ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

             ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು

ಜ್ವಾಲೆಯನ್ನು ನಿರಾಸೆಗೊಳಿಸಿತು ಕಲಹಕ್ಕೊಪ್ಪದ ಉನ್ಮುಖನ ಮಾತು. ಉನ್ಮುಖ ಯುದ್ಧೋನ್ಮುಖನಾಗಲಿಲ್ಲ. ಹರಿಭಕ್ತಮುಖದವನಾಗಿ ಶಾಂತಭಾವದಿ ಕುಳಿತ. ಶ್ರೀಕೃಷ್ಣನ ಸಹಾಯವನ್ನು ಪಡೆದು ಬಂದಿರುವ ನನ್ನ ಜೊತೆ ಯುದ್ಧವನ್ನು ಮಾಡುವ ಮನಸ್ಸಿರಲಿಲ್ಲ ಅವನಿಗೆ. ಜ್ವಾಲೆಯ ರೀತಿಯದು ಹಿಂದಣ ತ್ರೇತಾಯುಗದ ಶೂರ್ಪನಖಿಯ ನೆನಪನ್ನು ಮೂಡಿಸಿತು ಅವನಿಗೆ. ತನಗೊಲಿಯದೆ ಮೂಗು ಕೊಯ್ದವರ ಮೇಲಿನ ಸೇಡಿಗೆ ರಾಮ ರಾವಣ ಸಂಘರ್ಷವನ್ನು ತಂದಿತ್ತ ಶೂರ್ಪನಖಿಯಂತೆಯೇ ತನ್ನಕ್ಕನ ಕಲಹಪ್ರಿಯವಾದ ನಡೆಯಿದೆ ಎನಿಸಿತು ಅವನಿಗೆ. ಆ ಮಾತನ್ನೇ ಕಟುವಾಗಿ ಆಡಿ ಅವಳನ್ನು ಬೈದು ಅಲ್ಲಿಂದ ಕಳುಹಿಸಿಕೊಟ್ಟ. ಅಕ್ಕನ ರೋಷದ ನೆಪದಲ್ಲಿ ನನ್ನನ್ನು ಎದುರುಹಾಕಿಕೊಳ್ಳುವ ಮನಮಾಡಿ ಅಪಾಯಕ್ಕೆ ಮನೆಮಾಡಿಕೊಡುವ ಆಸಕ್ತಿಯಿರಲಿಲ್ಲ ಉನ್ಮುಖನಿಗೆ. 

     ತಮ್ಮನಿಂದಲೂ ತಿರಸ್ಕೃತಳಾದ ಜ್ವಾಲೆ ಪಯಣವನ್ನು ಬೆಳೆಸುತ್ತಾ ಹೋದವಳು ಗಂಗಾತೀರವನ್ನು ಸೇರಿದಳು. ಪಾಪ ಪರಿಹಾರ ಪುಣ್ಯಜಲದಂತೆ ಹರಿಹರಿಯುತ್ತಿದ್ದ ಗಂಗೆಯನ್ನು ಕಂಡಳು. ಅಮರನದಿಯದು ಜ್ವಾಲೆಯಲ್ಲಿ ಅಮರಭಾವವನ್ನು ಬಿತ್ತಬೇಕಿತ್ತು. ಆದರೆ ಮೊಳಕೆಯೊಡೆದದ್ದು ಅಸುರಭಾವ. ಕೆಲವರ ವರ್ತನೆ ಹಾಗೆಯೇ. ದಿವ್ಯವಾದದ್ದನ್ನು ದರ್ಶಿಸಿದಾಗಲೂ ದುಷ್ಟಭಾವವೇ ಅವರಲ್ಲಿ ಚಿಗುರೊಡೆಯುತ್ತದೆ. ಆ ಬಗೆಯಲ್ಲಿ ಅವರ ಮನೋಭೂಮಿಕೆ ಸಿದ್ಧಗೊಂಡಿರುತ್ತದೆ. ಗಂಗೆಯನ್ನು ಬಳಸಿಕೊಂಡು ತನ್ನಂತರಂಗದ ಮಾತ್ಸರ್ಯಕ್ಕೊಂದು ಗಮ್ಯವನ್ನು ಕಾಣಿಸುವ ಕುಯೋಚನೆ ಮೂಡಿತು ಜ್ವಾಲೆಯಲ್ಲಿ. 

