ಕಾವ್ಯ ಸಂಗಾತಿ
ವೈ ಎಂ ಯಾಕೊಳ್ಳಿ
“ಅರವತ್ತರಾಚೆಯವನ
ತುಂಟ ಪದ್ಯಗಳು”


೧
ಪ್ರೀತಿ
ನಿನ್ನ ಹತ್ತರ ಎಷ್ಟರ ಐತಿ
ಅಂತಾಳ ಆಕಿ !
ಅಯ್ಯೋ ಮಾರಾಯಾ
ಅದೆಲ್ಲಿ ಐತಿ ಅಂತಾಳ ಈಕಿ?
೨
ಸಾಕು ಬಿಡು ಮಾರಾಯ್ತಿ
ಒಮ್ಮೆ ಪ್ರೀತಿ ಮಾಡಿದ್ನಿ
ಮತ್ತ ಅದನ್ನ ನೆನೆಸಿನೆನೆಸಿ
ಈಗ್ಯಾಕ ಜೀಂವ ನೀ ತಿಂತಿದಿ
೩
ಔಷದ ಇಲ್ಲದ ರೋಗ
ಪ್ರೀತಿ,ಅದನ್ನು ತಿಳದೂ ತಿಳದೂ
ಮಾಡತೈತಲ್ಲ ಈ ಲೋಕಕ್ಕ
ಎಂಥಾ ಹುಚ್ಚ ಹಿಡದೈತಿ!
೪
ಹತ್ತಿರ ಬರಬೇಡ ಅಂತ
ಆರನೂರ ಕೊಟ್ಟ
ಗೋದ್ರೇಜ್ ಕೀಲಿ ಹಾಕಿನಿ
ಕನಸನ್ಯಾಗ ಗೊತ್ತಿಲ್ಲದಾಂಗ
ಕೀಲಿ ಮುರದಾಳ
ಏನ ಅನಬೇಕರಿ ಆಕಿಗಿ
೫
ಬರಿ ಬ್ಯಾಡರಿ ಅಜ್ಜ
ನಿವ್ ಮುದಕಾರಾಗಿರಿ
ಅಂತ ಹುಡುಗರ ವರಾತ
ಹೌದು
ಬರುದುಲ್ಲಲ್ಲ ನಮಗ
ಇದನ
ಬಿಟ್ಟ ಬ್ಯಾರೆ ಕವಿತಾ!
೬
ನಾವು ಬರೆಯುವವರು
ಬರೆದು ಹುಚ್ಚ ರಾಗತೆವಿ
ನಿವ್ ಅನುಭವಿಸಿತಿರಿ
ಅನುಭವಿಸಿ ಧನ್ಯರಾಗತಿರಿ
೭
ಹೆಂಡತಿ ಹತ್ತರ ಇದ್ದರ
ಒಂದೆ ಸಮ ಬೈಗಳ
ಬೇಜಾರ
ಇವನ್ ಮನಸು ಇಲ್ಲೆ ಇಲ್ಲಿ
ಅಂತ
ಆಕಿದ ಒಂದ ತಕರಾರ
೮
ಮುಗದ ಮಾತಿಗೆ ಯಾಕ
ಅಳತೆರಿ ಸ್ವಾಮಿ ಇರೋದನ್ನು
ಚಂದಾಂಗಿ ಅನುಭವಿಸ್ರಿ !
ನಿಮ್ಮನ್ನ ಬಿಟ್ಟ ಹೋದವರು
ಖಂಡಿತವಾಗೂ ಅಲ್ಲಿನೂ ಚಂದ
ಅದಾರ್ರಿ!!
೯
ಜೀವನ ಅಂದರ
ಮೊದಮೊದಲ ಕಳಕೊಳ್ಳೊದು
ಪಡಕೋಳ್ಳೊದರಿ!
ನಂತರ ಎಲ್ಲಾನೂ
ಬಿಟ್ಕೊತ
ಹೋಗೂದರಿ!!
೧೦
ಇದೆಂಥಾ ಕವಿತಾ
ಒಂದ ಲಯ ಇಲ್ಲ, ಪ್ರಾಸ ಇಲ್ಲ
ಅಂತಾನ ವಿಮರ್ಶಕ!
ನಿವ್ ಏನ್ ಚಂದ ಬರದಿರಿ
ಅಂತಾಳ ವಿಮರ್ಶಕಿ!!
ವೈ.ಎಂ.ಯಾಕೊಳ್ಳಿ
ʼ



