ಧಾರಾವಾಹಿ ಸಂಗಾತಿ-14
ಜಯದೇವಿ ತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಲೇ: ಸವಿತಾ ದೇಶಮುಖ


ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ…..
ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂ ದುಡಿಕಿ ಮನ ನೋಯಿಸಬೇಡಿ…
ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.
ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು. ಇದನ್ನು ವಿಸ್ತಾರವಾಗಿ ನೋಡಿದರೆಅಅವರ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ…
ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು.
ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.
ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು.
ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾ ಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ!!
ಕೆಂಜಡಿಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು.
ತಾಯಿ ಸಂಗವ್ವ ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರೇ ಆದರೂ ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛ ಮಾಡುವ ರೂಢಿಯನ್ನು ಇಟ್ಟುಕೊಂಡಿದ್ದರು.
ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಶರಣರು ಉತ್ತಿಬಿತ್ತಿ ಬೆಳೆದಂಥ ವಚನವನ್ನು ನೆನಪಿಸಿ ಕೊಡುತ್ತಿದ್ದರಂತೆ.
“ಇವನ ಇವನಾರವ ಇವನಾರವ ಎಂದೇನಿಸದಿರಯ್ಯ ಇವನ ಮಾವ ಇವನ ಮಾವ ಎಂದೆನಿಸಯ್ಯ…..”
ಅನ್ನುವ ವಚನ ತಾಯಿಗೆ ಮೇಲಿಂದ ಮೇಲೆ ಹೇಳಿ ಅವರ ಮನವನ್ನು ಬದಲಾಯಿಸಿದರು ಅಂತ ತಾಯಿಯವರೇ ಸ್ವಂತ ಹೇಳುತ್ತಿದ್ದರು.
ಜಾತಿ ಮೀರಿ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದರು.ಜಾತಿ ಭೇದವನ್ನು ಕಡಿಮೆ ಮಾಡಲು ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು.“ಪ್ರೇಮಕ್ಕೆ ಜಾತಿ ಬೇಧವಿಲ್ಲ” ಎಂಬುದನ್ನು ಅವರು ಸಮರ್ಥಿಸಿದರು.
ಇಂತಹ ವಿವಾಹಗಳಿಗೆ ಸಾಮಾಜಿಕ ಒಪ್ಪಿಗೆ ಸಿಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
“ಮಾನವೀಯತೆ ಧರ್ಮಕ್ಕಿಂತ ದೊಡ್ಡದು” ಎಂಬುದು ಅವರ ಸಂದೇಶ.
ವೈಯಕ್ತಿಕ ಜೀವನದಲ್ಲಿಯೂ ಅನುಸರಿಸಿದ್ದರು .
ತಮ್ಮ ಮನೆ ಬಾಗಿಲು ಎಲ್ಲರಿಗೂ ತೆರೆಯಲ್ಪಟ್ಟಿತ್ತು.
ಯಾರೇ ಬಂದರೂ ಅವರ ಜಾತಿ-ಮತ ಕೇಳದೆ ಸಹಾಯ ಮಾಡುತ್ತಿದ್ದರು. ಆದರಾತಿಥ್ಯವನ್ನು ಕೊಟ್ಟು ಕಳಿಸುತ್ತಿದ್ದರು.
ಸಜೀವ ಘಟನೆಗಳನ್ನು ಉಲ್ಲೇಖ ಮಾಡಬೇಕೆಂದರೆ
ಸೊಲ್ಲಾಪುರದ ಆ ಕಾಲ…
ಸಮಾಜದ ಮನಸ್ಸುಗಳಲ್ಲಿ ಇನ್ನೂ ಕೀಳರಿಮೆ ಮತ್ತು ಭೇದದ ನೆರಳಿನಲ್ಲಿ ನರಳುತ್ತಿತ್ತು…
ಜಯದೇವಿ ತಾಯಿಯವರು … ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರೂ, ಅವರ ಹೃದಯ ಮಾತ್ರ ಮಣ್ಣಿನಂತೇ ಮೃದು….
