ಡಾ.ಗೀತಾ ದಾನಶೆಟ್ಟಿ ಬಾಗಲಕೋಟ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ
ಅವಳೆಂದರೆ


ಅವಳೆಂದರೆ
ಜೀವದ ಒಡಲು
ಮಮತೆಯ ಮಡಿಲು
ಕರುಣೆಯ ಕಡಲು
ಪ್ರೀತಿಗೆ ಮಿಗಿಲು
ಅವಳೆಂದರೆ
ಮಧುರ ಭಾವಗಳ ಸಾಗರ
ಸದಾ ಸಂತಸದ ಆಗರ
ತ್ಯಾಗ, ಸಹನೆಯ ಶಿಖರ
ಜ್ಞಾನಧಾರೆಯ ಭಂಡಾರ
ಅವಳೆಂದರೆ
ಬದುಕಿಗೆ ಬಣ್ಣ ತುಂಬುವ ಕಲಾವಿದೆ
ಕವಿ ಕಾವ್ಯದ ವಸುಂಧರೆ
ಅಕ್ಕರೆಯ ಅಮೃತಧಾರೆ
ಸೃಷ್ಟಿಯ ಸೌಂದರ್ಯ
ಅವಳೆಂದರೆ
ಅಬಲೆಯಲ್ಲ ಆದರ್ಶ
ಆತ್ಮಾಭಿಮಾನದ ಅನರ್ಘ್ಯ
ಆಧ್ಯಾತ್ಮದ ಅನುಭೂತಿ
ಗಳತಿ,ಸಂಗಾತಿ ಸಂಪ್ರೀತಿ
ಅವಳೆಂದರೆ
ಮಿಡಿಯುವ ಮೌನಗಾನ
ಮನ ಮಂದಿರದ ತಾಣ
ಬದುಕಿನ ಉಯ್ಯಾಲೆ
ಜ್ಞಾನದ ಸ್ಪೂರ್ತಿಸೆಲೆ
ಅವಳೆಂದರೆ
ಕುಟುಂಬದ ಹೊಣೆಗಾರಿಕೆ
ದಡ ಸೇರಿಸುವ ನೌಕೆ
ಎಲ್ಲರನು ಸಲಹುವ ಸೇವಕಿ
ಸಕಲ ರಂಗದಲಿ ಸಾಧಕಿ
ಅವಳೆಂದರೆ
ಸೀಡಿದೇಳುವ ಶಕ್ತಿ ಸ್ವರೂಪಿಣಿ
ದಣಿವರಿಯದ ಧರಣಿ
ಜಗದ ಜೀವನಾಡಿ
ಬಾಳ ಪುಟದ ಮುನ್ನುಡಿ
ಅವಳೆಂದರೆ
ಬರೀ ಹೆಸರು ಮಾತ್ರವಲ್ಲ
ತಪ್ಪನ್ನು ತಿದ್ದಿ ಬುದ್ದಿ ಹೇಳುವವಳು
ಅತ್ತಾಗ ಅಪ್ಪಿ ಮುದ್ದಿಸುವವಳು
ಹಸಿದಾಗ ಕೈತುತ್ತು ಕೊಡುವವಳು
ಅವಳೆಂದರೆ
ಆಲದ ಮರದ ನೆರಳು
ನೋವು ನುಂಗಿ ನಲಿವಳು
ಭೂಮಿ ತೂಕದವಳು
ಹೃದಯ ತುಂಬಿ ಹರಿಸುವವಳು
ಅವಳಿದ್ದರೆ ದಿನವೂ ನಿತ್ಯೋತ್ಸವ
ಮತ್ಯಾಕೆ ಕುಣಿದು,ಕುಪ್ಪಳಿಸಿ
ಮಾಡಿ ಮುಗಿಸುವಿರಿ ಅವಳಿಗೊಂದು ಉತ್ಸವ
ಪ್ರೇರಣೆ,ಸಾಧನೆಗಿರಲಿ ಸಂಭ್ರಮೋತ್ಸವ

ಡಾ.ಗೀತಾ ದಾನಶೆಟ್ಟಿ ಬಾಗಲಕೋಟ




Sunderwagi mudide madum
Savita Deshmukh