ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮಮತಾಮಯಿ, ತ್ಯಾಗಮಯಿ, ಕ್ಷಮಯಾಧರಿತ್ರಿ,ತಾನು ಅರೆಹೊಟ್ಟೆ ಉಂಡರೂ ಮನೆ ಜನರ ಹೊಟ್ಟೆ ತುಂಬಿಸುವ ಅನ್ನಪೂರ್ಣೆ, ಒಡಹುಟ್ಟಿದವರನ್ನು ಪೊರೆವ ಸಹೋದರಿ, ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾತಾಯಿ ಹೆಣ್ಣಿಂದಲೇ ಇಹ ಪರಗಳು ಅಬ್ಬಬ್ಬ ಅದೆಷ್ಟು ಪ್ರಿಫಿಕ್ಸುಗಳು, ಸಫೀಕ್ಸುಗಳು…. ಕೇಳಲು ಅದೆಂಥ ಮಧುರ, ಆದರೆ ನಿಭಾಯಿಸಲು…. ಹೊತ್ತವರಿಗಷ್ಟೇ ಗೊತ್ತು ಕಿರೀಟದ ಭಾರ!!

ಹೆಚ್ಚು ಮಾತಾಡಿದರೆ ವಾಚಾಳಿ,ಬಾಯ್ಬಡಕಿ, ಮಾತನಾಡದಿದ್ದರೆ ಗುಮ್ಮನಗುಸುಗಿ, ಚಟುವಟಿಕೆಯಿಂದಿದ್ದರೆ ನಿಂತಲ್ಲಿ ಕಾಲು ನಿಲ್ಲುವುದಿಲ್ಲ, ಸುಮ್ಮನೆ ಕುಳಿತರೆ ಸೋಂಬೇರಿ, ಚೆನ್ನಾಗಿ ತಯಾರಾಗಿ ನಿಂತರೆ ತಯಾರ
ಬಸಲಿಂಗಿ, ಸರಳವಾಗಿದ್ದರೆ ಮುಶಂಡಿ….ಹೇಗೆ ಆಕೆಯ ಸ್ವಭಾವವನ್ನು ಅಳೆಯುವರು.

ಪುರಾಣ ಕಾಲದಿಂದಲೂ ಹೆಣ್ಣು ಮಕ್ಕಳನ್ನು ತಾಯಿಯಾಗಿ, ಸೋದರಿಯಾಗಿ,ಪತ್ನಿಯಾಗಿ, ಪ್ರೇಯಸಿಯಾಗಿ, ಮಗಳಾಗಿ, ಸಹಪಾಠಿಯಾಗಿ ಸ್ನೇಹಿತೆಯಾಗಿ ಹೀಗೆ ಹತ್ತು ಹಲವು ವಿಧಗಳಲ್ಲಿ ನೋಡಿದ್ದಾರೆ… ಎಲ್ಲವೂ ನಿಜ ಆದರೆ ಇವೆಲ್ಲವೂ ಅರ್ಧ ಸತ್ಯಗಳು!! ಒಪ್ಪಿದರೂ ಒಪ್ಪದಂತಹ ಕಟು ಸತ್ಯಗಳು. ಹೆಣ್ಣನ್ನು ಆಕೆಯ ಎಲ್ಲಾ ರೂಪಗಳಲ್ಲಿ, ಜೀವನದ ವಿವಿಧ ಹಂತಗಳಲ್ಲಿ ನೋಡುವ ಜನ … ಹೆಣ್ಣು ಕೂಡ
 ಓರ್ವ ವ್ಯಕ್ತಿ… ಆಕೆಗೂ ಒಂದು ವ್ಯಕ್ತಿತ್ವವಿದೆ, ಮನಸ್ಸಿದೆ, ಭಾವನೆಗಳಿವೆ, ಇಷ್ಟಾನಿಷ್ಟಗಳಿವೆ. ಆಕೆಯದ್ದೇ ಆದ ವೈಯುಕ್ತಿಕ ಜೀವನವಿದೆ ಎಂಬುದನ್ನು ಮರೆತಿದ್ದಾರೆ. ಸ್ವತಃ ಹೆಣ್ಣು ಮಕ್ಕಳು ಕೂಡ ತಮ್ಮ ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕಿರುವ ಅನಿವಾರ್ಯತೆಯನ್ನು ಅಪ್ಪಿ ಒಪ್ಪಿಕೊಂಡು ಬಾಳುತ್ತಾರೆ.

