ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಮಣ್ಣಿಗೆ ಭೇದವಿಲ್ಲ”


ಊರ ಬಿಟ್ಟು ದೂರಾಚೆ ಹಾಳು ಸುಡುಗಾಡಂತೆ
ಅದ್ಯಾಕೋ ಯಾರಿಗೂ ಇಷ್ಟವಲ್ಲದ ಜಾಗವಂತೆ
ಇಲ್ಲ್ಯಾರಿಗೂ ಯಾವುದೇ ಭೇದವಿಲ್ಲವಂತೆ
ಹಾಸಿ ಹೊದ್ದಿಕೊಳ್ಳಲಿರುವುದೊಂದೆ ಮಣ್ಣಿನ ಮುದ್ದೆಯಂತೆ
ಮನುಷ್ಯನ ಎಲ್ಲದಕ್ಕೂ ಪೂರ್ಣವಿರಾಮ ಇಲ್ಲಿ
ಇದ್ದಾಗ ನಾನೇ ಎನ್ನುವ ಭರದಲ್ಲಿ
ಬೀದಿಯು ನಮ್ಮದಲ್ಲ ಎನ್ನುತ ಉಗಿಯುವನಲ್ಲಿ
ನಾನು ನನ್ನದೆನ್ನುವ ಸ್ವಾರ್ಥದ ವ್ಯಾಮೋಹದಲ್ಲಿ.
ನಶ್ವರ ಕಾಯವ ಕಾಯಕಕ್ಕಾಗಿ ಮೀಸಲಿಡು
ಪರೋಪಕಾರಾರ್ಥಂ ಇದಂ ಶರೀರಂ ಮರೆಯದಿರು
ಸಮಾಜದ ಉಪಯೋಗಕ್ಕಾಗಿ ಜೀವಿಸಿ ನೋಡು
ಕಾಯಕದಲ್ಲೇ ಕೈಲಾಸವ ಕಾಣುತಿರು.
ಪ್ರತಿಫಲ ಬಯಸದೆ ಸೇವೆಯ ಮಾಡುತಿರು
ಕಂಗಳ ಕೊಡದಿದ್ದರೂ ಅನ್ಯರ ಕಣ್ಗಳ ಕೀಳದಿರು
ನಡೆಸಲಾಗದಿದ್ದರೂ ಬೆಳಕಿನ ಮಾರ್ಗ ತೋರಿಸು
ಜೊತೆ ನಡೆಯಲಾಗದಿದ್ದರೂ ಎಡರು ತೊಡರಾಗದಿರು.
ದೇಹವ ನಂಬಿ ಬದುಕು ನಡೆಸುವ ಮನುಜನು
ಮಣ್ಣಲಿ ಮಣ್ಣಾಗುವ ಮುನ್ನ ನಾಲ್ವರ ಬಾಯಲ್ಲಿರು ನೀನು
ಅಳಿಯದೆ ಉಳಿಯುವವು ಮಾನವೀಯ ಮೌಲ್ಯಗಳಲ್ಲವೇನು!
ಸತ್ಯದ ಮಾರ್ಗದೊಳು ನಡೆ ಅರಿತು ನೈಜತೆಯನು.
ಕಲ್ಪನಾ ಎಸ್ ಪಾಟೀಲ




ತುಂಬಾ ಅರ್ಥಗರ್ಭಿತ ಕವಿತೆ ಮೇಡಂ
ಅನಂತ ಧನ್ಯವಾದಗಳು ನಿಮಗೆ
ಅದ್ಭುತ ಅರ್ಥದ ಅನುಪಮ ಸಾಲುಗಳು ಕಾವ್ಯವೆಂದರೆ⚡✨