     ದೋಣಿ ನಡೆಸುವವರೊಂದಷ್ಟು ಜನ ಗಂಗಾತಟದಲ್ಲಿಯೇ ಕುಳಿತಿದ್ದರು. ಅವರನ್ನು ನೋಡುತ್ತಾ ಜ್ವಾಲೆ “ಗಂಗಾನದಿಯ ಒಂದು ಬಿಂದೂ ನನ್ನ ದೇಹವನ್ನು ಸೋಂಕದಂತೆ ನನ್ನನ್ನು ಈ ದಡದಿಂದ ಆ ದಡದೆಡೆಗೆ ಒಯ್ಯುವವರು ಯಾರಾದರೂ ಇರುವಿರಾ?” ಎಂದಳು. 

    ಅಂಬಿಗರಿಗೆ ಅಚ್ಚರಿಯಾಯಿತು. ಹನಿ ಹನಿ ಗಂಗಾಜಲವದು ಪರಮ ಪಾವನ ಪುಣ್ಯ ಪವಿತ್ರ ಎಂದು ನಂಬುವ ಅನೇಕಾನೇಕ ಜನರನ್ನವರು ಕಂಡಿದ್ದರು. ಗಂಗೆಯ ನೀರದು ಮೈಯ್ಯನ್ನು ಸ್ಪರ್ಶಿಸಿದರೆ ಘನಮಲಿನವೆಂಬ ಬಗೆಯಲ್ಲಿ ಮಾತನ್ನು ಆಡಿದವರಿರಲಿಲ್ಲ; ವರ್ತಿಸಿದವರಿರಲಿಲ್ಲ. ಜ್ವಾಲೆಯ ರೀತಿಯದು ಹೊಸದೆನಿಸಿತು ಅವರಿಗೆ. “ಬಂದದ್ದಾವ ಉದ್ದೇಶದಿಂದ? ಗಂಗಾಜಲವನ್ನು ಮುಟ್ಟಬಾರದು ಎಂದೆನಲು ಕಾರಣವೇನು?” ಎಂದು ವಿಸ್ಮಯ ಭಾವದಲ್ಲಿ ಕೇಳಿದರು. 

    ತನ್ನ ಪಾಡಿಗೆ ಹರಿಯುತಿರುವ ಗಂಗೆಗೆ ಕೌತುಕ ಹುಟ್ಟುವಂತೆ ಆ ಜ್ವಾಲೆ “ಗಂಗೆಗೆ ಒಂದು ದೋಷವಿದೆ. ಅದೇನೆಂದು ನಿಮಗೆ ಹೇಳಲಾರೆ. ಆ ಗಂಗೆಯೇ ನನ್ನೆದುರು ಮೈದೋರಲಿ. ಹೇಳುತ್ತೇನೆ” ಎಂದಳು. 

   ಅಪವಾದದ ಅಪನುಡಿಯದು ಅಂಜಿಸಿತು ಅಮರನದಿಯನ್ನು. ತನಗಿರುವ ದೋಷ ಅದಾವುದು ಎನ್ನುವುದನ್ನು ತಿಳಿಯುವ ಕುತೂಹಲಿಯಾದಳು ಗಂಗೆ. ತಕ್ಷಣವೇ ಪ್ರತ್ಯಕ್ಷಳಾದಳು. “ಇನ್ನೊಬ್ಬರ ದೋಷಗಳನ್ನೂ, ಪಾಪಗಳನ್ನೂ ದೂರ ಮಾಡುವವಳೆಂದು ವೇದಶಾಸ್ತçಗಳು ಗುರುತಿಸಿವೆ ನನ್ನನ್ನು. ಸೋಂಕಬಾರದು ಎನ್ನನ್ನು ಎಂದು ದೂಷಿಸುತ್ತಿರುವವಳು ನೀನು. ಇದಕ್ಕೆ ಕಾರಣವೇನು?” ಎಂದು ಆಶ್ಚರ್ಯದಿಂದ ಕೇಳಿದಳು ಜ್ವಾಲೆಯಲ್ಲಿ. 

