ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ತಪ್ಪು ನನ್ನದ ಅಥವಾ ನಿನ್ನದಾ
ಇಲ್ಲಿ ನನಗೆ ಉತ್ತರವೇ ಸಿಗಲಿಲ್ಲ !
ಹೋದವನು ನೀನಾ ಅಥವಾ ಕಳಿಸಿದವಳು ನಾನಾ..!
ಇಲ್ಲಿ ನನಗೆ ಸ್ಪಷ್ಟತೆಯೇ ಸಿಗಲಿಲ್ಲ !

ಬಹುಶಃ ಮತ್ತಾರು ನನ್ನನ್ನು
ನಿನ್ನಷ್ಟು ಅರ್ಥಮಾಡಿಕೊಳ್ಳಲಾರರು
ಹಾಗೆ  ಮತ್ಯಾರು ನಿನ್ನನ್ನು
ನನ್ನಷ್ಟು ಪ್ರೇಮಿಸಲಾರರು..!

ಅಳಲಾರದಷ್ಟು ನಗಿಸಿದವನೇ
ಮತ್ತೆಂದೂ ನಗಲಾರದಂತೆ ಅಳಿಸಿಬಿಟ್ಟ
ಅಂಗಲಾಚಿ ಬೇಡಿದೆ
ಕೊನೆಗೆ ಅಸಹಾಯಕತೆಯ ನೋಟದಲ್ಲಿ ನಿನ್ನತ್ತ ತಿರುಗಿದೆ..!

ಆದರೆ ನೀನು
ಅರಿವಿಗೆ ಬಾರದ ಜಾಣನಂತೆ
 ಮತ್ಯಾರಿಗೋ ಪ್ರೇಮಧಾರೆ ಎರೆಯುತ್ತಾ ಮತ್ಯಾರದೋ ಕೈ ಹಿಡಿದು ನಡೆಯುತ್ತಾ ಸಾಗಿಬಿಟ್ಟೆ..!

ನಿನಗೆ ನನ್ನಿಂದ ದೂರವಾಗುವ ಇರಾದೆಯೊಂದು ನಿನ್ನೆದೆಯಲ್ಲಿ ಇದಿದ್ದೆ ಆದರೆ
ನಾವು ಬೇರೇನಾದರೂ ದಾರಿಯೊಂದನ್ನು ಹುಡುಕಬಹುದಿತ್ತೇನೋ
ನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತೇನೋ,
ಬೇರಾಗಿ ನಡೆಯಬೇಕಿರೋ ಈ ಕವಲುದಾರಿಗಳ ಬದಲಾಗಿ
ಏಳು ಬೀಳುಗಳೊಂದಿಗೆ
ಒಬ್ಬರನ್ನೊಬ್ಬರು ಕೈ ಹಿಡಿದು ಸಾಗುವ ಗೆಳೆಯರಾಗಬಹುದಿತ್ತು
ಕಡೆ ತನಕ ನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತು
ಯಾವುದಾದರೂ ಒಂದು
ಮನುಷ್ಯತ್ವದ ರೂಪದಲ್ಲಿ..!

ಆದರೂ ಕಾಲ ಮಿಂಚಿ ಹೋಗಿದೆ
ಪ್ರತಿ ಹನಿಯೂ ಕಣ್ಣಿನಿಂದ ಜಾರುವಾಗ ಸುಮ್ಮನೆ ಯೋಚಿಸುತ್ತೇನೆ!
ನನ್ನ ನೆನಪುಗಳು ಸಹ ಕಾಡಬಹುದೇ ನಿನ್ನನ್ನು?
ನಿನ್ನ ನೆನಪುಗಳು ನನ್ನನ್ನು ಕಾಡುವಷ್ಟೇ ಕಠೋರವಾಗಿ?
ಅನ್ನ ನೀರು ನಿದ್ರೆಗಳ ತೊರೆಸಿ, ಹಗಲು ಇರುಳುಗಳ ವ್ಯತ್ಯಾಸವಿರದಂತೆ
ನಿನ್ನ ನೆನಪುಗಳು ನನ್ನನ್ನು ಆವರಿಸಿರುವಷ್ಟೇ ಕ್ರೂರವಾಗಿ ?
ಕಾಡಬಹುದೇ ನಿನ್ನನ್ನು ಆ ನನ್ನ ನೆನಪುಗಳು ?

