ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಚಂದ್ರ,ತಾರೆಗಳು ನಾ ಕೈ ಚಾಚಿದರೇ ಸಿಕ್ಕಿ ಬಿಡುವಷ್ಟು ಹತ್ತಿರದಲ್ಲಿರಬೇಕಿತ್ತು
ನಿದಿರೆಯು ರೆಪ್ಪೆ ಮುಚ್ಚುವ ಮುನ್ನ ಕಣ್ಣ ಸೇರುವಷ್ಟು ಹತ್ತಿರದಲ್ಲಿರಬೇಕಿತ್ತು
ಪೂರ್ವದಿಂದ ಪಶ್ಚಿಮದೆಡೆಗೆ,ಬೆಳಕಿನೊಂದಿಗೆ ದಿನವೂ ರವಿಯ ಪಯಣ
ಗೂಡುಗಳು,ರೆಕ್ಕೆ ದಣಿಯುವುದರೊಳಗೆ ಸಿಗುವಷ್ಟು ಹತ್ತಿರದಲ್ಲಿರಬೇಕಿತ್ತು
ಬಾನಂಗಳದಿ ಚೆಲ್ಲಿದ ಬೆಳದಿಂಗಳದು ನಗುವಿನ ನೆಮ್ಮದಿಯ ಮಡಿಲಿನಂತಿದೆ
ಹುಣ್ಣಿಮೆಯು,ಹಗಲಾಗುವುದರೊಳಗೆ ನಾ ಮುಟ್ಟುವಷ್ಟು ಹತ್ತಿರದಲ್ಲಿರಬೇಕಿತ್ತು
ಜಗದ ಸಂತೆಯಲಿ ಅತೀ ಬೇಡಿಕೆಯ,ಮಾರಾಟಕ್ಕಿಡದ ಮೋಹವೊಂದೂ ಇದೆ
ಪ್ರೀತಿಯು,ನಾ ನಗುತ ಕಣ್ಣೆತ್ತಿ ನೋಡಿದರೇ ಕಾಣುವಷ್ಟು ಹತ್ತಿರದಲ್ಲಿರಬೇಕಿತ್ತು
ವಾಣಿಯ ಜೀವ,ಜೀವನದ ಜಂಜಾಟಗಳೆದುರು ನಿಡುಸುಯ್ಯುತ ಬಿಕ್ಕುತಿದೆ
ಶಿವನ ಸಂತೈಕೆ,ನಾ ಸೋಲುವುದರೊಳಗೆ ಸೋಕುವಷ್ಟು ಹತ್ತಿರದಲ್ಲಿರಬೇಕಿತ್ತ
ವಾಣಿ ಯಡಹಳ್ಳಿಮಠ




Very nice Vani madam
Keep going
Thank you so much
ಬಹು ಚೆಂದ ಬರೆದಿರುವಿರಿ ಕವಯಿತ್ರಿಯವರೆ.
ತಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು