ಕಾವ್ಯ ಸಂಗಾತಿ
ಇಂದಿರಾ ಕೆ
ಗಜಲ್


ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿ
ಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ
ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವು
ಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ
ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರು
ರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ
ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋ
ಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ
ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆ
ಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ
ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ
ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ
ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆ
ದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ
ಇಂದಿರಾ ಕೆ



