ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಬಸವಣ್ಣನಿಗೊಂದು ಪತ್ರ

ಲೇಖನ ನೂತನ ದೋಶೆಟ್ಟಿ ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆಇವನಾರವ ಇವನಾರವ ಎನ್ನದಿರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು ಚೂರಾಗಿದ್ದ ನಮ್ಮ ಅಂದಿನ ಸಮಾಜಕ್ಕೆ ದಾರಿದೀವಿಗೆಯಾಗಿ ಬಂದು ಮೇಲು ಕೀಳೆಂಬುದನ್ನು ಧಿಕ್ಕರಿಸಿ ಕಾಯಕ ಮಂತ್ರದೀಕ್ಷೆ ಮಾಡಿದೆ. ಕಾಯಕವೇ ಧರ್ಮ ಎಂದು ಪ್ರತಿಪಾದಿಸುತ್ತಲೇ ಅಂದಿನ ಧಾರ್ಮಿಕತೆಗೆ ದಯವಿಲ್ಲದಾ ಧರ್ಮ ಅದೇವುದಯ್ಯಾ ?ಎಂದು ಪ್ರಶ್ನಿಸಿದೆ.ಇದು ಕೇವಲ ಪ್ರಶ್ನೆಯಾಗಿರದೆ ಸಹಸ್ರಾರು ಹಿಂದುಳಿದವರ, ಬಡಬಗ್ಗರ, ತುಳಿತಕ್ಕೆ ಒಳಗಾದವರ, ಶೋಷಿತರ, ದುರ್ಬಲ ವರ್ಗದವರ ಮನೋಬಲವನ್ನು ವೃದ್ಧಿಸಿ ಇತರರಂತೆ ತಾವೂ ಮನುಷ್ಯರು. ತಮಗೂ ಅವರಂತೆ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳುವ ಧೈರ್ಯದ್ರವ್ಯವಾಯಿತು.ಅಂತಹ ಧೈರ್ಯವನ್ನು ಜನಸಾಮಾನ್ಯರಲ್ಲಿ ತುಂಬುವ ಮೊಟ್ಟಮೊದಲ ಪ್ರಯತ್ನ ನಿನ್ನಿಂದ ನಡೆಯಿತು.ನೀನು ಅವರೆಲ್ಲರ ಆರಾಧ್ಯಧೈವವಾದೆ. ನಿನ್ನ ಕಾಯಕ ನಿನ್ನನ್ನು ಆ ಎತ್ತರಕ್ಕೆ ಏರಿಸಿತು.ಆನಂತರ ನಡೆದದ್ದೆಲ್ಲ ಕ್ರಾಂತಿಯೇ.ಹೀಗಿದ್ದ ನೀನು ,ನಿನ್ನ ಜೀವಿತಕಾಲದಲ್ಲೇ ಆರಂಭಿಸಿದ ಸಾಮಾಜಿಕ ಚಳವಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಯಿತು. ಪ್ರಬಲರು ದುರ್ಬಲರೊಂದಿಗೆತಮ್ಮನ್ನು ಗುರುತಿಸಿಕೊಳ್ಳಲು,ಅವರಿಗೆ ಸಮಾನ ಸ್ಥಾನ-ಮಾನಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿದರು.ಈ ಪ್ರತಿರೋಧದ ಜ್ವಾಲೆ ನಿನ್ನನ್ನೂ ಸೇರಿಸಿದಂತೆ ನಿನ್ನ ಆದರ್ಶ ಸಮಾಜದ ಕನಸನ್ನೂ ಆಹುತಿ ತೆಗೆದುಕೊಂಡಿತು.ಅದೂ ಮತ್ತೊಂದು ರೀತಿಯ ಕ್ರಾಂತಿಯೇ.ಆನಂತರ ಮತ್ತೊಮ್ಮೆ ನೀನು ಆರಾಧ್ಯದೈವವಾದೆ.ಅಂದು ನೀನು ಬೆಳೆಸಿದ ನಿನ್ನ ಮಕ್ಕಳು ದಾಯಾದಿಗಳಾಗಿ ಹೊಡೆದಾಡುತ್ತಿದ್ದಾರೆ.ಅವರು ಏಕೆ ಹೊಡೆದಾಡುತ್ತಿದ್ದಾರೆ ಎಂದು ನನ್ನಂಥ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಅದು ನನ್ನಂಥ ಸಾಮಾನ್ಯರಿಗೆ ಸಂಬಂಧಿಸಿದ್ದೂ ಅಲ್ಲ. ಅದೇನಿದ್ದರೂ ರಾಜಕಾರಣಿಗಳಿಗೆ, ಧರ್ಮದ ಮುಂದಾಳುಗಳಿಗೆ ಸಂಬಂಧಿಸಿದ್ದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಇವರಿಬ್ಬರ ನಡುವೆ ನೀನು ಹೇಗೆ ಮತ್ತು ಏಕೆ ಸಿಲುಕಿದೆ ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಿನ್ನನ್ನು ದೈವವಾಗಿ ಆರಾಧಿಸಬೇಕೆಂದು ನೀನೇನು ಅವರನ್ನು ಬೇಡಿಕೊಂಡಿದ್ದಿಲ್ಲ. ಅಥವಾ ನಿನ್ನನ್ನೇ ಆರಾಧಿಸಬೇಕೆಂದೂ, ಅವರು ನಿನ್ನ ನಂತರ ತಾವೇ ಒಪ್ಪಿಕೊಂಡು ಮುನ್ನಡೆಸಿದ ಧರ್ಮದ ಮೊದಲಿಗನೆಂದೂ ಹೇಳಿರಲಿಲ್ಲ. ಇದೆಲ್ಲ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಅವಶ್ಯಕತೆಯಾಗಿತ್ತು.ಅದಕ್ಕೆ ನಿಮಿತ್ತವಾಗಿ ಬಂದ ನೀನು ಎಲ್ಲರನ್ನೂ ಒಂದಾಗಿಸಿ, ಮುನ್ನಡೆಸಲು ಹರಸಾಹಸ ಮಾಡಿ ಒಂದು ಹಂತದಲ್ಲಿ ಯಶಸ್ವಿಯಾದೆ. ಇದನ್ನು ಸಹಿಸದ ಜನ ಅಂದೂ ಇದ್ದರು ತಾನೆ?ಈ ನೋವು ನಿನ್ನನ್ನು ಅವರೆಲ್ಲರಿಂದ ದೂರ ಸರಿಯುವಂತೆ ಮಾಡಿತೋ ಅಥವಾ ಅವರೇ ನಿನ್ನನ್ನು ಕಾಣದ ಲೋಕಕ್ಕೆ ಕಳಿಸಿದರೋ ಆ ಕೂಡಲಸಂಗನಿಗೆ ಮಾತ್ರ ಗೊತ್ತು. ಅಣ್ಣಾ, ವಿದ್ಯೆಯಿರದ ಆ ಕಾಲದ ಜನರಲ್ಲಿ ಅರಿವು ಮೂಡಿಸಲು ನೀನು ಪಡಬಾರದ ಪಾಡು ಪಟ್ಟೆ.ಎಲ್ಲರ ವಿರೋಧದ ನಡುವೆ ಏಕಾಂಗಿಯಾದರೂ ಅಚಲನಾಗಿ ನಿಂತೆ.ಕಮ್ಮಾರ, ಕುಂಬಾರ ಮೊದಲಾದ ಕಾಯಕದವರ ಬಾಳು ಭಂಡವಲ್ಲ. ಕಾಯಕವೇ ಕೈಲಾಸ ಎಂದು ಸಾರಿ ಮೊಟ್ಟಮೊದಲ ಬಾರಿಗೆ, ‘ ಡಿಗ್ನಿಟಿ ಆಫ್ ಲೇಬರ್’ – ಶ್ರಮಜೀವಿಗಳಿಗೆ ಗೌರವ ಸಲ್ಲಲೇಬೇಕಾದ ಹಕ್ಕಿನ ಪ್ರತಿಪಾದನೆ ಮಾಡಿದೆ. ಅದಾಗಲೇಇಂತಹ ಅನೇಕಾನೇಕ ಕಾಯಕಗಳು ಜಾತಿಗಳಾಗಿ ಪರಿಗಣಿತವಾಗಿದ್ದವು. ಆ ಜಾತಿಗಳು, ಅವರ ಅನಿವಾರ್ಯತೆ ಹಾಗೂ ಅವರ ಬಡತನ, ಅಂದಿನ ಮೇಲ್ವರ್ಗದ ಸಮಾಜಕ್ಕೆ ಆಳುವ ವರ್ಗಕ್ಕೆ ಬೇಕಾಗಿತ್ತು.ಅವರು ಸಂಘರ್ಷಕ್ಕೆ ಇಳಿದಾಗ ಅವರೆದುರು ನಿನ್ನ ಹೋರಾಟ ನಿನ್ನ ಜೀವಿತಕಾಲದಲ್ಲಿ ಸಫಲವಾಗಲಿಲ್ಲ. ಇದೆಲ್ಲ ನಡೆದು ಈಗ ೯ ಶತಮಾನಗಳೇ ಕಳೆದಿವೆ. ಆದರೂ ಕಾಲ ಮುನ್ನಡೆಯದೆ ನಿಂತಲ್ಲೇ ನಿಂತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿಗೆ ಇವೆ.ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ. ಅಯ್ಯಾಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಕಕ್ಕುಲಾತಿಯಿಂದ ಕಲಿಸಿದ ನಿನ್ನನ್ನೇ ಎಲವೋ ಎನ್ನುವುದಕಿಂತ ವಿಪರ್ಯಾಸ ಬೇಕೆ? ನನ್ನಂಥ ಸಾಮಾನ್ಯರಿಗೆ ದಾರಿ ತೋರುವ ಗುರುವ ಎಲ್ಲಿ ಹುಡುಕಲಿ ?ಈಗ ನೀನೊಂದು ‘ಬ್ರ್ಯಾಂಡ್’ ಆಗಿದ್ದೀಯಾ ಬಲ್ಲೆಯಾ ?ನಿನ್ನ ವಚನಗಳನ್ನು ತಮಗೆ ಬೇಕಾದಂತೆ, ತಮಗೆ ಬೇಕಾದಲ್ಲಿ ಉದ್ಧರಿಸಿ ಚಪ್ಪಾಳೆ ಗಿಟ್ಟಿಸುವ ನಾಯಕರು ಹೆಚ್ಚುತ್ತಿದ್ದಾರೆ. ನಿನ್ನ ಮೂರ್ತಿಗಳು ಎಲ್ಲೆಡೆ ಪ್ರತಿಷ್ಠಾಪನೆಯಾಗುತ್ತಿವೆ. ಕಡಲಾಚೆಯೂ ನೀನು ಪ್ರಸಿದ್ಧ. ರಾಜಕೀಯ ಹವಣಿಕೆಗಳಿಗೆ ನೀನು ದಾಳವಾಗಿದ್ದು ಮಾತ್ರ ನನಗೆ ಸಂಕಟವುಂಟು ಮಾಡುತ್ತದೆ ಏಕೆಂದರೆ ನೀನು ನಿನ್ನ ಕಾಲದಲ್ಲೂ ರಾಜಕೀಯದಾಟಕ್ಕೆ ದಾಳವಾಗಿದ್ದಿ. ನೀನಾಗಲೀ, ನಿನ್ನ ವಚನಗಳಾಗಲೀ ಧರ್ಮದ ಸೋಂಕಿರದ ಜೀವನಕ್ರಮ, ಸ್ವಾಸ್ಥ್ಯ ಆದರ್ಶ ಸಮಾಜದ ಬೆನ್ನೆಲುಬು ಮತ್ತು ಒಂದು ಅನನ್ಯ ಸಂಸ್ಕೃತಿ ಎಂದು ನನ್ನಂಥ ಸಹಸ್ರಾರು ಸಾಮಾನ್ಯರು ನಂಬಿಕೊಂಡು ಅದನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ. ಅಂತಹದರಲ್ಲಿ ನಮ್ಮ ಬದುಕನ್ನೇ ದಿಕ್ಕೆಡಿಸುತ್ತಿರುವ ವಿದ್ಯಾವಂತ, ಬುದ್ಧಿವಂತ, ಸುಶಿಕ್ಷಿತ ಎಂದು ಕರೆದುಕೊಳ್ಳುವ ಗುಂಪುಗಾರಿಕೆಯ ಜನರಿಗೆ ನನ್ನಂಥವರ ಧಿಕ್ಕಾರವಿದೆ.ಅಣ್ಣಾ, ಅಂಗೈಯಲ್ಲಿ ದೈವತ್ವವನ್ನು ಕಾಣಿಸಿದ ನಿನ್ನ ಉದಾರತೆ, ಹಿರಿತನ ಇಂಥವರಿಗೆ ಅಂದೂ ಅರ್ಥವಾಗಿರಲಿಲ್ಲ. ಈ ಲಾಭಕೋರ ಢೋಂಗಿಗಳ ನಡುವೆ ನೀನು ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವೆ?

ಬಸವಣ್ಣನಿಗೊಂದು ಪತ್ರ Read Post »