ಇದಕ್ಕೆ ಹತ್ತು ಹಲವಾರು ಕಾರಣಗಳು. ಮೊದಲನೆಯದಾಗಿ ತಮಗೆ ಹೆಣ್ಣು ಹುಟ್ಟಿರುವುದು ಪರರ ಮನೆ ಬೆಳಗಲು ಎಂಬುದು ಹೆಣ್ಣಿನ ಹೆತ್ತವರ ಭಾವವಾಗಿದ್ದು ಅವರು ಆಡುವ ಪ್ರತಿ ಮಾತಿನಲ್ಲಿಯೂ ಆಕೆ ತಾನು ಹೆರವರ ಸ್ವತ್ತು ಎಂದು ಪರಕೀಯ ಪ್ರಜ್ಞೆಯನ್ನು ಅನುಭವಿಸುತ್ತಾಳೆ. ಯಾವುದನ್ನು ಕಟುವಾಗಿ ವಿರೋಧಿಸದ ಹೆಣ್ಣು ಮಕ್ಕಳು ಇದನ್ನು ಒಪ್ಪಿ ಬಾಳುತ್ತಾರೆ. ಇನ್ನು ಆಕೆ ಮದುವೆಯಾಗಿ ಬಂದ ಗಂಡನ ಮನೆಯವರು ಆಕೆಯನ್ನು ಹೊರಗಿನಿಂದ ಬಂದವಳು, ತಮ್ಮ ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮನೆಯೊಡತಿ!!? ಎಂದು ನಡೆಸಿಕೊಳ್ಳುತ್ತಾರೆ. ಆದರೆ ಇದು ಕೂಡ ಅರ್ಧ ಸತ್ಯವೇ. ಹುಟ್ಟಿದ ತವರು ಮನೆಗೆ ಹೊರಗಿನವಳು ಗಂಡನ ಮನೆಗೆ ಹೊರಗಿಂದ ಬಂದವಳು… ಎಂಬ ಅಡ್ಡಗೋಡೆಯ ಮೇಲಿನ ದೀಪದ ಹಾಗೆ ಜೀವನ. ಎಲ್ಲ ಕಡೆ ಇದ್ದರು ಎಲ್ಲೂ ಸಲ್ಲದವಳು ಎಂಬ ನೋವಿನ ಭಾವ ಜೀವಿತದ ಕಡೆಯವರೆಗೂ ಆಕೆಯನ್ನು ಅನಾಥ ಪ್ರಜ್ಞೆಯಲ್ಲಿ ಬಳಲುವಂತೆ ಮಾಡುತ್ತದೆ.

ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಯಾವತ್ತೂ ಪುರುಷನ ಅಡಿಯಾಳಾಗಿರುವುದು ಇದಕ್ಕೆ ಕಾರಣ. ಇನ್ನು ಸಮಾಜದಲ್ಲಿ ತನ್ನ ಮೇಲಾಗುವ ದೌರ್ಜನ್ಯಗಳಿಗೆ ಗಂಡಸನ್ನು ವಿರೋಧಿಸುವ ಹೆಣ್ಣುಮಕ್ಕಳು ಎಷ್ಟೋ ಬಾರಿ ಬಜಾರಿ, ಗಂಡು ಬೀರಿ, ಸಂಸಾರ
ಒಡೆಯುವವಳು ಎಂದು ಕರೆಯಲ್ಪಡುತ್ತಾಳೆ. ಕೌಟುಂಬಿಕ ಕಲಹಗಳಲ್ಲಿ ತಪ್ಪು ಯಾರದ್ದೇ ಇರಲಿ ಹೊಂದಿಕೊಂಡು, ಅನುಸರಿಸಿಕೊಂಡು ಹೋಗಲು ಹೇಳುವುದು ಹೆಣ್ಣು ಮಕ್ಕಳಿಗೆ ಮಾತ್ರ. ಒಟ್ಟಿನಲ್ಲಿ ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು.ಕಾರಣ ಆಕೆ ಭೂಮಿ ತಾಯಿಯಷ್ಟೇ ತಾಳ್ಮೆಯನ್ನು ಹೊಂದಿರುವ ವ್ಯಕ್ತಿ ಎಂಬ ಬಣ್ಣದ ಹೋಲಿಕೆ!!.

ಆದರೂ ನಮ್ಮ ಸಮಾಜ ಮತ್ತು ಜನರು ಇನ್ನೂ ತಮ್ಮ ಪುರಾತನ ಧೋರಣೆಗಳಿಂದ ಕಿಂಚಿತ್ತು ಬದಲಾಗಿಲ್ಲ. ಎಷ್ಟೋ ಬಾರಿ ದುಡಿಯುವ ಹೆಣ್ಣು ಮಕ್ಕಳ ವೇತನವನ್ನು ಕೂಡ ಗಂಡಸರೇ ಬಳಸುತ್ತಾರೆ ಅಕಸ್ಮಾತಾಗಿ ಈ ಕುರಿತು ಆಕೆ ಏನಾದರೂ ಪ್ರಶ್ನಿಸಿದರೆ ದುಡಿಯುತ್ತಿನಿ ಎಂಬ ಹಮ್ಮುಜೊತೆಗೆ ನಿನ್ನ ಉದ್ಯೋಗದ ಅವಶ್ಯಕತೆ ನಮ್ಮನೆಗೆ ಇಲ್ಲ ಕೆಲಸವನ್ನು ಬಿಟ್ಟು ಬಿಡು ಎಂಬ ರೋಪು ಬೇರೆ. ಉದ್ಯೋಗ ತನ್ನ ವೈಯುಕ್ತಿಕ, ಆರ್ಥಿಕ ಬೆಳವಣಿಗೆಯ ಮತ್ತು ತನ್ನ ಸ್ವಾವಲಂಬಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬ ಅರಿವನ್ನು ಹೊಂದಿರುವ ಹೆಣ್ಣುಮಕ್ಕಳು ಅನಿವಾರ್ಯವಾಗಿ ತಗ್ಗಿ ಬಗ್ಗಿ ನಡೆಯುತ್ತಾರೆ.

