ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

ಕಾಡುವ ವಿಚಾರ…

ಕಾಡುವ ವಿಚಾರ… ವಸುಂಧರಾ ಕದಲೂರು               ಆ ದಿನ ನಿಜಕ್ಕೂ ಬಹಳ ಕಳವಳಪಟ್ಟಿದ್ದೆ. ಏನು ಮಾಡಿದರೂ ನನಗೆ ನಂಬಿಕೆ ಮೂಡುತ್ತಿರಲಿಲ್ಲ. ಏಕೋ ಎದೆಯಾಳದಲಿ ತೀವ್ರ ನೋವಾಗುತ್ತಿರುವ ಅನುಭವ. ಆ ಕ್ಷಣಕ್ಕೆ ಆಶಾಭಂಗದ ಅರ್ಥವೂ, ದಿಗ್ಭ್ರಮೆ ಎಂಬುದರ ಪರಿಚಯವೂ ಆಗಿಹೋಯಿತು. ಎಳೆ ಮನದ ಭಿತ್ತಿಯಲಿ  ಉದಿಸಿದ ದುಃಖ ಹಸಿ ನೆಲದಲ್ಲಿ ಬೇರೂರಿದ ಬೀಜದಂತಾಯ್ತು.       ಹೌದು, ಮೊದಲ ಬಾರಿಗೆ ಪ್ರೀತಿಯ ‘ಗಾಂಧಿ’ ಅವರ ಸಾವು ಹೇಗಾಯಿತೆಂದು ತಿಳಿದಾಗ ನನಗಾದ ಅನುಭವವೇ ಈ ಮೇಲಿನದ್ದು. ‘ಮಹಾತ್ಮ ಗಾಂಧೀಜೀ’ ಅಂತಹವರನ್ನೂ ಹೇಗೆ ಕೊಲ್ಲುವುದಕ್ಕೆ ಸಾಧ್ಯ? ಅದೂ ನಾವು ಭಾರತದವರೇ!ಬೆಚ್ಚಿ ಬಿದ್ದಿದ್ದೆ.       ದಿನಗಳು ಉರುಳುರುಳಿ ಸಾವಕಾಶದ ಪರದೆ ಸರಿದು ಅಗೋಚರ ಸಟೆಗಳೂ, ಉಳಿದ ಹಲವು ಸತ್ಯಗಳೂ ದೃಗ್ಗೋಚರವಾಗುತ್ತಾ ಆಗುತ್ತಾ ನನ್ನನ್ನು ಕಂಗೆಡಿಸಿದವು. ಸಮಾಧಾನ ಪಡೆಯುವ ಹಂಬಲಕೆ ಯಾರೂ ದಾರಿ ತೋರುತ್ತಿಲ್ಲ. ಹತಾಶೆ ಗೊಂದಲದ ಗೊಂಡಾರಣ್ಯ ಹೊಕ್ಕು ಸಿಕ್ಕ ಸಿಕ್ಕ ಸಿಕ್ಕುಗಳನು ಬಿಡಿಸುತ್ತಾ ಮತ್ತೆ ಹೆಣೆಯುತ್ತಾ ಅಬ್ಬೇಪಾರಿಯಾಗಿ ನಿಂತ ಭಾವ ನನ್ನದಾಗಿತ್ತು.      ಗಾಂಧಿ ಮಾತ್ರವೇ ಅಲ್ಲ, ಕೃಷ್ಣ(?), ಕ್ರಿಸ್ತ, ಬಸವಣ್ಣ…..!! ಏಕೆ ಈ ಜಗತ್ತು ನ್ಯಾಯಪರವಾಗಿರುವುದಿಲ್ಲ? ಬೆಳಕನ್ನು ಕಾಣಬಯಸದೇ ಕತ್ತಲಿನಲ್ಲಿ  ಕಡಲ ದಡದ ಬಂಡೆಗೆ ಅದೆಷ್ಟು ನಿರಂತರದ ಅಲೆಗಳ ಬಡಿದಂತೆ. ಕಣ್ಣ ಮುಂದೆಯೇ ಒಂದು ಸೊಗಸಾದ ಚಿತ್ರವನು ತಿರುಚಿ ಮುರುಟಿ ತಿಪ್ಪೆಗೆಸೆದಂತೆ. ಆಗ ತಿಳಿದ ಸತ್ಯಗಳೂ… ಆಮೇಲಿನ ದೊಂದಿ ಹಚ್ಚಿ ಕಾಣಿಸುವ ಸುಳ್ಳುಗಳೂ… ಈಗಲೂ ನನ್ನನ್ನು ಕಾಡುತ್ತಲೇ ಇವೆ. ಇದಾವುದರ ಗೊಡವೆಗೆ ಹೋಗದೇ ನಿರಾಳದಲ್ಲಿ ಸಮಾಧಿ ಆಗಿಹೋದ ನನ್ನ ಹಿರೀಕರು ನೆನಪಾಗುತ್ತಾರೆ. ಎಂಥಾ ನೆಮ್ಮದಿಯ ಬದುಕು ಅವರದ್ದಿತ್ತೆಂದು ಯಾವಾಗಲೂ ಅನಿಸುತ್ತದೆ. ಆದರೆ, ಬೆಳಕ ಕಿಡಿ ಕಂಡ ಮೇಲೂ ಅದಕ್ಕೆ ಬೆನ್ನು ತಿರುಗಿಸಿ ಪಾತಾಳದ ಆಳದಲಿ ಬದುಕುವುದು ನನಗೆ ಸಾಧ್ಯವಾದೀತೆ!?            ಸತ್ಯವು ತಿಳಿಯಲಾರದೆಂದಲ್ಲ, ತಿಳಿಯಾಗಲಾರದ ರಾಡಿಯಲ್ಲೇ ಈಗ ಬದುಕುತ್ತಿರುವಾಗ ಕನಸು ಹುಟ್ಟದ  ಕತ್ತಲಲ್ಲಿ ಸೊಗಸಾದ ನಿದ್ರೆಗಳನು ಕಾಣುವುದು ಹೇಗೆ?  ಅಪಾರ ನೆಮ್ಮದಿಯ ರಾತ್ರಿಗಳನ್ನು ಕಂಡಿದ್ದ ಪೂರ್ವಿಕರು  ಹೆಚ್ಚು ಒಳ್ಳೆಯ ಅಭಿರುಚಿ ಇದ್ದವರೆಂದೂ, ಸುಖಿಗಳೆಂದೂ, ಸಿರಿವಂತರೆಂದೂ ನಾನು ಗಟ್ಟಿಯಾಗಿ ನಂಬುತ್ತೇನೆ.       ನನ್ನನ್ನು ಕಾಡುವ ಇತಿಹಾಸಗಳು ನನ್ನ ಕನಸಿಗೂ ಕನ್ನ ಹಾಕುತ್ತಿವೆ. ಹಾಗಾದರೆ ಇತಿಹಾಸ ಓದಲೇ ಬಾರದೆ?  ಅಥವಾ ಓದಬಾರದ ಚರಿತ್ರೆಗಳೂ ಇವೆಯೇ?! ಗೊತ್ತಿಲ್ಲ. ಏಕೆಂದರೆ ಗಾಂಧಿ, ಬಸವಣ್ಣ ಅಂತಹವರ ಸಾವು ಹಾಗೂ ಅದರ ಕಾರಣಗಳು ಆಗ ನಾನು ಪಾಠ ಓದುವ ಹುಡುಗಿಯಾಗಿದ್ದಾಗ ಅಪಾರ ವೇದನೆಯೊಡನೆ ದಿಗ್ಭ್ರಮೆ ತಂದಿದ್ದರೆ, ಈಗ ಈ ನೆಲದ ಮೇಲೆ ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕೆಂದು ನಿಶ್ಚಯಿಸಿರುವಾಗ, ಇಲ್ಲಿ ಕಂಡುಬರುತ್ತಿರುವ ಹಲವು ಸಾಮಾಜಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹೆಚ್ಚು ಕಾಡುತ್ತಿವೆ. ***********************************

ಕಾಡುವ ವಿಚಾರ… Read Post »