ಇತರೆ

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ನಾಗರೇಖಾ ಗಾಂವಕರ್ ಬರವಣಿಗೆ ಎಂಬುದು ಒಂದು ತುರ್ತಾಗಿ ಬದಲಾಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು ನನ್ನಲ್ಲಿ. ಆದರೆ ಮೊದಲ ಕವಿತೆ ಬರೆದ ಕ್ಷಣದ ಅನುಭವ ಹೇಗೇ ಹೇಳಲಿ? ಬಹುಶಃ ಇದಕ್ಕೆ ಅಭಿಪ್ರಾಯ ವ್ಯಕ್ತ ಪಡಿಸುವುದು ಕಷ್ಟದ ಕೆಲಸ. ಹೌದು ನಾನೂ ಕೂಡ ಆ ಕವಿತೆ ಬರೆದೆ. ಅದು ನನ್ನ ಜೀವನದ ಮೊದಲ ಕವಿತೆ. ಕವನದ ಶೀರ್ಷಿಕೆ ವಿಶ್ವಕರ್ತನ ಗುಡಿ. ನನ್ನ ಇಪ್ಪತ್ತೆರಡನೇ ವಯಸ್ಸಿಗೆ ಬರೆದ ಕವಿತೆ. ಅದಕ್ಕೂ ಮುಂಚೆ ನಾನೊಂದು ಓದುವ ಹುಳವಾಗಿದ್ದೆ. ಕಾಲೇಜಿನ ಅಭ್ಯಾಸಗಳ ಜೊತೆ ಕಾಲೇಜಿನ ಗ್ರಂಥಾಲಯಗಳಲ್ಲಿ ಸಿಗುವ ಬಹುತೇಕ ಪ್ರೇಮ ಕಾದಂಬರಿಗಳು, ವಾರಕ್ಕೊಂದಾವರ್ತಿ ಬದಲಾಯಿಸುತ್ತಾ, ಪಾಠ ಪ್ರವಚನದ ಕಾಲದಲ್ಲಿ ಪಠ್ಯದ ಪುಸ್ತಕದ ಒಳಗೆ ಬೆಚ್ಚಗೆ  ಕಾದಂಬರಿಗಳು ಕೂತಿರುತ್ತಿದ್ದ್ದ್ತವು. ತಲೆ ಒಮ್ಮೆ ಪ್ರಾದ್ಯಾಪಕರ ಉಪನ್ಯಾಸದ ಕಡೆ ನೋಡುವಂತೆ ಮೇಲೆತ್ತಿದರೆ, ಇನ್ನೆರಡು ಪಟ್ಟು ಹೆಚ್ಚು ವೇಳೆ ಕೆಳಗೆ ಕೂತಿದ್ದ ಕಾದಂಬರಿಯ ಪಾತ್ರಗಳಲ್ಲಿ ಮುಳುಗಿರುತ್ತಿತ್ತು. ಅಷ್ಟಕ್ಕೂ ಕಲಾ ವಿಭಾಗದ ನಮಗೆ ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಕಾಲೇಜು ಕ್ಲಾಸುಗಳ ಬಂಕ್ ಮಾಡಿ ಮನೆಯಲ್ಲಿ ಮನೆಗೆಲಸ ಮಾಡಿ, ಓದಿದರೂ ಪ್ರಥಮ ದರ್ಜೆಗೇನೂ ಕೊರತೆ ಆಗುತ್ತಿರಲಿಲ್ಲ. ಇಂತಿಪ್ಪ ದಿನಗಳಲ್ಲಿಯೇ ಅದೆಷ್ಟೋ ಸಾಯಿಸುತೆ, ಉಷಾ ನವರತ್ನರಾವ್, ಯಂಡಮೂರಿ ಇತ್ಯಾದಿ ಇತ್ಯಾದಿ ಲೇಖಕರ ಲೌಕಿಕ ಕಾದಂಬರಿಗಳ ಓದಿ ಮುಗಿಸಿದ್ದೆ. ಇದಕ್ಕೂ ಮುಂಚೆ ಹೈಸ್ಕೂಲು ಕಲಿಯುವಾಗ ಹಳ್ಳಿಯಿಂದ ಹೋಗಿ ಬರುವುದು ಕಷ್ಟವೆಂದು ಬಾಡಿಗೆ ಮನೆಯೊಂದರಲ್ಲಿ ನಾವು ಅಣ್ಣ ಅಕ್ಕ ತಂಗಿ  ಎಲ್ಲರೂ ಸೇರಿ ಒಟ್ಟಿಗೆ  ಬಾಡಿಗೆ ಮನೆಯೊಂದರಲ್ಲಿ  ಇರುತ್ತಿದ್ದೆವು. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಉಳಿದವರ ಪರೀಕ್ಷೆಯೆಲ್ಲ ಮುಗಿದು ಮನೆಗೆ ಹೋಗಿದ್ದರೆ, ನಾನು ಒಬ್ಬಳೇ ಬಾಡಿಗೆ ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಉಣ್ಣುತ್ತಾ  ಪರೀಕ್ಷೆ ಬರೆಯುತ್ತಿದ್ದೆ. ಅದು ಗಣಿತ ಪರೀಕ್ಷೆಯ ಹಿಂದಿನ ದಿನ. ಓದುತ್ತಾ ಕೂತವಳಿಗೆ ಅಕ್ಕ ತಂದಿಟ್ಟಿದ್ದ ಕಾದಂಬರಿಯೊಂದು ಕಣ್ಣಿಗೆ ಬಿದ್ದಿತ್ತು. ಅದು ತ.ರಾ.ಸು ಅವರ ಚಂದವಳ್ಳಿಯ ತೋಟ ಮಾರನೇ ದಿನ ಗಣಿತ ಪರೀಕ್ಷೆ.  ಕಣ್ಣಿಗೆ ಕಂಡ ಕಾದಂಬರಿಯನ್ನು ಬಿಡಲು ಮನಸ್ಸಾಗದೇ ಲೆಕ್ಕ ಬಿಡಿಸುವುದು ಅರ್ಧಮರ್ಧ ಮಾಡಿ ಕಾದಂಬರಿ ಹಿಡಿದವಳು ಹನ್ನೆರಡುವರೆಗೆ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಮಾರನೇ ದಿನ ಮತ್ತೆ ಪರೀಕ್ಷೆ ಬರೆದಿದ್ದೆ. 45 ಅಂಕಗಳಷ್ಟೇ ಗಣಿತಕ್ಕೆ ಪಡೆದಿದ್ದೆ. ಇದೆಲ್ಲ ನೆನಪಾಗುತ್ತಲೂ ಮೊದಲ ಕವಿತೆಯ ಸುಖ ಎಂತದ್ದೆಂದೂ ಹೇಳಲೇ ಬೇಕು. ಅದೆಂತಹುದೋ ಅಳಕು, ಮೊದಮೊದಲು ಬರೆದ ಅರೆಬರೆ ಅರೆಬೆಂದ ಕವಿತೆಗಳ ಮೇಲೆ ಕೆಳಗೆ ನೋಡಿ, ಶಬ್ದಗಳ ಚೌಕಟ್ಟು ಸರಿಯಾಗಿದೆಯೇ?ಎಂಬೆಲ್ಲ ಚಿಂತೆಗಳು. ಈ ಕವಿತೆ ಬರೆಯಲು ಪ್ರೇರಣೆ ಒಂದು ಬೇಕೆ ಬೇಕು. ಆಗ ತಾನೇ ಪದವಿ ಹಂತದಲ್ಲಿದ್ದೆ. ಗೆಳತಿಯೊಬ್ಬಳ ಪ್ರೇಮ ಕವಿತೆ ಕಾಲೇಜಿನ ಲಿಟರೇಚರ್ ಬುಲೆಟಿನ್ನಲ್ಲಿ ರಾರಾಜಿಸುತ್ತಿತ್ತು. ಎಲ್ಲರ ಬಾಯಲ್ಲಿಯೂ ಅದೇ ವಿಷಯ. ಎಷ್ಟು ಚೆನ್ನಾಗಿದೆ? ಹಾಗಿದೆ.., ಹೀಗಿದೆ.. ಮನೆಗೆ ಹೋದವಳೆ ನಾನೂ ಒಂದು ಬರೆದರೆ ಹೇಗೆ ?ಎಂಬ ಹುಕಿ ಹುಟ್ಟಿದ್ದೆ ತಡ, ಬರೆದೆ ಬರೆದೆ. ಅದನ್ನು ಯಾರಾದರೂ  ಓದಿದರೆ ನಕ್ಕಾರು, ಅನ್ನಿಸಿ ಬರೆದಷ್ಟನ್ನು  ಮತ್ತೆ ಮತ್ತೆ ಹರಿದು ಎಸೆದೆ. ನನಗೇ ನಗು ಬಂದಿತ್ತು. ಪ್ರೀತಿ ಪ್ರೇಮ ಇಂತಹ ನಾಜೂಕಿನ ವಿಷಯವನ್ನೆಲ್ಲಾ  ಶಬ್ದಗಳಲ್ಲಿ ಮುದ್ಧಾಗಿ ಮೂಡಿಸುವ ಗಟ್ಟಿತನ ಹೇಗೆ ಬರುವುದು  ಎಂಬ ಅಚ್ಚರಿ. ಬೇಡ ಬಿಡು, ಮನೆಯಲ್ಲಿ ನನ್ನ ಅಣ್ಣಂದಿರೇನಾದರೂ ನನ್ನ ಕವಿತೆ ಓದಿದರೆ ಕಥೆ ಮುಗಿಯಿತು. ಇದರ ಗೋಜು ಬೇಡವೇ ಬೇಡವೆಂದು ನಿರ್ಧರಿಸಿದೆ. ಆದರೆ ಇದು ಒಂದು ಖಯಾಲಿ. ಒಳಗಣ ತುಡಿತ, ನನ್ನೊಳಗಿನ ತೆರೆದುಕೊಳ್ಳುವ ಹಂಬಲ. ಅದೆಷ್ಟೋ ಕನಸುಗಳು ನನಸಾಗದ ನೆಲೆಯಲ್ಲಿ ಮನದ ಮೂಲೆಯಲ್ಲಿ ಮಿಡುಕಿದ ಭಾವಗಳು, ಮತ್ತೆ ಚಿಗುರಿದ ಕನಸುಗಳು, ವ್ಯಾಮೋಹದ ಪರದೆಯಲ್ಲಿ ಕಟ್ಟಿದ ಕಣ್ಣು, ಮತ್ತೆ ಬರೆದೆ. ಆದರೆ ಈಗ ಪ್ರೇಮ ಕವಿತೆ ಬರೆಯುವ ಪ್ರಮಾದ ಮಾಡಲಿಲ್ಲ. ನಾನು ಪ್ರಯತ್ನಿಸಿದ ಪ್ರೇಮ ಕವಿತೆಗಳು ಅಂತಹ ಉದ್ದಿಪನಗೊಳಿಸುವ ಪ್ರಭಾವ ಬೀರುವಂತಹುಗಳಾಗಿರಲಿಲ್ಲ. ಹಾಗಾಗಿ ದೇವರ ಅಸ್ತಿತ್ವದ ಕುರಿತ ಒಂದು ಕವಿತೆ ಬರೆದೆ. ಆಗ ನಾನು ಎಳಸಲ್ಲ. ಬೆಳೆದ ಮನಸ್ಸು. ಭಯದ ನೆರಳಿರಲಿಲ್ಲ. ಆದರೆ ನನ್ನ ಪ್ರಾಥಮಿಕ ಶಾಲಾದಿನಗಳ ಹಂತದಲ್ಲಿ ನನಗೆ ಕಲಿಸಿದ ಗುರುಗಳಾದ ಕವಿ ಶಾಂತಾರಾಮ ಬಾಳೆಗುಳಿಯವರ ಪ್ರಭಾವವಿತ್ತು. ಹಾಗೆಂದು ನಾನವರ ನೆಚ್ಚಿನ ಶಿಷ್ಯೆಯಾಗಿರಲಿಲ್ಲ. ಎಲ್ಲರಿಂದ ಕೊಂಚದೂರವಾಗಿಯೇ ಉಳಿಯುವ ಜಾಯಮಾನ ನನ್ನದು. ಅವಕಾಶಕ್ಕಾಗಿಯೋ, ಇನ್ನೊಬ್ಬರ ಆದರಕ್ಕಾಗಿ ಹಂಬಲಿಸುವ ಗುಣವೇ ಇಲ್ಲ. ಹಾಗೇ ಗುರುಗಳ ಆತ್ಮೀಯತೆಯನ್ನು ಗಳಿಸಿಕೊಂಡಿರಲಿಲ್ಲ.ನನ್ನ ಬರೆಯುವ ಆಸೆಯನ್ನು ಅವರೆಲ್ಲೆಂದು ತೋಡಿಕೊಂಡಿರಲೇ ಇಲ್ಲ. ಕಾಲೇಜು ದಿನಗಳು ಮುಗಿದು,ನೌಕರಿಯ ಹುಡುಕಾಟದಲ್ಲಿದ್ದ ಕಾಲದಲ್ಲಿ ನಾನು ಬರೆದ ಮೊದಲ ಕವಿತೆ. ವಿಶ್ವಕರ್ತನ ಗುಡಿ ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೇ ಅಲ್ಲಿ ಬಂಧೀ ವಿಶ್ವಕರ್ತನ ತಂದು ಗುಡಿಯ ಬಂಧನವಿಟ್ಟು, ಮೆರೆದ ಮೌಢ್ಯವು ಮನುಜ ಬುದ್ಧಿ. ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೇ ಬೇಕೆ ಒಂದು ಮನೆಯು ಜೀವಜೀವದ ಒಳಗೆ ಹುದುಗಿರುವ ಆತ್ಮನವ ಭಾವಿಸಲು ಸರ್ವರೂ ಅವನ ಕುಡಿಯು.                                     ಹೀಗೇ ಸಾಗಿತ್ತು ಕವಿತೆ. ಇದೇ ಸಮಯಕ್ಕೆ ಕೆಲಸವೂ ದೊರಕಿ ಖುಷಿಯಾಗಿದ್ದೆ. ಸಿನೇಮಾ, ಮಾರ್ಕೆಟ್ಟು ತಿರುಗುವುದು ಕೊಂಚ ಜಾಸ್ತಿಯಾಗಿತ್ತು. ಮನೆಯಲ್ಲಿ ವಿವಾಹದ ತಯಾರಿಯೂ ನಡೆಯುತ್ತಿತ್ತು. ಸುತ್ತ ಸಮಾನ ಮನಸ್ಕ  ಸ್ನೇಹವಲಯವೂ ಇತ್ತು.  ಸ್ನೇಹ ಪ್ರೇಮದ  ಪರಧಿಯಲ್ಲಿ ಆ  ಭಾವವೊಂದು ನನ್ನ ಎದೆಯಲ್ಲಿ ಮೀಟುತಿತ್ತು. ಇನ್ನೊಂದು ಕವಿತೆ ಬರೆದಿದ್ದೆ. ಅದೊಂದು ಸ್ನೇಹ ಮತ್ತು ಪ್ರೇಮದ  ಬಗ್ಗೆ ಬರೆದ ಕವಿತೆ. ಶೀರ್ಷಿಕೆ ಗೆಳತಿ ಅದನ್ನು ಗಂಡುದನಿಯಾಗಿ ಬಳಸಿದ್ದೆ. ಗೆಳೆಯ ಎಂದರೆ ಯಾರಾದರೂ ನನ್ನ ಬಗ್ಗೆ ತಪ್ಪು ತಿಳಿದಾರು ಎಂಬ ಭಯ. ಹಾಗಾಗಿ ಗೆಳೆಯ ಇರಬೇಕಾದಲ್ಲಿ ಗೆಳತಿ ಬಂದಿದ್ದಳು. ಏಕೆ ಗೆಳತಿ, ಮನ ಬಾಗಿಲವರೆಗೂ ಬಂದು ತಟ್ಟಿ ಕರೆಯಲಿಲ್ಲ. ನಿನ್ನ ಭಾವನೆಗಳೇಕೆ ನನ್ನವರೆಗೂ ಮುಟ್ಟಲೇ ಇಲ್ಲ. ನನಗೂ ಇತ್ತಲ್ಲ ಆಸೆ ನಿನ್ನಂತೆ.. ಗೆಳತಿಯಾಗಿ ಬಂದವಳು ಪ್ರೇಮಿಯಾಗಿ ಬರಲೆಂದು ಜೀವನಕೆ ಜೊತೆಯಾಗಲೆಂದು.. ಅದಕ್ಕೇಕೆ ತಣ್ಣಿರನ್ನೆರಚಿದೆ? ಕಡೇತನಕ ಬಗೆಗೂಡು ಹೊಗೆ ಗೂಡಾಗಲೆಂದೇ? ಬಣ್ಣದ ಚಿತ್ತಾರ ಬಿಡಿಸ ಹೊರಟಾಗ ಕಪ್ಪು ಮಸಿ ಚೆಲ್ಲಿ ಕಲೆಯಾಯಿತೇ? ವ್ಯಥೆ ಬೇಡ ಗೆಳತಿ,  ನವ್ಯ ಕಲೆಯ ರೀತಿ ಗೆರೆ ಎಳೆದು ಚಿತ್ರವಾಗಿಸುವೆ. ಹೊಗೆಗೂಡ ಕಿಂಡಿಯನು  ತೆರೆದುಬಿಡು. ಶುದ್ಧವಾತ ಹರಿದು ಬರಲಿ. ಪ್ರೇಮವಿರದಿರೆ ಸ್ನೇಹವಾದರೂ ಇರಲಿ ಈ ಪರಿ.. ಸ್ವಾರ್ಥದ ನೆರಳಿಲ್ಲ ಏಕತಾನತೆಯ ಕೊರಗಿಲ್ಲ ವಿಳಂಬ ಬೇಡ ಗೆಳತಿ ಈಗಲಾದರೂ ಪ್ರೇಮಸೌಧದ ತಳಪಾಯದ ಮೇಲೆ ಕಟ್ಟೋಣ ನಡಿ ಸ್ನೇಹ ಸೌಧ! ಆನಂತರವೇ ತಿಳಿದದ್ದು ಆ ಕವಿತೆ ಓದಿದ ಗೆಳತಿಯೊಬ್ಬಳು ಇಷ್ಟಪಟ್ಟಳು. ಉಳಿದವರಿಗೆ ತೋರಿಸಿ, ಚೆನ್ನಾಗಿದೆಯೆಂಬ ಬಿರುದು. ನನ್ನೊಂದಿಗೆ ಕೆಲಸ ಮಾಡುವ ಸ್ನೇಹಿತ ಸ್ನೇಹಿತೆಯರೆಲ್ಲ ಒಂದಲ್ಲ ಒಂದು ಕಾರಣಕ್ಕೆ ಸಾಹಿತ್ಯ ಸಂವಾದ ಬೇರೆ ಬೇರೆ ಲೇಖಕರ ಪುಸ್ತಕಗಳ ಚರ್ಚೆ ಇವುಗಳಲ್ಲಿ ಭಾಗವಹಿಸುತ್ತಿದ್ದರು. ನಾನು ಎಳಸು. ಒಂದೆರಡು ವರ್ಷದಲ್ಲಿ ಕೊಂಚ ಚಿಗುರಿದ್ದೆ. ಹತ್ತಾರು ಕವನಗಳ ಬರೆದೆ. ಆಪ್ತರಿಂದ ಪ್ರೋತ್ಸಾಹವೂ ದೊರೆಯುತ್ತಿತ್ತು. ಆದರೆ ಮತ್ತೆ ವಿವಾಹ ಬಂಧನ ನನ್ನ ಕವಿತಾ ಬರವಣಿಗೆಯನ್ನು ಕುಂಠಿತಗೊಳಿಸಿತು. ಸಾಂಸಾರಿಕ ಸುಖದಲ್ಲಿ ಮುಳುಗಿಹೋದೆ.  ಮನೆ ಗಂಡ ಮಕ್ಕಳು ಕೆಲಸ  ಇದಿಷ್ಟೇ ನನ್ನ ಪ್ರಪಂಚವಾಯ್ತು. ಹಾಗೇ ಕವಿತೆ ಬರೆಯುವುದು ನನ್ನಲ್ಲಿ ಆಗಾಗ ಪ್ರತ್ಯಕ್ಷವಾಗಿ ಮತ್ತೆ ಕೆಲವು ಕಾಲ ಕಾಲಗರ್ಭ ಸೇರಿದಂತೆ ಮರೆಯಾಗಿ ಹೋಗಿತು. ಆದರೆ ಭೂಮಿಯಲ್ಲಿ ಚಿಗುರುವ ಪ್ರತಿಯೊಂದು ಗಿಡ, ಮರ ಬಳ್ಳಿ, ಜೀವ ಸಂಕುಲ ಎಲ್ಲಕ್ಕೂ ಒಂದು ಮೊದಲ ಅನುಭವವಿದ್ದೆ ಇದೆ. ಬೀಜದೊಳಗಿನ ಸತ್ವ ಆಹಾರ ಪೂರೈಕೆ ಆಗುವವರೆಗೆ ಏನೂ ಗೊತ್ತಿಲ್ಲದ ಆಗಷ್ಟೇ ಚಿಗುರಿದ ಸಸಿ, ಆನಂತರ ತಾನೇ ಆಹಾರ ತಯಾರಿಸಿಕೊಳ್ಳುವ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಲೇ ಬೃಹದಾಕಾರವಾಗುತ್ತ ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೆಳೆಯುವುದು. ಜೀವ ಸಂಕುಲದ ಆದಿಮ ಜೀವಿಗಳಿಂದ ಹಿಡಿದು ಮಾನವನಂತಹ ಪ್ರಚಂಡ ಬುದ್ದಿಶಕ್ತಿಯ ಜೀವಿಯೂ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ತನ್ನದೇ ಆದ ಪ್ರಥಮ ಅನುಭವಕ್ಕೆ ಒಳಗಾಗುತ್ತಲೇ ಗಟ್ಟಿಗೊಳ್ಳುತ್ತಲೇ ಹೋಗುವುದು.ವಿಕಸನದ ಹಾದಿಯೇ ಹಾಗೇ? ಅವಸಾನದ ತುದಿಯಲ್ಲೂ  ಕೆಲವೊಮ್ಮೆ ಮತ್ತೇ ಉತ್ಕರ್ಷಕ್ಕೆ ಎಡೆಮಾಡಿಕೊಟ್ಟ ಉದಾಹರಣೆಗಳು ಹೇರಳ. ಹಾಗೇ ಭೂಮಿಯೊಳಗಣ ಎಂದೂ ಒಣಗದ ತೇವದಂತೆ ಕವಿತೆ ನನ್ನೊಳಗನ್ನು ತಡಕಾಡಿ, ತಿವಿದು, ಎಬ್ಬಿಸಿ,ಉದ್ದೀಪಿಸುತ್ತಲೇ ಇತ್ತು. ನನ್ನ ಅಪ್ರಬುದ್ಧ ಭಾವನೆಗಳು, ಬಂಡಾಯದ ಗುಣ, ಪ್ರಕೃತಿಯೊಂದಿಗಿನ ಪ್ರೀತಿ ಜೀವಂತವಾಗಿಯೇ ಇದ್ದವು. ಹಾಗಾಗಿ ಇತ್ತೀಚೆಗೆ   ನಡು ವಯಸ್ಸಿನಲ್ಲಿ ಅಕ್ಷರದ ಕೊಳದಲ್ಲಿ ನನ್ನ ಮುಖ ಕಾಣಬಹುದೇ ಎಂಬ ಆಸೆಯಿಂದ ಅದರಲ್ಲಿ ಇಣುಕಿ ಇಣುಕಿ ನೋಡುತ್ತಿದ್ದೇನೆ. ಈಗ ಮತ್ತೆ ವಿಸ್ಮಯವೆನ್ನುವಂತೆ ಮುಖ ಅಸ್ಪಷ್ಟವಾಗಿ ಕಾಣುತ್ತಿದೆ. ಹೂ ಹಣ್ಣು ನೀಡುವ ಹೆಮ್ಮರವಾಗುವುದೇ ಕಾದು ನೋಡಬೇಕಿದೆ ನನಗೆ.. ***********************

ಮೊದಲ ಕವಿತೆ Read Post »

