ಪುಸ್ತಕ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಜ್ಯೋತಿ ಮಾಳಿ “ಹಾಳು ಗೋಡೆಯಲೊಂದು ಚಿಗುರು“ ಕೃತಿ ಶೀಷಿ೯ಕೆ:ಹಾಳು ಗೋಡೆಯಲೊಂದು ಚಿಗುರುಲೇಖಕರು:ಜ್ಯೋತಿ ಮಾಳಿ…..೭೩೩೭೭ ೦೯೫೧೨*ಪ್ರಕಾಶಕರು:ಜ್ಯೋತಿ ಪ್ರಕಾಶನ ಬೆಳಗಾವಿ ೭೩೩೭೭ ೦೯೫೧೨ಪುಸ್ತಕದ ಬೆಲೆ:126=00 ಹಾಳು ಗೋಡೆಯಲಿ ಚಿಗುರಿದ ಪ್ರಕೃತಿಯ ಆತ್ಮಬಲ ತೋರಿಸುವ ಗಜಲ್ ಗಳು… ಗಜಲ್ ಅಂದರೆ ಏನು ? ,ಅದು ಹೇಗೆ ಹುಟ್ಟಿತು , ಎಲ್ಲಿ ಬೆಳೆದು ಭಾರತಕ್ಕೆ ಹೇಗೆ ಬಂದಿತೆಂದು , ಕನ್ನಡ ಗಜಲ್ ರಚನಾ ಛಂದಸ್ಸು ಏನು, ಹೇಗೆ , ಗಜಲ್ ರಚನಾ ನಿಯಮಗಳು ಹೇಗೆಂದು ಡಾ . ಶಾಂತರಸ ಹೆಂಬೇರಾಳ ಅವರಿಂದ ಪ್ರಾರಂಭವಾದ ಈ ವಿಷಯ ಇಂದಿನ ಎಲ್ಲಾ ಗಜಲ್ ಸಂಕಲಗಳಲ್ಲಿ ವಿವರಣೆ ಸಿಗುತ್ತದೆ. ಆದ ಕಾರಣ ನಾನು ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ . ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ , ಆತ್ಮಾನು ಸಂಧಾನ , ನಮ್ಮನ್ನು ನಾವು ಅರಿತುಕೊಳ್ಳುವುದು , ಲೌಕಿಕ ಪ್ರೀತಿಯಿಂದ ಆಧ್ಯಾತ್ಮಿಕ ಪ್ರೀತಿಯಲ್ಲಿ ಕೊನೆಗೊಳ್ಳುವುದು . ನಿರಾಕಾರನಾದ ಆ ಭಗವಂತನೊಂದಿಗೆ ಮಾತನಾಡುವುದು , ನಿವೇದಿಸಿಕೊಳ್ಳುವುದು , ಲಿಂಗಪತಿ ಶರಣ ಸತಿ ಭಾವ ಮೈ ತಾಳುವುದು , ಮೀರಾ ಮಾಧವನ ಭಕ್ತಿಯಂತೆ , ರಾಧಾಕೃಷ್ಣರ ಪ್ರೀತಿಯಂತೆ , ಅಕ್ಕಮಹಾದೇವಿ ಮಲ್ಲಿಕಾರ್ಜುನ ಧ್ಯಾನಿಸಿದಂತೆ . ಗಜಲ್ ಮೃದು ಮಧುರ ಭಾವನೆಗಳನ್ನು ಒಂದು ಹೃದಯ ಇನ್ನೊಂದು ಹೃದಯಕ್ಕೆ ನಿವೇಸದಿಸಿಕೊಳ್ಳು ಕಾವ್ಯ. ಗೇಯತೆ ,ಲಯ, ಮಧುರ , ಮಾಧುರ್ಯ ಉಳ್ಳ ಕಾವ್ಯವಾಗಿದೆ. ಇದು ಹಾಡುಗಬ್ಬ ಇಲ್ಲಿ ಗೇಯತೆ ,ಲಯ ,ಮಾಧುರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ . ಆತ್ಮವೂ ತನ್ನ ಸುತ್ತ ಹೆಣೆದುಕೊಳ್ಳುವ ನೋವು ನಲಿವುಗಳ ಮೋಹಕವಾದ ಪ್ರೇಮಿಗಳ ಪಿಸುಮಾತುಗಳೇ ಗಜಲ್ ಎಂದು ಹೇಳಬಹುದು. ಹೃದಯಗಳನ್ನು ಬೆಸೆಯುವ ಒಂದು ಅದ್ಭುತವಾದ ಶಕ್ತಿ ಇದಕ್ಕಿದೆ ನೋವಿನ ಕಡಲಲ್ಲಿನ ಬದುಕನ್ನು ದಡ ಸೇರಿಸುವ ಸುಖದ ಹಾಯ್ ದೋಣಿ ಇದಾಗಿದೆ. ಧರ್ಮದ ಯಾವ ಕಟ್ಟುಪಾಡುಗಳನ್ನು ಸ್ವೀಕರಿಸದೆ ಸರ್ವರನ್ನು ಮನುಷ್ಯರನ್ನಾಗಿಸುವ ಕರುಣೆ ಸ್ನೇಹ ಅಸಹಾಯಕ ಅನುಕಂಪಗಳಲ್ಲಿ ದೇವರನ್ನು ಕಾಣಿಸುವ ಕಾವ್ಯ ಇದಾಗಿದೆ.. ಗಜಲ್ ಕಾವ್ಯ ನೋಡಲು ಸುಲಭವೆಂದು ಕಂಡರೂ ಇದರ ರಚನೆ ಸುಲಭವಲ್ಲ. ಗಂಭೀರ ಅಧ್ಯಯನ,ದಟ್ಟವಾದ ಅನುಭವ, ಧ್ಯಾನಿಸುವ ಮನೋದರ್ಮ, ಜನಸಾಮಾನ್ಯನ ಎದೆಗೂ ಮುಟ್ಟಿಸಬೇಕೆನ್ನುವ ತುಡಿತ ಸರಳ ಮೃದು ಶಬ್ದಗಳ ಬಳಿಕೆ ಇದ್ದರೆ ಮಾತ್ರ ಗಜಲ್ ರಚನೆ ಸಾಧ್ಯ. ಇದರ ಜೊತೆಗೆ ರಚನಾ ನಿಯಮಗಳನ್ನು ಅರಿತಿರಬೇಕು. ಇಂದು ಅನೇಕರು ಕನ್ನಡ ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ .ಕೆಲವರಿಗೆ ಮಾತ್ರ ಈ ರಾಣಿ ಒಲೆದಿದ್ದಾಳೆ,ಬಹಳ ಜನ ಎಡವುತಿದ್ದಾರೆ. ವಯಸ್ಸು ಲಿಂಗ ಭೇದವಿಲ್ಲದೆ ಅನೇಕರು ಗಜಲ್ ರಚಿಸಿ ಕೃತಿಗಳನ್ನು ಪ್ರಕಟಿಸಿ ಗಜಲ್ ಕಾರರಾಗಿದ್ದರೆ. ಬೆಳಗಾವಿ ಜಿಲ್ಲೆಯ ಜ್ಯೋತಿ ಮಾಳಿ ಇವರು ತಮ್ಮ ಹಾಳು ಗೋಡೆಯಲೊಂದು ಚಿಗುರು ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ. ಜ್ಯೋತಿ ಮಾಳಿಯವರು ಈಗಾಗಲೇ ದುರುಡುಂಡೇಶ್ವರ ನಾಮಾಂಕಿತ ಆಧುನಿಕ ವಚನಗಳು ಮತ್ತು ಅಗಣಿತ ಮಹಿಮೆ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ . ಸದ್ಯ ಬೆಳಗಾವಿಯ ಕೋಟಕ್ ಮಹೀಂದ್ರ ಲೈಫ್ ಇನ್ಸೂರೈನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ . ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ . ಅನೇಕ ಹಿರಿಯರ ಗಜಲ್ ಕೃತಿಗಳನ್ನು ಅಧ್ಯಯನ ಮಾಡಿ ಗಜಲ್ ರಚನಾ ಕ್ರಮವನ್ನು ಅರ್ಥೈಸಿಕೊಂಡು ನಿಯಮಗಳನ್ನು ಪಾಲಿಸಿಕೊಂಡು ಗಜರಗಳನ್ನು ರಚಿಸಿ ಕೃತಿಯನ್ನು ಪ್ರಕಟಿಸಿದ್ದಾರೆ ಬದುಕಿನಲ್ಲಿ ಮಹಿಳಗೆ ಬರುವ ಕಷ್ಟ ,ನೋವು, ತಿರಸ್ಕಾರ ಗಳನ್ನು ವಿಷಯವಾಗಿಟ್ಟುಕೊಂಡು ಗಜಲ್ ಗಳನ್ನು ರಚಿಸಿದ್ದಾರೆ . ಜ್ಯೋತಿ ಮಾಳಿಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ನಾಗೇಶ್ ಜೆ ನಾಯಕ ಅವರು ಅಮೂಲ್ಯವಾದ ಮುನ್ನುಡಿಯನ್ನು ಬರೆದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ . ಅದೇ ರೀತಿಯಾಗಿ ಸಿದ್ದರಾಜು ಪೂಜಾರಿ ಅವರು ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಪ್ರಕಟಣೆಗೆ ಮುಂಚಿತವಾಗಿ ಈಶ್ವರ ಮಮದಾಪುರ ಹಾಗೂ ಶ್ರೀಮತಿ ಹಮೀದಾ ಬೇಗಂ ದೇಸಾಯಿ ಇವರುಗಳು ಗಜಲ್ ಗಳನ್ನು ಓದಿ ಶುಭ ಹಾರೈಕೆಯನ್ನು ಬರೆದಿದ್ದಾರೆ . ಜ್ಯೋತಿ ಮಾಳಿ ಇವರ ಕೃತಿ ಹಾಳು ಗೋಡೆಯಲೊಂದು ಚಿಗರು ಗಜಲ್ ಸಂಕಲನದಲ್ಲಿ 103 ಗಜಲ್ ಗಳಿದ್ದು 5 ,7 ,9 ದ್ವಿಪದಿಗಳ ಗಜಲ್ ಗಳಿವೆ. ಮುರದ್ಧಫ್ ಗಜಲ್ ,ಗೈರ್ ಮುರದ್ಧಫ್ ಗಜಲ್ ಗಳಿವೆ ಈ ಸಂಕಲದಲ್ಲಿವೆ. ಇರವ ಗಜಲ್ ಗಳು ಸ್ತ್ರೀ ಸಂವೇದನ ಬದುಕಿನ ತಲ್ಲಣಗಳನ್ನು ವಿಷಯವಾಗಿಟ್ಟುಕೊಂಡು ಗಜಲನ್ನು ರಚಿಸಿದ್ದಾರೆ . ಪುರುಷ ಪ್ರಧಾನವಾದ ಸಮಾಜದ ದೌರ್ಜನ್ಯಗಳನ್ನು, ದಬ್ಬಾಳಿಕೆಯನ್ನು, ಅನುಭವಿಸಿದ ಸಂಕಟ , ಯಾತನೆಗಳನ್ನು ಬಿಚ್ಚಿಟ್ಟಿದ್ದಾರೆ . ಹೆಣ್ಣು ಎಲ್ಲವನ್ನು ಸಹಿಸಿಕೊಂಡು ಬದುಕಿನ ಸವಾಲು ಮೆಟ್ಟಿ ಮುನ್ನ ನಡೆಯುವ ಧೋರಣೆಯನ್ನು ಜ್ಯೋತಿಯವರು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ .ಜ್ಯೋತಿ ಮಾಳಿಯವರು ಗಜಲ್ ಕಾವ್ಯದಲ್ಲಿ ತಮ್ಮ ತಖಲುಸ್ ನಾಮವನ್ನು “ಜ್ಯೋತಿ” ಎಂದು ಉಪಯೋಗಿಸಿದ್ದಾರೆ. ಜ್ಯೋತಿ ಮಾಳಿ ಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನದ ಕೆಲವು ಗಜಲ್ ಗಳ ಸಾಲುಗಳ ವಿಶ್ಲೇಷಣೆ…. ಗಾಳಿಗೆ ಕಿಡಿ ಹೊತ್ತಿ ಉರಿಯುಲು ಎಷ್ಟು ಹೊತ್ತು ಬೇಕುನದಿಗೆ ಹರಿಯುತ ಕೊಚ್ಚಿಹೋಗಲು ಎಷ್ಟು ಹೊತ್ತು ಬೇಕು ಮೇಲಿನ ಗಜಲ್ ಓದಿದಾಗ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ನೆನಪಾಯಿತು ,ಬದುಕು ಕಟ್ಟುವುದು ಬಹಳ ಕಷ್ಟ ಆದರೆ ಅದೇ ಬದುಕು ಹಾಳಾಗಲು ಬಹಳ ಸಮಯ ಬೇಕಾಗುವುದಿಲ್ಲ ವೆಂದು ಮನನೊಂದು ವಿವಿಧ ರೀತಿಯ ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ . ಕೈಯಿಂದ ಜಾರಿದ ಸಣ್ಣ ಬೆಂಕಿ ಕಡ್ಡಿಯ ಕಿಡಿ ಹೊತ್ತಿ ಇಡೀ ಹುಲ್ಲು ಗೂಡನ್ನು ಸುಡಲು ಬಹಳ ಹೊತ್ತು ಹಿಡಿಯುವುದಿಲ್ಲ.. ಅನ್ನೋನ್ಯವಾದ ಸಂಬಂಧಗಳ ಮಧ್ಯೆ ಅನೈತಿಕ ಸಂಬಂಧಗಳು ಇಣುಕಿದಾಗ ಸುಂದರವಾದ ಸಂಸಾರ ಹಾಳಾಗುವುದೆಂದು ಗಜಲ್ ಕಾರ್ತಿಯು ಮನನೊಂದು ಮಾರ್ಮಿಕವಾಗಿ ಗಜಲ್ ದಲ್ಲಿ ರೂಪಕಗಳೊಂದಿಗೆ ವಿವರಿಸಿದ್ದಾರೆ. ಯಾವ ಸುಖಕ್ಕಾಗಿ ಕಮರಿ ಹೋದೆ ಊಮಿ೯ಳೆ?ಲಕ್ಷ್ಮಣ ನಿನಗಾಗಿ ಸಮಯ ನೀಡ ಬೇಕಿತ್ತು ನೊಂದೆ ಏಕೆ? ಯುಗ ಯುಗಗಳಿಂದಲೂ ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಅಲಕ್ಷಗಳು ನಡೆದಿದ್ದು ಮಹಿಳೆ ತನ್ನ ಆಸೆ ಆಕಾಂಕ್ಷೆಗಳಿಗೆ ತಿಲಾಂಜನ ಕೊಟ್ಟು ಬದುಕುವುದನ್ನು ಕಲಿತಿದ್ದಾಳೆ. ನಾವು ಪುರಾಣಗಳಲ್ಲಿ ಬರುವ ಪಾತ್ರಗಳಲ್ಲಿ ಇದನ್ನು ಕಂಡುಕೊಂಡಿದ್ದೇವೆ . ಗಜಲ್ ಕಾರ್ತಿಯು ರಾಮಾಯಣದ ಊಮಿ೯ಳೆಯ ಜೀವನದ ಚಿತ್ರಣಯನ್ನು ಉದಾಹರಣೆಯಾಗಿ ಗಜಲ್ ದಲ್ಲಿ ಎತ್ತಿ ತೋರಿಸಿದ್ದಾರೆ. ಹಂಗಿನ ಅರಮನೆ ಕೂಳನೆಂದು ನುಂಗಲಾರೆನುಕಣ್ಣೀರಾಗಿ ರೆಪ್ಪೆ ತೊರೆದು ಜಾರಲಾರೆನು ಈ ಗಜಲ್ ದ ಮತ್ಲಾ ಓದಿದಾಗ ಗಜಲ್ ಕಾರ್ತಿಯು ಸ್ವಾಭಿಮಾನದ ಬದುಕು ಬಾಳ ಬಯಸುವುದು ತಿಳಿಯುತ್ತದೆ . ಹೆಣ್ಣು ಅಬಲೆ ಎಂದು ಸದಾ ಪುರುಷರ ಆಶ್ರಯದಲ್ಲಿ ಇರಬೇಕೆಂದು ಸಮಾಜ ಬಯಸುತ್ತದೆ . ಅದನ್ನು ಖಂಡಿಸಿದ ಗಜಲ್ ಕಾತಿ೯ ಅನ್ಯರ ಹಂಗಿನ ಅರಮನೆ ಕೂಳನೆಂದು ನುಂಗಲಾರೇ ಎಂದು ಮತ್ತು ಎಷ್ಟೇ ದುಃಖ ಇದ್ದರು ಕಣ್ಣೀರನ್ನು ಜಾರಿಸಿ ಅಬಲೆ ಎಂದು ಸಮಾಜದಮುಂದೆ ಸಾರಲು ಬಯಸುವುದಿಲ್ಲ ಎಂದು ಮಾರ್ಮಿಕವಾಗಿ ತಮ್ಮ ದೃಢ ನಿಲುವನ್ನು ಗಜಲ್ ದಲ್ಲಿ ರೂಪಕಗಳೊಂದಿಗೆ ತೋರಿಸಿದ್ದಾರೆ. ಹೆಣ್ಣಾಗಿ ಹುಟ್ಟೋದು ಈ ಭೂಮಿ ಮ್ಯಾಲ ಯಾರಿಗೆ ಬೇಕಿತ್ತು•ಹುಣ್ಣಾಗಿ ಕಂಡು ಆ ತೆಗಳೋ ಮಾತು ಯಾರಿಗೆ ಬೇಕಿತ್ತು* ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಾಗಿ ಹುಟ್ಟುವುದೇ ತಪ್ಪಾಗಿದೆ , ಹೆಣ್ಣಾಗಿ ಹುಟ್ಟುವುದು ಯಾರಿಗೆ ಬೇಕಾಗಿದೆ. ಹುಟ್ಟು ಯಾರ ಕೈಯಲ್ಲಿ ಇಲ್ಲ ಆದರೂ ಹೆಣ್ಣಾಗಿ ಹುಟ್ಟಿದಾಕೆ ಹೆತ್ತವರಿಂದ , ಒಡಹುಟ್ಟಿದವರಿಂದ, ಕೈ ಹಿಡಿದ ಗಂಡಸಿನಿಂದ , ದೌರ್ಜನ್ಯವನ್ನು ಸಹಿಸುತ್ತಾ ಸಮಾಜದ ತೆಗಳಿಕೆಯ ಮಾತುಗಳನ್ನು ಕೇಳುವುದು ಯಾರಿಗೆ ಬೇಕಾಗಿದೆ ಎಂದು ಹೇಳುತ್ತಾ ಈ ಭೂಮಿಯ ಮೇಲೆ ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು ಎಂಬ ಭಾವನೆಯಲ್ಲಿ ಗಜಲ್ ನ್ನು ಸುಂದರವಾಗಿ ರೂಪಕಗಳೊಂದಿಗೆ ಮನದ ಮಾತು ಗಜಲ್ ದಲ್ಲಿ ಹೇಳಿದಿದ್ದಾರೆ. ಕಟ್ಟಿಕೊಂಡ ಕನಸುಗಳು ಬಿಕರಿಗೊಂಡವು ಬಾಳ ಬುತ್ತಿಯನು ಬಿಚ್ಚಿಟ್ಟಾಗಗಟ್ಟಿತನದ ಆಸೆಗಳು ನಿರಾಶೆಗೊಂಡವು ನಂಬಿಕೊಂಡದನು ಕೈ ಬಿಡುವಾಗ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೆ ಜೀವನದಲ್ಲಿ ತನ್ನದೇ ಆದ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾನೆ. ಆ ಕನಸುಗಳು ನನಸಾಗದೆ ಬಿಕರಿಯಾದಾಗ ಬದುಕು ಹಾಳ ಸಂತೆಯಾಗುತ್ತದೆ . ತಾ ಬಯಸಿದ ಆಸೆಗಳೆಲ್ಲ ಈಡೆರದೆ ನಿರಾಶೆ ಆಗುತ್ತದೆ. ಬಯಸಿದ ಬದುಕು ಸಿಗದಾಗ ಮನನೊಂದು ನಿರಾಸೆಗೊಂಡು ತಾನು ನಂಬಿದ ಶುದ್ಧವಾದ ಜೀವನ ಸಿಗದೇ ಬದುಕು ಹಾಳಾಗಿದ್ದಕ್ಕೆ ಮರಗುತ್ತದೆ . ಈ ಗಜದಲ್ಲಿ ಗಜಲ್ ಕಾತಿ೯ ನಿರಾಶೆಯ ಭಾವವನ್ನು ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಮಾಳಿಯವರ ಪ್ರಥಮ ಗಜಲ್ ಸಂಕಲನ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಸಮಾಜದಲ್ಲಿ ಮಹಿಳೆ ಅನುಭವಿಸಿದ ನೋವು ಅವಮಾನ ,ಮನದ ತಲ್ಲಣಗಳು,ತಣ್ಣನೆಯ ಆಕ್ರೋಶ , ಬಂಡಾಯ ಧ್ವನಿ , ಸಮಾಜದ ಆ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗೆ ಮಹಿಳೆ ಏನೆಲ್ಲಾ ಸಮಸ್ಯೆ ಬಂದರೂ ಅವುಗಳನ್ನು ಎದುರಿಸಿ ಬದುಕಬಲ್ಲೆ ಎಂಬ ಭಾವಗಳನ್ನು ಎದ್ದು ಕಾಣುವ ಗಟ್ಟಿಯಾದ ಗಜಲ್ ಗಳು ಈ ಸಂಕಲನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿವೆ. ಜ್ಯೋತಿ ಮಾಳಿ ಅವರ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಮಹಿಳೆ ಇಂದು ಹಾಗೂ ಹಿಂದೆ ಅನುಭವಿಸಿದ ನೋವುಗಳನ್ನು ಸಹಜವಾಗಿ ತಾವು ಅನುಭವಿಸಿ ನೋವುಗಳೆಂಬಂತೆ ಈ ಸಂಕಲನದ ಗಜಲ್ ದಲ್ಲಿ ತೋರಿಸಿಕೊಟ್ಟಿದ್ದಾರೆ.. ಭಾವ ತೀವ್ರತೆಯನ್ನು ಓದಗ ಅರ್ಥ ವಾಗುವಂತೆ ರೂಪಕಗಳನ್ನು ಬಳಸಿದ್ದಾರೆ ಜ್ಯೋತಿಯವರುಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆದು ಕನ್ನಡ ಗಜಲ್ ಕಣಜವನ್ನು ತುಂಬಲೆಂದು ಶುಭ ಹಾರೈಸುತ್ತಾ ವಿರಾಮ ಕೊಡುತ್ತೇನೆ . ಪ್ರಭಾವತಿ ಎಸ್ ದೇಸಾಯಿ