ಹೆಣ್ಣು ಮಕ್ಕಳು ಉಡುವ ಬಟ್ಟೆಗಳು ಅವರ ಚಾರಿತ್ರ್ಯವನ್ನು ಹೇಳುತ್ತವೆ ಎಂಬುದು ಸಮಾಜದ ಅಂಬೋಣ. ಇದು ಎಷ್ಟರ ಮಟ್ಟಿಗೆ ಸರಿ. ತನ್ನಇಷ್ಠದಂತೆ ಬಟ್ಟೆ ತೊಡುವ,ಕಲಿಯುವ, ಬದುಕುವ ಅವಕಾಶಗಳು ಆಕೆಗೆ ಮರೀಚಿಕೆ ಎಂಬುದು ವಿಷಾದನೀಯ.

ನಿನ್ನ ಜೀವನ ನಿನ್ನ ಬದುಕು… ನಿನ್ನಿಷ್ಟದಂತೆ ಬದುಕು ಕಟ್ಟಿಕೋ ಎಂದು ಎಂದಾದರೂ ನಿಮ್ಮ ತಾಯಿಗೆ, ಸಹೋದರಿಗೆ, ಪತ್ನಿಗೆ,ಸ್ನೇಹಿತೆಗೆ ಹೇಳಿದ್ದೀರಾ?? ನಿನ್ನ ಹವ್ಯಾಸಗಳನ್ನು ಮುಂದುವರೆಸು, ನಿನಗಾಗಿ ಸಮಯವನ್ನು ಮೀಸಲಿಡು ಎಂದು ಹೇಳಿದ್ದೀರ? ಆಕೆ ಕೆಲಸ ಮಾಡುವಾಗ ಒಂದು ಕಪ್ಪು ಚಹಾ ಮಾಡಿ ಕೊಟ್ಟಿದ್ದೀರಾ??

ಇತ್ತೀಚೆಗೆ ಬಹಳಷ್ಟು ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೆಚ್ಚು ಮಹತ್ವ ನೀಡುತ್ತಿದ್ದು ತತ್ಪರಿಣಾಮವಾಗಿ ಹೆಣ್ಣು ಮಕ್ಕಳು ಔದ್ಯೋಗಿಕವಾಗಿ, ಸಾಮಾಜಿಕವಾಗಿ ಮುಖ್ಯವಾಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಮಕ್ಕಳೆಡೆಗಿನ ತಂದೆ ತಾಯಿಗಳ ಈ ಬಗೆಯ ಪ್ರೀತಿ, ಕಾಳಜಿ ಮತ್ತು ಮಕ್ಕಳ ಭವಿಷ್ಯದ ಕುರಿತಾದ ಅವರ ಹಿತಾಸಕ್ತಿಗಳು ಮಕ್ಕಳ ಭದ್ರ ಭವಿಷ್ಯಕ್ಕೆ ಬುನಾದಿಯಾಗುತ್ತಿವೆ. ಇದು ಸ್ವಾಗತಾರ್ಹ ವಿಷಯ.

ಹೆಣ್ಣು ಮಕ್ಕಳು ಯಾರೇ ಇರಲಿ, ಹೇಗೆ ಇರಲಿ ಏನೇ ಇರಲಿ ಅವರನ್ನು ಗೌರವಿಸಿ, ಅವರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ ನೋಡಿ ಜಡ್ಜ್ ಮಾಡಬೇಡಿ. ಅದಾಗದಿದ್ದರೆ ಅವರ ಚಾರಿತ್ರ್ಯವಧೆ ಮಾಡದೆ, ನಿಮ್ಮ ಪಾಡಿಗೆ ನೀವಿರಿ. ಶತಮಾನಗಳಿಂದ ನೀವು ಸಿರುವ ಕಿರೀಟದ ಭಾರವನ್ನು ಹೊತ್ತು ಹೆಣ್ಣು ನಡೆದಿದ್ದಾಳೆ…. ಮುಂದೆಯೂ ನಡೆಯುತ್ತಾಳೆ ಕೂಡ. ಆದರೆ ಆಕೆಗೆ ಆಕೆಯದ್ದೇ ಜೀವನವನ್ನು ರೂಪುಗೊಳಿಸಿಕೊಳ್ಳಲು ಕೊಂಚ ಸ್ಪೇಸ್ ಕೊಡಿ….. ಅದುವೇ ನಿಜವಾದ ಮಹಿಳಾ ದಿನಾಚರಣೆಯ ಸಾರ್ಥಕತೆ.


About The Author

Leave a Reply

You cannot copy content of this page

Scroll to Top