ಇತರೆ

ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ

ಒಳನೋಟಿ ನಾಗರಾಜ ಹರಪನಹಳ್ಳಿ ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ ಎಂಬುದು ಕವಿ ಬಸವಣ್ಣನ ಪ್ರಸಿದ್ಧ ಸಾಲು. ಸಂಸ್ಕೃತ ಭೂಯಿಷ್ಟವಾಗಿದ್ದ ಕನ್ನಡ ಕಾವ್ಯ, ಅರಮನೆಗೆ,ಪಂಡಿತರಿಗೆ ಮೀಸಲಾಗಿದ್ದ ಕನ್ನಡ ಕಾವ್ಯವನ್ನು ಜನ ಸಾಮಾನ್ಯನ ನೋವು ನಲಿಗೆ, ಮನಸಿನ ಸೂಕ್ಷ್ಮತೆ ಮತ್ತು ಬದುಕಿಗೆ  ಒಗ್ಗಿಸಿದ್ದು ವಚನ ಸಾಹಿತ್ಯ. ಜನ ಸಾಮಾನ್ಯನ ಕುರಿತಾಗಿ ಅಷ್ಟೇ ಅಲ್ಲ, ಜನ ಸಾಮಾನ್ಯನೂ ಬರೆಯುವಂತೆ ಮಾಡಿದ ಕಾಲ ಅದು. 12ನೇ ಶತಮಾನದ 25 ವರ್ಷಗಳ ಕಾಲ ಕರ್ನಾಟಕವನ್ನು ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಹರಡಿಕೊಂಡಿದ್ದ ವಚನ ಚಳುವಳಿ ಅಕ್ಷರ ಚಳುವಳಿ ಸಹ ಹೌದು. ಸಾಮಾಜಿಕ ಸಮಾನತೆಗಾಗಿ ನಡೆದ ಜೀವಪರ ಕಾಳಜಿಯ  ಹಂಬಲ, ಗಂಡು ಹೆಣ್ಣು ಬೇಧವಿಲ್ಲದ ಸಮ ಸಮಾಜಕ್ಕಾಗಿ ನಡೆದ  ಹೋರಾಟ, ಬದುಕಿನ ಕಾಯಕದ ಜೊತೆ ನಡೆದದ್ದು ಮತ್ತೊಂದು ದಾಖಲೆ. ಈ ಮಾದರಿಯ ಚಳುವಳಿ ಜಗತ್ತಿನ ಯಾವ ದೇಶದಲ್ಲೂ, ಅವುಗಳ ಇತಿಹಾಸದಲ್ಲೂ ಕಾಣಸಿಗುವುದಿಲ್ಲ. ಹಾಗಾಗಿ ಕನ್ನಡಿಗರಾದ ನಮಗೆ 12ನೇ ಶತಮಾನ ಮತ್ತು ವಚನ ಚಳುವಳಿ ಮಹತ್ವದ್ದು. ಅದರಲ್ಲೂ ಮಹಿಳೆ ಮತ್ತು ಶ್ರಮಜೀವಿಗಳಿಗೆ 12ನೇ ಶತಮಾನದ ಒಂದು ಮಹೋನ್ನತ ಘಟನೆಯನ್ನು ನಾವು ಆಗಾಗ ಬರೆಯುವ ಮೂಲಕ, ಮಾತನಾಡುವ ಮೂಲಕ ಮುನ್ನೆಲೆಗೆ ತರಬೇಕಾಗಿದೆ.  ಕನ್ನಡ ಕವಿಗಳು ನನಗೆ ಕಲಿಸಿದ ಪಾಠ ಎಂಬ ಸಾಲು ಜಗ್ಗನೆ ದೀಪದಂತೆ ನನಗೆ ಜು.19 ರವಿವಾರ ಹೊಳೆಯಿತು. ಇದಕ್ಕೂ ಮುನ್ನ ಅಭಿನವ ಪಂಪನೆಂದೇ ಹೆಸರಾದ ನಾಗಚಂದ್ರನ ರಾಮಚಂದ್ರಚರಿತ ಪುರಾಣ ಎಂಬ ಕಾವ್ಯದ ಒಂದು ಸಾಲು ಮಿಂಚಿತು. “ಅಬ್ದಿಯುಂ ಓರ್ಮೆ ಕಾಲ ವಶದಿಂ ಮರ್ಯಾದೆಯಂ ದಾಂಟದೆ” ಅಂದರೆ ಕಾಲದ ಕಾರಣದಿಂದ ಸಮುದ್ರವೂ  ಸಹ ತನ್ನ ಸೀಮಾ ರೇಖೆಯನ್ನು ಮೀರುತ್ತದೆ ಎಂದು. ಸೀತೆಯನ್ನು ನೋಡಿದಾಗ ರಾವಣನ ಮನಸು ಹೇಗೆ ನೀತಿಯ ಗೆರೆ ದಾಟಿತು ಎಂಬುದನ್ನು ವಿವರಿಸಲು ನಾಗಚಂದ್ರ ಈ ಉಪಮೆಯನ್ನು,ಹೋಲಿಕೆಯನ್ನು ನೀಡುತ್ತಾನೆ. ಹಾಗೆ ಮುಂದುವರಿದು  ರಾವಣನ ಚಂಚಲತೆ ಕುರಿತು ಹೇಳುತ್ತಾ “ಪದ್ಮಪತ್ರದ ಜಲಬಿಂದುವಿನಂತೆ ಚಲಿತ ಮಾದುದು ಚಿತ್ತಂ” ಎನ್ನುತ್ತಾನೆ. ಕಮಲದ ಎಲೆಯ ಮೇಲಿನ ನೀರಿನ ಬಿಂದು ಅತ್ತಿತ್ತ ಓಡಾಡುವಂತೆ ಸೀತೆಯನ್ನು ನೋಡಿದಾಗ ರಾವಣನ ಮನಸ್ಸಿನಸ್ಥಿತಿಯಾಯಿತು ಎಂದು ನಾಗಚಂದ್ರ ವಿವರಿಸುತ್ತಾನೆ. ಒಂದು ಕಡೆ ಬಸವಣ್ಣ, ಮತ್ತೊಂದು ತುದಿಯಲ್ಲಿ ನಾಗಚಂದ್ರ ಇಬ್ಬರೂ ಮನದಲ್ಲಿ ಹಾದುಹೋದರು. ಸಾಹಿತ್ಯದಿಂದ, ಕಲೆ ಕಾವ್ಯದಿಂದ ಮನುಷ್ಯ ಕಲಿಯುವುದು ತುಂಬಾ ಇದೆ. ಸಾಹಿತ್ಯದ ಒಡನಾಟ ಮನುಷ್ಯ ಏಕಾಂತ ಗೆಲ್ಲಲು, ಬದುಕನ್ನು ಗೆಲ್ಲಲು ಇರುವ ಪ್ರಮುಖ ಸಾಧನ. ಸಂಗೀತ ನೀಡುವ ಸಂತೋಷವನ್ನು, ಸಾಹಿತ್ಯ ನೀಡಬಲ್ಲದು. ಬಸವಣ್ಣನ ವಚನಕ್ಕೆ ಮರಳಿ ಬರೋಣ, ಕೂಡಲಸಂಗಮನನ್ನು ಸಾಕ್ಷಿಯಾಗಿಟ್ಟುಕೊಂಡೇ ವಚನಗಳನ್ನು ಬರೆದ ಬಸವಣ್ಣ ಆನು ಒಲಿದಂತೆ ಹಾಡುವೆನು, ನಿನಗೆ ಕೇಡಿಲ್ಲವಾಗಿ ಅಂದರೆ ದೇವರಿಗೆ ಕೇಡಾಗದಂತೆ ನಾನು ಬರೆಯುವೆ, ಬದುಕುವೆ ಎನ್ನುತ್ತಾನೆ. ಹಾಗದರೆ ಬಸವಣ್ಣನ ದೃಷ್ಟಿಯಲ್ಲಿ ಯಾರು ದೇವರು? ಇದನ್ನು ಮೊದಲು ನೋಡೋಣ. ಬಸವಣ್ಣನ ದೃಷ್ಟಿಯಲ್ಲಿ ಮನುಷ್ಯರೇ ದೇವರು. ಇತರರೆಗೆ ಕೇಡು ಬಗೆಯದಿರುವ, ದುಡಿದು ತಿನ್ನುವವ ದೇವರು. ಕಾಯಕದಲ್ಲಿ ನಿರತನಾದೆಡೆ ಲಿಂಗವನ್ನಾದರೂ ಮರೆಯಬೇಕು, ಅಂಗವನ್ನಾದರೂ ಮರೆಯಬೇಕು, ಜಂಗಮವನ್ನಾದರೂ ಮರೆಯಬೇಕು ಎಂಬುದು ಬಸವಣ್ಣನ ನಿಲುವು. ಸ್ಥಾವರವಾದ ಲಿಂಗ ಮತ್ತು ಅಶಾಶ್ವತವಾದ ದೇಹ, ಸಂಚಾರಿಯಾದ ಜಂಗಮ( ನೀತಿ ಸಾರುತ್ತಾ , ನೀತಿಯನ್ನೇ ಬದುಕುತ್ತಾ, ಚಲನಶೀಲವಾಗಿರುವ ಶರಣರು, ಕೂಡಲ ಸಂಗಮನ ಪ್ರತಿನಿಧಿಗಳು ಅನ್ನೋಣ) ಇವರೇ ಬಂದು ಎದುರು ನಿಂತರೂ ಕಾಯಕ ಮಾಡುವಾಗ ಮರೆಯಬೇಕು. ಕಾಯಕ(ಕೆಲಸ)ದ ನಂತರ ಲಿಂಗ, ಅಂಗ, ಗುರು ಜಂಗಮರು. ಕಾಯಕಕ್ಕೆ ಮೊದಲ ಆದ್ಯತೆ, ಲಿಂಗ, ಗುರುವಿಗೆ ಎರಡನೇ ಆದ್ಯತೆ. ಇದು ಶರಣರು ಕಾಯಕಕ್ಕೆ,ದುಡಿಮೆಗೆ ನೀಡಿದ ಮಹತ್ವ. ಬಸವಣ್ಣ ತುಂಬಾ ವೈಚಾರಿಕ, ಭಾವುಕ ಮನುಷ್ಯ ಎಂಬುದಕ್ಕೆ ಆತನ ವಚನದ ಅನೇಕ ಸಾಲುಗಳನ್ನು ನೆನಪಿಸಿಕೊಳ್ಳಬಹುದು. ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವ ಬಸವಣ್ಣ, ವ್ಯವಸ್ಥೆಯ ಭ್ರಷ್ಟಾಚಾರ ನೋಡಿ, ಬೇಲಿಯೇ ಎದ್ದು ಹೊಲವ ಮೇಯ್ದೊಡೆ, ಏರಿ ನೀರುಂಬೊಡೆ, ತಾಯಿಯ ಮೊಲೆ ಹಾಲು ವಿಷವಾದೊಡೆ ಇನ್ನಾರಿಗೆ ದೂರಲಿ ಕೂಡಲಸಂಗಮದೇವಾ ಎನ್ನುತ್ತಾನೆ. ಬಿಜ್ಜಳನ ಅರಮನೆಯಲ್ಲಿ ಪುರೋಹಿತಶಾಹಿಯ ಜನ ವಿರೋಧಿ ಆಲೋಚನೆಗಳನ್ನು ಕಂಡೇ ಬಸವಣ್ಣ ಈ ವಚನ ಬರೆದಿರುವಲ್ಲಿ ಅನುಮಾನವೇ ಇಲ್ಲ. ಬಿಜ್ಜಳನ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಜನಪರ ಅರ್ಥನೀತಿ ರೂಪಿಸಿದ್ದು, ಬಿಜ್ಜಳನ ಸುತ್ತ ಇದ್ದ ವಂಧಿಮಾಗಧರಿಗೆ ಕಿರಿಕಿರಿಯನ್ನು, ಅಸಹನೆಯನ್ನು ತಂದಿತ್ತು. ಬಸವಣ್ಣನನ್ನು ಹಣಿಯಲುನ ಸೂಕ್ತ ಸಂದರ್ಭಕ್ಕೆ ಅವರು ಕಾದಿದ್ದರು. ಮುಂದೆ ಬಿಜ್ಜಳನ ರಾಜ್ಯದಲ್ಲಿ ಅಂತರ್ಜಾತಿ ವಿವಾಹದ ಸಂದರ್ಭ, ಸನ್ನಿವೇಶ ಬಂದದ್ದೇ ತಡ, ಧರ್ಮ ವಿರೋಧಿ ಕೃತ್ಯ ಇದು ಎಂದು ಬಿಜ್ಜಳನ ಕಿವಿಯೂದುವಲ್ಲಿ ಯಶಸ್ವಿ ಯಾಯಿತು ವ್ಯವಸ್ಥೆ. ಇವತ್ತಿನ ಅರಸೊತ್ತಿಗೆಯಲ್ಲಿ ನಡೆಯುವ ರಾಜಕಾರಣಕ್ಕೂ, 12 ನೇ ಶತಮಾನದಲ್ಲಿ ಬಿಜ್ಜಳನ ಸುತ್ತ ನಡೆದ ವಿದ್ಯಮಾನಕ್ಕೂ ಅಂತ ವ್ಯತ್ಯಾಸವೇನಿಲ್ಲ. ಘಟನೆಗಳು, ಕಾರಣಗಳು ಭಿನ್ನ ಭಿನ್ನ ಇರಬಹುದು ಅಷ್ಟೇ. 12ನೇ ಶತಮಾನದ ಘಟನಾವಳಿಗಳ ಕುರಿತೇ ಕನ್ನಡದಲ್ಲಿ ನಾಲ್ಕು ನಾಟಕಗಳು ಬಂದಿವೆ. ಸಂಕ್ರಾತಿ, ತಲೆದಂಡ, ಕೆಟ್ಟಿತ್ತು ಕಲ್ಯಾಣ, ಮಹಾಚೈತ್ರ. ಲಂಕೇಶ್, ಗಿರೀಶ್ ಕಾರ್ನಾಡ,ಎಂ.ಎಂ.ಕಲಬುರ್ಗಿ,ಎಚ್.ಎಸ್.ಶಿವಪ್ರಕಾಶ್. ಈ ನಾಲ್ವರು ನಾಟಕಗಳ ಮೂಲಕ 12ನೇ ಶತಮಾನದ ಘಟನಾವಳಿಗಳನ್ನು ಪುರ್ನನಿರ್ಮಿಸಲು ಯತ್ನಿಸಿದ್ದಾರೆ. ಇದು ಕನ್ನಡದ ಪರಂಪರೆ ಎಷ್ಟು ಮಹತ್ವದ್ದು, ಯಾವ ಕಡೆಗೆ ಕನ್ನಡದ ಸಂಸ್ಕøತಿಯ ತುಡಿತ ಇತ್ತು  ಎಂಬುದುನ್ನು ತೋರಿಸುತ್ತದೆ. ಇದನ್ನೇ ನಾವು ಆಗಾಗ ಮುನ್ನೆಲೆಗೆ ತಂದು ಯುವಜನರ ಮುಂದೆ ಇಡಬೇಕಾಗಿದೆ. ಇಂಥ ಮಾನವಪರ ಪರಂಪರೆ ಪರಿಚಯಿಸಲು ಪ್ರಯತ್ನಗಳು ಆಗಿಯೇ ಇಲ್ಲ ಎನ್ನುವಂತಿಲ್ಲ. 21ನೇ ಶತಮಾನದಲ್ಲಿ ಸಹ ವಚನ ಚಳುವಳಿಯ ಮಹತ್ವ ಸಾರಲು ಪ್ರಯತ್ನಗಳು ನಡೆದಿವೆ. ಆದರೆ ಅಂಥ ಹೋರಾಟಕ್ಕೆ ವ್ಯಾಪಕತೆ ದಕ್ಕಿಲ್ಲ. ಕಾರಣ ನಮ್ಮ ಸಮಾಜ ಜಾತಿ ವ್ಯವಸ್ಥೆಯಲ್ಲಿ ಹಂಚಿಹೋಗಿದೆ. ಮೀಸಲಾತಿಯ ಉದ್ದೇಶ ಸಹ ಸಮಾನತೆ ಸಾರುವ ಸಮಾಜ ಕಟ್ಟಲು ಎಂಬ ಅದರೊಳಗಿನ ಆಶಯವನ್ನು ಮೀಸಲಾತಿ ಅನಭವಿಸುವವರು ಮತ್ತು ಮೀಸಲಾತಿ ವಿರೋಧಿಸುವವರು ಕುಳಿತು ಚರ್ಚಿಸಲು ಸಿದ್ಧರಿಲ್ಲ. ಸಾಣೇಹಳ್ಳಿಮಠದ ಶ್ರೀ ಪಂಡಿತಾರಾಧ್ಯರು ಮತ್ತೆ ಕಲ್ಯಾಣ ಎಂಬ ಪ್ರಮುಖ ತಲೆಬರೆಹದಡಿ 2019ರಲ್ಲಿ ಇಡೀ ಕರ್ನಾಟಕದ 30 ಜಿಲ್ಲೆಗಳನ್ನು ಸುತ್ತಿದರು. ಆಗ ಯುವಜನರನ್ನೇ ಪ್ರಮಖವಾಗಿಟ್ಟುಕೊಂಡು ಅವರೆತ್ತುವ ಎಲ್ಲಾ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿದರು. ವಚನಕಾರರನ್ನು, ಅವರ ಅಶಯಗಳನ್ನು, ಅವರ ಉದ್ದೇಶದ ಸಮಾಜವನ್ನು ವಿದ್ಯಾರ್ಥಿ ಯುವಜನರ ಮುಂದಿಡುವುದು ಮತ್ತೆ ಕಲ್ಯಾಣದ ಉದ್ದೇಶವಾಗಿತ್ತು. 30 ಜಿಲ್ಲೆಗಳಲ್ಲಿ ನಡೆದ  ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಇದೀಗ ಕನ್ನಡಿಗರ ಮುಂದೆ ಪುಸ್ತಕರೂಪದಲ್ಲಿ ದಾಖಲಾಗಿವೆ. ಸಾಸಿವೆಯಷ್ಟು ಸುಖಕ್ಕೆ : ವಚನ ಸಾಹಿತ್ಯ ಕಾಲದಲ್ಲಿಯೇ ಬಂದ ಅನುಭಾವಿ ಕವಿ ಅಲ್ಲಮ ಪ್ರಭು ಮಾತೆಂಬುದು ಜೋತಿರ್ಲಿಂಗ ಎನ್ನುತ್ತಾನೆ. ಬೆಟ್ಟದ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದ ಎತ್ತ ಸಂಬಂಧವಯ್ಯ ಎಂದ. ಬೆಡಗಿನ ವಚನಗಳನ್ನು ಬರೆದ, ಅವುಗಳನ್ನು ಅನುಭವ ಮಂಟಪದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕ ಮಹಾದೇವಿ, ಶಿವಯೋಗಿ ಸಿದ್ಧರಾಮರೊಡನೆ ವಾದಕ್ಕಿಳಿದು ಮಂಡಿಸುತ್ತಿದ್ದ ಅಲ್ಲಮ ಪ್ರಭು ಕನ್ನಡಿಗರಿಗೆ ಒಂದು ಅಚ್ಚರಿ.  “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ” ಎಂದ ಅಲ್ಲಮಪ್ರಭು ನಮ್ಮ ಬದುಕಿನ ಬಹುದೊಡ್ಡ ಗುರು. ಬುದ್ಧ ಸಹ ಸಾವಿಲ್ಲದ ಮನೆಯ ಸಾಸಿವೆ ತರುವಂತೆ ಒಬ್ಬ ಹೆಣ್ಮಗಳಿಗೆ ಹೇಳಿದೆ. ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸಿಕೊಡು ಎಂದು ಬಂದ ತಾಯಿಗೆ ಬುದ್ಧನ ಸಾಂತ್ವಾನ…ಸಾವಿಲ್ಲದ ಮನೆಯ ಸಾಸಿವೆ ಕಾಳು ತರುವಂತೆ ಹೇಳಿದ್ದು. ಇದು ನಮ್ಮ ಸಾಧಕರು ಜನ ಸಾಮಾನ್ಯರ  ದುಃಖಕ್ಕೆ ಹುಡುಕಾಡಿದ ಉತ್ತರ.  ವಚನಕಾರ ಅಲ್ಲಮ ಹೇಳುತ್ತಾನೆ ; ` ಹರಿವ ನದಿಗೆ ಮೈಯಲ್ಲಾ ಕಾಲು, ಬೀಸುವ ಗಾಳಿಗೆ ಮೈಯಲ್ಲಾ ಕಿವಿ, ಉರಿವ ಆಗ್ನಿಗೆ ಮೈಯಲ್ಲಾ ನಾಲಿಗೆ ‘ ಇಂತಹ ಪ್ರತಿಮೆಗಳ ಸೃಷ್ಟಿ , ಅನುಭಾವದ ಶರಣರಿಗೆ ಮಾತ್ರ ಸಾಧ್ಯ. ಹಾಗೂ 12ನೇ ಶತಮಾನದಲ್ಲೇ ಕನ್ನಡ ಭಾಷೆಯ ಬಳಕೆಯ ಬೆಡಗನ್ನು ಸಹ ಇದು ದಾಖಲಿಸುತ್ತದೆ. ಸಂತೆಯಲ್ಲೊಂದು ಮನೆಯ ಮಾಡಿ: ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನನ ಹುಡುಕಿ ಹೊರಟವಳು. ಶಿವಮೊಗ್ಗ ಜಿಲ್ಲೆಯ ಅರಸು ಮನೆತನವೊಂದರ ರಾಜ ಕೌಶಿಕನ ಪತ್ನಿಯಾಗಿದ್ದ ಅಕ್ಕ ಉಡುತಡೆಯಿಂದ ಶ್ರೀಶೈಲಕ್ಕೆ ಹೊರಟವಳು. ದಾರಿಯಲ್ಲಿ ಅನುಭವ ಮಂಟಪದಲ್ಲಿದ್ದು, ಅಲ್ಲಿಯ ಶರಣರ ಜೊತೆ ತನ್ನ ಅರಿವಿನ, ಜ್ಞಾನದ ಬೆಳಕು ಚೆಲ್ಲಿದವಳು. “ಸಾಯುವ ಕೆಡುವ ಗಂಡನನ್ನು ಉರಿಯ ಒಲೆಯೊಳಗಿಕ್ಕು” ಎಂದು ಬರೆದು ಹಾಡಿದಾಕೆ. ಆಕೆಯ ಪ್ರಸಿದ್ಧ ವಚನ ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆತೊರೆಗಳಿಗೆ  ಅಂಜಿದೊಂಡೆಯೆಂತಯ್ಯ, ಬೆಟ್ಟದಾ ಮೇಲೊಂದು ಮನೆಯ ಮಾಡಿ ಖಗಮೃಗಗಳಿಗೆ ಅಂಜಿದೊಡೆಯೆಂತಯ್ಯ, ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಯೆಂತಯ್ಯ….? ಇದು ನಮ್ಮ ಇವತ್ತಿನ ಮಹಿಳೆಯರು ಆಗಾಗ ನೆನಪಿಸಿಕೊಳ್ಳಬೇಕಾದ ವಚನ. ಕೊನೆಯ ಮಾತು: ಮಾತು ಸೋತಾಗ ಮೌನಕ್ಕೆ ಶರಣಾಗಿ ಓದಬೇಕು. ಪಂಪನ್ನು ಎದೆಗೆ ಹಾಕಿಕೊಂಡರೆ, ವಚನಕಾರರು ನಿಮ್ಮ ಹೃದಯ ತುಂಬುತ್ತಾರೆ. ಕನಕದಾಸ, ಶರೀಫರು ನಿಮಗೆ ಕಿವಿಮಾತು ಹೇಳಿಯಾರು. ಆಧುನಿಕ ಕನ್ನಡ ಕಾಲಕ್ಕೆ ಬಂದೆ ಬೆಳಕಿನ ಬದಿಯಲ್ಲಿ ಪ್ರೀತಿ ಕಂಡ ಬೇಂದ್ರೆ, ಎದೆಯ ದನಿಗೆ ಮಿಗಿಲಾದ ಶಾಸ್ತ್ರವಿಹುದೇ ಎಂದ ಕುವೆಂಪು ಕೈ ಹಿಡಿದು ನಡೆಸಿಯಾರು. ಅಕ್ಷರವನ್ನು ಬೆಳಕಾಗಿಸಿಕೊಳ್ಳುವುದು, ಪ್ರತಿಭೆಯನ್ನು ಬಿತ್ತಿ ಬೆಳೆಯುವುದು ನಮ್ಮ ಮನದೊಳಗೆ ಇದೆ. **********************************************

ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ Read Post »

ಇತರೆ

ಸಂತಸ ಅರಳಿದ ಸಮಯಾ

ಮೊದಲ ಕವಿತೆಯ ರೋಮಾಂಚನ ವಸುಂದರಾ ಕದಲೂರು    ‘ಸಂಗಾತಿ’ ಬರಹಗಾರರನ್ನು ತಮ್ಮ ಮೊದಲ ಕಾವ್ಯದ ಹುಟ್ಟನ್ನು ಕುರಿತು ಬರೆಯುವಂತೆ ಪ್ರೇರೇಪಿಸಿದೆ. ಎಲ್ಲರೂ ಅಂದದ ತೊಟ್ಟಿಲೊಳಗೆ ಮಲಗಿ ನಿದ್ರಿಸುವ ತಮ್ಮ ಮುದ್ದಿನ ಮಗುವನ್ನು ಜತನದಿಂದ ಮೇಲೆತ್ತಿ ಮುದ್ದು ಮಾಡಿ ಓಲೈಸಿ ಆಡಿಸುವಂತೆ ಮೊದಲ ಕವನದ ನವಿರು ನೆನಪುಗಳನ್ನು ಕುರಿತು ಹೇಳುತ್ತಿದ್ದಾರೆ. ಓದಲು ಬಹಳ ಖುಷಿ ಎನಿಸುತ್ತದೆ.  ಹಳೆಯದನ್ನು ನೆನೆದು ಬರೆಯುವುದು ಆ ಕ್ಷಣದ ಮಟ್ಟಿಗೆ  ಒಂದು ಆನಂದ ಲಹರಿಯೇ..    ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಸಾಹಿತ್ಯ ಪ್ರಿಯರು. ಮನೆಗೆ  ತಪ್ಪದೇ ಮಯೂರ, ಸುಧಾ, ತರಂಗ, ಪ್ರಜಾವಾಣಿ ಬರುತ್ತಿದ್ದವು. ಮನೆಮಂದಿಯೆಲ್ಲಾ ಪೈಪೋಟಿ ಮೇಲೆ ಅವುಗಳನ್ನು  ಓದುತ್ತಿದ್ದೆವು. ಬಾಲಮಂಗಳ, ಚಂದಾಮಾಮದ ಖಾಯಂ ಓದುಗರು ನಾವು(ಅಕ್ಕ, ಅಣ್ಣ ಮತ್ತು ನಾನು). ನಾನಂತೂ ಮಿಡ್ಲ್ ಸ್ಕೂಲ್ ಇದ್ದಾಗಲೇ ಪಠ್ಯಪುಸ್ತಕದ ನಡುವಲ್ಲಿ ಮರೆಮಾಡಿಕೊಂಡು ಸುಧಾ,ಮಯೂರದ ಕತೆಗಳನ್ನು ಓದಿ ವಿಸ್ಮಯ ಪಡುತ್ತಿದ್ದೆ.            ನಾನು ಯಾವಾಗ ಬರೆದೆನೋ ನಿಶ್ಚಿತವಾಗಿ ಗೊತ್ತಿಲ್ಲ. ಆದರೆ ‘ನಾನೂ ಬರೆಯಬಲ್ಲೆನೆ!?’ ಎಂಬ ಯಾವ ಶಂಕೆ  ಸಂದೇಹಗಳೂ ನನಗೆ ಇರಲಿಲ್ಲ ಎಂದು ಕಾಣುತ್ತದೆ. ಜಂಭ ಇವಳಿಗೆ ಎನಿಸುವಂತೆ ಇತರರಿಗೆ  ಕಾಣುವ  ನಾನು ಸ್ವಲ್ಪ ಹೆಚ್ಚೇ ಎನಿಸುವ ಆತ್ಮವಿಶ್ವಾಸದ ಹುಡುಗಿ. ಅದೇನು ಹುಕಿ ಹುಟ್ಟಿತೋ ಹೇಗೆ ಹುಟ್ಟಿತೋ ಗೊತ್ತಿಲ್ಲ. ಅಂತೂ ನಾನೂ ಬರೆಯುವುದಕ್ಕೆ ಶುರು ಮಾಡಿದೆ. ಬರೆದ ಮೇಲೆ ಸುಮ್ಮನಿರೋದು ಹೇಗೆ? ಮನೆಯಲ್ಲಿ ಅಮ್ಮ ನನ್ನ ಬೆಸ್ಟ್ ಫ್ರೆಂಡ್. ಅವರ ಮುಂದೆ ನಾನು ಬರೆದುದನ್ನು ಓದಿ ಹೇಳುವುದು ಸ್ನೇಹಿತರ ಮುಂದೆ ಓದುವುದು ಮಾಡುತ್ತಿದ್ದೆ. ನಾಕಾರು ಸಾಲು ಪದ್ಯ ಬರೆದುದನ್ನೇ ದೊಡ್ಡದು ಮಾಡಿದ ಗೆಳತಿಯರು ನನ್ನನ್ನು ‘ಕನ್ನಡ ಪಂಡಿತೆ’ ಎಂದು ಕರೆಯಲು ಶುರು ಮಾಡಿಬಿಟ್ಟರು.. ಆಗೆಲ್ಲಾ ಎಷ್ಚು ಖುಷಿಯಿಂದ ಬೀಗುತ್ತಿದ್ದೆ…! ಅವರು ನನ್ನನ್ನು ಗೇಲಿ ಮಾಡಿರಬಹುದೇ..?! ಇರಲಿ ಬಿಡಿ, ಆಗಂತೂ ಬಹಳ ಅಭಿಮಾನದಿಂದ ಬೀಗಿದ್ದೆ. ಬರೆಯುತ್ತಿದ್ದೆ. ಹಾಗೆ ಬರೆದುದನ್ನು ಅಪ್ಪ ಅಮ್ಮನಿಗೆ, ಗೆಳೆಯರಿಗೆ, ಶಿಕ್ಷಕರಿಗೆ ತೋರುತ್ತಿದ್ದೆ. ಖುಷಿಪಡುತ್ತಿದ್ದೆ.      ಎಲ್ಲರೂ ಏನೋ ಬರೆಯುತ್ತೆ ಹುಡುಗಿ, ಬರೆಯಲಿ ಬಿಡು ಎಂದುಕೊಳ್ಳುತ್ತಿದ್ದರೇನೋ.. ಇದೆಲ್ಲಾ ನಡೆದದ್ದು ನಾನು ಆರು ಏಳನೆಯ ತರಗತಿಯಲ್ಲಿದ್ದಾಗ. ಆದರೆ ಹಳ್ಳಿಗಳ ತೆಕ್ಕೆಯಿಂದ ಪಟ್ಟಣದ ಮಡಿಲಿಗೆ ಬಿದ್ದಾಗಲೇ ಗೊತ್ತಾದದ್ದು ನಗರವಾಸಿಗಳು ಬಹಳ ಹುಶಾರಿಗಳೆಂದು. ಅವರು ಬಹಳ ಚೆನ್ನಾಗಿ ಓದುತ್ತಾರೆ ಮತ್ತು ಬರೆಯುತ್ತಾರೆಂದು!! ಪಟ್ಟಣದ ಶಿಸ್ತಿನ ಶಾಲೆ, ಪಠ್ಯಕ್ರಮ, ಜೀವನ ವಿಧಾನ ಕಂಡು ನಾನು ದಂಗಾದೆ. ಆದರೆ ಅಂತಹ ಸಂದರ್ಭದಲ್ಲೂ ನನ್ನನ್ನು ಕಳವಳಗೊಳ್ಳದಂತೆ, ಕಳೆದು ಹೋಗದಂತೆ ಕಾಪಾಡಿದ್ದು ನಾನು ಬರೆಯುವ ನಾಲ್ಕಾರು ಸಾಲುಗಳೇ. ಇಲ್ಲಿಯೂ ಅದು ನನ್ನ ‘ಕನ್ನಡ ಪಂಡಿತೆ’ಯ ಸ್ಥಾನವನ್ನು ಗಟ್ಟಿಗೊಳಿಸಿತು.   ೧೯೯೫ ರಿಂದ ನಾನು ಬರೆದುದನ್ನೆಲ್ಲಾ ದಿನಾಂಕವನ್ನು ನಮೂದಿಸುತ್ತಾ ಒಂದು ಡೈರಿಯಲ್ಲಿ ಬರೆದಿಡುತ್ತಾ ಬಂದೆ. ಆ ಮುಂಚೆ ಬರೆದುದು ಏನಾಯಿತೋ ಗೊತ್ತಿಲ್ಲ. ಆದರೆ ಹಾಗೆ ೧೯೯೫ರಿಂದ ಬರೆದಿಟ್ಟ ಡೈರಿ ನನ್ನ ಬಳಿ ಈಗಲೂ ಇದೆ. ಪುಸ್ತಕದ ಹಲವು ಪುಟಗಳು ಬಿಡಿಬಿಡಿಯಾಗಿ ಬಿಡಿಸಿಕೊಂಡಿವೆ. ಅದರಲ್ಲಿನ ಸಾಲುಗಳನ್ನು ಈಗ ಓದುವಾಗ ಬಾಲಿಶವೆನಿಸಿದರೂ ನನಗೆ ಅಪಾರ ಸಂತಸವನ್ನು ನೀಡುತ್ತವೆ.      ನಾನು ಬರೆದ ಕವನಗಳೆಲ್ಲಾ ಸಾಮಾನ್ಯವಾಗಿ ಪುಟ್ಟ ಸಾಲುಗಳುಳ್ಳವು.  ಅದರಲ್ಲೂ ಚುಟುಕು ಗಳೇ ಹೆಚ್ಚಿದ್ದವು. ಸಮಕಾಲೀನ ಸನ್ನಿವೇಶಗಳನ್ನು ಗಮನಿಸಿ ಬರೆದಂತಹವು.  ಒಂದೆರಡು ಉದಾರಹಣೆ ನೀಡುವೆ.  ೧.                         ‘ಯಾಕೆ!?’            ಪುಟ್ಟನಿಗೆ ಹೇಳಿದರು ಅವರಪ್ಪ            ಆಗೋ ನೀ ಪುಟ್ಟ ಪೋಲಿಸಪ್ಪ        ಪುಟ್ಟ ಹೇಳಿದ ನಾ ಪೋಲಿಸ್* ಆಗಲ್ಲಪ್ಪ        ಯಾಕೋ? ಕಮಂಗಿ ಎಂದರವರಪ್ಪ                ಅದಕೆ ಹೇಳಿದ ಪುಟ್ಟಪ್ಪ         ಇನ್ನೂ ಇರುವನು ‘ವೀರಪ್ಪ’ನ್ (ವೀರಪ್ಪನ್ ಪೊಲೀಸರನ್ನು ಅಪಹರಿಸಿದ ಸಂದರ್ಭಕ್ಕೆ ಬರೆದದ್ದು. ೨೬/೧೧/೯೫ ರಲ್ಲಿ ಬರೆದ ಕವಿತೆ.) * ‘ಪೊಲೀಸ್’ ಎಂಬುದು ಸರಿಯಾದ ಬಳಕೆ ಆದರೆ ಆಗ ನನಗಿದ್ದ ತಿಳುವಳಿಕೆಗೆ ನಾನು ಪೋಲಿಸ್ ಪದ ಬಳಸಿರುವೆ.   ೨.                   ‘ಪ್ರಧಾನಿ’                      ನಲ್ಲೆಗೆ ಹೇಳಿದ ನಲ್ಲ              ನಡೆದು ಬಾ ನೀ ಮೆಲ್ಲ- ನೆ             ನಸುಗೋಪದಿ ನುಡಿದಳು ನಲ್ಲೆ                   ನಾನೇನು ಪ್ರಧಾನಿ ಅಲ್ಲ  ( ಇದು ೨೭/೦೧/೯೬ ರಲ್ಲಿ ಬರೆದ ಕವಿತೆ. ಶ್ರೀ ಪಿ. ವಿ. ಎನ್.  ಆಗ ನಮ್ಮ ಪ್ರಧಾನಿಗಳಾಗಿದ್ದರು. ‘ನಿಧಾನವೇ ಪ್ರಧಾನ’ ಎಂಬ ಧ್ಯೇಯವನ್ನು ಪತ್ರಿಕೆಗಳು ‘ನಿಧಾನವೇ ಪ್ರಧಾನಿ’  ಎಂದು ಬರೆದು ಗೇಲಿ ಮಾಡುತ್ತಿದ್ದವು. ಅದರ ಪ್ರತಿರೂಪ ಈ ಚುಟುಕ.)   ಹೀಗೆ ಮೊದಲ ಕವನಗಳನ್ನು  ಕುರಿತು ಹಿಂದಿರುಗಿ ನೋಡಿದಾಗ ಈಗ ‘ಅಯ್ಯೋ ಹೀಗೆಲ್ಲಾ ಬರೆದಿರುವೆನಾ?!’ ಎಂದು ಅಚ್ಚರಿಯ ಪ್ರಶ್ನೆ ಮೂಡುತ್ತದೆಯೇ ಹೊರತು, ಅದರ ಹೊರತಾಗಿ ಹೀಗೆಲ್ಲಾ ಪೆದ್ದುಪೆದ್ದಾಗಿ ಬರೆದಿರುವೆನಲ್ಲಾ ಎಂದು ಯಾವತ್ತಿಗೂ ನಾಚಿಕೆ ತರಿಸಿಲ್ಲ. ಏಕೆಂದರೆ ಬರೆಯುವುದು ನನಗೆ ಎಂದಿಗೂ ಅಪರಾಧ ಎನಿಸಿಯೇ ಇಲ್ಲ.    ಹೀಗೆ ಹಳೆಯ ನೆನಪು ಮರಳಿಸಿ ಕೊಟ್ಟ ‘ಸಂಗಾತಿ’ಗೆ ಧನ್ಯವಾದಗಳು. *************************

ಸಂತಸ ಅರಳಿದ ಸಮಯಾ Read Post »

ಇತರೆ

ಹೂಗಳು ಅರಳುವ ಸಮಯ :