ಆ ಪ್ರದೇಶದಲ್ಲಿ “ಪಾರದೇರು” ಎನ್ನುವ ಒಂದು ಜಾತಿಯ ಜನರ ಬಗ್ಗೆ ಜನರಲ್ಲಿ ಭಯ ಇತ್ತು.
“ಅವರು ಕಳ್ಳರು… ಮೋಸಗಾರರು…” ಎಂದು ಸಮಾಜವೇ ಅವರಿಗೆ ಒಂದು ಗುರುತು ಹಾಕಿತ್ತು.
ಯಾರೂ ಅವರಿಗೆ ಕೆಲಸ ಕೊಡುತ್ತಿರಲಿಲ್ಲ.
ಅವರಿಗೆ ತಪ್ಪು ದಾರಿಗೆ ಹೋಗುವುದೇ ಅವರ ಬದುಕಿನ ಮಾರ್ಗವಾಗಿಬಿಟ್ಟಿತ್ತು…..
ಒಂದು ದಿನ, ಆ ಸಮುದಾಯದ ಒಬ್ಬ ಮುಖಂಡನು ಜಯದೇವಿ ತಾಯಿಯವರ ಸಮಾಜಮುಖಿ ಉದ್ದಾರ ಕೆಲಸಗಳನ್ನು ನೋಡಿ ಭೇಟಿ ಮಾಡಲು ಬಂದನು.
ಅವನ ಕಣ್ಣುಗಳಲ್ಲಿ ಹತಾಶೆ… ಮನಸ್ಸಿನಲ್ಲಿ ನೋವು ಹೊತ್ತು ಬಂದಿದ್ದಾ…
“ತಾಯಿ… ನಾವು ತಪ್ಪು ಮಾಡಿದ್ದೇವೆ… ಆದರೆ ನಮಗೆ ಯಾರು ಕೆಲಸ ಕೊಡಲ್ಲ… ನಾವು ಸುಳ್ಳು ತನ ಕಳ್ಳತನ ಮಾಡದೆ ಇದ್ದರು ನಮ್ಮ ಜನಾಂಗದವರು ಬದುಕೋದು ಹೇಗೆ?” ಎಂದು ಕೇಳಿದನು.
ಆ ಮಾತು ಕೇಳಿ ತಾಯಿಯವರ ಹೃದಯ ಕದಲಿತು.
ತಾಯಿಯವರ ನಂತರ ನಿಧಾನವಾಗಿ ಹೇಳಿದರು…
“ನೀವು ತಪ್ಪು ಮಾಡಿರಬಹುದು… ತಪ್ಪುಗಳನ್ನು ಮಾಡುತ್ತಾ ಬರುತ್ತಲೇ ಇದ್ದೀರಿ..ಆದರೆ ನೀವು ಮನುಷ್ಯರು…ನಿಮಗೆ ಅವಕಾಶ ಕೊಟ್ಟರೆ. ಬದಲಾಗ ಬಹುದೇನೋ…ನೋಡೋಣ ಹಾಗಿದ್ದರೆ
“ನೀವು ನನ್ನ ಹೊಲಕ್ಕೆ ಬನ್ನಿ… ಕೆಲಸ ಮಾಡಿ…” ಎಂದು ಆಹ್ವಾನಿಸಿದರು.
ಹೀಗೆ ಹೊಸ ಜೀವನದ ಆರಂಭ ಪಾರದೇರು ಜನಾಂಗದ ಅನೇಕ ಜನರಿಗೆ ಅವರು ಕೇವಲ ಕೆಲಸ ಕೊಟ್ಟರಲ್ಲದೇ…ಅವರಿಗೆ ವಾಸಿಸಲು ಹೊಲಗಳಲ್ಲಿ ಜಾಗ ಕೊಟ್ಟರು…
ನಿನ್ನೆಯವರೆಗೆ ಕಳ್ಳತನ ಮಾಡುತ್ತಿದ್ದ ಕೈಗಳು,
ಇಂದು ಮಣ್ಣನ್ನು ಅಗೆದು ಬೆಳೆ ಬೆಳೆಸತೊಡಗಿದವು.
