನ್ನಡಿಗರ ಓದಿಗೆ ಬಡಿಸಿದ್ದಾರೆ. ಇವು ಅಂತಃಕರಣದ ಕತೆಗಳು. ವೈವಿಧ್ಯಮಯ ಕಥೆಗಳಿಗಾಗಿ ಒಮ್ಮೆ ಓದಲೇಬೇಕಾದ ಕೃತಿಯಿದು. ******** ಡಾ.ಅಜಿತ ಹರೀಶಿ

ಒಂದು ಮರ ನೂರು ಸ್ವರ Read Post »

ಪುಸ್ತಕ ಸಂಗಾತಿ

ಅವ್ವ ಮತ್ತು ಅಬ್ಬಲಿಗೆ

ನನಗೆ  ಅವ್ವ ಮತ್ತು ಅಬ್ಬಲಿಗೆ  ಇಡೀ ಕವನ ಸಂಕಲನದಲ್ಲಿ ಲಂಕೇಶರ ಅವ್ವ ಆಧುನಿಕ, ನಗರವಾಸಿ ಅವ್ವನಾಗಿ  ಕಾಣುತ್ತಿದ್ದಾಳೆ.   ಅಬ್ಬಲಿಗೆಯಲ್ಲಿನ ಆಧುನಿಕ ಅವ್ವ  ನೌಕರಿ ಮಾಡುತ್ತಾ, ಗಂಡನ ಸಂಭಾಳಿಸುತ್ತಾ , ತವರು ಮನೆಯ ನೆನಪ ಮೆಲುಕು ಹಾಕುತ್ತಾ ,  ಆಧುನಿಕ ವೈರುದ್ಧ್ಯಗಳಿಗೆ ಮುಖಾಮುಖಿಯಾಗುತ್ತಾ ನಡೆಯುತ್ತಾಳೆ.  ಅನ್ಯಾಯಕ್ಕೆ ಕವಿತೆಯ ಮೂಲಕ ಸಣ್ಣ ಧ್ವನಿಯಲ್ಲಿ ಅತ್ಯಂತ ಖಚಿತವಾಗಿ ವ್ಯವಸ್ಥೆಯನ್ನು ಟೀಕಿಸುತ್ತಾಳೆ. ದೇವರು, ದೇವಾಲಯ,ಯುದ್ಧ ಗಳ ನಿರರ್ಥಕತೆಯನ್ನು  ಬಿಡಿಸಿಡುತ್ತಾಳೆ. ಹೆಣ್ಣಿನ ಅಂತರಂಗದ ತಳಮಳಕ್ಕೆ ಭಾಷ್ಯ ಬರೆಯುತ್ತಾಳೆ. ಆಧುನಿಕ ಯಶೋಧರೆಯ ಅಂತರಂಗವನ್ನು ಇವತ್ತಿನ ಅಕ್ಷರಸ್ಥ ಮಹಿಳೆಯಲ್ಲಿ ಕಾಣುತ್ತಲೇ ಪ್ರಶ್ನೆ ಎಸೆಯುತ್ತಾಳೆ. ರಾಮಾಯಣದ ಶಬರಿಯನ್ನು ಎಳೆದು ತಂದು ಇವತ್ತಿನ ಸಮಾಜದೆದರು ನಿಲ್ಲಿಸಿ ತಕರಾರು ತೆಗೆಯುತ್ತಾಳೆ. ದನಗಳ ತಾಯ್ತನಕ್ಕೆ ಮತ್ತು ಅವಕ್ಕೆ  ವಯಸ್ಸಾದ ಮೇಲೆ ಮಾರುವವರ,ಕೊಳ್ಳುವವರ ಕಟುಕುತನವನ್ನು ಭಂಜಿಸುತ್ತಾಳೆ.ಹಾಗೂ ಬೀದಿ ನಾಯಿಯಲ್ಲಿನ ತಾಯ್ತನಕ್ಕೆ , ಅದು ತನ್ನ ಹೆತ್ತ ಮರಿಗಳನ್ನು ಅನಾಥವಾಗಿಸುವಲ್ಲಿ ತನ್ನ ಒಂಚೂರು ಪಾಲಿದೆ ಎಂದು ಕೊರಗುತ್ತಾಳೆ. ಹಾಗೂ ಬೀದಿ ನಾಯಿ ಪಾಡಿಗೆ ಕಾರಣವಾದ  ನಿರ್ಲಜ್ಜ ,ನಿರ್ಲಕ್ಷ ಗಂಡು ನಾಯಿಯ ಬಗ್ಗೆ ತಣ್ಣನೆಯ ಕೋಪವನ್ನು ದಾಖಲಿಸುತ್ತಾಳೆ ಕವಯಿತ್ರಿ ಶೋಭಾ. ಇನ್ನು ಅವ್ವ ಅಬ್ವಲಿಗೆಯಲ್ಲಿ ರಾಜಕೀಯ ಪ್ರಜ್ಞೆ ಪ್ರಖರವಾಗಿಯೇ ನಾಲ್ಕಾರು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಗುರ್ ಮೆಹರ್ ಅಂತರಂಗ, ಖುರ್ಚಿಗಾಗಿ ಯುದ್ಧ ಪ್ರಚೋದಕತೆಯ ಪ್ರಶ್ನಿಸಿದರೆ,  “ಸುಮ್ಮನಿರುವೆ  ಏಕೆ ಹೇಳು? ”  ಕವಿತೆ  ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕರೆ ನೀಡುತ್ತದೆ ಹಾಗೂ  ಶ್ರಮಿಕನೋರ್ವ , ಓಟು ಕೇಳಲುಬಂದವನಿಗೆ ಪ್ರಶ್ನಿಸುವುದು (ಓಟು ಬೇಡುವ ಸಮಯ) ಕವಿತೆ ಯಲ್ಲಿದೆ. ‘ಬಡವನಳಲು’  ಕವಿತೆ ಬೆವರಿಗಿಲ್ಲದ ಬೆಲೆಯು ನನ್ನ ಓಟಿಗೇತಕೆ ಒಡೆಯಾ ಎಂದು ಪ್ರಶ್ನಿಸಿದರೆ, ‘ದೇವನಳಲು’  ಕವಿತೆಯಲ್ಲಿ ದೇವರು ಭಕ್ತರಿಗೆ ಪ್ರಶ್ನಿಸುವ ಅಪರೂಪದ ನಡೆಯಿದೆ. ನಾನೇನು ಬಡವನೇ ನಿಮ್ಮಲ್ಲಿ ಬೇಡುವಷ್ಟು ಎನ್ನುವ ದೇವರು ; ನಾನು ತಿರುಕನಲ್ಲ, ಕಟುಕನಲ್ಲ, ದುರ್ಬಲನಲ್ಲ, ಹೆರುವಶಕ್ತಿಯಿಲ್ಲ,ಬಡವನಲ್ಲ ಎಂದು ದೇವರೇ ಭಕ್ತರಿಗೆ ಸ್ಪಷ್ಟೀಕರಣ ಕೊಡುವ ಬಗೆ ಕನ್ನಡಕ್ಕೆ ಹೊಸತು. ಇದು ಕವಯಿತ್ರಿ ಶೋಭಾ ನಾಯ್ಕರ ಕಾವ್ಯ ಕಟ್ಟುವ ವಿಶಿಷ್ಟ ನಡೆಯಾಗಿದೆ. ದೇವರು ಮತ್ತು ಧರ್ಮದ ಕುರಿತ ಕವಿತೆಗಳನ್ನು ಹೊಸೆದ ಕನ್ನಡ ಕೆಲವೇ ಕೆಲವು ಕವಯಿತ್ರಿಯರಲ್ಲಿ ಶೋಭಾ ಸಹ ಒಬ್ಬರು. ದೇವರು ಧರ್ಮದ ವಿಚಾರ ಬಂದಾಕ್ಷಣ ಮೌನತಾಳುವ ಮತ್ತು ಸಂಪ್ರದಾಯದ ಮುಸುಕು ಹಾಕಿ ಸೇಫರ್ ಝೋನ್ ನಲ್ಲಿ ನಿಲ್ಲುವ  ಸಾಹಿತಿಗಳಿಗಿಂತ ; ಭಿನ್ನವಾಗಿ ನಿಲ್ಲುವ ಶೋಭಾ ಹಿರೇಕೈ ; ಈ ಕಾರಣದಿಂದ ಅವರು ಕನ್ನಡದಲ್ಲಿ ವಿಶಿಷ್ಟ ಕವಯಿತ್ರಿ ಎನಿಸುತ್ತಾರೆ. ಕುವೆಂಪು ಮತ್ತು ಲೋಹಿಯಾ ಪ್ರಭಾವ : ಮುಗ್ದತೆಯಿಂದ ಕವಿತೆಗಳನ್ನು ಶೋಭಾ ಕಟ್ಟಿದರೂ ಅವರ ವೈಚಾರಿಕ ಓದು ಸಹ ಅವರ ಕವಿತೆಗಳನ್ನು ಪ್ರಭಾವಿಸಿದೆ.  