ಮೊದಲ ಕವಿತೆಯ ರೋಮಾಂಚನ ಅನುಪಮಾ ತುರುವೇಕೆರೆ ನನ್ನ ಜನ ಈಗ ನಿರಾಶ್ರಿತರು ಮತ್ತೊಮ್ಮೆ ಸಾಗಬೇಕು ಈ ದಾರಿಯಲ್ಲಿ ?ಪಯಣವನ್ನು ಇನ್ನೆಷ್ಟು ಸಾಗಿಸಬೇಕು!ಹಸಿವಿನ ಸಮುದ್ರವ ಬೆನ್ನಲಿ ಕಟ್ಟಿನಿರಾಸೆಯ ಕಾಂತಾರವ ಕಣ್ಣೊಳಗೆ ಬಂಧಿಸಿನಡೆಯುತ್ತಲೇ ಇದ್ದಾರೆ ನನ್ನ ಜನಊರಿಂದ ಪೇಟೆಗೆ ಅನ್ನಬಯಸಿಪೇಟೆಯಿಂದ ಊರಿಗೆ ಜೀವ ಬಯಸಿ ಆಶ್ರಯದ ಭರವಸೆಗಳ ಹೆಣಗಳುಹೇಷಾರವ ಮಾಡುತಿವೆಮಹಲಿನ ಸ್ಮಶಾನಗಳಲಿಅಲ್ಲಿ ಚಿಗುರಿದ ಗರಿಕೆ ನನ್ನ ಜನಹೆದರಿಕೆಯ ನಲ್ಲೆಯನು ಮುದ್ದಿಸುತಸಾಗುತ್ತಲೇ ಇದ್ದಾರೆ. ಬಾಗಿದ ಬೆನ್ನಲಿಶತಮಾನದ ನೋವ ಹೊತ್ತವರುಮಣ್ಣ ಕಣದೊಳಗೆ ಕಣ್ಣ ಕಣವನು ಕಂಡಎರೆಯಹುಳದಂತೆಹಸುರೊಳಗೆ ಪತ್ರಹರಿತ್ತುವಿನಂತೆಸಮ್ಮಾನವ ಬಯಸದ ನನ್ನ ಜನನಿರಾಶ್ರಿತರು ನಿರಾಸೆಯ ಮಕ್ಕಳು ನೀರು ಬಾಯಾರಿದ ಹೊತ್ತಲ್ಲಿಬಯಲಿಗೆ ಬೆವರ ಬಸಿದು ನಗಿಸಿದವರುಗಾಳಿ ನಿತ್ರಾಣವಾದ ಗಳಿಗೆಯಲಿಮಾರುತದಂತೆ ಆವರಿಸಿ ಗಿಡಮರಗಳ ಸಂತೈಸಿದರುಭೂಮಿಯ ಮೈಯ ಕೊಳೆಯನ್ನಭಕ್ತರು ಮಾಡುವ ನೇಮದಂತೆ ಬಾಚಿ ಬಳಿದವರು ನಿಲ್ಲದ ಪಯಣದಲಿ ದಾರಿಯ ಒಂಟಿತನ ನೀಗಿಗಿಡಗೆಂಟೆಗಳ ಹಾಡಿಗೆ ಹೆಜ್ಜೆಯಾದವರುನನ್ನ ಜನ ಈಗ ಮತ್ತೊಮ್ಮೆ ನಿರಾಶ್ರಿತರು ಈ ಕವಿತೆಯು ನನ್ನ ಬಾಲ್ಯದ ಗೆಳತಿ.ಶಾಲಾ ದಿನಗಳಿಂದ ಲೇ ಅವಳು ನನ್ನ ಎದೆಯೊಳಗೆ ಸೇರಿ ಪಲ್ಲವಿಸುತ್ತಿದ್ದಳು. ನಾನು ಬೆಳೆದ ಪರಿಸರದಲ್ಲಿ ಕನ್ನಡದ ನುಡಿಗಟ್ಟುಗಳು, ಜನರಾಡುವ ಮಾತಿನ ಲಯಗಳು ಎಲ್ಲವೂ ಸೇರಿ ಪದಗ ಳು ಜೀವ ತಳೆದು,ಹೊಚ್ಚ ಹೊಸಬಳಾದ ಕವಿತೆ ನನ್ನ ಸಂಗಾತಿಯಂತೆ ಕಾಲೇಜಿಗೆ ಬಂದಾಗಲೂ ನನ್ನೊಳಗೆ ಪ್ರೌಢವಾಗುತ್ತ ಬಂದವಳು. ಆದರೆ ಎಂದು ಅಕ್ಷರ ರೂಪದಲ್ಲಿ ನನ್ನ ಭಾವನೆಗಳಿಗೆ ಸಾಕ್ಷಿಯಾದವಳಲ್ಲ. ಆದರೆ ಜಗತ್ತನ್ನೇ ತಲ್ಲಣಗೊಳಿಸಿದ ಮಾರಣಾಂತಿಕ ರೋಗ ಕೊರೋನಾ ಸಮಯದಲ್ಲಿ ಖಾಲಿಯಾಗಿ ಕೂತ ಮೆದುಳಿಗೆ ಈ ನನ್ನೊಳಗಿನ ಕವಿತೆ ಮಿಡಿದಳು. ಭಯ,ಆತಂಕಗಳ ನಡುವೆಯೂ ಅಕ್ಷರಗಳ ಕಟ್ಟುವ ಅನಿವಾರ್ಯತೆ ನನಗೂ ಬಂದಿತು.ಮೊದಮೊದ ಲು ನಡೆದ ಸತ್ಯಘಟನೆಗಳನ್ನು ಬರೆಯುವುದು ನನಗೆ ಅನಿವಾರ್ಯವಾಗಿತ್ತು.ಏಕೆಂದರೆ ಕಾವ್ಯದ ದನಿ ಅದು ಎದೆಯ ದನಿಯಾಗಿತ್ತು.ಆದರೆ ಬರೆಯುವಾಗ ಮೂಡಿದ ಹೊಸ ಚೈತನ್ಯ ಪದಗಳಿಂದ ಹೊರ ಹೊಮ್ಮಿದ ಅರ್ಥಶಕ್ತಿ, ಇವುಗಳನ್ನು ನಾನೇ ಬರೆದೆನೆ ಎನ್ನುವಷ್ಟು ಆಹ್ಲಾದಕರ ಅನುಭವ ನನಗಾಗುತ್ತಿತ್ತು.ಆ ಮೊದಲ ಪದದಿಂದ ಬಂದ ಸ್ಪೂರ್ತಿ ಈಗಲೂ ಆ ನನ್ನೊಳಗಿನ ಗೆಳತಿ ಕಾವ್ಯಳನ್ನು ಸಶಕ್ತಳನ್ನಾಗಿ ಮಾಡುತಿದೆ. ಮೊದಲ ಬರವಣಿಗೆ ಆ ನನ್ನ ಪುಳಕಿತ ಭಾವವೇ ನನ್ನೊಳಗಿನ ಆ ಬೆಳೆದ ಕಾವ್ಯ–ಕವಿತೆ ಯಾದಳು ಹಾಡಾದಳು. ಲೇಖನಿ ಹಿಡಿದು ಕುಳಿತರೇ ಆ ಮೊದಲ ಅನುಭವದ ಸ್ಪೂರ್ತಿ ಬದಲಾಗುತ್ತಿಲ್ಲ. ಹೀಗೆ ಮನವನ್ನು ಮುದಗೊಳಿಸಿ ಕವಿತೆಗಳ ಕಟ್ಟುಲು ಅಣಿಗೊಳಿಸಿದ ಆ ಮೊದಲ ಅನುಭ ವಕೆ ನನ್ನದೊಂದು ಮನವಿ.ಮೊದಲ ದಿನ ಇದ್ದ ಆ ಹುರು ಪು ಆಹ್ಲಾದತೆ ಹಾಗೆಯೇಇರಲಿ ಎಂದು ಕೇಳುವೆ. ಮೊದಲ ಕವನದ ಅನುಭವ ನವ್ಯ ಹುರುಪಿನ ಮನೋ ಭಾವ **********************

ಹೂಗಳು ಅರಳುವ ಸಮಯ : Read Post »

ಇತರೆ

ಮೊದಲ ಕವಿತೆಯ ಅನುಭವದ ಸಾರ

ಮೊದಲ ಕವಿತೆಯ ರೋಮಾಂಚನ ಪೂಜಾ ನಾರಾಯಣ ನಾಯಕ            ಅದ್ಯಾಕೋ ಗೊತ್ತಿಲ್ಲ ಬಾಲ್ಯದ ದಿನದಿಂದಲೂ ಕನ್ನಡ ಭಾಷೆ ಮತ್ತು ಸಾಹಿತ್ಯ ಮೇಲೆ ಇತರ ಯಾವ ಭಾಷೆಯ ಮೇಲೂ ಇಲ್ಲದ ಒಲವು, ವಾತ್ಸಲ್ಯ, ಕರುಣೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ರೀತಿಯ ಗೌರವದ ಭಾವ ನನ್ನಲ್ಲಿ ನೆಲೆಯಾಗಿಬಿಟ್ಟಿದೆ. ಅದೇ ಕಾರಣಕ್ಕೋ ಏನೋ ಕವಿತೆಯನ್ನು ಬರೆಯಬೇಕು ಎನ್ನುವ ಸಣ್ಣ ತುಡಿತ ನನ್ನಲ್ಲಿ ಮೊಳಕೆಯೊಡೆದದ್ದು. ಆದರೆ ಶಾಲಾ-ಕಾಲೇಜಿನ ಪುಸ್ತಕದಲ್ಲಿನ ಕವಿಗಳ ಸಾಹಿತ್ಯದ ಹೊರತಾಗಿ ಬೇರಾವ ಹೆಚ್ಚಿನ ಸಾಹಿತ್ಯದ ಬಗ್ಗೆಯೂ ಗೊತ್ತಿಲ್ಲದ ನನಗೆ ಕಾವ್ಯವನ್ನು ರಚಿಸುವುದು ಹೇಗೆ?  ನನ್ನಿಂದ ರಚಿಸಲು ಸಾಧ್ಯವೇ? ಬರೆದರೂ ಸಹ ಪ್ರಕಟಿಸುವುದು ಹೇಗೆ ಮತ್ತು ಎಲ್ಲಿ? ಎನ್ನುವ ಹಲವಾರು ಪ್ರಶ್ನೆಗಳು ನನ್ನಲ್ಲಿ ಸದಾ ಕಾಡುತ್ತಲೇ ಇರುತ್ತಿದ್ದವು. ಪ್ರಶ್ನೆಗಳೆಲ್ಲ ಮನದಲ್ಲಿ ಗಿರಕಿ ಹೊಡೆಯುತ್ತಲೇ ಇದ್ದರೂ ಕೂಡ ಒಮ್ಮೆಯಾದರೂ ಕವಿತೆಯನ್ನು ಬರೆದೇ ತೀರಬೇಕೆನ್ನುವ ಕೌತುಕತೆ ಮಾತ್ರ ಎಂದಿಗೂ ಇದ್ದೇ ಇತ್ತು.  ನಾಗಚಂದ್ರ,  ಮುದ್ದಣ,  ಕುಮಾರವ್ಯಾಸರಂತ ಕನ್ನಡದ ಮೇರು ಕವಿಗಳಿಂದ ಹಿಡಿದು ಕುವೆಂಪು, ಬೇಂದ್ರೆ, ಕಾರಂತರಂತಹ ನವೋದಯ ಕವಿಗಳ ಪದ್ಯಗಳನ್ನ ಶಾಲಾ ದಿನಗಳಲ್ಲಿ ಓದುವಾಗ ಅವರ ಅದ್ಭುತ ಕಾವ್ಯ ರಚನಾ ಕ್ರಮ, ಕಾವ್ಯದ ಸೊಬಗು, ಕಾವ್ಯದಲ್ಲಿ ಅಡಕವಾಗಿರುವ ಅತ್ಯದ್ಭುತ ಶಕ್ತಿ, ಅವರು ಕಾವ್ಯಕ್ಕೆ ಶಬ್ದವನ್ನು ಪೋಣಿಸುವ ಗತಿ ಇವೆಲ್ಲವನ್ನೂ ಸಿಂಹಾವಲೋಕನ ಮಾಡಿ ನೋಡಿದಾಗ, ಸೋಜಿಗವೆಂದೆನಗನಿಸಿ ಅಬ್ಬಾ! ಬಹುಶಃ ಇದೆಲ್ಲ ವಾಗ್ದೇವಿಯ ಕೃಪೆಯೇ ಇದ್ದಿರಬೇಕೆಂದುಕೊಳ್ಳುತ್ತಿದ್ದೆ. ಅದೇ ಕ್ಷಣದಲ್ಲಿ ನನ್ನೊಳಗೆ ಕಾವ್ಯದ ಒಂದೆರಡು ಸಾಲು ಮಿನುಗಿದಂತಾಗಿ ನಾನೇಕೆ ಮಿನುಗಿದ ಈ ಭಾವನೆಯ ಸಾಲುಗಳನ್ನು ಬರವಣಿಗೆಯ ರೂಪಕ್ಕೆ ಕೂರಿಸಬಾರದೆಂದೆನಿಸಿ ಪಟ್ಟಿ – ಪೆನ್ನು ಹಿಡಿದು ಎಷ್ಟು ಬಾರಿ ಏನೇನೋ ತೋಚಿದನ್ನು ಗೀಚಿದ್ದಿಲ್ಲ! ಆದರೆ ಶಾಲಾ-ಕಾಲೇಜು ವಿದ್ಯಾಭ್ಯಾಸದ ನಡುವೆ ಅಷ್ಟೇನು ಕವಿತೆ ಬರೆಯಲು ಸಮಯ ಸಿಗದ ನನಗೆ ಸಮಯ ಸಿಕ್ಕಿದ್ದು ಕೊರೊನಾ ನಿಮಿತ್ತ ಕಾಲೇಜಿಗೆ ರಜೆಕೊಟ್ಟ ನಂತರವೇ. ಹಿಂದಿನ ವರ್ಷ ಸೆಪ್ಟೆಂಬರ್ 3ನೇ ತಾರೀಖು ನಾನು ಬಿಎಸ್ಸಿ ಪ್ರಥಮ ವರ್ಷವನ್ನು  ಓದುತ್ತಿರುವ ಸಂದರ್ಭವದು,   ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ/ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯ ವಿಷಯವಾಗಿ ನನಗೆ ಅಚಾನಕ್ಕಾಗಿ ಪ್ರಾಧ್ಯಾಪಕರಾದ ಹೊನ್ನಪ್ಪಯ್ಯ ಸರ್ ಪರಿಚಯವಾದರು. ಅವರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ತಮ್ಮ ಕವಿತೆಯನ್ನು ಫೋಟೋ ಕ್ಲಿಕ್ಕಿಸಿ ನನ್ನ ವಾಟ್ಸಪ್ಗೆ ಕಳುಹಿಸುತ್ತಿರುತ್ತಿದ್ದರು. ಒಮ್ಮೆ ಅವರ ಸಣ್ಣಕತೆ(ಪಾತ್ರ)ಆಲೋಚನೆ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನ ನನಗೆ ಕಳುಹಿಸಿದ್ದರು. ನಾನು ಓದಿ ಚೆನ್ನಾಗಿದೆ ಸರ್ ಇದಕ್ಕೆ ಅಂತಾನೇ ಪ್ರತ್ಯೇಕ ಆ್ಯಪ್ ಇದೆಯೇ ಎಂದು ಕೇಳಿದಾಗ ಅವರು, ಕೆಲವೊಂದು ಇವೆ, ನಿನ್ನದೇನಾದರೂ ಸೃಜನಶೀಲ ಬರವಣಿಗೆಗಳಿದ್ದರೆ ತಿಳಿಸು ಆಲೋಚನೆ ಗ್ರೂಪ್ಗೆ  ಸೇರಿಸೋಣ ಎಂದು ಅವರು ಹೇಳಿದಾಗ  ಹ್ಹೂ ಎಂದು ಆ ದಿನ ಸುಮ್ಮನಾಗಿದ್ದೆ. ರಾತ್ರಿಯೆಲ್ಲಾ ಪೂರ್ತಿ, ಸರ್ ‘ಗ್ರೂಪ್ಗೆ ಸೇರಿಸೋಣ’ ಎಂದು ಹೇಳಿದ ಮಾತೇ ನನ್ನಲ್ಲಿ ಮರುಕಳಿಸಿ ಲಾಗಾ ಹಾಕುತ್ತಿತ್ತು. ಮರುದಿನ ಮುಂಜಾನೆ ಕವಿತೆ & ಪ್ರಕಟಿಸುವ ಬಗ್ಗೆ ಯಾರ ಬಳಿ ಕೇಳುವುದು ಎನ್ನುವ ಪ್ರಶ್ನೆ ತಲೆದೋರಿದಾಗ ತಟ್ಟನೆ ನೆನಪಾಗುವುದು ಹೊನ್ನಪ್ಪಯ್ಯ ಸರ್. ಅವರೋ, ತಮ್ಮ ಕಾವ್ಯ ಮತ್ತು ಬರವಣಿಗೆಯಷ್ಟೇ ಸರಳ ಹಾಗೂ ಸಹೃದಯಿಗಳು. ಎಷ್ಟು ಮುಕ್ತವಾಗಿ ಕವಿತೆ ಮತ್ತು ಪ್ರಕಟಿಸುವ ಪರಿಯ ಬಗ್ಗೆ ಮಕ್ಕಳಿಗೆ ಮಕ್ಕಳದೇ ಆದ ಒಂದು ಸರಳ ಅರ್ಥೈಸಿಕೊಳ್ಳುವ ಶೈಲಿಯಲ್ಲಿ ಇಂಚಿಂಚನ್ನು ಹೇಗೆ ವಿವರಿಸಿ ಹೇಳಿದರೆಂದರೆ, ನನಗೆ ಒಂದು ಆಪ್ತತೆಯ ಚೌಕಟ್ಟಿನಲ್ಲಿ ಸಿಲುಕಿದಂತೆ ಭಾಸವಾಯಿತು. ಹಾಗೆಯೇ ಒಂದೆರಡು ದಿನದ ತರುವಾಯ ಆಲೋಚನೆ ಸಾಹಿತ್ಯ ಪತ್ರಿಕೆಯ ಬರಹಗಾರ ಕವಿಗಳ ಗುಂಪಿನಲ್ಲಿ ನನ್ನ ಹೆಸರು ಸೇರ್ಪಡೆ ಮಾಡಿದ್ದರು. ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಸಾಹಿತ್ಯ ಲೋಕದಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡಿರುವ ನೂರಾರು ಬರಹಗಾರ ಕವಿಗಳ ಗುಂಪಿನಲ್ಲಿ ನಾ ಕಾಣದ ಒಂದು ಚಿಕ್ಕ ಚುಕ್ಕಿಯಂತಿದ್ದರೂ, ನನಗೊಂದು ಪುಟ್ಟ ಜಾಗ ಅಲ್ಲಿ ಸಿಕ್ಕಿತಲ್ಲ ಎನ್ನುವ ಖುಷಿಯಲ್ಲಿ ಕಲ್ಪನಾ ಲೋಕಕ್ಕೆ ಜಾರಿದ್ದಂತು ಸುಳ್ಳಲ್ಲ. ಆಲೋಚನೆ ಸಾಹಿತ್ಯ ಬಳಗಕ್ಕೆ ಸೇರಿದ ಮೇಲೆ  ಸಂಗಾತಿ ಸಾಹಿತ್ಯ ಪತ್ರಿಕೆಯ ಪರಿಚಯವೂ ಅಲ್ಲೇ ಆಗಿ ನನ್ನ ಮೊದಲ ಕವನ ‘ಕರುಣಾಮಯಿ’  ಸಂಗಾತಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕವಿತೆ ಪ್ರಕಟವಾದಾಗ, ಕವಿತೆಯನ್ನು ಎಲ್ಲರೊಟ್ಟಿಗೆ ಹಂಚಿಕೊಂಡಾಗ ಎಲ್ಲರ ಉತ್ತೇಜನ ಪೂರ್ವಕ ಮಾತು ನನ್ನಲ್ಲಿ ಹೊಸ ಭರವಸೆಯನ್ನು ನನ್ನೆಡೆಗೆ ಕೈ ಬೀಸಿ ಕರೆದಂತಿತ್ತು. ಆ ಪದ್ಯದ ನಾಲ್ಕನೇ ಪ್ಯಾರಾ ಇಂತಿದೆ…. ಕೂಡಿಟ್ಟ ಕಾಸಿನಲಿ ಶಾಲೆಗೆ ಪೀಜು ತುಂಬಿ ತನ್ನ ಹರುಕು ಸೀರೆಯ ಲೆಕ್ಕಿಸದೆ ನನಗೊಂದು ಹೊಸ ಅಂಗಿಯ ಕೊಡಿಸಿ ದೊಡ್ಡ ಅಧಿಕಾರಿಯ ಸ್ಥಾನದಲಿ ತಾ ಕೂಸ ನೋಡಬೇಕೆಂದು ಆಸೆಯಿಂದ ಕಾಯುತ್ತ ಕುಳಿತವಳು ಕರುಣಾಮಯಿ ನನ್ನಮ್ಮ. ಈ ಸಾಲುಗಳನ್ನು ಹೇಳಿ ಹರ್ಷ ವ್ಯಕ್ತಪಡಿಸಿ ಹಾಗೆಯೇ ಕವಿತೆಯ ಬಗ್ಗೆ, ಕವಿಯ ಕಾವ್ಯದ ವಕ್ರತೆ ಯಾವ ರೀತಿ ಇರಬೇಕು ಎನ್ನುವುದರ ಕುರಿತು ತುಂಬಾ ಸುಶ್ರಾವ್ಯವಾಗಿ, ನನ್ನ ಕಾಲೇಜಿನ ಸಹಪಾಠಿ ನಾಗಶ್ರೀಯ ತಂದೆ ವಿನಾಯಕ ಹೆಗಡೆಯವರು  ಕರೆ ಮಾಡಿ ಹೇಳಿ ನನಗೆ ಪ್ರೇರಣೆ ನೀಡಿದಾಗ, ಮುಂದೆ ನಾ ಇನ್ನೂ ಚೆನ್ನಾಗಿ  ಬರೆಯಬೇಕು ಎನ್ನುವ ಆಸೆ ನನ್ನನ್ನ ತನ್ನೆಡೆಗೆ ಬರಸೆಳೆದಿತ್ತು. ಈ ಎಲ್ಲ ಘಟನೆಗಳು ಎಂದಿಗೂ ಅಚ್ಚಳಿಯದೇ ಉಳಿಯುವಂತವು ಯಾಕೆಂದರೆ ಜೀವನದಲ್ಲಿ ‘ಮೊದಲ’ ಎನ್ನುವಂತಹವೆಲ್ಲ ಎಂದಿಗೂ ರೋಮಾಂಚನವೇ!ಅದಕ್ಕೆ ಕವಿತೆಯೇನು ಹೊರತಾಗಿಲ್ಲ. **************************

