ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಕ ಪ್ರಾಣಿಗಳೆಂದ ಮಾತ್ರಕ್ಕೆ ದಯವಿಟ್ಟು ನಮ್ಮನ್ನು ಕೀಳಾಗಿ ಕಾಣಬೇಡಿ ನಾವೂ ಸಹ ನಿಮ್ಮಂತೆಯೇ ಉಸಿರಾಡುತ್ತೇವೆ. ನಾಯಿ,ಹಸು,ಕುರಿ, ಕೋಳಿ,ಮೇಕೆ ಹೆಸರುಗಳಿಂದ ನಮ್ಮನ್ನು ಗುರುತಿಸುತ್ತೀರಾ.

 ಬೇಸಿಗೆಕಾಲ ಶುರುವಾಗಿದೆ ನಿಮಗೆ ಹೇಗೆ ನೀರಿನ ಅಗತ್ಯವಿದೆಯೋ, ಅದೇ ರೀತಿ ನಮಗೂ ಸಹ ಅಗತ್ಯವಿರುತ್ತದೆ. ದಯವಿಟ್ಟು ನಿಮ್ಮ ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಅಥವಾ ಅಗಲವಾದ ಪಾತ್ರೆಯಲ್ಲಿ ನಮಗಾಗಿಯೇ ಅಂತ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿ ಕರುಣೆಯನ್ನು ತೋರಿಸಿ.

 ಗೇಟಿನ ಮುಂದೆ ಬಂದರೆ ಸಾಕು ನಮ್ಮನ್ನು ಓಡಿಸುತ್ತೀರಾ ಯಾವ ಕಾರಣಕ್ಕಾಗಿ ಬಂದಿದೀವಿ ಅಂತ ಸ್ವಲ್ಪ ಮಟ್ಟಿಗಾದರೂ ಯೋಚಿಸಿ
 ಕೆಲವರ ಮನೆಯ ಮುಂದೆ ನಮಗಾಗಿ ಅಂತ ಸದಾ ನೀರಿನ ವ್ಯವಸ್ಥೆಯನ್ನು ಮಾಡಿರುತ್ತಾರೆ ಇನ್ನೂ ಕೆಲವರು ನೀರನ್ನು ಕುಡಿಯಲು ಕೊಡುವ ಬದಲು ಆ ನೀರನ್ನೇ ನಮ್ಮ ಮೇಲೆ ಎರಚಿ ನಮ್ಮನ್ನು ಓಡಿಸುತ್ತಾರೆ.

 ನಿಮ್ಮಂತೆಯೇ ನಾವೂ ಸಹ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದರೆ ಬಿರು ಬಿಸಿಲಿನಲ್ಲಿ ಬೀದಿಬೀದಿ ಅಲೆದಾಡುವ ಪ್ರಸಂಗ ಬರುತ್ತಿರಲಿಲ್ಲ. ಮನೆಯಲ್ಲಿ ಹಳಸಿದ ಅನ್ನ,ಒಣಗಿರುವ ರೊಟ್ಟಿ, ಕೊಳೆತ ಹಣ್ಣು ತರಕಾರಿಗಳನ್ನು ಒಂದು ಕವರಿನಲ್ಲಿ ಹಾಕಿ ಬೀದಿ ಬದಿಯಲ್ಲಿ ಎಸೆಯುತ್ತೀರ

 ಹಸಿವೆಯನ್ನು ತಾಳಲಾರದೆ ಕವರಿನಲ್ಲಿರುವ ಆಹಾರವನ್ನು ತಿನ್ನುವುದರ ಜೊತೆಗೆ ಹಾನಿಕಾರಕ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರಿ ಗಂಭೀರ ಖಾಯಿಲೆಯಿಂದ ಬಳಲಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ.

 ಪ್ಲಾಸ್ಟಿಕ್ ಕವರಿನಲ್ಲಿ ಆಹಾರ ಪದಾರ್ಥಗಳನ್ನು ಗಂಟು ಕಟ್ಟಿ ಎಸೆಯುವ ಬದಲು ಯಾವುದಾದರೊಂದು ಕಲ್ಲಿನ ಮೇಲೆ ಅಥವಾ ಒಂದು ಎಲೆಯ ಮೇಲೆ ನಮಗಾಗಿ ಅಂತ ಮೀಸಲಿಟ್ಟಿರುವ ಆಹಾರವನ್ನು ಇಟ್ಟರೆ ಪ್ಲಾಸ್ಟಿಕ್ ಬಳಕೆ ಕಮ್ಮಿಯಾಗುವುದರ ಜೊತೆಗೆ ನಮ್ಮ ಜೀವವೂ ಸಹ ಉಳಿಯುತ್ತದೆ.

ಬಾನಾಡಿಯಲ್ಲಿ ಸ್ವಚ್ಛಂದವಾಗಿ ಹಾರಾಡುವ ನಮ್ಮ ಗೆಳೆಯ ಗೆಳತಿಯರಿಗಾಗಿ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅವರಿಗೂ ಸಹ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ. ದಯವಿಟ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ನಮ್ಮನ್ನು ಉಳಿಸಿ.


About The Author

Leave a Reply

You cannot copy content of this page

Scroll to Top