ಕಾವ್ಯ ಸಂಗಾತಿ
ಎನ್. ಜಯಚಂದ್ರನ್ ದಾಂಡೇಲಿ
“ಮುಖವಾಡದ ಅಕ್ಷರ ಭಕ್ಷಕ”


ಪದಗಳ ಹಬ್ಬವನ್ನು ಆಚರಿಸುವಂತೆ
ಮುಖದಲ್ಲಿ ಮೃದು ನಗು ಮೂಡಿಸಿದ ಅಕ್ಷರ ಭಕ್ಷಕನಿವನು
ಅಂತರಂಗದ ಕತ್ತಲಲ್ಲಿ
ಕಪಟದ ಬೀಜಗಳನ್ನು ಬಿತ್ತಿದವನು.
ಕವಿಗಳ ನಡುವೆ ಕವಿಯಂತೆ ನಿಂತು
ಸುಳ್ಳಿನ ಧ್ವನಿಯನ್ನು ಸತ್ಯದಂತೆ ಹೊಗಳಿದವನು
ಒಳಗೊಳಗೆ
ಸ್ವಾರ್ಥದ ಮನೆಗೆ ದೀಪ ಹಚ್ಚಿಕೊಂಡವನು .
ಸಾಹಿತ್ಯದ ವೇದಿಕೆಯನ್ನು
ಸತ್ಯದ ಮಂಟಪವೆಂದು ನಟಿಸುತ್ತಾ
ವೇದಿಕೆಯಲ್ಲಿ
ಮೋಸದ ನರ್ತನ ಮಾಡಿದವನು.
ಪದಗಳ ಮಧುರತೆಯ ಹಿಂದೆ
ವಂಚನೆ ,ದರ್ಪ ವಿಷವನ್ನು ಮರೆಮಾಡಿ,
ಪರರ ಪ್ರತಿಭೆಯ ನೆರಳಲ್ಲಿ
ತನ್ನ ಹೆಸರಿನ ಗೂಟವನ್ನು
ತನ್ನ ಸುತ್ತಲಿದ್ದವರಿಗೆ ಜಡಿದವನು
ಸಾಹಿತ್ಯದ ತೇರಲ್ಲಿ
ಮನೆಯ ಜೋಳಿಗೆ ತುಂಬಿ ಕೊಂಡವನು, ಅಕ್ಷರ ಉದ್ಧಾರದ ಹೆಸರಲ್ಲಿ ಸ್ವಂತ ಜಾತ್ರಿ ಮಾಡಿಕೊಂಡವನು
ಪದಗಳ ಪಗಡೆಯನ್ನೇ
ರಾಜಕೀಯದ ಚದುರಂಗ ಮಾಡಿದವನು.
ಒಂದು ದಿನ ಸತ್ಯದ ಸೂರ್ಯ
ಮುಖವಾಡಗಳನ್ನೆಲ್ಲ ಕರಗಿಸಿದಾಗ,
ಸಾಹಿತ್ಯದ ಮಂದಿರದಲ್ಲಿ ಒಂದು
ಕಪಟತನ ಕಳಚಿದಾಗ , ಬೆತ್ತಲಾಗಲು ಸಜ್ಜಾದವನು !!
ಅಂಥದೊಂದು ದಿನ
ಅಕ್ಷರ ಆಲಯದಲ್ಲಿ
ನಿಜವಾದ ಮನಸ್ಸುಗಳು
ಹೊಸ ಕಾವ್ಯವಾಗಿ ಬೆಳಗುವವು.
ಎನ್. ಜಯಚಂದ್ರನ್ .ದಾಂಡೇಲಿ