ಮೊದಲ ಕವಿತೆಯ ಅನುಭವದ ಸಾರ Read Post »

ಇತರೆ

ಮೊದಮೊದಲ ತೊದಲುಗಳು

ಮೊದಲ ಕವಿತೆಯ ರೋಮಾಂಚನ -ಶೋಭಾ ನಾಯ್ಕ‌ .ಹಿರೇಕೈ ಕಂಡ್ರಾಜಿ.‌ ನಾನಾಗ ಶಿಕ್ಷಕರ ತರಬೇತಿ ಪಡೆಯುತ್ತಿದ್ದ ದಿನಗಳು. 99ರ ಕಾಲಘಟ್ಟ. ಹಾಸ್ಟೆಲ್ನಿಂದ  ಎಲ್ಲ ಸೋದರಿಯರಿಂದ  ಬೀಳ್ಕೊಂಡು  ಹೊಸ ಊರು, ಹೊಸ ಸ್ಥಳ, ಹೊಸ ಬಾಡಿಗೆ ಮನೆಯಲ್ಲಿ ಒಂಟಿತನ ಕಾಡಿದಾಗ ನನಗೆ ಈ ಕವಿತೆಗಳ ನಂಟು ಬೆಳೆಯಿತು. ತೋಚಿದ್ದನ್ನು  ಗೀಚಲು ಪ್ರಾರಂಭಿಸಿದ್ದು ಆಗಲೇ. ಮತ್ತೆ ಆಗಲೇ ಕಾರ್ಗಿಲ್ ಯುದ್ಧದ ಸಂದರ್ಭ ಕೂಡ. ಗಡಿ ಮತ್ತು ಬಂದೂಕಿನ ಗುಂಡು ನನ್ನನ್ನು ಆಗಲೇ ಕಾಡಲು ಪ್ರಾರಂಭಿಸಿದ್ದು. ಆಗ ಯುದ್ಧದ ಬಗ್ಗೆ ಬರೆದ ಮೊದಲ ಸಾಲುಗಳು ಇಂದಿಗೂ ನೆನಪಿವೆ.‌..  “ಬಂದ ಭಿಕ್ಷುಕರಿಗೆ ಮನೆಯ ಜಗುಲಿಯ ಬಿಟ್ಟು,  ಅಂಗಳವೇ ನಮಗೆ  ಗತಿ ಯಾದ  ಸ್ಥಿತಿಯನ್ನು  ಮರೆತಿಲ್ಲ ಸ್ವಾಮಿ”  “ಮೋಸ ಹೋಗಲಾರೆವು ಮತ್ತೆ  ಬೆನ್ನ ಹಿಂದೆ ಇರಿವವಗೆ  ಕಲಿತಿರುವ ಪಾಠವದು  ಮರೆಯದಾಗಿದೆ  ನಮಗೆ”  ಎಂದು ಬರೆದಿದ್ದೆ….  ಎನ್ನುವಂಥ ಸಾಲುಗಳು ವಿದ್ಯಾರ್ಥಿ ಜೀವನದ ಬಿಸಿ ರಕ್ತದಲ್ಲಿ ಬಂದಿದ್ದು ಅಚ್ಚರಿಯೇನಲ್ಲ. ಆದರೀಗ ಯುದ್ಧದ ಜಾಗದಲ್ಲಿ ಬುದ್ಧ ಬಂದು ತಲುಪಿದ್ದಾನೆ ನನ್ನೊಳಗೆ.  ಕ್ರೌರ್ಯದ ಜಾಗದಲ್ಲಿ ಮನುಷ್ಯತ್ವ ,ಮಾನವೀಯತೆ ಮನೆ ಮಾಡಿದೆ. ಯುದ್ಧದ ಜಾಗವನ್ನು ಶಾಂತಿ ಆವರಿಸಿದೆ. ವಿದ್ಯಾರ್ಥಿ ಜೀವನದ  ಹೊತ್ತಿನಲ್ಲೇ  ಮತ್ತೊಂದು ಕವಿತೆ ನನ್ನಲ್ಲಿ ಮೂಡಿತ್ತು. ” ನಾನೇ ಗಡಿಯಾಗಿ, ನಾನೇ ಕಾಶ್ಮೀರವಾಗಿ, ನಾನೇ   ಕಣಿವೆಯಾಗಿ  ಒಂದು  ಕವಿತೆ  ಬರೆದಿದ್ದೆ” .  ಅದು  ಪೂರ್ತಿಯಾಗಿ  ಮೊದಲ  ಕವಿತೆಯ  ನೆನಪಾಗಿ  ಇನ್ನೂ  ನನ್ನ  ಡೈರಿ  ಪುಟದಲ್ಲಿ  ಹಾಗೇ  ಉಳಿದಿದೆ.  ಮೊದಲು  ಒಂದೆರಡು  ಪ್ರೇಮ  ಕವಿತೆ  ಬರೆದ ಕಾರಣಕ್ಕೆ,  ಹಾಸ್ಟೆಲ್ ನಲ್ಲಿ  ಕವಯತ್ರಿ  ಎಂಬ  ಪಟ್ಟ  ಕೊಟ್ಟು ;  ಪಟ್ಟಾಭಿಷೇಕ   ನಡೆದಿತ್ತಾದರೂ  ಆ  ಕವಿತೆಯ  ಸಾಲುಗಳು  ಇಂದು  ನೆನಪಿಗೆ  ಬರುತ್ತಿಲ್ಲ.    ಹಾಗಾಗಿ ನನ್ನ ಕಾಶ್ಮೀರವೆಂಬ ಬೆಡಗಿಗೆ ಎಂಬ ಕವಿತೆ ನಾ ಮರೆಯದ ನನ್ನ ಮೊದಲ ಕವಿತೆ.  ಆ ಕವಿತೆ ಹೀಗೆ ತನ್ನೊಡಲ ಬಿಚ್ಚಿಕೊಳ್ಳುತ್ತದೆ..  ಕೇಳುತ್ತಲೇ ಇದ್ದೇನೆ  ಎಷ್ಟೋ ವರ್ಷಗಳಿಂದ  ನೀನವರಿಗೆ ಬೇಕಂತೆ  ನೀನಿವರ  ಪಾಲಂತೆ !  ಅದಕ್ಕಾಗಿಯೇ ಅಲ್ಲವೇ  ದಿನವೂ ಗುಂಡಿನ ಮಳೆ  ನಿನ್ನ ಮನೆಯಂಗಳದಲ್ಲಿ  ಎಷ್ಟೊಂದು  ಕನಸಿದೆಯೋ ನಿನಗೆ  ನೀನಿಷ್ಟ ಪಟ್ಟವರ  ಜೊತೆ  ಬದುಕಬೇಕೆಂದು  ಅಲ್ಲಿ ಹಸಿರು   ಹುಟ್ಟಿಸಬೇಕೆಂದು  ಆದರೆ, ನಿನ್ನ ಕೇಳುವವರಾರು?  ನನಗೊಂದೇ ಭಯ  ಅವರಿಬ್ಬರ ಗುಂಡು  ನಿನ್ನೊಡಲನ್ನೇ  ಸುಟ್ಟು  ಬಿಟ್ಟರೆ ಹುಟ್ಟಬಹುದೇ  ಮತ್ತಲ್ಲಿ  ಹಸಿರು ?  ಕುರುಡು ಗಂಡನ  ಕೈಹಿಡಿದು ಮಕ್ಕಳು ಕುರುಡಾದರೆ ನಿನ್ನ ಗತಿ ಏನು?  ಅದಕ್ಕೆ  ಹೇಳಿಬಿಡು ಒಮ್ಮೆ ಮೌನ ಮುರಿದು, ಯಾರು ಬೇಕು ನಿನಗೆ?  ಅವರೋ? ಇವರೋ ? ಕವಿತೆ  ಬರೆದಾಗ  ಸಹಜ  ಖುಷಿ,  ಸಹಜ  ನಿರಾಳ.  ಮನದಲ್ಲೊಂದು  ಆ  ಕ್ಷಣದ  ಧನ್ಯತೆ.     ಪ್ರೇಮ  ಕವಿತೆ  ಬರೆವ  ವಯಸ್ಸಲ್ಲಿ  ಯುದ್ಧ,  ಗಡಿ ,  ದೇಶವೆಂದು  ಯೋಚಿಸಿದ್ದಕ್ಕೆ  ಈಗಲೂ  ಹೆಮ್ಮೆ.    ಈ  ಕವಿತೆಗಳ  ಬರೆದಿಟ್ಟ  ಡೈರಿಯನ್ನು  ನನ್ನ  ಗೆಳತಿಯೊಬ್ಬಳು,  ಅವಳ  ಗೆಳತಿಗೆ  ಕೊಟ್ಟು …. ನಮ್ಮ  ಜಿಲ್ಲೆಯ  ಹಿರಿಯ  ಸಾಹಿತಿಗಳಾದ  ವಿಷ್ಣು  ನಾಯ್ಕ  ಸರ್ ಗೆ  ತಲುಪಿಸಿ,  ನಿನ್ನೊಳಗೊಬ್ಬ  ಸಶಕ್ತ  ಕವಿಯತ್ರಿಯಿದ್ದಾಳೆ.   ಅವಳಿಗೆ  ಹಾಲು,  ಹಾರ್ಲಿಕ್ಸು  ಕೊಡುತ್ತಿರು. ಅಭಿನಂದನೆಗಳು  ನಿನ್ನೊಳಗಿನ  ಕವಯತ್ರಿಗೆ  ಎಂಬ  ಸಾಲುಗಳನ್ನು   ಆಶೀರ್ವಾದ  ಪೂರ್ವಕ  ಎಂಬಂತೆ  ಬರೆಸಿಬಂದು   ಕೊಟ್ಟ  ಆ  ಘಳಿಗೆ  ನಿಜಕ್ಕೂ  ಅವಿಸ್ಮರಣೀಯ.  ನಾನು  ಕವಯತ್ರಿ  ಅಂತ   ಅನ್ನಿಸಿತ್ತು  ಆ  ದಿನ.  ಮತ್ತೆ  ಆ  ದಿನಗಳೆಲ್ಲ  ನನಗೆ   ಸಮಾಜದ  ಆಗು    ಹೋಗುಗಳೇ  ಕವಿತೆಯ  ವಸ್ತು.   ಪ್ರಾರಂಭದ  ದಿನದಲ್ಲಿ  ಬರೆದ  ಮತ್ತೊಂದು  ಕವಿತೆಯ  ತುಣುಕು..  ಉಗ್ರಗಾಮಿಗಳಿಗಾಗಿ  ಬರೆದದ್ದು.. ಬದಲಾಗು ‘ ನೀ ಮೊದಲು ಮೆಟ್ಟಿದ್ದ  ಈ ಮಣ್ಣ ಕಣವನ್ನೇ..  ನೀ ಮೊದಲು ನೋಡಿದ್ದು  ಹೆತ್ತೊಡಲ ಮೊಗವನ್ನೇ..  ನೀ ಮೊದಲು ಕುಡಿದದ್ದು  ತಾಯ  ಮೊಲೆ  ಹಾಲನ್ನೇ… ಆದರೂ  ನೀನೇಕೆ  ಮಗುವಾಗಲಿಲ್ಲ ??   ಎಂಬ  ಕವಿತೆ ನನ್ನ  ವಿದ್ಯಾರ್ಥಿ ಜೀವನದ  ಮೊದ  ಮೊದಲ  ಕವಿತೆಗಳು.  ಮೊದಲ  ಕವಿತೆಯ  ಪುಳಕ  ಬರೆಯಲು  ಹೋಗಿ  ಕೆಲವು  ಕವಿತೆಗಳ ನಿಮ್ಮೆದುರಿಗಿಟ್ಟೆ.  ಕಾರಣವಿಷ್ಟೇ..  ಬಹಳ  ವರುಷಗಳ  ಮೇಲೆ  ಹಳೆ  ಡೈರಿಯ  ಪುಟ  ತೆರೆದಾಗ   ಇನ್ನೂ  ವರೆಗೂ  ಎಲ್ಲೂ  ಕಾಣಿಸಿ  ಕೊಳ್ಳದ  ಕವಿತೆಗಳು ,   ನಮಗೂ  ಎಲ್ಲಾದರೂ  ಪುಟ್ಟ  ಜಾಗ  ಕೊಡು,  ಅಬ್ಬಲಿಗೆಯಲ್ಲಿ  ( ಅವ್ವ  ಮತ್ತು  ಅಬ್ಬಲಿಗೆ  ,   ನನ್ನ  ಮೊದಲ  ಸಂಕಲನ  )   ನಮ್ನನ್ನೇಕೆ  ಬಿಟ್ಟೆ  ಎಂದು  ಕೇಳಿದ  ಇನಿ  ದನಿಯ  ಮೇಲೆ  ಮಮಕಾರದ  ಮುದ್ದುಕ್ಕಿತು.  ನನ್ನ  ಭಾವ  ಕೋಶದಲ್ಲಿ  ಸದಾ  ಹೊಸದಾಗೆ  ಇರುವ   ಮೊದಲ  ಕವಿತೆಗಳು  ಕೊಟ್ಟ   ಖುಷಿ,  ಸಂಭ್ರಮ,  ಮತ್ತು  ಕವಿ ಎಂಬ  ಪಟ್ಟವನ್ನು  ನಾ  ಎಂದು  ಮರೆಯಲಾರೆ.

ಮೊದಮೊದಲ ತೊದಲುಗಳು Read Post »