    ಮೋಡಿಯ ಮಾತುಗಳನ್ನಾಡಿದಳು ಜ್ವಾಲೆ. “ನಾನೇನೂ ನಿನ್ನನ್ನು ಬೈದದ್ದಲ್ಲ. ಲೋಕರೂಢಿಯ ಮಾತನ್ನು ಹೇಳಿದ್ದೇನೆ ಅಷ್ಟೇ. ಮಕ್ಕಳಿಲ್ಲದ ಬಂಜೆಯನ್ನು ದೋಷವಿರುವವಳು ಎಂದು ಗುರುತಿಸುವ ಕ್ರಮವುಂಟು ಈ ಲೋಕದೊಳಗೆ” ಎಂದಳು. 

    ಗಂಗೆಗೆ ಈ ಮೊದಲಿಗಿಂತಲೂ ಹೆಚ್ಚಿನ ಅಚ್ಚರಿಯಾಯಿತು. ಕೋಪ ಬಂತು. “ಇಚ್ಛಾಮರಣಿಯೆಂದು ಹೆಸರು ಪಡೆದು, ತ್ರೆöÊಲೋಕ ವೀರನೆಂದು ಖ್ಯಾತಿ ಗಳಿಸಿದ ಭೀಷ್ಮ ನನ್ನ ಮಗನಾಗಿರುವಾಗ ನನ್ನನ್ನು ಮಕ್ಕಳಿಲ್ಲದವಳೆಂದು ಹಂಗಿಸುವುದು ಸರಿಯಲ್ಲ” ಎಂದು ಜ್ವಾಲೆಯನ್ನು ಬೈದಳು. 

    ವಾಸ್ತವವಾಗಿ ಜ್ವಾಲೆಗೆ ಬೇಕಿದ್ದುದೂ ಅದೇ, ಗಂಗೆಯ ಮನವನ್ನು ಕೆರಳಿಸುವುದು. ಭೀಷ್ಮ ಗಂಗಾಸುತನೆನ್ನುವುದು ಜ್ವಾಲೆಗೆ ತಿಳಿಯದ ಸಂಗತಿಯೇನಲ್ಲ. ಎಂಟು ಮಕ್ಕಳನ್ನು ಪಡೆದ ಗಂಗೆ ಕೊನೆಯದಾಗಿ ಭೀಷ್ಮನನ್ನು ಮಾತ್ರ ಉಳಿಸಿಕೊಂಡ ಬಗೆ ಜ್ವಾಲೆಗೆ ಗೊತ್ತಿತ್ತು. ಬಿಂದು ಬಿಂದುಗಳನ್ನು ಒಂದೊಂದಾಗಿ ಕ್ರಮಿಸುತ್ತಾ ಜ್ವಾಲೆ ಸಾಗಿಬಂದದ್ದು ಈ ಘನಸಿಂಧುವಿನೆಡೆಗೆ, ಭೀಷ್ಮ ಮರಣವನ್ನು ತಿಳಿಸುವ ಅಂತಿಮ ಗಳಿಗೆಯ ಕಡೆಗೆ. “ಹೌದು! ನಿನ್ನ ಸುತ ಭೀಷ್ಮ ಎನ್ನುವುದು ಗೊತ್ತಿದೆ. ಅವನು ವೀರ ಎನ್ನುವ ಅರಿವೂ ಇದೆ. ಅವನು ಇನ್ನೂ ಹೆಚ್ಚಿನ ಔನ್ನತ್ಯವನ್ನು ಗಳಿಸುತ್ತಿದ್ದನೋ ಏನೋ! ಆದರೆ ಆ ಅರ್ಜುನ ಕುರುಕ್ಷೇತ್ರ ಕದನದಲ್ಲಿ ನಿನ್ನ ತನುಜನನ್ನು ಕೊಂದುಹಾಕಿದ. ಹೀಗಿರುವಾಗ ನೀನು ಮಕ್ಕಳಿಲ್ಲದವಳು ಎಂದೇ ಕರೆಸಿಕೊಳ್ಳಬೇಕಾಗುತ್ತದೆ” ಎಂಬ ನುಡಿಸಿಡಿಲು ಸಿಡಿಯಿತು ಜ್ವಾಲೆಯೊಳಗಿಂದ. 

