ಮಹಿಳಾದಿನದ ವಿಶೇಷ,
ನಾಗರತ್ನ ಎಚ್ ಗಂಗಾವತಿ
ಶಕ್ತಿಯ ಪ್ರತಿರೂಪ ಹೆಣ್ಣು


ಮಹಿಳೆಯರು ಕುಟುಂಬದ ಆಧಾರ ಸ್ಥಂಭವಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದರೆ ಹಿಂದೂ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವುದು ದುಃಖಕರ.
ಕುಟುಂಬದ ನಿರ್ವಹಣೆಯಿಂದ ಹಿಡಿದು ಬಾಹ್ಯಾಕಾಶದ ವರೆಗೂ ಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದರು ಲಿಂಗ ಸಮಾನತೆ ಮತ್ತು ಶಿಕ್ಷಣ ಭದ್ರತೆಯ ವಿಷಯದಲ್ಲಿ ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ.
“*ಯತ್ರ ನಾರಿಸ್ತು ಪೂಜಂತೆ ರಮಂತು ತಂತ್ರ ದೇವತಾ*” ಎಂಬ ವೇದವಾಕ್ಯದಂತೆ
ಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸುವುದು ಅಷ್ಟೇ ಮುಖ್ಯ. ಹಾಗೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ.
ಮಹಿಳಾ ಸಬಲೀಕರಣವು ಸಮಾನ ಅವಕಾಶಗಳನ್ನು
ಒದಗಿಸುವ ಮೂಲಕ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ.
ಆದರೂ ಕೂಡ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ವಿಜ್ಞಾನ, ತಂತ್ರಜ್ಞಾನ ,ರಾಜಕೀಯ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ.
ಸಮಾಜದ ಮತ್ತೊಂದು ದುಃಖಕರ ಸಂಗತಿ ಎಂದರೆ ಈಗಲೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಿರುಕುಳ ಬ್ರೂಣ ಹತ್ಯೆ ಗಳು ದೊಡ್ಡ ಪಿಡುಗುಗಳಾಗಿವೆ.
ಮಹಿಳೆಯರ ಸಬಲೀಕರಣ ಎಂದರೆ ಕೇವಲ ಉದ್ಯೋಗವಲ್ಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಸುರಕ್ಷಿತ ವಾತಾವರಣ ಮತ್ತು ಪುರುಷರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ.
ಹಾಗೂ ಮಹಿಳೆಯರು ಬಲಿಷ್ಠವಾದಾಗ ಮಾತ್ರ ಸಮಾಜವು ಬಲಿಷ್ಠ ವಾಗುತ್ತದೆ. ಎನ್ನುವಂತೆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಮಾನತೆಯತ್ತ ಧನಾತ್ಮಕ ಹೆಜ್ಜೆ ಇಡುತ್ತಿದ್ದು ನಿಜವಾದ ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತಿದೆ.
ಸ್ವ ಸಹಾಯ ಗುಂಪುಗಳ ಮೂಲಕ ಉದ್ಯೋಗಾವಕಾಶಗಳು ಮತ್ತು ಆಸ್ತಿ ಹಕ್ಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿವೆ.
ತಾಳ್ಮೆಯ ಗುಣವೇ ಹೆಣ್ಣಿನ ಗೆಲುವಿಗೆ ಕಾರಣ ಎನ್ನುವಂತೆ ಮಹಿಳೆ ತನ್ನ ತಾಳ್ಮೆಯಿಂದ ಎಲ್ಲರನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾಳೆ.
*ಹೆಣ್ಣು ಸಂಸಾರದ ಕಣ್ಣು* ಎನ್ನುವಂತೆ ಕುಟುಂಬದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಮನೆ ಬೆಳಗುವ ಮಹಾಲಕ್ಷ್ಮಿಯಂತೆ ಎಲ್ಲರನ್ನ ಸಂತೈಸಿ ಮನಸನ್ನ ಗೆಲ್ಲುವ ಪ್ರತಿಭೆ ಇವಳು.
ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಜವಾಬ್ದಾರಿ ಯೊಂದಿಗೆ ಸಂಸಾರವನ್ನು ನಡೆಸುವಲ್ಲಿ ಯಶಸ್ಸನ್ನು ಕಾಣುವ ನಗೆಯ ಚಿಲುಮೆ .
ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಹಿಳೆ ತನ್ನ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.
ಉದಾಹರಣೆ: ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ,ಒನಕೆ ಓಬವ್ವ, ರಾಣಿ ಅಬ್ಬಕ್ಕ, ಇನ್ನು ಹಲವಾರು ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ.
ಆದರೂ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಮೆಟ್ಟಿ ನಿಲ್ಲುವ ಧೈರ್ಯವಂತೆ ಹೆಣ್ಣು.
ಪ್ರತಿ ವರ್ಷವೂ ಕೂಡ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಹಾಗೂ ಅಂದು ಹಲವಾರು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಾರೆ.
ವಿಶೇಷವಾಗಿ ಕಾರ್ಮಿಕ ಚಳುವಳಿಗಳ ಭಾಗವಾಗಿ ಈ ಆಚರಣೆ ಪ್ರಾರಂಭವಾಯಿತು.
1975ರಲ್ಲಿ ಯುನೈಟೆಡ್ ನೇಷನ್ ಅಧಿಕೃತವಾಗಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು.
ಉದ್ದೇಶವೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ , ಸಮಾನ ವೇತನ, ರಾಜಕೀಯ ಸಾಮಾಜಿಕ ಪ್ರಾತಿನಿಧ್ಯ ಮತ್ತು ಲಿಂಗ ತಾರತಮ್ಯ ತೊಡೆದು ಹಾಕುವುದು.
ಆದರೂ ಹೆಣ್ಣಿನ ಬಗ್ಗೆ ಹೇಳುವುದಾದರೆ ಪದಗಳೇ ಸಾಲದು ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ.

ನಾಗರತ್ನ ಎಚ್ ಗಂಗಾವತಿ



