ಜೀವನಸಂಗಾತಿ
ಡಾ. ಸುಮತಿ ಪಿ.
“ಸಂತೃಪ್ತಿಯೇ ಮನುಜನ
ಶ್ರೇಷ್ಠ ಸಂಪತ್ತಾಗಲಿ”


“ಅತಿಯಾಸೆ ಗತಿ ಕೇಡು”ಎಂಬ ಮಾತಿನಂತೆ ಮನುಷ್ಯನಿಗೆ ಅತಿಯಾದ ಆಸೆಗಳಿದ್ದರೆ, ಒಂದು ಆಸೆ ಅಥವಾ ಬಯಕೆಯ ಈಡೇರಿಕೆಯ ನಂತರ ಇನ್ನೊಂದು ಆಸೆ ಗರಿಗೆದರಿ ಎದ್ದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಂತೃಪ್ತಿ ಎನ್ನುವುದು ಸಿಗದೇ ಇರಬಹುದು. ಅದಕ್ಕೆ ಮನುಷ್ಯರಾದ ನಾವು ಸಂತಸದಿಂದ ಜೀವನ ನಡೆಸಬೇಕಾದರೆ ಇದ್ದದ್ದರಲ್ಲಿ ತೃಪ್ತಿಯನ್ನು ಅನುಭವಿಸುವ ಗುಣ ನಮ್ಮದಾಗಬೇಕು.
ಸಂಪತ್ತು ಎಂದರೆ ಶ್ರೇಷ್ಠವಾದದ್ದು,ಮೌಲ್ಯಯುತವಾದದ್ದು ಎಂದರ್ಥ. ಯಾವುದರಿಂದ ನಮಗೆ ಒಳಿತಾಗುತ್ತದೆಯೋ ಅದುವೇ ಸಂಪತ್ತು ಎನಿಸಿಕೊಳ್ಳುತ್ತದೆ.
ಸಂತೃಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಪರಿಸ್ಥಿತಿಯಿಂದ ತೃಪ್ತನಾಗುವ ಸ್ಥಿತಿಯಾಗಿದೆ, ಸಂತೃಪ್ತಿ ಇದ್ದವರು ಜೀವನದಲ್ಲಿ ಆಂತರಿಕ ಶಾಂತಿಯನ್ನು ಹೊಂದಿರುತ್ತಾರೆ .ಆಗ ಅವರಲ್ಲಿ ಸಂತೃಪ್ತಿಯೇ ದೊಡ್ಡ ಸಂಪತ್ತಾಗಿ ವಿಜೃಂಭಿಸುತ್ತದೆ.
ಸಂತೃಪ್ತಿ ಎಂದರೆ ಇದ್ದಹಾಗೆ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದಾಗಿದೆ.. ಸಂತೃಪ್ತಿಯು ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮದೇ ಜೀವನವನ್ನು ತೆಗೆದುಕೊಂಡರೆ, ನಾವು ಅನುಭವಿಸುವ ಸಂತೃಪ್ತಿಯೆಂಬುವುದು ನಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಾಗಿ , ಮನಸ್ಸು ಶಾಂತಿ ಸಮಾಧಾನದಿಂದ ಇರುತ್ತದೆ.
ಕೆಲವರನ್ನು ನಾವು ಸ್ಥಿತಪ್ರಜ್ಞರು ಎನ್ನುತ್ತೇವೆ. ಸ್ಥಿತಪಜ್ಞರು ಶಾಂತವಾಗಿರುತ್ತಾರೆ. ಸಂತೃಪ್ತಿಯನ್ನು ಹೊಂದುವವರಾಗಿರುತ್ತಾರೆ. ಸಾಗರದ ನೀರನ್ನು ಕಲಕಲು ಪ್ರಯತ್ನಿಸಿದರೂ, ಸಾಗರ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ ವ್ಯಕ್ತಿಯೂ ಸಂತೃಪ್ತ ಮನಸ್ಸಿನಿಂದ ಧನಾತ್ಮಕ ಭಾವನೆ ಹೊಂದಿರುತ್ತಾನೆ.
ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಅತೀ ಶ್ರೇಷ್ಠವಾದದ್ದು.ಮನುಷ್ಯ ಜನ್ಮದಲ್ಲಿ ಬದುಕು ನಡೆಸುವಾಗ ಸುಖ ಕಾಣಬೇಕಾದರೆ ಸಂತೃಪ್ತಿ ಇರಬೇಕು.ಸಂತೃಪ್ತಿ ಎಂಬುದು ಮನುಷ್ಯನ ಜೀವನದಲ್ಲಿ ಮೂಡಬೇಕಾದ ತೃಪ್ತ ಭಾವನೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತನಗೆ ಸಿಕ್ಕಿದಷ್ಟು ಪಡೆದು, ತೃಪ್ತಿಯಿಂದ ಜೀವನ ಸಾಗಿಸುವುದು. ಎಲ್ಲಾ ಜನರು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಜನರ ಜೀವನ ರೀತಿ ಬೇರೆ ಬೇರೆ ಇರುತ್ತದೆ .ಆದುದರಿಂದ ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳರಿಮೆಯಿಂದ ಶಾಂತಿ ನೆಮ್ಮದಿಯನ್ನು ಕಳೆದುಕೊಂಡರೆ ಬದುಕಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗದು.
ಮನುಷ್ಯರು ಎಂದ ಮೇಲೆ ಒಬ್ಬರ ತರಹ ಇನ್ನೊಬ್ಬರು ಇರುವುದಿಲ್ಲ. ಕೆಲವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇನ್ನು ಕೆಲವರು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತಾರೆ. ಮತ್ತು ಕೆಲವರು ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ಕೊರಗುತ್ತಿರುತ್ತಾರೆ. ಆದರೆ ಇರುವಷ್ಟು ದಿನ ನೆಮ್ಮದಿಯಾಗಿ ಬದುಕಬೇಕು ಎಂದರೆ ಬದುಕಿನಲ್ಲೇ ಸಂತೋಷವನ್ನು ಕಾಣಬೇಕು.
ಜೀವನದಲ್ಲಿ ಸಂತೋಷಕ್ಕೆ ಸಂತೃಪ್ತಿಯೇ ಮುಖ್ಯ ಎಂದು ನಾವು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿದ್ದರೂ, ಅವನು ತೃಪ್ತನಾಗದ ಹೊರತು, ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.
ಮನುಷ್ಯ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕಾದರೆ ತನ್ನ ಆಸೆಗಳಿಗೆ ಕಡಿವಾಳ ಹಾಕಲೇಬೇಕು “ಆಸೆಯೇ ದುಃಖಕ್ಕೆ ಮೂಲ”ವೆಂದು ಗೌತಮ ಬುದ್ಧ ತಿಳಿಸಿದಂತೆ,ಅತಿ ಆಸೆಯಿಂದ ಮಾನವ ಇತರರನ್ನು ನೋಡಿ, ತಾನು ಅವರಂತೆ ಆಗಬೇಕು ಎಂದು ಏನೇನೋ ಮಾಡಲು ಸಾಗಿ, ಇರುವ ಸುಖ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಪ್ರತಿಯೊಬ್ಬನೂ ಬೇರೆಯವರ ಸುಖವನ್ನೇ ಅಳೆಯುವುದು ಜಾಸ್ತಿ.
ಸ್ವಾರ್ಥ ಮನೋಭಾವದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಕನಸಲ್ಲಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು “ನಾವೇ ಅವರಿಗಿಂತ ಸುಖಿಗಳು “ಎನ್ನುವ ಭಾವನೆ ತಾಳುವುದೇ ಸಂತೃಪ್ತಿ.ಸಂತೃಪ್ತಿಯೆ ಬದುಕಿನ ಸಂಪತ್ತು. ಬದುಕಿನಲ್ಲಿ ಸಂತೃಪ್ತಿ ಇದ್ದಾಗ ,ಸಕಾರಾತ್ಮಕ ದೃಷ್ಟಿಕೋನದಿಂದ ಶಾಂತಿ, ಸಹನೆ ,ನೆಮ್ಮದಿ, ತಾಳ್ಮೆ ಮುಂತಾದಂತಹ ಗುಣಗಳು ಬೆಳೆದು ಬದುಕಿನ ಸಂಪತ್ತಾಗಿ ವಿಜೃಂಭಿಸುತ್ತದೆ
ಯಮರಾಜ ಯುಧಿಷ್ಠಿರನಿಗೆ ಅದ್ಭುತವಾದ ಪ್ರಶ್ನೆಗಳನ್ನು ಕೇಳಿದಂತಹ ಸಂದರ್ಭದಲ್ಲಿ ರಾಜನು ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾನೆ ಎಂಬುವುದನ್ನು ನಾವು ಓದಿದ್ದೇವೆ.ಅದೇ ಅವನು ಕೇಳಿದ ಪ್ರಶ್ನೆಗಳಲ್ಲೊಂದು
“ಶ್ರೇಷ್ಠ ಸಂತೋಷ ಯಾವುದು?”. ಯುಧಿಷ್ಠಿರ ಅದಕ್ಕೆ ಕೊಟ್ಟ ಶ್ರೇಷ್ಠವಾದ ಉತ್ತರ “ತೃಪ್ತಿಯಿಂದ ಪಡೆದ ಸಂತೋಷವೇ ಶ್ರೇಷ್ಠ ಸಂತೋಷ”. ಆದ್ದರಿಂದ ತೃಪ್ತಿಯು ಯಾವುದೇ ಸಮಯದಲ್ಲಿ ಹೊಂದಬಹುದಾದ ಶ್ರೇಷ್ಠ ಸಂಪತ್ತು. ಒಳ್ಳೆಯ ಗುಣವನ್ನು ಅಭಿವೃದ್ಧಿಪಡಿಸುವ ಮೂಲಕ,ಉತ್ಸಾಹ ಮತ್ತು ಅಜ್ಞಾನದ ಗುಣಗಳನ್ನು ನಿಗ್ರಹಿಸುವ ಮೂಲಕ ತೃಪ್ತರಾಗಿರುತ್ತೇವೆ.ಸಂತೃಪ್ತ ಜೀವನವು ಯಶಸ್ವಿ ಜೀವನವೆಂದರೆ ತಪ್ಪಾಗಲಾರದು
ಜೀವನದ ಯಶಸ್ಸಿನ ಅಂಶವೆಂದರೆ ಸಂತೃಪ್ತಿ ಎಂದು ಹೇಳಬಹುದು. ನಮಗೆ ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ, ನಮಗೆ ಯಾವುದೇ ಗೆಲುವಿನ ಸಂತಸ ಸಿಗಲಾರದು. ನಮ್ಮಲ್ಲಿ ಹಣವಿರಬಹುದು, ಆಸ್ತಿಗಳಿರಬಹುದು,ಆದರೆ ಆಂತರಿಕ ತೃಪ್ತಿ ಇಲ್ಲ ಎಂದಾದಲ್ಲಿ. ಅದು ಸಂತಸದ ಯಶಸ್ವಿ ಜೀವನವಲ್ಲ.
‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ. ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲವಾಗಿದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಮಗೆ ಸಂತೃಪ್ತಿಯೇ ಬದುಕಿನ ದೊಡ್ಡ ಸಂಪತ್ತು ಎಂಬುದು ಒಪ್ಪಿಕೊಂಡು,ಅದನ್ನು ಪಡೆಯುವುದು ಕಷ್ಟವಾದರೂ ಇಷ್ಟಪಟ್ಟು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಬೇಕಾಗುತ್ತದೆ.
ಸಂತೃಪ್ತಿಯಿಂದಲೇ ನಾವು ಜೀವನದಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಮುಕ್ತಿಯನ್ನು ಹಾಡಬಹುದು, ಸಂತೃಪ್ತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಆದುದರಿಂದ ಸಂತೃಪ್ತಿಯೇ ದೊಡ್ಡ ಸಂಪತ್ತು. ಸಂತೃಪ್ತಿ ಅನ್ನೋದು ಬದುಕಿನಲ್ಲಿ ಇರಬೇಕಾದ ಮೂಲಭೂತವಾದ ಅಂಶವಾಗಿದೆ. ಸಂತೃಪ್ತಿಯೇ ಯಶಸ್ವಿ ಬದುಕಿನ ಮೂಲ ಆಧಾರಸ್ತಂಭವೆಂದೇ ಹೇಳಬಹುದು.
ಈ ಭೂಮಿಯ ಮೇಲಿನ ಬದುಕೆಂಬ ನಾಲ್ಕು ದಿನದ ಬಾಳು ಅದು ಗೋಳಾಗದೆ ಇರಬೇಕಾದರೆ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುವಂತಹ ಮನಸ್ಸು ನಮ್ಮದಾಗಬೇಕು. ಸಂತೃಪ್ತಿಯನ್ನೇ ನಮ್ಮ ಬದುಕಿನ ದೊಡ್ಡ ಸಂಪತ್ತನ್ನಾಗಿಸಬೇಕು. ಬದುಕಿನ ದಿನಗಳನ್ನು ಚಿಂತೆ, ದುಃಖ, ನಿರಾಸೆಯಿಂದ ಅತೃಪ್ತರಾಗಿ ಕಳೆಯದೆ ಶಾಂತಿ ಸಮಾಧಾನದಿಂದ
ತೃಪ್ತ ಜೀವನ ನಡೆಸುವುದು ನಮ್ಮೆಲ್ಲರ ಕೈಯಲ್ಲಿದೆ ಅಲ್ಲವೇ?
ಡಾ.ಸುಮತಿ ಪಿ