ಇದನ್ನು ನೋಡಿದ ಅನೇಕ ಜನರು ಆಶ್ಚರ್ಯದಿಂದ
“ಇವರು ಬದಲಾಗ್ತಾರಾ?” ಎಂಬ ಸಂಶಯಪಟ್ಟರು.
ಆದರೆ ತಾಯಿಯವರ ನಂಬಿಕೆ ಗೆದ್ದಿತು.
ಆ ಜನರು ತಮ್ಮ ಜೀವನವನ್ನು ಸತ್ಯದ ದಾರಿಯಲ್ಲಿ ಸಾಗಿಸಲು ಆರಂಭಿಸಿದರು.
ಮುಂದೆ ಭಾರತದಲ್ಲಿ ಲ್ಯಾಂಡ್ ರಿಫಾರ್ಮ್ ಕಾಯಿದೆ ಜಾರಿಯಾದಾಗ, ಹಲವಾರು ಜಮೀನುಗಳು ರೈತರ ಹೆಸರಿಗೆ ಬರೆಯ ಆರಂಭವಾಯಿತು.
ಆ ಸಮಯದಲ್ಲಿ ಜಯದೇವಿ ತಾಯಿಯವರು ದೊಡ್ಡ ನಿರ್ಧಾರ ಕೈಗೊಂಡರು.
“ಈ ಭೂಮಿಯನ್ನು ಯಾರು ನಿಜವಾಗಿ ಬೆಳೆದಿದ್ದಾರೆ…
ಅವರಿಗೆ ಒಪ್ಪಿಸುವಂತೆ…ಪಾದರೆಯ ಜನರು ಕೆಳ ಜಾತಿಯ ಜನರ ಹೆಸರನ್ನು ನೋಂದಾಯಿಸಿದರು.
ಹೀಗೆ,ಒಮ್ಮೆ ಸಮಾಜದಿಂದ ತಳ್ಳಲ್ಪಟ್ಟ “ಪಾರದೆರು” ಜನರು,ತಾಯಿಯವರ ಕೃಪೆಯಿಂದ ತಮ್ಮದೇ ಭೂಮಿಯ ಒಡೆಯರಾಗಿದರು.
ಶತಶತಮಾನಗಳಿಂದ ಆಳಾಗಿ ದುಡಿತ ಬಂದವರಿಗೆ
ಆ ದಿನ, ಅವರ ಕಣ್ಣುಗಳಲ್ಲಿ ಕಣ್ಣೀರು…ಹರಿದವು
ಆದರೆ ಅದು ನೋವಿನಲ್ಲ ಕಣ್ಣಿರಲ್ಲ… ಗೌರವದದು…
“ನಮಗೆ ಜೀವನ ಕೊಟ್ಟವರು ತಾಯಿ…” ಎಂದು ಇನ್ನು ಆದರೂ ನೆನೆಯುತ್ತಾರೆ.
“ಜಯದೇವಿ ತಾಯಿಯವರು ಕೇವಲ ಭೂಮಿಯನ್ನು ಕೊಟ್ಟವರಲ್ಲ ಅವರ ಜೀವನಕ್ಕೆ ದಿಕ್ಕು ತೋರಿಸಿದ ತಾಯಿಯಾದರು…”
ಸಮಾಜ ಏಕತೆ, ಸಮಾನತೆ ಮತ್ತು ಚೇತನ ಶಕ್ತಿಯನ್ನು ಸಜೀವವಾಗಿ ಕಟ್ಟಲು…ಶರಣ ಸಮಾಜಎನ್ನು ಸಂಘವನ್ನು ಕಟ್ಟಿದರು. ಗಾಂಧೀಜಿಯವರು ಕೀಳ ಜಾತಿಯವರಿಗೆ ಹರಿಜನರೆಂದು ಹೆಸರು ಕೊಟ್ಟಸಮಯ .. ಗಾಂಧೀಜಿಯವರ ಧ್ಯೇಯ- ಸದುದ್ದೇಶಕ್ಕಾಗಿ ಶರಣ ಸಮಾಜ ನಿರ್ಮಾಣಗೊಂಡಿತ್ತು.