ಇತರೆ

ನೆಲೆ ಸಂಭ್ರಮ – 2020

ನೆಲೆ ಸಂಭ್ರಮ – 2020 ಫೇಸ್ಬುಕ್ ನಲ್ಲಿ ಕಾವ್ಯ ಓದುವುದರ ಮೂಲಕ ಕತೆ ಕೇಳುತ್ತಲೇ ಚಿಂತನೆಗಳನ್ನು ಮೆಲುಕು ಹಾಕುವುದರ ಜೊತೆಗೆ ನೆಲೆ ಸಂಭ್ರಮವನ್ನು ಆಚರಿಸೋಣ ಬನ್ನಿ…… ಎನ್ನುತ್ತಲೇ ಆರಂಭವಾದ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಗೆ ಇದೀಗ ನಾಲ್ಕು ದಶಕಗಳನ್ನು ಪೂರೈಸುತ್ತಿದೆ. ಇದರ ಹುಟ್ಟಿಗೆ ಪ್ರಮುಖ ಕಾರಣರು ಇದರ ಜೋಡಿ ಸ್ಥoಭದಂತಿರುವ ಡಾ. ಎಂ ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಸ್ಥಳೀಯ ಲೇಖಕರ ಹಾಗೂ ಮಹಿಳೆಯರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡುವುದರ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ಪ್ರಾದೇಶಿಕ ನೆಲೆಯಿಂದ ಸಾಹಿತ್ಯ ಪರಿಚಾರಿಕೆಯ ಕೆಲಸವನ್ನು ಮಾಡುತ್ತ ಬಂದಿದೆ. ಇದೀಗ ಕೊರೋನಾ ಪರಿಣಾಮವಾಗಿ ಪ್ರತಿವರ್ಷವೂ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದ ನೆಲೆ ಸಂಸ್ಥೆ ಈ ಬಾರಿ ಫೇಸ್ಬುಕ್ ಲೈವ್ ನ ಮೂಲಕ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯ, ದೇಶ ಹಾಗೂ ದೇಶದಾಚೆಗೂ ಪಸರಿಸಿದ್ದು ಇದರ ಯಶಸ್ಸಿಗೆ ಸಾಕ್ಷಿಯಾಗಿ ನಿಂತಿದೆ. ಆಕರ್ಷಕ ಮಾದರಿಯಲ್ಲಿ ಆರಂಭವಾದ ನೆಲೆ ಸಂಭ್ರಮವು ವಿವಿಧ ಹಿರಿಯ ಚಿಂತಕರಾದ ಜಯಂತ್ ಕಾಯ್ಕಿಣಿ(ಹಿರಿಯ ಕವಿ, ಕತೆಗಾರರು ), ಪ್ರೊ. ಸಿ ಎಸ್. ಭೀಮರಾಯ (ಸಿ ಎಸ್ಪಿ- ಕವಿ ವಿಮರ್ಶಕರು), ಡಾ. ರಾಜಶೇಖರ ಮಠಪತಿ (ರಾಗಂ – ಹಿರಿಯ ಕವಿಗಳು ), ಡಾ. ಶ್ರೀರಾಮ ಇಟ್ಟಣ್ಣವರ ( ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಬಯಲಾಟ ಅಕಾಡೆಮಿ ಬೀಳಗಿ ), ಡಾ. ಬಾಳಾಸಾಹೇಬ ಲೋಕಾಪುರ(ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು – ನವದೆಹಲಿ) ಮುಂತಾದವರ ಆಶಯ ನುಡಿಗಳೊಂದಿಗೆ ಕಾರ್ಯಕ್ರಮದ ರಂಗೇರಿಸಿತು. ಜುಲೈ 19 ರಿಂದ ಆಗಸ್ಟ್ 11 ರವರೆಗೆ ನಿರಂತರವಾಗಿ ಫೇಸ್ಬುಕ್ ಲೈವ್ ಮೂಲಕ ಅಚ್ಚುಕಟ್ಟಾದ ನಿರ್ವಹಣೆಯೊಂದಿಗೆ ಆರಂಭವಾದ “ನೆಲೆ ಸಂಭ್ರಮ -2020” ಅತ್ಯಂತ ಯಶಸ್ವಿಯಾಗಿ ನಡೆದು ಇದರಲ್ಲಿ ಭಾಗವಹಿಸಿದ ಎಲ್ಲಾ ಉತ್ಕೃಷ್ಟ ಕವಿಮನಸುಗಳ ಸವಿನೆನಪುಗಳನ್ನು ಶಾಶ್ವತವಾಗಿಸಲು ಇದೀಗ ಮೂರು ಕೃತಿಗಳನ್ನು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿಸಲು ಅಣಿಗೊಳಿಸಲಾಗುತ್ತಿದೆ. ಕ್ರಮವಾಗಿ “ಬಯಲ ರೆಕ್ಕೆಗಳು”, “ಕಥಾ ಕಾಲಕ್ಷೇಪ”‘ ಹಾಗೂ “ಸಂಕಥನ” ಎಂಬ ಬಹುಕಾಲ ಗಟ್ಟಿಯಾಗಿ ಉಳಿಯಬಲ್ಲ ಮೂರು ಮಹತ್ವದ ಕೃತಿಗಳನ್ನು ದೇವು ಮಾಕೊಂಡ, ಮನು ಪತ್ತಾರ ಹಾಗೂ ಡಾ. ಶ್ರೀಶೈಲ ನಾಗರಾಳ ರವರುಗಳು ಸಂಪಾದಿಸಿದ್ದಾರೆ. ನೆಲೆ ಸಾಹಿತ್ಯ ಸಂಭ್ರಮ-2020 ಕಾವ್ಯ ಕಂತು, ಕಥಾ ಸಪ್ತಾಹ ಹಾಗೂ ಚಿಂತನಾ ಸಪ್ತಾಹವೆಂದು ಮೂರು ಹಂತಗಳಲ್ಲಿ ನಡೆಯಿತು. ಕಾವ್ಯಸಪ್ತಾಹವು 7 ಕಂತುಗಳಲ್ಲಿ ನಡೆದು ನಾಡಿನ ವಿವಿಧ ಮೂಲೆಗಳಿಂದ ಹಾಗೂ ಅನ್ಯ ರಾಜ್ಯ, ಅನ್ಯ ದೇಶದಿಂದಲೂ ಒಟ್ಟು 41ಕ್ಕೂ ಹೆಚ್ಚು ಕವಿಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಇದರಲ್ಲಿ ಒಂದು ಗಜಲ್ ಗೋಷ್ಠಿಯನ್ನು ಕೂಡ ಆಯೋಜಿಸಲಾಗಿತ್ತು. ಜುಲೈ 19 – 2020 ರಿಂದ ಆರಂಭವಾದ ಕಾವ್ಯಗೋಷ್ಠಿಯ ಜೊತೆಜೊತೆಗೆ “ಕಾವ್ಯದಲ್ಲಿ ಶೋಧದ ದಾರಿ” ಕುರಿತು ಡಾ. ರಾಜಶೇಖರ ಮಠಪತಿಯವರು, “ಸಾಮಾಜಿಕ ಜವಾಬ್ದಾರಿ ಮತ್ತು ಕಾವ್ಯ” ಕುರಿತು ಪ್ರೊ. ಎಲ್. ಎನ್. ಮುಕುಂದರಾಜ್ ರವರು, “ವರ್ತಮಾನದ ಕಾವ್ಯದ ಅನುಸಂಧಾನ” ಕುರಿತು ಡಾ. ದೇವೇಂದ್ರಪ್ಪ ಜಾಜಿಯವರು, “ಗಂಗಾಧರ ಚಿತ್ತಾಲರ ಕಾವ್ಯದಲ್ಲಿ ರೂಪಕ ಮತ್ತು ಪ್ರತಿಮೆ” ಗಳ ಕುರಿತು ಡಾ. ಸುರೇಶ ನಾಗಲಮಡಿಕೆಯವರು, “ಕಾವ್ಯದ ಸ್ವರೂಪ -ಓದುವ ಬಗೆಗಳು” ಕುರಿತು ಡಾ.ಎನ್ ದುಂಡಪ್ಪ ರವರು, “ಸರಕು ಸಮಾಜದಲ್ಲಿ ಕಾವ್ಯ ವ್ಯವಸಾಯ” ಕುರಿತು ಪ್ರೊ. ಕಮಲಾಕರ ಭಟ್ ಅಹ್ಮದ್ ನಗರ ಹಾಗೂ “ಗಾಲಿಬ್ ಗಜಲ್ ನಲ್ಲಿ ವಸ್ತು ವೈವಿದ್ಯತೆ” ಕುರಿತಾಗಿ ಗಿರೀಶ್ ಜಕಾಪುರೆಯವರು ಹೀಗೆ ಅತ್ಯಂತ ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ತದನಂತರ ಕಥಾ ಸಪ್ತಾಹದ ಸರಣಿಯಲ್ಲಿ ಹಲವಾರು ಪ್ರಸಿದ್ಧ ಕತೆಗಾರರು ಭಾಗವಹಿಸಿದ್ದರು.. ಅವರಲ್ಲಿ ಡಾ. ಕೇಶವ ಮಳಗಿಯವರು “ಕನ್ಯಾಗತ ಕತೆ”, ಡಾ. ಬಸು ಬೇವಿನಗಿಡದರವರು “ನೆರಳಿಲ್ಲದ ಮರ” ಕತೆಯನ್ನು, ನಟ ಮಂಡ್ಯ ರಮೇಶ್ ರವರು ಚದುರಂಗ ಅವರ “ಸಾವಿನ ಮನೆ” ಕತೆಯನ್ನು, ದೀಪ್ತಿ ಭದ್ರಾವತಿಯವರು “ನೆರಳಿನಾಚೆ” ಕತೆಯನ್ನು, ಅನುಪಮಾ ಪ್ರಸಾದ್ ರವರು “ಸೈತಾನನ ಬಲೆ” ಕತೆಯನ್ನು, ರಾಜಶೇಖರ ಹಳೆಮನೆ ಅವರು ” ಗೋಡೆಯ ಚಿತ್ರ”, ಚೀಮನಹಳ್ಳಿ ರಮೇಶಬಾಬು ಅವರು “ಹುಣಸೆ ಮರ”, ಆನಂದ ಕುಂಚನೂರು ಅವರು “ಗಂಧರ್ವ ಪಟ್ಟಣ” ಮತ್ತು ಕೊನೆಯದಾಗಿ ಕಪಿಲ್ ಹುಮನಾಬಾದ್ ರವರು “ನಿರೋಷ”.. ಹೀಗೆ ಎಲ್ಲಾ ಕಥೆಗಳು ವಿಭಿನ್ನ ಕಥಾವಸ್ತುಗಳನ್ನು ಒಳಗೊಂಡಿದ್ದು ಕತೆಗಾರರು ಮನೋಜ್ಞವಾಗಿ ಮನ ಮುಟ್ಟುವಂತೆ ವಾಚಿಸಿದರು. ನಂತರದಲ್ಲಿ ಚಿಂತನಾ ಸಪ್ತಾಹದಲ್ಲೂ ಮೇರು ಚಿಂತಕರು ಪಾಲ್ಗೊಂಡು ವಿವಿಧ ಆಯಾಮಗಳಲ್ಲಿ ತಮ್ಮ ಚಿಂತನಾ ಲಹರಿಗಳನ್ನು ಹರಿಯಬಿಟ್ಟರು. ಅವರಲ್ಲಿ ಡಾ. ರಹಮತ್ ತರೀಕೆರೆಯವರು “ತತ್ವಪದದಲ್ಲಿ ಅರಿವಿನ ನೆಲೆ”, ಡಾ. ಜಿ. ಪಿ. ಬಸವರಾಜುರವರು “ಬೊಗಸೆಯಲ್ಲಿ ಬುದ್ಧ”, ಡಾ. ಬಾಳಾಸಾಹೇಬ ಲೋಕಾಪುರರವರು “ಪ್ರಪ್ರಾಚೀನ ಜೈನ ಕಥೆಗಳು ಮತ್ತು ಲೋಕಪ್ರಜ್ಞಪ್ತಿ”, ಡಾ. ನಟರಾಜ್ ಬೂದಾಳ್ ರವರು “”ನಾಗಾರ್ಜುನನೆಂಬ ಜ್ಞಾನಸೂರ್ಯ” ಕುರಿತು, ಡಾ. ಪುರುಷೋತ್ತಮ ಬಿಳಿಮಲೆಯವರು “ತುಳು ಜಾನಪದ”, ಡಾ. ಬಸವರಾಜ ಡೋಣೂರ ಅವರು “ಬೇಂದ್ರೆ -ಕೀಟ್ಸ್ ತೌಲನಿಕ ಅಧ್ಯಯನ” ಕುರಿತಾಗಿ, ಡಾ. ಶ್ರೀಶೈಲ ನಾಗರಾಳ ಅವರು “ಜಾನಪದ ಲೋಕರೂಢಿ”… ಹೀಗೆ ವಿವಿಧ ವಸ್ತುವಿಷಯಗಳನ್ನು ಒಳಗೊಂಡು ಚಿಂತನೆಗೆ ಹಚ್ಚಿದರು. ಇಷ್ಟೂ ದಿನಗಳು ನಡೆದಂತಹ ಸಾಹಿತ್ಯಸುಗ್ಗಿಯ ಸಂಭ್ರಮವನ್ನು ಕುರಿತು, ನೆಲೆ ಪ್ರಕಾಶನ ಸಂಸ್ಥೆಯ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗೆ ನಡೆದುಬಂದ ಪಯಣ, ನೆಟ್ಟ ಹೆಜ್ಜೆಗಳು ಮುಂತಾದ ವಿಷಯಗಳ ಕುರಿತು ಡಾ. ಶ್ರೀರಾಮ ಇಟ್ಟಣ್ಣನವರ ಅವರು ತಮ್ಮ ಸಮಾರೋಪ ನುಡಿಗಳಲ್ಲಿ ಸವಿಸ್ತಾರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಕೃತಜ್ಞತಾ ನುಡಿಗಳನ್ನು ಈ ಸಂಸ್ಥೆಯ ಆಧಾರ ಸ್ಥoಭಗಳಾದ ಡಾ. ಎಂ. ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು ತಿಳಿಸಿದರು. ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅಂತೆಯೇ ಒಂದು ಯಶಸ್ವಿ ಕಾರ್ಯಕ್ರಮದ ಹಿಂದೆ ಹಲವಾರು ಕಾಣದ ಕೈಗಳ ಸಹಕಾರ, ಪರಿಶ್ರಮವಿರುತ್ತದೆ, ಗೆಳೆಯರ ಬಳಗವಿರುತ್ತದೆ, ಹಿರಿಯರ ಮಾರ್ಗದರ್ಶನವಿರುತ್ತದೆ. ಹೀಗೆ ಎಲ್ಲವನ್ನೂ ಒಗ್ಗೂಡಿಸಿ ದೇಶದೆಲ್ಲೆಡೆ ಮಹಾಮಾರಿಯಾಗಿ ಹರಡಿ ಜನರನ್ನು ಕಾಡುತ್ತಿರುವ ಈ ಕೊರೋನಾ ಕಾಲದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಆಯೋಜಿಸಲಾಗಿದ್ದ ನೆಲೆ ಸಂಭ್ರಮ -2020 ಸಾಹಿತ್ಯಾತ್ಮಕ ಕಾರ್ಯಕ್ರಮವು ಈಗ ಮಗದೊಂದು ಹೆಜ್ಜೆಗುರುತನ್ನು ಮೂಡಿಸಿರುವುದು ಸ್ತುತ್ಯಾರ್ಹ. ಇನ್ನು ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊತ್ತ ದೇವು ಮಾಕೊಂಡ ರವರು ಕಾರ್ಯಕ್ರಮದ ಆದಿಯಿಂದ ಅಂತ್ಯದವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮೂಡಿಬರುವಂತೆ ಕಾಳಜಿ ವಹಿಸಿ, ಇಂತಹ ಒಂದು ಕಾರ್ಯಕ್ರಮವನ್ನು ಸವಿಯಲು ಅನುವು ಮಾಡಿಕೊಟ್ಟು ಹಲವು ಪ್ರತಿಭೆಗಳಿಗೆ ಆನ್ಲೈನ್ ಮೂಲಕವೇ ವೇದಿಕೆ ಒದಗಿಸಿಕೊಟ್ಟು ಯಶಸ್ವಿಗೊಳಿಸಿದ್ದು ಆದರ್ಶನೀಯ. ಇಂತಹ ನೂರಾರು ಸಾವಿರಾರು ಕಾರ್ಯಕ್ರಮಗಳು ಇನ್ನು ಮುಂದೆಯೂ ಜರುಗಲಿ.. ಕನ್ನಡಮ್ಮನ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನೆರಡು ಅಭಿಮಾನದ ನುಡಿಗಳಿಗೆ ವಿರಾಮ ನೀಡುತ್ತಿದ್ದೇನೆ. ********************************** ತೇಜಾವತಿ ಹೆಚ್.ಡಿ.

ನೆಲೆ ಸಂಭ್ರಮ – 2020 Read Post »