ವೈಚಾರಿಕ ಕ್ರಾಂತಿಗೆ ಯುವಕರಿಗೆ ಆಹ್ವಾನ ನೀಡಿದ ಕುವೆಂಪು ಅವರನ್ನು ಓದಿರುವ ಅವರು ದೇವರು ಮತ್ತು ಧರ್ಮದ ವಿಚಾರದಲ್ಲಿ ಸ್ಪಷ್ಟತೆ ಇರುವವರು. ದೇವರು ಸದಾ ಹುಡುಕಾಡುವ, ಧರ್ಮ ಸದಾ ಕಾಡುವ ಸಂಗತಿ ಯೆಂದು ಕವಯಿತ್ರಿ ೨೦೨೦ ಮಾರ್ಚ ೨೬ ರಂದು ಕಡಲವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೋಧರ್ಮವನ್ನು ಗಮನಿಸಿ ಅವರ ಕವಿತೆಗಳನ್ನು ಓದಿದಾಗ ಹೊಸ ಆಯಾಮವೊಂದು ಸಹಜವಾಗಿ ಪ್ರಾಪ್ತವಾಗಿ ಬಿಡುತ್ತದೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಮಹಿಳೆಯಾಗಿಯೂ, ಅವರನ್ನು ವೈಚಾರಿಕ ಓದು ಹೇಗೆ ರೂಪಿಸಿದೆ ಎಂಬುದು ಸಹ ಮುಖ್ಯ.  ಸಮುದಾಯ ಮತ್ತು ಕುಟುಂಬದ ನಿಯಂತ್ರಣಗಳ ನಡುವೆಯೂ ಮಾನವೀಯ ನಡೆಯೊಂದನ್ನು ಕಾಯ್ದುಕೊಳ್ಳುವ ಪರಿ ಅದ್ಭುತವಾದುದು. ಕವಿ ಹೆಚ್ಚು ಮಾತನಾಡದೆಯೂ , ತಣ್ಣಗೆ ಹೇಗೆ ಕ್ರಾಂತಿಕಾರಿಯಾಗಬಲ್ಲಳು  ಎಂಬುದನ್ನು ಗಮನಿಸಬೇಕು. ಸ್ತ್ರೀವಾದ ಮತ್ತು ಪುರುಷ ಪ್ರಧಾನ ಸಮಾಜದ ಕಟ್ಟಳೆಗಳನ್ನು, ಬಂಧನಗಳನ್ನು ಸದ್ದಿಲ್ಲದೇ  ಮನೆಯ ಹಿತ್ತಲಿನಲ್ಲಿನ ಹಂಡೆಯ ಬಿಸಿನೀರು ಕಾಯಿಸುವ ಒಲೆಗೆ ಒಣಕಟ್ಟಿಗೆಯನ್ನು ಇಟ್ಟು ಬೆಂಕಿ ಹಚ್ಚಿದಂತೆ, ಹಚ್ಚಿಬಿಡುತ್ತಾರೆ. ಬೆಂಕಿಯನ್ನು ಬೆಳಕಾಗಿಸಿ ಬಿಸಿನೀರು ಕಾಯಿಸಿಕೊಳ್ಳುವ ಪ್ರಕ್ರಿಯೆ ಇದ್ದಂತೆ, ಕವಿತೆ ಕಟ್ಟುವ ಬಗೆ. ಇದನ್ನು ಶೋಭಾ ಅವರ ಕವಿತೆ ಗಳಲ್ಲಿ ಕಾಣಬಹುದು. ಅವ್ವ ಮತ್ತು ಅಬ್ಬಲಿಗೆ ಇಷ್ಟವಾಗಲು ನನಗೆ  ಹದಿನಾಲ್ಕು‌  ಕಾರಣಗಳಿವೆ. ಇವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಶೋಭಾ ಅವರ ಮೊದಲ ಸಂಕನಲದಲ್ಲಿ  ಕಾವ್ಯದ ತುಂಬಾ ತಾಯ್ತನ ತುಂಬಿರುವುದು. ದೇವರನ್ನು ಪ್ರಶ್ನಿಸಿರುವುದು. ಯುದ್ಧ ವಿರೋಧಿ ನಿಲುವುಗಳಿರುವುದು . ಗುರ್ ಮೆಹರ್ ಕವಿತೆಯಲ್ಲಿ ಸೈನಿಕನ ಮಗಳ ತಳಮಳ ಹಿಡಿದಿಟ್ಟು, ಆಕೆಯ ಪರಕಾಯ ಪ್ರವೇಶ ಮಾಡಿ ಕವಿತೆ ಕಟ್ಟಿರುವುದು. ಹೆಣ್ಣಿನ ತಳಮಳ ದಾಖಲಿಸಿರುವುದು. ಹಳ್ಳಿಯನ್ನು ಮರೆಯದಿರುವುದು. ಅಲ್ಲಿಯ ಮಣ್ಣು ತಂದು ನಗರದ  ಕುಂಡದಲ್ಲಿ ಹೂ ಬೆಳಸಿರುವುದು. ಹೆಣ್ಣಿನ ಮನದ ಸ್ವಾತಂತ್ರ‍್ಯದ ಬಯಕೆಯ ಮುಂದಿನ ತಲೆಮಾರಿಗೆ ದಾಟಿಸಿರುವುದು. ಪ್ರೇಮಧರ್ಮದ ಹುಟ್ಟಲಿ ಎಂಬ ಕನಸ ಕಟ್ಟಿಕೊಡುವುದು.ಜಾತಿ ಧರ್ಮ ಮೀರಿದ ಮನುಷ್ಯತ್ವ ಪ್ರತಿಪಾದಿಸುವುದು. ಪ್ರಕೃತಿಯೊಡನೆ ಮನದ ತಲ್ಲಣ ,ಬಯಕೆ ಹೇಳುತ್ತಾ ಕನಸು ಹೆಣೆಯುವುದು. ಪ್ರೇಮದ ನವಿರು ಭಾವಗಳನ್ನು ಕಟ್ಟಿಕೊಡುವುದು.ಬುದ್ಧನನ್ನು ನೆನೆಯುತ್ತಲೇ ಯಶೋಧರೆಯ ತಳಮಳವನ್ನು ಕಣ್ಣೆದುರಿನ ಮಗನಿಗೆ ನಿವೇದಿಸುವುದು. ತವರಿನ ತಾರಸಿಯಲ್ಲಿ ಅಟ್ಟ ಸೇರಿದ ಕನಸುಗಳ ಮೆಲುಕು ಹಾಕುವುದು. ಶ್ರಮಿಕರನ್ನು, ರೈತರನ್ನು ಕಾವ್ಯದಲ್ಲಿ ಶ್ರದ್ಧೆಯಿಂದ ಸ್ಮರಿಸುವುದು. ಅಸಮಾನತೆಯ ವಿರುದ್ಧ ಧ್ವನಿ: ಶೋಭಾ ಅವರ ಕವಿತೆಗಳಲ್ಲಿ ಜಾತಿ ವ್ಯವಸ್ಥೆ ಮತ್ತು ಸ್ಥಗಿತ ವ್ಯವಸ್ಥೆಯ ವಿರುದ್ಧ ತಣ್ಣನೆಯ ಬಂಡಾಯವಿದೆ. ಮಣ್ಣು ಮತ್ತು ಹೆಣ್ಣನ್ನು ಸಾಂಪ್ರದಾಯಿಕ ಪುರುಷ ಪ್ರಧಾನ ವ್ಯವಸ್ಥೆ ಹೇಗೆ ಬಳಸಿಕೊಂಡಿದೆ ಎಂಬುದನ್ನು ಅವರು ಮೆಲುದನಿಯಲ್ಲಿ ದಾಖಲಿಸುತ್ತಾರೆ. ದೇವರು ಮತ್ತು ದೇವಸ್ಥಾನ ವ್ಯವಸ್ಥೆ ವಿಡಂಬಿಸುವ ಕವಿತೆಗಳು, ರಾಜಕೀಯ ಪ್ರಜ್ಞೆಯ ಕವಿತೆಗಳು , ಶ್ರಮಿಕರು ಓಟಿನ ದಿನ ಮಹತ್ವ ಪಡೆಯುವ ವ್ಯಂಗ್ಯವೂ ಅವರ ಸಂಕಲನದ ಕೆಲ ಕವಿತೆಗಳಲ್ಲಿ ಇವೆ. “ಹೆಚ್ಚೆಂದರೇನು ಮಾಡಿಯೇನು”  ಎಂಬ ಕವಿತೆಯಲ್ಲಿ ದೇವರು ತಾಯಿಯ ಮಗ ಎಂದು ಹೇಳುತ್ತಾರೆ. ತಾಯಿಯೇ ಇಲ್ಲಿ ಪ್ರಧಾನ ಕೇಂದ್ರ. ಹೆಣ್ಣು ಮತ್ತು ಮಣ್ಣಿನ ಸುತ್ತ ಹೆಣೆದ ಕವಿತೆಗಳು ಕನ್ನಡದಲ್ಲಿ ಪ್ರಧಾನ ಧಾರೆಯೊಂದನ್ನು ನೆನಪಿಸುತ್ತವೆ. ಆಧುನಿಕ ಕನ್ನಡ ಮಹಿಳಾ ಕಾವ್ಯದ ವಸ್ತುಗಳನ್ನು ನೆನಪಿಸಿಕೊಂಡಾಗ ಶೋಭಾ ದಿಟ್ಟತನದಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. `ಋಣಮುಕ್ತೆ’ಯಲ್ಲಿ ಮಳೆ ಮತ್ತು ಭೂಮಿಯ ಸಂಬಂಧವಿದೆ. `ಒಡಲ ಬಂಧ’ ಕವಿತೆಯಲ್ಲಿ ಮುಟ್ಟು ಮೂಢನಂಬಿಕೆ ಹಾಗೂ ಕನಸು ಕುಡಿಯೊಡೆವ, ಚಿಗುರೊಡೆವ ಹೊತ್ತಿನ , ಕಾಮನಬಿಲ್ಲು ಕಂಗಳಲ್ಲಿ ಅರಳುವ ಚಿತ್ರವಿದೆ. ಹೆಣ್ತನ ಹೂವಾಗಿ ಅರಳುವ ಸಮಯವನ್ನು ಬಣ್ಣಿಸುವ ಕವಯಿತ್ರಿ ಗರ್ಭಗುಡಿಯ ಪೂರ್ಣಕುಂಭದ ಕೆನ್ನೀರಿದು ಎನ್ನುತ್ತಾಳೆ. ಪೂರ್ಣಕುಂಭದ ಕೆನ್ನೀರು ಖಾಲಿಯಾಗಬಾರದು ಎನ್ನುವಾಗ ಭೂಮಿ ಬಂಜೆಯಾಗಬಾರದು ಎಂಬ ಧ್ವನಿಯೂ ಇದೆ. “ಉಯಿಲೊಂದ ಬರೆದಿಡುವೆ”  ಈ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಕವಯಿತ್ರಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಗೆ ಈ ಕವಿತೆ ಸಾಕ್ಷಿ. “ಹೊಟ್ಟೆ ತುಂಬಿದ ಜನಗಳಿಗೆ ಮಾತ್ರ ಒಡೆಯುವುದರ ಕುರಿತೇ ಚಿಂತೆ” ಎಂಬ ಸಾಲುಗಳು ಕವಯಿತ್ರಿ ಯಾವತ್ತೂ ಸತ್ಯದ ಕಡೆಗೆ ಸಾಗುವವಳು ಮತ್ತು ಸಮಾಜದ ಒಳಿತಿಗೆ, ಮಾನವೀಯತೆಯ ಕಡೆಗೆ ನಿಲ್ಲುವವಳು ಎಂಬುದು ಸ್ಪಷ್ಟವಾಗಿದೆ. `ಕವನ ಹುಟ್ಟುವ ಹೊತ್ತು’ ಕವಿತೆಯಲ್ಲಿ ಅಸ್ತಿತ್ವದ ಹುಡುಕಾಟವೂ,ಸ್ವಾತಂತ್ರ್ಯದ ಹುಡುಕಾಟವೂ ಇದೆ. ಮಗ, ಅತ್ತೆ, ಅವ್ವ ಇವರ ನಡುವೆ ಕವನಗಳು ಕಳೆಯುತ್ತವೆ ರಾತ್ರಿಯಲ್ಲಿ !! ಎಂಬ ನೋವು ಇದೆ.  ಹಾಗೆ `ನನ್ನ ಕವಿತೆ’ಯಲ್ಲಿ ಕವಿತೆ ಅಪ್ಪ, ಅವ್ವ,ಅಣ್ಣ,ನನ್ನಕ್ಕ ತಂಗಿಯರಿಗಾಗಿ, ಮಣ್ಣಲ್ಲಿ ಹೊಸ ಟಿಸಿಲು ನನ್ನ ಕಾವ್ಯ, ಹುಡುಕಿ ಕೊಡುವ ಪತ್ರ ಫಲಕಗಳಿಗೂ ಅಲ್ಲ ಎನ್ನುತ್ತಾರೆ, ಸಾಹಿತ್ಯಲೋಕದ ರಾಜಕಾರಣದ ಬಗ್ಗೆ ಸಹ ಅವರ ನೈತಿಕ ಕೋಪ ಈ ಕವಿತೆಯಲ್ಲಿದೆ. `ನಲವತ್ತರಂಚಿವ ಸ್ವಗತ’ದಲ್ಲಿ ಸಹ ಅದೇ ಅಸ್ತಿತ್ವದ ಹುಡುಕಾಟ. ಕಾಲಕ್ಕೊಂದು ಕೀಲಿ ತೋಡಿಸಿ, ಕಾಲವನ್ನು ಕೂಡಿಹಾಕುವಂತಿದ್ದರೆ ಎಂಬ ಪ್ರಶ್ನೆಯನ್ನು ಮಹಿಳೆಯರ ಪ್ರತಿನಿಧಿಯಾಗಿ ತನಗೆ ತಾನೇ ಹಾಕಿಕೊಳ್ಳುತ್ತಾಳೆ. ಕಾಲದ ಹಕ್ಕಿ ಹಗಲು ಇರಳುಗಳ ರೆಕ್ಕೆಗಳನ್ನು ಹೊತ್ತು ಹಾರುವುದನ್ನು ಬೇಂದ್ರೆ ಹಿಡಿದಿಟ್ಟಂತೆ, ಚಲಿಸುವ ಕಾಲ ಕನ್ನಡ ಕವಿಗಳನ್ನು ಕಾಡಿರುವ ಬಗೆ ಅನನ್ಯವಾದುದು. “ನಲವತ್ತರಂಚಿನ ಸ್ವಗತ” ದ ಜೊತೆ “ಮುಸುಕಾಗುವ ಸಂಕಟ” ಕವಿತೆಯನ್ನು ಸಹ ಗಮನಿಸಿಬೇಕು. ಸೀರೆಯನ್ನು ಅವರ ಬಣ್ಣವನ್ನು ಅದ್ಭುತ ಪ್ರತಿಮೆಯಾಗಿಸಿದ್ದಾರೆ ಶೋಭಾ, ಒಂದೊಂದು ಬಣ್ಣ, ಒಂದೊಂದು ಸಮಯದ ಮಹತ್ವದ ಜೊತೆ ಕುಟುಂಬದಲ್ಲಿ ಒಬ್ಬಬ್ಬೊರಿಗೆ ಇಷ್ಟವಾಗುವ ಬಣ್ಣದ ಸೀರೆಯುಡುವುದು. “ಹಳದಿ ಮಕ್ಕಳಿಗೆ, ನೀಲಿ ನನಗೆ ದೊಡ್ಡ ಬಾರ್ಡರ್ ಸೀರೆ ಗಂಡನಿಗೆ ತಿಳಿ ಗುಲಾಬಿ ಅವ್ವನಿಗೆ ” ಹೀಗೆ ಬರೆಯುತ್ತಾ `ಎದೆಗಿಳಿದ ಸೀರೆಗಳು ಸುಕ್ಕಾಗಿರಬಹುದು, ಒಂದೊಂದು ಬಣ್ಣ, ಒಂದೊಂದು ಕನಸು, ಬಣ್ಣ ಮಾಸಿದ ಮೇಲೆ ?? ಹೆಣ್ಣಿನ ತಳಮಳವನ್ನು, ಭಿನ್ನ ಧ್ವನಿಯಲ್ಲಿ, ಸೀರೆ ಹೆಣ್ಣು ಮತ್ತು ಮುಪ್ಪನ್ನು ಧ್ವನಿಸುವ ಕ್ರಮ ಕಾವ್ಯದ ಶಕ್ತಿಯನ್ನು ಹೇಳುತ್ತದೆ. “ನಾವು ಮತ್ತು ಅವರು” ಎಂಬ ಕವಿತೆಯಲ್ಲಿ ಶ್ರಮಿಕರ ಬಗ್ಗೆ ಇರುವ ಕಾಳಜಿ ಹಾಗೂ ದುಡಿದುಣ್ಣುವ ವರ್ಗದ ಬಗ್ಗೆ ಕವಿಯ ಚಿತ್ತ ಹರಿದಿದೆ. ಈ ಕವಿತೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆ ವರ್ಗಗಳ ಆಲೋಚನ ಕ್ರಮವನ್ನು ಸಹ ವ್ಯಂಗ್ಯವಾಗಿ ಹೇಳಿದ್ದಾಳೆ ಕವಯಿತ್ರಿ. “ನಾವೋ ದಿಂಬಿನ ಜೊತೆಗೆ ನಿದ್ದೆಯನ್ನು ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಈ ಮಹಡಿಯ ಮನೆಯಲ್ಲಿ ” ಹೊಸ ಕಾರಿಗೆ ಗೀರು ಬಿದ್ದಾಗ ಆದ ಸಣ್ಣ ನೋವನ್ನೇ ಇಟ್ಟುಕೊಂಡು ಕವಿತೆಯಾಗಿಸುವ ಕವಯಿತ್ರಿ “ಎದೆಯ ಮೇಲೆ ನೀನೆಳೆದು ಬಿಟ್ಟ, ಆ ಬರೆಗೆಷ್ಟು ನೋವಾಗಿರಬೇಡ? ಹೀಗೆ ಪ್ರಶ್ನಿಸುವ ಎದೆಗಾರಿಕೆ ಸಹ ಇದೆ. ಸೂಕ್ಷ್ಮ ಮನಸ್ಸಿನವರಿಗೆ ಆದ ಅತೀ ಚಿಕ್ಕ, ಮರೆತುಹೋಗಬಹುದಾದ ಘಟನೆಯೂ ಕವಿತೆಯ ವಸ್ತುವಾಗುತ್ತದೆ ಎಂಬುದಕ್ಕೆ ಕಾರು-ಗೀರು ಕವಿತೆ ಸಾಕ್ಷಿ. ಹಳ್ಳಿ, ಹಳ್ಳಿಗೆ ಆಧುನಿಕತೆ ಪ್ರವೇಶಿಸಿದ ನಂತರ ಹಳ್ಳಿಯ ಮುಗ್ಧತೆ ಮತ್ತು ನಗು ಮಾಸಿರುವುದು “ನನ್ನೂರು” ಕವಿತೆಯಲ್ಲಿ ದಾಖಲಾಗಿದೆ. ಹೊಸ ಬದುಕಿನತ್ತ ಕವಿತೆಯಲ್ಲಿ ಬಹುದೊಡ್ಡ ಆಶಯಗಳನ್ನು ಮಹಿಳಾ ಸಮುದಾಯಕ್ಕೆ  ಕವಯಿತ್ರಿ ಬಿತ್ತಿದ್ದಾರೆ. ಕಿಡಿಕಿ, ಜೀತಗಳನ್ನು ಸಂಕೇತವಾಗಿ ಹೇಳುತ್ತಾ ಮಾನಾಪಮಾನ, ಅಡೆತಡೆ,ಎಳೆದ ಬರೆ, ಸ್ವರಸತ್ತ ಕೊರಳು, ನಂಜನಿತ್ತವರ ಮೀರೋಣ ಎನ್ನುತ್ತಾ….ಹೊಸ ಬೆಳಕಿನ ಹುಡುಕಾಟ ಮಾಡೋಣ. ಹೊಸಗೀತೆ, ಹೊಸಬಟ್ಟೆ, ಹೊಸ ಭಾಷ್ಯ ಬರೆಯೋಣ. ಹಸಿರಾಗಿ ಹುಟ್ಟೊಣ,ದನಿಯಾಗಿ ನಿಲ್ಲೋಣ ಎನ್ನುತ್ತಾಳೆ. “ಋಣದ ಪತ್ರ” ದಲ್ಲಿ ಹರಿದ ಚಂದ ಕೌದಿಯ ಹೊಲಿಯ ಬೇಕಿದೆ ಎಂದು ಸಮಾಜದ ಬಿರುಕುಗಳಿಗೆ, ಸಂಬಂಧಗಳಿಗೆ ಬೆಸುಗೆ ಹಾಕುವ ಕೆಲಸವನ್ನು ಕವಯಿತ್ರಿ ಮಾಡುತ್ತಾರೆ.  ‘ ‘ ‘ನಾನು’ ಎಂಬ ಕವಿತೆಯಲ್ಲಿ ನೋವಲ್ಲೂ ನಗುವ ಆಶಯಕ್ಕೆ, ಎದೆ ಬಾರವ ಹಗುರಾಗಿಸಿ ಉಸಿರಾಗುವ ಹಂಬಲಕ್ಕೆ ಕಸನು ಬಿತ್ತುವುದು ಎನ್ನುತ್ತಾ…ಪ್ರೀತಿಸಿಯೇ ತೀರುತ್ತೆನೆಂದಲ್ಲ, ಜನ್ಮಜನ್ಮಗಳ ಋಣಭಾರವೊಂದರ ಸಂದಾಯಕ್ಕೆ ನಾನು ಇದ್ದೇನೆ ಎಂಬ ಹಂಬಲವ ತೋಡಿಕೊಳ್ಳುತ್ತಾಳೆ ಕವಯಿತ್ರಿ. ” ನೀ ಬರುವುದು ಖಾತ್ರಿಯಾದಾಗಿನಿಂದ ಕನಸುಗಳು ಬಣ್ಣ ಹಚ್ಚಿಕೊಳ್ಳುತ್ತಿವೆ” ಎಂಬುದು ಬದುಕಿನ ದೊಡ್ಡ ಆಶಾವಾದವಾಗಿದೆ. *********** ನಾಗರಾಜ ಹರಪನಹಳ್ಳಿ

ಅವ್ವ ಮತ್ತು ಅಬ್ಬಲಿಗೆ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಲದ ನೆರಳು ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕತೆಗೆ ಬೇಕಾದ ವಸ್ತು, ಅದರಲ್ಲಿ ತುಂಬಿಕೊಳ್ಳುವ ಪಾತ್ರಗಳು, ಪ್ರಾದೇಶಿಕ ಭಾಷೆಯ ಸೊಗಡು,ಅದರ ನಿರ್ವಹಣೆ, ಅನಿರೀಕ್ಷಿತ ತಿರುವುಗಳು, ಕಾಡುವ ಪಾತ್ರಗಳ ಹೆಣಿಗೆ, ಕೃತಕತೆಯಲ್ಲೂ ಮೈಮರೆಯದ ವಾಸ್ತವೀಕತೆ… ಇವುಗಳಿಂದ ಮಧುರಾ ಅವರು ಕತೆಗಳ ಮೂಲಕ ನಮ್ಮನ್ನು ಬಂಧಿಸಿಡುವಲ್ಲಿ ಯಶಸ್ವಿ ಆಗಿದ್ದಾರೆ. ಆಲದ ನೆರಳು – ಪುರುಷ ಪ್ರಧಾನ ಸಮಾಜದಲ್ಲಿ ಎರಡು ಹೆಣ್ಣು ಜೀವಗಳು ಸಾಂಸ್ಕೃತಿಕವಾಗಿ ನಲುಗಿ,ಕೊರಗಿ ಹೋಗುವ ಕಥಾ ಹಂದರ ಹೊಂದಿದೆ. ‘ ಬರೀ ನೆರಳಿದ್ರೆ ಉಳಕಿ ಗಿಡಗೋಳು ಬೆಳ್ಯೋದೆ ಇಲ್ಲ. ಸ್ವಲ್ಪ ಬೆಳಕು, ಬಿಸಿಲು ಬರ್ಲಿ. ಅಂದ್ರ ಬ್ಯಾರೇ ಗಿಡಗೋಳು ಬೆಳಿತಾವ’.ಇದು ಇಡೀ ಕಥೆಯ ಧ್ವನಿ ಹಾಗೂ ಸತ್ವಯುತವಾದ ಭಾಗ. ಅನಾವರಣ – ಕೇದಾರನಾಥ ಯಾತ್ರೆಗೆ ಹೋದ ದಂಪತಿಗಳು ಪ್ರಕೃತಿ ಅವಘಡಕ್ಕೆ ಸಿಲುಕುವುದು. ಆಗ ಅವರ ಢೋಲಿ ಹೊತ್ತವನು, ಅವನ ಪುಟ್ಟ ಡೇರೆ ಮನೆಯಲ್ಲಿ ಉಳಿಸಿಕೊಂಡು ಉಪಚರಿಸುವುದು. ಬಡತನದ ಆ ಕುಟುಂಬ ಇವರನ್ನು ಆದರಿಸುವ ರೀತಿ. ಗಂಡ, ತಾವು ಉಳಿಯುವುದು ಕಷ್ಟ ಎಂದಾಗ ಮಾಡುವ ವರ್ತನೆ. ಬದುಕಿ ಮರಳಿ ಹೊರಟಾಗ ಬದಲಾಗುವ ಅವನ ಚರ್ಯೆ. ಎಲ್ಲಕ್ಕಿಂತ ಮುಖ್ಯವಾಗಿ ಕೊನೆಯಲ್ಲಿ ಲೇಖಕಿ ಕಥೆಯನ್ನು ನಿಭಾಯಿಸಿದ ರೀತಿ ಗಮನ ಸೆಳೆಯುತ್ತದೆ. ಅಕ್ಕಮ್ಮ – ಕತೆಯೊಳಗೊಂದು ಕತೆ, ಅದರಲ್ಲಿ ಉಪಕಥೆ ಅನ್ನುವಂತೆ ತಿರುವು ಪಡೆಯುವ ಕತೆಯಿದು. ಕತೆ ಹೇಳುವವನೇ ಇಲ್ಲಿ ದುರಂತ ನಾಯಕ. ಅವನೇ ಅವನಜ್ಜ ಅಮ್ಮನ ಮೇಲೆ ಬಲಾತ್ಕಾರ ಮಾಡಿ ಹುಟ್ಟಿದ ಮಗ. ನೈತಿಕತೆ ಮಾಯವಾಗಿ, ನಂಬಲಸಾಧ್ಯ ಅನ್ನಿಸುವ ಕಥೆಗೆ ಓದುಗರೂ ಸಾಕ್ಷಿಯಾಗುವುದರ ಜೊತೆಗೆ ಕಸಿವಿಸಿಗೂ ಒಳಗಾಗುವುದು ಖಚಿತ. ನೆಲದ ಅಂಚು – ಗ್ರಾಮ ಮತ್ತು ನಗರದ ಬದುಕನ್ನು ಒಟ್ಟುಗೂಡಿಸುತ್ತಲೇ ಮಧ್ಯಮ ವರ್ಗದ ಆಸೆ, ದುರಾಸೆ, ಕನಸನ್ನು ಹೊರಹಾಕುವ ಈ ಕಥೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಸಂದೇಶವನ್ನು ನೀಡುತ್ತದೆ. ಪಲಾಯನ- ಬದಲಾದ ಕಾಲಘಟ್ಟದಲ್ಲಿ ಮತ್ತು ನಗರೀಕರಣದ ಪರಿಣಾಮವಾಗಿ ಎಲ್ಲವೂ ಕೃತಕ.ಹಳ್ಳಿಯ ಸೊಗಡಿನ ವಸ್ತು, ರೈತರ ಕಷ್ಟ, ಆರ್ಥಿಕ ಸ್ಥಿತಿಯನ್ನು, ಮಾನಸಿಕ ತೊಳಲಾಟವನ್ನು ಗ್ರಾಮೀಣ ಹಿನ್ನೆಲೆಯಲ್ಲಿ ಸಹಜವಾಗಿ ಮಧುರಾ ಅವರು ಕಟ್ಟಿಕೊಟ್ಟಿದ್ದಾರೆ. ಇವುಗಳ ಜೊತೆಗೆ ಇತರ ಕಥೆಗಳೂ ಸಹ ಮಹತ್ವದ ಕಥೆಗಳು. ಆದರೆ ಇಲ್ಲಿನ ಮಿತಿಯಲ್ಲಿ ಇಷ್ಟನ್ನು ಹೇಳಿದ್ದೇನೆ.ಆಲದ ನೆರಳು ಕೃತಿಯನ್ನು ಒಮ್ಮೆ ಓದಿ.**** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹುಲಿಕಡ್ಜಿಳ ಸರಳ ಜೀವನ ಸೂತ್ರ ಪಠಿಸುವ ಕಥೆಗಳು- ಹುಲಿಕಡ್ಜಿಳ ತೀರ್ಥಹಳ್ಳಿಯ ಒಡ್ಡಿನ ಬೈಲಿನ ಹರೀಶ ಟಿ. ಜೆ. ಎಂದೇ ಹೆಸರಾಗಿರುವ ಹರೀಶ ಮಿಹಿರ ಇವರು ಮೂಡಬಿದಿರೆ ಆಳ್ವಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನೀಲಿನದಿ ಕಥಾ ಸಂಕಲನದಿಂದ ಈಗಾಗಲೇ ಕಥಾ ಸಾಹಿತ್ಯ ಲೋಕದಲ್ಲಿ ಪರಿಚಿತರು ಕೂಡಾ.ಅವರ ಎರಡನೇ ಕಥಾ ಸಂಕಲನ ಹುಲಿಕಡ್ಜಿಳ. ಸಂಕಲನದ ಹೆಸರೇ ಭಯ ಬೀಳಿಸುವಂತದ್ದು. ಆದರೆ ಒಳಪುಟದಲ್ಲಿ ಸಾಮಾಜಿಕ ಬದುಕಿನ ಹಲವು ತಿಕ್ಕಾಟಗಳು ಸಂಘರ್ಷಗಳು ಸಮ ಕಾಲೀನ ಜಗತ್ತು ಆಧುನಿಕತೆಯ ಜೊತೆಗೆ ನಡೆಯಬಾರದ ನಡೆಯಲ್ಲಿ ಹಾದಿ ತಪ್ಪುತ್ತಿರುವುದನ್ನು ವಿಶ್ಲೇಷಿಸುತ್ತಾ, ಬದುಕಿನ ನೈಜ ಸಾರ ಏನು? ಎಂಬುದನ್ನು ಓದುಗನಿಗೆ  ತಿಳಿಸುವ ಪ್ರಯತ್ನ ಮಾಡುತ್ತವೆ. ಬಹುತೇಕ ದಕ್ಷಿಣಕನ್ನಡ,ಉಡುಪಿಯ ಸಾಂಸ್ಕೃತಿಕ ಹಿನ್ನೆಲೆ ಜನಜೀವನದ ಒಂದು ಚಿಕ್ಕ ಒಳನೋಟಕ್ಕೆ ಈ ಕಥೆಗಳು ಸೂಡಿ ಹಿಡಿಯುತ್ತವೆ. ನಮ್ಮ ಉಚ್ಚ ಪಾರಂಪರಿಕ ನೆಲೆಗಟ್ಟು, ಹೊಸತನಕ್ಕೆ ತೆರೆದುಕೊಳ್ಳುವ ಹುಮ್ಮಸ್ಸಿನಲ್ಲಿ ತಳಪಾಯವನ್ನು ಗಟ್ಟಿ ಮಾಡದ ಮನೆಗಳಲ್ಲಿಯ ನೋವು ನಲಿವು, ಹಸಿವು ಸಂಕಟಗಳ ದರ್ಶಿಸುತ್ತವೆ . ಕಥೆಗಳು. ಹಣದ ಮದ ಅದರ ಅಟ್ಟಹಾಸದ ನಡುವೆಯೇ ಬಡವನಲ್ಲೂ ಇರಬೇಕಾದ ಆತ್ಮಾಭಿಮಾನ ಹಾಗೂ ಆತ್ಮವಿಶ್ವಾಸಭಾವದ ಪ್ರತಿಫಲನವನ್ನು ನಿರೂಪಿಸುತ್ತವೆ. ಕೆಲವು  ಕಥೆಗಳು ನಿಸರ್ಗದತ್ತ ಜೀವನ ವಿಧಾನದ ಅಗತ್ಯತೆಯನ್ನು ಮನಗಾಣಿಸುತ್ತವೆ. ಆಧುನಿಕತೆ ವರವೆಂದು ಬಗೆದು ಹೊಸ ಜಗತ್ತಿಗೆ ತೆರೆದುಕೊಳ್ಳುವ ಅನಿವಾರ್ಯತೆ ಇಂದಿನದು. ಆದರೆ ಅದು ನಿಸರ್ಗದ ನಿಯಮಕ್ಕೆ ತೀರಾ ವಿರುದ್ಧವಾಗಿ, ಮನೆಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡರೇ ಒಂದಲ್ಲ ಒಂದು ದಿನ ವಿಷಾನಿಲಗಳ ಪ್ರಭಾವ ಕಟ್ಟಿಟ್ಟಿದ್ದು ಎಂಬುದನ್ನು ಮನಗಾಣಿಸುತ್ತವೆ. ಸಂಕಲನದ ಮೊದಲ ಕಥೆ ಹುಲಿಕಡ್ಜಿಳ. ಜೇನು ಹುಳುವಿನಂತೆ ಗೂಡು ಕಟ್ಟುವ ಕಚ್ಚಿದರೆ ಭಯಂಕರ ಉರಿ ತರುವ ಕಡ್ಜಿಳ ಹುಳುಗಳು ಬಹುತೇಕ ಉತ್ತರ ಮತ್ತು ದಕ್ಷಿಣಕನ್ನಡದ ಸಣ್ಣಪುಟ್ಟ ಕಾನುಗಳಲ್ಲೂ ಕಾಣಸಿಗುತ್ತವೆ.ಅಂತಹ ಭಯಂಕರ ಹುಳುವನ್ನು ಹೊಸಕಿ ಹಾಕುವುದು ಸಾಮಾನ್ಯದ ಕೆಲಸವಲ್ಲ. ಆದರೆ ಮನೋಬಲ ಹಾಗೂ ಅದನ್ನು ಕೊನೆಗಾಣಿಸಬಲ್ಲ ಕೆಲವು ತಂತ್ರಗಳು ತಿಳಿದಿದ್ದರೆ ಅದನ್ನು ಬುಡಸಮೇತ ನಾಶ ಮಾಡುವುದು ಕಷ್ಟವೇನಲ್ಲ. ಬಡವ ನಾಗರಾಜಣ್ಣನ ಮಗಳು ಪುಷ್ಪ ಶಾಲೆಗೆ ಹೋಗುತ್ತಿದ್ದವಳು ಒಮ್ಮೆಲೇ ಶಾಲೆಗೆ ಹೋಗಲು ಹಿಂದೇಟು ಹಾಕತೊಡಗುವುದು, ಅದಕ್ಕೆ ಕಾರಣ ಶ್ರೀಮಂತ ಯುವಕನಾದ ತಾರಗೊಳ್ಳಿಯ ನಾಗೇಶ ಎಂಬಾತ ಆಕೆಯನ್ನು ತನ್ನೊಂದಿಗೆ ಬರುವಂತೆ ಪೀಡಿಸುತ್ತಿರುವುದು, ಅದನ್ನು ತಿಳಿದ ತಂದೆ ನಾಗರಾಜಣ್ಣ ಬಹಳ ಚಾತುರ್ಯದಿಂದ ಆ ಹುಳುವನ್ನು ಹೊಸಕಿ ಹಾಕುವುದು ಇದಿಷ್ಟೇ ಕಥೆ. ನಾಗರಾಜಣ್ಣ ಇಲ್ಲಿ ಬಡತನಕ್ಕೆ ಪ್ರತಿನಿಧಿಯಾಗದೇ, ಬದುಕಿನ ಸಮಸ್ಯೆಗಳನ್ನು ಎದುರಿಸುವ ಸಮರ್ಥ ವ್ಯಕ್ತಿತ್ವಕ್ಕೆ ಪ್ರತಿನಿಧಿಯಾಗುತ್ತಾನೆ. ಪ್ರಾಣಿ ಜಗತ್ತಿನಲ್ಲೂ ಕಾಣುವುದು ಇದೇ ತತ್ವವೇ . ಹಾಗಾಗಿ ಸಾಮಾಜಿಕ ಹಿನ್ನೆಲೆಯಲ್ಲಿ ಕಟ್ಟಿದ ಪಾತ್ರವಾದರೂ ಅದು ನಿರೂಪಿಸುವುದು ಸ್ವರಕ್ಷಣೆಯ ಅಗತ್ಯತೆಯನ್ನು.