*ದೀನದಲಿತರಿಗೆ | ಹೀನ ಪಾಮರರಿಗೆ
ತನ್ನ ಬಳಿ ಸೆಳೆದುಕೊಂಡ- ಪುಣ್ಯಜೀವಿ
ಹರಿಜನರೆಂಬ ಹೆಸರ ಕೊಟ್ಟಗಾಂಧೀಜಿ *ಎಂದು ಹಾಡಿ ಹೊಗಳಿದರು.
“ಎಲ್ಲರೂ ಒಂದೇ ಕುಟುಂಬದವರಂತೆ ಬದುಕಬೇಕು ಜಾತಿ-ಮತ ಭೇದಗಳು ಗಟ್ಟಿಗಳ ಬೇರುಸಹಿತ ಕಿತ್ತೆಸೆಯಲು.
ಭೇದಗಳ ಒಡೆಯಬೇಕೆಂದು ಜಯದೇವಿ ತಾಯಿಯವರ ಒಂದು ದೊಡ್ಡ ಕನಸು .
ಈ ಆಲೋಚನೆಯಿಂದಲೇ ಅವರು “ಶರಣ ಸಮಾಜ” ಎನ್ನುವ ಸಂಘವನ್ನು ಸ್ಥಾಪಿಸಿದರು.
ಸಂಘ ಕೇವಲ ಒಂದು ಸಂಸ್ಥೆಯಂತಲ್ಲ…
ಇದು ಒಂದು ಚಳವಳಿ…ಸಂಘದ ಉದ್ದೇಶವೆಂದರೆ
ಜಾತಿ, ಮತ, ವರ್ಗ ಎಂಬ ಗೋಡೆಗಳನ್ನು ಒಡೆಯುವ ಪ್ರಯತ್ನ.ಇಲ್ಲಿ ಎಲ್ಲ ಸಮಾಜದ ಜನರು…ಬಡವರು, ಶ್ರೀಮಂತರು, ದಲಿತರು, ಮೇಲ್ಜಾತಿಯವರು
ಎಲ್ಲರೂ ಒಂದೇ ವೇದಿಕೆಯಲ್ಲಿ ಕೂತುಕೊಳ್ಳುತ್ತಿದ್ದರು.
ಮುಂದೆ ಈ ಮಹತ್ವದ ಕಾರ್ಯಕ್ಕೆ ಗೌರವ ನೀಡಲು,
ತಾಯಿಯವರು ದೇಶದ ಪ್ರಮುಖ ನಾಯಕನಾದ
*ಬಾಬು ಜಗಜೀವನ್ ರಾಮರನ್ನು *ಮನೆಗೆ ಆಹ್ವಾನಿಸಿ ಬೆಳ್ಳಿಯ ತಟ್ಟೆಯಲ್ಲಿ ಊಟಕ್ಕೆ ಇರಿಸಿದ್ದರು.
ಆ ದಿನದ ವಾತಾವರಣ ಅತ್ಯಂತ ಉತ್ಸಾಹಭರಿತರಾದ ಜನರು, ವಿವಿಧ ಸಮುದಾಯದವರೆಲ್ಲರೂ
ಒಂದೇ ಸ್ಥಳದಲ್ಲಿ ಸೇರಿ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.
ಜಯದೇವಿ ತಾಯಿಯವರನು ಉದ್ದೇಶಿಸಿ
ಬಾಬು ಜಗಜೀವನ್ ರಾಮ್ ಅವರು ಮಾತನಾಡುತ್ತಾ ಹೇಳಿದರು:
“ಸಮಾನತೆ ಎನ್ನುವುದು ಕೇವಲ ಮಾತಲ್ಲ…
ಅದನ್ನು ಜೀವನದಲ್ಲಿ ಅನುಸರಿಸುವವರೇ ನಿಜವಾದ ನಾಯಕರಾಗಲು ಸಾಧ್ಯ… ಜಯದೇವಿ ತಾಯಿಯವರೊಂದು ಆಧ್ಯಾತ್ಮಿಕ ಜೀವಿಯು ಕೂಡಾ ಇಂಥವರು ನಿಮ್ಮ ಮಧ್ಯದಲ್ಲಿ ಇದ್ದಿದ್ದು ನಿಮ್ಮಲ್ಲರ ಪುಣ್ಯವೇ ಸರಿ”ಎನ್ನುತ
ಅವರು ತಾಯಿಯವರ ಕಾರ್ಯವನ್ನು ಹೊಗಳಿದರು.