ಬಹುಶಃ ನನ್ನ ತಿಳಿಯಾದ ಪ್ರೇಮ
ನಿನ್ನೆದೆಯಲ್ಲಿ ಆಳವಾದ ನೆನಪುಗಳನ್ನು ನೆಟ್ಟಿರಲಿಕ್ಕಿಲ್ಲ
ಆದರೆ ನನ್ನ ಪಾಡು ಹಾಗಿಲ್ಲ ನೋಡು.!

ಈ ಅತಿಯಾದ ಪ್ರೇಮ ನನ್ನೊಳಗೊಂದು ಆಲದಮರವನ್ನೇ ಬಿತ್ತಿ ನೀರೆರೆದಿದೆ
ಅಲ್ಲಿ ಮತ್ಯಾರದೋ ಅಪ್ಪುಗೆಯೊಂದರಲ್ಲಿ ನೀನು ಬೆಚ್ಚಗಿರಬಹುದು
ಆದರೆ ನಿತ್ಯ ನನಗಿಲ್ಲಿ ನಿನ್ನ ನೆನಪುಗಳದ್ದೇ ಧ್ಯಾನ !

ಬಿಡುವಾದರೆ
ನೀನೊಮ್ಮೆ ಇಲ್ಲಿ ಬಂದು ನೋಡಬಾರದೇಕೆ?
ನನ್ನನೊಮ್ಮೆ ಚುಂಬಿಸಿ ಚಿವುಟಬಾರದೇಕೆ?
ನನ್ನನೊಮ್ಮೆ ಆಲಂಗಿಸಿ ಪೂರ್ತಿಯಾಗಿ ಅಳಿಸಬಾರದೇಕೆ?
ನನ್ನನೊಮ್ಮೆ ಸುತ್ತಿಸಿ ಸಂತೈಸಬಾರದೇಕೆ?
ಮತ್ತೆಂದೂ ಕಾಡದಂತೆ
ಈ ನೋವನು ಕೊನೆಯಾಗಿಸಬಾರದೇಕೆ?
ನಿನ್ನೆಲ್ಲಾ ನೆನಪುಗಳನ್ನು ನೀನೇ ಹೊತ್ತಿ ಹೋಗಬಾರದೇಕೆ ?
ಬಿಡಿಸಲಾಗದ ಒಗಟಿನ ಪ್ರಶ್ನೆಗಳು ಬಿಡು..!

ನಿನ್ನನ್ನು ಪ್ರೇಮಿಸುವುದನ್ನಷ್ಟೇ ಕಲಿತ ನಾನು
ದ್ವೇಷಿಸುವುದನ್ನು,ದೂಷಿಸುವುದನ್ನೂ
ಕೊನೆ ಪಕ್ಷ ಮರೆಯುವುದನ್ನು ಕೂಡ ಕಲಿಯಲಾಗಲೇ ಇಲ್ಲ..!

ಹೋಗಲಿ ನಿನ್ನ ತೊರೆಯುವುದನ್ನಾದರೂ ಕಲಿಯಬೇಕಿತ್ತು ಎಂದುಕೊಂಡೆ..!
ನಿನ್ನ ಪ್ರೇಮ ಪಂಜರದಲ್ಲಿ
ರೆಕ್ಕೆ ಮುರಿದುಕೊಂಡು
ವೇದನೆಯಲ್ಲಿ ನರಳುತ್ತಿರುವ
ಹಕ್ಕಿಯಂತಾದ ನನಗೆ
ನಿನ್ನ ನೆನಪುಗಳ ಗರಿ ಬಿಚ್ಚದೆ
ಹಾರುವ ಬಲವೊಂದು
ಈ ಕ್ಷಣಕ್ಕೂ
ನನ್ನೊಳಗೆ ಮೊಳೆಯಲಿಲ್ಲವೆಂಬುದೇ
ಬದುಕಿನ ಒಂದು ದುರಂತ..!


About The Author

Leave a Reply

You cannot copy content of this page

Scroll to Top