ಇತರೆ

ನನ್ನ ಇಷ್ಟದ ಕವಿತೆ

ಪೂಜಾ ನಾಯಕ್ ಬೆಳಗು ಜಾವ ರಚನೆ :ದ. ರಾ. ಬೇಂದ್ರೆ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಜುಮ್ಮೆಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು-ಬೇಟೆಗಾರ. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು. ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ ಹೋದವರು ತಿರುಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ. ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ? ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರಯಕ್ಕೆ ಬೇರೆ ಹೊತ್ತೆ?    ನಿಜವಾದ ಕವಿತೆಯೆಂಬುದು ತನ್ನಷ್ಟಕ್ಕೆ ತಾನೇ ಇಂದಿನವರೆಗೆ ಉಳಿದಿದೆ ಮತ್ತು ಎಂದೆಂದಿಗೂ ಉಳಿಯುತ್ತದೆ ಎಂಬುದಕ್ಕೆ ಆಧುನಿಕ ಕನ್ನಡ ಸಾಹಿತ್ಯದ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ದ. ರಾ. ಬೇಂದ್ರೆಯವರ ‘ಬೆಳಗು ಜಾವ’ ಕವಿತೆಯೇ ಒಂದು ಉತ್ತಮ ನಿದರ್ಶನವಾಗಿ ಇಂದಿಗೂ ನಮ್ಮ ಮುಂದೆ ಇದ್ದು ಈ ಕವಿತೆಯನ್ನು ಓದಿದ ಎಷ್ಟೋ ಯುವಕರ ಬಾಳನ್ನು ಹಸನಾಗಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ . ಈ ಕವಿತೆಯನ್ನು ನಾನು ಮೊಟ್ಟಮೊದಲ ಬಾರಿ ಓದಿದ್ದು ನಾನು ದ್ವಿತೀಯ ಪಿಯುಸಿ  ಇರುವಾಗ ನಮ್ಮ ಕಾಲೇಜಿನ ಪಠ್ಯದಲ್ಲಿ.  ಅದ್ಯಾಕೋ ಗೊತ್ತಿಲ್ಲ ನನಗೆ ಈ ಕವಿತೆಯನ್ನು ಓದಿದಾಗ, ಒಂದು ಸಾರಿಯ ಓದಿಗೆ ಕೊನೆಗೊಳಿಸಬೇಕು ಎಂದೆನಿಸದೇ ಮಗದೊಮ್ಮೆ ಓದಬೇಕು ಎಂದೆನಿಸಿತು. ಆದರೆ ಮೊದಲ ಬಾರಿ ಓದಿದಾಗ ದ. ರಾ ಬೇಂದ್ರೆಯವರು ಕೇವಲ ಈ ಕವಿತೆಯಲ್ಲಿ ಮುಂಜಾನೆಯ ನಿಸರ್ಗದ ಸೌಂದರ್ಯವನ್ನಷ್ಟೇ ವರ್ಣನೆ ಮಾಡಿದ್ದಾರೆ ಎಂದು ಭಾವಿಸಿದ್ದೆ ತದನಂತರ ಈ ಕವಿತೆಯಲ್ಲಿ ಕೇವಲ ಬೆಳಗು ಜಾವದ ವರ್ಣನೆಯನ್ನಷ್ಟೇ ಮಾಡಿದ್ದಲ್ಲ, ಅದರಲ್ಲಿ ಯೌವನಿಗರಿಗೆ ನೀಡಿದ ಅದ್ಬುತವಾದ ಸಂದೇಶವನ್ನು ಕೂಡಾ ಕವಿ ತಮ್ಮ ಕವಿತೆಯೊಳಗೆ ಹುದುಗಿಸಿಟ್ಟಿದ್ದಾರೆ ಎಂದು ತಿಳಿದ ಬಳಿಕ ನನಗೆ ಈ ಕವಿತೆ ಇನ್ನೂ ಹೆಚ್ಚು ಇಷ್ಟವಾಯಿತು. ನವೋದಯ ಕವಿಗಳು ಪ್ರಕೃತಿ ಸೌಂದರ್ಯವನ್ನು ವರ್ಣಿಸುವ ಕೆಲವು ಪರಿಗಳನ್ನು ಇಲ್ಲಿ ಗಮನಿಸುವುದರ ಮುಖಾಂತರ ಬೆಳಗು ಜಾವದ ಅತ್ಯದ್ಭುತ  ಕಲ್ಪನೆ ಮತ್ತು ಅದರ ಮಹತ್ವವನ್ನು ನಾವು ಅರಿತುಕೊಳ್ಳಬಹುದು. ಮೊದಲಿಗೆ ಸೂರ್ಯೋದಯದ ಸರಳ ಸುಂದರ ವರ್ಣನೆ ನೋಡಿ : ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ  ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝಂ ಎಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು ಬೇಟೆಗಾರ. ಇದು ಸುತ್ತಣ ನಿಸರ್ಗದಲ್ಲಿ ಒಂದು ಬೆಳಗಿನ ಸೌಂದರ್ಯಾನುಭವವನ್ನು ಪಡೆದ ಕವಿಯ ಉಲ್ಲಾಸದ ಕರೆಯನ್ನು ನೀಡಿದರೆ, ಮತ್ತೊಂದೆಡೆ ಯೌವನಿಗರಿಗೆ ಎಚ್ಚರಿಸುವ ಕರೆ! ಏನು ಸೋಜಿಗ ಈ ಕವಿಯ ರೀತಿ! ಪುಟ್ಟ-ಪುಟ್ಟ ಸಂಗತಿಯ ಸೌಂದರ್ಯವೂ ಕೂಡ ಇಲ್ಲಿ ಕವಿಗೆ ಸೋಜಿಗವಾಗಿ ಕಾಡಿದಂತಿದೆ. ಪ್ರಕೃತಿಯ ಅದ್ಭುತ ಸೌಂದರ್ಯ ತುಂಬಿ ತುಳುಕುವ ‘ಬೆಳಗು ಜಾವ’ ಕವನ ಮುಂಜಾನೆಯ ಚೈತನ್ಯ,ಶಾಂತಿ, ಉಲ್ಲಾಸ, ಆಹ್ಲಾದಗಳನ್ನು ಚೇತೋಹಾರಿಯಾಗಿ ವ್ಯಕ್ತ ಪಡಿಸುತ್ತದೆ. ಮೂಡಲ ಮನೆಯ ತೆರೆದ ಬಾಗಿಲಿನಿಂದ  ಹರಿದ ಹೊಂಬೆಳಕು ಜಗವನ್ನೆಲ್ಲಾ ಬೆಳಗಿರುವ ಇಲ್ಲಿನ ಕಲ್ಪನೆ ರಮೋಜ್ವಲವಾದುದು. ನಮ್ಮ ದ. ರಾ. ಬೇಂದ್ರೆಯವರು ಅಲೆ ಅಲೆಯಾಗಿ ಹೊಮ್ಮುವ ಪ್ರಕೃತಿ ಸೌಂದರ್ಯದ ಸಾಗರದೊಳಕ್ಕೆ ಮುಳುಗಿ ರಸಾನುಭವವನ್ನು ಪಡೆದಿದ್ದಾರೆ. ಅವರಿಗೆ ಈ ಒಂದು ಅನುಭವ ಕೇವಲ ಐಂದ್ರಿಕವಾಗಿರದೆ ಅಧ್ಯಾತ್ಮದ ಔನತ್ಯಕ್ಕೇರುವ  ಸ್ವರ್ಣ ಸೋಪಾನವೂ ಆಗಿದೆ ಎನ್ನಬಹುದು. ಬೆಳಗು ಜಾವ ಆನಂದಮಯವೆಂದೂ,  ಇದು ಪ್ರಕೃತಿ ನಮಗೆ ನೀಡಿದ ವರವೆಂದೂ ತಿಳಿದು ಆನಂದಿಸಿದ ಕವಿಗೆ ಅದರ ಇನ್ನೊಂದು ಮಗ್ಗಲು ತಿಳಿದಿತ್ತು. ಪ್ರಕೃತಿಯ ವರವಾದ ಬೆಳಗು ಜಾವದಲ್ಲಿ ಸೌಂದರ್ಯವಿರುವಂತೆ ಯೌವನಿಗರ ಬದುಕಿಗೆ ಅದಮ್ಯ ಚೈತನ್ಯವನ್ನು ತುಂಬುವ ಅಪಾರ ಶಕ್ತಿಯೂ ಕೂಡಾ ಇರುವುದು ಕವಿಗೆ ಕಾಣಿಸದೇ ಹೋಗಿಲ್ಲ. ಹಾಗಾಗಿಯೇ ಕವಿ ಅದನ್ನು ಗುರುತಿಸಿ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ: ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು. ತಮ್ಮ ಮೂರನೆಯ ಚೌಪದಿಯಲ್ಲಿ ಕವಿ ಇಂದಿನ ಯುವ ಪೀಳಿಗೆಗೆ, ತಮ್ಮ ಯೌವನದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದಿರಲಿ ಎಂದು ಎಚ್ಚರಿಕೆಯ ಗಂಟೆಯನ್ನು ಬಾರಿಸಿದಂತಿದೆ. ಜೀವನವೆಂಬ ನದಿಗೆ ಪ್ರವಾಹ ಬರಬಹುದು ಎಂದಿದ್ದಾರೆ ಅಂದರೆ ಯಾವಾಗ ಬೇಕಾದರೂ ಸಾವು ಪ್ರವಾಹದ ರೀತಿಯಲ್ಲಿ ಬಂದು ನಮ್ಮನ್ನು  ಎಳೆದೊಯ್ಯಬಹುದು. ಮರಣ ಬಂದ ಮೇಲೆ ಬದುಕಲು ಅವಕಾಶವಂತು ಇಲ್ಲವೇ ಇಲ್ಲ ಎಂದಾದ ಮೇಲೆ ಬದುಕಿರುವಾಗಲೇ ಯೌವನವನ್ನು ಸಾರ್ಥಕ ಪಡಿಸಿಕೊಳ್ಳಲು ದುಡಿಮೆಯಲ್ಲಿ ತೊಡುಗುವುದು ಉತ್ತಮವಲ್ಲವೇ? ಎಂದು ಹೇಳುವ ಮೂಲಕ ಇಂದಿನ ಎಷ್ಟೋ ಕರ್ತವ್ಯ ರಹಿತ ಯುವಕರನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಕವಿ ತಮ್ಮ ಕವಿತೆಯ ಮೂಲಕವೇ ಮಾಡಿದ್ದಾರೆ. ಹಾಗೆಯೇ ಕವಿ ವಸ್ತುವಿನ ಪೂರ್ತಿ ತಿರುಳನ್ನು ತಮ್ಮ ಕೊನೆಯ ಎರಡು ಚರಣಗಳಲ್ಲಿ ಈ ರೀತಿ ಚಿತ್ರಿಸಿದ್ದಾರೆ : ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ? ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರಯಕ್ಕೆ ಬೇರೆ ಹೊತ್ತೇ? ಆಕಾಶದಲ್ಲಿ ಒಮ್ಮೆ ಮೋಡ ಕವಿದು ಮಬ್ಬು ಆವರಿಸಿದ್ದರು ಕೂಡ ಮೋಡ ಸರಿದ ಮೇಲೆ ಮತ್ತೆ ಪ್ರಕಾಶಿಸಬಹುದು, ಒಂದು ಋತುವಿನಲ್ಲಿ ತನ್ನ ಪೂರ್ತಿ ಎಲೆಯನ್ನು ಉದುರಿಸಿ ಒಣಗಿದ ಮರ ಕೂಡ ಪುನಃ ಮತ್ತೆ ವಸಂತ ಋತುವಿನಲ್ಲಿ ಚಿಗುರಬಹುದು ಆದರೆ ಮನುಷ್ಯನ ಯೌವನದ ಕಾಲ ಕಳೆದು ಹೋದರೆ ಎಂದಿಗೂ ಹಿಂದಿರುಗಿ ಬರಲಾರದು ಆದ್ದರಿಂದ ಮುಪ್ಪು ಬಂದು ಆವರಿಸುವ ಚಿಂತೆ ಇರಲಿ ಹಾಗೆಯೇ ಯೌವನವು ಇನ್ನೊಮ್ಮೆ ಸಿಗುವುದಿಲ್ಲವೆಂಬ ಎಚ್ಚರವಿರಲಿ. ಈಗ ಹರೆಯ ಇರುವುದರಿಂದ ಎಲ್ಲ ಚಿಂತೆಯನ್ನು ಬದಿಗೊತ್ತಿ ದುಡಿಯಲು ಮುಂದಾಗಿ, ಯೌವನದ ಸಾರ್ಥಕತೆಯನ್ನು ಅನುಭವಿಸಿ ಎಂದು ಕರೆ ನೀಡಿದ್ದಾರೆ. ಈ ಕವಿತೆ ಇಂಗ್ಲಿಷಿನ ಸಾನೆಟ್ ಪ್ರಕಾರಕ್ಕೆ ಸಂವಾದಿಯಾಗಿ ಬಂದ ಸುನೀತ ಪ್ರಕಾರದಲ್ಲಿದ್ದು ಷೇಕ್ಸ್‌ಪಿರಿಯನ್ ಮಾದರಿಯಲ್ಲಿದೆ. ಈ ಮಾದರಿಯ ಸುನೀತಗಳಲ್ಲಿ ಹನ್ನೆರಡು ಚರಣಗಳು ಮೂರು ಚೌಪದಿಗಳಿಂದ ಕೂಡಿದ್ದು ಕೊನೆಯ ಎರಡು ಚರಣಗಳು ದ್ವಿಪದಿಯ ರೂಪದಲ್ಲಿವೆ. ಹಾಗೆಯೇ ಚೌಪದಿಯ ಮೊದಲ ಎರಡು ಸಾಲುಗಳು ಒಂದು ಪ್ರಾಸದಿಂದ ಕೂಡಿದ್ದರೆ ಕೊನೆಯ ಎರಡು ಸಾಲುಗಳು ಇನ್ನೊಂದು ಪ್ರಾಸವನ್ನು ಹೊಂದಿರುತ್ತವೆ. ಕಡೆಯ ದ್ವಿಪದಿ ಒಂದೇ ಪ್ರಾಸದಲ್ಲಿ ಮುಕ್ತಾಯವಾಗುತ್ತದೆ. ಈ ಪ್ರಾಸ ವಿನ್ಯಾಸದಲ್ಲಿ ರಚನೆಯಾದ ವಿಶಿಷ್ಟ ಕವನವಿದು. ಈ ಕವಿತೆ ಯುವ ಪೀಳಿಗೆಗೆ ಎಚ್ಚರಿಸಲು ಹೇಳಿ ಮಾಡಿಸಿದ ಕವಿತೆಯಂತಿದೆ ಯಾಕೆ ಕೇಳಿದರೆ ಇಂದಿನ ಯುವ ಪೀಳಿಗೆ ಆಧುನಿಕತೆ,ವಿಜ್ಞಾನದ ಅತಿಯಾದ ಮುಂದುವರಿಕೆ,ನಾನಾ ಹೊಸ ಶೈಲಿಯ ಕಲಿಕಾ ಕ್ರಮದಲ್ಲಿ ಮೈಮರೆತು ಹಕ್ಕಿಯಂತೆ ಕೃತಕವಾಗಿ ಹಾರಾಡಿ, ಮೀನಿನಂತೆ ಕೃತಕವಾಗಿ ಈಜಿ, ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಕಾಲೂರಿ ಇನ್ನೂ ಅನೇಕಾನೇಕ ಸಾಹಸವನ್ನು ಮಾಡಿರಬಹುದು ಆದರೆ ಪ್ರಕೃತಿಯೇ ನಮಗೆ ನಿಸರ್ಗದತ್ತವಾಗಿ ನೀಡಿದ ಬೆಳಗು ಜಾವದ ಅದ್ಭುತ ಕ್ಷಣವನ್ನು ಅನುಭವಿಸುವುದರಲ್ಲಿ ಇರುವ ನೆಮ್ಮದಿ, ಸಂತೋಷ ಆಧುನಿಕತೆಯಲ್ಲಿ ಎಂದಿಗೂ ಸಿಗಲಾರದು ಹಾಗೆಯೇ ಮನುಷ್ಯನ ಬದುಕಿಗೆ ಬೇಕಾದ ಚೈತನ್ಯವನ್ನು ಸಹ ಆಧುನಿಕತೆ ಎಂದಿಗೂ ಕೊಡಲಾರದು. ಮನುಷ್ಯರೇ(ಯುವಕರೇ) ಯೌವನದ ಅವಧಿಯನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಅವರನ್ನು ಬಡಿದೆಬ್ಬಿಸಿ, ಬೆಳಗು ಜಾವದ ಮಹತ್ವವನ್ನು ಸಾರಿ ಹೇಳಿದ ದ. ರಾ. ಬೇಂದ್ರೆಯವರ ಈ ಕವಿತೆ ಎಂದೆಂದಿಗೂ ನನ್ನ ಅಚ್ಚುಮೆಚ್ಚು. ***************************

ನನ್ನ ಇಷ್ಟದ ಕವಿತೆ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ಕವಿತೆ

ಧೂರ್ತ ಆಮೆ ನೀ.ಶ್ರೀಶೈಲ ಹುಲ್ಲೂರು ಹಂಸವೆರಡು ಕೊಳದ ಬಳಿನೀರನರಸಿ ಬಂದವುನೀರು ಕುಡಿದು ತಣಿದ ಮೇಲೆಆಮೆ ನೋಡಿ ನಿಂದವು ಹರಟೆ ಮಲ್ಲ ಆಮೆ ತಾನೆಕೊಳದ ರಾಜನೆಂದಿತುಅದನು ಇದನು ಏನೊ ಹೇಳಿಅವುಗಳ ತಲೆ ತಿಂದಿತು ಸರಿ,ನಾವು ಬರುವೆವಿನ್ನುಮತ್ತೆ ಸಿಗುವೆವೆಂದವುಬಿಡದ ಆಮೆ ನಡೆಯ ನೋಡಿಮನದಿ ತಾವೆ ನೊಂದವು ನನಗೆ ಕೊಳದ ಸಂಗ ಸಾಕುನದಿಯಲೀಜಬೇಕುಹಾಡಿ ಜಿಗಿದು ಕುಣಿದು ತಣಿದುಜಲದಿ ತೇಲಬೇಕು ದಮ್ಮಯ್ಯ ಎನುವೆ ನಾನುಮಾಡಿ ನೀವ್ ಉಪಾಯವಏನೆ ಬಂದರೂ ಸರಿಯೆಗೆಲುವೆ ನಾ ಅಪಾಯವ ಹಂಸವೆರಡು ಬಡಿಗೆ ತಂದುಆಚೆ ಈಚೆ ಹಿಡಿದವುನಡುವೆ ಆಮೆ ಬಡಿಗೆ ಕಚ್ಚಲೆರಡು ಹಾರಿ ನಡೆದವು ತುಸು ದೂರ ಸಾಗಿದೊಡನೆಕಂಡಿತೊಂದು ಊರುಮಕ್ಕಳೆಲ್ಲ ಆಮೆ ಕಂಡುಕೂಗಿದರು ಜೋರು ಕಲ್ಲನೆಸೆದು ಗೇಲಿ ಮಾಡೆಆಮೆ ಕೋಪ ಸಿಡಿಯಿತುಬೈಯ್ಯಲೆಂದು ಬಾಯಿ ತೆರೆಯೆಕೆಳಗೆ ಬಿದ್ದು ಮಡಿಯಿತು ಹಮ್ಮು ಬಿಮ್ಮು ಬೇಡ ನಮಗೆಬೇಡ ಕೋಪ ತಾಪಮನಗಾಣಿರಿ ಮಕ್ಕಳೆಲ್ಲಅವುಗಳೆಮಗೆ ಶಾಪ ******************

ಮಕ್ಕಳ ಕವಿತೆ Read Post »

ಇತರೆ, ಪ್ರಬಂಧ

ನಾನು ಈಜು ಕಲಿತ ಪ್ರಸಂಗ:

ಪ್ರಬಂದ ನಾನು ಈಜು ಕಲಿತ ಪ್ರಸಂಗ: ಲಕ್ಷ್ಮಿನಾರಾಯಣ್ ಭಟ್ ಪಿ. ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು ಭಾಷೆಯಲ್ಲಿ ‘ಪದ್ರಾಡ್’ ಅಂದರೆ ‘ಸದ್ದಿಲ್ಲದೆ ತಪ್ಪಿಸಿಕೊಂಡು ಓಡಿಹೋಗುವುದು’ ಎಂದು ಅರ್ಥ; ಅಲ್ಲದೇ ಅದು ಅಂಕೆ 12 ರ ಸಂಖ್ಯಾವಾಚಕ ಶಬ್ದವೂ ಹೌದು). ಹಿರಿಯರಿಗೆ ತಿಳಿಸಲೂ ಭಯ. ಆ ವಯಸ್ಸೇ ಅಂತಹ ಹುಚ್ಚಾಟದ್ದು. ಹೀಗಾಗಿ ನನಗೆ ಈಜು ಕಲಿಯಲು ಹಸಿರು ನಿಶಾನೆ ಸಿಗುವ ಸಂಭವವೇ ಇರಲಿಲ್ಲ. ನಮ್ಮ ಊರಿನ ಕೋಟಿಕೆರೆ ಬಹು ದೊಡ್ಡದು. ಮನೆಯಿಂದ ಒಂದು ಕಿ.ಮಿ. ದೂರದಲ್ಲಿ ಹಸಿರು ಗದ್ದೆಗಳ ನಡುವೆ ವಿಸ್ತಾರವಾಗಿ ಹರಡಿತ್ತು. ಆ ಕೆರೆ ವಿಶ್ವವಿಖ್ಯಾತ — ಆ ಕಾಲಕ್ಕೆ ‘ನಮ್ಮ ಊರೇ ನಮ್ಮ ವಿಶ್ವ, ಸರ್ವಸ್ವ’ — ಆಗಿದ್ದರೂ ಮೊತ್ತಮೊದಲ ಬಾರಿಗೆ ನಮ್ಮ ಊರಿನವರೇ ಆದ ಪರಮೇಶ್ವರ ಹೊಳ್ಳರನ್ನು ನ್ಯಾಶನಲ್ ಚಾಂಪಿಯನ್ ಮಟ್ಟದವರೆಗೆ ತರಬೇತುಗೊಳಿಸಿದ ಮಹಾನ್ ಕೆರೆ ಎಂಬಭಿದಾನದಿಂದ ಕಂಗೊಳಿಸುತ್ತಿರ್ಪ ಒಂದು ಶುಭಮುಹೂರ್ತದಲ್ಲಿ ನನ್ನ ಪಾಲಿಗೂ ಅದು ಅನುಕೂಲವಾಗಿಯೇ ಒದಗಿ ಬಂತು. ಅದೇ ಪರಮೇಶ್ವರ ಹೊಳ್ಳರನ್ನು ತಯಾರು ಮಾಡಿದ ನಮ್ಮ ಹೈಸ್ಕೂಲಿನ ವ್ಯಾಯಾಮ ಶಿಕ್ಷಕರಾಗಿದ್ದ ಶ್ರೀ ಸುಬ್ರಾಯ ಶೆಟ್ಟಿಗಾರ್ ನನಗೂ ಈಜು-ಗುರುಗಳು. ಆದರೆ ಮನೆಯಲ್ಲಿ ಗೊತ್ತಾಗದಂತೆ ಈಜು ಕಲಿಯುವುದು ಹೇಗೆ? ಮನೆಯಿಂದ ಹೆಚ್ಚುವರಿ ಬಟ್ಟೆ ತರುವಂತೆಯೂ ಇಲ್ಲ. ಅದಕ್ಕಿದ್ದದ್ದೊಂದೇ ಪರಿಹಾರ. ಹಾಕಿದ್ದ ಅಂಗಿ ಚಡ್ದಿಯನ್ನೇ ಪುನರ್ಬಳಕೆ ಮಾಡುವುದು – ಮೈ, ತಲೆ ಒಣಗಿದ ಬಳಿಕ! ಆ ಕೋಟಿಕೆರೆ ಎಂದರೆ ಸಾಮಾನ್ಯವೇನಲ್ಲ. ಅದರ ಸುತ್ತಲೂ ಹಲವು ಮನೆಗಳೂ ಇದ್ದುವು. ಹಳ್ಳಿಮನೆ ಎಂದ ಮೇಲೆ ಜನರಿಗಿಂತ ಹೆಚ್ಚು ಜಾನುವಾರುಗಳೂ – ಹಸು, ಎಮ್ಮೆ, ಕೋಳಿ, ನಾಯಿ, ಬೆಕ್ಕು ಇವೆಲ್ಲ ಸೇರಿ ಒಂದು ಪ್ರಪಂಚ – ಇದ್ದುವು. ಅವುಗಳಿಗೂ ಜಳಕವಾಗಬೇಕಲ್ಲ. ಕೋಟಿಕೆರೆಯ ಒಂದು ತುದಿಯಲ್ಲಿ ದನಗಳೂ, ಹೆಚ್ಚಾಗಿ ಎಮ್ಮೆಗಳೂ ಅಲ್ಲಿ ಜಲವಿಹಾರದಲ್ಲೋ ಜಲಕೇಳಿಯಲ್ಲೋ – ಹಾಲುಕರೆಯುವ ಸಮಯವೊಂದನ್ನು ಬಿಟ್ಟು – ಸದಾ ತೊಡಗಿರುತ್ತಿದ್ದವು. ಜೊತೆಗೆ ಹಳ್ಳಿಯ ಹೆಣ್ಣುಮಕ್ಕಳ ಬಟ್ಟೆಬರೆ ತೊಳೆಯುವ ಕೆಲಸ, ಮೈ…(!) ತೊಳೆಯುವ ಕೆಲಸ – ಮರೆಯಲ್ಲಿ ‘ಸ್ನಾನ’ ಎಂಬುದು ಎಲ್ಲೋ ಕೆಲವರಿಗಷ್ಟೇ ಲಭ್ಯವಿದ್ದ ಘನಕಾರ್ಯ; ಹಾಗೆಯೇ ಮುಸುರೆಪಾತ್ರೆಗೆ ಬೂದಿ ಬಳಿದು ಶುದ್ಧೀಕರಿಸುವ ಕೆಲಸ, ಸ್ವಲ್ಪ ಮಟ್ಟಿಗೆ ಕೃಷಿಗಾರಿಕೆಗೂ – ಹೀಗೆ ಹಲವು ಹನ್ನೊಂದು ಕೆಲಸಗಳಿಗೆ ಈ ಕೋಟಿಕೆರೆಯೇ ಆಧಾರ. ಇವೆಲ್ಲದರ ಜೊತೆಗೆ ಕೋಟಿಕೆರೆಯ ಇನ್ನೊಂದು ತುದಿ ಈಜುವುದಕ್ಕೆ ಮೀಸಲು. ಹೀಗೆ ಕ್ಷೇತ್ರ ವಿಂಗಡಣೆಯ ವಿಷಯ ಸರ್ವರಿಗೂ ತಿಳಿದಿದ್ದ ಕಾರಣದಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರವರ ಕೆಲಸ-ಕಾರ್ಯಗಳು ಅದರದರ ಪಾಡಿಗೆ ಸ್ವಯಂಚಾಲಿತ ಕ್ರಿಯೆಯಂತೆ ನಡೆದುಕೊಂಡು ಹೋಗುತ್ತಿತ್ತು. ಯಾರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ಮೀರುವಂತಿಲ್ಲದ ಒಂದು ಅಲಿಖಿತ ನಿಯಮ ಜಾರಿಯಲ್ಲಿತ್ತು ಮತ್ತು ಇದು ಎಲ್ಲರಿಗೂ ತಿಳಿದಿದ್ದ ಗುಟ್ಟು. ಈಜು ಕಲಿಯುವ ಪ್ರಾಥಮಿಕ ಪಾಠ ಕೆರೆದಂಡೆಯ ಕಲ್ಲುಗಳನ್ನು ಆಧಾರಕ್ಕೆ ಹಿಡಿದುಕೊಂಡು ಕೈ ಕಾಲು ಬಡಿಯುವುದು. ಆಗ ಈಜಿನಲ್ಲಿ ಪರಿಣತಿ ಹೊಂದಿದ್ದ ಇತರ ಗೆಳೆಯರು ಸುಬ್ರಾಯ ಶೆಟ್ಟಿಗಾರ್ ಅವರ ಸುಪರ್ದಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು ಮತ್ತು ಶೆಟ್ಟಿಗಾರ್ ಮಾಸ್ತರ್ ತಮ್ಮ ಸ್ಟಾಪ್-ವಾಚ್ ಹಿಡಿದು ಟೈಮ್ ನೋಡುತ್ತಿದ್ದರು. ನನಗೋ ಇದನ್ನು ನೋಡಿ ಒಂಥರಾ ಹೊಟ್ಟೆಯುರಿ. ನಾನು ಅವರಂತೆ ಈಜುವುದು ಯಾವಾಗ? ಶೆಟ್ಟಿಗಾರ್ ಮಾಸ್ಟರ್ ಅವರ ಹೆಚ್ಚಿನ ಗಮನ ಆ ವಿದ್ಯಾರ್ಥಿಗಳ ಮೇಲೆ. ನನಗೆ ನನ್ನ ಮೇಲೂ, ನನ್ನಂತೆ ಕೈ ಕಾಲು ಬಡಿಯುತ್ತಿದ್ದ ಇನ್ನಿತರ ಬಾಲಪಾಠದ ವಿದ್ಯಾರ್ಥಿಗಳ ಮೇಲೂ ಒಂದು ಥರಾ ಅಸಹನೆ ಮೂಡುತ್ತಿತ್ತು. ಆದರೆ ವಿಧಿಯಿಲ್ಲ. ಬಹುಶಃ ಮಾಸ್ತರಿಗೆ ಇದು ಗೊತ್ತಾಯಿತೇನೋ ‘ಇರಿ ಮಾಡುತ್ತೇನೆ’ ಎಂದು ಎರಡನೆ ಬಾಲಪಾಠ –- ಲೆಸನ್ ನಂಬರ್ ೨ – ಶುರು ಮಾಡಿದರು: ಹಾಗೆಯೇ ಕೈಕಾಲು ಬಡಿಯುತ್ತಾ ಅರ್ಧತಲೆಯನ್ನು ನೀರಿಗೆ ಮುಳುಗಿಸಿ ಉಸಿರು ತೆಗೆದುಕೊಳ್ಳಲು ಮಾತ್ರ ಮುಖ ಒಂದು ಬದಿಗೆ ವಾಲಿಸಿ ಉಸಿರೆಳೆದುಕೊಂಡು ತಕ್ಷಣ ಮತ್ತೆ ಅರ್ಧತಲೆ ಮುಳುಗಿಸಿ ಇನ್ನೊಂದು ದಿಕ್ಕಿಗೆ ತಲೆ ವಾಲಿಸಿ ಉಸಿರೆಳೆದುಕೊಳ್ಳುವುದು. ಆಗ ಕೈಕಾಲು ಬಡಿಯುವುದನ್ನು ನಿಲ್ಲಿಸುವಂತಿಲ್ಲ! ಇದನ್ನು ಒಂದೆರಡು ಬಾರಿ ಮಾಡುವಷ್ಟರಲ್ಲಿ ನಾನು ಸಾಕಷ್ಟು ನೀರು ಕುಡಿದದ್ದಾಯಿತು, ಅಲ್ಲದೆ ತಲೆ ಮುಳುಗಿಸುವಾಗ ಕೈಕಾಲು ಬಡಿಯುವುದು ನಿಲ್ಲುತ್ತಿತ್ತು; ಕೈಕಾಲು ಬಡಿಯುತ್ತಿದ್ದರೆ ತಲೆ ಮುಳುಗುತ್ತಿರಲಿಲ್ಲ.ಒಳ್ಳೇ ಪೇಚಾಟಕ್ಕೆ ಬಂತು. ಆದರೇನು ಮಾಡುವುದು? ಬೇರೆ ವಿಧಿಯಿಲ್ಲ. ಇದನ್ನು ಆದಷ್ಟು ಬೇಗನೆ ಕಲಿಯದಿದ್ದರೆ ಈಜಲು ಸಾಧ್ಯವಿಲ್ಲ ಎಂಬ ಜ್ಞಾನೋದಯವಾಗಿ ತಕ್ಕ ಮಟ್ಟಿಗೆ ಅಭ್ಯಾಸ ಮಾಡಿದ ಮೇಲೆ ಮಾಸ್ತರಿಗೆ ದುಂಬಾಲು ಬಿದ್ದು ಮುಂದಿನ ಪಾಠ ಹೇಳಿ ಕೊಡಿ ಅಂತ ಅವರನ್ನು ಪೀಡಿಸಿದೆ. ಮೊದಲಿನಿಂದಲೂ ನನಗೆ ತಾಳ್ಮೆ ಸ್ವಲ್ಪ ಕಡಿಮೆಯೇ. ಎಲ್ಲವೂ ಬೇಗ ಬೇಗ ಆಗಬೇಕು. ಆಗೆಲ್ಲಾ ‘ಏನು ಆರು ತಿಂಗಳಿಗೆ ಹುಟ್ಟಿದ ಹಾಗೆ ಮಾಡುತ್ತಿ?’ ಎನ್ನುವ ವಾಡಿಕೆಯ ಚುಚ್ಚುಮಾತು ನನ್ನೆದೆಗೆ ಚುಚ್ಚಿದರೂ ನಾನದನ್ನು ‘ಡೋಂಟ್ ಕೇರ್’ ಮಾಡುತ್ತಿದ್ದೆ! ಸರಿ ಮುಂದಿನ ಪಾಠ: ಎರಡು ಪೊಟ್ಟು ತೆಂಗಿನಕಾಯಿಗಳನ್ನು ಒಟ್ಟಿಗೆ ಚಿಕ್ಕ ಹಗ್ಗದ ಸಹಾಯದಿಂದ ಜೋಡಿಸಿ ಹೊಟ್ಟೆಗೆ ಆಧಾರವಾಗಿಟ್ಟುಕೊಂಡು (ಇವು ನಮ್ಮನ್ನು ನೀರಲ್ಲಿ ಮುಳುಗದಂತೆ ತಡೆಯುತ್ತವೆ ಮತ್ತು ಇದು ಈಜು ಕಲಿಯಲು ಎಲ್ಲರೂ ಬಳಸುತ್ತಿದ್ದ ಅತೀ ಸಾಮಾನ್ಯ ಸಾಧನ, ಅದಿಲ್ಲದಿದ್ದರೆ ಉದ್ದದ ಬಾಳೆದಿಂಡೂ ಇದೆ ರೀತಿ ಆಸರೆಯಾಗುತ್ತಿತ್ತು.) ಕಡಿಮೆ ಆಳದ ನೀರಿನಲ್ಲಿ ಈಜುವ ಅಭ್ಯಾಸ ಮಾಡುವುದು. ಆಗ ಚೆನ್ನಾಗಿ ಈಜು ಗೊತ್ತಿದ್ದ ಇತರ ಮಕ್ಕಳು ನಮ್ಮ ಸುತ್ತ ಈಜುತ್ತಾ ಹುರಿದುಂಬಿಸುತ್ತಿದ್ದರು. ಕೆಲವೊಮ್ಮೆ ನಮಗೆ ಅರಿವೇ ಆಗದಂತೆ ಈ ಪೊಟ್ಟು ತೆಂಗಿನಕಾಯಿಗಳನ್ನು ತಪ್ಪಿಸಿ ನಾವು ಈಜುವಂತೆ ಮಾಡುತ್ತಿದ್ದರು. ಆದರೆ ಈ ಆಸರೆ ತಪ್ಪಿದೆ ಎಂದು ತಿಳಿದ ತಕ್ಷಣ ಕೈಕಾಲು ಬಡಿಯುವುದು ನಿಂತು ಮುಳುಗುವ ಭಯದಲ್ಲಿ ಇನ್ನಷ್ಟು ನೀರು ಕುಡಿದು ದಡದ ಕಡೆಗೆ ಈಜುವುದಲ್ಲ, ಹಾರುವುದು ಎಂದರೂ ಸರಿಯೇ – ಆಗುತ್ತಿತ್ತು. ಹೀಗೆ ನಿಧಾನವಾಗಿ ಈಜುವುದು ಅಭ್ಯಾಸವಾಯಿತು. ಆಮೇಲೆ ಕೇಳಲುಂಟೇ! ‘ಭಳಿರೇ ಪರಾಕ್ರಮ ಕಂಥೀರವ’ ಎಂದು ‘ಡೈವ್’ ಮಾಡುವುದರಿಂದ ಹಿಡಿದು ಫ್ರೀ-ಸ್ಟೈಲ್, ಬ್ಯಾಕ್ ಸ್ಟ್ರೋಕ್ ಇತ್ಯಾದಿಗಳಲ್ಲಿ ಪಳಗಿದ್ದುಂಟು. ಆದರೆ ಇದನ್ನು ಸ್ಪರ್ಧೆಯ ಮಟ್ಟಕ್ಕೆ ಮುಂದುವರಿಸುವುದಕ್ಕಾಗಲಿಲ್ಲ. ಇದರಿಂದ ಊರೇನೂ ಮುಳುಗಿಹೋಗಿಲ್ಲ ಅಥವಾ ದೊಡ್ಡ ನಷ್ಟ ಯಾರಿಗೂ ಏನೂ ಇಲ್ಲ. ಇರಲಿ ಬಿಡಿ. ನನ್ನ ಜೊತೆ ಈಜಿಗೆ ಸಾಥ್ ಕೊಡುತ್ತಿದ್ದ ಒಬ್ಬ ಸಹಪಾಠಿ ಶೇಕ್ ಹಸನ್ ಸಾಹೇಬ್. ಹೀಗೆ ಹೇಳಿದರೆ ಹೆಚ್ಚಿನವರಿಗೆ ತಿಳಿಯಲಾರದು. ‘ವಿಟ್ಲ ಹಸನ್’ ಎಂದರೆ ಎಲ್ಲರಿಗೂ ತಿಳಿಯುತ್ತದೆ. ನಾನು ಅವನ ಮನೆಗೆ, ಅವನು ನಮ್ಮ ಮನೆಗೆ ಬಂದು ಹೋಗುವುದು ಮಾಮೂಲಾಗಿತ್ತು. ಅವನ ತಾಯಿ ನನ್ನನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆ ಕಾಲದಲ್ಲಿ ನಮ್ಮಿಬ್ಬರಿಗೂ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ಪರಸ್ಪರ ಪ್ರೀತಿ, ವಿಶ್ವಾಸಗಳು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ನಿಂತದ್ದು ಒಂದು ಸುಖಾನುಭವ. ಜೊತೆಗೆ ಹಸನ್ ಕೂಡಾ ನನ್ನೊಂದಿಗೆ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದ. ನಾವು ರಿಹರ್ಸಲ್-ಗೂ ಜೊತೆಯಲ್ಲೇ ಹೋಗುತ್ತಿದ್ದೆವು. ನಾವು ಹತ್ತನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ (ಆಗೆಲ್ಲಾ ರಾತ್ರಿಪೂರ್ತಿ ಬೆಳಗಾಗುವ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾತ್ರಿ ಎರಡರ ಬಳಿಕ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹೀಗೆ ನಡೆಯುತ್ತಿತ್ತು. ಹಳ್ಳಿಯ ಜನರು ಇದಕ್ಕೆ ತಯಾರಾಗಿಯೇ ಬರುತ್ತಿದ್ದರು.) ನಮ್ಮ ಮಾಸ್ತರ್ ಮಹಾಬಲ ರೈ ಅವರು ಬರೆದು ನಿರ್ದೇಶಿಸಿದ ತುಳು ನಾಟಕ ‘ಲಾಟ್ರಿ ಲಕ್ಕಪ್ಪೆ ದಿವಾಳಿ ದೂಮಪ್ಪೆ’ ದಲ್ಲಿ ನನ್ನದು ಲಕ್ಕಪ್ಪನ ಪಾತ್ರ. ದೂಮಪ್ಪನ ಪಾತ್ರ ಬಹುಶಃ ಹಸನ್ ಮಾಡಿದ್ದ ಅಂತ ನೆನಪು. ಇರಲಿ, ತಿರುಗಿ ಮತ್ತೆ ನನ್ನ ಈಜು ಪುರಾಣಕ್ಕೆ ಬರೋಣ. ನಾನು ಕೆಲವೊಮ್ಮೆ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಹಸನ್ ಮನೆಗೆ ಬಂದು (ನಮ್ಮ ಮನೆಯಲ್ಲಿ ಏನೋ ಒಂದು ಸುಳ್ಳು ಹೇಳಿ; ಏನದು ಸುಳ್ಳು ಸಬೂಬು ಈಗ ನೆನಪಾಗುತ್ತಿಲ್ಲ) ಇನ್ನೂ ಮಲಗಿಯೇ ಇರುತ್ತಿದ್ದವನನ್ನು ಎಬ್ಬಿಸಿ, ಬಳಿಕ ಕಾರಿನ ಹಳೆ ಟ್ಯೂಬ್ (ಅದು ಅವನ ಮಾವನ ಕಾರಿನದ್ದು) ಹಿಡ್ಕೊಂಡು ನಿದ್ದೆಗಣ್ಣಿನಲ್ಲಿ ಒಂದು ಕಿಲೋ ಮೀಟರ್ ನಡ್ಕೊಂಡು ಹೋಗಿ ಈಜು ಕ್ಲಾಸಿಗೆ ಮೊದಲು ಹಾಜರು ಹಾಕುತ್ತಿದ್ದೆವು. ಪೊಟ್ಟು ತೆಂಗಿನ ಕಾಯಿ, ಬಾಳೆದಿಂಡುಗಳಿಂದ ಮೇಲ್-ಬಡ್ತಿ ಕಾರಿನ ಹಳೆ ಟ್ಯೂಬ್. ಇದರ ಮಧ್ಯದಲ್ಲಿ ಕೂತರೆ ಯಾವ ಭಯ, ಸುಸ್ತು ಇಲ್ಲದೆ ಬೇಕಾದಷ್ಟು ಹೊತ್ತು ನೀರಿನಲ್ಲಿ ಖುಷಿ ಬಂದಂತೆ ವಿಹರಿಸಬಹುದಾಗಿತ್ತು. ಆದರೆ ನಮ್ಮ ಶೆಟ್ಟಿಗಾರ್ ಮಾಸ್ತರಿಗೆ ಇದನ್ನು ಕಂಡರೆ ಅಷ್ಟಕ್ಕಷ್ಟೇ. ಮಕ್ಕಳು ಈಜು ಕಲಿಯುವುದು ಬಿಟ್ಟು ಜಲವಿಹಾರ ಮಾಡುತ್ತಾ ಕಾಲಕಳೆಯುತ್ತಾರೆ ಎಂದು ಅವರಿಗೆ ಅನಿಸುತ್ತಿತ್ತು. ಮತ್ತು ಅದು ಸತ್ಯವೂ ಆಗಿತ್ತು.ಅಜಿತ್ ಕುಮಾರ್ ರೈ ಕೂಡಾ ಈ ಈಜು ಕ್ಲಾಸಿನ ಸದಸ್ಯನೇ. ಇವರಿಬ್ಬರು ಮತ್ತು ಗಣಪತಿ ಭಟ್ (ಉಳಿದವರ ಹೆಸರು ನೆನಪಾಗುತ್ತಿಲ್ಲ) ಮೈಸೂರು ದಸರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಟ್ರೋಫಿ ಹಿಡಿದು ಮೆರೆದ ಘಟನೆ ಒಂದು ರೋಚಕ ಕಥೆ. ಈ ಕೋಟಿಕೆರೆಗೆ ಬರಬೇಕಾದರೆ ನನಗೆ ಎರಡು ದಾರಿಗಳಿದ್ದವು. ಒಂದು ಜಟಾಧಾರಿ ಕೆರೆದಂಡೆ ಮೇಲೆ ಸಾಗಿ ಸದಾ ನೀರು ಹರಿಯುವ ಒಂದು ಸಣ್ಣ ತೋಡಿನಲ್ಲಿ ಸ್ವಲ್ಪ ದೂರ ನಡೆದು ದಾಟಿ ಬರುವುದು – ಇದು ಮಳೆಗಾಲದಲ್ಲಿ ಸಾಧ್ಯವಿಲ್ಲದ ಮಾತು – ಮಳೆ ಬರುತ್ತಿದ್ದ ದಿನಗಳಲ್ಲೂ ಎಷ್ಟೋ ಬಾರಿ ನಾನು ಈಜು ಹೊಡೆಯುತ್ತಿದ್ದೆ. ಆಗೆಲ್ಲಾ ಸಾಮಾನ್ಯವಾಗಿ ನಾನು ಒಂಟಿಯೇ. ಇನ್ನೊಂದು ದಾರಿ ನಮ್ಮ ಹೈಸ್ಕೂಲ್ ಬದಿಯಿಂದ ಗದ್ದೆಗಳನ್ನು ಹಾದು ನನ್ನ ಸಹಪಾಠಿ ಸುಬ್ರಹ್ಮಣ್ಯ ಹೊಳ್ಳನ (ಪರಮೇಶ್ವರ ಹೊಳ್ಳರ ಖಾಸಾ ತಮ್ಮ – ಈತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯನಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ದುರದೃಷ್ಟವಶಾತ್ ಬೈಕ್ ಆಕ್ಸಿಡೆಂಟ್-ನಲ್ಲಿ ತೀರಿಹೋದ) ಮನೆಗೆ ಬಂದು ಅವನೊಂದಿಗೆ ಕೋಟಿಕೆರೆಗೆ ಬರುವ ಬಳಸು ದಾರಿ. ಅವನು ನನ್ನೊಂದಿಗೆ ಬರುತ್ತಾನೆ ಎನ್ನುವ ಕಾರಣಕ್ಕೆ ನಾನು ಈ ಬಳಸು ದಾರಿಯನ್ನೇ ಹೆಚ್ಚು ನೆಚ್ಚಿದ್ದೆ. ಈಜುವಿಕೆಯಲ್ಲಿ ಸಾಧನೆ ಮಾಡಿದ ನನ್ನ ಇನ್ನೊಬ್ಬ ಸಹಪಾಠಿ ಕಾಶೀಮಟದ ಗಣಪತಿ ಭಟ್. ಇವನೊಂದಿಗೆ ತಳುಕುಹಾಕಿಕೊಂಡ ನೆನಪು ನಾನು ಏಳನೆಯ ತರಗತಿಯಲ್ಲಿ ಇದ್ದಾಗ ಜೀವಂಧರ ಮಾಷ್ಟ್ರ ನಿರ್ದೇಶನದ ‘ಕುರುಕ್ಷೇತ್ರ’ ನಾಟಕ. ಅದರಲ್ಲಿ ಗಣಪತಿಯದ್ದು ಕೌರವನ ಪಾತ್ರ, ನನ್ನದು ಬಲರಾಮನ ಪಾತ್ರ. ನಾಟಕದ ತರಬೇತಿ ಸಮಯದಲ್ಲಿ ಮಾತು ಮರೆತರೆ ಜೀವಂಧರ ಮಾಸ್ತರಿಗೆ (ನಮ್ಮ ಊರಿನ ಎರಡೋ ಮೂರೋ ಜೈನ ಮನೆಗಳಲ್ಲಿ ಇವರದೂ ಒಂದು; ಇನ್ನೊಂದು ಜೈನ ಬಸದಿಯ ಇಂದ್ರ ಅವರದು.) ಅಸಾಧ್ಯ ಸಿಟ್ಟು. ಕೌರವನ ಗದೆ, ಬಲರಾಮನ ಹಲಾಯುಧಗಳನ್ನು ನಾವು ನಮ್ಮ ನಮ್ಮ ಕೈಯಲ್ಲಿ ಇದೆ ಎಂದೇ ಭಾವಿಸಿಕೊಂಡು ರಿಹರ್ಸಲ್ ನಡೆಸುತ್ತಿದ್ದೆವು. ನಾಟಕದ ದಿನ ನನಗೆ ಸಣ್ಣಗೆ ಜ್ವರ. ಇದು ಮಾಸ್ತರಿಗೆ ಗೊತ್ತಾದರೆ ಫಜೀತಿ ಎಂದು ಸಾಧ್ಯವಾದಷ್ಟು ಉಮೇದು ತೋರಿಸುತ್ತಿದ್ದೆ. ಮೇಕಪ್ ಎಲ್ಲಾ ಮುಗಿದು ನಾಟಕ ನಡೆಯುತ್ತಿದೆ. ಆದರೆ ನನ್ನ ಹಲಾಯುಧ ಮಾತ್ರ ಕಾಣೆಯಾಗಿದೆ; ಅದನ್ನು ತಂದೇ ಇಲ್ಲವೋ ಅಥವಾ ಉಳಿದ ಪರಿಕರಗಳೆಡೆಯಲ್ಲಿ ಎಲ್ಲಿ ಮರೆಯಾಗಿತ್ತೋ

ನಾನು ಈಜು ಕಲಿತ ಪ್ರಸಂಗ: Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ಕವಿತೆ

ಇರುವೆ-ಆನೆ ಗಣಪ ಮತ್ತು ಪುಟ್ಟಿ ವಿಜಯಶ್ರೀ ಹಾಲಾಡಿ ಗಣಪನ ತಿಂಡಿ ಇರುವೆ ತಿಂದರೆತಪ್ಪು ಏನಮ್ಮಆನೆಮರಿಯೇ ಗಣಪ ಎಂದುಅಜ್ಜಿ ಅಂದಿಲ್ವ? ಆನೆಗೆ ಇರುವೆ ಗೆಳೆಯನು ತಾನೇನಾನೇ ನೋಡಿಲ್ವಕಾಡಿನ ಬಿಲದಲಿ ಹುಲ್ಲಿನ ಬೀಜಕೂಡಿ ಹಾಕಿಲ್ವ? ಹುಲ್ಲು ಮೊಳೆತು ಮಳೆಯ ಬೆರೆತುಆನೆಯು ತಿಂದಿಲ್ವಆನೆಗು ಇರುವೆಗು ಭೇದವೆ ಇಲ್ಲಬೆಲ್ಲ ಕದ್ದಿಲ್ವ? ಪುಟ್ಟಿಯ ಮಾತು ಸಿಡಿಯೋ ಅರಳುತಲೆಯು ಕೆಟ್ಟಿಲ್ವ!!ಅಮ್ಮ ಅಪ್ಪ ಅಜ್ಜಿ ಅಜ್ಜಬಿದ್ದು ನಕ್ಕಿಲ್ವ? ******************************

ಮಕ್ಕಳ ಕವಿತೆ Read Post »

ಇತರೆ, ಪ್ರಬಂಧ

ಶಿಶುತನದ ಹದನದೊಳು ಬದುಕಲೆಳಸಿ

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ ಡಾ.ಲಕ್ಷ್ಮಿನಾರಾಯಣ ಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ? ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ: It is right it should be so Man was made for Joy & Woe And when this we rightly know Thro the World we safely go ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ! ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ: The Childs Toys & the Old Mans Reasons Are the Fruits of the Two seasons ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ. ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ನಮಸ್ಕಾರ. ****************************

ಶಿಶುತನದ ಹದನದೊಳು ಬದುಕಲೆಳಸಿ Read Post »