ಆ ಮಾತುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದವು .
“ಶರಣ ಸಮಾಜ”ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು..
ಎಲ್ಲ ಜಾತಿಯವರಿಗೂ ಸಹಭೋಜನ
ಶಿಕ್ಷಣ ಮತ್ತು ಜಾಗೃತಿ ಶಿಬಿರಗಳು
ಮಹಿಳಾ ಸಬಲೀಕರಣ ಕಾರ್ಯಕ್ರಮಗಳು
ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೆರವು…
ಇಲ್ಲಿ “ನಾನು–ನೀನು” ಎನ್ನುವ ಭೇದವಿಲ್ಲ…
“ನಾವು” ಎನ್ನುವ ಭಾವನೆ ಮಾತ್ರ ಇತ್ತು.
ಇಂಥ ಸಂಘಗಳ ಸಂಘಟನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಆರಂಭವಾಯಿತು ಅಂತ ಹೇಳಬಹುದು
ಜನರು ಪರಸ್ಪರ ಗೌರವದಿಂದ ನೋಡಲು ಆರಂಭಿಸಿದರು.ಒಮ್ಮೆ ದೂರ ದೂರ ಇದ್ದ ಹೃದಯಗಳು,ಸ್ವಲ್ಪಮಟ್ಟಿಗಾದರೂ ಹತ್ತಿರವಾಗತೊಡಗಿದವು.
ಈ ಚಳುವಳಿಯಲ್ಲಿ ಶರಣ “ಕಂಬಳಿ ಬಾಬ” ಅವರ ಕಾರ್ಯ ಮಹತ್ವದ್ದು ಎಂದು ನೆನೆಯಬೇಕಾಗುತ್ತದೆ.
ಜಯದೇವಿ ತಾಯಿಯವರು ಹೇಳ್ತಾರೆ ….
ಎಲ್ಲರೂ ತೋರಿರುವ| ಹೆದ್ದಾರಿ ಒಂದಿರಲು ತಿದ್ದದಲೇ ಮನ ಬುದ್ಧಿಗಳು- ಲೋಕದಿ ಒದ್ದಾಡುವರು ಕೀಳು ಮೇಲೆಂದು
ಶರಣ ಸಮಾಜವು ಕೇವಲ ಒಂದು ಸಂಘವಲ್ಲ…
ಅದು ಸಮಾನತೆಯ ಬೀಜ ಬಿತ್ತಿದ ಸಾಹಸದ ಚಳುವಳಿಯಾಗಿತ್ತು.
ಹುಟ್ಟಿಗೆ ಕುಲವಿಲ್ಲ | ಬಟ್ಟೆಗೆ ಬೆಲೆ ಇಲ್ಲ
ಮಟ್ಟ ಅರಿಬೇಕು ಆಚಾರದ- ಶಿವನಲ್ಲಿ
ದಿಟ್ಟಿ ಇಡಬೇಕ ನಿಶ್ಚಯದಿ!!
ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ವ್ಯಕ್ತಿ ಇರಲಿ ಅವನು ಹುಟ್ಟಿ ಬರುವಾಗ ಆ ಜಾತಿ ಈ ಜಾತಿ ಸೇರಿದವನಲ್ಲ …. ಹಣೆಗೆ ಪಟ್ಟಿ ಹಂಚಿಕೊಂಡು ಹುಟ್ಟಿದವನಲ್ಲ ಜನ್ಮ ತಳಿದ ಶಿಶುವಿಗೆ ಯಾವ ಜಾತಿ ಇದೆ ಹೇಳಿ ಯಾವ ಕುಲವಿದೆ ಗೋತ್ರವಿದೆ ?!…ಎಂದು ತಾಯಿಯವರು ಕೇಳುತ್ತಿದ್ದರು.