ದುರಾಚಾರವನ್ನು ಸಹಿಸುವುದು ಅಪರಾಧವೇ. ಅಂತಹ ನೀಚನನ್ನು ಮಟ್ಟ ಹಾಕಲೇ ಬೇಕು.ಇಂದಿನ ಸಮಾಜದಲ್ಲೂ ಇರುವ ಇಂತಹ ಪಾತ್ರಗಳು ಅಸಹಾಯಕರ ಕಣ್ಣೀರಿನಲ್ಲೇ ಸುಖಿಸುತ್ತವೆ. ಹಾಗಾಗಿ ಕಥೆಗಾರರ ಈ ಸಂದೇಶ ಕಥೆಯ ಮಹತ್ವವನ್ನು ಹೆಚ್ಚಿಸಿದೆ. ‘ಬೇಗೆ’ ಕಥೆಯಲ್ಲಿ  ಸಾಂಸಾರಿಕ ಜೀವನದ ಅತೃಪ್ತಿಯಲ್ಲಿ ಬೆಂದು ನರಳುವ ಹೆಣ್ಣುಗಳು, ಹೊರಜಗತ್ತಿನಲ್ಲಿ ಸುಂದರ ಸಂಸಾರದ ಮೊಗವಾಡ ಹಾಕಿಕೊಂಡಿರುವುದು, ಹೆಣ್ಣುಗಳು ಜೀವನವೀಡಿ ಹೀಗೆ ಕೊರಗುತ್ತಾ ಬದುಕಬೇಕಾದ ಅನಿವಾರ್ಯತೆಯನ್ನು ಹೇಳುತ್ತಾರೆ. ಆ ಮೂಲಕ ಭಾರತೀಯ ಸಮಾಜದ ಸಾಂಸ್ಕೃತಿಕ ರೂಹುಗಳನ್ನು ಆಧುನಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲಾಗದ ನಮ್ಮ ಯುವಜಗತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನು ಮುರಿಯುವ ಅಗತ್ಯವಿದ್ದರೂ ಅದು ಪರಂಪರೆಯನ್ನು ಕಳೆದುಕೊಳ್ಳದೇ ಇರುವುದೇ ಸಭ್ಯತೆ ಎಂಬುದು ಕಥೆಯಲ್ಲಿ ಧ್ವನಿತವಾಗಿದೆ. ಆಧುನೀಕರಣದ ಅವಾಂತರ, ಹೊಸ ಜೀವನ ಶೈಲಿಯ ಆಕಾಂಕ್ಷೆಗೆ ಹಣವಿದ್ದರಾಯ್ತು ಎಂದುಕೊಂಡ ಹೆಣ್ಣು ಜೀವಗಳು ಮನೆಯವರು ಒಪ್ಪಿದ ಸಂಬಂಧಕ್ಕೆ ಗೋಣು ಕೊಟ್ಟು, ಮದುವೆಯಾಗುತ್ತಾರೆ. ಆದರೆ ವಿವಾಹವಾದ ಮೇಲೆಯೇ ಆ ಗಂಡಿನ ನಿಜದ ರೂಪ ಗೊತ್ತಾಗುವುದು. ಹಾಗಾಗಿ ಕಥೆಯ ಮುಖ್ಯ ಪಾತ್ರ ಅನಿತಾ ತನ್ನೊಂದಿಗಿನ ಯಾವ ಬಂಧಗಳಿಗೂ ಬೆಲೆಕೊಡದ, ಆಕೆಯ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದ ಪತಿಯನ್ನು ಬಿಡುವ ವಿಚಾರ ಮಾಡುವುದಿಲ್ಲ. ಮಕ್ಕಳಿಗಾಗಿ ಅವನೊಂದಿಗೆ ಏಗುವುದೇ ಇರುವ ಏಕೈಕ ಉಪಾಯ ಎನ್ನುತ್ತಾಳೆ. ಇದು ಭಾರತೀಯ ಸಮಾಜ ಹೇರಿದ ಅಲಿಖಿತ ಸಂವಿಧಾನಾತ್ಮಕ ಕಾನೂನು.ಮುಂದುವರೆದ ರಾಷ್ಟೃಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಬದುಕಿಗೆ ಮಹತ್ವವಿದೆ.ಅದೇ ನಮ್ಮಲ್ಲಿ ಬಂಧನಗಳಿಗೆ ಮಹತ್ವವಿದೆ. ಹಾಗಾಗಿ  ಲೇಖಕರು ಇಲ್ಲಿಯ ಹೆಣ್ಣು ಜೀವಗಳ ತಟ್ಟಿ ಮಾಡಾಡಿಸಿದರೂ, ಅಂತಹ ಸಂದೇಶವನ್ನೂ ನೀಡಲಾರರು. ‘ಕಟೆ’್ಟ  ಕಥೆ ಕೂಡಾ ಇನ್ನೊಂದು ಪ್ರಮುಖ ಸಂದೇಶವನ್ನೇ ನಿರೂಪಿಸುತ್ತದೆ. ಶ್ರೀಮಂತ ಗಬಡಿ ನಾಗ್ರಾಜರಾಯರ ಕುಟುಂಬ ಹೇಗೆ ತೋಟದ ಮನೆಯವರೆಂದು ಕರೆಸಿಕೊಂಡಿತ್ತೋ ಹಾಗೆ ಬೇರೆಯವರಲ್ಲಿ  ಕೆಲಸಕ್ಕೆ ಹೋಗುವ ಹಾಗಾಗುವ ಚಿತ್ರಣದೊಂದಿಗೆ   ಏಕತಳಿ ಬೇಸಾಯದಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮ, ಭೂಮಿಯ ಫಲವತ್ತತೆಯನ್ನು ಕಸಿದುಕೊಳ್ಳುವ ಇಂತಹ ಬೇಸಾಯ ಕೇವಲ ನಿಸರ್ಗ ವಿರೋಧಿ ಮಾತ್ರ ಆಗಿರದೇ ವಾಣಿಜ್ಯ ಜಗತ್ತಿನಲ್ಲೂ ಕೆಲವೊಮ್ಮೆ ವೈಪರಿತ್ಯಗಳನ್ನು ಹುಟ್ಟಿಸಿ, ಬೆಳೆದ ರೈತನ ಮೂಲಕ್ಕೆ ಕೊಡಲಿಪೆಟ್ಟು ಹಾಕುತ್ತದೆ ಎಂಬುದನ್ನು ವಿವರಿಸುತ್ತದೆ. ಇಂತಹ ಬೇಸಾಯ ಪದ್ಧತಿ ಆತನ ಬದುಕನ್ನೆ ನಾಶ ಮಾಡಿದ ಅನೇಕ ಉದಾಹರಣೆಗಳಿವೆ. ಆದಾಗ್ಯೂ ಕುರಿಗಳಂತೆ ರೈತರು ಈ ರೀತಿಯ ಬೇಸಾಯವನ್ನು ಹಿಂದೆಮುಂದೆ ನೋಡದೇ, ಕಾರ್ಪೊರೇಟ್ ಜಗತ್ತಿನ ಆಮೀಷಕ್ಕೆ ಒಳಗಾಗಿ ಅವಲಂಬಿಸಿಕೊಂಡು ಬರುತ್ತಿದ್ದಾರೆ.