ಇತರೆ

ಲಲಿತ ಪ್ರಬಂಧ

ಹಲಸಿನ ಕಡುಬು. ಶೀಲಾ ಭಂಡಾರ್ಕರ್ ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ ದಿಕ್ಕಿಗೆ ಪರಿಮಳ ಸೂಸಿ ಎಲ್ಲರ ಮೂಗು ಅರಳಿಸುತ್ತದೆ.ಬಿಸಿ ಬಿಸಿ ಹಲಸಿನ ಕಡುಬನ್ನು ತಾಜಾ ಬೆಣ್ಣೆ, ಅಥವಾ ತುಪ್ಪದ ಜತೆ ತಿಂದರೆ.. ಆಹ್… ಬಿಡಿ.. ಬಲ್ಲವರೇ ಬಲ್ಲರು ಅದರ ರುಚಿಯ. ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ. ಆಗ ನಾವೊಂದು ಚಿಕ್ಕ ಹಳ್ಳಿಯಲ್ಲಿದ್ದೆವು ಒಂದು ವರ್ಷದ ಮಟ್ಟಿಗೆ. ಅಲ್ಲಿ ನಾವು ಇದ್ದ ಕಡೆ ಹತ್ತಿರದಲ್ಲೇ ಒಂದು ಅಂಗಡಿ, ಅದರ ಮಾಲೀಕ ಶೇಷಪ್ಪ ಅಂತ. ಅವನೊಂದು ದಿನ ಒಂದು ಹಲಸಿನ ಹಣ್ಣು ತಂದು ಕೊಟ್ಟ. ಅವನು ತಂದಿಟ್ಟ ತಕ್ಷಣ ನಮಗೆಲ್ಲ ಕಡುಬು ತಿನ್ನುವ ಆಸೆಯಾಯ್ತು. ಸರಿ ಆವತ್ತು ರಾತ್ರಿ ಯಾರಿಗೂ ಊಟ ಬೇಡ, ಕಡುಬೇ ಸಾಕು ಅಂತ ನಿರ್ಧಾರವಾಯಿತು. ಆಗ ಈಗಿನ ಹಾಗೆ ಮಿಕ್ಸಿ, ಗ್ರೈಂಡರ್ ಇರಲಿಲ್ಲ ನಮ್ಮ ಮನೆಯಲ್ಲಿ. ರುಬ್ಬುವ ಕಲ್ಲಿನಲ್ಲಿ ಕಡುಬಿನ ಹಿಟ್ಟನ್ನು ತಯಾರು ಮಾಡಿ ಎರಡು ದೊಡ್ಡ ದೊಡ್ಡ ತಟ್ಟೆಗಳಲ್ಲಿ ಅಮ್ಮ ಬೇಯಿಸಲಿಕ್ಕಿಟ್ಟರು.. ಇನ್ನು ಸರಿಯಾಗಿ ಅರ್ಧ ಘಂಟೆಯಾದರೂ ಬೇಯಬೇಕು ಅಂತ ಮನಸ್ಸಿನಲ್ಲೇ ಅಂದುಕೊಂಡು ಕಾಯುತ್ತ ಕೂತಿದ್ದೆವು. ಅಜ್ಜಿ ಬೆಣ್ಣೆಯನ್ನು 2-3 ಸಲ ನೀರಿನಿಂದ ತೊಳೆದು ಇಟ್ಟರು.ಅಮ್ಮ ಮುಚ್ಚಳ ತೆಗೆದು ಬೆಂದಿದೆ ಅಂತ ಖಾತ್ರಿ ಮಾಡಿಕೊಂಡು ತಟ್ಟೆಗಳನ್ನು ಹಬೆ ಪಾತ್ರೆಯಿಂದ ತೆಗೆದು ನೆಲದಲ್ಲಿ ಆರಲು ಇಟ್ಟರು.ಅಜ್ಜಿ ಬಂದು ನೋಡಿ.. “ಎಷ್ಟು ಚಂದ ಬಂದಿದೆ ರಂಗು. ಪರಿಮಳ ಕೂಡ ವಿಶೇಷವಾಗಿದೆ “ಅದಕ್ಕೆ ಅಮ್ಮ “ಹೌದು ಶೇಷಪ್ಪ ತಂದುಕೊಟ್ಟ ಹಣ್ಣಲ್ವಾ ಅದಕ್ಕೆ ವಿಶೇಷವಾಗೇ ಪರಿಮಳ” ಅಂತ ಹೇಳುತ್ತ.. ಅಜ್ಜಿಗೆ ಒಂದು ಚಿಕ್ಕ ತುಂಡು ಕಡುಬನ್ನು ತಟ್ಟೆಯಲ್ಲಿಟ್ಟು ಬೆಣ್ಣೆ ಹಾಕಿ ಕೊಟ್ಟರು “ರುಚಿ ನೋಡಿ” ಅಂತ.“ಎಲ್ಲರೂ ಒಟ್ಟಿಗೆ ತಿನ್ನೋಣ” ಎಂದು ಹೇಳಿದರೂ ಕೂಡ ಅಜ್ಜಿ ಕಡುಬು ತಿಂದು “ಭಾಳ ರುಚಿಯಾಗಿದೆ” ಅಂತ ಸರ್ಟಿಫಿಕೇಟ್ ಕೊಟ್ಟಾಯಿತು.ಹಾಗೆ ತಮ್ಮನನ್ನು ಕರೆದು ಅಜ್ಜಿ “ಏ.. ಹೌದಾ.. ಆ ಶೇಷಪ್ಪ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಬಂದು ಹೋಗಬೇಕಂತೆ ಅಂತ ಹೇಳಿ ಬಾ ಹೋಗು” ಅಂತ ಕಳುಹಿಸಿದರು.ಅವನು ಕಡುಬು ತಿನ್ನುವ ಆತುರದಲ್ಲಿ ಒಂದೇ ಏಟಿಗೆ ಓಡಿ ಹೋಗಿ ಶೇಷಪ್ಪನಿಗೆ ವಿಷಯ ಮುಟ್ಟಿಸಿ ಮನೆಗೆ ಬರುವುದರೊಳಗೆ ಹಿಂದೆಯೇ ಶೇಷಪ್ಪನೂ ಬಂದಾಯಿತು. ಅಲ್ಲೇ ಮೆಟ್ಟಲಲ್ಲಿ ಕೂತ ಅವನಿಗೆ ತಟ್ಟೆಯಲ್ಲಿ ಸಾಕಷ್ಟು ಕಡುಬು ಒಂದು ದೊಡ್ಡ ಬೆಣ್ಣೆ ಮುದ್ದೆ ಕೊಟ್ಟಾಯಿತು. ಅವನು ತಿಂದು ಹೋಗಲಿ ಆಮೇಲೆ ನಾವೆಲ್ಲ ತಿಂದ್ರಾಯ್ತು ಅಂತ ಅಮ್ಮ ಹೇಳಿದರು. ಹೂಂ … ಅಂತ ತಲೆ ಅಲ್ಲಾಡಿಸಿ ಕೂತೆವು. ಅಷ್ಟು ಒಳ್ಳೆಯ ಮಕ್ಕಳು ಆಗಿನವು. ಈಗಿನವಕ್ಕೆ ಫಿಜ್ಹಾ, ಬರ್ಗರ್, ಮುಂದೆ ಕಡುಬು ಎಲ್ಲಿ ಗಂಟಲಿಗಿಳಿಯುತ್ತದೆ.? “ಎಷ್ಟು ಒಳ್ಳೆಯ ಹಣ್ಣು..! ನಿಮ್ಮ ಮರದ್ದೇಯಾ? ತುಂಬಾ ಬಿಡ್ತದಾ ಹಣ್ಣು ? ಎಷ್ಟು ಮರ ಇವೆ..? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಅಜ್ಜಿ “ಇನ್ನೊಂದು ಹಣ್ಣು ಬೇಕು , ಮಗಳ ಮನೆಗೆ ಹೋಗ್ತಾ ಇದ್ದೇನೆ ಬರುವ ವಾರ ” ಅಂತ ಬುಕ್ ಮಾಡಿಸಿಟ್ಟರು. ಅವನೂ ಮಾತಾಡುತ್ತ .. ಕಡುಬನ್ನು ಚಪ್ಪರಿಸಿ ತಿನ್ನುವಾಗ, ಕಾದು ಕೂತ ನಮಗೆ ಇವನು ಬೇಗ ಬೇಗ ತಿಂದು ಹೋಗಬಾರದಾ..? ಎಷ್ಟು ಪಂಚಾದಿಕೆ ಈ ಅಜ್ಜಿಗೂ ಅಂತ ಮನಸ್ಸಿನಲ್ಲೇ ಗೊಣಗಾಟ. ತಿಂದಾಯ್ತು.. ಅವನಿಗೆ ಕೈ ತೊಳೆಯಲು ನೀರು ಅಲ್ಲೇ ತಂದು ಕೊಟ್ಟರೆ.. ತಟ್ಟೆ ತೊಳೆದಿಟ್ಟು ಹೋಗುತ್ತೇನೆ ಈ ನೀರು ಸಾಲದು. ಅಂತ ಬೇಡ ಬೇಡ ಎಂದರೂ ಕೇಳದೆ , ನನ್ನನ್ನು ಕರೆದು ಹಿಂದಿನ ಬಾಗಿಲು ತೆಗೆದು ಸ್ವಲ್ಪ ನೀರು ಹಾಕಿ ಅಮ್ಮ ಅಂತ ಹೇಳಿದ. ನಾನು ಹೋಗಿ ಹಿಂದಿನ ಬಾಗಿಲು ತೆಗೆದು ಅವನಿಗೆ ನೀರು ಕೊಟ್ಟು ಬಂದೆ. ಆಯ, ಆಕಾರವಿಲ್ಲದ ದೊಡ್ಡ ಹಳ್ಳಿ ಮನೆ.. ಬಂದು ಕೂತರೆ.. ಶೇಷಪ್ಪ.. ಕಡುಬನ್ನು ವರ್ಣಿಸಲು ತೊಡಗಿದ. ಹಾಗೆ ಇನ್ನೂ ಸ್ವಲ್ಪ ಹೊತ್ತು ಅಪ್ಪ, ಅಜ್ಜಿ , ಅಮ್ಮ ಅಂತ ಒಬ್ಬೊಬ್ಬರದೂ ಅವನ ಜೊತೆ ಮಾತಾಗುತಿತ್ತು. ಒಳಗೆ ಏನೋ “ಢಂಯ್ ” ಎಂದು ಸದ್ದಾಯಿತು. ಹಾರಿ ಹೋಗಿ ಒಳಗೆ ನೋಡಿದರೆ ನಾಯಿಯೊಂದು ತೆರೆದಿಟ್ಟ ಹಿಂದಿನ ಬಾಗಿಲಿನಿಂದ ಒಳಗೆ ಬಂದು ಆರಲು ಇಟ್ಟಿದ್ದ ಕಡುಬಿನ ತಟ್ಟೆಗಳಲ್ಲಿ ಒಂದನ್ನು ಖಾಲಿ ಮಾಡಿ ಇನ್ನೊಂದಕ್ಕೆ ಬಾಯಿ ಹಾಕಿ ಚಪ್ಪರಿಸುತಿತ್ತು. ತಿಂದು ಮುಗಿಸಿದ ತಟ್ಟೆಯಲ್ಲಿ ನಾಯಿ ಕಾಲಿಟ್ಟಿದ್ದರಿಂದ ಆ ಸದ್ದು ಕೇಳಿಸಿದ್ದು ಹೊರಗೆ. ಬಂದ ಕೋಪಕ್ಕೆ ಅಮ್ಮ ಕೈಗೆ ಸಿಕ್ಕಿದ ದೊಣ್ಣೆಯಿಂದ ಒಂದು ಕೊಟ್ಟರು ನಾಯಿಯ ಬೆನ್ನಿಗೆ. ಅದು ಕೊಂಯ್ ಅಂತ ಒಂದೇ ಉಸಿರಿಗೆ ಮಾಯವಾಯ್ತು.ಇನ್ನೊಂದು ನನಗೆ ಗ್ಯಾರಂಟಿ ಎಂದು ನಾನು ಹೆದರಿ ಯಾವುದೋ ಒಂದು ಸಂಧಿಯಲ್ಲಿ ಅಡಗಿ ಕೂತುಕೊಂಡೆ. ಅಮ್ಮನಿಗೆ ಪಾಪ.. ಅಷ್ಟು ಕಷ್ಟ ಪಟ್ಟು ಮಾಡಿದ ಕಡುಬು ಎಲ್ಲಾ ನಾಯಿ ತಿಂದು ಹೋಯಿತು.. ಈಗ ಪುನಹ ಇವರಿಗೆಲ್ಲ ಏನು ಮಾಡಿ ಬಡಿಸಲಿ ಅನ್ನೋ ಯೋಚನೆ,ನನಗೆ.. ಛೆ!! ನಾನು ಮರೆತು ಬಾಗಿಲು ಹಾಕದಿದ್ದರಿಂದಲೇ ಇವತ್ತು ಕಡುಬು ನಾಯಿ ಪಾಲಾಯಿತು.. ಎಂಥ ಕೆಲಸವಾಯಿತು. ಅಂತ ಮನಸ್ಸಲ್ಲೇ ದುಃಖ.ಅಜ್ಜಿಗೆ ತಿಂದ ಆ ಚಿಕ್ಕ ಕಡುಬಿನ ತುಂಡಿನ ರುಚಿ ಇನ್ನೂ ಬಾಯಲ್ಲೇ ಇದೆ.. ಏನಾಗಿ ಹೋಯಿತು ಇದು ಅಂತ ಮನಸ್ಸೆಲ್ಲ ಚುರುಚುರು.ಅಪ್ಪ ಎಂದಿನಂತೆ ಸ್ಥಿತಪ್ರಜ್ಞ.. ತಮ್ಮ-ತಂಗಿ ಇಬ್ಬರೂ ಯಾವುದೋ ಆಟದಲ್ಲಿ ಮಗ್ನರಾಗಿದ್ದರು. ಈಗ ಶೇಷಪ್ಪನ ಗೋಳಾಟ ಶುರುವಾಯಿತು., “ನೀವು ಬೇಡ ಬೇಡ ಅಂದರೂ ನಾನು ಮಾಡಿದ ತಪ್ಪಿನಿಂದಲೇ ಹೀಗಾಯಿತು.. ನೀವು ಇಷ್ಟು ಕಷ್ಟ ಪಟ್ಟು ಮಾಡಿದ್ದು ನಿಮಗೆ ತಿನ್ನಲಿಕ್ಕಾಗದೇ ಹೋಯಿತು” ಅಂತ. ನಮ್ಮ ದುಃಖದ ನಡುವೆ ಅವನನ್ನು ಸಮಾಧಾನ ಮಾಡಿ ಕಳಿಸಿದರು ಅಮ್ಮ ಮತ್ತು ಅಜ್ಜಿ.ಆಮೇಲೆ ಅಮ್ಮನಿಗೆ ನನ್ನನ್ನು ಹೊಡೆಯದೆ ಬಿಟ್ಟದ್ದು ನೆನಪಾಗಿ.. ನನ್ನನ್ನು ಹುಡುಕುವುದಕ್ಕೆ ಶುರು ಮಾಡಿದರು. ಹೊರಗೆ ಬಂದರೆ ನನಗೆ ಸರಿಯಾದ ಪೂಜೆಯಾಗುತ್ತದೆ ಅಂತ ಗೊತ್ತಿತ್ತು ನನಗೆ. ಸುಮ್ಮನೆ ಉಸಿರು ಕೂಡ ಆಡದೆ ಕೂತೆ. ಅಮ್ಮನ ಕೋಪ ನೋಡಿ ಅಜ್ಜಿ.. ಅವಳನ್ನು ಹೊಡೆಯುವುದಿಲ್ಲ ಅಂತ ಭಾಷೆ ಕೊಡು ಅಂತ ಒಪ್ಪಿಸಿ ನನ್ನನ್ನು ಕರೆದರು.. “ಬಾ.. ನಿನಗೆ ಹೊಡೆಯುವುದಿಲ್ಲ” .. ನಾನು ಮೆತ್ತಗೆ ಹೊರಗೆ ಬಂದೆ.ಆಮೇಲೆ ಅದೇನು ತಿಂದು ಮಲಗಿದೆವೋ ಅದು ನೆನಪಿಲ್ಲ. ಮಾರನೆ ದಿನ ಶೇಷಪ್ಪ ಇನ್ನೂ ದೊಡ್ಡದಾದ ಹಣ್ಣನ್ನು ತಂದಿಟ್ಟರೂ ಯಾರಿಗೂ ಅಷ್ಟೊಂದು ಉತ್ಸಾಹವಿಲ್ಲ. ಕಡುಬನ್ನು ಮಾಡಿದರೂ ಶೇಷಪ್ಪನನ್ನು ಕರೆಯಲಿಲ್ಲ ಈ ಸಾರಿ. ಅಜ್ಜಿ ತಿಂದು ನೋಡಿ ನಿನ್ನೆಯಷ್ಟು ರುಚಿಯಾಗಿಲ್ಲ ಅಂದಾಗ ಇನ್ನೂ ಮನಸ್ಸು ಮುದುಡಿ ಹೋಯಿತು. ಅದಾದ ಮೇಲೆ ಏಷ್ಟೋ ಸಲ ಹಲಸಿನ ಹಣ್ಣಿನ ಕಡುಬು ಮಾಡಿ ತಿಂದರೂ ಆ ದಿನದ ನಾವು ತಿನ್ನದಿದ್ದ ಕಡುಬಿನಷ್ಟು ರುಚಿ ಅನ್ನಿಸಿದ್ದಿಲ್ಲ. ಮತ್ತು ಪ್ರತೀ ಸಲ ಕಡುಬು ಮಾಡಿದಾಗಲೂ ಶೇಷಪ್ಪನನ್ನು ಮತ್ತು ಆ ನಾಯಿಯನ್ನು ಇಂದಿಗೂ ನೆನಸುತ್ತೇನೆ. **********************************************

