ಮನೋಸಂಗಾತಿ
ಡಾ.ಸುಮತಿ ಪಿ.
“ಮನಸ್ಥಿತಿ ಬದಲಾದರೆ-
ಪರಿಸ್ಥಿತಿ ಬದಲಾದೀತು”


ಮನಸ್ಸು ಎಂಬುದು ಬಹಳ ಸೂಕ್ಷ್ಮವಾದದ್ದು, ಅದೊಂದು ವಿಶಿಷ್ಟವಾದ ಶಕ್ತಿ.ಮನಸ್ಸು ಬಹಳ ವೇಗವಾಗಿ ಸಂಚರಿಸುವ ಶಕ್ತಿಯಾಗಿದ್ದು, ಅದರ ಹಿಡಿತವನ್ನು ಸಾಧಿಸುವುದು ಬಹಳ ಕಷ್ಟವಾಗುವುದು. ಮನಸ್ಸನ್ನು ಕೆಲವೊಮ್ಮೆ ಭಾವನೆಗಳ ಕೈಗೆ ಕೊಟ್ಟು, ಏನೇನೋ ಅನಾಹುತಗಳು ಆಗುವುದುಂಟು. ಮನಸ್ಸಿನ ಹಿಡಿತವಿದ್ದರೆ ಮಾತ್ರ ಮನಸ್ಸು ವಿಷಯವನ್ನು ಗ್ರಹಿಸಲು,ಅದಕ್ಕೆ ಪ್ರತಿಕ್ರಿಯಿಸಲು ಮತ್ತು ವಿಚಾರ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತಲೂ ವೇಗವಾಗಿ ಚಲಿಸುವ ಮನಸ್ಸು
ನಮ್ಮ ಆಲೋಚನೆಗಳು, ಕನಸುಗಳು ಮತ್ತು ಅನಿಸಿಕೆಗಳ ಸಂಕೀರ್ಣ ಪ್ರಕ್ರಿಯೆ.
ಮನಸ್ಸಿನ ಏಕಾಗ್ರತೆ, ತಾಳ್ಮೆ ಮತ್ತು ಉದಾತ್ತತೆಯಿಂದ ಮನಸ್ಸನ್ನು ನಿಯಂತ್ರಿಸುವುದರಿಂದ ವ್ಯಕ್ತಿಯೊಬ್ಬನ ಜೀವನದ ಯಶಸ್ಸಿಗೆ ಅದು ಕಾರಣವಾಗುತ್ತದೆ.
ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ನಿರ್ದೇಶಿಸಿದರೆ ಅದು ಜೀವನವನ್ನು ಅದ್ಭುತವಾಗಿಸಬಲ್ಲದು.
ಸ್ಥಿರ ಮನಸ್ಥಿತಿ ಹೊಂದಿರುವವರು ಬದಲಾವಣೆಗೆ, ಬದಲಾವಣೆಯಿಂದ ಬೆಳವಣಿಗೆಯ ಮನಸ್ಥಿತಿಗೆ ಪರಿವರ್ತನೆಗೊಳ್ಳಬೇಕಾಗುತ್ತದೆ.
ಮನಸ್ಥಿತಿಯನ್ನು ಬದಲಾಯಿಸುವುದು ಕಷ್ಟ ಎಂಬುದನ್ನು ಒಪ್ಪಿಕೊಂಡರೂ,
ನಾವು ಮನಸ್ಸು ಬದಲಾಯಿಸುವುದರಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ, ಎನ್ನುವುದಾದರೆ ನಾವು ಮನಸ್ಸು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಬಹುದು.ಅಂತಹ ಸಂದರ್ಭದಲ್ಲಿ ಮನಸ್ಸು ಬದಲಾಯಿಸುವುದು ಯೋಗ್ಯವಾಗಿದೆ,ಅನಿವಾರ್ಯವಾಗಿದೆ.
ಕೆಲವೊಂದು ಸಂದರ್ಭದಲ್ಲಿ ಬದುಕಿನಲ್ಲಿ ಸ್ಥಿರಮನಸ್ಸಿನಿಂದಾಗಿ ಎಂತೆಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಸ್ಥಿರ ಮನಸ್ಸಿನಿಂದ ಒಳಿತಾಗುವುದೂ ಇದೆ.ಮನಸ್ಸು ಬದಲಾಯಿಸುವುದು ನಮಗೆ ಕಷ್ಟ ಎನಿಸಬಹುದು. ಪರಿಸ್ಥಿತಿ ಯಾವಾಗ ನಮಗೆ ಕಷ್ಟವೆಸಿಸುತ್ತದೆಂದರೆ ನಮ್ಮ ಮನಸ್ಸು ಅದನ್ನು ಸ್ವೀಕರಿಸದಾಗ, ಅಥವಾ ಅದನ್ನು ಒಪ್ಪಿಕೊಳ್ಳದೆ ಇದ್ದಾಗ. ಹಾಗಾಗಿ ಕೆಲವೊಮ್ಮೆ ಇದ್ದ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾದಾಗ ನಮಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಒಂದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿರುತ್ತೇವೆ. ಹಾಗಾಗಿ ಬದಲಾವಣೆಗಳು ಉಂಟಾದಲ್ಲಿ ಮನಸ್ಸನ್ನು ತಕ್ಷಣ ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ಆದರೆ ನಿಧಾನವಾಗಿ ನಾವು ಅದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದಾಗ, ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಮೊದಲು ಕಷ್ಟವೆನಿಸಿದ ಅದೇ ಪರಿಸ್ಥಿತಿ ಮತ್ತೆ ಸುಲಭವಾಗಲು ಹೇಗೆ ಸಾಧ್ಯ.? ಇಲ್ಲಿ ಇರುವುದು ವಿಚಾರ ಇಷ್ಟೆ. ಯಾವಾಗ ನಾವು ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಾದ ಸಂದರ್ಭ ಬರುತ್ತದೋ ಆವಾಗ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಅಂದರೆ ಬದಲಾವಣೆಯನ್ನು ಮನಸ್ಸು ಸ್ವೀಕರಿಸಲು ಒಪ್ಪುತ್ತದೆ. ಇಲ್ಲಿ ಕಷ್ಟದ ಪರಿಸ್ಥಿತಿ ನಮ್ಮ ಹೊಂದಾಣಿಕೆ ಇದ್ದಾಗ ಸುಲಭವಾಗಲು ಸಾಧ್ಯವಿದೆ.
ಆದರೆ ಬುದ್ಧಿವಂತ ಜೀವಿಯಾದ ಮನುಷ್ಯರಲ್ಲಿ ತನ್ನ ಮನಸ್ಥಿತಿಯನ್ನು ಬದಲಾಯಿಸುವಂತಹವರು ಇರುವುದು ಬಹಳ ಅಪರೂಪ. ಹೀಗಾಗಿಯೇ ಪರಸ್ಪರರಲ್ಲಿ ಸಿಟ್ಟು, ಕೋಪ,ದ್ವೇಷ, ರೋಷ , ಅಸೂಯೆ ಮೂಡಿ ಬರುವುದು.
ಮನುಷ್ಯ ಸಂಘಜೀವಿಯಾದ ಕಾರಣ ಸಾಮಾಜಿಕ ಜೀವನದಲ್ಲಿ, ಸಮಷ್ಟಿಯ ಒಳಿತಿನ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸಮಾಜದ ಕೆಟ್ಟತನಕ್ಕೆ ಅಥವಾ ದುರ್ನನಡತೆಗೆ ತನ್ನ ಮನಸ್ಥಿತಿ ಕಾರಣವಾಗಬಾರದು ಎಂಬ ಎಚ್ಚರಿಕೆ ಮನುಷ್ಯನಲ್ಲಿ ಇರಬೇಕಾಗುತ್ತದೆ.
ಪ್ರಪಂಚದಲ್ಲಿ ನಡೆಯುವ ಎಲ್ಲಾ ಕೆಟ್ಟ ಪರಿಸ್ಥಿತಿಗೂ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮನುಷ್ಯ ತನ್ನ ಮನೆಯಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕಾದರೆ ಸಾಮಾಜಿಕ ಮನಸ್ಥಿತಿಯನ್ನು ಅರಿತು, ಅದರಂತೆ ನನ್ನ ಮನಸ್ಸನ್ನು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಿ ಸಮಾಜ ಸುಸ್ಥಿತಿಯಲ್ಲಿ ನಡೆಯಬಹುದು.