    ಒಣಗಿದ ಮರಕ್ಕೆ ಬಿದ್ದ ಕಿಚ್ಚು ಹಸಿಹಸಿಯಾದ ಗಿಡವನ್ನೂ ಸುಟ್ಟುಹಾಕುವಂತೆ, ಈಗಾಗಲೇ ನನ್ನ ಮೇಲಿನ ಮುನಿಸಿನಿಂದ ಉರಿಯುತ್ತಿದ್ದ ಜ್ವಾಲೆಯ ಅಂತರಂಗದ ಕಿಚ್ಚು ಗಂಗೆಯ ಮನವನ್ನೂ ಸುಟ್ಟಿತು. ಮಗ ಭೀಷ್ಮ ಅಳಿದನೆಂಬ ಸುದ್ದಿಯನ್ನು ತಾಳಿಕೊಳ್ಳುವುದಕ್ಕಾಗಲಿಲ್ಲ ಅವಳಿಗೆ. ಭೀಷ್ಮ ಮರಣಕ್ಕೆ ಕಾರಣನೆನಿಸಿದ ನನ್ನ ಮೇಲೆ ಕ್ರೋಧ ಉಕ್ಕಿಬಂತು. “ನನ್ನ ಮಗನನ್ನು ಯುದ್ಧದಲ್ಲಿ ಕೊಂದ ಆ ಅರ್ಜುನನ ತಲೆಯನ್ನು ಅವನ ಮಗನೇ ಇನ್ನು ಆರು ತಿಂಗಳುಗಳಲ್ಲಿ ಯುದ್ಧದಲ್ಲಿ ಕೊಚ್ಚಿ ಕೆಡಹಲಿ” ಎಂದು ಶಾಪ ಕೊಟ್ಟು, ಮತ್ತೆ ಮೊದಲಿನ ಸ್ಥಿತಿಯನ್ನು ಪಡೆದಳು. 

    ಜ್ವಾಲೆಯ ಕ್ರೋಧಜ್ವಾಲೆಯಿಂದಾಗಿ ನಾನು ಗಂಗೆಯ ಶಾಪಕ್ಕೆ ತುತ್ತಾದೆ. ಅಲ್ಲಿಗೇ ಜ್ವಾಲೆಯ ದ್ವೇಷವದು ತಣಿಯಲಿಲ್ಲ. ನನ್ನನ್ನು ಕೊಲ್ಲುವ ಹರಿತವಾದ ಬಾಣವಾಗುತ್ತೇನೆ ಎಂದು ಬಯಸಿದವಳು ಅಲ್ಲಿಯೇ ಗಂಗೆಯ ತೀರದಲ್ಲಿ ಅಗ್ನಿಪ್ರವೇಶ ಮಾಡಿದಳು. ಮಣಿಪುರದ ಅರಸನಾಗಿದ್ದ ಬಭ್ರುವಾಹನನ ಬತ್ತಳಿಕೆಯಲ್ಲಿನ ಹರಿತ ಬಾಣವಾದಳು. 

    ಗಂಗೆ ನನಗಿತ್ತ ಶಾಪವದು ಅಶ್ವಮೇಧ ಯಾಗದ ಪೂರ್ಣತೆಗೆ ಸಂಚಕಾರವನ್ನೊಡ್ಡುವ ಘನಶಾಪವಾಗಿತ್ತು. ಶಾಪ ನಿಜವಾಗುವ ಗಳಿಗೆಯನ್ನು ಅದೆಂತು ಮೀರುವೆನೋ! ನನಗೆ ತಿಳಿದಿರಲಿಲ್ಲ.


About The Author

Leave a Reply

You cannot copy content of this page

Scroll to Top