ಲಲಿತ ಪ್ರಬಂಧ Read Post »

ಇತರೆ

ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ ಕಾಲಿಟ್ಟಾಯಿತು. ಇನ್ನು ಮಾತಾಡುವುದು ಕಷ್ಟ ಇವರೆದುರಿಗೆ , ನಿಮ್ಮದು ಯಾವಾಗಲೂ ಇದ್ದದ್ದೆ ಪಿಟಕಾಯಣ ಅನ್ನುತ್ತಾರೆ ಅಂತ,  ಅವಳಿಗೆ ಅಂದೆ ” ನಾಳೆ ಮಾತಾಡ್ತೇನೆ ಆಯ್ತಾ”. “ಯಾರದು ರತ್ನಾಕರ?” ಇವರು ಕೇಳಿದರು. ನಾನು ಮನಸ್ಸಿನಲ್ಲೇ,. ರತ್ನಾಕರನ ಬಗ್ಗೆ ಅಂದಿದ್ದು ನನ್ನ ತಂಗಿಗೆ ಕೇಳಿಸಿತ್ತೋ ಇಲ್ಲವೋ ಆದರೆ ಇವರಿಗೆ ಹೇಗೆ ಕೇಳಿಸಿತಪ್ಪ..? ಅಂದುಕೊಂಡು.. ಹಿಹಿ ಇಲ್ಲಪ್ಪ ರತ್ನಕ್ಕ ಅಂತ ಅಂದಿದ್ದು  ಅಂದೆ. ಏನೋ ಸುಮ್ಮನಾದರು. ನಾನು ಮಾತ್ರ ಆವತ್ತು ಇಲ್ಲಿರಲಿಲ್ಲ.. ಮನಸ್ಸೆಲ್ಲ ಸಾಲೆತ್ತೂರೆಂಬ ಚಂದದ ಊರು .. ರತ್ನಾಕರ , ಅವನ ಮುಗ್ಧ ನಗು, ಅವನ ಒಡನಾಟ ಇದನ್ನೇ ಯೋಚಿಸುತ್ತಿತ್ತು. ರತ್ನಾಕರ ನನಗಿಂತ ಒಂದು ವರ್ಷ ಚಿಕ್ಕವನು.. ತುಂಬ ಒಳ್ಳೆಯ ಪಾಪದ ಹುಡುಗ. ಆ ಊರಲ್ಲಿದ್ದ ಒಂದೇ ಶಾಲೆಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಒಟ್ಟಿಗೆ ಹೋಗುವುದು ಬರುವುದು. ಕುಂಟಲ ಹಣ್ಣು, ಕೇಪಳ ಹಣ್ಣು  ತಿನ್ನಲು ಕಲಿಸಿದ್ದೇ ರತ್ನಾಕರ. ಹಸಿ ಗೇರುಬೀಜಗಳನ್ನು ಒಟ್ಟು ಮಾಡಿ ಒಣಗಿದ ಎಲೆಗಳ ನಡುವೆ ಇಟ್ಟು ಬೆಂಕಿ ಹಾಕಿ ಸುಟ್ಟು ತಿನ್ನೋಣ ಎಂದು ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದ, ಏನೋ ಸಾಧಿಸುವವರಂತೆ ನಾವೆಲ್ಲ ಸೇರಿ ಸಾಹಸ ಮಾಡುವಾಗ ಗೇರುಬೀಜವೊಂದು ಸಿಡಿದು ಅದರ ಎಣ್ಣೆ ನನ್ನ ಕೈಗೆ ಹಾರಿ ಕಪ್ಪನೆಯ ಬೊಬ್ಬೆ ಬಂದಿದ್ದು.. ಅದರ ಕಲೆ ಇನ್ನೂ ಇದೆ. ಸಾಲೆತ್ತೂರಿನಲ್ಲಿ ನಾವಿದ್ದದ್ದು ಒಂದೇ ವರುಷವಾದರೂ ಈ ಇಡೀ ಜನ್ಮಕ್ಕಾಗುವಷ್ಟು ನೆನಪುಗಳು ಮೆರವಣಿಗೆ ಕಟ್ಟಿಕೊಂಡು ಧಾಪುಗಾಲು ಹಾಕುತ್ತ ಬರುತ್ತವೆ. ಸವಿ ಸವಿ ನೆನಪುಗಳು. ಅಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ, ಬಾವಿಯಿಂದಲೇ ಸೇದಿ ತರಬೇಕು. ಅದಕ್ಕಾಗಿ ಒಬ್ಬ ಆಳನ್ನು ಗೊತ್ತು ಮಾಡಿದ್ದರು ಅಪ್ಪ. ಆದರೆ ಅಮ್ಮನಿಗೆ ಅಡುಗೆಗೆ ಮತ್ತು ಕುಡಿಯಲು ತಾನೇ ಸೇದಿ ತರಬೇಕಿತ್ತು. ನಾನೂ ಅಮ್ಮನ ಹಿಂದೆ ಮುಂದೆ ಸುತ್ತುತ್ತಿದ್ದೆ ಬಾವಿಯ ಹತ್ತಿರ. ನನಗೆ ಬರಿಯ ಹನ್ನೊಂದು ವರ್ಷ ಆವಾಗ. ಹಾಗೊಂದು ದಿನ ಯಾರೋ ನೆಂಟರು ಬಂದಿದ್ದರು ಅಮ್ಮ ಅವರಿಗೆ ಕುಡಿಯಲು ನೀರು ಕೊಡುತ್ತ ನಮ್ಮ ಬಾವಿಯ ನೀರು ತುಂಬ ರುಚಿ., ಬಾವಿಯಿಂದ ಸೇದಿದ ಕೂಡಲೇ ಕುಡಿಯಬೇಕು ಅಮೃತವೇ ಅಂತೆಲ್ಲ ಹೊಗಳುವಾಗ.., ನಾನು ಯಾಕೆ ಈಗ ಹೋಗಿ ಬಾವಿಯಿಂದ ನೀರು ತರಬಾರದು..? ಅಮ್ಮ ಹೇಗೂ ಅವರ ಹತ್ತಿರ ಮಾತಾಡುತಿದ್ದಾರಲ್ಲ ಎಂದುಕೊಂಡು ಮೆತ್ತಗೆ ಕೊಡಪಾನ (ಬಿಂದಿಗೆ) ತೆಗೆದುಕೊಂಡು ಬಾವಿಯ ಹತ್ತಿರ ಹೋದೆ. ಅಮ್ಮ ಮಾಡಿದ ಹಾಗೆ ಹಗ್ಗದ ಕುಣಿಕೆಯನ್ನು ಕೊಡದ ಕತ್ತಿಗೆ ಸುತ್ತಿ ಎಳೆದೆ. ಅಮ್ಮನ ಜತೆ ಬಂದಾಗ ಒಂದೊಂದು ಸಲ ಇಷ್ಟು ಮಾಡಿ ನಿಧಾನಕ್ಕೆ ಬಾವಿಯೊಳಗೆ ಕೊಡವನ್ನು ಇಳಿಸುವ ಕೆಲಸ ಮಾಡುತ್ತಾ ಇದ್ದೆ. ಹಾಗಾಗಿ ಆ ಕೆಲಸ ಸುಲಭವಾಗಿ ನಡೆಯಿತು. ಕೊಡ ತುಂಬಿತು. ಇನ್ನೇನು ಎಳೆದರೆ ಆಯಿತು ಎಂದುಕೊಂಡು ಬಾವಿಕಟ್ಟೆಯಲ್ಲಿ ಕಾಲಿಡುವ ತ್ರಿಕೋಣಾಕಾರದ ಸಂಧಿಯಲ್ಲಿ ಕಾಲಿಟ್ಟು ಹಗ್ಗವನ್ನು ಎಳೆಯಲು ನೋಡಿದರೆ.. ಯ್ಯಪ್ಪಾ….!!! ಈಗೇನು ಮಾಡುವುದು…? ಹಗ್ಗ ಬಿಟ್ಟರೆ ಸೊಂಯ್ಯೆಂದು ಸೀದಾ ಬಾವಿಯೊಳಗೆ ಎಂಬುದು ಗೊತ್ತಿತ್ತು. ಏನು ಮಾಡುವುದಪ್ಪ ಈಗ…..??? ಅಲ್ಲಿಯೇ ಬಾವಿಯ ಪಕ್ಕದ ತಗ್ಗಿನಲ್ಲಿ ಮನೆ ರತ್ನಾಕರನದ್ದು… ಯೇ ರತ್ನಾಕರ ಅಂತ ಕೂಗಿದ್ದು ನನಗೇ ಕೇಳಿಸಲಿಲ್ಲ. ಪುನಹ ಜೋರಾಗಿ “ರತ್ನಾಕರ ……….” ಅಂದಾಗ “ಏನು?” ಅಂದಿದ್ದು ಕೇಳಿಸಿತು. “ಇಲ್ಲಿ ಬಾರಾ ಸ್ವಲ್ಪ” ಅಂದೆ. “ಎಲ್ಲಿಯಾ?” ಅಂದ. ಬಾವಿಯ ಹತ್ತಿರ ಅನ್ನುವುದರೊಳಗೆ.. ಒಂದೇ ಹಾರಿಗೆ ಬಂದ ರತ್ನಾಕರ ..ಪಾಪ! ಅವನಿಗೆ ನನ್ನನ್ನು ನೋಡಿ ನಗು. ಅವನ ನಗು ನೋಡಿ ನಂಗೆ ಕೋಪ ಬಂತು ..”ಬಾ ಹಗ್ಗ ಎಳಿ” ಅಂದೆ. “ನೀ ಯಾಕೆ ದೊಡ್ಡ ಜನದ ಹಾಗೆ ಬಂದದ್ದು? ” ಅಂದ. “ಯಾರಿಗೂ ಗೊತ್ತಿಲ್ಲ ನಾನು ಬಂದದ್ದು” ನಾನು ಹೇಳಿದೆ. ಸರಿ.. ಆದರೆ ನಂಗೆ ಕೂಡ ಒಬ್ಬನಿಗೆ ಹಗ್ಗ ಎಳೆಯುವುದಕ್ಕೆ ಆಗ್ಲಿಕ್ಕಿಲ್ಲ .. ಒಂದು ಕೆಲಸ ಮಾಡುವ.. ನೀನು ಹಗ್ಗ ಗಟ್ಟಿ ಹಿಡಕೊಂಡು ನಿಲ್ತಿಯಾ? ಅಂದ. ಹೂಂ… ಅಂದೆ. ಅವನು ಎಳೆದ, ನಾನು ಹಿಡಿದೆ… ಹಾಗಂತ ಅಂದುಕೊಂಡೆ..!! ಆದರೆ ಹಗ್ಗ ಸುಂಯ್…. ಎಂದು ಪುನಹ ಹಿಂದಕ್ಕೆ ಹೋಯಿತು. ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ದೊಡ್ಡವರನ್ನು ಕರೆಯೋಣ ಎಂದರೆ ಅವರಿಂದ ಬಯ್ಯಿಸಿಕೊಳ್ಳುವುದು ಯಾರು? ರತ್ನಾಕರನಿಗೆ ಒಂದು ಪ್ಲಾನ್ ಹೊಳೆಯಿತು ಎಂದು ಕಾಣುತ್ತದೆ… ಹಹ್ಹಹ್ಹಾ ಅಂತ ನಗುತಿದ್ದ. ನಾವಿಬ್ಬರೂ ಹಗ್ಗ ಹಿಡಿದುಕೊಂಡೇ ನಿಂತಿದ್ದೆವಲ್ಲ..? “ಏನು?” ಅಂದೆ. “ನೋಡು ನಾನು ಹಗ್ಗ ಎಳೆದುಕೊಂಡೇ ಅಲ್ಲಿವರೆಗೆ ಹೋಗ್ತಾ ಇರುತ್ತೇನೆ. ಕೊಡ ಮೇಲೆ ಬಂದಾಗ ಅದನ್ನು ಎತ್ತಿ ಕಟ್ಟೆ ಮೇಲೆ ಇಡುವುದು ನಿನ್ನ ಕೆಲಸ. ಆಗಬಹುದಾ?” ಎಂದ. ಆಗಬಹುದು ಅಂದೆ. ಅವನು ಗತ್ತಿನಿಂದ ಕಳೆದ ವಾರವಷ್ಟೇ ಸಾಲೆತ್ತೂರಿನ ಮೈದಾನದಲ್ಲಿ ನಡೆದ ಬಯಲಾಟದಲ್ಲಿ ಬಂದ ಭೀಮ ಗದೆಯನ್ನು ಹಿಡಿದುಕೊಂಡ ಹಾಗೆ ಬಾವಿಯ ಹಗ್ಗವನ್ನು ಹೆಗಲ ಮೇಲೆ ಇಟ್ಟುಕೊಂಡು ಆ ಕಡೆ ತಿರುಗಿ ಬೀಮನ ಹಾಗೆಯೇ ನಡೆದುಕೊಂಡು ಹೋಗುತಿದ್ದ. ನಾನು ಖುಷಿಯಿಂದ ಅವನನ್ನೇ ನೋಡುತ್ತ ನಗುತ್ತ ನಿಂತುಬಿಟ್ಟೆ. ಅವನು ಅಲ್ಲಿಂದಲೇ “ಬಂತಾ?” ಅಂತ ಕೇಳಿದ ಜೋರಾಗಿ. ನಾನು ತಿರುಗಿ ನೋಡುವಾಗ ಬಿಂದಿಗೆ ರಾಟೆಯ ಹತ್ತಿರ ಇದೆ.. ಹೇಯ್ ಎಂದೆ.. ಅವನು ಗಾಬರಿಯಾಗಿ ತಿರುಗುವುದರೊಳಗೆ.. ಹಗ್ಗ ಸರಸರನೇ ಸೀದಾ ಬಾವಿಯ ಒಳಗೆ.. ಈಗ ಹಗ್ಗದ ಈ ತುದಿಯ ಗಂಟು ರಾಟೆಯ ಹತ್ತಿರ. ಕಷ್ಟ ಪಟ್ಟು ಆ ಗಂಟನ್ನು ಹಿಡಿದು ಎಳೆಯಲು ನೋಡಿದರೆ ಹಗ್ಗ ಸಲೀಸಾಗಿ ಬರ್ತಾ ಇದೆ… ಬಾವಿಯ ಒಳಗೆ ಇಣುಕಿದೆವು ಇಬ್ಬರೂ…. ಕೊಡವಿಲ್ಲ ..!! ದೇವರೇ ಏನಪ್ಪ ಮಾಡುವುದು ಈಗ…? ನಂಗೆ ಭಯ, ಇವನೇನಾದರೂ ಓಡಿ ಹೋದರೆ ನಾನೊಬ್ಬಳೇ ಬಯ್ಯಿಸಿಕೊಳ್ಳಬೇಕಲ್ಲ. ಅವನೂ ಸ್ವಲ್ಪ ಭಯ , ಸ್ವಲ್ಪ ಕೋಪದಲ್ಲಿ “ನಿಂಗೆ ಹೇಳಿದೆ ನಾನು ದೊಡ್ಡವರನ್ನು ಕರೆಯೋಣ ಅಂತ.” … ” ನೀನ್ಯಾವಾಗ ಅಂದೆ ಹಾಗಂತ?” ಸ್ವಲ್ಪ ಜೋರಾಗೇ ಕೇಳಿದೆ. ನಮ್ಮ ಮಾತುಕತೆ ಕೇಳಿಯೋ ಏನೋ ರತ್ನಾಕರನ ಅಮ್ಮ ಬಾವಿಯ ಹತ್ತಿರ ಬಂದರು. “ಸತ್ತೇ….” ಅಂತ ಒಂದೇ ಉಸಿರಿಗೆ ರತ್ನಾಕರ ಎಲ್ಲಿ ಹಾರಿ ಹೋದನೋ ಗೊತ್ತಾಗಲಿಲ್ಲ. ನಾನು ನಡುಗುತ್ತ ಹೆದರುತ್ತ ಅವರ ಹತ್ತಿರ ಹೇಳಿದೆ.. ಹೀಗೆ ಹೀಗೆ ಮಾಡಿದೆವು.. ಹೀಗೆ ಹೀಗೆ ಆಯಿತು ಅಂತ. ಅವರು “ನಿಂಗೆ ಉಂಟು ಇವತ್ತು ಅಮ್ಮನಿಂದ ಪೂಜೆ” ಅಂತ ನಗುತ್ತ ಹೇಳುವಾಗ.. ನನಗೆ ಅಳು ತಡೆಯದೆ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವರು ಅವರ ಗಂಡ ಆಚಾರಿಯನ್ನು ಕರೆದು… “ಇಗಾ… ಆ ಗರುಡ ಪಾತಾಳ (ಪಾತಾಳ ಗರಡಿ) ತೆಗೆದುಕೊಂಡು ಬನ್ನಿ ಇಲ್ಲಿ ಸ್ವಲ್ಪ” ಅಂದರು. ಅವರು ಆದಷ್ಟು ನಿಧಾನವಾಗಿ  ಕೈಯಲ್ಲಿ ಏನೋ ಹಿಡಿದುಕೊಂಡು ಬರುತಿದ್ದರು. ನಂಗೆ “ಅವರು ಏನು ತರಲು ಹೇಳಿದ್ದಿರಬಹುದು…? ಈಗ ಕೊಡವನ್ನು ಹೇಗೆ ತೆಗೆಯುತ್ತಾರಪ್ಪ? ಆದಷ್ಟು ಬೇಗ ಮನೆಯಲ್ಲಿ ಗೊತ್ತಾಗುವ ಮೊದಲೇ ತೆಗೆಯಬಾರದಾ? ” ಅಂತೆಲ್ಲ ಅನಿಸಲಿಕ್ಕೆ ಶುರುವಾಯಿತು. ಆಚಾರಿಯವರು ಕೂಡ.. “ಏನು ಅಮ್ಮ…. ಸಧ್ಯ ನೀವೆ ಬಾವಿಯೊಳಗೆ ಬೀಳಲಿಲ್ಲವಲ್ಲ ” ಅಂತ ಕೇಳುತ್ತ.. 3-4 ಕೊಕ್ಕೆಗಳಿರುವ ಒಂದು ಸಾಧನವನ್ನು ನಿಧಾನವಾಗಿ ಬಾವಿಕಟ್ಟೆ ಮೇಲಿಟ್ಟು ಹಗ್ಗವನ್ನು ಅದಕ್ಕೆ ಗಟ್ಟಿಯಾಗಿ ಕಟ್ಟಿ ಬಾವಿಯೊಳಗೆ ಬಿಟ್ಟರು. ಠಣ್… ಎಂದು ಸದ್ದಾಯಿತು. ಸ್ವಲ್ಪ ಪ್ರಯತ್ನದ ನಂತರ ಆಚಾರಿಯವರು ಹಗ್ಗ ಮೇಲೆ ಎಳೆದಾಗ ಆ ಕೊಕ್ಕೆಗಳು ಕೊಡದ ಬಾಯಿಯ ಒಳಗೆ ಸಿಕ್ಕಿಕೊಂಡಿದ್ದವು.  ಕೊಡವನ್ನು ಮೇಲಕ್ಕೆ ಎಳೆದು ತೆಗೆದುಕೊಟ್ಟು ಇನ್ನೊಂದು ಸಲ ಬರ್ತೀರಾ ಅಮ್ಮ ನೀರು ಸೇದಲಿಕ್ಕೆ? ಅಂತ ರತ್ನಾಕರನ ಅಮ್ಮ ತಮಾಷೆ ಮಾಡಿದರು. “ಈಗ ನೀವೆ ಒಂದು ಸಲ ನೀರು ಎಳೆದು ಕೊಡಿ” ಎಂದೆ. ಅವರು ಮನೆಯವರೆಗೆ ತಂದು ಕೊಡುತ್ತೇನೆ ಅಂತ ಹೇಳಿದರೂ ಕೇಳದೆ ನಾನೇ ಕಷ್ಟಪಟ್ಟು ಸೊಂಟದ ಮೇಲೆ ಇಟ್ಟುಕೊಂಡು ಮನೆಗೆ ಹೋದೆ. ಅಮ್ಮನಿಗೆ ಆಶ್ಚರ್ಯ… ಜತೆಗೆ ಖುಷಿ. “ಓ… ನನ್ನ ಮಗಳು ಭಾರಿ ಜಾಣೆ ” ಎಂದರು. ನನಗಷ್ಟೆ ಸಾಕು. ಎಲ್ಲ ಮರೆತು ಹೋಯಿತು. ಹೀಗೆ ಇನ್ನೂ ತುಂಬಾ ನೆನಪುಗಳು ದಬದಬನೇ ಬಂದು ಬಿದ್ದಾಗ.. ಯಾವಾಗ ದಸರಾ ರಜ ಬರುತ್ತದೋ… ಯಾವಾಗ ಊರಿಗೆ ಹೋಗ್ತೇವೋ ಅನ್ನಿಸಲಿಕ್ಕೆ ಶುರುವಾಯ್ತು. ಮಕ್ಕಳ ಪರೀಕ್ಷೆಗಳು ಮುಗಿದು, ರಜ ಶುರುವಾದಕೂಡಲೇ ೪-೫ ದಿನದ ಮಟ್ಟಿಗೆ ಊರಿಗೆ ಹೊರಟೆವು. ಎರಡನೇ ದಿನವೇ ನಮ್ಮ ಪ್ಲಾನ್ ಪ್ರಕಾರ ಸಾಲೆತ್ತೂರಿಗೆ ಪ್ರಯಾಣ..  ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಡುತ್ತ ದಾರಿ ಸಾಗುತಿತ್ತು. ಮಂಚಿ, ಕುಕ್ಕಾಜೆ ದಾಟಿ ಸಾಲೆತ್ತೂರಿನ ಮೈದಾನವೂ ಬಂತು. ಅಲ್ಲಿಂದ ಕೆಳಗೆ ಇಳಿದರೆ ನಾವಿದ್ದ ರೋಡು. ಎಲ್ಲವೂ ಬದಲಾಗಿದೆ. ಒಂದರದ್ದೂ ಗುರುತು ಸಹ ಸಿಗುತ್ತಿಲ್ಲ. ಬ್ಯಾಂಕ್ ಕಟ್ಟಡವೂ ಬೇರೆಯಾಗಿದೆ. ನಾವಿದ್ದ ಮನೆಯ ಜಾಗದಲ್ಲಿ ಎರಡು ಮಹಡಿಗಳ ತಾರಸಿ ಮನೆ. ಶಾಲೆಯ ಹತ್ತಿರ ಹೋದರೆ ಚಿಕ್ಕದಾಗಿದ್ದ ನಮ್ಮ ಶಾಲೆ ಈಗ ತುಂಬ ದೊಡ್ಡದಾಗಿ ಚಂದದ ತೋಟ ಎಲ್ಲವೂ ಇತ್ತು.. ಆದರೆ ನಮ್ಮ ನೆನಪಿನ ಗುರುತುಗಳು ಒಂದೂ ಇಲ್ಲದೆ ಬಹಳ ಬೇಜಾರಾಯ್ತು. ಸರಿ … ರತ್ನಾಕರನೂ ಬದಲಾಗಿರಬಹುದು ಅನಿಸಿತು. ಹಾಗೆ ಪುನಹ ನಾವಿದ್ದ ಮನೆಯ ಹತ್ತಿರ ಬಂದು ರತ್ನಾಕರನ ಮನೆಯ ಹತ್ತಿರ ಕಾರು ನಿಲ್ಲಿಸಿದ ಕೂಡಲೇ ಅಲ್ಲಿಯೇ ಇದ್ದ ವಯಸ್ಸಾಗಿದ್ದ ಗಂಡಸು ಕಣ್ಣಿಗೆ ಕೈ ಅಡ್ಡ ಇಟ್ಟು ಯಾರು….. ? ಅನ್ನುವ ಹಾಗೆ ನಮ್ಮನ್ನು ನೋಡುತ್ತಾ ನಿಂತರು. ನಮ್ಮ ಗುರುತು ಹೇಳಿದ ಕೂಡಲೆ ಅವರಿಗಾದ ಸಂತಸ ಅವರ ಮುಖದಲ್ಲಿ ಕಂಡು .. ಇವರಾದರೂ ಹಾಗೇ ಇದ್ದಾರಲ್ಲ.. ಎಂದು ಮನಸ್ಸಿಗೆ ಹಾಯೆನಿಸಿತು. ಅವರು ರತ್ನಾಕರನ ಅಪ್ಪ. ಸಂಭ್ರಮದಿಂದ ಅವರ ಹೆಂಡತಿಯನ್ನು ಕರೆದರು.. ಅವರಿಗೂ ಸ್ವಲ್ಪ ವಯಸ್ಸಾಗಿತ್ತು. ನಮ್ಮನ್ನೆಲ್ಲ ನೋಡಿ ಅವರಿಗೆ ಖುಷಿಯೊ ಖುಷಿ. ಅಮ್ಮ ಹೋದರೆಂದು ಕೇಳಿ ತುಂಬಾ ದುಃಖ ಪಟ್ಟರು. ರತ್ನಾಕರನ ಬಗ್ಗೆ ವಿಚಾರಿಸಿದಾಗ ಅವನು ವಿಶ್ವಕರ್ಮ ಬ್ಯಾಂಕ್ ನಲ್ಲಿ ಕೆಲಸ ಮಾಡುತಿದ್ದಾನೆ ಎಂದು ಕೇಳಿ ನಮಗೂ ಖುಷಿ ಆಯ್ತು. ಅವನಿಗೆ ಒಳ್ಳೆಯ ಹೆಂಡತಿ ಮತ್ತು ಮುದ್ದಾದ 2 ಮಕ್ಕಳು. ಮನಸ್ಸಿಗೆ ನೆಮ್ಮದಿ ಅನಿಸಿತು. ಹಾಗೆ ಹೀಗೆ ಮಾತಾಡಿ, ಅವರು ಪ್ರೀತಿಯಿಂದ ಕೊಟ್ಟಿದನ್ನು ತಿಂದು ಹೊರಟೆವು. ಅರ್ಧ ದಾರಿಗೆ ಬಂದ ಮೇಲೆ ನೆನಪು….. ಛೆ!!!!!! ಅವನ ಫೋನ್ ನಂಬರ್ ಆದ್ರೂ ಕೇಳಬೇಕಿತ್ತಲ್ಲ… ಅಥವ ನಮ್ಮ ನಂಬರ್ ಆದ್ರೂ ಕೊಟ್ಟು ಬರಬೇಕಿತ್ತು. ನನ್ನ ತಲೆ ಎಲ್ಲಿ ಬಾಡಿಗೆಗೆ ಕೊಟ್ಟಿದ್ದೆನೋ ಇನ್ನೂ ನೆನಪಿಗೆ ಬರುತ್ತಿಲ್ಲ.

ಲಲಿತ ಪ್ರಬಂಧ Read Post »

ಇತರೆ

ಲೀಲಾ ಕಲಕೋಟಿ ಎರಡು ಬರಹಗಳು

ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ ಕುಂತು ಕಣ್ಣುಗಳಿಂದ ಮಾತಿಗಿಳಿದಿದ್ದೆ …..! ಸುಮ್ಮನೆ ಏಳು ಸುತ್ತಿನ ಸುರಳಿಯಬಿಚ್ಚುತ ಮೆಲ್ಲನೆಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ….?ಹಸಿರೆಲೆ ರಾಶಿಯಲಿಹುದುಗಿದಿ ಕಡೆದಬೆಣ್ಣೆಯಂತೆ….ಮುದ್ದಾಗಿ ಎದ್ದವಳೇಕುಂತೀಯಾಕ ಸುಮ್ಮನೆ?ಓ….! ನನ್ನ ಮಲ್ಲಿಗೆ…?ಬೀಗುತ ಬಿಮ್ಮನೆಘಮ್ಮಂತ ಸೂಸುತಕಂಪನು ಹರಡುತಸೊಂಪಾಗಿ,ಗುಂಪಾಗಿಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ……?ಬೀಸುವ ತಂಗಾಳಿಗೆಕುಲಕುತ ಬಳಕುತಮುದನೀಡಿ ಮನಕೆಮಂದಗಮನಿಯಂತೆಕುಂತೀಯಾಕ ಸುಮ್ಮನೆ?ಓ….!ನನ್ನ ಮಲ್ಲಿಗೆ….? ****************************

ಲೀಲಾ ಕಲಕೋಟಿ ಎರಡು ಬರಹಗಳು Read Post »

You cannot copy content of this page