ಇತರೆ

ಮೊದಲ ಕವಿತೆಯ ಮಧುರ ಅನುಭವ

ಮೊದಲ ಕವಿತೆಯ ರೋಮಾಂಚನ ಎಂ.ಜಿ.ತಿಲೋತ್ತಮೆ ಕವಿತೆಯೆಂದರೆ ಕೇವಲ ಹಾಳೆ, ಲೇಖನಿ, ಪದ,ಸಾಲು ವಸ್ತುವಿನ ಆಯ್ಕೆಯಿಂದ  ಕೂಡಿರಲು  ಸಾಧ್ಯವಿಲ್ಲ. ನಮ್ಮ ಅನುಭವಕ್ಕೆ ಬರುವ ಎಲ್ಲಾ ಭಾವನೆಯನ್ನು ಕವಿತೆಯಲ್ಲಿ ಕಾಣಬಹುದು. ಮಾತಿನಲ್ಲಿಹೇಳಲಾಗದ ಪ್ರೇಮ,ವಿರಹ,ದುಗುಡ,ಹತಾಶೆ,  ಹೀಗೆ  ಎಲ್ಲವೂ ಕವಿತೆಯಲ್ಲದೇ ಬೇರೆ ಯಾವುದೇ ಮಾರ್ಗ ದಿಂದ ಹೇಳಿಕೊಳ್ಳುವುದು ಸುಲಭವಲ್ಲ.  ಕವಿತೆಯ ಹುಟ್ಟು , ಹರಿವು ಅದು ನಾವು ಅಂದುಕೊಂಡ  ಶುಭ ಘಳಿಗೆ ಅಥವಾ ಪುರೊಸೊತ್ತಿನ ಸಮಯದಲ್ಲಿ ಮನದ ಭಾವನೆಯ  ಕಿಂಡಿಯಿಂದ ನುಗ್ಗಿ ಬರುತ್ತದೆ ಎಂದು ಹೇಳಲಾಗದು. ಅದು ನೀಲಿ ಆಕಾಶದಲ್ಲಿ ಹಾರುವ ಹಕ್ಕಿಯ ಹಾಗೆ ಸ್ವತಂತ್ರತೆ ಬಯಸುತ್ತದೆ. ಕವಿತೆ ಬರೆಯಲು ಏಕಾಂತ ಬೇಕು ಎನ್ನುತ್ತಾರೆ ಆದರೆ ನನಗೆ ನನ್ನ ಒಂಟಿತನದ ಏಕಾಂತತೆಯೆ  ನನ್ನಲ್ಲಿರುವ ಕಾವ್ಯ ಹೃದಯ ಹುಡುಕಲು ಸಾಧ್ಯವಾಯಿತು. ನನಗೆ ಸಾಹಿತ್ಯ ಬಗ್ಗೆ ಒಲವು  ಸಾಧಾರಣ ಹೈಸ್ಕೂಲು ಮುಗಿಸುವ ಮೊದಲೇ ಮೂಡಿದ್ದರೂ ನನ್ನ ಮೊದಲ ಕವಿತೆ  ಹೃದಯದ ತೋಟದಲ್ಲಿ ಅರಳಿ  ಸುಗಂಧ ಹಬ್ಬಿಸಿದ್ದು  ದ್ವಿತೀಯ ಪಿಯುಸಿ ಮುಗಿಸಿದ ನಂತರವೇ. ನನ್ನ ಬರೆಹಗಳನ್ನು ಮೊದಲು ತೋರಿಸುತ್ತಿದ್ದು ನನ್ನ ಅಕ್ಕನ ಬಳಿ. ಅವಳು ಕನ್ನಡಲ್ಲಿ ಪದವಿ,ಎಂ.ಎ ಮುಗಿಸಿದ್ದು ಮತ್ತು ಕವಿತೆ ಕುರಿತು ಆಸಕ್ತಿಯಿದ್ದ ಕಾರಣವೂ ಇರಬಹುದು ಪ್ರೀತಿಯಿಂದಲೇ ಕೇಳುತ್ತಿದ್ದಳು. ಅವಳ ಸ್ಪೂರ್ತಿದಾಯಕ ನುಡಿಗಳೇ ಬರವಣಿಗಗೆ ಶಕ್ತಿಯಾಯಿತು. ಯಾವ ವಿಷಯ ಕುರಿತು  ಕವಿತೆ ಬರೆಯಬೇಕು ಎನ್ನುವಾಗಲೆಲ್ಲ ನನಗೆ ಕೂಡಲೇ ಹೊಳೆಯುವುದು  ಅಮ್ಮನ ಕುರಿತು. ಹಾಗೆ ನಾನು   ಬರೆದ ಮೊದಲ ಕವಿತೆಯು ಅಮ್ಮನ ಬಗ್ಗೆ. ಅಮ್ಮ ಅಮ್ಮ ಎಂದರೆ .. ನೋವ ಮರೆಸುವ ಮಡಿಲು ಮಮತೆಯ ಕಡಲು ಅವಳ ನಿತ್ಯ ಧೈರ್ಯದ ಕಂಗಳಲ್ಲಿ ಅಳುಕಿನ ಬಡಿತ ಯಾರಿಗೂ ಕಾಣಲ್ಲ ಮನೆಗೆ ಸೋರದ ಹೊದಿಕೆಯಾಗಿ ಎಲ್ಲರ ಕನಸಿಗೆ ಬಣ್ಣ ಬಳಿಯವಳು ಬಡತನದ ಗಂಜಿಗೆ ಹೋರಾಟ ಮಾಡವಳು ಸವೆದ ಹಸ್ತದ ನೋವು ತುಂಬಿ ತುಳುಕುವ ಸಿರಿತನದ ಕೋಣೆಗೆ ಆ ಬೆವರು ಕಾಣದು ಅವಳು ಬಾಡದ ಹೂವಂತೆ ನವಿರು ಮುಳಗದ ರವಿಯಂತೆ ಬೆರಗು ಸಮಯದ ಜೊತೆ ಕುಗ್ಗಿ ಮತ್ತೆ ತನ್ನ ಹಾದಿಯಲ್ಲಿ ಬೆಳಕಿನ ಕಿಂಡಿಯಿಂದ  ಹಾರುವಾಗ ಉತ್ಸಾಹ ನಗೆ ಬೀರಿದವಳು ಕೋಟಿ ದೇವರಿಗೆ ಸೆರಗ ತುದಿಯಲ್ಲಿ ಹರಿಕೆ ಕಟ್ಟಿ ನನ್ನ ಹಡೆದವಳು.. ಮುಗಿಯದ ಸಾಲುಗಳಲ್ಲಿ ಅಮ್ಮ ಮತ್ತೆ ಮತ್ತೆ ನಿನಗೆ ಮಗುವಾಗುವೆ.. ಈ ಕವಿತೆ ಶಶಾಂಕ ಎನ್ನುವ ಮ್ಯಾಗಜಿನಲ್ಲೂ ಪ್ರಕಟವಾಯಿತು. ಪಾಸಾಗುತ್ತೀನೋ ಇಲ್ಲವೋ ಎಂದುಕೊಂಡ ವಿಧ್ಯಾರ್ಥಿಗೆ ರಾಂಕ್ ಬಂದಷ್ಟು ಖುಷಿಯಾಯಿತು. ಅದರ ಸಂಪಾದಕರಾದ ಚಿದಾನಂದ ಕಡಾಲಸ್ಕರ ನಿನಗೆ ಬರೆಯುವ ಸಾಮರ್ಥ್ಯವಿದೆ ಹೀಗೆ ಬರೆಯುತ್ತಾ ಇರೆಂದು ತುಂಬಾ  ಪ್ರೋತ್ಸಾಹ ನೀಡಿದ್ದರು. ನಂತರ ಪದವಿ ಓದಿನ ಜೊತೆಗೆ ಅದೇ ಮ್ಯಾಗಜಿನಗಳಿಗೆ ಬರೆಯುವುದು ಹವ್ಯಾಸವಾಯಿತು. ಆಗೆಲ್ಲಾ ಈಗ ಇರುವ ಹಾಗೆ ಮೊಬೈಲ್ ಅಥವಾ ಲ್ಯಾಪ್ಟಾಪ  ಉಪಕರಣ ಬಳಿಸಿ ಬರೆದು ಕಳುಹಿಸುವುದು  ಅಸಾಧ್ಯವಾದ ಮಾತು . ಹಾಳೆಗಳಲ್ಲೇ ಬರೆದು ಪೊಸ್ಟಗಳ ಮೂಲಕ ಕಳುಹಿಸಬೇಕಿತ್ತು. ಕತೆ,ಕವನ,ಅಂಕಣ,ಕಾದಂಬರಿ ಹೀಗೆ ಸಂಚಿಕೆ ರೂಪದಲ್ಲಿ ಬರೆಯುತ್ತಾ ಹೋದೆ. ಎಷ್ಟೊ ಸಲಹೆ,ತಿದ್ದುಪಡಿಗಳು ಇನ್ನಷ್ಟು ಬರೆಯಲು ಸ್ಪೂರ್ತಿ ನೀಡಿತು. ಬರೆದ ಕವಿತೆಯೆಲ್ಲ ಒಂದೊಂದು ಸಲ ಯಾವುದೋ ಪಟ್ಟಿಯ ಕೊನೆ ಹಾಳೆಯಲ್ಲಿ ಉಳಿದುಕೊಳ್ಳುತ್ತಿತ್ತು. ಇದರಿಂದ ಹೇಗಾದರೂ ಕವನ ಸಂಕಲನ ಹೊರ ತರಬೇಕೆಂಬ ಹಟ ಇನ್ನಷ್ಟು ಹೆಚ್ಚಾಯಿತು. ಮನೆಯಲ್ಲಿ ಸಾಕಷ್ಟು ವಿರೋಧ ಕಂಡು ಬಂದರೂ ಹೆದರದೆ ದ್ವಿತೀಯ ಬಿ.ಎ.ವಿರುವಾಗ ಸಂಕಲನ ಬಿಡುಗಡೆ ಮಾಡಿದೆ. ನನ್ನ ಕವಿತೆಗಳನ್ನು ತಿದ್ದಿ ತೀಡಿ ಹದವಾಗಿ ಮೂಡಿಬರಲು ನನ್ನ ಗುರುಗಳಾದ ಶ್ರೀಧರ ಶೇಟ್ ಶಿರಾಲಿಯವರು ಕಾರಣೀಕರ್ತರು. ಇವೆಲ್ಲ ಮೊದಲ ಕವಿತೆಗೆ ಸಿಕ್ಕ ಪುಟ್ಟ ಪುಟ್ಟ ಫಲಗಳು. ಎಷ್ಟೋ ಭಾರಿ ನನ್ನ ಸ್ನೇಹಿತರು ಕೇಳಿದ್ದಾರೆ ಬಿ‌.ಎಯಲ್ಲೂ  ಇಂಗ್ಲೀಷನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೀಯ ಹಾಗೆ ಬಿ.ಇಡ್ ನಲ್ಲೂ ಇಂಗ್ಲೀಷನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೀಯಾ ಈ ಕವಿತೆ ಬರೆಯುವ ಆಸಕ್ತಿ ಹೇಗೆ ಅನ್ನುತ್ತಿದ್ದರು. ಆಗ ನಾನು ಹೇಳಿದ್ದಿಷ್ಟೇ  “ಇಂಗ್ಲೀಷ ಜೀವನ ಸಾಗಿಲು ಒಂದು ಭಾಗ .ಈಡೀ ಬದುಕು ತುಂಬಾ ಕನ್ನಡ ತುಂಬಿರುತ್ತೆ. ” ಅದಕ್ಕೆ ಹೇಳುವುದು ಮಾರ್ಡನ್ ಬಟ್ಟೆ ತೊಟ್ಟ ತಕ್ಷಣ ಅವರು ಕೆಟ್ಟು ಹೋಗಿದ್ದಾರೆ ಅಂತ ಹೇಳಿಲಕ್ಕೆ ಆಗಲ್ಲ. ಹಾಗಂತ ಸಂಪ್ರದಾಯ ಬಟ್ಟೆ ತೊಟ್ಟಿದ್ದರೆ  ಅಂದ ಮಾತ್ರಕ್ಕೆ ಏನು ತಿಳಿಯದ ಮುಗ್ಧರು ಅಂತ ಪ್ರತಿಪಾದಿಸೋಕ್ಕೆ ಆಗೋದಿಲ್ಲ. ನಾವು ಸಂಪೂರ್ಣವಾಗಿ ತಿಳಿಯದೆ  ಯಾವುದರ ಬಗ್ಗೆಯೂ ಜಡ್ಜ ಮಾಡಲಿಕ್ಕೆ ಹೋಗಬಾರದು.  ಈಗೀಗ ಒಂದು ಕವಿತೆ ಬರಿಯಬೇಕಾದರೆ ಬಹಳ ಪ್ರಬುದ್ಧವಾಗಿ ಚಿಂತನೆ ಮಾಡಬೇಕು. ವಸ್ತು ಆಯ್ಕೆ ,ಮೆಚ್ಚುಗೆಗೆ ಪಾತ್ರ ವಾಗುವಂತೆ ಬರೀಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಉದ್ದೇಶ ಮತ್ತು ಚಿಂತನೆ ಇಲ್ಲದಿದ್ದರೆ ಕಾವ್ಯದ ದಿಕ್ಕು ಬದಲಾಗಿ ಬಿಡುತ್ತದೆ. ಮೊದಲ ಕವಿತೆಯೆಂದರೆ ಈ ಮೇಲಿನ ಗುಂಪಿಗೆ ಸೇರಿರುವುದಿಲ್ಲ. ಬೆಳಿಗ್ಗೆಯಿಂದ ಬಿಸಿಲು ಧಗ ಧಗಿಸುತ್ತಿದ್ದರೂ  ಬಾನಿಗೆ ಭುವಿ ಮೇಲೆ  ಒಮ್ಮಲೆ ಪ್ರೀತಿ  ಉಕ್ಕಿ ಬಂದರೆ ಸುರಿಯುವ ಹನಿಯಂತೆ ಗೊತ್ತಗದಂತೆ ಇಳಿದು ಬಿಡುತ್ತದೆ. ಅದಕ್ಕೆ ಹೊತ್ತು, ಸ್ಥಳ, ವಿಷಯ ಬೇಡ. ತೋಚಿದೆಲ್ಲಾ ಗೀಚುತ್ತಾ ಹೋಗುತ್ತೇವೆ. ನಮ್ಮ ಸಮಾನ ವಯಸ್ಕರೇ ಪ್ರಶಂಸಿದರೂ ಪದ್ಮಶ್ರೀ, ಜ್ಞಾನ ಪೀಠ ಪ್ರಶಸ್ತಿ ಸಿಕ್ಕಷ್ಟೇ ಖುಷಿಯಾಗುತ್ತೆ. ಈ ರೀತಿ ನನಗೂ ಆಗಿದೆ. ಎಷ್ಟೋ ಭಾರಿ ಕವಿತೆ ಬರೆದು ಯಾರಾದರೂ ಸಿಕ್ಕರೆ ಅವರಿಗೆ ಹೇಳಿ ಹೇಗಿದೆ ಎಂದು  ಕೇಳುವ ಕೌತುಕದಲ್ಲಿ ಇರುತ್ತಿದ್ದೆ. ಈಗ ಓಡಾಡುವ  ಹಾಗೆ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್, ಗಳು  ಬಳಸುವುದು ಆಗ ಬಹಳ ಅಪರೂಪವೇ. ಹಾಗೇ ಬಳಸಲು ಅಷ್ಟೇ ದೊಡ್ಡ ಮೊಬೈಲ್ ನನ್ನ ಬಳಿ ಇಲ್ಲವಾಗಿತ್ತು. ಹಾಗಾಗಿ ಕವಿತೆ ಕೇಳುಗರನ್ನು ಮುಖಾಮುಖಿಯಾಗಿ ದಾಟಿಸಬೇಕಾಗಿತ್ತು. ನಾನು ಕವಿತೆಗಳನ್ನು ನನದೇ ಡೈರಿಯಲ್ಲೇ ಬರೆದಿಡುತ್ತಿದ್ದೆ. ಚಿಕ್ಕ ಚಿಕ್ಕ ನುಡಿಮುತ್ತುಗಳು, ಹನಿಗಳು ಗೀಚುತ್ತಾ  ನಂತರ ದೊಡ್ಡ ಕವಿತೆ ಬರೆಯಲು ಕಲಿತೆ. ಬರೆಯುವುದಕ್ಕಿಂತ ಹೆಚ್ಚು ಓದಬೇಕು. ಓದಿದ್ದಷ್ಟು ಮನಸ್ಸು, ಬುದ್ಧಿ ಹರಿತವಾಗುತ್ತದೆ ಹೀಗೆ ತಿಳಿದವರ ಮಾತುಗಳಿಂದಲೇ ಬರವಣಿಗೆ ಶೈಲಿಗಳು ಬದಲಾಗುತ್ತಾ ಬಂದಿತ್ತು. ಕವಿತೆಯೆಂದರೇನು ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಪ್ರೀತಿ,ಮಮತೆಯ ಜೋಗುಳ,ನೇರ ಧ್ವನಿ,ಪ್ರತಿಧ್ವನಿ, ಭಾವನೆಗಳ ರೂಪ  ಇತ್ಯಾದಿ…. ಅವರವರ ಪಾಲಿಗೆ ಅದು ಬಿಟ್ಟಿದ್ದು.  ಕವಿತೆ ಸಾಗರದಷ್ಟು ಪ್ರೀತಿಯ ಹಂಚುತ್ತಿರಬಹುದು ಇಲ್ಲವೇ  ಕಂಬನಿ,ಅಸಾಯಕತೆ, ಅಮಾನವೀಯಕ್ಕೆ ಪ್ರತಿಧ್ವನಿಸುವ ಬಲವು ಬರಬಹುದು. ಬೇಂದ್ರೆಯವರು ಹೇಳುವಂತೆ ” ಎಲ್ಲಿಯವರಿಗೂ ಕವಿತೆ ಕೇಳಬೇಕೆಂಬ,ಕುತೂಹಲ,ಜಿಜ್ಞಾಸೆ, ಆ ಸಮಾಜದಲ್ಲಿ ಇರುತ್ತದಯೋ ಅಲ್ಲಿಯವರೆಗೆ ಕವಿಯ  ಜೀವನ ,ಕಾವ್ಯ ಸಾರ್ಥಕವಾಗುತ್ತದೆ.” ಬರಹಗಳನ್ನು ವ್ಯಕ್ತಿಯ ವ್ಯಯಕ್ತಿಕ ಜೀವನದಿಂದ ಅಳೆಯಬಾರದು. ಕವಿತೆಗೆ  ಸಮಾಜವನ್ನೇ ಬದಲಾಯಿಸುವ ಶಕ್ತಿ ಇದೆ. ಯಾಕೆಂದರೆ ಕೆಲವೊಮ್ಮೆ ವ್ಯಕ್ತಿ ಹೇಳಲು  ಹೊರಟುತ್ತಿರುವ ವಿಷಯ ಉತ್ತಮ ವಿಚಾರ ವಾದರೂ  ಬದುಕನ್ನು ಅವನ ನಿಲುವಿನ ವಿರೋಧ ಸಂಧಾನಕ್ಕೆ ಒಪ್ಪಿಸುವುದು ಸಮಂಜಸಹವಲ್ಲವೆನ್ನುವುದು ನನ್ನ ಅರಿವು. ಮೊದಲ ಕವಿತೆ ಮಧುರ ಅನುಭವ ಅವರವರ ಪಾಲಿಗೆ ಅದು ಅಮೃತ ಘಳಿಗೆವೆಂದೆ ಹೇಳಬಹುದು.