ಇದ್ದ ಸೊಗಸಾದ ಗದ್ದೆ ಹೊಲಗಳನ್ನು ಕೆಲವರು ತೋಟಗಳನ್ನಾಗಿ ಪರಿವರ್ತಿಸಿ ತೆಂಗು ಕಂಗು, ಬಾಳೆ, ಹತ್ತಿ ಅಂತೆಲ್ಲ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಕೆಲವೊಮ್ಮೆ  ವಾಣಿಜ್ಯ ಜಗತ್ತಿನಲ್ಲಿ ಏಕಾಏಕಿ ಬೆಲೆ ಕುಸಿತಗೊಂಡು ಸಾಲಗಾರರಾಗಿ, ದುರ್ಭರ ಬದುಕನ್ನು ನಡೆಸುವಂತಾಗುತ್ತದೆ. ಗೊಂಬೆ ಕಥೆಯ ಸುಂದರ ಹುಡುಗಿ ಶ್ರೀಲತಾ ತನ್ನ ನೀತಿಯಿಲ್ಲದ ನಡೆಯಿಂದ ಹೇಗೆ ಬದುಕಲ್ಲಿ ಹಾದಿ ತಪ್ಪಿ ದುರ್ದೆಶೆಗೆ  ಒಳಗಾದಳು ಎಂಬುದರಿಂದ ಓದಿಸಿಕೊಳ್ಳುತ್ತದೆ.ಆಧುನಿಕ ಬದುಕಿನ ಹೊಸ ಹೆಜ್ಜೆಗಳು, ಅವುಗಳ ವಿಫಲತೆ,ತಮ್ಮತನ ಇಟ್ಟುಕೊಳ್ಳಲಾಗದೇ ಆಧುನಿಕತೆಯ ಝಗಮಗಿಸುವಿಕೆಯಲ್ಲಿ  ಮೆರೆವ ಆಸೆಯಲ್ಲಿ ಆ ಬೆಂಕಿಗೆ ಬಲಿಯಾಗುವ ಶ್ರೀಲತಾ ದುರಂತ ಪಾತ್ರಕ್ಕೆ ಸಾಕ್ಷಿಯಾಗುತ್ತಾಳೆ. ‘ತವರು’ಕಥೆ ನಮ್ಮ ನಿಮ್ಮ ಮನೆಯ ಹಿರಿಯ ಜೀವಗಳ ನಡೆನುಡಿ,  ಬಂಧು ಬಾಂಧವರ ನಡುವಿನ ಬಾಂಧವ್ಯ, ಹೆಣ್ಣು ಮಕ್ಕಳ ತವರು ವ್ಯಾಮೋಹವನ್ನುತೆರೆದಿಟ್ಟಿದೆ. ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ.ಹೆಚ್ಚಿನ ಕತೆಗಳು ಸ್ತ್ರೀ ಪಾತ್ರವನ್ನೆ ಮುಖ್ಯ ನೆಲೆಯಲ್ಲಿ ಗ್ರಹಿಸುತ್ತಾ ವಿಸ್ತಾರಗೊಳ್ಳುತ್ತವೆ. ಹುಲಿಕಡ್ಜಿಳ ಕತೆಯ ಮುಗ್ಧ ಹುಡುಗಿ ಪುಷ್ಪಾ, ‘ಬೇಗೆ ‘ಕತೆಯ ದಾಂಪತ್ಯ ಜೀವನದ ಅತೃಪ್ತ ಪಾತ್ರಗಳಾದ ಅನಿತಾ ಮತ್ತು ವಾಣಿ, ತವರು ಕತೆಯ ತವರು ವ್ಯಾಮೋಹದ ಕತೆಗಾರರತಾಯಿ, ಸಾಕಲಾರದೆನ್ನ.. ಕಥೆಯ ಕರುಣಾಮಯಿ ಗೌರಿ, ಕುಡ್ಗೋಲು ಮುರ್ಗ ಕಥೆಯ ಸ್ವಾರ್ಥಮುಖಿ ಭಾವನಾ, ಗೊಂಬೆ ಕತೆಯ ಬಜಾರಿ ಶ್ರೀಲತಾ ಹೀಗೆ ಸ್ತ್ರೀ ಪಾತ್ರಗಳು ಸಂಕಲನದಲ್ಲಿ ಎದ್ದುಕಾಣುತ್ತವೆ. ಬಹಳ ನಿರರ್ಗಳ ಮಾತುಗಾರ  ಹಾಗೂ ಹಾಸ್ಯ ಮಿಶ್ರಿತ ಮಾತಿನ ಧಾಟಿಯ ಹರೀಶ ತಮ್ಮ ಬದುಕಿನ ಅನುಭವಗಳ ಮೂಲಕವೇ ಕತೆ ಹೆಣೆಯುತ್ತಾರೆ.  ಶೀರ್ಷಿಕೆ  ಕಥೆ ‘ಹುಲಿಕಡ್ಜಿಳ’ದ  ಹೊರತಾಗಿ ಉಳಿದ ಕತೆಗಳು ಜೀವಪರ ನಿಲುವನ್ನು, ತಾಳ್ಮೆ, ಸರಳತೆ, ಸಹಜತೆ, ಕರುಣೆ, ಪ್ರೀತಿ, ಬಾಂಧವ್ಯದ ಸುತ್ತಲೇ ಗಿರಕಿ ಹೊಡೆದು, ಸಹೃದಯರಿಗೆ ಇಷ್ಟವಾಗುತ್ತವೆ. ಬದುಕಿನೊಂದಿಗೆ ಬೆಸೆದುಕೊಂಡ ಜೀವಗಳನ್ನು ಅವರು ಪ್ರೀತಿಸುವ ಬಗೆ ಅದನ್ನು ಚಿತ್ರಶಾಲೆಯಂತೆ ಒಂದೊಂದು ಪಾತ್ರದೊಳಗಣ ಅನುಬಂಧವನ್ನು ಒಟ್ಟಂದದಲ್ಲಿ ಒಪ್ಪಂದದಂತೆ ಕಟ್ಟಿಕೊಟ್ಟರೀತಿ ಸೊಗಸಾಗಿದೆ. ******** ನಾಗರೇಖಾ ಗಾಂವಕರ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಮಕ್ಕಳಿಗಾಗಿ ನೂರಾರು ಕವಿತೆಗಳು ಕವಿ: ಸೋಮಲಿಂಗ ಬೇಡರಪ್ರಕಾಶನ: ಪಲ್ಲವಿ ಪ್ರಕಾಶನ, ಬೀಳಗಿಪುಟಗಳು: 220ಬೆಲೆ: ರೂ. 175/-ಪ್ರಕಟಿತ ವರ್ಷ: 2019ಕವಿಯ ದೂರವಾಣಿ: 9741637606 ಕಥೆ-ಕಾದಂಬರಿಗಳ ವಿಷಯದ ಹರವು-ಹರಿವು ವ್ಯಾಪಕ ಹಾಗೂ ವಿಶಾಲ. ಆದರೆ ಕವಿತೆಗಳದು ಹಾಗಲ್ಲ. ಅದರ ಕ್ಯಾನ್ವಾಸ್ ಚಿಕ್ಕದು. ಕಡಿಮೆ ಶಬ್ಧಗಳಲ್ಲಿ ಸುಂದರ ಗೇಯತೆ, ಲಯ, ಮಾತ್ರೆಗಳಲ್ಲಿ, ಅಂದದ ಪದಪುಂಜಗಳಲ್ಲಿ ಕವಿತೆ ಕಟ್ಟುವುದು ನಿಜಕ್ಕೂ ಒಂದು ಅದ್ಬುತ ಕುಶಲಕಲೆ. ಅದರಲ್ಲಿಯೂ ಮಕ್ಕಳ ಕವಿತೆಗಳನ್ನು ಸರಳ-ಸುಂದರ ಪದಗಳಲ್ಲಿ ಎಳೆಯ ಮನಸ್ಸಿಗೆ ಸುಲಭವಾಗಿ ಮುಟ್ಟುವಂತೆ ಪದ್ಯ ಬರೆಯುವುದು ಸಹ ಒಂದು ಕಲೆ. ಪರಕಾಯ ಪ್ರವೇಶಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮುಖದಲ್ಲಿ ಹೊಮ್ಮುವ ಭಾವಗಳನ್ನು ಕವಿತೆಯಾಗಿಸುವಲ್ಲಿ ಬೀಳಗಿಯ ಶಿಕ್ಷಕ ಸಾಹಿತಿ ಶ್ರೀ. ಸೋಮಲಿಂಗ ಬೇಡರ್ ಅವರು ಸಿದ್ಧಹಸ್ತರು. 