‘ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗತ್ತದೆ’ ಎಂಬುದಕ್ಕೆ ಒಂದು ಸರಳ ಉದಾಹರಣೆಯನ್ನು ಕೊಡುವುದಾದರೆ ಒಂದು ಕುಟುಂಬದಲ್ಲಿನ ಹೆಣ್ಣು ಮಗಳು ಅಂತರ್ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಬೇಕೆನ್ನುವಾಗ, ಅವಳ ಮನೆಯವರ ಮನಸ್ಥಿತಿ ಅದಕ್ಕೆ ಒಪ್ಪದೇ ಇರಬಹುದು. ಏಕೆಂದರೆ ಸಮಾಜ ತಮ್ಮನ್ನು ಬೇರೆ ದೃಷ್ಟಿಕೋನದಿಂದ ನೋಡಬಹುದು, ನಮ್ಮನ್ನು ಹೊರಗೆ ಇಡಬಹುದು, ಬೇರೆ ಜಾತಿಯ ಸಂಸ್ಕೃತಿ ,ಸಂಸ್ಕಾರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂಬಿತ್ಯಾದಿ ಕಾರಣಗಳಿಂದ ಅಂತರ್ಜಾತಿಯ ವಿವಾಹಕ್ಕೆ ಹೆತ್ತವರ ಮನಸ್ಸು ಒಪ್ಪದಿರಬಹುದು. ಅದೇ ರೀತಿಯಲ್ಲಿ ಪ್ರೀತಿಸಿದ ಹೆಣ್ಣು- ಗಂಡು ಒಬ್ಬರನ್ನೊಬ್ಬರು ಬಿಟ್ಟು ದೂರವಾಗಲು ಅವರ ಮನಸ್ಸೂ ಒಪ್ಪದಿರಬಹುದು. ಈ ಸಂದಿಗ್ಧ ಸನ್ನಿವೇಶದಲ್ಲಿ ಕುಟುಂಬದ ಪರಿಸ್ಥಿತಿ ಬೀಗಡಾಯಿಸುತ್ತದೆ. ಆಗ ಒಂದೇ ಪ್ರೀತಿಸಿದವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ವಿಷಯವನ್ನು ಬಗೆಹರಿಸಬಹುದು ಅಥವಾ ತಂದೆ ತಾಯಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅಂತರ್ಜಾತೀಯ ವಿವಾಹ ಮಾಡಿಕೊಡಲು ಒಪ್ಪಿಗೆ ನೀಡಬಹುದು. ಆಗ ಅಲ್ಲಿ ಬಿಗಡಾಯಿಸಿದಂತಹ ಪರಿಸ್ಥಿತಿ, ಶಾಂತವಾಗಿ ಎಲ್ಲವೂ ಸುಖಾಂತ್ಯವಾಗಬಹುದು. ಇದು ಒಂದು ಉದಾಹರಣೆ. ಹೀಗೆ ಮನಸ್ಥಿತಿ ಬದಲಾದರೆ ಪರಿಸ್ಥಿತಿಯು ಬದಲಾಗಬಹುದು ಎಂಬುದಕ್ಕೆ ನಮ್ಮ ದಿನನಿತ್ಯದ ಜೀವನದಿಂದ ಹಲವಾರು ರೀತಿಯ ಘಟನೆಗಳನ್ನು ಇಲ್ಲಿ ಉಲ್ಲೇಖ ಮಾಡಬಹುದು.
ಆದರೆ ನಮ್ಮ ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಜನರ ಸ್ಥಿರ ಮನಸ್ಥಿತಿಯಿಂದಾಗಿ ಉಂಟಾಗುವ ಕೆಡುಕುಗಳ ಬಗ್ಗೆ ಆಲೋಚನೆಯನ್ನೇ ಮಾಡುವುದಿಲ್ಲ. ಎಲ್ಲರಿಗೂ ಅವರವರ ,*ಈಗೊ* ಮುಖ್ಯವಾಗುವುದನ್ನು ನಾವು ಗಮನಿಸಿದ್ದೇವೆ.
ಆದರೆ ಮನುಷ್ಯ ತನ್ನ ಪರಿಸ್ಥಿತಿಯನ್ನು ಬದಲಾಯಿಸಲು, ತಾನು ಪರಿಸ್ಥಿತಿಯನ್ನು ದೂಷಿಸದೆ, ತನ್ನ ಮನಸ್ಸನ್ನು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ಅನಿವಾರ್ಯ .ಸಂಕಷ್ಟ ಕಾಲದಲ್ಲಿ ಬದಲಾವಣೆಗಾಗಿ ತಮ್ಮಮನಸ್ಥಿತಿಯನ್ನೇ ಬದಲಾಯಿಸಿ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಎದುರಿಸಲು ಸಾಧ್ಯವಿದೆ.
ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ.
ಹಾಗಂತ ಎಲ್ಲಾ ರೀತಿಯ ಪರಿಸ್ಥಿತಿಯ ಬದಲಾವಣೆಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕೆಂದರ್ಥವಲ್ಲ. ಇನ್ನೊಬ್ಬರಿಗೆ ಒಳಿತಾಗುವುದಾದರೆ, ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದರಿಂದ ಸಾಮೂಹಿಕ ಅಥವಾ ಸಮಾಜಕ್ಕೆ ಹಿತವಾಗುವುದಾದರೆ ನಾವೇಕೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬಾರದು? ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲದಂತಹ ಸಂದರ್ಭಗಳು ಬರಬಹುದು. ಅಂದರೆ ಪರಿಸ್ಥಿತಿ ನಮ್ಮ ಮನಸ್ಥಿತಿಯನ್ನು ಬದಲಾಯಿಸಿ ನಾವು ಅದಕ್ಕೆ ಒಗ್ಗಿಕೊಂಡರೂ ಒಳಿತಾಗುವ ಬದಲು ಕೆಡುಕೇ ಉಂಟಾಗುವುದಾದರೆ, ನಮ್ಮ ಮನಸ್ಥಿತಿಯನ್ನು ನಾವು ಏಕೆ ಬದಲಾಯಿಸಬೇಕು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗಾದರೂ ಮಾಡಿ ಸಮಾಜದ ಹಿತಕ್ಕಾಗಿ ಬದಲಾಯಿಸಲು ನೋಡಬೇಕು. ಇಲ್ಲದಿದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ನಾವು ಸಿಲುಕದೆ ಅದರಿಂದ ಹೊರಗೆ ಬರಬೇಕು.
ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ- ಎಂಬುದಕ್ಕೆ ಈಗ ನಾನು ನೀಡುವ ಅರ್ಥ ನಿಮಗಾಗಿರಬಹುದು ಎಂದು ಭಾವಿಸುತ್ತೇನೆ. ಇಲ್ಲಿ ನಮ್ಮ ಮನಸ್ಥಿತಿ ಬದಲಾಯಿಸುವುದೆಂದರೆ, ನಮ್ಮ ‘ಅಹಂ’ ಅಥವಾ ‘ಇಗೊ’ ವನ್ನು ಇಟ್ಟುಕೊಳ್ಳದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಮಾಜದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗುವುದು ಎಂದರ್ಥ. ಎಲ್ಲಿ ಸಮಾಜದಲ್ಲಿ ನಡೆಯುವ ಕೆಡುಕಿಗೆ ಅಥವಾ ಕೆಟ್ಟ ಪರಿಸ್ಥಿತಿಗೆ ನಮ್ಮ ಮನಸ್ಸು ಕಾರಣವಾಗುತ್ತದೊ ಅಂತಲ್ಲಿ ನಾವು ನಮ್ಮ ಮನಸ್ಸನ್ನು ಬದಲಾಯಿಸಿದರೆ, ಪರಿಸ್ಥಿತಿ ಸುಧಾರುತ್ತದೆ. ಹಾಗಾಗಿ ಕಷ್ಟದ ಪರಿಸ್ಥಿತಿಗೆ ನಮ್ಮ ಮನಸ್ಸು ಅಥವಾ ಮನೋಭಾವ ಕಾರಣವಾಗುತ್ತದೆ ಎಂದಾದರೆ ನಾವು ಬದಲಾಗಬೇಕು.ಅದು ಅನಿವಾರ್ಯ ಕೂಡ.ನಮ್ಮ ಮನೋಭಾವವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ,ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು.
ಮನುಷ್ಯನಾದವನು ತನ್ನ ಬದುಕಿನಲ್ಲಿ ಎದುರಾದ ಸಂಕಷ್ಟದ ಪರಿಸ್ಥಿತಿಯನ್ನರಿತು, ಅದರಿಂದ ಸಮಸ್ಯೆ ಬಗೆಹರಿದು, ಒಳಿತಾಗುವುದಾದರೆ ತನ್ನ ಮನಸ್ಥಿತಿ ಬದಲಾಯಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು. ಆಗಲೇ ಅತ್ಯುತ್ತಮವಾದುದನ್ನು ಸಾಧಿಸಬಹುದು.
ಡಾ.ಸುಮತಿ ಪಿ