ಅದೇ ರೀತಿ ಬಟ್ಟೆಗೆ ಬೆಲೆ ಇಲ್ಲ ಅಂದ್ರೆ ಬದುಕು ಮಾಡಲು ಪ್ರತಿ ಜೀವಿಯು ಕಾಯಕವನ್ನು ಮಾಡಿ ಬದುಕಬೇಕಾಗುತ್ತದೆ.ಕಾಯಕಕ್ಕೆ ಮೇಲು ಕೀಳು ಎಂಬ ತಾರತಮ್ಯ ಸಲ್ಲದು ಯಾವ ಕಾಯಕವೂ ಮಾಡಿದರೂ ಅದು ಶ್ರೇಷ್ಠವಾದದ್ದೇ ಅಂತ ಅಂದರೆ “Dignity of Labour ” ಅನ್ನು ಎತ್ತಿ ಹೇಳುತ್ತದೆ.
ಕಾಯಕ ಶ್ರೇಷ್ಠತೆಯಿಂದ ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎನ್ನುತ್ತಾ ಸಾಮಾಜಿಕ ಕ್ರಾಂತಿಯಗೆ ತಿರುಗುಕೊಟ್ಟ ಕೀರ್ತಿ ನಮ್ಮ ಶರಣ ಸಮಾಜಕ್ಕೆ ಸಲ್ಲುವುದು ಅನ್ನುತ್ತಿದ್ದರು.
ವಿಶ್ವ ಇತಿಹಾಸದಲ್ಲಿ ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನ ಹೆಸರು ಮೊದಲಾಗುವುದು…. ಸತ್ಯ ಶುದ್ಧ ಕಾಯಕದ ಅನುಷ್ಠಾನ ಮನುಜನ ಆದ್ಯ ಕರ್ತವ್ಯ … ಕೈಗೊತ್ತಿಕೊಂಡ ಕಾಯಕದಲ್ಲಿ ಭಕ್ತಿ ಶ್ರದ್ಧೆ ಇರಬೇಕು ಅದಕ್ಕೆ ಮೇಲು ಕೀಳ ಎಂಬ ಸೂತಕ ತಟ್ಟಬಾರದು ಅನ್ನುತ್ತಿದ್ದರು ತಾಯಿಯವರು…
ವೈಚಾರಿಕ ಆಚಾರವೆಂದರೆ ದುಡಿಮೆ ದಾನ ಏನೇ ಇದ್ದರೂ ಎಷ್ಟೇ ಇದ್ದರು ಆಚಾರ ರಹಿತ ವರ್ತನೆಯಲ್ಲಿ ಅದು ಸಂಪೂರ್ಣ ನಿರರ್ಥಕ , ಆದ್ದರಿಂದ ಆಚಾರ ಸಂಪನ್ನನಾಗಿರಬೇಕು ಮನುಷ್ಯ ಅನ್ನುತ್ತಾರೆ ಇದು ಕಾಯದಿಂದ ಬಂದ ಹಣ ಯೋಗ್ಯವಾದ ಕರ್ಮ ಕ್ರಿಯೆಗಳಾದ ಜಂಗಮ ದಾಸೋಹಕ್ಕೆ ಗುರು ಸೇವೆಗೆ ಲಿಂಗದ ಆರಾಧನೆಯೇ ಅಂತಹ ಕೆಲಸಕ್ಕೆ ಸಲ್ಲಬೇಕು. ಸದಾಚಾರ ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಅನ್ನುತ್ತಿದ್ದರು .
ಪರಶಿವನ ಸೇವೆಯಲ್ಲಿ ಸದಾ ತೊಡಗುವುದೇ ಶಿವಾಚಾರ ನಡೆ-ನುಡಿಗಳಲ್ಲಿ ಮಡಿಯಾದವರು ಶಿವಾಚಾರ ಸಂಪನ್ನರು ಅಂತ ಹೇಳ್ತ… ಜಾತಿ ಮತ ರಹಿತಸಮಾಜ ನಿರ್ಮಿಸಲು ತಾಯಿಯವರು ಒತ್ತುಕೊಟ್ಟವರು.(ಮುಂದುವರೆಯುವುದು)
ಸವಿತಾ ದೇಶಮುಖ