2019ರಲ್ಲಿ ಇವರು ಹೊರತಂದ “ಮಕ್ಕಳಿಗಾಗಿ ನೂರಾರು ಕವಿತೆಗಳು” ಎಂಬ ಚಿಣ್ಣರ ಕವನ ಸಂಗ್ರಹ ಬಾಲಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆ. ನಿಸರ್ಗದ ರಮಣೀಯತೆ, ಬಿಸಿಲು-ಮಳೆ, ಆಪ್ಪ-ಅಮ್ಮ, ಹಬ್ಬ-ಹರಿದಿನಗಳು, ನಾಡು-ನುಡಿ, ಸಂಸ್ಕ್ರತಿ ಹೀಗೆ ಹತ್ತು-ಹಲವು ವಿಚಾರಗಳು ಅಂದದ ಪದಗಳಲ್ಲಿ ಚಂದದ ಕವಿತೆಗಳಾಗಿ ಇಲ್ಲಿ ಒಡಮೂಡಿವೆ. ಇಲ್ಲಿರುವ 106 ಕವಿತೆಗಳಿಗೆ ತಕ್ಕಂತೆ ಸುಂದರ ರೇಖಾಚಿತ್ರಗಳನ್ನು ಬಿಡಿಸಲಾಗಿದ್ದು ಅವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಹಿರಿಯ ಮಕ್ಕಳ ಸಾಹಿತಿ ದಿ.ಚಂದ್ರಕಾಂತ ಕರದಳ್ಳಿ ಅವರ ಸಹೃದಯತೆಯ ಮುನ್ನುಡಿ ಹಾಗೂ ಕವಿ ವೈ.ಜಿ.ಭಗವತಿ ಅವರ ಆಪ್ತತೆಯ ಬೆನ್ನುಡಿ ಕೃತಿಗೆ ಶೋಭಾಯಮಾನವಾಗಿದೆ. ನೀಲಾಗಸದಲ್ಲಿ ಸಾಗುವ ಹಕ್ಕಿಬಳಗ ಕಂಡು ಕವಿಹೃದಯವು ‘ಗಗನದ ಮಡಿಲಲಿ ತೇಲುತ ಹೊರಟಿವೆ ಹಕ್ಕಿಗಳಾ ಹಿಂಡು ಸೃಷ್ಠಿಗೆ ಚೆಲುವನು ಹೊಮ್ಮುತ ನಡೆದಿವೆ ರೆಕ್ಕೆಗಳಾ ಬಡಿದು’ ಎನ್ನುತ್ತಾ ಖುಷಿಪಡುತ್ತಾರೆ. ಕನ್ನಡ ನಾಡು-ನುಡಿಯ ಅಭಿಮಾನಿಯಾಗಿ ಕವಿಯು ‘ಕನ್ನಡ ನಾಡಿನ ಚಿಣ್ಣರು ನಾವು ಕನ್ನಡ ಗುಡಿಯನು ಬೆಳಗುವೆವು ಕನ್ನಡ ನುಡಿಯನು ಆಡುತ ನಾವು ಕನ್ನಡ ಕೀರ್ತಿಯ ಮೆರೆಸುವೆವು’ ಎಂದು ಕನ್ನಡಾಂಬೆಯ ಬಗೆಗೆ ಸೊಗಸಾದ ಗೀತೆ ರಚಿಸಿದ್ದಾರೆ. ಮಕ್ಕಳಿಗೆ ಹಬ್ಬಹರಿದಿನಗಳನ್ನು ಪರಿಚಯಿಸುವ ಕವಿಮನವು ‘ದೀಪ ದೀಪವ ಬೆಳಗಿವೆ ಒಲುಮೆಯಾರತಿ ಹಿಡಿದಿವೆ ಇಳೆಗೆ ಒಳಿತನು ಬಯಸಿವೆ ಇಂದ್ರ ಲೋಕವ ಸೃಷ್ಠಿಸಿವೆ’ ಎನ್ನುತ್ತಾ ಬೆಳಕಿನ ಹಬ್ಬ “ದೀಪಾವಳಿ”ಯ ವೈಭವವನ್ನು ಕಟ್ಟಿಕೊಡುತ್ತಾರೆ. ‘ಮಮ್ಮಿ ಅಂದ್ರೆ ಖುಷಿ ಅಮ್ಮ ಅಂದ್ರೆ ಕಸಿವಿಸಿ ಅನ್ಬೇಕಂತೆ ಮಮ್ಮಿ ಮಾಡೋದಿಲ್ಲ ಕಮ್ಮಿ ಯಾಕಿಂಗಾತು ನಂಪಾಡು ಬದಲಾಗಿದ್ದಾಳೆ ಅವ್ವ!!’ ಎನ್ನುವ ಕವಿತೆಯಲ್ಲಿ ಕವಿಯು ಹೊಸ ಜಗತ್ತಿನ ಬದಲಾವಣೆಗಳನ್ನು ಮಗುವಿನ ಮನದಲ್ಲಿ ಮೂಡುವ ಪ್ರಶ್ನೆಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಖಾಸಗಿ ಶಾಲೆಗಳ ವೈಭವಿಕರಣದ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಮಹತ್ವವನ್ನು ಸಾರುವ ಈ ಸಾಲುಗಳು ‘ಚಿಣ್ಣರ ಕನಸಿಗೆ ಬಣ್ಣವ ತುಂಬುವ ಚಿನ್ನದ ಕುಲುಮೆಗಳು ಹಿಗ್ಗಿನ ಬುಗ್ಗೆಯ ಚಿಮ್ಮುತ ಕಲಿಸುವ ಬತ್ತದ ಒರತೆಗಳು’ ಎನ್ನುವಾಗ ನಾವು ಕಲಿತ ಪ್ರಾಥಮಿಕ ಶಾಲೆಯ ನೆನಪುಗಳನ್ನು ಮರುಕಳಿಸುತ್ತವೆ. ದೇವರಿಗಿಂತಲೂ ಮಿಗಿಲಾದ ‘ಅಪ್ಪ-ಅಮ್ಮ’ ಭೂಲೋಕದ ನಿಜದೈವಗಳು ಇಲ್ಲಿ ಕವಿಯು ‘ಅಮ್ಮನ ನುಡಿಯು ಅಪ್ಪನ ನಡೆಯು ಸತ್ಯಕ್ಕೂ ಮಿಗಿಲು ಅಮ್ಮನ ಪೂಜೆ ಅಪ್ಪನ ಸೇವೆ ದೈವಕ್ಕೂ ಮಿಗಿಲು’ ಎಂಬ ಹಾಡು ಹೃದಯಂಗಮವಾಗಿದೆ. ಋತುಮಾನಕ್ಕೆ ತಕ್ಕಂತೆ ಬದಲಾಗುವ ಕಾಲಮಾನದಲ್ಲಿ ಬೇಸಿಗೆಯ ‘ಬಿಸಿಲ ಧಗೆ’  ಕಂಡ ಮಗು ‘ನಡೆಯುತಿರಲಿ ಆಡುತಿರಲಿ ಏನು ದಾಹವು ಬಿಸಿಲ ಧಗೆಗೆ ಬೆವರುತಿಹುದು ನನ್ನ ದೇಹವು’ ಎಂದು ಪರಿತಪಿಸುತ್ತದೆ. ಹೀಗೆ ವಿಭಿನ್ನ ವಸ್ತು-ವೈವಿಧ್ಯದ ಮಕ್ಕಳಿಗಾಗಿ ಬರೆದ ನೂರಾರು ಕವಿತೆಗಳು ಚಿಣ್ಣರ ಮನಸೂರೆಗೊಳ್ಳುತ್ತವೆ. ಈಗಾಗಲೇ ಇಲ್ಲಿನ ಬಹುತೇಕ ಕವಿತೆಗಳು ನಾಡಿನ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಈಗಾಗಲೇ ‘ಮುತ್ತಿನ ಮಳೆ’, ‘ಮುದ್ದಿನ ಹಕ್ಕಿ’, ‘ಹಕ್ಕಿ ಗೂಡು’, ‘ಸುಡುತ್ತಿದ್ದಾನೆ ಸೂರ್ಯ’ ಹಾಗೂ ‘ಬಂಗಾರ ಬಣ್ಣದ ಹಕ್ಕಿ’ ಎಂಬ ಐದು ಕೃತಿಗಳನ್ನು ಪ್ರಕಟಿಸಿ ಓದುಗರ ಮೆಚ್ಚುಗೆ ಗಳಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಇವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂಬುದು ನಮ್ಮ ಸದಾಶಯ. ********** ಬಾಪು ಖಾಡೆ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top