ಮೊದಲ ಕವಿತೆಯ ಮಧುರ ಅನುಭವ Read Post »

ಇತರೆ

ಲಾಲಿಸಿದಳು ಯಶೋಧೆ

ಮೊದಲ ಕವಿತೆಯ ರೋಮಾಂಚನ ವೀಣಾ ಹಂಪಿಹೊಳಿ  ನನ್ನ ಮೊದಲ ಕವನ ಹುಟ್ಟಿದ ಸಮಯ ವಿಚಿತ್ರ ಆದರೂ ಸತ್ಯ ಕೊನೆ ಅಂಕಿಗಳೆಲ್ಲ ೩,೩,೩. (೧೩/೦೩/೨೦೧೩) ಆಗ ನಾನು ದ್ವಿತೀಯ ಎಮ್ ಎ ಕನ್ನಡ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಮಯ.ದಿನವೂ ಸುಮಾರು ೧೧ ಗಂಟೆಗೆ ಕಿಟಕಿಯ ಪಕ್ಕದಲ್ಲಿ ಓದಲು ಕುಳಿತಾಗ  ಕಿಟಕಿಯ ಆಚೆಯಿಂದ ಪಕ್ಕದ ಅಪಾರ್ಟ್ಮೆಂಟನಲ್ಲಿ ಪ್ರತಿದಿನ ೧೨ ಗಂಟೆಗೆ ಮೂರುನಾಲ್ಕು ಮಹಿಳೆಯರು ಕೈಯಲ್ಲಿ ತಿಂಡಿ ಡಬ್ಬ ಹಿಡಿದುಕೊಂಡು ಪುಟ್ಟ ಪುಟ್ಟ ಮಕ್ಕಳ ಹಿಂದೆ ಓಡಾಡಿ ಅವರಿಗೆ ಅಲ್ಲಿ ನೋಡು, ಇಲ್ಲಿ ನೋಡು ,ಎಂದು ಗಿಡದಲ್ಲಿಯ ಪಕ್ಷಿಗಳನ್ನು ತೋರಿಸುತ್ತ ,ಮಗು ಬಾಯಿ ತೆರೆ ಯುವುದನ್ನೇ ಕಾಯುತ್ತ ,ತೆಗೆದ ಕೂಡಲೇ ಒಂದು ತುತ್ತು ಹಾಕಿದಾಗ, ಅವಳಿಗೆ ಆಗುವ ಸಂತೋಷ ಹೇಳಲಸಾಧ್ಯ .ಕ್ರಿಕೆಟ್ ಆಟಗಾರ ಸಿಕ್ಸರ್ ಹೊಡೆದಾಗ ಆಗುವ ಸಂಭ್ರಮ ಆ ಮಹಿಳೆಯಲ್ಲಿ .ಮಗು ತುತ್ತು ತಿಂದಾಗಲೆಲ್ಲ ಅವಳಲ್ಲಿ ಧನ್ಯತೆಯ ಭಾವ . ಮಗುವಿಗೂ ಮನೆಯಿಂದ ಆಚೆ ಬಂದ ಖುಷಿ ,ಈ ಮಹಿಳೆಯರಿಗೂ ಆಚೆ ಬಂದು ಆಟ  ಆಡಿಸುತ್ತಾ ಮಕ್ಕಳಿಗೆ ತಿನ್ನಿಸುವ ಖುಷಿ ಆಮೇಲೆ ಸ್ವಲ್ಪ ತಮ್ಮ ತಮ್ಮಲ್ಲೇ ದಿನನಿತ್ಯದ ಮಾತು ಹರಟೆ , ನಗು ಎಲ್ಲ .ಈ ದೃಶ್ಯ ವನ್ನು  ದಿನವೂ ನೋಡುತ್ತಿದ್ದ ನನಗೆ ಇಷ್ಟುಮಾತ್ರ ಗೊತ್ತಾಗಿದ್ದು ,ಏನೆಂದರೆ  ಈ ಪುಟ್ಟ ಮಕ್ಕಳ ತಾಯಿ ಆಚೆ ಕೆಲಸ ಮಾಡಲು ಹೋದರೆ ಬರುವುದು ಸಂಜೆಯ ವೇಳೆ ,ಅಲ್ಲಿಯವರೆಗೆ ಈ  ಮಕ್ಕಳು ಯಶೋದೆಯರ ಮಡಿಲಲ್ಲಿ ..ಈ ಒಂದು ಹಿನ್ನಲೆಯಲ್ಲಿ ನನ್ನ ಮೊದಲ ಕವನ ಹುಟ್ಟಲು ಕಾರಣವಾಯಿತು .ಆ ದಿನಗಳಲ್ಲಿ ದಿನವೂ ಓದುವ ಕಾರಣದಿಂದಾಗಿ ಪದ ,ವಾಕ್ಯಗಳೊಡನೆ ನಿತ್ಯ ಒಡನಾಟದಿಂದ ನನ್ನದೇ ರೀತಿಯಿಂದ ಅವುಗಳನ್ನು ಹೆಣೆಯುವ ಆಸೆಯಾಗಿ ಈ ಕವನ ಹುಟ್ಟಿತೆಂದರೆ ತಪ್ಪಾಗಲಾರದು.ಒಂದು ಬರೆದ ಮೇಲೆ ಇನ್ನೊಂದು ,ಇನ್ನೊಂದರ ಮೇಲೆ ಮತ್ತೊಂದು ಹಾಗೆ ಬರೆಯುತ್ತ ಹೋದೆ .ಬರೀತಾ ಬರೀತಾ ಒಂದು ಸುಮಾರು ನಲವತ್ತು ಕವನಗಳು ಮೂಡಿಬಂದವು. ಒಮ್ಮೆ ದಕ್ಷಿಣ ಕನ್ನಡದ ಒಂದು ಸಂಸ್ಥೆ ಯಿಂದ ಅಪ್ರಕಟಿತ ಕವನಗಳಿಗೆ ಆಹ್ವಾನ ಬಂದಿತು , ಸರಿ ಹಾಗಿದ್ರೆ ನನ್ನ ಕವನಗಳು ನೋಟುಬುಕ್ನಲ್ಲಿ ಹಾಯಾಗಿ ಮಲಗಿದ್ದವು .ಅವುಗಳನ್ನು ಚೆನ್ನಾಗಿ ಬರೆದು ,ಅವಗಳನ್ನು ಓದಲು ನನ್ನ ಆತ್ಮೀಯ ಹಿರಿಯರೊಬ್ಬರಿಗೆ ಕೊಟ್ಟೆನುಅವರು ಓದಿ ಸಣ್ಣ ಸಣ್ಣ ತಿದ್ದುಪಡಿ ಮಾಡಲು ತಿಳಿಸಿದರು.ಆನಂತರ ಅವುಗಳನ್ನ ಕೊರಿಯರ್ ಮಾಡಿ ಬಂದೆ.ಸೆಲೆಕ್ಟ್ ಆಗಲಿ ಬಿಡಲಿ ಅವುಗಳನ್ನು ತಿದ್ದುಪಡಿ ಮಾಡಿ ಬರೆಯುವಾಗ ,ಅವುಗಳನ್ನು ಪೋಸ್ಟ್ ಮಾಡಿ ಬರುವಾಗ ಆದ ಸಂಭ್ರಮಕ್ಕೆ ಬೆಲೆಯೇ ಇಲ್ಲ .ಅಂತೂ ಕಳಿ ಸುವ ಪ್ರಕ್ರಿಯೆ ಮುಗಿಯಿತು . ಕೆಲ ದಿವಸಗಳ ನಂತರ ಒಂದು ಪೋಸ್ಟ್ಕಾರ್ಡ್ ನನ್ನ ಹೆಸರಿಗೆ ಬಂದಿತು .ಅದರಲ್ಲಿ ಅವರು ಸಂಕಲನ ಕಲಿಸಿದ್ದಕ್ಕಾಗಿ ಧನ್ಯವಾದಗಳು ಹಾಗೂ ಆ ಒಂದು ಸ್ಪರ್ಧೆಯಲ್ಲಿ ಸೆಲೆಕ್ಟ್ ಆದ ಕವನ ಸಂಕಲನ ಹೆಸರು “ಜೀನ್ಸ್ ಹಾಕಿದ ದೇವರು”.ಹಾಗೂ ಕಳಿಸಿದ ಸಂಕಲನವನ್ನು ಹಿಂದಿರುಗಿಸುವ ಪ್ರಕ್ರಿಯೆ ನಮ್ಮಲ್ಲಿಲ್ಲದಕಾರಣ ನಾವು ಅದನ್ನು ಕಳಿಸಲಾಗಲಿಲ್ಲ ಎಂದು ಬರೆದಿದ್ದರು. ಹೆಚ್ಚಿನ expectations ಇಲ್ಲವಾದುದರಿಂದ , ನನ್ನ ಹೆಸರಿಗೆ ಪೋಸ್ಟ್ಕಾರ್ಡ್ ಬಂದದ್ದೇ ನಂಗೆ ಸಂತಸದ ವಿಷಯವಾಗಿತ್ತು.ಆ ಪೋಸ್ಟ್ ಕಾರ್ಡ್ ಇನ್ನೂ ನನ್ನಲ್ಲಿ ಜೋಪಾನವಾಗಿದೆ. ಇರಲಿ ಇಲ್ಲಿಗೆ ಮುಗಿಯಿತು ನನ್ನ ಮೊದಲ ಕವನದಿಂದ ಶುರುವಾಗಿ ಕವನ ಸಂಕಲನದ ವರೆಗಿನ ಸಂಕ್ಷಿಪ್ತ ವರದಿ .ಆಮೇಲೆ ಆ ಸಂಕಲನಕ್ಕೆ ಹಾಗೆ ಹಾಗಾಗಿ ಹೊಸ ಹೊಸ ಕವನಗಳನ್ನು ಸೇರಿಸುತ್ತ ಹೋದೆ . ಈ ಎಲ್ಲ ಘಟನೆಗೆ ಕಾರಣ ವಾದದ್ದು ನಾನು ಬರೆದ ಮೊದಲ ಕವನ . ಈ ಕವನ ತಾನೊಂದೇ ಇರದೇ ತನ್ನೊಡನೆ ಹಲವಾರು ಕವನಗಳನ್ನು ಸೇರಿಸಲು ನಾಂದಿ  ಹಾಡಿತು,ಇದರ ಬಗ್ಗೆ ಹಾಗು ಇದರ ಹಿಂದೆ ಮುಂದೆ ಏನಿತ್ತು ಮತ್ತು ಏನಾಯಿತು ಎಂಬುದನ್ನು ನೆನಪಿಸಿಕೊಳ್ಳುವ ಕೆಲಸ ಕೊಟ್ಟ ಸಂಗತಿ ಪತ್ರಿಕೆಗೆ ನನ್ನ ಅನಂತ  ಧನ್ಯವಾದಗಳು . ಸುಮಾರು ೮ ವರುಷಗಳ ಹಿಂದೆ ನೋಡಿ ನೆನಪಿಸಿಕೊಂಡು,ಈ ನೆನಪಿನ ದೋಣಿಯಲ್ಲಿ ವಿಹಾರ ಮಾಡಲು ಅವಕಾಶ ವೊದಗಿ ಬಂದದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುವೆ. ************************

ಲಾಲಿಸಿದಳು ಯಶೋಧೆ Read Post »

ಇತರೆ

ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಡಾ.ಪ್ರೇಮಲತ ಬಿ. ತುಮಕೂರಿನ ಮಾಧ್ಯಮಿಕ ಶಾಲೆಯಲ್ಲಿದ್ದೆ. ಅತ್ಯಂತಗಟ್ಟಿ  ಚರ್ಚಾಪಟು ಅಂತ ಹೆಸರಾಗಿದ್ದೆ. ಆದಾಗ  ಧಾರವಾಡದಲ್ಲಿ ನಡೆಯಲಿದ್ದ ಎರಡನೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುತ್ತಿತ್ತು. ಆಯ್ಕೆದಾರರು ಇಡೀ ಕರ್ನಾಟಕದ ಎಲ್ಲ ನಗರಗಳಿಗೂ ಭೇಟಿ ಕೊಟ್ಟು ಮಕ್ಕಳನ್ನು ಹುಡುಕುತ್ತಿದ್ದರು. ಜಗದೀಶ ಮಳಗಿ ಎನ್ನುವವರು ನಮ್ಮ ಶಾಲೆಗೂ ಬಂದರು.ಕೊಟ್ಟ ವಿಚಾರದ ಬಗ್ಗೆ ಪ್ರಭಂದವನ್ನು ಬರೆದು ದೊಡ್ಡದೊಂದು ಭಾಷಣ ಮಾಡಿದ್ದೆ. ಅದಾದ ನಂತರ ಏನೂ ಹೇಳದೆ ಅವರು ಹೊರಟುಹೋದರು.ಒಂದೆರಡು ವಾರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ನನ್ನನ್ನೇ ಅಧ್ಯಕ್ಷಳನ್ನಾಗಿ  ಮಾಡಲು ಆಯ್ಕೆದಾರರ ಸಮಿತಿ ನಿರ್ಧರಿಸಿದ್ದಾರೆಂದು ತಿಳಿಸಿದರು. ಧಾರವಾಡದ ಕಲಾಮಂದಿರದಲ್ಲಿ ನಡೆದ ಸಮ್ಮೇಳನದಲ್ಲಿಸಿದ್ದಯ್ಯ ಪುರಾಣಿಕರು, ಶಿವರಾಮ ಕಾರಂತರು,ಸಿಸು ಸಂಗಮೇಶರು, ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ದೊಡ್ಡ ದೊಡ್ಡ ಹೆಸರಿನ ಜನರು ಭಾಗವಹಿಸಿದ್ದರು.ಅವರೆಲ್ಲರ ಎದುರು ಭರ್ಜರಿ ಭಾಷಣ ಮಾಡಿ ಎರಡೆರಡು ಬಾರಿ ಕರತಾಡನ ಗಿಟ್ಟಿಸಿಕೊಂಡೆ. ಮಕ್ಕಳ ಸಾಹಿತ್ಯದ ಮಹತ್ವ ಮತ್ತು ಅದನ್ನು ಗಂಗಾನದಿಗೆ ಹೋಲಿಸಿ ಅದು ಕಲುಷಿತಗೊಂಡರೆ ಆಗುವ ಅನಾಹುತಗಳ ಬಗ್ಗೆಯೆಲ್ಲ ಮಾತಾಡಿದ್ದ ನೆನಪು. ಈ ಅನುಭವದ ಮತ್ತು ಒಡನಾಟದ ಕಾರಣ ಬರೆಯಬೇಕೆನ್ನುವ ಹುನ್ನಾರ ಮೂಡಿತು. ಆ ಹೊತ್ತಿಗೆ ಹಲವು  ಪ್ರಭಂದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದನ್ನು ಬಿಟ್ಟರೆ ಸ್ವತಃ ನಾನು ಬರೆದ ಸಾಹಿತ್ಯ ಸೊನ್ನೆಯಾಗಿತ್ತು. ನಂತರ ಕೊಟ್ಟ ಹಲವಾರು ಪತ್ರಿಕಾ ಸಂದರ್ಶನಗಳಲ್ಲಿ ಹಾಗಂತಲೇ ಹೇಳಿಕೊಂಡೆ. ೧೩ ವರ್ಷದ ನನ್ನ ಪ್ರಕಾರ ಅಲ್ಲಿ ಭಾಗವಹಿಸಿದ್ದ ಬೇರೆ ಮಕ್ಕಳೆಲ್ಲ ಬರೆದಿರುತ್ತಾರೆ ಎಂದೇ ಆಗಿತ್ತು. ಆದರೆ, ಅದು ಸತ್ಯವಾಗಿರಲಿಲ್ಲ. ಅದೇ ಗೀಳಿನಲ್ಲಿ ಏನಾದರೂ ಬರೆಯುವ ಉತ್ಸಾಹ ನನ್ನಲ್ಲಿ ಮೂಡಿತು. ನನ್ನ ವಯಸ್ಸಿನ ಕಾರಣ ಸೀರಿಯಸ್ಸಾದದ್ದೇನಾದರೂ ಬರೆದರೆ ಪ್ರಕಟಿಸುವುದಿಲ್ಲ ಎನ್ನುವ ಗುಮಾನಿಯೂ ಇತ್ತು.ದೊಡ್ಡವರಿಗಾಗಿ ಬರೆಯುವ ಪ್ರಭುದ್ಧತೆಯಿರಲಿಲ್ಲ. ನನ್ನ ವಯಸ್ಸಿನವರಿಗೆ ಅಂತ ಮಕ್ಕಳ ಬರಹದ ನಿಗಧಿತ ಪತ್ರಿಕಾ ವಿಭಾಗಗಳಿರಲಿಲ್ಲ. ಅಥವಾ ನನಗೆ ತಿಳಿದಿರಲಿಲ್ಲ. ಚೆನ್ನಾಗಿ ಬರೆದಿದ್ದೇನೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಹೇಳಲು ಯಾವ ಮಾರ್ಗದರ್ಶಕರಿರಲಿಲ್ಲ. ಈ ಕಾರಣಕ್ಕೆ ನನಗಿಂತ ಚಿಕ್ಕ ಮಕ್ಕಳಿಗೆಂದು ’ ತಿಂಡಿ’ ಎನ್ನುವ ಪದ್ಯ ಬರೆದು ತರಂಗ ವಾರಪತ್ರಿಕೆಗೆ ಕಳಿಸಿದೆ. ಬಗೆ ಬಗೆಯ ತಿಂಡಿಗಳನ್ನು ಆಸ್ವಾದಿಸುತ್ತ ಸಂತೋಷಿಸುವಾಗ ತಟ್ಟನೆ ಅಮ್ಮನ ಕೂಗಿನಿಂದ ಕೊನೆಯಾಗುವ ಕನಸಿನ ಬಗೆಗಿನ ಪದ್ಯ.ನಂತರ ಮರೆತೂ ಬಿಟ್ಟೆ. ಆದರೆ ಕೆಲ ವಾರಗಳಲ್ಲಿ ಅದು ಪ್ರಕಟವಾಗಿ ಬಿಟ್ಟಿತು. ಮಕ್ಕಳಿಗಾಗಿ ಸಾಹಿತ್ಯದ ಒಂದು ಪುಟ್ಟ ತುಣುಕನ್ನು ಸೃಷ್ಟಿಸಿಬಿಟ್ಟಿದ್ದೆ! ನಿಜಕ್ಕೂ ನನ್ನ ಪಾತ್ರವನ್ನು ನಿಭಾಯಿಸಿದ ಗೆಲುವು ಮೂಡಿತು.  ಅದು ನನ್ನ ಪ್ರಥಮ ಪದ್ಯವಾದರೂ ನಾನು ಕವಿಯಾಗಿದ್ದು ಸುಳ್ಳು.ನಂತರ ಬರೆಯಲೂ ಇಲ್ಲ. ಕಾಲೇಜಿಗೆ ಬಂದಾಗ ಬರೆದ ಕವನಗಳು ಕನ್ನಡ ಪ್ರಭದಲ್ಲಿ, ವಾರ್ಷಿಕೋತ್ಸವ ಪತ್ರಿಕೆಗಳಲ್ಲಿ ಪ್ರಕಟವಾದವು. ತುಷಾರದ  ಚಿತ್ರಕವನ ಸ್ಪರ್ಧೆಯಲ್ಲಿ ಬಹಮಾನ ಗಳಿಸಿದವು.ಆದರೆ,ಆಗೆಲ್ಲ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಲೇಖನಗಳ ಬರವಣಿಗೆಯಲ್ಲಿ. ಇಂಗ್ಲೆಂಡಿಗೆ ಬಂದ ನಂತರ ಮತ್ತೆ ಹತ್ತಾರು ವರ್ಷ ಎಲ್ಲ ನಿಂತಿತು. ಇತ್ತೀಚೆಗಿನ ಹಲವಾರು ಕವನಗಳನ್ನು ಬರೆದು ಪ್ರಕಟಿಸಿದ್ದೇನಾದರೂ ನನ್ನನ್ನು ನಾನು ಕವಿಯೆಂದು ಕರೆದುಕೊಳ್ಳಲಾರೆ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ.ಭೋದಕಳಲ್ಲ. ಆದರೆ ಸ್ವಚ್ಚ , ಸರಳ ಕವಿತೆಗಳನ್ನು ಬರೆದಾಗ ಸಿಗುವ ಸೃಜನಾತ್ಮಕ ಆನಂದ ಅಷ್ಟಿಷ್ಟಲ್ಲ.ಅದರಲ್ಲೂ ನನ್ನಂತ ಎಳಸು, ಸರಳ ಕವಿಗಳ ಆನಂದ ಅತ್ಯಂತ ನವಿರಾದದ್ದು. ಬೃಹತ್ತಾದದ್ದು ಕೂಡ. ಪ್ರಥಮ ಪದ್ಯ ಕೊಟ್ಟ ನವಿರು ಕಚಗುಳಿ, ಹೆಮ್ಮೆ, ಅಲ್ಪ-ಸ್ವಲ್ಪ ಆತ್ಮವಿಶ್ವಾಸ ಇವಕ್ಕೆಲ್ಲ ನಾನು ಅತ್ಯಂತ ಋಣಿ.ಅಲ್ಲಿಂದ ಮುಂದಕ್ಕೆ ಹವ್ಯಾಸೀ ಬರಹಗಾರಳಾಗಲು ಆ ಸಾಹಿತ್ಯ ಸಮ್ಮೇಳನ ಮತ್ತು  ತರಂಗದ ಪುಟ್ಟ ಪದ್ಯಗಳೇ ಕಾರಣಗಳಾಗಿವೆ. *****************************

ಮೊದಲ ಕವನ Read Post »

You cannot copy content of this page

Scroll to Top